8. ವೆಸ್ಸಂತರ ವಗ್ಗೋ (ವೆಸ್ಸಂತರ ವರ್ಗ)
1. ವೆಸ್ಸಂತರ ಪ್ರಶ್ನೆ
ಭಂತೆ ನಾಗಸೇನ, ಎಲ್ಲಾ ಬೋಧಿಸತ್ತರು ತಮ್ಮ ಪತ್ನಿ ಪುತ್ರರನ್ನು ದಾನ ಮಾಡಿರು ವರೋ ಅಥವಾ ವೆಸ್ಸಂತರ ಮಹಾರಾಜರು ಮಾತ್ರ ಹಾಗೇ ಮಾಡಿದ್ದಾರೋ? (166)ಓ ಮಹಾರಾಜ, ಎಲ್ಲಾ ಬೋಧಿಸತ್ತರು ತಮ್ಮ ಪತ್ನಿಪುತ್ರರನ್ನು ದಾನ ಮಾಡಿದ್ದಾರೆ. ಕೇವಲ ವೆಸ್ಸಂತರಷ್ಟೇ ಅಲ್ಲ.
ಅವರು ಅವರ ಒಪ್ಪಿಗೆ ಪಡೆದೇ ದಾನ ಮಾಡಿದರೆ?
ಓ ಮಹಾರಾಜ ಪತ್ನಿಯು ಒಪ್ಪಿದಳು. ಆದರೆ ಮಕ್ಕಳು ತಮ್ಮ ಕೋಮಲವಾದ ವಯಸ್ಸಿನಿಂದಾಗಿ ಅತ್ತು ಪ್ರಲಾಪ ಮಾಡಿದರು, ಆದರೂ ಕ್ಷಿಪ್ರವಾಗಿ ಅಥರ್ೈಸಿಕೊಂಡು ಅವರೂ ಸಹಾ ಒಪ್ಪಿದ್ದರು.
ಭಂತೆ ನಾಗಸೇನ, ಇದು ನಿಜಕ್ಕೂ ಕಠಿಣಕರ ವಿಷಯವಾಗಿದೆ. ನಾಗಸೇನ, ಬೋಧಿಸತ್ವರು ತಮ್ಮ ಮಕ್ಕಳನ್ನು ಸಹಾ ದಾನ ಮಾಡಿದರು. ಅವರು ತಮ್ಮ ಅತ್ಯಂತ ಪ್ರಿಯವಾದ ಮಕ್ಕಳನ್ನು ಆ ಬ್ರಾಹ್ಮಣನಿಗೆ ಉಪಯುಕ್ತವಾಗಲೆಂದು ನೀಡಿದರಲ್ಲ ಮತ್ತು ಎರಡನೆಯ ಕ್ರಿಯೆಯು ಇನ್ನೂ ಕಠೋರವಾಗಿದೆ. ಅವರು ತಮ್ಮ ಕೋಮಲವಾದ ಮಕ್ಕಳನ್ನು ಕಾಡಿನ ಬಳ್ಳಿಯಿಂದ ಕಟ್ಟಿ ಬ್ರಾಹ್ಮಣನಿಗೆ ನೀಡುತ್ತಾರೆ. ಆ ಬ್ರಾಹ್ಮಣನು ಆ ಮಕ್ಕಳನ್ನು ಆ ಹಗ್ಗದಿಂದ ಎಳೆದುಕೊಂಡು ದಾರಿಯುದ್ದಕ್ಕೂ ಹೋಗುತ್ತಾನೆ, ಅದರಿಂದಾಗಿ ಆ ಮಕ್ಕಳಿಗೆ ಗಾಯವೂ ಸಹಾ ಆಗುತ್ತದೆ ಮತ್ತು 3ನೆಯ ಕ್ರಿಯೆಯು ಇನ್ನೂ ಕಠೋರವಾಗಿದೆ. ಅದೇನೆಂದರೆ ಆ ಬಾಲಕನು ಆ ಹಗ್ಗದಿಂದ ಬಿಡಿಸಿಕೊಂಡು ಬಂದಾಗ, ಮತ್ತೆ ಕಟ್ಟಿ ಆ ಬ್ರಾಹ್ಮಣನಿಗೆ ಒಪ್ಪಿಸುತ್ತಾರೆ ಮತ್ತು ಆ ನಾಲ್ಕನೆಯ ಕ್ರಿಯೆಯು ಇನ್ನೂ ಕಠೋರವಾಗಿದೆ ಏನೆಂದರೆ ಆ ಮಕ್ಕಳು ಕೂಗುತ್ತ ಅಳುತ್ತಾ ಹೀಗೆ ಪ್ರಲಾಪಿಸುತ್ತಾರೆ ಪ್ರಿಯ ತಂದೆಯೇ, ಈ ಯಕ್ಷನು ನಮಗೆ ತಿಂದೇಬಿಡುತ್ತಾನೆ, ಅದಕ್ಕೇ ಕರೆದೊಯ್ಯುತ್ತಿದ್ದಾನೆ. ಆದರೆ ಅವರು ಹೆದರಬೇಡಿ ಎಂದಷ್ಟೇ ಸಮಾಧಾನ ಮಾಡುತ್ತಾರೆ ಮತ್ತು ಐದನೆಯ ಕ್ರಿಯೆಯು ಮತ್ತಷ್ಟು ಕಡುಕಠೋರವಾಗಿದೆ. ಆಗ ಅಲ್ಲಿ ರಾಜಕುಮಾರ ಬಾಲಿಯು ಬೋಧಿಸತ್ವರ ಪಾದಕ್ಕೆ ಬಿದ್ದು ಅಳುತ್ತಾ ಹೀಗೆ ಹೇಳುತ್ತಾನೆ ಪ್ರಿಯ ಅಪ್ಪ, ತೃಪ್ತಿಹೊಂದು, ಕಣ್ಣಾಜಿನಾಳನ್ನು (ತಂಗಿ) ಕಾಪಾಡಲು, ನಾನೇ ಯಕ್ಷನಲ್ಲಿಗೆ ಹೋಗುವೆ, ನನ್ನನ್ನೇ ಆತನು ತಿನ್ನಲಿ. ಆದರೂ ಆತನಲ್ಲಿ ಕನಿಕರ ಉತ್ಪನ್ನವಾಗಲಿಲ್ಲ ಮತ್ತು ಆರನೆಯ ಕ್ರಿಯೆಯು ಇನ್ನೂ ಕಠೋರವಾಗಿದೆ. ಆಗ ರಾಜಕುಮಾರ ಜಾಲಿಯು ಹೀಗೆ ಕೂಗಿ ಹೇಳುತ್ತಾನೆ, ಓ ಅಪ್ಪಾ, ನಿನ್ನ ಹೃದಯವು ಕಲ್ಲಿನದೆ? ನಮ್ಮನ್ನು ದುಃಖದಲ್ಲಿ ಕಂಡು ಕನಿಕರಬರಲಿಲ್ಲವೇ? ಯಕ್ಷನು ಕರೆದೊಯ್ಯುತ್ತಿದ್ದರೂ, ಗಹನವಾದ ಕಾಡಿನಲ್ಲಿ ಕರೆದೊಯ್ಯುತ್ತಿದ್ದರೂ ನಮ್ಮನ್ನು ಕರೆಯುವುದಿಲ್ಲವೇ? ಅದು ಅತ್ಯಂತ ಕನಿಕರ ದೃಶ್ಯವಾಗಿದೆ ಮತ್ತು ಏಳನೆಯ ಕ್ರಿಯೆಯು ಇನ್ನೂ ಕಠೋರವಾಗಿದೆ. ಆಗ ಆ ಮಕ್ಕಳು ಹೆಸರಿಲ್ಲದ ಭಯಾನಕತೆಗೆ ಕಹಿಯಾದ ದುರಂತಕ್ಕೆ, ಕಣ್ಣಿಂದ ಮರೆಯಾಗಿ ಹೋದರೂ ಸಹಾ ಅವರ ಹೃದಯವು ಒಡೆಯಲಿಲ್ಲ. ಸಂಪೂರ್ಣವಾಗಿ ಒಡೆಯಿತು, ಏತಕ್ಕಾಗಿ ಮಾನವ ಪುಣ್ಯಕ್ಕಾಗಿ ಹೀಗೆ ಪರರನ್ನು ದುಃಖಕ್ಕೆ ತಳ್ಳುತ್ತಾನೆ. ಅದರ ಬದಲು ಸ್ವತಃ ಆತನೇ ತನ್ನನ್ನೇ ದಾನವಾಗಿ ಏಕೆ ಅಪರ್ಿಸಬಾರದು?
ಓ ಮಹಾರಾಜ, ಅವರು ತ್ಯಾಗ ಮಾಡಿದ್ದು ಅತ್ಯಂತ ಕಷ್ಟಕರವಾದುದ್ದು. ಬೋಧಿಸತ್ವರ ಖ್ಯಾತಿಯನ್ನು ಅವರು ದೇವಮನುಷ್ಯರ ಹಾಗೆಯೇ ದಶಸಹಸ್ರ ಲೋಕ ವ್ಯವಸ್ಥೆಯಲ್ಲೇ ಹಬ್ಬಿಸಿದರು. ಅವರಿಗೆ ದೇವತೆಗಳೂ ಸಹಾ ಸುಗತಿಯಲ್ಲಿ ಪ್ರಶಂಸಿಸುವರು ಮತ್ತು ಅಸುರರು ಅಸುರ ಲೋಕದಲ್ಲಿ ಹೊಗಳುವರು ಮತ್ತು ಗರುಡರು ತಮ್ಮ ನಿವಾಸದಲ್ಲಿ ಸ್ತುತಿಸುವರು, ನಾಗರು ನಾಗಲೋಕದಲ್ಲಿ, ಯಕ್ಷರು ತಮ್ಮ ನಿವಾಸದಲ್ಲಿ ಹೊಗಳುವರು. ಅವರ ಘನತೆಯ ಸುಖ್ಯಾತಿಯು ಇಂದಿನವರೆಗೂ ಹಬ್ಬಿದೆ. ನಾವಿಂದು ಅವರ ಬಗ್ಗೆ ಚಚರ್ಿಸುತ್ತಿದ್ದೇವೆ, ಓ ಮಹಾರಾಜ ಪ್ರಾಜ್ಞರ, ಬುದ್ಧಿವಂತರ ಸಾಮಥ್ರ್ಯವುಳ್ಳವರ ಮತ್ತು ಸೂಕ್ಷ್ಮ ಮನಸ್ಸಿನ ಬೋಧಿಸತ್ವರಲ್ಲಿ 10 ಮಹಾನ್ ಸದ್ಗುಣಗಳು ಇರುತ್ತವೆ ಮತ್ತು ಯಾವುವವು? ಅವೆಂದರೆ ಲೋಭದಿಂದ ಮುಕ್ತರಾಗಿರುವುದು, ತ್ಯಾಗ, ಅಭಿನಿಷ್ಕ್ರಮಣ, ದುರ್ಗತಿಗೆ ಹಿಂತಿರುಗದಿರುವಿಕೆ, ಸೌಜನ್ಯತೆ, ಮಹೋನ್ನತೆ, ದೂರದೃಷ್ಟಿ, ದುರ್ಲಭತೆ, ಅಸಮಾನ ಬುದ್ಧತ್ವ ಬಯಸುವಿಕೆ ಇವೆಲ್ಲದರಿಂದ ಕೂಡಿ ದಾನದಿಂದಲೇ ಬೋಧಿಸತ್ತರ ಮಹೋನ್ನತ ಸದ್ಗುಣಗಳು ಗೋಚರಕ್ಕೆ ಬರುತ್ತದೆ.
ಭಂತೆ ನಾಗಸೇನ, ಯಾರು ಈ ರೀತಿ ದಾನ ಮಾಡಿ ಪರರಿಗೆ ದುಃಖತರುವಿಕೆ ಮತ್ತು ಇಂತಹ ದಾನದಿಂದಾಗಿ ಸುಖವಿಪಾಕ ಸಿಗುತ್ತದೆ, ಇದರಿಂದಾಗಿ ಸುಗತಿ ಸಿಗುತ್ತದೆಯೇ?
ಹೌದು ಮಹಾರಾಜ.
ಭಂತೆ ನಾಗಸೇನ, ಕಾರಣಗಳಿಂದ, ವಿವರಣೆಗಳಿಂದ ಸ್ಪಷ್ಟಪಡಿಸುವಿರಾ?
ಊಹಿಸಿ ಮಹಾರಾಜ, ಕೆಲವು ಶೀಲವಂತ ಬ್ರಾಹ್ಮಣರಿರುತ್ತಾರೆ, ಉನ್ನತ ಚಾರಿತ್ರ್ಯದವರಾಗಿಯೂ ಸಹಾ ಅವರು ಪಾಶ್ರ್ವ ವಾಯುವಿಗೆ ಗುರಿಯಾಗಿ ಅಥವಾ ಯಾವುದೋ ರೋಗಕ್ಕೆ ಬಲಿಯಾಗಿರುತ್ತಾರೆ. ಈಗ ಕೆಲವರು ಪುಣ್ಯಕಾಂಕ್ಷೆಯಿಂದಾಗಿ ಅವರನ್ನು ರಥದಲ್ಲಿ ಕುಳಿಸಿ ಬ್ರಾಹ್ಮಣರು ಇಷ್ಟಪಡುವ ಕಡೆ ಕರೆದೊಯ್ಯುತ್ತಾರೆ. ಈಗ ಹಾಗೆ ಮಾಡಿದವರಿಗೆ ಸುಖವು ಸಿಗುತ್ತದೆಯೇ ಮತ್ತು ಸುಗತಿಯು ಸಿಗಬಹುದೇ?
ಹೌದು ಭಂತೆ, ಸಿಗುತ್ತದೆ, ಸಿಗದೆ ಇನ್ನೇನು? ಆ ಮನುಷ್ಯನಿಗೆ ಪಳಗಿದ ಆನೆಯು ಸಿಗಬಹುದು ಅಥವಾ ಕುದುರೆ ಸಿಗಬಹುದು ಅಥವಾ ಎತ್ತಿನ ಬಂಡಿಯು ಸಿಗಬಹುದು, ರಥ ಸಿಗಬಹುದು, ಜಲವಾಹನ ಸಿಗಬಹುದು, ಹಾಗೆಯೇ ಮುಂದೆ ಸುಗತಿಯಲ್ಲಿ ದೇವತೆಗಳ ವಾಹನ ಸಿಗಬಹುದು, ಈ ಜನ್ಮದಲ್ಲಿ ಹಾಗೆಯೇ ಮುಂದಿನ ಜನ್ಮಗಳಲ್ಲಿಯೂ ಆತನಿಗೆ ಇಂತಹುವು ಸಿಗಬಹುದು. ಆತನಿಗೆ ಸುಖ, ಆನಂದ ಪಡೆಯುತ್ತಾನೆ ಸುಗತಿಯಿಂದ ಸುಗತಿಗೆ ಹೋಗುತ್ತಾನೆ. ಇದ್ದಿಪಾದಗಳನ್ನು ಸುಲಭವಾಗಿ ಪಡೆದು ತಾನು ಇಚ್ಛಿಸಿದ ಸ್ಥಳಕ್ಕೆ ದಿವ್ಯ ಮಾನಸಿಕ ಬಲದಿಂದಲೇ ಹೋಗಬಹುದು. ಹಾಗೆಯೇ ನಿಬ್ಬಾಣವನ್ನು ಪಡೆಯಬಹುದು.
ಆದರೆ ಓ ಮಹಾರಾಜ, ಆ ದಾನದಿಂದಾಗಿ ಪರಜೀವಿಗಳಿಗೆ ನೋವಾಯಿತು, ಹೀಗಾದಾಗಲು ಸಹಾ ಆತನಿಗೆ ಸುಖ ಹೇಗೆ ಲಭಿಸುವುದು, ಸುಗತಿ ಹೇಗೆ ಪ್ರಾಪ್ತಿಯಾಗಬಲ್ಲದು. ಆ ರಥಕ್ಕೆ (ಬಂಡಿಗೆ) ಬಳಸಿರುವ ಎತ್ತುಗಳಿಗೆ ನೋವು ಉಂಟಾದರೂ ಸಹಾ ಅದರಿಂದ ಸುಖ ಸಿಗುವುದೇ?
ಹಾಗೆಯೇ ಮತ್ತೊಂದನ್ನು ಕೇಳಿ ಓ ಮಹಾರಾಜ, ಊಹಿಸಿ ರಾಜ, ಚಕ್ರವತರ್ಿಯೊಬ್ಬನು ಧರ್ಮಕಾರ್ಯಕ್ಕಾಗಿ, ಜನರ ಮೇಲೆ ತೆರಿಗೆಗಳನ್ನು ಹೆಚ್ಚಿಸುತ್ತಾನೆ, ಈ ರೀತಿಯ ಹಣದಿಂದ ಬಹುಜನಹಿತ ಕಾರ್ಯಗಳನ್ನು ಮಾಡುತ್ತಾನೆ, ಈಗ ಹೇಳಿ ಓ ರಾಜ, ಆ ರೀತಿಯ ಕಾರ್ಯದಿಂದಾಗಿ ಆತನಿಗೆ ಸುಗತಿ ಲಭಿಸುವುದೇ? ಸುಖವು ಸಿಗುವುದೇ?
ಖಂಡಿತ ಭಂತೆ, ಅದರ ವಿರುದ್ಧ ಏನೂ ಹೇಳಲಾಗದು, ಅದರಿಂದಾಗಿ ಆತನು ನೂರು ಪಟ್ಟು, ಸಾವಿರಪಟ್ಟು ಹೆಚ್ಚಿನದಾಗ ಸುಕರ್ಮ ಫಲ ಪಡೆಯುತ್ತಾನೆ. ಆತನು ಚಕ್ರವತರ್ಿಗಳಲ್ಲೇ ಶ್ರೇಷ್ಠನಾಗಬಹುದು, ದೇವಾದಿದೇವನಾಗಬಹುದು, ಬ್ರಹ್ಮರಲ್ಲೇ ಶ್ರೇಷ್ಠನಾಗಬಹುದು, ಸಮಣರಲ್ಲೇ ಶ್ರೇಷ್ಠನಾಗಬಹುದು, ಬ್ರಾಹ್ಮಣರ ನಾಯಕನಾಗಬಹುದು ಅಥವಾ ಅರಹಂತರಲ್ಲಿ ಅಗ್ರನಾಗಬಹುದು.
ಹಾಗಾದರೆ ಓ ರಾಜನೇ, ಪರರಿಗೆ ಸ್ವಲ್ಪ ನೋವಾದರೂ ಈ ರೀತಿಯಿಂದ ದಾನ ಮಾಡಿದರೆ ಅದು ಸುಖವನ್ನು ನೀಡುತ್ತದೆ ಮತ್ತು ಸುಗತಿಯನ್ನು ನೀಡುತ್ತದೆ ಎಂದು ಹೇಳುವಿರಿ. ಹೇಗೆಂದರೆ ಜನರಿಗೆ ತೆರಿಗೆಗಳನ್ನು ಹಾಕಿ, ಅದರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು. ಇದರಿಂದಾಗಿ ಕೀತರ್ಿ ಮತ್ತು ವೈಭೋಗ ಎರಡೂ ದೊರೆಯುತ್ತದೆ ಎಂದು ಹೇಳುತ್ತಿರುವಿರಿ.
ಆದರೆ ಭಂತೆ ನಾಗಸೇನ, ಯಾವ ದಾನವನ್ನು ವೆಸ್ಸಂತರರು ನೀಡಿದರೂ ಅದು ವಿಪರೀತ ದಾನವಾಗಿದೆ, ಅದರಲ್ಲಿ ಅವರು ತಮ್ಮ ಪತ್ನಿಯನ್ನು ಇನ್ನೊಬ್ಬ ಮನುಷ್ಯನಿಗೆ ದಾನವಾಗಿ ನೀಡಿದರು ಮತ್ತು ತಮ್ಮ ಸ್ವಂತ ಮಕ್ಕಳನ್ನೇ ಬ್ರಾಹ್ಮಣನಿಗೆ ಸೇವೆ ಮಾಡಲು ದಾನ ನೀಡಿದರು ಮತ್ತು ಪ್ರಜ್ಞಾವಂತರಿಂದ ದಾನವು ನೀಡಲ್ಪಟ್ಟಿದೆ. ಈ ಜಗವು ಅದನ್ನು ವಿಪರೀತ ದಾನವೆಂದು ನಿಂದನೆ ಮಾಡುತ್ತದೆ. ಆದರೆ ಭಂತೆ ನಾಗಸೇನ, ಅತಿಯಾದ ಭಾರದಿಂದ ಬಂಡಿಯ ಅಚ್ಚು ಮುರಿಯುವುದು ಅಥವಾ ಹಡಗು ಮುಳುಗುವುದು ಅಥವಾ ಅತಿಯಾಗಿ ತಿನ್ನುವವನು ಅಜೀರ್ಣಕ್ಕೆ ಈಡಾಗುವನು. ಹಾಗೆಯೇ ಅತಿಯಾದ ಮಳೆಯಿಂದ ಬೆಳೆಗಳು ನಾಶವಾಗುತ್ತದೆ. ಹಾಗೆಯೇ ಅತಿಯಾದ ದಾನದಿಂದ ದಾರಿದ್ರ್ಯವು ಲಭಿಸುವುದು. ಹಾಗೆಯೇ ಅತಿಯಾದ ಉಷ್ಣದಿಂದಾಗಿ ಜ್ವರವು ಬರುತ್ತದೆ. ಹಾಗೆಯೇ ಅತಿಯಾದ ರಾಗದಿಂದಾಗಿ ಉನ್ಮತ್ತನಾಗುತ್ತಾನೆ. ಅತಿಯಾದ ಕೋಪದಿಂದ ಅಪರಾಧಿಯಾಗುತ್ತಾನೆ. ಹಾಗೆಯೇ ಅತಿಯಾದ ಮೂರ್ಖತ್ವದಿಂದಾಗಿ ಪಾಪಿಯಾಗುತ್ತಾನೆ. ಹಾಗೆಯೇ ಅತಿಯಾದ ಧನಲೋಭದಿಂದಾಗಿ ಕಳ್ಳರ ಕೈಗೆ ಸಿಗುತ್ತಾನೆ. ಹಾಗೆಯೇ ಅತಿಯಾದ ಭಯದಿಂದಾಗಿ ಸರ್ವನಾಶವಾಗುತ್ತಾನೆ. ಹಾಗೆಯೇ ಅತಿಯಾದ ಒಳಹರಿವಿಕೆಯಿಂದಾಗಿ ಪ್ರವಾಹವಾಗುತ್ತದೆ. ಹಾಗೆಯೇ ಅತಿಯಾದ ಗಾಳಿಯಿಂದಾಗಿ ಸಿಡುಲು ಉಂಟಾಗುತ್ತದೆ. ಹಾಗೆಯೇ ಅತಿಯಾದ ಅಗ್ನಿಯಿಂದಾಗಿ ಅಂಬಲಿಯು ಬೆಂದು ಹೋಗಬಹುದು. ಹಾಗೆಯೇ ಅತಿಯಾದ ಅಡ್ಡಾಡುವವನು ದೀಘರ್ಾಯು ವಾಗುವುದಿಲ್ಲ. ಅದೇರೀತಿಯಲ್ಲಿ ಭಂತೆ ನಾಗಸೇನ ಅತಿಯಾದ (ವಿಪರೀತ) ದಾನದಿಂದಾಗಿ ಪ್ರಾಜ್ಞರು ಸಹಾ ನಿಂದನೆಗೆ ಒಳಗಾಗುವರು ಮತ್ತು ನಿಷೇಧೆಗೊಳಗಾಗುವರು ಮತ್ತು ರಾಜ ವೆಸ್ಸಂತರರ ದಾನವು ವಿಪರೀತವಾಗಿದೆ ಮತ್ತು ಅದರಿಂದಾಗಿ ಶುಭ ಪರಿಣಾಮವನ್ನು ನಿರೀಕ್ಷಿಸಲಾಗದು.
ಓ ಮಹಾರಾಜ, ಅತಿದಾನವು ಸದಾ ಪ್ರಶಂಸನೀಯ ಮತ್ತು ಜ್ಞಾನಿಗಳಿಂದ ಶ್ಲಾಘನೆಗೆ ಒಳಪಟ್ಟಿದೆ ಮತ್ತು ಯಾರು ದಾನವೆಂದು ತ್ಯಾಗ ಮಾಡಿದರೂ ಅವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅವರಿಗೆ ಈ ಲೋಕದಲ್ಲಿ ಕೀತರ್ಿಯು ಮಹಾದಾನಿಯೆಂದು ಪ್ರಶಂಸನಿಯರು ಆಗುತ್ತಾರೆ. ಹೇಗೆಂದರೆ ಓ ಮಹಾರಾಜ, ಒಬ್ಬನು ವನಮೂಲಿಕೆಯನ್ನು ಹಿಡಿದಾಗ, ಅದರ ದಿವ್ಯ ಪ್ರಭಾವದಿಂದಾಗಿ ಅದೃಶ್ಯನಾಗುತ್ತಾನೆ. ಹಾಗೆಯೇ ಔಷಧ ಮೂಲಿಕೆಯನ್ನು ಬಳಸಿದಾಗ ನೋವು ಮಾಯವಾಗುತ್ತದೆ, ರೋಗ ನಿವಾರಣೆಯಾಗುತ್ತದೆ. ಹೇಗೆ ಅತಿಯಾದ ತಾಪದಿಂದ ಅಗ್ನಿಯು ಸುಡುವುದೋ ಮತ್ತು ಹೇಗೆ ನೀರು ಅತಿಯಾದ ತಂಪಿನಿಂದ ಅಗ್ನಿಯನ್ನು ನಂದಿಸುವುದೋ ಮತ್ತು ಹೇಗೆ ಪದ್ಮವು ಅತಿಯಾದ ಪರಿಶುದ್ಧತೆಯಿಂದ ನೀರು ಹಾಗು ಕೆಸರಿನಿಂದ ಕಲುಷಿತವಾಗುವುದಿಲ್ಲವೋ, ಹೇಗೆ ದಿವ್ಯಮಣಿಯು ಅತಿಗುಣದಿಂದಾಗಿ ಪ್ರತಿ ಬಯಕೆಯು ಈಡೇರುವುದೋ ಮತ್ತು ಹೇಗೆ ಮಿಂಚಿನ ಅತಿಯಾದ ಅದ್ಭುತ ಕ್ಷಿಪ್ರತೆಯಿಂದಾಗಿ, ವಿಭಾಗವಾಗಿದ್ದ ವಜ್ರ ಮತ್ತು ಹರಳುಗಳು ಅಂಟುತ್ತವೋ ಮತ್ತು ಹೇಗೆ ಪೃಥ್ವಿಯು ತನ್ನ ಅತಿಯಾದ ಗಾತ್ರದಿಂದ ಮನುಜರನ್ನು ಸಲಹುತ್ತದೋ ಮತ್ತು ಪ್ರಾಣಿ ಪಕ್ಷಿಗಳಿಗೆ, ಜಲ, ಬಂಡೆ, ಪರ್ವತ, ವೃಕ್ಷಗಳಿಗೆ ಆಧಾರವಾಗಿದೆಯೋ ಮತ್ತು ಹಾಗೆಯೇ ಸಾಗರವು ತನ್ನ ಅತಿಯಾದ ಮಹತ್ತತೆಯಿಂದಾಗಿ ಎಂದಿಗೂ ಕುಂಟುತ್ತ ಸುಮ್ಮನಿರಲಾರದೋ, ಹೇಗೆ ಸಿನೆರು ತನ್ನ ಬೃಹತ್ ಬಾರದಿಂದಾಗಿ ಅಚಲವೋ ಮತ್ತು ಆಕಾಶವು ತನ್ನ ವೈಶಾಲ್ಯತೆಯ ಶ್ರೇಷ್ಠತ್ವದಿಂದ ಅನಂತವಾಗಿದೆಯೋ ಮತ್ತು ಸೂರ್ಯನು ತನ್ನ ಬೃಹತ್ ಪ್ರಭೆಯಿಂದಾಗಿ ಕತ್ತಲೆಯನ್ನು ದೂರೀಕರಿಸುವನೋ, ಹೇಗೆ ಸಿಂಹವು ತನ್ನ ವಂಶದಿಂದಾಗಿ ನಿಭರ್ಿತಿಯಿಂದಿರುವುದು ಮತ್ತು ಹೇಗೆ ಮಲ್ಲನು ತನ್ನ ಅತಿಯಾದ ಬೃಹದಾಕಾರದಿಂದಾಗಿ ಶತ್ರುವನ್ನು ಸುಲಭವಾಗಿ ಮೇಲೆತ್ತುವನೋ ಮತ್ತು ಹೇಗೆ ರಾಜನು ತನ್ನ ಅತಿಯಾದ ನ್ಯಾಯಪರತೆಯ ಉತ್ಕೃಷ್ಟತೆಯಿಂದ, ಪುಣ್ಯದಿಂದ ಅಧಿಪತಿಯಾಗುವನೋ ಮತ್ತು ಹೇಗೆ ಭಿಕ್ಖುವು ತನ್ನ ಅತಿ ಶೀಲವಂತಿಕೆಯಿಂದಾಗಿ ನಾಗ, ಯಕ್ಷ, ನರ ಮತ್ತು ಮಾರರಿಂದ ಪೂಜಿಸಲ್ಪಡುತ್ತಾನೆ. ಹಾಗೆಯೇ ಬುದ್ಧರು ಸಹಾ ಅತಿಯಾದ ಅಗ್ರತೆಯಿಂದಾಗಿ ಅನುಪಮ ಸಂಪನ್ನರಾಗಿದ್ದಾರೆ. ಅದೇರೀತಿಯಲ್ಲಿ ಓ ಮಹಾರಾಜ, ಅತಿಯಾದ ದಾನವು ಸ್ತುತಾರ್ಹವಾದುದು, ಪ್ರಶಂಸನೀಯವು ಮತ್ತು ಪ್ರಾಜ್ಞರಿಂದ ಮಾನ್ಯವೂ ಆಗಿದೆ. ಯಾರೆಲ್ಲರೂ ಏನೆಲ್ಲವನ್ನು ದಾನವಾಗಿ ನೀಡುವರೋ ಅವರಿಗೆ ಈ ಜನ್ಮದಲ್ಲಿಯೇ ಶ್ರೇಷ್ಠ ದಾನಿಯೆಂದು ಕೀತರ್ಿ ಲಭಿಸುವುದು ಮತ್ತು ಓ ಮಹಾರಾಜ ವೆಸ್ಸಂತರದ ಬೃಹತ್ ದಾನದಿಂದಾಗಿ ಅವರಿಗೆ ಪ್ರಶಂಸೆ, ಸ್ತುತಿ, ಕೀತರ್ಿ, ಉತ್ಪ್ರೇಕ್ಷೆ, ವರ್ಣನೆ ಇವೆಲ್ಲವೂ ದಶಸಹಸ್ರ ಲೋಕ ವ್ಯವಸ್ಥೆಗಳೆಲ್ಲದರಿಂದ ಸಿಕ್ಕಿತು. ಮತ್ತು ಆ ಮಹತ್ತರ ದಾನದಿಂದಾಗಿ ಅವರು ಮುಂದಿನ ಜನ್ಮಗಳಲ್ಲಿ ಬುದ್ಧರಾಗಿ ದೇವತೆಗಳ ಮತ್ತು ಮನುಜರಿಂದ ಕೂಡಿದ ಸರ್ವಲೋಕಗಳಿಗೂ ಅಗ್ರರಾದರು.
ಮತ್ತೆ ಈಗ ಹೇಳಿ ಓ ರಾಜ, ಯಾವುದಾದರೂ ದಾನವನ್ನು ತಡೆಯಬಹುದೇ, ನೀಡಬಾರದೆ? ದಾನಕ್ಕೆ ಅರ್ಹನೊಬ್ಬ ಸಿಕ್ಕಿರುವಾಗ ನೀಡಬಾರದ ದಾನವಿದೆಯೇ?
ಓ ಭಂತೆ ನಾಗಸೇನ, ಅಂತಹ 10 ದಾನಗಳಿವೆ. ಅವನ್ನು ಜಗವು ದಾನವಾಗಿ ನೀಡಲು ತಿರಸ್ಕರಿಸುತ್ತದೆ ಮತ್ತು ಯಾವುವವು? ಅವೆಂದರೆ ಮದ್ಯಪಾನಿಯ, ಉನ್ನತ ಸ್ಥಳಗಳಲ್ಲಿ ಹಬ್ಬ, ಸ್ತ್ರೀ, ಪುರುಷ, ಎಮ್ಮೆಗಳು, ಸೂಚ್ಯವಾದ ಚಿತ್ರ (ನಕ್ಷೆ), ಆಯುಧಗಳು, ವಿಷ, ಸರಪಳಿ ಹಾಗು ಚಿತ್ರಹಿಂಸೆಯ ಸಾಧನಗಳು. ಹಕ್ಕಿಗಳು, ಹಂದಿಗಳು, ಮಿಥ್ಯಾ ಭಾರಗಳು ಮತ್ತು ಅಳತೆಗಳು. ಇವೆಲ್ಲವೂ ಭಂತೆ ನಾಗಸೇನ, ಲೋಕದಲ್ಲಿ ದಾನಕ್ಕೆ ನಿಷಿದ್ಧವಾಗಿವೆ ಮತ್ತು ಇವುಗಳನ್ನು ದಾನವಾಗಿಸಿದರೆ ಮುಂದೆ ದುರ್ಗತಿಯಲ್ಲಿ ಹುಟ್ಟುತ್ತಾನೆ.
ಓ ಮಹಾರಾಜ, ಯಾವರೀತಿಯ ದಾನಗಳು ನಿಷಿದ್ಧ ಎಂಬ ಅರ್ಥದಲ್ಲಿ ನಾನು ಪ್ರಶ್ನಿಸಲಿಲ್ಲ. ನಾನು ಕೇಳಿದ್ದು ಏನೆಂದರೆ ಯಾರಾದರೊಬ್ಬ ದಾನಕ್ಕೆ ಅರ್ಹವ್ಯಕ್ತಿ ಸಿಕ್ಕಿದಾಗ, ಈ ಜಗತ್ತಿನಲ್ಲಿ ದಾನವಾಗಿ ದಯಪಾಲಿಸಲಾಗದ, ದೃಢವಾಗಿ ತಡೆಯುವಂತಹದಿದೆಯೆ?
ಇಲ್ಲ ಭಂತೆ, ಯಾವಾಗ ಶ್ರದ್ಧೆಯು ಹೃದಯದಲ್ಲಿ ಉಕ್ಕಿದಾಗ, ಕೆಲವರು ಆಹಾರವನ್ನು ದಾನವಾಗಿ ದಾನರ್ಹರಿಗೆ ನೀಡುವರು. ಮತ್ತೆ ಕೆಲವರು ವಸ್ತ್ರವನ್ನು, ಮತ್ತೆ ಕೆಲವರು ಹಾಸಿಗೆಯನ್ನು, ಮತ್ತೆ ಕೆಲವರು ವಾಸಸ್ಥಳವನ್ನು ಮತ್ತೆ ಕೆಲವರು ಚಾಪೆಯನ್ನು ಅಥವಾ ಚೀವರವನ್ನು ಮತ್ತೆ ಕೆಲವರು ದಾಸ-ದಾಸಿಯರನ್ನು ಮತ್ತೆ ಕೆಲವರು ಹೊಲ ಅಥವಾ ವಠಾರಗಳನ್ನು ಮತ್ತೆ ಕೆಲವರು ದ್ವಿಪಾದಿಗಳನ್ನು ಅಥವಾ ಚತುಷ್ಪಾದಿಗಳನ್ನು ಮತ್ತು ಕೆಲವರು ನೂರು ಅಥವಾ ಸಾವಿರ ಅಥವಾ ಲಕ್ಷ ಅಥವಾ ಕೆಲವರು ತಮ್ಮ ಸಾಮ್ರಾಜ್ಯವನ್ನೇ ಹಾಗು ಇನ್ನೂ ಕೆಲವರು ತಮ್ಮ ಜೀವವನ್ನೇ ಧಾರೆ ಎರೆಯುವರು.
ಆದರೆ ಆಗ ಓ ಮಹಾರಾಜ, ಕೆಲವರು ತಮ್ಮ ಜೀವವನ್ನೇ ದಾನವಾಗಿ ಅಪರ್ಿಸುವಾಗ ನೀವು ಏತಕ್ಕಾಗಿ ವೆಸ್ಸಂತರವರ ಮೇಲೆ ಮಹಾ ದಾನಾಧಿಪತಿಯವರ ಮೇಲೆ, ಪತಿಪುತ್ರರನ್ನು ದಾನ ಮಾಡಿದ ಮಹಾನ್ ವ್ಯಕ್ತಿಯ ಮೇಲೆ ಹೀಗೆ ಆಕ್ರಮಣಕಾರಿ ಟೀಕೆಯನ್ನು ಮಾಡುತ್ತಿರುವಿರಿ? ಓ ಮಹಾರಾಜ, ಲೋಕ ಪ್ರತೀತಿಯಂತೆ, ಸಂಪ್ರದಾಯದಂತೆ, ತಂದೆಯು ಸಾಲಗಾರನಾದರೆ ಅಥವಾ ಜೀವನೊಪಾಯ ಕಳೆದುಕೊಂಡರೆ, ಆಗ ಆತನು ಮಗನನ್ನು ಅಡವಿಟ್ಟು ವಾಗ್ದಾನ ಮಾಡುವುದಿಲ್ಲವೇ ಅಥವಾ ಮಾರಾಟವನ್ನೇ ಮಾಡುವುದಿಲ್ಲವೇ?
ಹೌದು ಹಾಗೆ ಮಾಡುತ್ತಾರೆ.
ಸರಿ, ಇದು ವೆಸ್ಸಂತರರ ಪರಿಸ್ಥಿತಿಗೆ ಹೊಂದಿಗೆ ಆಗುವುದಿಲ್ಲವೇ? ಓ ಮಹಾರಾಜ, ತ್ಯಾಗವಿಲ್ಲದೆ, ಕಷ್ಟವಿಲ್ಲದೆ ಸರ್ವಜ್ಞಪ್ರಾಪ್ತಿಯು ದೊರೆಯಲಾರದು. ವೆಸ್ಸಂತರರು ಸಹಾ ಸರ್ವಜ್ಞ ಪ್ರಾಪ್ತಿಗಾಗಿ ತಮ್ಮ ಪತ್ನಿ ಮತ್ತು ಮಕ್ಕಳನ್ನು ಅಡವು ಇಟ್ಟಿದ್ದರು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಅವರು ಪರರು ತ್ಯಾಗ ಮಾಡಿದಂತೆಯೇ ತ್ಯಾಗ ಮಾಡಿದ್ದಾರೆ ಮತ್ತು ಪರರು ಮಾಡಿದಂತಹ ಕಾರ್ಯವನ್ನೇ ಮಾಡಿದ್ದಾರೆ. ಹೀಗಿರುವಾಗ ಓ ಮಹಾರಾಜ, ಏಕೆ ನೀವು ದಾನ ಚಕ್ರವತರ್ಿಯನ್ನು ಹಿಂಸಾಯುತವಾಗಿ ಟೀಕಿಸುವಿರಿ?
ಭಂತೆ ನಾಗಸೇನ, ನಾನು ಅವರ ದಾನಕ್ಕಾಗಿ ನಿಂದಿಸುತ್ತಿಲ್ಲ. ಆದರೆ ಆ ಸ್ವೀಕೃತನೊಂದಿಗೆ ವಿನಿಮಯ ಮಾಡಿಕೊಂಡಿಲ್ಲವೆಂದು ಹೇಳುತ್ತಿದ್ದೇನೆ. ಅಲ್ಲಿ ಅವರು ಪತ್ನಿ ಮಕ್ಕಳ ಬದಲು, ತಮ್ಮನ್ನೇ ದಾನವಾಗಿ ನೀಡಿದ್ದರೆ ಹೇಗಿರುತ್ತಿತ್ತು?
ಓ ಮಹಾರಾಜ, ಅದು ತಪ್ಪು ದಾನಿಯ ಕೃತ್ಯವಾಗುತ್ತದೆ, ಪತ್ನಿ ಮಕ್ಕಳನ್ನು ಕೇಳಿದಾಗ, ಅವರ ಬದಲು ತಮ್ಮನ್ನೇ ನೀಡುವುದು ತಪ್ಪು ದಾನಿಯ ಕೃತ್ಯವೇ ಸರಿ. ಸ್ವೀಕೃತನು ಏನೇ ದಾನ ಕೇಳಲಿ, ಅದನ್ನೇ ನೀಡಬೇಕಾಗುತ್ತದೆ ಮತ್ತು ಅಂತಹ ಅಭ್ಯಾಸವೇ ಒಳ್ಳೆಯದು, ಊಹಿಸಿ ಮಹಾರಾಜ, ಒಬ್ಬಾತನು ಬಾಯಾರಿಕೆಯಿಂದ ನೀರನ್ನು ಕೇಳಿದಾಗ, ಆತನಿಗೆ ಆಹಾರ ದಾನ ನೀಡಿದರೆ ಅದು ಸರಿಯಾದ ಕೃತ್ಯವೇ?
ಇಲ್ಲ ಭಂತೆ, ಆತನಿಗೆ ಮೊದಲು ಏನು ಅವಶ್ಯಕತೆಯಿದೆಯೋ ಅದೇ ನೀಡಬೇಕು.
ಅದೇರೀತಿಯಾಗಿ ಓ ಮಹಾರಾಜ, ಬ್ರಾಹ್ಮಣನು ವೆಸ್ಸಂತರವರಲ್ಲಿ ಪತ್ನಿ ಮತ್ತು ಮಕ್ಕಳನ್ನು ದಾನವಾಗಿ ಕೇಳಿದನು. ಆದ್ದರಿಂದ ಅಲ್ಲಿ ವೆಸ್ಸಂತರರು ಅಲ್ಲಿ ಪತ್ನಿ ಮತ್ತು ಮಕ್ಕಳನ್ನೇ ದಾನವಾಗಿ ನೀಡಿದರು. ಅಲ್ಲಿ ಬ್ರಾಹ್ಮಣನು ವೆಸ್ಸಂತರರ ಶರೀರವನ್ನೇ ಕೇಳಿದ್ದರೆ, ಆಗ ವೆಸ್ಸಂತರರು ತಮ್ಮ ಶರೀರವನ್ನು ದಾನವಾಗಿ ನೀಡುತ್ತಿದ್ದರು. ಆಗ ಅವರು ಯಾವುದೇ ಕಂಪನಪಡುತ್ತಿರಲಿಲ್ಲ.
ಹಾಗೆಯೇ ಸ್ವ-ಆಸಕ್ತಿ ತಾಳುತ್ತಿರಲಿಲ್ಲ. ಬದಲಾಗಿ ತಮ್ಮ ಶರೀರವನ್ನೇ ದಾನವಾಗಿ ಖಂಡಿತ ನೀಡುತ್ತಿದ್ದರು ಅಥವಾ ಓ ಮಹಾರಾಜ, ಯಾರಾದರೂ ವೆಸ್ಸಂತರರವರ ಬಳಿಗೆ ನನ್ನ ಗುಲಾಮನಾಗು ಎಂದು ಅವರು ತಮ್ಮ ಸ್ವ-ಆಸಕ್ತಿಯನ್ನು ತೊರೆದು ಗುಲಾಮರಾಗುತ್ತಿದ್ದರು ಮತ್ತು ಆಗ ಅವರಲ್ಲಿ ಯಾವ ನೋವು, ವಿಷಾದಪಡುತ್ತಿರಲಿಲ್ಲ.
ಓ ಮಹಾರಾಜ, ಈಗ ವೆಸ್ಸಂತರ ರಾಜರ ಜೀವನವು ಹಲವರಲ್ಲಿ ಹಂಚಿಕೊಳ್ಳು ವಂತಹದ್ದಾಗಿದೆ. ಹೇಗೆಂದರೆ ಮಾಂಸದ ಅಡುಗೆಯು ಹಲವರಲ್ಲಿ ಹಂಚಿಕೊಳ್ಳುವಂತೆ, ಹಣ್ಣಿನ ಮರವು ಹಲವಾರು ಪಕ್ಷಿಗಳ ತಿಂಡಿಯಂತೆ, ಅವರು ಸಹಾ ತಮ್ಮನ್ನು ದಾನವಾಗಿಸುತ್ತಾರೆ ಮತ್ತು ಏಕೆ ಹೀಗೆ? ಏಕೆಂದರೆ ಅವರು ತಮಗೆ ಹೇಳಿಕೊಳ್ಳುವಂತೆ ಈ ದಾನದಿಂದಾಗಿ ನಾನು ಬುದ್ಧತ್ವ ಪಡೆಯುವಂತಾಗಲಿ. ಇದು ಹೇಗೆಂದರೆ ಓ ರಾಜ, ಒಬ್ಬನು ನಿಧಿ ಐಶ್ವರ್ಯದ ಶೋಧನೆಯಲ್ಲಿ ಅಡ್ಡಾಡುತ್ತಾನೆ, ಆಗ ಆತನು ಮೇಕೆಯ ಜಾಡಿನಲ್ಲಿ ಕಡ್ಡಿ ಮತ್ತೆ ಕುಪ್ಪೆಗಳಿಂದ ಕೂಡಿದ ಕಾಡಿನಲ್ಲಿ ಮತ್ತು ಸಾಗರ ಹಾಗು ನೆಲದಲ್ಲಿ ವರ್ತಕವಾಗಿ ತನ್ನ ನಿಧಿ ಪ್ರಾಪ್ತಿಗೆ ತನುಮನ ವಾಚದಿಂದ ನಿಷ್ಠನಾಗುತ್ತಾನೆ. ಅದೇರೀತಿಯಲ್ಲಿ ಓ ರಾಜ, ವೆಸ್ಸಂತರರು ಸಹಾ ಬುದ್ಧತ್ವದ ಪರಮ ನಿಧಿಗಾಗಿ ಅವರು ದಾನಚಕ್ರವತರ್ಿಯಾಗಿ ಅಪಾರ ದಾನ ಮಾಡಿದರು. ಅವರು ಸರ್ವಜ್ಞತಾ ಪ್ರಾಪ್ತಿಗಾಗಿ ತಮಗೆ ದಾನ ಕೇಳಿದ ಪ್ರತಿಯೊಬ್ಬರಿಗೂ ಆಸ್ತಿಯನ್ನು, ಆಹಾರವನ್ನು, ದಾಸ, ದಾಸಿಯರನ್ನು, ಪ್ರಾಣಿಗಳನ್ನು, ರಥಗಳನ್ನು, ತಮ್ಮಲ್ಲಿರುವುದನ್ನು ಪತ್ನಿ ಪುತ್ರಿಯರನ್ನು ಮತ್ತು ಕೊನೆಗೆ ತಮ್ಮನ್ನೇ ಸಮ್ಮಸಂಬೋಧಿಗೆ ಸಮಪರ್ಿಸಿಕೊಂಡು ಅನ್ವೇಷಿಸಿದರು. ಓ ರಾಜ, ಇದು ಹೇಗೆಂದರೆ ಒಬ್ಬ ಅಧಿಕಾರಿಯು ರಾಜಮುದ್ರೆಯನ್ನು ಪಡೆಯಲು ತನ್ನ ಮನೆ, ಆಸ್ತಿ, ಆಹಾರ, ಚಿನ್ನಬೆಳ್ಳಿ, ಪ್ರತಿಯೊಂದನ್ನು ತ್ಯಾಗ ಮಾಡುವನು. ಅದೇರೀತಿಯಲ್ಲಿ ಓ ಮಹಾರಾಜ, ದಾನಚಕ್ರವತರ್ಿ ವೆಸ್ಸಂತರರು ಸಹಾ ಸಮ್ಮಸಂಬೋಧಿಗಾಗಿ ತಮ್ಮ ಮನೆಯಲ್ಲಿ ಒಳಗಿದ್ದ ಹಾಗು ಹೊರಗಿದ್ದ ಎಲ್ಲವನ್ನು ದಾನ ಮಾಡಿದರು.
ಮತ್ತು ಓ ಮಹಾರಾಜ, ವೆಸ್ಸಂತರರು ಹೀಗೆ ಯೋಚಿಸಿದ್ದರು: ಆತನು ಕೇಳಿದ್ದನ್ನು ನಾನು ದಾನ ಮಾಡಿದರೆ, ನಾನು ಬ್ರಾಹ್ಮಣನಿಗೆ ಈ ರೀತಿಯಾದರೂ ಸೇವೆ ಸಲ್ಲಿಸಬಹುದು. ಮತ್ತು ಅದರಿಂದಾಗಿ ಅವರು ಪತ್ನಿ ಪುತ್ರ ಪುತ್ರಿಯರನ್ನು ದಾನ ಮಾಡಿದ್ದರು. ಓ ಮಹಾರಾಜ, ಅವರು ಮಕ್ಕಳನ್ನು ಇಷ್ಟಪಡದೆ ದಾನ ನೀಡಿರಲಿಲ್ಲ ಅಥವಾ ಅವರನ್ನು ಮುಂದೆ ನೋಡಬಾರದೆಂದು ದಾನ ನೀಡಿರಲಿಲ್ಲ ಅಥವಾ ಮಕ್ಕಳನ್ನು ಭಾರವೆಂದು ಅಥವಾ ಸಲಹಲು ಅಶಕ್ಯರೆಂದು ದಾನ ಮಾಡಿರಲಿಲ್ಲ ಅಥವಾ ಅಪ್ರಿಯರೆಂದು ಸಮಾಧಾನಪಟ್ಟು ದಾನ ಮಾಡಿರಲಿಲ್ಲ. ಆದರೆ ಅವರು ದಾನ ನೀಡಿದ್ದಕ್ಕೆ ಏಕೈಕ ಕಾರಣವಿತ್ತು. ಅದೆಂದರೆ ಸರ್ವಜ್ಞತೆ ಪ್ರಾಪ್ತಿಗಾಗಿ ಮಾತ್ರ. ಅವರಿಗೆ ಸಮ್ಮಾಸಂಬೋಧಿಯು ತಾವು ಪ್ರಿಯವೆಂದು ಭಾವಿಸುವ ಎಲ್ಲಕ್ಕಿಂತ ಪ್ರಿಯವಾಗಿತ್ತು. ತಮ್ಮ ಜೀವಕ್ಕಿಂತ, ತಮ್ಮ ಪತ್ನಿ ಪುತ್ರ ಪುತ್ರಿಗಿಂತ ಹೆಚ್ಚಿನ ಪ್ರಿಯದ್ದಾಗಿತ್ತು. ಅದು ಅಳೆಯಲಾಗದ, ಭವ್ಯವಾದ, ಅನುಪಮಯುತವಾಗಿತ್ತು. ಆದ್ದರಿಂದಲೇ ಓ ಮಹಾರಾಜ ಚರಿಯ ಪಿಟಕದಲ್ಲಿ ಹೀಗೆ ಹೇಳಿದ್ದಾರೆ:
ಮಕ್ಕಳ ಮೇಲಿನ ದ್ವೇಷಕ್ಕಾಗಿ ನಾನು ದಾನ ಮಾಡಲಿಲ್ಲ, ಅವರು ನನಗೆ ಅತಿ ಮಧುರವಾದವರು, ಮಾದ್ರಿ ದೇವಿಯ (ಪತ್ನಿಯ) ಮೇಲಿನ ದ್ವೇಷಕ್ಕಾಗಿ ನಾನು ದಾನ ಮಾಡಲಿಲ್ಲ. ಅವರಿಗೆ ನಾನು ಕಡಿಮೆ ಪ್ರೀತಿಸಿರಲಿಲ್ಲ. ಆದರೆ ನನಗೆ ಎಲ್ಲಕ್ಕಿಂತ ಪ್ರಿಯವಾದುದು ಬುದ್ಧತ್ವವೇ (ಸರ್ವಜ್ಞತೆಯೇ) ಆದ್ದರಿಂದಾಗಿ ನಾನು ಎಲ್ಲವನ್ನು ಪರಿತ್ಯಾಗ ಮಾಡಿದೆನು.
ಮತ್ತೆ ಓ ಮಹಾರಾಜ, ವೆಸ್ಸಂತರರು, ಪತ್ನಿ ಪುತ್ರರನ್ನು ದಾನ ಮಾಡಿದ ನಂತರ, ಕುಟೀರವನ್ನು ಪ್ರವೇಶಿಸಿ ಅಲ್ಲಿ ಕುಳಿತರು. ಆಗ ಅವರಲ್ಲಿ ಅಪಾರವಾದ ಶೋಕ ಆವರಿಸಿತು. ಏಕೆಂದರೆ ಅವರು ದಾನ ಮಾಡಿದ್ದು ಅವರು ಅತಿಯಾಗಿ ಪ್ರೀತಿಸುತ್ತಿದ್ದವರನ್ನೇ ಆಗಿತ್ತು. ಅವರ ಹೃದಯವು ಬಿಸಿಯಾಯಿತು, ಬಿಸಿ ಉಸಿರು ಸಹಾ ಹೊರಹೋಗಲು ಶ್ರಮಪಡುತ್ತಿತ್ತು. ಕಣ್ಣಿನಿಂದ ಆಶ್ರು ಎಂಬಂತೆ ರಕ್ತದ ಹನಿಗಳು ಸುರಿಯಿತು. ಅಂತಹ ದುಃಖವನ್ನು ಓ ಮಹಾರಾಜ ಅವರು ಅನುಭವಿಸಿದರು. ಅಂತಹದನ್ನು ವೆಸ್ಸಂತರರು ತಮ್ಮ ದಾನನಿಷ್ಠೆ ಭಂಗವಾಗದಿರಲೆಂದು ನೀಡಿದರು. ಆದರೆ ಓ ಮಹಾರಾಜ, ಈ ಕಾರಣಕ್ಕಾಗಿ ಅವರು ಹೀಗೆ ದಾನ ಮಾಡಿದರು. ಯವುದದು ಎರಡು? ಅವರ ದಾನ ನಿಷ್ಠೆಯು ಭಂಗವಾಗದೆಂದು ಒಂದು, ಮತ್ತೊಂದು ಏನೆಂದರೆ ತಮ್ಮ ಮಕ್ಕಳು ಕಾಡು ಗೆಡಸುಗಳು ಮತ್ತು ಹಣ್ಣುಗಳಿಂದ ಜೀವಿಸುತ್ತಿದ್ದರು. ಹೊಸ ಯಜಮಾನ ದೊರೆತಾಗ ಅವರಿಗೆ ಈ ಆಹಾರದಿಂದ ಬಿಡುಗಡೆ ದೊರೆಯುತ್ತಿತ್ತು ಮತ್ತು ಓ ಮಹಾರಾಜ, ವೆಸ್ಸಂತರರವರಿಗೆ ಗೊತ್ತಿತ್ತು, ಯಾರು ಸಹಾ ನನ್ನ ಮಕ್ಕಳನ್ನು ಗುಲಾಮರಾಗಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರ ತಾತ, ಅಪಾರ ಧನವನ್ನು ನೀಡಿ ಮಕ್ಕಳನ್ನು ಬಿಡಿಸಿಕೊಳ್ಳಬಹುದು ಮತ್ತು ಅವರು ನಂತರ ಅವರು ನನಗೆ ಸಿಗಲೂಬಹುದು. ಈ ಎರಡು ಕಾರಣದಿಂದಾಗಿ ಅವರು ಬ್ರಾಹ್ಮಣನಿಗೆ ಮಕ್ಕಳನ್ನು ದಾನ ಮಾಡಿದರು.
ಮತ್ತೆ ಓ ಮಹಾರಾಜ, ವೆಸ್ಸಂತರರಿಗೆ ಇದು ಗೊತ್ತಿತ್ತು: ಈ ಬ್ರಾಹ್ಮಣ ಜೀರ್ಣನಾಗಿದ್ದಾನೆ, ಮುದುಕನಾಗಿದ್ದಾನೆ,
ದುರ್ಬಲನಾಗಿದ್ದಾನೆ, ಕೋಲಿನ ಆಸರೆಯಲ್ಲಿದ್ದಾನೆ, ಈತನ ಅಂತ್ಯಕಾಲ ಹತ್ತಿರ ಬರುತ್ತಿದೆ. ಈತನ ಪುಣ್ಯವು ಅಲ್ಪದ್ದಾಗಿದೆ. ಹೀಗಿರುವಾಗ ಈತನು ನನ್ನ ಮಕ್ಕಳಿಗೆ ಗುಲಾಮರ ರೀತಿ ಇಡಲು ಸಮರ್ಥನಾಗಿಲ್ಲ. ಓ ಮಹಾರಾಜ, ಒಬ್ಬ ಸಾಮಾನ್ಯ ಮಾನವ ತನ್ನ ಸಾಧಾರಣ ಶಕ್ತಿಯಿಂದಾಗಿ ಸೂರ್ಯ ಅಥವಾ ಚಂದ್ರನನ್ನು ಸ್ಪಶರ್ಿಸಬಲ್ಲನೆ? ಬೃಹತ್ ಮತ್ತು ಬಲಶಾಲಿ ಗೋಳಗಳಾದ ಅವರನ್ನು ಒಂದು ಬುಟ್ಟಿಯಲ್ಲಾಗಲಿ ಅಥವಾ ಪೆಟ್ಟಿಗೆಯಲ್ಲಾಗಲಿ ಇಡಲು ಸಾಧ್ಯವೇ? ಅಥವಾ ಅವುಗಳ ಬೆಳಕನ್ನು ಕಸಿದುಕೊಳ್ಳುವನೆ?
ಖಂಡಿತ ಇಲ್ಲ ಭಂತೆ.
ಓ ಮಹಾರಾಜ, ವೆಸ್ಸಂತರರ ಮಕ್ಕಳು ಈ ಲೋಕಕ್ಕೆ ಸೂರ್ಯ-ಚಂದರನಂತೆ, ಅವರನ್ನು ಯಾರೇ ಆಗಲಿ ಗುಲಾಮರಂತೆ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.
ಓ ಮಹಾರಾಜ, ಇನ್ನೊಂದು ಕಾರಣವನ್ನು ನೀಡುತ್ತಿದ್ದೇನೆ. ಏನೆಂದರೆ ಓ ರಾಜ, ಚಕ್ರವತರ್ಿಯ ಮಣಿರತ್ನವು ಪ್ರಭಾಯುತವಾಗಿರುತ್ತದೆ ಮತ್ತು ಸುಂದರವಾಗಿರುತ್ತದೆ. ಅದರ ಅಷ್ಟಮುಖಗಳು ತುಂಬಾ ಕೌಶಲ್ಯದಿಂದ ಕತ್ತರಿಸುತ್ತಾರೆ, ನಾಲ್ಕು ಮೊಳದಷ್ಟು ಅದು ದಪ್ಪನಾಗಿರುತ್ತದೆ ಮತ್ತು ಅದರ ಪರಿಧಿಯು ರಥದ ಚಕ್ರದಂತೆ ಇರುತ್ತದೆ. ಹೀಗಿರುವ ಅದನ್ನು ಯಾವುದೇ ಮನುಷ್ಯನು, ಅದನ್ನು ಬಟ್ಟೆಯಲ್ಲಿ ಸುತ್ತಿ ಬುಟ್ಟಿಯಲ್ಲಿ ಹಾಕಲು ಸಾಧ್ಯವಿಲ್ಲ. ಹಾಗೆಯೇ ಅದನ್ನು ಶಸ್ತ್ರಗಳ ಸಾಣೆಗೆ ಬಳಸಲು ಸಾಧ್ಯವಿಲ್ಲ. ಅದೇರೀತಿಯಲ್ಲಿ ವೆಸ್ಸಂತರರು ಯಾವ ಮಕ್ಕಳು, ಲೋಕಾಧಿಪತಿಯ ರತ್ನಗಳಂತೆ ಕಂಗೊಳಿಸುತ್ತಿವೆಯೋ ಅವರನ್ನು ಗುಲಾಮರಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ಓ ಮಹಾರಾಜ, ಇನ್ನೊಂದು ಕಾರಣವನ್ನು ಕೇಳು, ಹೇಗೆ ಆನೆ ರತ್ನವು (ನಾಗರಾಜ ಉಪೋಸಥ ಎಂಬ ಆನೆ) ಸಭ್ಯವಾಗಿ, ಸುಂದರವಾಗಿ 8 ಗಜಗಳಷ್ಟು ಅಳತೆಯ ಎತ್ತರವಾಗಿ ಮತ್ತು 9 ಗಜಗಳಷ್ಟು ಅಳತೆಯ ಸುತ್ತಳತೆ ಉದ್ದವಿದ್ದು, ದೇಹದಲ್ಲಿ 3 ಉಬ್ಬುತಗ್ಗು ಇದ್ದು ಶ್ವೇತವರ್ಣದ, ಏಳು ಪಟ್ಟು ದೃಢವಾದ, ಅಂತಹುದನ್ನು ಯಾರಾದರೂ ತಟ್ಟೆಯಂತೆ, ಬೀಸಣಿಕೆಯಂತೆ, ಕರುವಿನಂತೆ, ಬಳಸುತ್ತಾರೆಯೇ? ಅದೇರೀತಿ ವೆಸ್ಸಂತರರ ಮಕ್ಕಳನ್ನು ಸಹಾ ಗುಲಾಮರಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ಮತ್ತೆ ಓ ಮಹಾರಾಜ, ಇನ್ನೊಂದು ಕಾರಣವನ್ನು ಕೇಳು, ಬೃಹತ್ ಸಮುದ್ರವು ಉದ್ದದಲ್ಲಿ ಮತ್ತು ಅಗಲದಲ್ಲಿ ಮತ್ತು ಆಳದಲ್ಲಿ ಅತ್ಯಂತ ಬೃಹತ್ ಆಗಿರುತ್ತದೆ. ಅದನ್ನು ಅಳೆಯಲಾಗದು. ಹಾಗೆಯೇ ದಾಟಲು ದುಷ್ಕರವಾದುದು. ಆಳ ಅಳೆಯಲು ಸಾಧ್ಯವಿಲ್ಲ ಹಾಗೆಯೇ ಅದನ್ನು ಮುಚ್ಚಲು ಸಾಧ್ಯವಿಲ್ಲ ಮತ್ತು ಆವರಣ ಮಾಡಲು ಸಾಧ್ಯವಿಲ್ಲ. ಸಣ್ಣ ಹೊಳೆಯಂತೆ ಅದನ್ನು ಬಳಸಲು ಸಾಧ್ಯವಿಲ್ಲ. ಅದೇರೀತಿಯಲ್ಲಿ ವೆಸ್ಸಂತರರ ಮಕ್ಕಳನ್ನು ಸಹಾ ಗುಲಾಮರಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ಮತ್ತೆ ಓ ಮಹಾರಾಜ, ಕಾರಣವನ್ನು ನೀಡುತ್ತಿದ್ದೇನೆ ಕೇಳಿ, ಹೇಗೆ ಹಿಮಾಲಯವು, ಪರ್ವತಗಳ ರಾಜನಾಗಿದೆಯೋ, ಐದು ಯೋಜನೆಗಳಷ್ಟು ಎತ್ತರವಾಗಿದೆಯೋ, 3000 ಯೋಜನೆಗಳಷ್ಟು ಪರಿಧಿಯನ್ನು (ವಿಸ್ತೀರ್ಣ) ಹೊಂದಿದೆಯೋ ಮತ್ತು ಎಂಟು ಮತ್ತು 4000 ಸಾವಿರ ಶೃಂಗಗಳನ್ನು ಹೊಂದಿದೆಯೋ ಮತ್ತು ಬೃಹತ್ ಜೀವಿಗಳ ಆವಾಸಸ್ಥಾನವಾಗಿದೆಯೋ, ನಾನಾಸೌಗಂಧಿಕ ಉತ್ಪನ್ನಗಳಿಗೆ ಸಂಪನ್ಮೂಲವೋ, ನೂರಾರು ದಿವ್ಯ ಮಹಿಮೆಯ ಔಷಧಿಗಳಿಗೆ ಆಕರವೋ, ಅದು ಉಚ್ಛ ಭಾಗದಿಂದ ಉಚ್ಚವಾದ ಸ್ಥಾನದಲ್ಲಿರುವ ಮೋಡದಂತೆ ಭೂಮಧ್ಯದಲ್ಲಿರುವುದು ಗೋಚರಿಸುವುದೋ ಇಂತಹ ಹಿಮಾಲಯವನ್ನು ಹೇಗೆ ಸದಭಿಪ್ರಾಯದಲ್ಲೇ ಸದಾ ಕಾಣುವರೋ ಹಾಗೆಯೇ ವೆಸ್ಸಂತರರ ಮಕ್ಕಳನ್ನು ಸಹಾ ಯಾರೂ ಗುಲಾಮರಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ಓ ಮಹಾರಾಜ, ಈ ಮತ್ತೊಂದು ಕಾರಣವನ್ನು ಕೇಳುವಂತಾಗು, ಹೇಗೆ ಪರ್ವತದ ಮೇಲಿನ ಮಹಾದೀಪೋತ್ಸವವು ಅತ್ಯಂತ ದೂರದಿಂದಲೂ ಕತ್ತಲೆಯಲ್ಲೂ ಕಂಡುಬರುವುದೋ ಅಥವಾ ಹಿಮಾಲಯ ಪ್ರಾಂತ್ಯದ ನಾಗವೃಕ್ಷಗಳ ಪುಷ್ಪಗಳ ಸುವಾಸನೆಯು 10 ಯೋಜನ ಅಥವಾ 12 ಯೋಜನ ದೂರದಲ್ಲೂ ಸುವಾಸನೆ ಪ್ರಸರಿಸುತ್ತದೆಯೋ, ಅದೇರೀತಿಯಲ್ಲಿ ವೆಸ್ಸಂತರವರ ಖ್ಯಾತಿಯು, ಅವರ ದಾನಧರ್ಮದ ಕೀತರ್ಿಯು ಸಾವಿರಾರು ಯೋಜನಗಳವರೆಗೆ ಹಬ್ಬುತ್ತದೆ. ಅಷ್ಟೇ ಅಲ್ಲ, ಸುಗತಿಯು ಶೃಂಗವಾದ ಅಕಸಿತ್ತ ದೇವತೆಗಳವರೆಗೆ ಹಬ್ಬುತ್ತದೆ, ಅಷ್ಟೇ ಅಲ್ಲ, ಸುರ, ಅಸುರ, ಗರುಡ, ಗಂಧರ್ವ, ಯಕ್ಷ, ರಾಕ್ಷಸ, ಮಹೋರಗ, ಕಿನ್ನರ ಮತ್ತು ಇಂದ್ರಲೋಕದಲ್ಲೆಲ್ಲಾ ಹಬ್ಬುತ್ತದೆ. ಹೀಗಿರುವಾಗ ಯಾರು ಸಹಾ ವೆಸ್ಸಂತರರ ಮಕ್ಕಳಿಗೆ ಗುಲಾಮರಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ಮತ್ತೆ ಓ ಮಹಾರಾಜ, ವೆಸ್ಸಂತರರು ತಮ್ಮ ಪುತ್ರ ಜಾಲಿಗೆ ಈ ರೀತಿ ಬುದ್ಧಿವಾದ ನೀಡಿದ್ದರು: ಓ ಮಗು, ನಿಮ್ಮ ತಾತನವರು ಮುಂದೆ ಈ ಬ್ರಾಹ್ಮಣನಿಗೆ ಬಹಳಷ್ಟು ಐಶ್ವರ್ಯ ನೀಡಿ ನಿಮ್ಮನ್ನು ಹಿಂದಕ್ಕೆ ಪಡೆಯುವರು, ನಿನಗೆ ಬಿಡಿಸುವಾಗ ಸಾವಿರ ವರಹ ನೀಡಲಿ ಮತ್ತು ನಿನ್ನ ಸೋದರಿ ಕಣ್ಣಾಜಿನಳನ್ನು ಬಿಡಿಸುವಾಗ ಆತನಿಗೆ ನೂರಾರು ದಾಸಿಯರನ್ನು ನೀಡಲಿ ಮತ್ತು ನೂರಾರು ಅಶ್ವ ಆನೆಗಳನ್ನು ಮತ್ತು ನೂರಾರು ಹಸು ಎಮ್ಮೆಗಳನ್ನು ಮತ್ತು ನೂರು ವರಹಗಳನ್ನು ನೀಡಲಿ. ಓ ಮಗು, ಹೀಗಲ್ಲದೆ ನಿಮ್ಮ ತಾತನವರು ಆ ಬ್ರಾಹ್ಮಣನಿಗೆ ಏನನ್ನೂ ನೀಡದೆ, ಬಲತ್ಕಾರದಿಂದ ಬಿಡಿಸಲು ಹೋದರೆ, ಆಗ ನಿಮ್ಮ ತಾತನವರ ಮಾತನ್ನು ಕೇಳಬೇಡ, ಆಗ ಈ ಬ್ರಾಹ್ಮಣನ ಅಧೀನದಲ್ಲೇ ಇರುವಂತಾಗು. ಈ ರೀತಿಯ ಸುಬುದ್ಧಿವಾದದಿಂದ ಅವರನ್ನು ವೆಸ್ಸಂತರರು ಕಳುಹಿಸಿಕೊಟ್ಟರು ಮತ್ತು ಬಾಲಕ ಜಾಲಿಯು ಅದರಂತೆಯೇ ನಡೆದುಕೊಂಡನು. ಯಾವಾಗ ತಾತನವರು ಕೇಳಿದರೋ ಆಗ ಹೀಗೆ ಜಾಲಿ ಉತ್ತರಿಸಿದನು.
ತಾತನವರೇ, ಸಹಸ್ರ ವರಹಗಳನ್ನು ನನಗಾಗಿ ಬ್ರಾಹ್ಮಣನಿಗೆ ನೀಡುವಂತೆ ಪಿತಾರವರು ಆದೇಶಿಸಿದ್ದಾರೆ, ಹಾಗೆಯೇ ಕಣ್ಣಾಜಿನ ಕುಮಾರಿಗೆ, ಆನೆಗಳು ನೂರಾರು ಇತ್ಯಾದಿ ನೀಡುವಂತೆ ಹೇಳಿದ್ದಾರೆ.
ಭಂತೆ ನಾಗಸೇನರವರೇ, ಈ ಜಟಿಲವಾದ ಸಮಸ್ಯೆಯನ್ನು ನೀವು ಅಜಟಿಲವನ್ನಾಗಿಸಿದಿರಿ, ವಿರೋಧಿ ವಾದಿಗಳ ಪ್ರಶ್ನಾಜಾಲವನ್ನು ಚೂರು ಚೂರಾಗಿಸಿದಿರಿ, ಪ್ರತಿವಾದಿಗಳ ವಾದವನ್ನು ದಾಟಿಹೋದಿರಿ, ನಿಮ್ಮ ಸಮರ್ಥನೆಯನ್ನು ಚೆನ್ನಾಗಿ ಪ್ರಕಾಶಿಸಿದಿರಿ. ಸುಪರಿಶೋಧಿತವಾಗಿ, ಅರ್ಥಪೂರ್ಣವಾಗಿ, ಉಪಮೆಗಳ ವ್ಯಂಜನದಿಂದಾಗಿ ಸತ್ಯವನ್ನು ಅನಾವರಣಗೊಳಿಸಿದಿರಿ, ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುವೆನು.
2. ದುಷ್ಕರಕಾರಿಕ ಪ್ರಶ್ನೆ (ದೇಹದಂಡನೆಯ ಪ್ರಶ್ನೆ)
ಭಂತೆ ನಾಗಸೇನ, ಎಲ್ಲಾ ಬೋಧಿಸತ್ತರು ದುಷ್ಕರಕಾರಿಕ ತಪಸ್ಸು (ದೇಹದಂಡನೆ) ಆಚರಿಸಿದ್ದರೆ? ಅಥವಾ ಗೋತಮರು ಮಾತ್ರವೇ? (167)ಎಲ್ಲರೂ ಇಲ್ಲ ಓ ಮಹಾರಾಜ, ಗೋತಮರು ಮಾತ್ರವೇ.
ಭಂತೆ ನಾಗಸೇನ, ಇದು ಹೀಗಾದಲ್ಲಿ ಬೋಧಿಸತ್ತರಲ್ಲಿಯೂ ವ್ಯತ್ಯಾಸವಿರುತ್ತದೆ ಎಂದಾಯಿತು.
ನಾಲ್ಕು ವಿಷಯಗಳಿಂದಾಗಿ ವ್ಯತ್ಯಾಸ ಇರುತ್ತವೆ. ಓ ಮಹಾರಾಜ, ಯಾವುವವು? ಅವೆಂದರೆ ಅವರು ಹುಟ್ಟಿರುವ ಕುಲವು (ಕ್ಷತ್ರಿಯ ಕುಲವೇ ಅಥವಾ ಬ್ರಾಹ್ಮಣರೇ) ಪಾರಮಿತಗಳ ವೃದ್ಧಿಯ ಕಾಲ, ಆಯು ಮತ್ತು ದೇಹ ಪ್ರಮಾಣ ಈ ನಾಲ್ಕು ಅಂಶಗಳಿಂದಾಗಿ ಓ ಮಹಾರಾಜ, ಬೋಧಿಸತ್ವರಿಂದ ಬೋಧಿಸತ್ವರಿಗೆ ವ್ಯತ್ಯಾಸವಿರುತ್ತದೆ. ಆದರೆ ಬುದ್ಧರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಅವರೆಲ್ಲರೂ ಸಹಾ ರೂಪದಲ್ಲೂ, ಶೀಲದಲ್ಲೂ, ಸಮಾಧಿಯಲ್ಲೂ, ಪ್ರಜ್ಞಾದಲ್ಲೂ, ವಿಮುಕ್ತಿಯಲ್ಲೂ, ವಿಮುಕ್ತಿ ಜ್ಞಾನ ದರ್ಶನದಲ್ಲೂ, ಚತುವೆಸಾರಜ್ಜೆಯಲ್ಲೂ (ನಾಲ್ಕು ಶ್ರದ್ಧೆಯ ಆಧಾರಗಳು ಬುದ್ಧಗುಣ, ಅರಹಂತಗುಣ, ಅಪಾಯ, ಗುರಿ) ದಶತಥಾಗತ ಬಲಗಳು, ಆರು ಅಸಾಧಾರಣ ಜ್ಞಾನಗಳು, 14 ಬುದ್ಧಜ್ಞಾನ, 18 ಬುದ್ಧರ ಕೇವಲ ಧಮ್ಮ, ಇವೆಲ್ಲವೂ ಸಹಾ ಎಲ್ಲಾ ಬುದ್ಧರಲ್ಲಿ ವಿರಾಜಮಾನವಾಗಿರುತ್ತದೆ, ಸಮವಾಗಿಯೇ ಇರುತ್ತದೆ.
ಅದರೆ ನಾಗಸೇನ, ಯಾವ ಕಾರಣದಿಂದಾಗಿ ಕೇವಲ ಗೋತಮ ಬೋಧಿಸತ್ವರು ಈ ದೇಹದಂಡನೆ ಆಚರಿಸಬೇಕಾಯಿತು.
ಓ ಮಹಾರಾಜ, ಯಾವಾಗ ಬೋಧಿಸತ್ವರು ಗೃಹತ್ಯಾಗ ಮಾಡಿದರೋ ಆಗ ಅವರ ಜ್ಞಾನವು ಅಪರಿಪಕ್ವವಾಗಿತ್ತು ಮತ್ತು ಅವರ ಈ ಅಪರಿಪಕ್ವತೆಯಿಂದಾಗಿ ಅವರು ದೇಹದಂಡನೆ ಮಾಡಬೇಕಾಯಿತು.
ಹಾಗಾದರೆ ಭಂತೆ ನಾಗಸೇನ, ಏತಕ್ಕಾಗಿ ಅವರು ಅಪರಿಪಕ್ವ ಸ್ಥಿತಿಯಲ್ಲೇ ಬೋಧಿಯನ್ನು ಅನ್ವೇಷಿಸಲು ಹೊರಟರು? ಏಕೆ ಅವರು ಮೊದಲು ಜ್ಞಾನದಲ್ಲಿ ಪರಿಪಕ್ವವಾಗಿ ನಂತ ಗೃಹತ್ಯಾಗ ಮಾಡಬಹುದಿತ್ತಲ್ಲ. (168)
ಓ ಮಹಾರಾಜ, ಯಾವಾಗ ಬೋಧಿಸತ್ವರು ಅಂತಃಪುರದಲ್ಲಿ ಸ್ತ್ರೀಯರ ಅಶುಭಸ್ಥಿತಿಯನ್ನು (ವಿಕಾರತೆ/ಕುರೂಪ) ಕಂಡರೋ ಆಗ ಅವರಲ್ಲಿ ಜಿಗುಪ್ಸೆ (ವಿರಾಗ) ಉಂಟಾಯಿತು. ಆಗ ಅವರ ಮನಸ್ಸಿನಲ್ಲಿ ತ್ಯಾಗ ಉಂಟಾಯಿತು, ಅರತಿ (ಆನಂದಿಸದಿರುವಿಕೆ) ಉಂಟಾಯಿತು. ಆಗ ಮಾರನು ಹೀಗೆ ಯೋಚಿಸಿದನು, ಈತನ ಮನಸ್ಸಿನ ಅತೃಪ್ತಿ ದೂರೀಕರಿಸಲು ಇದೇ ಸಮಯ. ನಂತರ ಆಕಾಶದಲ್ಲಿ ನಿಂತು ಹೀಗೆ ಹೇಳಿದನು : ಓ ಪೂಜ್ಯರೇ! ಓ ಭಾಗ್ಯಶಾಲಿಯೇ, ನೀವು ನಿರಾಶರಾಗದಿರಿ, ಇಂದಿಗೆ 7ನೆಯ ದಿನಕ್ಕೆ ಸ್ವರ್ಗದ ಚಕ್ರರತ್ನವು ನಿಮಗೆ ಕಾಣುವುದು. ಸಾವಿರ ಆರೆಗಳುಳ್ಳ ಎಲ್ಲಾರೀತಿಯಲ್ಲಿ ಸುಂದರ ಪರಿಪೂರ್ಣವಾದ, ಆ ಚಕ್ರರತ್ನವು ನಿಮಗೆ ಚಕ್ರವತರ್ಿ ಯನ್ನಾಗಿಸುವುದು, ಅದು ಚಲಿಸಿದ ಕಡೆಯಲ್ಲೆಲ್ಲಾ, ಅಲ್ಲಿರುವ ಭೂಮಿಯಲ್ಲಿರುವವರೇ ಆಗಲಿ, ಆಕಾಶದಲ್ಲಿರುವವರೇ ಆಗಲಿ, ನಿಮಗೆ ಸೇವೆ ಸಲ್ಲಿಸಲು ಬರುವರು. ನಿಮ್ಮ ಮಾತಿಗೆ ನಾಲ್ಕು ಖಂಡದ ಸರ್ವರೂ ಆಜ್ಞೆ ಪಾಲಿಸುವರು ಮತ್ತು ಒಂದು ದ್ವೀಪದವರೆಲ್ಲಾ ಹಾಗೆಯೇ ಆಜ್ಞೆ ಪಾಲನೆ ಮಾಡುವರು ಮತ್ತು ನಿಮಗೆ ಸಾವಿರ ಪುತ್ರರು ಜನಿಸುವರು. ಅವರೆಲ್ಲರೂ ವೀರರೂ, ಶೂರರೂ ಆಗಿ ಶತ್ರು ಸೈನ್ಯವನ್ನು ಸದೆಬಡಿಯಲು ಸಾಮಥ್ರ್ಯರು ಆಗಿರುತ್ತಾರೆ ಮತ್ತು ನೀವು ಸಪ್ತ ಐಶ್ವರ್ಯ ನಿಧಿಗೆ ಒಡೆಯರಾಗಿ ಇಡೀ ಜಗತ್ತನ್ನೇ ಆಳುವಿರಿ.
ಅದನ್ನು ಕೇಳಿದ ಬೋಧಿಸತ್ವರಿಗೆ ಕಬ್ಬಿಣದ ಸಲಾಕೆಯನ್ನು ಕೆಂಪಗೆ ಕಾಯಿಸಿ ಕಿವಿಯಲ್ಲಿ ತೂರಿಸಿದಂತಾಯಿತು. ಓ ರಾಜ, ಆಗ ಅವರಲ್ಲಿ ತ್ಯಾಗದ ಉದ್ವಿಗ್ನತೆಯು ಇನ್ನೂ ಹೆಚ್ಚಾಯಿತು. ಆ ದೇವಪುತ್ರರ ಮಾತು ಕೇಳಿ ಅವರಲ್ಲಿ ಪ್ರಾಪಂಚಿಕತೆಯ ಬಗ್ಗೆ ಇನ್ನೂ ಭಯ, ಚಿಂತೆ, ಹೆಚ್ಚಾಯಿತು. ಹೇಗೆ ಬೃಹತ್ ಕುಲುಮೆಗೆ ಇನ್ನಷ್ಟು ಇಂಧನ ಸುರಿದು ಇನ್ನಷ್ಟು ಪ್ರಜ್ವಲಿಸುವಂತೆ ಮಾಡುವರೋ ಹಾಗೆ ಅಥವಾ ಹೇಗೆ ಹಸಿರಾಗಿರುವ, ಒದ್ದೆಯಾಗಿರುವ ಭೂಮಿಗೆ, ಮಹಾಮಳೆಯಿಂದಾಗಿ ಇನ್ನಷ್ಟು ಜಲಮಯವಾಗುವುದೋ ಹಾಗೆಯೇ ದೇವಪುತ್ರರ ಮಾತು ಆಲಿಸಿ ಅವರಲ್ಲಿ ಭಯ ಮತ್ತು ಜಡತೆ ಉಂಟಾಯಿತು.
ಆದರೆ ಭಂತೆ ನಾಗಸೇನ, ಇದರ ಬಗ್ಗೆ ಹೇಳಿರಿ, ಒಂದುವೇಳೆ ಸ್ವರ್ಗದ ಚಕ್ರರತ್ನವು ಏಳನೆಯ ದಿನಕ್ಕೆ ಅವರಿಗೆ ಪ್ರತ್ಯಕ್ಷವಾಗಿದ್ದರೆ, ಅದು ಬಂದ ಕಾರ್ಯವು ಫಲಿತವಾಗದೆ ಅದು ಹಿಂತಿರುಗುತ್ತಿತ್ತೇ? (169)
ಇಲ್ಲ ಮಹಾರಾಜ, ಅಂತಹ ಚಕ್ರರತ್ನವು ಅವರಿಗೆ ಕಾಣಿಸಲಿಲ್ಲ. ಅದು ಆ ದೇವನಿಂದ ಬಂದಂತಹ ಸುಳ್ಳಾಗಿತ್ತು. ಆ ದೇವ ಅವರನ್ನು ಪ್ರಲೋಭನೆ ಮಾಡಲು ನುಡಿದಿದ್ದನು ಮತ್ತು ಅದು ನಿಜವಾಗಿ ಪ್ರತ್ಯಕ್ಷವಾಗಿದ್ದರೂ ಬೋಧಿಸತ್ವರು ಅದನ್ನು ತ್ಯಜಿಸುತ್ತಿದ್ದರು. ಏಕೆಂದರೆ ಬೋಧಿಸತ್ವರಲ್ಲಿ ಅನಿತ್ಯ, ದುಃಖ, ಅನಾತ್ಮ, ಅಶುಭಾ ಜ್ಞಾನವು ಸ್ಥಿರವಾಗಿ ನೆಲೆಯೂರಿ ಅವರಲ್ಲಿನ ಉಪಾದಾನ (ಅಂಟುವಿಕೆ) ಕ್ಷಯವಾಯಿತು. ಹೇಗೆಂದರೆ ಓ ಮಹಾರಾಜ, ಅನೋತ್ತತ ಸರೋವರದಿಂದ, ಗಂಗೆಗೆ, ಗಂಗೆಯಿಂದ ಮಹಾ ಸಮುದ್ರಕ್ಕೆ, ಮಹಾ ಸಮುದ್ರದಿಂದ ಪಾತಾಳಕ್ಕೆ ಹಾದುಹೋಗುವ ಜಲವು ಎಂದಾದರೂ ಹಿಂದಕ್ಕೆ ಹರಿಯುವುದೇ? ಹಿಮ್ಮುಖವಾಗಿ ಮತ್ತೆ ಮಹಾ ಸಮುದ್ರಕ್ಕೆ, ಹಾಗೆಯೇ, ಗಂಗಗೆ, ಹಾಗೆಯೇ ಅನೊತ್ತತ ಸರೋವರಕ್ಕೆ ಹರಿಯುವುದೇ?
ಖಂಡಿತ ಇಲ್ಲ ಭಂತೆ.
ಅದೇರೀತಿಯಲ್ಲಿ ಓ ಮಹಾರಾಜ, ಬೋಧಿಸತ್ವರು ತಮ್ಮ ಕೊನೆಯ ಜನ್ಮಕ್ಕಾಗಿ ಅಸಂಖ್ಯಾತ ಕಲ್ಪಗಳಿಂದ ಅಪಾರ ಪುಣ್ಯವನ್ನು, ಪರಿಪಕ್ವತೆಯನ್ನು ಪಡೆದಿರುತ್ತಾರೆ. ಈಗ ಅವರು ಆ ಕೊನೆಯ ಜನ್ಮದಲ್ಲಿರುವಾಗ, ಅವರಲ್ಲಿ ಬುದ್ಧ ಜ್ಞಾನವು ಪರಿಪಕ್ವವಾಗಿರುತ್ತದೆ. ಇನ್ನು ಕೇವಲ ಆರು ವರ್ಷಗಳ ನಂತರ ಅವರು ಬುದ್ಧರಾಗುವವ ರಾಗಿರುತ್ತಾರೆ. ಆಗ ಅವರು ಸರ್ವಜ್ಞ ಸಂಪನ್ನರು ಮತ್ತು ಲೋಕಕ್ಕೆ ಅಗ್ರರಾಗಿರುತ್ತಾರೆ. ಅಂತಹ ಬೋಧಿಸತ್ವರು ಕೇವಲ ಚಕ್ರರತ್ನಕ್ಕಾಗಿ ಪುನಃ ಹಿಂತಿರುಗುವರೇ?
ಖಂಡಿತವಾಗಿ ಇಲ್ಲ ಭಂತೆ.
ಓ ಮಹಾರಾಜ ಕೇಳಿ ಇಲ್ಲಿ, ಈ ಮಹತ್ತರವಾದ ಪೃಥ್ವಿಯು ಮತ್ತು ಅದರ ಪರ್ವತ ಶ್ರೇಣಿಗಳೆಲ್ಲಾ ಹಿಂತಿರುಗಬಹುದು (ಬುಡಮೇಲು ಆಗಬಹುದು). ಆದರೆ ಬುದ್ಧತ್ವ ಅರಸುತ್ತಿರುವ ಬೋಧಿಸತ್ವ ಎಂದಿಗೂ ಹಿಂತಿರುಗಲಾರನು, ತನ್ನ ಗುರಿ ತಪ್ಪಲಾರನು. ಓ ಮಹಾರಾಜ, ಗಂಗಾ ನದಿಯು ಬೇಕಾದರೆ ಹಿಮ್ಮುಖವಾಗಿ ಹರಿಯಬಹುದು, ಆದರೆ ಬೋಧಿಸತ್ವರು ಎಂದಿಗೂ ಬುದ್ಧತ್ವದ ಗುರಿಯಿಂದ ಹಿಮ್ಮುಖವಾಗಿ ಚಲಿಸಲಾರರು. ಸಾಧ್ಯವಾದರೇ ಈ ಬೃಹತ್ ಸಾಗರವು ಮತ್ತು ಅದರ ಅಪಾರ ಜಲವು ಹಸುವಿನ ಪಾದದ ಗುರುತಿನಂತೆ ಇಂಗಿ ಹೋಗಬಹುದು, ಆದರೆ ಬೋಧಿಸತ್ವರು ತಮ್ಮ ಬುದ್ಧತ್ವದ ಪ್ರಾಪ್ತಿಯ ಹೊರತು ಹಿಂತಿರುಗುವುದಿಲ್ಲ. ಓ ಮಹಾರಾಜ, ಸಾಧ್ಯವಾದರೆ ಪರ್ವತಗಳ ರಾಜ ಸಿನೇರು ನೂರು ಅಥವಾ ಸಾವಿರ ಹೋಳಾಗಿ ಸಿಡಿಯಬಹುದು, ಆದರೆ ಬೋಧಿಸತ್ವರು ಮಾತ್ರ ಬುದ್ಧತ್ವದ ವಿನಃ ಹಿಂತಿರುಗಲಾರರು. ಓ ರಾಜ, ಹೀಗೂ ಸಾಧ್ಯವಾಗಬಹುದು ಏನೆಂದರೆ ಆಕಾಶದಿಂದ ಸೂರ್ಯಚಂದ್ರರು ಹಾಗು ನಕ್ಷತ್ರಗಳು ಮಣ್ಣಿನ ಹೆಂಟೆಯಂತೆ ಕಳಚಿ ಕೆಳಗೆ ಬೀಳಬಹುದು. ಆದರೂ ಸಹಾ ಬೋಧಿಸತ್ವರು ಮಾತ್ರ ಬುದ್ಧತ್ವದ ವಿನಃ ಹಿಂತಿರುಗಲಾರರು, ಸಾಧ್ಯವಾದರೆ ಸ್ವರ್ಗವೂ ಸಹಾ ಚಾಪೆಯಂತೆ ಮಡಚಿಕೊಳ್ಳಬಹದು. ಆದರೆ ಬೋಧಿಸತ್ವರು ಮಾತ್ರ ಬುದ್ಧತ್ವವಿಲ್ಲದೆ ಹಿಂತಿರುಗಲಾರರು. ಏಕೆ ಹೀಗೆ? ಏಕೆಂದರೆ ಅವರು ಸರ್ವ ಬಂಧನಗಳನ್ನು ನಾಶಗೊಳಿಸಿರುವುದರಿಂದಾಗಿ.
ಭಂತೆ ನಾಗಸೇನ, ಈ ಲೋಕದಲ್ಲಿ ಎಷ್ಟು ಬಂಧನಗಳಿವೆ? (170)
ಓ ಮಹಾರಾಜ, ಈ ಲೋಕದಲ್ಲಿ 10 ಬಂಧನಗಳಿವೆ. ಅದರಿಂದಾಗಿ ಮಾನವರು ಪರಿತ್ಯಾಗ ಮಾಡಲಾರರು ಮತ್ತು ಪುನಃ ಪ್ರಾಪಂಚಿಕತೆಗೆ ಹಿಂತಿರುಗುವರು ಮತ್ತು ಯಾವುದವು 10? ಓ ಮಹಾರಾಜ, ಅವು ಯಾವುವೆಂದರೆ ಮಾತ, ಪಿತ, ಭಾರ್ಯೆ, ಪುತ್ರ (ಪುತ್ರಿ), ಬಂಧು, ಮಿತ್ರರು, ಧನ ಲಾಭ ಸತ್ಕಾರ, ಐಶ್ವರ್ಯ (ಸುಲಭ ಲಾಭ) (ಚಕ್ರಾಧಿಪತ್ಯ) ಮತ್ತು ಪಂಚ ಕಾಮಗುಣಗಳು. ಈ 10 ಬಂಧನಗಳು ಲೋಕದಲ್ಲಿ ಸಮಸ್ಯೆಯಾಗಿದೆ. ಇದರಿಂದಾಗಿ ಬಂಧಿತರಾದಂತಹ ಜನರು ಪ್ರಪಂಚವನ್ನು ತೊರೆಯುವುದಿಲ್ಲ ಮತ್ತು ಪುನಃ ಅದರಲ್ಲಿ ಮುಳುಗುವರು. ಆದರೆ ಬೋಧಿಸತ್ವರು ಈ ಎಲ್ಲಾ ಬಂಧನಗಳನ್ನು ನಾಶಪಡಿಸುತ್ತಾರೆ (ಕತ್ತರಿಸಿ ಹಾಕುತ್ತಾರೆ). ಅದರಿಂದಾಗಿ ಅವರು ಪುನಃ ಹಿಂತಿರುಗುವುದಿಲ್ಲ.
ಪೂಜ್ಯ ನಾಗಸೇನ, ಬೋಧಿಸತ್ವರಿಗೆ ದೇವತೆಗಳ ಲೋಕಸಹಿತ ವಿರಾಗ ಉಂಟಾಗಬಹುದು, ಆಗಲೂ ಸಹಾ ಅವರ ಜ್ಞಾನವು ಅಪರಿಪಕ್ವವಾಗಿಯೇ ಇದ್ದಿರಬಹುದು ಮತ್ತು ಅವರಲ್ಲಿ ಬುದ್ಧತ್ವದಂತಹ ಪರಿಪಕ್ವತೆ ಇಲ್ಲದಿದ್ದರೂ ಸಹಾ ಲೋಕ ತ್ಯಾಗವನ್ನು ಮಾಡಿರಬಹುದು. ಹಾಗಾದರೆ ಯಾವ ಲಾಭವು ಅವರಿಗೆ ದೇಹದಂಡನೆಯಿಂದ ಕಂಡುಬಂದಿತು? ಅದರ ಬದಲು ಅವರು ಪರಿಪಕ್ವವಾಗುವತನಕ ಸುಖಭೋಗದಲ್ಲೇ ಇರಬಹುದಿತ್ತಲ್ಲ?
ಓ ಮಹಾರಾಜ, 10 ರೀತಿಯ ವ್ಯಕ್ತಿಗಳು ಇದ್ದಾರೆ, ಅವರನ್ನು ಈ ಲೋಕದಲ್ಲಿ ಕೀಳಾಗಿ ಕಾಣುತ್ತಾರೆ ಮತ್ತು ತುಚ್ಛಿಕರಿಸುತ್ತಾರೆ, ಲಜ್ಜೆತಾಳುತ್ತಾರೆ, ತಾತ್ಸರ ಮಾಡುತ್ತಾರೆ. ನಿಂದನೀಯವಾಗಿ ಕಾಣುತ್ತಾರೆ, ಲೋಕದೊಂದಿಗೆ ತಿರಸ್ಕರಿಸುತ್ತಾರೆ ಹೊರತು ಪ್ರೀತಿಸುವುದಿಲ್ಲ ಮತ್ತು ಯಾರವರು? ಅವರೆಂದರೆ ಗಂಡನಿಲ್ಲದ ಸ್ತ್ರೀ, ಬಲಹೀನ ಕೀಟ, ಬಂಧುಮಿತ್ರರಿಲ್ಲದವನು, ತಿಂಡಿಪೋತ, ಅಪಕೀತರ್ಿ ಹೊಂದಿರುವ ಕುಟುಂಬದಲ್ಲಿ ವಾಸಿಸುತ್ತಿರುವ, ಪಾಪಿಗಳ ಮಿತ್ರರು, ಯಾರ ಐಶ್ವರ್ಯವು ನಷ್ಟವಾಗಿದೆಯೋ ಆತನು, ಚಾರಿತ್ರ್ಯಹೀನ, ನಿರುದ್ಯೋಗಿ ಮತ್ತು ಸಂಪಾದನೆಯಿಲ್ಲದವನು ಈ 10 ಜನರು ಲೋಕದಲ್ಲಿ ನಿಂದನೀಯರಾಗಿರುತ್ತಾರೆ. ತಾತ್ಸರ ಮಾಡಲ್ಪಟ್ಟು, ಪ್ರೀತಿಸಲ್ಪಡುವುದಿಲ್ಲ.
ಈ ವಿಷಯಗಳನ್ನು ಚಿಂತಿಸಿ, ಬೋಧಿಸತ್ವರಿಗೆ ಈ ಯೋಚನೆ ಬಂದಿತು: ಯಾವುದೇ ಉದ್ದೇಶವಿಲ್ಲದೆ, ಯಾವುದೇ ಪ್ರಯತ್ನವಿಲ್ಲದೆ ನಾನು ದೇವತೆಗಳಲ್ಲಿ ಮತ್ತು ಮಾನವರಲ್ಲಿ ನಿಂದೆಗೆ ಈಡಾಗಲಾರೆ. ನಾನು ಪ್ರಯತ್ನದಲ್ಲಿ ಪ್ರಾವಿಣ್ಯತೆ ಪಡೆಯುವಂತಾಗಲಿ, ಆ ರೀತಿಯ ಯೋಗ್ಯವಾದ ಕ್ರಿಯೆಯಿಂದ ಗೌರವದಿಂದಿರಲಿ, ಪ್ರಯತ್ನದಿಂದಲೇ ಒಬ್ಬನಿಗೆ ಶ್ರೇಷ್ಠತ್ವ ಲಭಿಸುವುದು. ಯಾರ ಚಾರಿತ್ರ್ಯವು ಪ್ರಯತ್ನದಿಂದಲೇ ಆಧಾರಿತವಾಗಿದೆಯೋ, ಯಾರು ಜೀವನದ ಪ್ರತಿ ಘಟ್ಟದಲ್ಲೂ ಪ್ರಯತ್ನವನ್ನು ಅವಲಂಬಿಸಿರುವನೋ ಯಾರು ಪ್ರಯತ್ನದಿಂದಲೇ ವಿಹರಿಸಿರುವರೋ ಆತನು ನಿರಂತರ ಅಪ್ರಮಾದದಿಂದ (ಎಚ್ಚರಿಕೆ) ಇರುತ್ತಾನೆ. ಓ ಮಹಾರಾಜ, ಇದು ಬೋಧಿಸತ್ವರಲ್ಲಿರುವ ಉತ್ಸಾಹವಾಗಿದೆ. ಆ ಆಧಾರದಿಂದಲೇ ಅವರು ಜ್ಞಾನದಲ್ಲಿ ಪರಿಪಕ್ವತೆಯನ್ನು ಉಂಟು ಮಾಡಿದರು ಮತ್ತು ತಪಕ್ಕೆ ಸಿದ್ಧರಾದರು.
ಭಂತೆ ನಾಗಸೇನ, ಬೋಧಿಸತ್ವರು ತಪಕ್ಕೆ ಸಿದ್ಧರಾದಾಗ ಹೀಗೆ ಹೇಳಿಕೊಂಡರು ಸಾಧಾರಣ ಜನರಿಗೆ ಅತೀತವಾದ, ಆರ್ಯರಿಗೆ ಉಚಿತವಾದ, ಈ ಹಾದಿಯಲ್ಲಿ ಹೊರಡುತ್ತಿದ್ದೇನೆ, ಬಹುಶಃ ಬೋಧಿಗೆ ಬೇರ್ಯಾವ ಹಾದಿಯೂ ಇರಲಾರದು. ಆದರೆ ಈ ದೇಹದಂಡನೆಯಿಂದ ನಾನು ಪ್ರಜ್ಞಾದ ಶಿಖರವನ್ನು ಏರಲಿಲ್ಲ; ಬೇರ್ಯಾವ ಹಾದಿಯೂ ಬುದ್ಧತ್ವಕ್ಕೆ ಇಲ್ಲವೇ?
ಆಗ ಬೋಧಿಸತ್ವರು ಮಾರ್ಗದ ಬಗ್ಗೆ ಗೊಂದಲಕ್ಕೆ ಈಡಾಗಿದ್ದರೆ? (171)
ಓ ಮಹಾರಾಜ, 25 ಚಿತ್ತ ದುರ್ಬಲ ಮಾಡುವಂತಹ ಕಾರಣಗಳಿವೆ. ಅದರಿಂದಾಗಿ ಚಿತ್ತವು ದುಃಖದಿಂದಾಗಿ ಆಸವ ಕ್ಷಯದ ಕಡೆಗೆ ಯಶಸ್ವಿಯಾಗುವುದಿಲ್ಲ. ಹಾಗೆಯೇ ಸಮಾಧಿಯು ಲಭಿಸುವುದಿಲ್ಲ. ಅವೆಂದರೆ ಕ್ರೋಧ, ದ್ವೇಷ, ವಂಚನೆ, ಅಹಂಕಾರ, ಈಷರ್ೆ, ಸ್ವಾರ್ಥ, ಮಾಯಾ, ಮೋಸ, ಹಠಮಾರಿತನ, ವಿರೋಧತೆ, ಅಹಂಭಾವ, ಗರ್ವ, ಮದ, ಪ್ರಮಾದ, ಆಲಸ್ಯ, ಜಡತೆ, ನಿದ್ರಾ, ಸೋಮಾರಿತನ, ಪಾಪಮಿತ್ರತ್ವ, ರೂಪ, ಶಬ್ದ, ರಸ, ಸ್ಪರ್ಶ, ಹಸಿವು, ಬಾಯಾರಿಕೆ, ಅತೃಪ್ತಿ (ಆನಂದ) ಇವೇ ಆ 25 ಧಮ್ಮಗಳು ಚಿತ್ತವನ್ನು ದುರ್ಬಲಗೊಳಿಸುತ್ತದೆ. ಮಹಾರಾಜ ಅದರಿಂದಾಗಿ ಸಮಾಧಿಯು ಲಭಿತವಾಗದೆ ಆಸವಗಳ ಕ್ಷಯವಾಗುವುದಿಲ್ಲ. ಓ ಮಹಾರಾಜ, ಆಗ ಬೋಧಿಸತ್ವರಿಗೆ ಹಸಿವು, ಬಾಯಾರಿಕೆಯಿಂದಾಗಿ ದುರ್ಬಲವಾಗಿತ್ತು. ಆದ್ದರಿಂದಾಗಿ, ಅವರ ಚಿತ್ತವು ಸಹಾ ಆಸವ ಕ್ಷಯಕ್ಕೆ ಭಾಗಲಿಲ್ಲ ಮತ್ತು ಮಹಾರಾಜ, ಬೋಧಿಸತ್ತರು ಅಸಂಖ್ಯಾತ ಕಲ್ಪಗಳಿಂದಾಗಿ ನಾಲ್ಕು ಆರ್ಯಸತ್ಯಗಳು, ಗ್ರಹಿಸುತ್ತಾ ಬಂದಿರುವರು. ಆದ್ದರಿಂದಲೇ ಅವರಿಗೆ ಅಂತಿಮ ಜನ್ಮದಲ್ಲಿಯೂ ಗ್ರಹಿಕೆ ಉದಯಿಸುವುದು. ಆದರೂ ಓ ಮಹಾರಾಜ, ಬೋಧಿಸತ್ವರಲ್ಲೂ ಈ ಆಲೋಚನೆ ಉಂಟಾಗಿತ್ತು ಬಹುಶಃ ಬೋಧಿಗೆ ಬೇರ್ಯಾವ ಹಾದಿಯೂ ಇರಲಾರದು. ಆದರೆ ಅದಕ್ಕಿಂತ ಮುಂಚೆಯೇ ಅವರು ಕೇವಲ ಒಂದು ತಿಂಗಳ ಮಗುವಾಗಿದ್ದಾಗಲೇ ಅವರ ತಂದೆ ಶುದ್ಧೋಧನರವರು ನೇಗಿಲ ಹಬ್ಬದ ದಿನದಂದು ನೇಗಿಲು ಹೂಳುತ್ತಿದ್ದಾಗ, ಬೋಧಿಸತ್ವರನ್ನು ಜಂಬು ವೃಕ್ಷದ ಅಡಿಯಲ್ಲಿ ಕುಳ್ಳಿರಿಸಿದಾಗ, ಆ ತಂಪು ಮತ್ತು ಮನೋಹರ ಪರಿಸರ ಕಂಡು ಸಹಜವಾಗಿ ಪದ್ಮಾಸನಬದ್ಧರಾಗಿ, ನಿವಾರಣ ರಹಿತರಾಗಿ, ಅಕುಶಲ ವಿಷಯಗಳಿಂದ ದೂರಾಗಿ, ಪ್ರಥಮ ಧ್ಯಾನ ಪ್ರಾಪ್ತಿಮಾಡಿದರು. ಹಾಗೆಯೇ ಅವರು ದ್ವಿತೀಯ, ತೃತೀಯ ಮತ್ತು ಚತುರ್ಥ ಧ್ಯಾನ ಪ್ರಾಪ್ತಿಮಾಡಿದರು.
ಸಾಧು ಭಂತೆ ನಾಗಸೇನ, ಬಹುಚೆನ್ನಾಗಿ ಬೋಧಿಸತ್ವರ ಪರಿಪಕ್ವತೆ ಹಾಗೆಯೇ ಅವರ ಮಹೋನ್ನತ ಸಾಧನೆಯನ್ನು ವಿವರಿಸಿದಿರಿ. ಇದು ಹೀಗಾದ್ದುದರಿಂದಾಗಿ ನಾನು ಒಪ್ಪುತ್ತೇನೆ.
3. ಕುಶಲ-ಅಕುಶಲ ಬಲವತ ಪನ್ಹೊ (ಬಲಯುತದ ಪ್ರಶ್ನೆ)
ಭಂತೆ ನಾಗಸೇನ, ಯಾವುದು ಅತ್ಯಂತ ಬಲಯುತವಾದುದು. ಕುಶಲವೋ ಅಥವಾ ಅಕುಶಲವೋ? (172)ಕುಶಲ ಮಹಾರಾಜ.
ಕುಶಲವೇ ಬಲಯುತವಾದುದು ಎನ್ನುವುದನ್ನು ನಾನು ನಂಬಲಾರೆ. ಏಕೆಂದರೆ ನಾವು ಇಲ್ಲಿ ಕಾಣುತ್ತಿರುವುದು ಏನೆಂದರೆ ಇಲ್ಲಿ ಯಾರು ಹತ್ಯೆ ಮಾಡುತ್ತಿರುವನೋ, ಯಾರು ಕಳ್ಳತನ ಮಾಡುತ್ತಿರುವನೋ, ಯಾರು ವ್ಯಭಿಚಾರ ಮಾಡುತ್ತಿರುವನೋ, ಯಾರು ಸುಳ್ಳು ಹೇಳುತ್ತಿರುವನೋ, ಯಾರು ಡಕಾಯಿತಿ ಮಾಡುತ್ತಿರುವನೋ, ಯಾರು ಸುಲಿಗೆ ಮಾಡುತ್ತಿರುವವನೋ, ಯಾರು ಮೋಸಗಾರರೋ, ತಂತ್ರಗಾರರೋ ಇವರೆಲ್ಲರಿಗೂ ತಮ್ಮ ಪಾಪದ ಫಲವಾಗಿ ಕೈಕಾಲುಗಳನ್ನು ಕತ್ತರಿಸುವ ಶಿಕ್ಷೆ, ಹಾಗೆಯೇ ಕಿವಿ, ಮೂಗು ಕತ್ತರಿಸುವ ಶಿಕ್ಷೆ, ಬಿಸಿಪಾತ್ರೆ, ಮುಳ್ಳಿನ ಕಿರೀಟ, ರಾಹುವಿನ ಬಾಯಿ ಅಥವಾ ಬೆಂಕಿಯ ಹಾರ, ಕೈಯನ್ನು ಸುಡಿಸುವಿಕೆ, ಹಾಲಿನ ಪಟ್ಟೆಗಳಂತೆ ಚರ್ಮ ಸೀಳುವಿಕೆ, ತೊಗಟೆಯ ವಸ್ತ್ರ, ಜಿಂಕೆ ಮಚ್ಚೆಗಳ ನಿಮರ್ಾಣ, ಸ್ನಾಯುವಿಗೆ ಕೊಂಡಿ ಹಾಕುವಿಕೆ, ಕತ್ತರಿಸುವಿಕೆ, ಸೀಳಿಸುವಿಕೆ, ತಿರುಗಿಸುವಿಕೆ, ಹುಲ್ಲಿನ ಕುಚರ್ಿ, ಬೇಯಿಸಿದ ಎಣ್ಣೆಯಲ್ಲಿ ಸ್ನಾನ, ನಾಯಿಗಳಿಂದ ಕಚ್ಚಿಸುವಿಕೆ ಅಥವಾ ತಿನ್ನಿಸುವಿಕೆ, ತಲೆ ಕತ್ತರಿಸುವಿಕೆ, ಕೆಲವರಿಗೆ ರಾತ್ರಿ ಮಾತ್ರ ಶಿಕ್ಷೆ, ಕೆಲವರಿಗೆ ಹಗಲು ಮಾತ್ರ ಶಿಕ್ಷೆ, ಅವರ ಪಾಪಕ್ಕೆ ತಕ್ಕಂತೆ ಶಿಕ್ಷೆ ವಿಧಿಸುವರು. ಆದರೆ ಈ ಎಲ್ಲಾ ಅನುಭವಗಳು ವರ್ತಮಾನದ ಗೋಚರ ಜಗತ್ತಿಗೆ ಫಲವಾಗಿ ದೊರೆಯುವುದನ್ನು ನಾವು ಕಾಣಬಹುದು. ಆದರೆ ಭಂತೆ ನಾಗಸೇನ, ನೀವು ನನಗೆ ಇದೇರೀತಿಯಲ್ಲಿ ಭಿಕ್ಷುಗಳಿಗೆ ದಾನನೀಡಿ, ಒಬ್ಬರಿಗೆ, ಇಬ್ಬರಿಗೆ, ಮೂವ್ವರಿಗೆ, ನಾಲ್ವರಿಗೆ, ಐದು, ಹತ್ತು, ನೂರು ಅಥವಾ ಸಾವಿರ ಭಿಕ್ಷುಗಳಿಗೆ ಸಪರಿವಾರ ದಾನವನ್ನು ಮಾಡಿದಾಗಲು, ಅದರ ಫಲಿತವಾಗಿ ಇಲ್ಲಿ ಅಪಾರ ಐಶ್ವರ್ಯದಿಂದಾಗಿ ಅಥವಾ ಕೀತರ್ಿವಂತನಾಗಿ ಅಥವಾ ಸುಖಿಯಾಗಿ ಅಥವಾ ಉಪೋಸನ ಆಚರಣೆಯಿಂದಾಗಲಿ ಈ ಜೀವನದಲ್ಲೇ ಸುಖ ಪಡೆದಿರುವರೇ?
ಓ ಮಹಾರಾಜ, ಅಂತಹ ನಾಲ್ವರಿದ್ದಾರೆ. ಅವರು ದಾನದಿಂದಾಗಿ, ಶೀಲದಿಂದಾಗಿ, ಉಪೋಸತದಿಂದಾಗಿ, ಈ ಪೃಥ್ವಿಯ ಶರೀರದಿಂದಲೇ ತಿದಸಪುರದ (ದೇವನಗರಿ) ವೈಭೋಗವನ್ನು ಅನುಭವಿಸಿದರು.
ಭಂತೆ ಅವರ್ಯಾರು?
ಮಂಧಾತ ರಾಜ, ನಿಮಿ ಚಕ್ರವತರ್ಿ, ಸಾಧಿನ ರಾಜ ಮತ್ತು ಗುಟ್ಟಿಲ ವಾದ್ಯಗಾರ.
ಭಂತೆ ನಾಗಸೇನ, ಇವೆಲ್ಲ ಸಾವಿರಾರು ಜನ್ಮಗಳ ಹಿಂದೆ ನಡೆದುದಾಗಿದೆ. ನಮಗೆ ಇಬ್ಬರಿಗೂ ಇದು ಗ್ರಾಹ್ಯತೀತವಾಗಿದೆ. ಭಗವಾನರ ಕಾಲದ ಉದಾಹರಣೆಯಾಗಲಿ ಅಥವಾ ಈಗಿನದು ಉದಾಹರಣೆ ನೀಡಿರಿ.
ಓ ಮಹಾರಾಜ, ಗುಲಾಮನಾದ ಪುಣ್ಣಕನು ಸಾರಿಪುತ್ತ ಥೇರರಿಗೆ ಆಹಾರ ದಾನ ನೀಡಿದ ದಿನದಂದೇ ಮಹಾಶ್ರೇಷ್ಠಿಯಾಗಿ, ಶ್ರೇಷ್ಠಿ ಪುಣ್ಣಕನಾದನು. ಗೋಪಾಲ ಮಾತಾಳು ಬಡರೈತನ ಮಗಳಾಗಿದ್ದಳು, ಆಕೆ ತನ್ನ ಕೂದಲನ್ನು ಮೂರು ಪೈಸೆಗಳಿಗೆ ಮಾರಿ ಅದರಿಂದಾಗಿ ಮಹಾಕಾಚಾಯನ ಥೇರರಿಗೆ ಮತ್ತು ಅವರ ಏಳು ಸಹ ಭಿಕ್ಷುಗಳಿಗೆ ದಾನ ಮಾಡಿದ ದಿನದಂದೇ ರಾಜ ಉದೇನನ ಮಡದಿಯಗಿ ಪ್ರಧಾನ ರಾಣಿಯಾದಳು. ಶ್ರದ್ಧಾಳು ಸುಪ್ರಿಯ ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ರೋಗಿ ಭಿಕ್ಷುವಿಗೆ ಆಹಾರ ನೀಡಿ, ಮರುದಿನವೇ ಆಕೆಯ ಗಾಯವು ಮಾಯವಾಗಿ ಮೊದಲಿನಂತೆ ಎಲ್ಲವೂ ಆರೋಗ್ಯ (ಸ್ಥಿತಿ) ಪಡೆಯಿತು. ಚರ್ಮಸಹಿತ ಎಲ್ಲವೂ ಮೊದಲಿನಂತೆ ಆಯಿತು. ಹೂ ಮಾರುತ್ತಿದ್ದ ಬಡ ಮಲ್ಲಿಕಾ ಭಗವಾನರಿಗೆ ಕಮ್ಮಾಸಪಿಂಡ (ರಾತ್ರಿಯ ಗಂಜಿ) ನೀಡಿ ಅದೇ ದಿನವೇ ಪಸೇನದಿ ರಾಜನ ಮಡದಿಯಾಗಿ, ಕೋಸಲ ದೇಶದ ರಾಣಿಯಾದಳು. ಸುಮನ ಹೂಗಾರನು ಭಗವಾನರಿಗೆ ಎಂಟು ಗೊಂಚಲು ಮಲ್ಲಿಗೆ ಹೂಗಳನ್ನು ಅಪರ್ಿಸಿ ಮಹಾ ಭಾಗ್ಯಶಾಲಿಯಾದನು. ಬ್ರಾಹ್ಮಣ ಏಕಸಾತಕ ಭಗವಾನರಿಗೆ ತನ್ನ ಒಂದೇ ವಸ್ತ್ರ ನೀಡಿ, ಆ ದಿನವೇ ಸಬ್ಬಿತ್ಥಕ ಸೇನಾಮಂತ್ರಿಯಾದನು. ಇವರೆಲ್ಲರೂ ತಮ್ಮ ಜೀವಿತದಲ್ಲೇ ದಾನದಿಂದಾಗಿ ಫಲಗಳನ್ನು ಪಡೆದವರಾಗಿದ್ದರು.
ಹಾಗಾದರೆ ಭಂತೆ, ನೀವು ಹುಡುಕಾಡಿದಾಗ ಮತ್ತು ಅನ್ವೇಷಿಸಿದಾಗ, ನಿಮಗೆ ಕೇವಲ ಆರು ಉದಾಹರಣೆಯಷ್ಟೇ ಸಿಕ್ಕವೆ.
ಹೌದು ಮಹಾರಾಜ.
ಹಾಗಾದರೆ ಭಂತೆ ನಾಗಸೇನ, ಅಕುಶಲವೇ ಬಲಯುತವಾಗಿದೆ ಹೊರತು ಕುಶಲವಲ್ಲ. ನಾನು ಕೇವಲ ಒಂದೇ ದಿನದಲ್ಲಿ, ಪಾಪಕೃತ್ಯಕ್ಕೆ ಫಲವಾಗಿ ಶಿಕ್ಷೆ ಪಡೆಯುವ 10, 30, 40, 50, 100 ಮತ್ತು 1000ಕ್ಕೂ ಹೆಚ್ಚು ಘಟನೆಗಳನ್ನು ನೋಡುತ್ತೇನೆ. ಮತ್ತೆ ಭಂತೆ, ಭದ್ದಸಾಲ ಎಂಬ ನಂದಕುಲದ ಸೈನಿಕನು ರಾಜ ಚಂದ್ರಗುಪ್ತನ ವಿರುದ್ಧ ಯುದ್ಧ ಮಾಡಲು ಸಂಬಳ ಪಡೆಯುತ್ತಿದ್ದನು ಮತ್ತು ಭಂತೆ ನಾಗಸೇನ ಆ ಯುದ್ಧದಲ್ಲಿ 80 ಶವಗಳು (ಪ್ರೇತಗಳು) ನೃತ್ಯ ಮಾಡಿದವು. ಅದರ ಬಗ್ಗೆ ಹೀಗೆ ಉಲ್ಲೇಖವಿದೆ. ಆ ಸಮಯದಲ್ಲಿ ಮಹಾ ಯಜ್ಞವೊಂದು ನಡೆಯಿತು. ಮಹಾ ಹತ್ಯಾ ಹಿಂಸೆಗಳು ನಡೆದವು. ಆಗ ಶಿರವಿಲ್ಲದ ದೇಹಗಳು ಎದ್ದು ರಣಭೂಮಿಯಲ್ಲಿ ನೃತ್ಯ ಮಾಡಿದವು. ಆಗ ಪಾಪ ಮಾಡಿದ್ದ ಎಲ್ಲ ಜನರು ತಮ್ಮ ಪಾಪಕ್ಕೆ ತಕ್ಕಫಲ ಪಡೆದು ನಾಶವಾದರು. ಆದ್ದರಿಂದಲೇ ಭಂತೆ ನಾನು ಅಕುಶಲವೇ ಕುಶಲಕ್ಕಿಂತ ಬಲಯುತವಾದುದೆಂದು ಹೇಳುತ್ತೇನೆ. ಮತ್ತೆ ಭಂತೆ ನಾಗಸೇನ, ಕೋಶಾಲಾಧೀಶ ಪಸೇನದಿಯು ಬುದ್ಧರಿಗೆ ಮತ್ತು ಸಂಘಕ್ಕೆ ಹೇರಳವಾದ ದಾನಗಳನ್ನು ಮಾಡಿ ಅಸಮಾನನಾಗಿದ್ದನಲ್ಲವೇ?
ಹೌದು ಮಹಾರಾಜ.
ಆದರೆ ಭಂತೆ ನಾಗಸೇನ, ಆತನು ಈ ರೀತಿ ಅಪಾರ ದಾನಗಳನ್ನು ಮಾಡಿಯೂ, ಆತನ ವರ್ತಮಾನ ಕಾಲದಲ್ಲಿ ಇನ್ನಷ್ಟು ಐಶ್ವರ್ಯವಾಗಲಿ, ವ್ಯಾಮೋಹವಾಗಲಿ ಅಥವಾ ಸುಖವಾಗಲಿ ಪಡೆದನೇ?
ಇಲ್ಲ ಮಹಾರಾಜ.
ಈ ವಿಷಯದಲ್ಲಂತು ಖಂಡಿತವಾಗಿ ಭಂತೆ ನಾಗಸೇನ, ಅಕುಶಲವು ಕುಶಲಕ್ಕಿಂತ ಬಲಯುತವಾಗಿದೆ.
ಓ ಮಹಾರಾಜ, ಅಕುಶಲವು (ಪಾಪವು) ತನ್ನ ತುಚ್ಛತೆಯ ಕಾರಣದಿಂದಾಗಿ, ತಕ್ಷಣ ಸಾಯುತ್ತದೆ. ಆದರೆ ಕುಶಲವು ತನ್ನ ಭವ್ಯತೆಯಿಂದಾಗಿ ಅಳಿಯಲು ಅಪಾರ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಉಪಮೆಯಿಂದಾಗಿ ಅಳೆಯಬಹುದು, ಹೇಗೆಂದರೆ ಓ ಮಹಾರಾಜ, ಪಶ್ಚಿಮದಲ್ಲಿ ಕುಮುದ ಬಂಡಿಕಾ ಎಂಬ ಧಾನ್ಯವು ಒಂದು ತಿಂಗಳಲ್ಲೇ ಬಲಿತು ಬೆಳೆ ನೀಡುತ್ತದೆ. ಆದರೆ ಮಾಸಲು ಆ ಸ್ಥಿತಿಗೆ ಹೋಗಲು ಆರು ತಿಂಗಳು ಹಿಡಿಯುತ್ತದೆ. ಈಗ ಹೇಳಿ ರಾಜ, ಕುಮುದ ಬಂಡಿಕಾ ಮತ್ತು ಮಾಸಲು ಅಕ್ಕಿಗೂ ಇರುವ ವ್ಯತ್ಯಾಸವಾದರೂ ಏನು?
ಓ ರಾಜ, ಒಂದು ತುಚ್ಚಗಿಡವಾಗಿದೆ, ಮತ್ತೊಂದು ಶ್ರೇಷ್ಠತಳಿಯಾಗಿದೆ. ಮಾಸಲು ಅಕ್ಕಿಯನ್ನು ರಾಜರ ಭಕ್ಷಕ್ಕೆ ಬಳಸುತ್ತಾರೆ. ಕುಮುದಾ ಬಂಡಿಕಾವನ್ನು ಸೇವಕರ ಆಹಾರಕ್ಕೆ ಬಳಸುತ್ತಾರೆ.
ಅದೇರೀತಿಯಲ್ಲಿ ಓ ರಾಜ, ತುಚ್ಚತೆಯು ಬೇಗನೇ ಸಾಯುತ್ತದೆ. ಆದರೆ ಶ್ರೇಷ್ಠವಾದುದು ಸಾಯಲು ಅಪಾರ ಸಮಯ ಹಿಡಿಯುತ್ತದೆ.
ಆದರೆ ನಾಗಸೇನ, ಯಾವ ವಿಷಯಗಳು ಅತಿಬೇಗನೆ ಚ್ಯುತವಾಗುವವೋ ಅವೇ ಶಕ್ತಿಶಾಲಿ ಎಂದು ಜಗತ್ತು ಪರಿಗಣಿಸಲ್ಪಡುವುದಲ್ಲ?! ಹೀಗಾಗಿ ಮತ್ತೆ ಅಕುಶಲವೇ ಬಲವಾಗಿದೆ ಹೊರತು ಕುಶಲವಲ್ಲ. ಹೇಗೆಂದರೆ ಭಂತೆ ನಾಗಸೇನ, ಭಯಾನಕ ಯುದ್ಧದಲ್ಲಿ ಬಲಶಾಲಿಯು ಕ್ಷಿಪ್ರವಾಗಿ ಎದುರಾಳಿಯ ತಲೆಯನ್ನು ತನ್ನ ಕಂಕುಳ ಬಳಿಯಲ್ಲಿ ಹಿಡಿದು ಉಸಿರುಗಟ್ಟಿಸುತ್ತಾನೆ ಮತ್ತು ಸೆರೆಯಾಳುವನ್ನಾಗಿ ಮಾಡಿ ತನ್ನ ಪ್ರಭುವಿನ ಸೆರೆಮನೆಗೆ ತಳ್ಳುತ್ತಾನೆ. ಈ ರೀತಿಯಗಿ ಆತನು ಪಂದ್ಯಶ್ರೇಷ್ಠನಾಗುತ್ತಾನೆ, ವೀರಾಗ್ರಣಿಯಾಗುತ್ತಾನೆ. ಹಾಗೇ ಶಸ್ತ್ರವೈದ್ಯನು ಕ್ಷಿಪ್ರವಾಗಿ ಭಜರ್ಿಯನ್ನು ತೆಗೆದು ರೋಗವನ್ನು ಬೇಗನೇ ಗುಣಪಡಿಸಿದರೆ ಆತನು ಚಾಣಾಕ್ಷ ವೈದ್ಯನೆಂದು ಕರೆಯಲ್ಪಡುತ್ತಾನೆ. ಹಾಗೆಯೇ ಲೆಕ್ಕಿಗನು ವೇಗವಾಗಿ ಲೆಕ್ಕಾಚಾರ ಮಾಡಿದರೆ ಮಾತ್ರ ಫಲಿತಾಂಶವನ್ನು ಬೇಗ ನುಡಿದರೆ ಮಾತ್ರ ಆತನನ್ನು ಚಾಣಾಕ್ಷ ಲೆಕ್ಕಗನೆಂದು ಹೇಳುತ್ತಾರೆ. ಹಾಗೆಯೇ ಮಲ್ಲನು ವೇಗವಾಗಿ ಎದುರಾಳಿಯನ್ನು ಎತ್ತಿ, ನೆಲಕ್ಕೆ ಅಪ್ಪಳಿಸಿ ಬೆನ್ನಮೇಲೆ ಮಲಗಿಸಿದರೆ ಆತ ವೀರಮಲ್ಲ ಎಂದು ಪರಿಗಣಿಸಲ್ಪಡುತ್ತಾನೆ. ಅದೇರೀತಿಯಲ್ಲಿ ಭಂತೆ ನಾಗಸೇನ, ಕುಶಲ ಮತ್ತು ಅಕುಶಲಗಳಲ್ಲಿ ಕ್ಷಿಪ್ರವಾಗಿ ಕ್ರಿಯೆ ಮಾಡುವುದು ಅಕುಶಲವಾದ್ದರಿಂದಾಗಿ ಅದೇ ಎರಡರಲ್ಲಿ ಬಲಯುತವಾಗಿದೆ.
ಓ ರಾಜ, ಇವೆರಡರ ಕರ್ಮವು ಭವಿಷ್ಯದಲ್ಲಿ ಅತಿ ಸ್ಪಷ್ಟವಾಗಿ ರುಜುವಾತು ಆಗುತ್ತದೆ. ಆದರೆ ಅಕುಶಲವು ತನ್ನ ಪಾಪ ಕಾರಣದಿಂದ ಮತ್ತೊಮ್ಮೆ ವರ್ತಮಾನದಂತೆ ಭವಿಷ್ಯದಲ್ಲೂ ಸ್ಪಷ್ಟವಾಗುತ್ತದೆ. ಸನಾತನ ಕ್ಷತ್ರಿಯರಾಗಿಯು ಈ ರೀತಿಯ ಕಟ್ಟಲೆ ಹಿಂದೆ ಮಾಡುತ್ತಿದ್ದರು: ಯಾರು ಜೀವಹತ್ಯೆ ಮಾಡುವರೋ ಆತನು ದಂಡ ತೆರಬೇಕು, ಶಿಕ್ಷೆಗೆ ಒಳಪಡಬೇಕು. ಹಾಗೆಯೇ ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವವರು ಶಿಕ್ಷೆಗೆ ಒಳಪಡಬೇಕು. ಹಾಗೆಯೇ ಡಕಾಯಿತರು, ಸುಲಿಗೆಕೋರರು, ಮೋಸಗಾರರು, ತಂತ್ರಗಾರರು, ಇವರನ್ನೆಲ್ಲಾ ಈ ರೀತಿಯ ಶಿಕ್ಷೆಗೆ ಒಳಪಡಿಸಬೇಕು, ದಂಡ ಹಾಕಬೇಕು, ಮುರಿಯಬೇಕು, ಅಂಗಹೀನ ಮಾಡಬೇಕು, ಗಲ್ಲಿಗೇರಿಸಬೇಕು ಎಂದೆಲ್ಲಾ ಶಿಕ್ಷೆ ವಿಧಿಸುತ್ತಿದ್ದರು ಮತ್ತು ವಿಚಾರಣೆ ನಡೆಯುತ್ತಿತ್ತು. ನಂತರ ಅದರಂತೆಯೇ ಶಿಕ್ಷೆಯು ವಿಧಿಸಲಾಗುತ್ತಿತ್ತು. ಆದರೆ ಓ ರಾಜ, ಈ ಹಿಂದೆ ಯಾರಾದರೂ ಅಥವಾ ಈಗ ಯಾರಾದರೂ ಈ ರೀತಿಯ ಕಟ್ಟಳೆ ಅಥವಾ ಶಾಸನ ವಿಧಿಸಿದ್ದಾರೆಯೇ? ಯಾರೆಲ್ಲಾ ದಾನ ಮಾಡುವರೋ, ಶೀಲಾಚರಣೆಯಲ್ಲಿ ಇರುವರೋ, ಉಪೋಸತ ಆಚರಿಸುವರೋ ಅವರಿಗೆಲ್ಲಾ ಐಶ್ವರ್ಯ ನೀಡಿ ಅಥವಾ ಗೌರವ ಆದರಗಳನ್ನು ನೀಡಿ. ಈಗ ಹೇಳಿ ಮಹಾರಾಜ, ಪಾಪಿಗಳನ್ನು ಶಿಕ್ಷಿಸಿದಂತೆಯೇ, ಶೀಲವಂತರನ್ನು, ದಾನಿಗಳನ್ನು ಪುರಸ್ಕರಿಸುತ್ತಿರುವೇ? ಗೌರವ, ಐಶ್ವರ್ಯ ನೀಡುತ್ತಿರುವರೇ?
ಖಂಡಿತವಾಗಿ ಇಲ್ಲ ಭಂತೆ.
ಸರಿ, ಅವರೇನಾದರೂ ಹೀಗೆ ಕುಶಲವನ್ನು ಪುರಸ್ಕರಿಸಿದ್ದರೆ, ಕುಶಲವು ಸಹಾ ಈ ಜನ್ಮದಲ್ಲೇ ಸ್ಪಷ್ಟೀಕರಣವಾಗುತ್ತಿತ್ತು. ಆದರೆ ಅಂತಹ ವಿಚಾರಣೆಯಾಗಲಿ, ಐಶ್ವರ್ಯ ನೀಡಿ ಸತ್ಕಾರವಾಗಲಿ, ಯಶಸ್ಸಾಗಲಿ ಅಥವಾ ಗೌರವ-ಆದರಗಳನ್ನು ನೀಡದಿದ್ದುದರಿಂದಾಗಿ ಕುಶಲವು ಈಗ ಸ್ಥಾಪನೆಯಾಗಿಲ್ಲ. ಈ ಕಾರಣದಿಂದಾಗಿಯೇ ಓ ಮಹಾರಾಜ, ಅಕುಶಲವು ಈ ಜೀವನದಲ್ಲಿಯೇ ಗೋಚರಕ್ಕೆ ಬರುತ್ತದೆ. ಆದರೆ ದಾನಿಯು ಮುಂದಿನ ಜನ್ಮದಲ್ಲಿ ಹೇರಳವಾಗಿ ಪಡೆಯುವನು ಮತ್ತು ಅದರಿಂದಾಗಿ ಕುಶಲವು (ದಾನಶೀಲವು) ಈ ಎರಡರಲ್ಲಿ ಬಲಯುತವಾಗಿದೆ.
ಸಾಧು ಭಂತೆ ನಾಗಸೇನ, ತಮ್ಮಂತಹ ಬುದ್ಧಿವಂತರಿಂದಲೇ ಈ ಜಟಿಲ ಪ್ರಶ್ನೆಯು ಪರಿಹಾರವಾಗುತ್ತದೆ, ಈ ಪ್ರಶ್ನೆಯು
ಲೋಕಿಯವಾಗಿದ್ದರೂ ತಾವು ಲೋಕೋತ್ತರ ಹಂತದಲ್ಲಿ ಸ್ಪಷ್ಟೀಕರಿಸಿದಿರಿ.
4. ಪುಬ್ಬಪೇತಾದಿನ ಪನ್ಹೊ (ಮೃತ ಬಂಧುಗಳಿಗೆ ಅಪರ್ಿಸುವ ದಾನದ ಪ್ರಶ್ನೆ)
ಭಂತೆ ನಾಗಸೇನ, ದಾನಿಗಳು ತಮ್ಮ ಮೃತ ಬಂಧುಗಳಿಗೆ ದಾನವನ್ನು ಅಪರ್ಿಸಿ ಈ ದಾನದಿಂದಾಗಿ ಹೀಗಾಗಲಿ, ಹಾಗಾಗಲಿ ಎಂದು ಅಪರ್ಿಸಿ ಹೇಳುತ್ತಾರೆ. ಇದರಿಂದಾಗಿ ಮೃತರು ಲಾಭವನ್ನು ಪಡೆಯುವರೇ? (173)
ಕೆಲವರು ಪಡೆಯುತ್ತಾರೆ. ಓ ಮಹಾರಾಜ ಮತ್ತೆ ಕೆಲವರು ಪಡೆಯಲಾರರು.
ಯಾರು ಲಾಭವನ್ನು ಪಡೆಯುತ್ತಾರೆ ಮತ್ತು ಯಾರು ಪಡೆಯಲಾರರು?
ಯಾರು ನರಕಗಳಲ್ಲಿ ಹುಟ್ಟುತ್ತಾರೊ, ಓ ಮಹಾರಾಜ ಅವರು ಲಾಭವನ್ನು ಪಡೆಯಲಾರರು; ಹಾಗೆಯೇ ಸುಗತಿಯಲ್ಲಿ ಜನ್ಮಿಸಿದವರು ಲಾಭವನ್ನು ಪಡೆಯಲಾರರು; ಹಾಗೆಯೇ ಪ್ರಾಣಿ ಜನ್ಮಗಳನ್ನು ಪಡೆದವರು ಲಾಭವನ್ನು ಪಡೆಯಲಾರರು ಮತ್ತು ಹಾಗೆಯೇ ಪ್ರೇತಗಳಲ್ಲಿ ಜನ್ಮಿಸಿರುವ 3 ವಿಧದವರಾದ ವಂತಾಸಿಕಾ ಪೇತ (ವಾಂತಿಯನ್ನು ತಿಂದು ಜೀವಿಸುವ ಪ್ರೇತ), ಖುಪ್ಪಿಪಾಸಿನೊ ಪೇತ (ಆಹಾರ ಮತ್ತು ಬಾಯಾರಿಕೆಯಿಂದ ನರಳುವ ಪ್ರೇತ) ಮತ್ತು ನಿಷ್ಟಮ ತನ್ಹಿಕ ಪೇತ (ಬಯಕೆಗಳಿಂದ ನರಳುವ ಪ್ರೇತ). ಈ ಮೂರು ಬಗೆಯ ಪ್ರೇತಗಳು ದಾನದ ಲಾಭವನ್ನು ಪಡೆಯಲಾರರು. ಆದರೆ ಪರದತ್ತುಪಜೀವಿನೊ (ದಾನದಿಂದ ಜೀವಿಸುವ ಪ್ರೇತಗಳು) ಪ್ರೇತ ಮಾತ್ರ ದಾನದ ಲಾಭವನ್ನು ಪಡೆಯುತ್ತವೆ ಮತ್ತು ಯಾರು ನೆನೆಸಿಕೊಂಡು ಸಹಿಸಿಕೊಳ್ಳುವರೋ ಅವರು ಹಾಗೆ ಮಾಡುವರು.
ಹಾಗಾದರೆ ಭಂತೆ ನಾಗಸೇನ, ದಾನಿಗಳಿಂದ ಅಪರ್ಿಸಿದ ದಾನವು ವ್ಯರ್ಥವಾಯಿತು, ಫಲರಹಿತವಾಯಿತು. ಏಕೆಂದರೆ ಯಾರಿಗಾಗಿ ದಾನ ನೀಡಿದೆವೋ ಅವರು ಅದರಿಂದ ಲಾಭ ಪಡೆಯಲಿಲ್ಲ.
ಇಲ್ಲ ಓ ಮಹಾರಾಜ, ಅದು ವ್ಯರ್ಥವಾಗಿ ಹೋಗಲಿಲ್ಲ. ಹಾಗೆಯೇ ಫಲರಹಿತವು ಆಗಿಲ್ಲ. ದಾನಿಗಳಿಗೆಯೇ ಅದರಿಂದ ಲಾಭ ಸಿಗುವುದು.
ಇದನ್ನು ಉಪಮೆಯಿಂದ ಸ್ಪಷ್ಟಪಡಿಸಿ ಭಂತೆ.
ಊಹಿಸಿ ಮಹಾರಾಜ, ಜನರು ಮೀನು, ಮಾಂಸವನ್ನು ಸಿದ್ಧಪಡಿಸಿ, ಪಾನಿಯಗಳನ್ನು ಸಿದ್ಧಪಡಿಸಿ, ಅನ್ನ, ಹೋಳಿಗೆಗಳನ್ನು ಸಿದ್ಧಪಡಿಸಿಕೊಂಡು ತಮ್ಮ ಬಂಧುಗಳ ಬಳಿ ಹೋಗುವರು ಹಾಗು ಅವರಿಗೆ ದಾನ ನೀಡಲು ಹೋದಾಗ, ಅವರು ಸ್ವೀಕರಿಸದಿದ್ದರೆ ಆ ಉಡುಗೊರೆಗಳು ವ್ಯರ್ಥವಾಗುತ್ತವೆಯೇ ಅಥವಾ ಫಲರಹಿತವೇ?
ಇಲ್ಲ ಭಂತೆ, ಅವು ದಾನ ಮಾಡಿದವರಿಗೆ ಪುನಃ ಹಿಂತಿರುಗುತ್ತವೆ.
ಸರಿ, ಅದೇರೀತಿಯಲ್ಲಿ ದಾನ ಮಾಡಿದವರಿಗೆ ಆ ಫಲ ಸಿಗುತ್ತದೆ. ಇನ್ನೊಂದು ಉದಾಹರಣೆ ಓ ರಾಜ, ಒಬ್ಬ ಮನುಷ್ಯ ಒಳಕೋಣೆಗೆ ಪ್ರವೇಶಿಸುತ್ತಾನೆ ಮತ್ತು ಆತನಿಗೆ ಮುಂದೆ ಹೊರಹೋಗಲು ದಾರಿಯೇ ಇಲ್ಲದಿರುವಾಗ ಆತನು ಹೊರ ಹೇಗೆ ಬರುತ್ತಾನೆ.
ಆತ ಹೇಗೆ ಒಳ ಪ್ರವೇಶಿಸಿರುವನೋ, ಹಾಗೆಯೇ ಹೊರಬರುತ್ತಾನೆ.
ಸರಿ, ಅದೇರೀತಿಯಲ್ಲಿಯೇ ದಾನಿಗಳಿಗೆ ಆ ಲಾಭವು ಸಿಗುತ್ತದೆ.
ಸರಿ ಭಂತೆ ನಾಗಸೇನ, ಅದು ಅದೇರೀತಿಯಾಗಿ ಸಂಭವಿಸುತ್ತಿದ್ದರೆ ನಾನು ನೀವು ಹೇಳಿದಂತೆಯೇ ಒಪ್ಪುವೆನು, ಇದರ ಬಗ್ಗೆ ಪ್ರತಿವಾದ ಮಾಡುವುದಿಲ್ಲ. ಆದರೆ ಭಂತೆ ನಾಗಸೇನ, ಒಂದುವೇಳೆ ದಾನಶೀಲದ ಅರ್ಪಣೆಯು ಪ್ರೇತಗಳಿಗೆ ಸಿಗುವುದಾದರೆ, ಅದೇರೀತಿಯಲ್ಲಿ ಒಬ್ಬ ಜೀವಹತ್ಯೆಗಳನ್ನು ಮಾಡಿ, ರಕ್ತ ಕುಡಿದು, ಕಠಿಣಹೃದಯಿಯಾಗಿ, ಕೊಲೆಯೋ ಅಥವಾ ಯಾವುದೇ ಭಯಾನಕ ಕ್ರಿಯೆ ಮಾಡಿ ಅದರ ಪಾಪಫಲಗಳನ್ನು ಪ್ರೇತಗಳಿಗೆ ಅಪರ್ಿಸಿ ಈ ನನ್ನ ಕ್ರಿಯೆಯಿಂದ ಸಿಗುವ ಪಾಪಫಲವು ಈ ಪ್ರೇತಗಳಿಗೆ ಸಿಗಲಿ ಎಂದು ಆಶಿಸಿದರೆ ಅದು ಅವರಿಗೆ ಸಿಗುವುದೇ?
ಇಲ್ಲ ಮಹಾರಾಜ.
ಆದರೆ ಯಾವ ಕಾರಣದಿಂದ, ದಾನದ ಫಲ ಸಿಗುವುದು ಮತ್ತು ಪಾಪ ಫಲವೇಕೆ ಸಿಗುವುದಿಲ್ಲ? (174)
ಇದು ನಿಜಕ್ಕೂ ನೀವು ಪ್ರಶ್ನೆಯಲ್ಲ ಓ ಮಹಾರಾಜ, ಮುಂದಾಗಿ ಉತ್ತರ ಸಿಗುವ ಪೆದ್ದುತನದ ಪ್ರಶ್ನೆಗಳನ್ನು ಕೇಳದಿರಿ. ರಾಜ, ಬಹುಶಃ ನೀವು ನನಗೆ ಮುಂದೆ ಆಕಾಶವೇಕೆ ಅನಂತ? ಗಂಗೆಯೇಕೆ ಹಿಮ್ಮುಖವಾಗಿ, ಮೇಲ್ಮುಖವಾಗಿ ಹರಿಯಲಾರದು? ಮಾನವರಿಗೆ ಮತ್ತು ಪಕ್ಷಿಗಳಿಗೇಕೆ ದ್ವಿಪಾದಗಳು? ಮತ್ತು ಪ್ರಾಣಿಗಳೇಕೆ ಚತುಷ್ಪಾದಗಳು ಎಂದು ಕೇಳಬಹುದು ಎನಿಸುತ್ತದೆ.
ಭಂತೆ ನಾಗಸೇನ, ನಾನು ನಿಮಗೆ ತೊಂದರೆ ನೀಡಲು ಈ ಪ್ರಶ್ನೆ ಕೇಳಲಿಲ್ಲ. ಕೇವಲ ಸಂದೇಹ ದೂರ ಮಾಡಲು ಮಾತ್ರ ಕೇಳಿದೆ ಅಷ್ಟೇ. ಈ ಜಗತ್ತಿನಲ್ಲಿ ಹಲವಾರು ಜನರು ಎಡಚರಿದ್ದಾರೆ ಅಥವಾ ಮೆಳ್ಳಗಣ್ಣಿನವರಿದ್ದಾರೆ, ನಾನು ನಿಮಗೆ ಈ ಪ್ರಶ್ನೆಯನ್ನು ಏಕೆ ಹಾಕಿದೆ ಎಂದರೆ ಈ ನತದೃಷ್ಟರಿಗೂ ಸಹಾ ತಮ್ಮ ಜೀವನ ಸುಧಾರಣೆಗೆ ಒಂದು ಅವಕಾಶ ಸಿಗಲೆಂದು ನಾನು ಹಾಗೇ ಪ್ರಶ್ನಿಸಿದೆನು.
ಓ ಮಹಾರಾಜ, ಪಾಪಕೃತ್ಯವನ್ನು, ನಿದರ್ೊಷಿಯೊಂದಿಗೆ ಹಂಚಿಕೊಳ್ಳಲಾಗದು. ಅದಕ್ಕೆ ಸಮ್ಮತಿಯು ದೊರಕದು. ಜನರು ದೂರದ ಅಂತರದವರೆಗೆ ಕಾಲುವೆ ನಿಮರ್ಿಸಿ ನೀರನ್ನು ಮುಟ್ಟಿಸುವರು, ಅದೇರೀತಿಯಲ್ಲಿ ಅವರು ಮಹಾಪರ್ವತವನ್ನು ತೆಗೆಯಬಲ್ಲರೇ?
ಖಂಡಿತವಾಗಿ ಇಲ್ಲ ಭಂತೆ.
ಅದೇರೀತಿಯಲ್ಲಿ ಕುಶಲ ಕರ್ಮಗಳನ್ನು ಹಂಚಿಕೊಳ್ಳಬಹುದೇ ವಿನಃ ಪಾಪಕರ್ಮವನ್ನಲ್ಲ. ಮತ್ತು ಒಬ್ಬನು ಎಣ್ಣೆಯ ದೀಪದಿಂದಾಗಿ ದೀಪ ಹಚ್ಚಬಹುದು. ಆದರೆ ಅದೇರೀತಿಯಲ್ಲೇ ನೀರಿನಿಂದ ದೀಪ ಹಚ್ಚಬಹುದೇ?
ಖಂಡಿತ ಸಾಧ್ಯವಿಲ್ಲ ಭಂತೆ.
ಅದೇರೀತಿಯಲ್ಲಿ ಕುಶಲ ಕರ್ಮಗಳ ಫಲವನ್ನು ಹಂಚಿಕೊಳ್ಳಬಹುದು. ಆದರೆ ಅಕುಶಲವನ್ನು ಹಂಚಲಾಗದು ಮತ್ತು ರೈತನು ಬಾವಿಯಿಂದ ನೀರನ್ನು ಬೆಳೆಗಳಿಗೆ ಹಾಯಿಸುತ್ತಾನೆ, ಆದರೆ ಅದೇ ಉದ್ದೇಶಕ್ಕಾಗಿ ಸಮುದ್ರದ ನೀರನ್ನು ಬಳಸುವರೇ?
ಖಂಡಿತವಾಗಿ ಇಲ್ಲ ಭಂತೆ.
ಅದೇರೀತಿಯಾಗಿ ಕುಶಲ ಕರ್ಮಗಳನ್ನು ಹಂಚಬಹುದು, ಆದರೆ ಅಕುಶಲವನ್ನು ಹಂಚಲಾಗದು.
ಆದರೆ ಭಂತೆ ನಾಗಸೇನ, ಇದು ಏತಕ್ಕಾಗಿ ಹೀಗೆ? ತರ್ಕಪೂರಿತವಾಗಿ ಅಥರ್ೈಸಿರಿ, ನಾನು ಕುರುಡನಲ್ಲ ಅಥವಾ ನಿರ್ಲಕ್ಷವುಳ್ಳವನು ಅಲ್ಲ, ನಾನು ಕೇಳಿದ ಕ್ಷಣವೇ ಅರ್ಥಮಾಡಿಕೊಳ್ಳಬಲ್ಲೆ.
ಓ ಮಹಾರಾಜ, ಅಕುಶಲವು ತುಚ್ಚವಾದ ವಿಷಯವಾಗಿದೆ. ಕುಶಲವು ಶ್ರೇಷ್ಠವಾದದ್ದು ಆಗಿದೆ. ಪಾಪವು ತನ್ನ ತುಚ್ಛತೆಯಿಂದಾಗಿ ಕತರ್ೃವಿಗೆ (ಪಾಪಿಗೆ) ಮಾತ್ರ ಹಾನಿ ಮಾಡುತ್ತದೆ. ಆದರೆ ಕುಶಲವು ತನ್ನ ಭವ್ಯತೆಯಿಂದಾಗಿ ಇಡೀ ದೇವತೆಗಳ ಮತ್ತು ಮಾನವರ ಸಮಸ್ತ ಲೋಕಕ್ಕೆ ಹಬ್ಬುವುದು.
ಇದನ್ನು ಉಪಮೆಯಿಂದ ಸ್ಪಷ್ಟಪಡಿಸುವಿರಾ?
ಒಂದು ಹನಿ ನೀರು ನೆಲಕ್ಕೆ ಬಿದ್ದಾಗ, ಅದು 10 ಯೋಜನ ಅಥವಾ 12 ಯೋಜನ ದೂರ ಹರಿಯಬಲ್ಲದೆ?
ಖಂಡಿತ ಇಲ್ಲ, ಅದು ಕೇವಲ ಬಿದ್ದಕಡೆ ಮಾತ್ರ ಪರಿಣಾಮ ಬೀರುತ್ತದೆ.
ಆದರೆ ಏಕೆ?
ಏಕೆಂದರೆ ಅದು ಅಲ್ಪವಾಗಿದೆ.
ಅದೇರೀತಿಯಾಗಿ ಓ ಮಹಾರಾಜ, ಪಾಪವು ಅತ್ಯಲ್ಪವಾಗಿದೆ. ಅದು ತನ್ನ ತುಚ್ಚತೆ, ಅಲ್ಪತೆಯಿಂದಾಗಿ ಕೇವಲ ಪಾಪಿಯನ್ನು ಮಾತ್ರ (ಕತರ್ೃ) ಹಾನಿಮಾಡುತ್ತದೆ. ಆದರೆ ಬೃಹತ್ ಮಳೆ ಮೋಡವು ಭೂಮಿಯು ತೃಪ್ತಿಪಡುವಷ್ಟು ಮಳೆ ನೀಡುತ್ತದೆ. ಆಗ ಆ ನೀರು ಹರಡುತ್ತದೆಯಲ್ಲವೇ?
ಖಂಡಿತ ಭಂತೆ, ಆ ಮಹಾ ಮಳೆಯಿಂದಾಗಿ ನೀರು ಎಲ್ಲೆಲ್ಲೂ ಹರಡಿ, ಕೆರೆ, ಕುಂಟೆ, ಸರೋವರ, ಹಳ್ಳ, ಬಾವಿಗಳು ಸ್ನಾನದ ತೊಟ್ಟಿಗಳು ಇತ್ಯಾದಿ ಎಲ್ಲವೂ ತುಂಬಿ 10 ಅಥವಾ 12 ಯೋಜನದವರೆಗೆ ನೀರು ಹಬ್ಬುತ್ತದೆ.
ಆದರೆ ಹೀಗೆ ಏಕೆ ಓ ರಾಜ?
ಏಕೆಂದರೆ ಬಿರುಗಾಳಿಯ ಪ್ರಭಾವದಿಂದಾಗಿ.
ಅದೇರೀತಿಯಾಗಿ ಓ ರಾಜ, ಕುಶಲವು ಸದಾ ಶ್ರೇಷ್ಠವಾಗಿರುತ್ತದೆ ಮತ್ತು ತನ್ನ ಹೇರಳತೆಯ ಕಾರಣದಿಂದಾಗಿ, ಅದು ದೇವತೆಗಳ ಮತ್ತು ಮಾನವರ ಸಮಸ್ತ ಲೋಕಗಳಿಗೂ ಹಂಚಿಕೊಳ್ಳುತ್ತದೆ.
ಭಂತೆ ನಾಗಸೇನ, ಪಾಪವು ಏಕೆ ಪರಿಮಿತವಾಗಿರುತ್ತದೆ ಮತ್ತು ಕುಶಲವು ಏಕೆ ಅಪರಿಮಿತವಾಗಿರುತ್ತದೆ? (175)
ಯಾರೇ ಆಗಲಿ ಓ ಮಹಾರಾಜ, ಈ ಲೋಕದಲ್ಲಿ ದಾನ ನೀಡುತ್ತಾನೆಯೋ, ಶೀಲವಂತಿಕೆಯಲ್ಲಿ ಜೀವಿಸುವನೋ ಮತ್ತು ಉಪೊಸತಗಳನ್ನು ಆಚರಿಸುವನೋ, ಆತನು ಆನಂದಿತನಾಗುತ್ತಾನೆ. ನಿಜ ಆನಂದದಿಂದಾಗಿ, ಆಹ್ಲಾದತೆ ಪಡೆಯುತ್ತಾನೆ. ಸುಖ ಅನುಭವಿಸುತ್ತಾನೆ, ಆತನಲ್ಲಿ ಪ್ರೀತಿ ಮತ್ತು ಸುಖದಿಂದ ಕೂಡಿದ ಮನಸ್ಸು ತುಂಬಿ ಅದರಿಂದಲೇ ಇಡೀ ಮನಸ್ಸಿನಿಂದ ಕೂಡಿದವನಾಗುತ್ತಾನೆ. ಆತನಲ್ಲಿ ಈ ಪ್ರೀತಿ ಸುಖವು ತುಂಬಿ ತುಳುಕಲಾರಂಭಿಸುತ್ತದೆ. ಹೇರಳವಾದ ಆನಂದ ಸುಖದಿಂದ ತುಂಬಿದವ ನಾಗುತ್ತಾನೆ. ಹೇಗೆಂದರೆ ಸ್ವಚ್ಛವಾದ ತಿಳಿನೀರಿನ ಆಳ ಸರೋವರದಲ್ಲಿ ವಿಹರಿಸುವಂತೆ. ಓ ಮಹಾರಾಜ, ಅದರಲ್ಲಿ ಒಂದೆಡೆ ನೀರು ಉತ್ಪತ್ತಿಯಾಗಿ ಚಿಮ್ಮಿದರೆ ಇನ್ನೊಂದೆಡೆ ನೀರು ಹರಿದು ಹೋಗುತ್ತಿರುತ್ತದೆ. ಇದೇರೀತಿ ಪ್ರಕ್ರಿಯೆ ನಡೆಯುತ್ತ, ಅದು ಎಂದೂ ಬತ್ತುವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಆತನಲ್ಲಿ ಕುಶಲವು ಉದಯಿಸುತ್ತ ಮತ್ತು ವೃದ್ಧಿಸುತ್ತ ಹೆಚ್ಚಾಗುತ್ತಿರುತ್ತದೆ. ಓ ಮಹಾರಾಜ, ಆತನಿಗೆ 100 ವರ್ಷವಾದರೂ, ಆತನಲ್ಲಿ ಪರರಿಗೆ ಪುಣ್ಯವನ್ನು ಹಂಚುತ್ತಾ ಇದ್ದರೆ, ಆತನಲ್ಲಿ ಮತ್ತಷ್ಟು ಕುಶಲವು ಹೆಚ್ಚಾಗುತ್ತಿರುತ್ತದೆ. ಆಗ ಆತನಿಗೆ ಮತ್ತಷ್ಟು ಸಾಮಥ್ರ್ಯ ಸಿಗುತ್ತದೆ. ಆಗ ಆತನು ಯಾರೊಂದಿಗಾದರೂ ಪುಣ್ಯ ಹಂಚಿಕೊಳ್ಳುವವನಾಗುತ್ತಾನೆ. ಈ ಎಲ್ಲಾ ಕಾರಣ ದಿಂದಾಗಿಯೇ ಕುಶಲವು ಬಲಯುತವಾಗಿದೆ, ಶ್ರೇಷ್ಠವಾಗಿದೆ.
ಆದರೆ ಓ ಮಹಾರಾಜ, ಪಾಪ (ಅಕುಶಲ)ವನ್ನು ಮಾಡಿ, ಪಶ್ಚಾತ್ತಾಪದಲ್ಲಿ ಬೀಳುತ್ತಾನೆ, ಆತನ ಮನಸ್ಸು ವಿಷಾದದಿಂದ ಕೂಡುತ್ತದೆ. ಆತನಿಗೆ ಮನಶ್ಶಾಂತಿ ಇಲ್ಲದೆ ಹೋಗುತ್ತದೆ. ದುಃಖಿತನಾಗಿ, ಸುಡುತ್ತ, ನಂಬಿಕೆ ತ್ಯಜಿಸಿದವನಾಗಿ, ಕೊಳೆಯುತ್ತಾನೆ ಮತ್ತು ಖಿನ್ನತೆಯಿಂದ ಪರಿಹಾರ ಕಾಣಲಾರ. ಸದಾ ಶೋಕದಲ್ಲಿರುತ್ತಾರೆ. ಓ ಮಹಾರಾಜ ಹೇಗೆ ಹನಿ ನೀರು ಒಣನೆಲದ ಮೇಲೆ ಬಿದ್ದು, ಅದೇ ಸ್ಥಳ ಅದನ್ನು ಹೀರಿಕೊಳ್ಳುವಂತೆ ಅದೇರೀತಿ ಪಾಪಿಯು ಪಶ್ಚಾತ್ತಾಪದಿಂದ, ಕೊರಗಿನಿಂದ ಪಾರಾಗಲಾರ. ಶಾಂತಿರಹಿತನಾಗಿ ದುಃಖದಿಂದ ಸುಡುತ್ತಾ, ಶ್ರದ್ಧಾಹೀನವಾಗಿ, ಖಿನ್ನತೆಯಿಂದ ಹೊರಬರಲಾರದೆ ತನ್ನ ದುಃಖದಲ್ಲೇ ನುಂಗಲ್ಪಡುತ್ತಾನೆ. ಈ ಕಾರಣದಿಂದಲೇ ಅಕುಶಲವು (ಪಾಪವು) ತುಚ್ಚವಾಗಿದೆ.
ಸಾಧು ಭಂತೆ ನಾಗಸೇನ, ಖಂಡಿತವಾಗಿ ಅದು ಹೀಗೇ ಇದೆ. ಆದ್ದರಿಂದಾಗಿ ನಾನು ಇದನ್ನು ಒಪ್ಪುತ್ತೇನೆ.
5. ಸುಪಿನ ಪನ್ಹೊ (ಸ್ವಪ್ನ ಪ್ರಶ್ನೆ)
ಭಂತೆ ನಾಗಸೇನ, ಪುರುಷರು ಮತ್ತು ಸ್ತ್ರೀಯರು ಈ ಲೋಕದಲ್ಲಿ ಸುಂದರವಾದ ಮತ್ತು ಕೆಟ್ಟದಾದ ಸ್ವಪ್ನಗಳನ್ನು ಕಾಣುವರು. ಅದರಲ್ಲಿ ಅವರು ಈ ಹಿಂದೆ ಕಂಡಂತಹ, ಕಾಣದಂತಹ, ಈ ಹಿಂದೆ ಮಾಡಿದಂತಹ, ಮಾಡಿಲ್ಲದಂತಹ ಶಾಂತಿಭರಿತ, ಆನಂದಭರಿತ ಮತ್ತು ಭಯಾನಕ ಸ್ವಪ್ನಗಳು, ಹತ್ತಿರದ ವಿಷಯದ ಸ್ವಪ್ನಗಳು, ದೂರದ ಸ್ವಪ್ನಗಳು, ಹಲವಾರು ಆಕೃತಿಗಳ, ವೈವಿಧ್ಯಮಯ ವರ್ಣಗಳ ಸ್ವಪ್ನಗಳನ್ನೆಲ್ಲಾ ಕಾಣುತ್ತಾರೆ. ಈ ಸ್ವಪ್ನಗಳೆಂದರೇನು? ಮತ್ತು ಯಾರು ಸ್ವಪ್ನವನ್ನು ಕಾಣುವವರು? (176)ಓ ಮಹಾರಾಜ, ಇದು ಮನಸ್ಸಿನ ಹಾದಿಯಲ್ಲಿ ಅಡ್ಡವಾಗಿ ಬರುವಂತಹ ಚಿಹ್ನೆಯಾಗಿದೆ. ಅದಕ್ಕೆ ಸ್ವಪ್ನ ಎನ್ನುವರು ಮತ್ತು ಆರು ಬಗೆಯ ಸ್ವಪ್ನಗಳಿವೆ ಮಹಾರಾಜ. ಅವೆಂದರೆ: ವಾತದಿಂದ ಪ್ರಭಾವಿತವಾಗಿರುವ ಸ್ವಪ್ನ, ಪಿತ್ತದಿಂದ ಪ್ರಭಾವಿತವಾಗಿರುವ ಸ್ವಪ್ನ, ಕಫದಿಂದ ಪ್ರಭಾವಿತವಾಗಿರುವ ಸ್ವಪ್ನ, ದೇವತೆಗಳಿಂದಾಗಿ ಪ್ರಭಾವಿತವಾಗಿರುವ ಸ್ವಪ್ನ, ತನ್ನ ಹವ್ಯಾಸ ಚಟಗಳಿಂದ ಪ್ರಭಾವಿತವಾಗಿರುವ ಸ್ವಪ್ನ, ಪೂರ್ವನಿಮಿತ್ತ (ಪೂರ್ವ ಚಿಹ್ನೆ)ಗಳಿಂದ ಕೂಡಿರುವ ಸ್ವಪ್ನ (ಭವಿಷ್ಯದರ್ಶಕ) ಮತ್ತು ಕೊನೆಯ ವಿಧದ ಸ್ವಪ್ನವೇ ನಿಜವಾದುದು, ಮಿಕ್ಕೆಲ್ಲವೂ ಸುಳ್ಳು.
ಭಂತೆ ನಾಗಸೇನ, ಒಬ್ಬನು ಸ್ವಪ್ನವನ್ನು ಕಂಡಾಗ ಅದು ಪೂರ್ವನಿಮ್ಮಿತ್ತ ಸ್ವಪ್ನವನ್ನು ಹೇಗೆ ಕಾಣುವನು? ಆತನ ಚಿತ್ತವೇ ಆ ನಿಮ್ಮಿತ್ತಕ್ಕೆ (ಚಿಹ್ನೆ) ಹುಡುಕುವುದೇ? ಅಥವಾ ಚಿತ್ತಮಾರ್ಗಕ್ಕೆ ಅಡ್ಡವಾಗಿ ಆ ಚಿಹ್ನೆಯೇ ಬರುವುದೇ? ಅಥವಾ ಯಾರಾದರೂ ಬಂದು ಆತನಿಗೆ ಹೇಳುವರೇ?
ಆತನ ಮನಸ್ಸೇ ಚಿಹ್ನೆಯನ್ನು ತಾನಾಗಿಯೇ ಹುಡುಕಲಾರದು. ಹಾಗೆಯೇ ಯಾರೊಬ್ಬರೂ ಬಂದು ಆತನಿಗೆ ಹೇಳಲಾರರು. ಆ ಚಿಹ್ನೆಯೇ ತಾನಾಗಿಯೇ ಮನಸ್ಸಿನ ಮಾರ್ಗಕ್ಕೆ ಅಡ್ಡವಾಗಿ ಬರುವುದು, ಇದು ಹೇಗೆಂದರೆ ದರ್ಪಣದಂತೆ, ಅದು ತಾನಾಗಿಯೇ ಯಾವ ಪ್ರತಿಬಿಂಬ ನೋಡಲು ಹೋಗುವುದಿಲ್ಲ ಅಥವಾ ಯಾರು ಸಹಾ ಪ್ರತಿಬಿಂಬವನ್ನು ದರ್ಪಣದಲ್ಲಿ ಸೇರಿಸುವುದಿಲ್ಲ. ಆದರೆ ದರ್ಪಣವು ಎಲ್ಲೇ ಇರಲಿ, ದರ್ಪಣಕ್ಕೆ ಅಡ್ಡಬಂದರೆ ಅದು ಪ್ರತಿಬಿಂಬಿಸುವುದು.
ಭಂತೆ ನಾಗಸೇನ, ಯಾವ ಮನಸ್ಸು ಸ್ವಪ್ನವನ್ನು ಕಾಣುವುದೋ, ಅದು ಇದನ್ನು ಅರಿಯುವುದೇ: ಇಂತಿಂಥ ಪರಿಣಾಮವಾಗಲಿದೆ, ಇವು ಶುಭವಾದುದು ಅಥವಾ ಭಯಾನಕವಾದುದು, ಹಿಂಬಾಲಿಸುತ್ತವೆ.
ಇಲ್ಲ, ಅದು ಹಾಗಲ್ಲ ಮಹಾರಾಜ, ಯಾವಾಗ ಭವಿಷ್ಯದ ಚಿಹ್ನೆಯು ಲಭಿಸುವುದೋ, ಅದನ್ನು ಆತನು ಪರರಿಗೆ ಹೇಳುತ್ತಾನೆ ಮತ್ತು ಅವರು ಅದರ ಅರ್ಥವನ್ನು ವಿವರಿಸುವರು.
ಭಂತೆ ನಾಗಸೇನ, ಇದನ್ನು ಉಪಮೆಯಿಂದ ಸ್ಪಷ್ಟಪಡಿಸುವಿರಾ?
ಓ ಮಹಾರಾಜ, ಮಾನವನ ಚರ್ಮದ ಮೇಲೆ ಗುಳ್ಳೆಗಳು ಮತ್ತು ಮಚ್ಚೆಗಳು ಉಂಟಾಗುತ್ತದೆ. ಆಗ ಅವು ಉಂಟಾಗಿರುವುದು, ಲಾಭಕ್ಕಾಗಿಯೋ ಅಥವಾ ನಷ್ಟಕ್ಕಾಗಿಯೋ, ಕೀತರ್ಿಗಾಗಿಯೋ ಅಥವಾ ನಿಂದೆಗಾಗಿಯೋ, ಸುಖಕ್ಕಾಗಿಯೋ ಅಥವಾ ದುಃಖಕ್ಕಾಗಿಯೋ, ಇದನ್ನು ಆ ಗುಳ್ಳೆಗಳು ತಿಳಿಯುತ್ತವೆಯೋ?
ಖಂಡಿತ ಇಲ್ಲ, ಮಚ್ಚೆಗಳು ಯಾವ ಯಾವ ಭಾಗದಲ್ಲಿವೆಯೋ ಅದನ್ನು ಕಂಡ ಭವಿಷ್ಯಕಾರರು, ಅದನ್ನು ಗಮನಿಸಿ, ಇದಕ್ಕೆ ಇಂತಿಂಥ ಫಲ ಎಂದು ನುಡಿಯುವರು.
ಅದೇರೀತಿಯಲ್ಲಿ ಓ ಮಹಾರಾಜ, ಯಾವ ಚಿತ್ತವು ಸ್ವಪ್ನದ ಪೂರ್ವನಿಮಿತ್ತ ಕಾಣುವುದೋ, ಅದಕ್ಕೆ ಅದರ ಫಲ ಇಂತಿಂಥದು ಎಂದು ತಿಳಿಯುವುದಿಲ್ಲ. ಆದರೆ ಯಾವಾಗ ಅದನ್ನು ಪರರಿಗೆ ಹೇಳಿದಾಗ ಅನುಭವಸ್ಥರು ಅದರ ಅರ್ಥ ತಿಳಿಸುತ್ತಾರೆ.
ಭಂತೆ ನಾಗಸೇನ, ಯಾವಾಗ ಮಾನವ ಸ್ವಪ್ನ ಕಾಣುವನೋ, ಆಗ ಆತನು ಎಚ್ಚರದಿಂದಿರುವನೋ ಅಥವಾ ನಿದ್ರಿಸುತ್ತಿರುವನೋ? (177)
ಮಹಾರಾಜ ಯಾರೇ ಆಗಲಿ ಸ್ವಪ್ನವನ್ನು ಕಾಣುವಾಗ ಆತನು ಪೂರ್ಣವಾಗಿ ನಿದ್ರೆಯಲ್ಲಿ ಇರುವುದಿಲ್ಲ. ಹಾಗೆಯೇ ಪೂರ್ಣವಾಗಿ ಜಾಗರೂಕನಾಗಿಯೂ ಇರುವುದಿಲ್ಲ. ಆದರೆ ಯಾವಾಗ ತಿಳಿಯಾದ ನಿದ್ರೆ ಆವರಿಸುವುದೋ (ನಿದ್ರೆಯ ಪ್ರಾರಂಭ ಅಥವಾ ನಿದ್ರೆಯಿಂದ ಎಚ್ಚರವಾಗುವಿಕೆಯ ಹಿಂದಿನ ತಿಳಿ ನಿದ್ರಾಸ್ಥಿತಿ ಅಥವಾ ಜಾಗರೂಕತೆಯ ಹಿಂದಿನ ಅವಸ್ಥೆ) ಮತ್ತು ಆತನು ಇನ್ನೂ ಪೂರ್ಣವಾಗಿ ಜಾಗರೂಕ (ಅರಿವಿಗೆ) ಬಂದಿಲ್ಲವೋ ಅಂತಹ ಮಧ್ಯಮ ಸ್ಥಿತಿಯಲ್ಲಿ ಸ್ವಪ್ನಗಳನ್ನು ಕಾಣುವರು (ಅದಕ್ಕೆ ಕೋತಿಯ ನಿದ್ರಾಸ್ಥಿತಿ ಎಂದೂ ಕರೆಯುವರು). ಯಾವಾಗ ಒಬ್ಬನು ಪೂರ್ಣ ನಿದ್ರಾಸ್ಥಿತಿಯಲ್ಲಿರುವನೋ (ಆಳನಿದ್ರೆ) ಆಗ ಆತನು ತನ್ನ ವಾಸಸ್ಥಳಕ್ಕೆ ಹಿಂತಿರುಗುವನು. ಅಂದರೆ ಭವಂಗ ಸ್ಥಿತಿ ಮತ್ತು ಯಾವಾಗ ಹೀಗೆ ಮನಸ್ಸು ನಿಲ್ಲುವುದೋ ಆಗ ಅದು ಕಾರ್ಯ ಮಾಡುವುದಿಲ್ಲ ಮತ್ತು ಯಾವಾಗ ಮನಸ್ಸು ಈ ರೀತಿ ತನ್ನ ಕ್ರಿಯೆಯಿಂದ ತಡೆಗೊಳ್ಳಲ್ಪಟ್ಟಿರುವುದೋ ಆಗ ಅದಕ್ಕೆ ಪಾಪ ಮತ್ತು ಕುಶಲದ (ಸರಿತಪ್ಪಿನ) ಅರಿವಿರುವುದಿಲ್ಲ. ಮತ್ತು ಯಾವಾಗ ಅರಿವಿರುವುದಿಲ್ಲವೋ ಆಗ ಸ್ವಪ್ನ ಬೀಳುವುದಿಲ್ಲ. ಯಾವಾಗ ಮನಸ್ಸು ಕ್ರಿಯಾತ್ಮಕವಾಗಿ ಇರುವುದು ಆಗ ಬೀಳುವ ಕನಸುಗಳೇ ಸ್ವಪ್ನಗಳು. ಹೇಗೆಂದರೆ ಓ ರಾಜ, ಕತ್ತಲೆಯಲ್ಲು ಮತ್ತು ಮಬ್ಬಿನಲ್ಲು ಇದ್ದಾಗ, ಆಗ ಬೆಳಕಿರುವುದಿಲ್ಲ. ಆಗ ಚೆನ್ನಾಗಿರುವ ಪರಿಶುದ್ಧ ದರ್ಪಣದಲ್ಲು ನೆರಳು ಬೀಳುವುದಿಲ್ಲವೋ ಹಾಗೆಯೇ ಯಾವಾಗ ಒಬ್ಬನು ಆಳನಿದ್ದೆಯಲ್ಲಿ ಇರುತ್ತಾನೋ ಆಗ ಆತನ ಮನಸ್ಸು, ತನ್ನಲ್ಲೇ ಹಿಂತಿರುಗುತ್ತದೆ ಮತ್ತು ಮನಸ್ಸು ಮುಚ್ಚಲ್ಪಟ್ಟು ಕ್ರಿಯೆಯಿಂದ ಕೂಡಿರುವುದಿಲ್ಲ. ಮತ್ತು ಯಾವಾಗ ಮನಸ್ಸು ಅಕ್ರಿಯವಾಗಿರುವುದೋ ಆಗ ಅದಕ್ಕೆ ಪಾಪ ಪುಣ್ಯಗಳು, ಸರಿತಪ್ಪುಗಳ ಅರಿವು ಇರುವುದಿಲ್ಲ ಮತ್ತು ಯಾರಿಗೆ ಇವುಗಳ ಅರಿವು ಆಗ ಇರುವುದೋ ಆಗ ಆತನು ಸ್ವಪ್ನ ಕಾಣಲು ಸಾಧ್ಯವಿಲ್ಲ. ಏಕೆಂದರೆ ಮನಸ್ಸು ಕ್ರಿಯಾತ್ಮಕವಾಗಿರುವಾಗಲೇ ಸ್ವಪ್ನ ಬೀಳಲು ಸಾಧ್ಯ. ಹೇಗೆ ದರ್ಪಣದಲ್ಲಿ ದೇಹ ಕಾಣಬೇಕಾದರೆ ಬೆಳಕು ಸ್ವಲ್ಪವಾದರೂ ಬೇಕೋ ಹಾಗೆ ಮನಸ್ಸು ಕ್ರಿಯಾತ್ಮಕ ವಾಗಿರುವಾಗಲೇ ಸ್ವಪ್ನ ಸಾಧ್ಯ. ನಿದ್ರೆ ಕತ್ತಲೆಯಂತೆ, ಬೆಳಕು ಜಾಗರೂಕ ಮನಸ್ಸಿನಂತೆ ಅಥವಾ ಓ ಮಹಾರಾಜ, ಹೇಗೆ ಸೂರ್ಯನ ಪ್ರಕಾಶತೆ ಮಂಜಿನಿಂದ ಮುಸುಕಾಗುತ್ತದೋ, ಆಗ ಕಿರಣಗಳಿದ್ದರೂ ಮಂಜಿನಿಂದ ಸ್ಪಷ್ಟವಾಗಿ ತೂರಿ ಹೋಗುವುದಿಲ್ಲವೋ ಹಾಗೆಯೇ ಬೆಳಕಿಲ್ಲದಿದ್ದಾಗ ಕಿರಣಗಳು ಇರುವುದಿಲ್ಲವೋ ಹಾಗೆಯೇ ಯಾವಾಗ ಒಬ್ಬನು ಆಳವಾದ ನಿದ್ದೆಯಲ್ಲಿರುವಾಗ, ಆತನ ಮನಸ್ಸು ತನ್ನಲ್ಲೇ ಹಿಂತಿರುಗಿರುತ್ತದೆ ಮತ್ತು ಮನಸ್ಸು ಮುಚ್ಚಲ್ಪಟ್ಟು ಕ್ರಿಯಾತ್ಮಕವಾಗಿರುವುದಿಲ್ಲ ಮತ್ತು ಯಾವಾಗ ಮನಸ್ಸು ಅಕ್ರಿಯವಾಗಿರುವುದೋ ಆಗ ಅದಕ್ಕೆ ಸರಿತಪ್ಪುಗಳಾಗಲಿ, ಪಾಪಪುಣ್ಯದ ಬಗ್ಗೆ ಅರಿವು ಇರುವುದಿಲ್ಲ ಮತ್ತು ಯಾರು ಇದನ್ನೆಲ್ಲಾ ಅರಿಯುವನೋ ಆಗ ಆತನು ಸ್ವಪ್ನಾವಸ್ಥೆಯಲ್ಲಿರಲು ಸಾಧ್ಯವಿಲ್ಲ. ಏಕೆಂದರೆ ಕ್ರಿಯೆಯಿಂದ ಮನಸ್ಸು ಇರುವಾಗಲೇ ಸ್ವಪ್ನಸಾಧ್ಯ. ಇಲ್ಲಿ ಓ ಮಹಾರಾಜ, ಸೂರ್ಯನಂತೆ ದೇಹವಿದೆ, ಮಂಜಿನಂತೆ ನಿದ್ರೆ ಆವರಿಸಿದೆ ಮತ್ತು ಕಿರಣಗಳಂತೆ ಮನಸ್ಸಿದೆ.
ಓ ಮಹಾರಾಜ, ಎರಡು ಸ್ಥಿತಿಯಲ್ಲಿ ಶರೀರವಿದ್ದಾಗಲು ಮನಸ್ಸು ಅಕ್ರಿಯವಾಗಿರುತ್ತದೆ. ಅವೆಂದರೆ ಮನಸ್ಸು ಆಳನಿದ್ದೆಗೆ ಜಾರಿ ಮನಸ್ಸು ತನ್ನಲ್ಲೇ ಹಿಂತಿರುಗಿರುತ್ತದೋ ಆಗ ಮತ್ತು ನಿರೋಧ ಸಮಾಪತ್ತಿಯಲ್ಲಿ ಸಂತರು ತಲ್ಲೀನನಾಗಿರುವಾಗ. ಓ ಮಹಾರಾಜ, ಯಾವಾಗ ಮನಸ್ಸು ಎಚ್ಚರವಾಗಿರುವುದೋ ಆಗ ಅದು ತೆರೆದಿರುತ್ತದೆ, ಸ್ಪಷ್ಟವಾಗಿರುತ್ತದೆ. ಪ್ರಫುಲ್ಲಿತವಾಗಿರುತ್ತದೆ (ಉತ್ತೇಜಿತವಾಗಿರುತ್ತದೆ), ಅನಿಯಂತ್ರಿತವಾಗಿರುತ್ತದೆ ಮತ್ತು ಆಗ ಪೂರ್ವ ನಿಮಿತ್ತಗಳು ಬೀಳಲಾರವು. ಅದೇರೀತಿ ಓ ಮಹಾರಾಜ, ಯಾವ ಮನುಷ್ಯರು ರಹಸ್ಯತೆಯನ್ನು ಹುಡುಕುವರೋ ಅವರು ನೇರವಾದ ನಿಷ್ಕಪಟ, ಹಿಡಿತದಲ್ಲಿರುವ ಮತ್ತು ವಶಿತ್ವದಲ್ಲಿರುವ, ಪಾರದರ್ಶಕ ಜನರನ್ನು ತಡೆಯುತ್ತಾನೆ, ದೂರದಲ್ಲಿಟ್ಟಿರುತ್ತಾನೆ. ಅದೇರೀತಿ ಸ್ವಪ್ನವು ಜಾಗರೂಕನಿಗೆ ವ್ಯಕ್ತವಾಗುವುದಿಲ್ಲ. ಅದರಿಂದಾಗಿಯೇ ಜಾಗರೂಕನಿಗೆ ಸ್ವಪ್ನವು ಬೀಳಲಾರದು. ಮತ್ತೆ ಓ ಮಹಾರಾಜ, ಯಾರು ಮಿಥ್ಯಾ ಜೀವನವನ್ನು ದುಷ್ಚಾರಿತ್ರೆಯನ್ನು ದುಷ್ಟ ಸ್ನೇಹಿತರವನ್ನು ಹೊಂದಿರುವನೋ ಆತನಲ್ಲಿ ಬೋಧಿಪಕ್ಖೀಯ ಧಮ್ಮಗಳನ್ನು (ಪ್ರಜ್ಞೆಯತ್ತ ಸಾಗುವ ಸದ್ಗುಣಗಳನ್ನು) ಕಾಣಲಾಗುವುದಿಲ್ಲ. ಅದೇರೀತಿ ದಿವ್ಯವಾದ ಅರ್ಥವು ಜಾಗರೂಕನಲ್ಲಿ ಸ್ಥಾಪಿತವಾಗುವುದಿಲ್ಲ ಹಾಗು ಜಾಗರೂಕನಿಗೆ ಸ್ವಪ್ನವು ಬೀಳುವುದಿಲ್ಲ.
ಭಂತೆ ನಾಗಸೇನ, ಸ್ವಪ್ನಕ್ಕೆ ಆರಂಭ, ಮಧ್ಯಮ ಮತ್ತು ಅಂತ್ಯ ಸ್ಥಿತಿಗಳು ಇವೆಯೇ?(178)
ಹೌದು ಮಹಾರಾಜ.
ಯಾವುದು ಸ್ವಪ್ನಕ್ಕೆ ಆರಂಭ, ಮಧ್ಯಮ ಮತ್ತು ಅಂತ್ಯಸ್ಥಿತಿಯಾಗಿದೆ?
ಓ ಮಹಾರಾಜ, ವಿಶ್ರಾಂತಿಯ ಅನುಭೂತಿ, ಸಡಿಲತೆ, ದೂರ ಭಾರದ ಅನುಭೂತಿ, ಆಲಸ್ಯ, ಜಡತೆ, ದುರ್ಬಲತೆಯ ಅನುಭೂತಿ ಇವು ನಿದ್ರೆಯ ಪ್ರಾರಂಭ ಅವಸ್ಥೆಯಾಗಿದೆ. ತಿಳಿಯಾದ ನಿದ್ರೆ, ಮಂಗನ ನಿದ್ರಾಸ್ಥಿತಿ (ಸ್ನಪ್ನಾವಸ್ಥೆ), ಆಗ ಇನ್ನೂ ಚಿತ್ತದ ಆಲೋಚನೆಗಳ ಚದುರುವಿಕೆಯಿರುತ್ತದೆ. ಇದೇ ನಿದ್ರೆಯ ಮಧ್ಯಮಸ್ಥಿತಿ ಮತ್ತು ಯಾವಾಗ ಚಿತ್ತವು ತನ್ನಲ್ಲೇ ಪ್ರವೇಶಿಸುವುದೋ (ಗಾಢನಿದ್ರಾವಸ್ಥೆ). ಇದೇ ನಿದ್ದೆಯ ಅಂತ್ಯಸ್ಥಿತಿ ಮತ್ತು ಮಧ್ಯಮವಸ್ಥೆಯಲ್ಲಿ ಅಂದರೆ ಮಂಗನ ನಿದ್ರಾಸ್ಥಿತಿಯಾದ ಸ್ವಪ್ನಾವಸ್ಥೆಯಲ್ಲಿ ಸ್ವಪ್ನಗಳು ಬೀಳುತ್ತವೆ. ಓ ಮಹಾರಾಜ ಹೇಗೆ ಒಬ್ಬನು ಸಮಾಹಿತ ಚಿತ್ತದಿಂದ ಕೂಡಿದವನಾಗಿ, ಶ್ರದ್ಧೆಯಿಂದ ಸ್ಥಿರ ಧಮ್ಮದಲ್ಲಿ ಕೂಡಿದವನಾಗಿ, ಪ್ರಜ್ಞೆಯನ್ನು ಅಚಲವಾಗಿ, ಶಬ್ದದಾಚೆಯ ಪರಿಸರದಲ್ಲಿ ನೆಲೆಸಿ, ಸೂಕ್ಷ್ಮ ಅರ್ಥದ ಚಿಂತನೆಯಲ್ಲಿ ತೊಡಗಿದವನಾಗಿ, ಶಾಂತನಾಗಿ, ಪ್ರಭುತ್ವ ಸಾಧಿಸುತ್ತಾನೆ. ಅದೇರೀತಿಯಲ್ಲಿ ಜಾಗರೂಕನೊಬ್ಬನು, ನಿದ್ರೆಯಲ್ಲಿ ಬೀಳದೆ, ತೂಗಾಡಿಸುವವನಾದರೆ (ಆ ಸ್ಥಿತಿಯು ಮಂಗನ ನಿದ್ರಾವಸ್ಥೆ ಅಥವಾ ಸ್ವಪ್ನಾವಸ್ಥೆಯಾಗಿದೆ). ಸ್ವಪ್ನಗಳನ್ನು ಕಾಣುವನು. ಓ ಮಹಾರಾಜ, ಶಬ್ದದ ಲೋಕವನ್ನು ಜಾಗರೂಕನಿಗೆ ಹೋಲಿಸಿದರೆ, ಏಕಾಂತತೆಯ ಸ್ಥಳವನ್ನು ಸ್ವಪ್ನಾವಸ್ಥೆಗೆ ಹೋಲಿಸಬಹುದು ಮತ್ತು ಯಾವ ಮಾನವನು ಶಬ್ದದ ಕಂಗುಳಿಯನ್ನು ತಡೆಗಟ್ಟಿ, ನಿದ್ರೆಯಿಲ್ಲದೆ ಇರುವನೋ, ಮಧ್ಯಮ ಜಾವದವರೆಗೆ ಇರುವನೋ, ಆತನು ಸೂಕ್ಷ್ಮ ಅರ್ಥದ ಪ್ರಯತ್ನ ಸಾಧಿಸುವನು. ಯಾರು ಎಚ್ಚರ ಸ್ಥಿತಿಯಲ್ಲಿ ಇರುವನೋ, ನಿದ್ರೆಗೆ ಬಿದ್ದಿಲ್ಲವೊ, ಆದರೆ ತೂಗಾಡುವಿಕೆ ಜಾರುವನೋ ಆತನು ಸ್ವಪ್ನವನ್ನು ಕಾಣುವನು.
ಸಾಧು ಭಂತೆ ನಾಗಸೇನ! ಬಹುಚೆನ್ನಾಗಿ ವಿವರಣೆ ನೀಡಿದಿರಿ. ಇದನ್ನೆಲ್ಲಾ ನಾನು ಒಪ್ಪುವೆ.
6. ಅಕಾಲ ಮರಣ ಪ್ರಶ್ನೆ
ಭಂತೆ ನಾಗಸೇನ, ಯಾವಾಗ ಜೀವಿಗಳು ಮರಣಿಸುವುವೋ ಅವೆಲ್ಲಾ ಪೂರ್ಣಕಾಲ ಜೀವಿಸಿ ಮರಣಿಸುವವೇ? ಅಥವಾ ಅಕಾಲದಲ್ಲೇ (ಇನ್ನೂ ಕಾಲವಿರುವಾಗಲೇ) ಮರಣಿಸುವವೇ? (179)ಓ ಮಹಾರಾಜ, ಹೌದು ಕಾಲ ಮರಣವು ಇದೆ. ಹಾಗೆಯೇ ಅಕಾಲ ಮರಣವು ಸಹಾ ಇದೆ.
ಹಾಗಾದರೆ ಭಂತೆ ಯಾರು ಕಾಲ ಮರಣವನ್ನಪ್ಪುವರು ಮತ್ತು ಯಾರು ಅಕಾಲ ಮರಣವನ್ನಪ್ಪುವರು? (180)
ಓ ಮಹಾರಾಜ, ನೀವು ಮಾವಿನ ಮರಗಳನ್ನು ಅಥವಾ ಜಂಬೋ ಮರಗಳನ್ನು ಅಥವಾ ಹಣ್ಣಿನ ಮರಗಳನ್ನು ನೋಡಿದ್ದಿರಲ್ಲವೆ ಮತ್ತು ಅದರಲ್ಲಿ ಹಣ್ಣುಗಳು ಮತ್ತು ಕಾಯಿಗಳು ಎರಡು ಇರುತ್ತದೆ ಅಲ್ಲವೇ?
ಹೌದು ಕಂಡಿದ್ದೇನೆ.
ಸರಿ, ಆ ಕೆಳಗೆ ಬಿದ್ದ ಆ ಎಲ್ಲಾ ಹಣ್ಣುಗಳು ಕಾಲಪೂರ್ಣವಾದ ಮೇಲೆಯೇ ಬಿದ್ದಿತೆ? ಅಥವಾ ಕೆಲವು ಕಾಯಿಗಳು ಪಕ್ವವಾಗದೆ ಬಿದ್ದವೆ?
ಭಂತೆ ನಾಗಸೇನ, ಹಲವು ಹಣ್ಣುಗಳು ಹಣ್ಣಾಗಿ ಪಕ್ವವಾಗಿ ಬಿದ್ದವು. ಆಗೆಲ್ಲಾ ಅವು ಕಾಲಪೂರ್ಣವಾಗಿ ಬಿದ್ದಿವೆ. ಆದರೆ ಮಿಕ್ಕವು ಕೆಳಕ್ಕೆ ಬಿದ್ದ ಕಾರಣ ಏನೆಂದರೆ ಕೆಲವು ಹುಳುಗಳು ಕೊರೆದಿದ್ದವು, ಕೆಲವು ಕಡ್ಡಿ ತಗುಲಿ ಬಿದ್ದವು, ಕೆಲವು ಗಾಳಿಯಿಂದ ಬಿದ್ದವು, ಕೆಲವು ಕೊಳೆತು ಬಿದ್ದವು ಮತ್ತೆ ಕೆಲವು ಹವಾಮಾನ ವೈಪರೀತ್ಯದಿಂದಾಗಿ ಬಿದ್ದವು.
ಅದೇರೀತಿಯಾಗಿ ಓ ಮಹಾರಾಜ, ಯಾರೆಲ್ಲಾ ವೃದ್ಧಾಪ್ಯ ತುಂಬಿ ಮರಣಿಸುವರೋ ಅವರೇ ಕಾಲಮರಣ (ಕಾಲ ತುಂಬಿದ ಮರಣ) ಪಡೆಯುತ್ತಾರೆ. ಆದರೆ ಮಿಕ್ಕವರೆಲ್ಲರೂ ಕರ್ಮದ ಫಲದಿಂದಾಗಿ, ಅತಿಯಾದ ಪ್ರಯಾಣದಿಂದಾಗಿ, ಅತಿಯಾದ ಚಟುವಟಿಕೆಯಿಂದ ಮರಣಿಸುವರು.
ಭಂತೆ ನಾಗಸೇನ, ಯಾರೆಲ್ಲಾ ಕರ್ಮದಿಂದಾಗಲಿ ಅಥವಾ ಅತಿಯಾದ ಪ್ರಯಾಣದಿಂದಾಗಲಿ ಅಥವಾ ಅತಿಯಾದ ಚಟುವಟಿಕೆಯಿಂದಾಗಲಿ ಅಥವಾ ವೃದ್ಧಾಪ್ಯದಿಂದಾಗಲಿ ಅವರೆಲ್ಲರೂ ಕಾಲದ ಪೂರ್ಣತೆಯಿಂದಾಗಿಯೇ ತಾನೆ ಮರಣಿಸುವರು. ಮತ್ತು ಯಾರು ಗರ್ಭದಲ್ಲೇ ಮರಣಿಸುವರೋ ಅಥವಾ ಜನನ ಕೋಣೆಯಲ್ಲೇ ಸಾಯುವರೋ ಅಥವಾ ತಿಂಗಳ ಮಗುವಾಗಿರುವಾಗಲೇ ಸಾಯುವರೋ ಅಥವಾ ಮೂರು ವರ್ಷ ತರುವಾಯ ಸಾಯುವರೋ, ಅದೆಲ್ಲವೂ ನಿಗಧಿತ ಕಾಲವೇ ಅಲ್ಲವೇ? ಮತ್ತು ಅದೇ ಪೂರ್ಣಕಾಲವಲ್ಲವೇ? ಅದರಿಂದಾಗಿಯೇ ಅವರು ಸತ್ತರು. ಆದ್ದರಿಂದ ಭಂತೆ ನಾಗಸೇನ, ಅಕಾಲ ಮರಣವೆಂಬುದೇ ಇಲ್ಲ. ಏಕೆಂದರೆ ಯಾರೆಲ್ಲಾ ಸಾಯುತ್ತಾರೋ ಅದು ನಿಗಧಿತ ಕಾಲವಾಗಿರುತ್ತದೆ.
ಓ ಮಹಾರಾಜ, ಏಳು ಬಗೆಯ ಜನರಿರುತ್ತಾರೆ. ಅವರಲ್ಲಿ ಬದುಕುವ ಆಯು ಉಳಿದಿರುತ್ತದೆ. ಆದರೂ ಅಕಾಲ ಮರಣಕ್ಕೆ ಗುರಿಯಾಗುತ್ತಾರೆ ಮತ್ತು ಆ ಏಳು ಜನರು ಯಾರು? ಅವರೆಂದರೆ ಒಬ್ಬ ಹಸಿದವನು, ಆತನಿಗೆ ತಿನ್ನಲು ಆಹಾರ ಸಿಗುವುದಿಲ್ಲ. ಆತನ ಶರೀರದ ಒಳಭಾಗವು ಹಸಿವಾಗ್ನಿಯಿಂದ ಸುಡಲ್ಪಟ್ಟು ಸಾಯುತ್ತಾನೆ. ಇನ್ನೊಬ್ಬನು ಬಾಯಾರಿಕೆಯಿಂದ ನೀರು ಸಿಗದೆ, ಆತನ ಶರೀರದ ಅವಯವಗಳು ಒಣಗಿ ಸಾಯುತ್ತಾನೆ. ಹಾವಿನ ಕಡಿತದಿಂದ ಒಬ್ಬನು ಸತ್ತರೆ, ವಿಷದಿಂದಾಗಿ ಇನ್ನೊಬ್ಬ ಸಾಯುತ್ತಾನೆ. ಆಗ ಆತನಿಗೆ ಯಾವ ಚಿಕಿತ್ಸೆಯಿಲ್ಲದೆ ವಿಷದಿಂದಾಗಿ ಆತನ ಅಂಗಗಳೆಲ್ಲವೂ ಸುಡಲ್ಪಟ್ಟು ಔಷಧಿ ಸ್ವೀಕರಿಸದಿರುವ ಸ್ಥಿತಿಗೆ ಹೋಗುತ್ತಾನೆ. ಹಾಗು ಒಬ್ಬನು ಅಗ್ನಿಯಲ್ಲಿ ಬಿದ್ದಾಗ ಆತನು ಅದರಿಂದಾಗಿ ಪಾರಾಗಲು ಸಾಧ್ಯವಾಗದೆ, ಹಾಗೆಯೇ ಇನ್ನೊಬ್ಬ ನೀರಿನಲ್ಲಿ ಮುಳುಗಿ, ಉಳಿಯಲಾರದೆ ಮತ್ತು ಇನ್ನೊಬ್ಬ ಶಸ್ತ್ರದಿಂದ ಗಾಯಗೊಂಡು ವೈದ್ಯನು ಸಿಗದೆ ಸಾಯುತ್ತಾನೆ. ಹೀಗೆ ಇವರೆಲ್ಲರೂ ಇನ್ನೂ ಅವರಿಗೆ ಆಯಸ್ಸು ಇರುವಾಗಲೇ ಅಕಾಲ ಮರಣಕ್ಕೆ ತುತಾಗಿದ್ದಾರೆ. ಮತ್ತು ಇವರಲ್ಲಿ ಈ ಒಂದು ಸ್ವಭಾವವು ಸಾಮಾನ್ಯವಾಗಿದೆ.
ಮತ್ತೆ ಓ ಮಹಾರಾಜ, ಎಂಟು ವಿಧದಲ್ಲಿ ಮೃತ್ಯುವು ಮತ್ರ್ಯರನ್ನು ತೆಗೆದುಕೊಳ್ಳುತ್ತದೆ ಅವೆಂದರೆ : ಅತಿಯಾದ ವಾತದಿಂದ, ಅತಿಯಾದ ಪಿತ್ತದಿಂದ, ಅತಿಯಾದ ಕಫದಿಂದ ಈ ಮೂರರ ವಿಷಯತೆಯಿಂದ, ಋತು ವಿಪರಿಣಾಮದಿಂದಾಗಿ, ವಿಷಮ ಆಹಾರದಿಂದಾಗಿ (ಪರಿಸ್ಥಿತಿ), ಬಾಹ್ಯ ಕಾರ್ಯಕರ್ತನಿಂದ ಮತ್ತು ಕಮ್ಮ ವಿಪಾಕದಿಂದಾಗಿ ಜೀವಿಗಳ ಕಾಲಕ್ರಿಯೆ ಆಗುವುದು (ಮೃತ್ಯುವಾಗುವುದು). ಓ ಮಹಾರಾಜ, ಇವುಗಳಲ್ಲಿ ಕರ್ಮ ವಿಪಾಕದ ಮರಣವು ಮಾತ್ರ ಕಾಲಮರಣವಾಗಿದೆ. ಉಳಿದೆಲ್ಲವೂ ಸಹಾ ಅಕಾಲ ಮರಣವಾಗಿದೆ. ಅದರ ಬಗ್ಗೆ ಹೀಗೆ ಹೇಳಲಾಗಿದೆ.
ಹಸಿವಿನಿಂದ, ಬಾಯಾರಿಕೆಯಿಂದ, ವಿಷದಿಂದ ಮತ್ತು ಕಡಿತದಿಂದ, ಅಗ್ನಿಯಿಂದ, ಜಲದಿಂದ ಹಾಗು ಶಸ್ತ್ರದಿಂದಾಗಿ ಜನರು ಅಕಾಲ ಮೃತ್ಯು ಪಡೆಯುವರು. ವಾತ, ಪಿತ್ತ, ಕಫದಿಂದ ಮತ್ತು ಮೂರರ ಮಿಶ್ರಣದಿಂದ ಋತು ವಿಪರಿಣಾಮದಿಂದ, ವಿಷಮ ಪರಿಸ್ಥಿತಿಯಿಂದ ಮತ್ತು ಬಾಹ್ಯ ಕಾರ್ಯಕರ್ತನಿಂದ ಅಕಾಲ ಮೃತ್ಯುವು ಆಗುವುದು.
ಆದರೆ ಕೆಲವರಿದ್ದಾರೆ ಓ ಮಹಾರಾಜ, ಅವರು ಕೆಲವು ಕೆಟ್ಟ ಕರ್ಮ ಮಾಡುವಾಗ ಅಥವಾ ಹಿಂದಿನ ಜನ್ಮದ ಪಾಪಫಲದಿಂದಾಗಿ ಸಾಯುವರು ಮತ್ತು ಇವುಗಳಲ್ಲಿ ಓ ರಾಜ, ಯಾರೆಲ್ಲಾ ಪರರಿಗೆ ಉಪವಾಸ ಮಾಡಿ ಸಾಯಿಸಿರುವರೋ ಅವರು ಅದರ ಫಲದಿಂದಾಗಿ ಹಲವು ನೂರು ಅಥವಾ ಸಾವಿರ ವರ್ಷಗಳ ಕಾಲ ಹಸಿವಿನಿಂದ ನರಳುತ್ತಾರೆ. ಅಷ್ಟೇ ಅಲ್ಲ, ಬಳಲಿಕೆ, ಕೃಶತ್ವ, ಶಿಥಿಲತೆ, ಒಣಗುವಿಕೆ, ಕ್ಷಯಿಸುವಿಕೆ, ಬಿಸಿಯಾಗುವಿಕೆ, ಅಂತರಾಗ್ನಿಯಿಂದ ನರಳುವಿಕೆ, ಅನುಭವಿಸಿ ಹಾಗೆಯೇ ಯುವಕನಾಗಲಿ, ವಯಸ್ಕನಾಗಲಿ ಹಸಿವಿನಿಂದಲೇ ಸಾಯುತ್ತಾನೆ ಮತ್ತು ಅಂತಹ ಮೃತ್ಯು ಆತನಿಗೆ ನಿಗಧಿತವಾಗಿರುತ್ತದೆ. ಮತ್ತು ಯಾರೆಲ್ಲಾ ಪರರಿಗೆ ಬಾಯಾರಿಕೆಯಿಂದ ಸಾಯಿಸಿರುವರೋ, ಆತನು ಪ್ರೇತವಾಗಿ ಹುಟ್ಟಿ ಬಾಯಾರಿಕೆಯಿಂದ ನೂರಾರು ಮತ್ತು ಸಾವಿರಾರು ವರ್ಷಕಾಲ ನರಳುತ್ತಾನೆ. ಹಾಗೆಯೇ ಕೃಶನಾಗಿ, ದುಃಖಿತನಾಗಿರುತ್ತಾನೆ. ಆತನು ಮಾನವನಾಗಿ ಹುಟ್ಟಿ ಬಾಯಾರಿಕೆಯಲ್ಲೇ ಯುವಕನಾಗಿರುವಾಗ ಅಥವಾ ವೃದ್ಧನಾಗಿರುವಾಗ ಅಕಾಲ ಮರಣ ಅಪ್ಪುತ್ತಾನೆ. ಆತನಿಗೆ ನಿಗಧಿತ ಕಾಲದಲ್ಲಿ ಮರಣವು ನಿಶ್ಚಯಿಸಿರುತ್ತದೆ ಮತ್ತು ಯಾರು ಪರರಿಗೆ ಹಾವುಗಳಿಂದ ಕಚ್ಚಿಸಿ, ಕೊಲ್ಲಿಸುತ್ತಾನೋ ಆತನು ನೂರಾರು, ಸಾವಿರಾರು ವರ್ಷಕಾಲ ಸರ್ಪದಿಂದಲೇ ಹಲವಾರು ಸಾರಿ ಕಚ್ಚಿಸಿಕೊಲ್ಲಲ್ಪಡುತ್ತಾನೆ. ಹಾಗೆಯೇ ಮಾನವನಾಗಿ ಹುಟ್ಟಿರುವಾಗ ಹಾವಿನ ಕಡಿತದಿಂದಲೇ ಸಾಯುತ್ತಾನೆ. ಆತನ ಆಯುವು ಎಷ್ಟೇ ಇರಲಿ, ಆತನ ಮರಣವು ನಿಗದಿತಪಟ್ಟಿರುತ್ತದೆ ಮತ್ತು ಯಾರೆಲ್ಲಾ ಪರರಿಗೆ ವಿಷನೀಡಿ ಕೊಲ್ಲಿಸುವನೋ ಆತನು ಅದರ ಪರಿಣಾಮದಿಂದಾಗಿ ಹಲವು ನೂರು, ಸಾವಿರ ವರ್ಷಗಳ ಕಾಲ ಅಂಗಗಳ ಭಗ್ನದಿಂದ ಸುಡಲ್ಪಡುತ್ತಾನೆ ಮತ್ತು ಶವದ ವಾಸನೆಯ ನಿಶ್ವಾಸ ಮಾಡುತ್ತಾನೆ. ಹಾಗು ಆತನು ಯುವಕನೇ ಆಗಿರಲಿ ಅಥವಾ ವೃದ್ಧನೇ ಆಗಿರಲಿ ವಿಷದಿಂದಲೇ ಅಕಾಲ ಮರಣಕ್ಕೆ ಗುರಿಯಾಗುತ್ತಾನೆ ಮತ್ತು ಯಾರೆಲ್ಲಾ ಪರರಿಗೆ ಬೆಂಕಿಯಿಂದಾಗಿ ಕೊಲ್ಲಿಸಿರುತ್ತಾನೋ ಆತನು ನರಕಗಳಲ್ಲೇ ಅಡ್ಡಾಡಬೇಕಾಗುತ್ತದೆ. ಅಲ್ಲಿ ಬೆಂಕಿಯ ರಾಶಿಯಲ್ಲಿ ಸುಡಲ್ಪಡಬೇಕಾಗುತ್ತದೆ. ಅಲ್ಲಿ ಅಂಗಗಳೆಲ್ಲಾ ಸುಟ್ಟು ಚಿತ್ರವಧೆ ಅನುಭವಿಸುತ್ತಾ ಸಹಸ್ರಾರು ವರ್ಷ ನರಳಿ, ಆತನು ಮಾನವನಾಗಿ ಹುಟ್ಟಿ ಯುವಕನಾಗಿರುವಾಗ ಅಥವಾ ವೃದ್ಧನಾಗಿರುವಾಗ ನಿಗಧಿತ ಕಾಲದಲ್ಲಿ ಬೆಂಕಿಯಿಂದಲೇ ಸಾಯುತ್ತಾನೆ ಮತ್ತು ಯಾರೆಲ್ಲಾ ಪರರಿಗೆ ನೀರಿನಲ್ಲಿ ಮುಳುಗಿಸಿ, ಕೊಂದಿರುವನೋ, ಆತನು ಸಹಸ್ರಾರು ವರ್ಷಕಾಲ, ಅಸಮರ್ಥ ಜೀವಿಯಾಗಿ, ಹಾಳಾಗಿ, ಮುರಿಯಲ್ಪಟ್ಟು, ಯುವಕನಾಗಿರುವಾಗ ಅಥವಾ ವೃದ್ಧನಾಗಿರುವಾಗ, ನೀರಿನಲ್ಲಿ ಮುಳುಗಿಯೇ ನಿಗದಿತ ಕಾಲದಲ್ಲಿ ಮರಣಿಸುತ್ತಾನೆ ಮತ್ತು ಯಾರು ಪರರ ಮೇಲೆ ಶಸ್ತ್ರಗಳನ್ನು ಬಳಸಿ ಕೊಂದಿರುವನೋ ಆತನು ಪ್ರಾಣಿಯಾಗಿ ಹಲವಾರು ಸಹಸ್ರ ವರ್ಷಗಳವರೆಗೆ ಕತ್ತರಿಸಲ್ಪಟ್ಟು, ಗಾಯಭರಿತನಾಗಿ, ಪೆಟ್ಟುಗಳು ಮತ್ತು ನೋವುಗಳಿಂದ ಕೂಡಿ ಕೊಲ್ಲಲ್ಪಡುತ್ತಾನೆ ಮತ್ತು ಮಾನವನಾಗಿ ಹುಟ್ಟಿದಾಗ, ಯುವಕ, ಮಧ್ಯವಯಸ್ಕ ಅಥವಾ ವೃದ್ಧನೇ ಆಗಿರಲಿ ಶಸ್ತ್ರದಿಂದಲೇ ಕೊಲ್ಲಲ್ಪಡುತ್ತಾನೆ. ಆತನ ಕಾಲವು ನಿಗದಿತವಾಗಿರುತ್ತದೆ. ಹೀಗೆ ಅಕಾಲ ಮರಣವನ್ನು ಹೊಂದುತ್ತಾನೆ.
ಭಂತೆ ನಾಗಸೇನರವರೇ, ಅಕಾಲ ಮರಣದ ಬಗ್ಗೆ ನುಡಿದಿರಿ, ಈಗ ಅದೆಲ್ಲಾ ಕಾರಣಗಳನ್ನು ತಿಳಿಸಿರಿ.
ಓ ಮಹಾರಾಜ, ಹೇಗೆ ಶ್ರೇಷ್ಠ ಮತ್ತು ಬೃಹತ್ ಅಗ್ನಿಯು ಮೇಲೆ ಒಣಹುಲ್ಲು, ಕಡ್ಡಿಗಳು, ರೆಂಬೆ, ಎಲೆಗಳನ್ನು ರಾಶಿಯಾಗಿ ಹಾಕಿದಾಗ ಆ ಇಂಧನದಲ್ಲಿ ಎಲ್ಲವೂ ನಾಶವಾಗುತ್ತದೆ. ಆದರೂ ಆ ಅಗ್ನಿಯನ್ನು ಪೂರ್ಣವಾಗಿ ಉರಿಯಿತು. ಅಥವಾ ಸಮಯೋಚಿತವಾಗಿ ಉರಿಯಿತು ಎನ್ನುತ್ತೇವೆ. ಏಕೆಂದರೆ ಅದು ಯಾವುದೇ ಅನಾಹುತ, ಅಡಚಣೆಯಿಲ್ಲದೆ ಪೂರ್ಣವಾಗಿ ದಹಿಸಿವೆ. ಅದೇರೀತಿಯಲ್ಲಿ ಮಹಾರಾಜ, ಒಬ್ಬನು ಹಲವು ಸಾವಿರ ದಿನಗಳಷ್ಟು ಜೀವಿಸಿ, ಆತನು ವೃದ್ಧಾಪ್ಯ ಪಡೆದು, ಯಾವುದು ಅನಾಹುತ ಅಥವಾ ಅಪಘಾತ ಅನುಭವಿಸದೆ ಪೂರ್ಣ ಸಮಯದಲ್ಲಿ ಜೀವಿಸಿ ಮರಣಿಸುವನೋ ಆಗ ಅದು ಕಾಲಮರಣವಾಗಿದೆ. ಆದರೆ ಆ ಮಹಾ ಅಗ್ನಿಯಲ್ಲಿ ಆ ಒಳಹುಲ್ಲು, ಕಡ್ಡಿ, ರೆಂಬೆಗಳು ಮತ್ತು ಎಲೆಗಳ ರಾಶಿಯಲ್ಲಿ ಉರಿಯುವ ಮುನ್ನವೇ ಮಳೆಯಿಂದಾಗಿ, ಗಾಳಿಯಿಂದಾಗಿ ಅದು ಪೂರ್ಣವಾಗಿ ಉರಿಯದೆ ಆರಿಹೋಗುತ್ತದೆ. ಆಗ ಆ ಮಹಾ ಅಗ್ನಿಯು ಸಮಯೋಚಿತವಾಗಿ ಉರಿಯಿತೆ?
ಇಲ್ಲ ಭಂತೆ ಹಾಗಾಗಲಿಲ್ಲ.
ಆದರೆ ಇಲ್ಲಿ ಎರಡನೆಯ ಅಗ್ನಿಯು ಮೊದಲಿಗಿಂತ ಸ್ವಭಾವದಲ್ಲಿ ಭಿನ್ನವಲ್ಲವೇ?
ಭಂತೆ ಎರಡನೆಯ ಅಗ್ನಿಯು ಮಳೆಯ ಅಡತಡೆಯಿಂದಾಗಿ ಪೂರ್ಣವಾಗಿ ಉರಿಯದೆ ಕಾಲಕ್ಕೆ ಮುಂಚೆಯೇ ಆರಿಹೋಗಿದೆ.
ಅದೇರೀತಿಯಾಗಿ ಓ ಮಹಾರಾಜ, ಯಾರೇ ಆಗಲಿ, ಆತನ ಕಾಲಕ್ಕೆ ಮುಂಚೆಯೇ ರೋಗದಿಂದಾಗಲಿ, ಅಂದರೆ ಅತಿಯಾದ ವಾತದಿಂದ, ಅತಿಯಾದ ಪಿತ್ತದಿಂದ, ಅತಿಯಾದ ಕಫದಿಂದ ಅಥವಾ ಮೂರರ ಮಿಶ್ರಣದಿಂದಾಗಿ ಅಥವಾ ಹಸಿವಿನಿಂದ, ಅಥವಾ ಬಾಯಾರಿಕೆಯಿಂದ ಅಥವಾ ಅಗ್ನಿಯಿಂದ, ಜಲದಿಂದ ಅಥವಾ ಶಸ್ತ್ರದಿಂದ ಮರಣಿಸಿದರೆ ಆತನು ಕಾಲಮರಣಕ್ಕೆ ಮರಣಿಸದೆ ಅದಕ್ಕೆ ಮುಂಚೆಯೇ ಅಕಾಲ ಮರಣಕ್ಕೆ ತುತ್ತಾದ ಎನ್ನುತ್ತಾರೆ.
ಮತ್ತೆ ಓ ಮಹಾರಾಜ, ಹೇಗೆ ಬೃಹತ್ ಬಿರುಗಾಳಿಯಿಂದ ಮಳೆಯು ಸುರಿವುದೋ ಅದು ಸಮತಲ ಮತ್ತು ಕಣಿವೆಗಳನ್ನು ತುಂಬುವದೋ ಆಗ ಅದಕ್ಕೆ ಯಾವುದೇ ಅಡಚಣೆಯಿಲ್ಲದೆ ತಡೆರಹಿತ ಮಳೆ ಬಿದ್ದಿತು ಎನ್ನುವೆವು.
ಓ ಮಹಾರಾಜ, ಅದೇರೀತಿಯಲ್ಲಿ ಒಬ್ಬನು ದೀರ್ಘಕಾಲ ಜೀವಿಸಿ, ವೃದ್ಧಾಪ್ಯ ಹೊಂದಿ, ವರ್ಷಗಳವರೆಗೆ ಜೀವಿಸಿ ಯಾವುದೇ ದುರ್ಘಟನೆಯಿಲ್ಲದೆ, ಅಪಘಾತವಿಲ್ಲದೆ, ಜೀವಿಸಿದಾಗ ಆತನಿಗೆ ಪೂರ್ಣಕಾಲ ಜೀವಿಸಿದನು. ನಂತರ ಕಾಲಮರಣ ತಪ್ಪಿದನು ಎನ್ನುತ್ತೇವೆ. ಆದರೆ ಓ ರಾಜ, ಬೃಹತ್ ಬಿರುಗಾಳಿಯ ಮೋಡಗಳೆದ್ದು ನಂತರ ಬೃಹತ್ ವಾಯುವಿನಿಂದಾಗಿ ಆ ಮೋಡಗಳು ಸ್ವಲ್ಪಕಾಲದಲ್ಲಿ ಚದುರಿಹೋಗುತ್ತವೆ. ಈಗ ಆ ಮೋಡಗಳು ತಮ್ಮ ಮಳೆ ಕಾರ್ಯವನ್ನು ಕಾಲೋಚಿತವಾಗಿ ಪೂರ್ಣಗೊಳಿಸಿದವೇ?
ಇಲ್ಲ ಭಂತೆ ಹಾಗಾಗಲಿಲ್ಲ.
ಇಲ್ಲಿ ಎರಡನೆಯ ಮೋಡವು ಮೊದಲಿಗಿಂತ ಸ್ವಭಾವದಲ್ಲಿ ಭಿನ್ನವಾಯಿತಲ್ಲವೇ?
ಹೌದು ಭಂತೆ, ಎರಡನೆಯ ಮೋಡವು ವಾಯುವಿನ ಪ್ರಕೋಪದಿಂದಾಗಿ ತನ್ನ ಕಾರ್ಯವನ್ನಾಗಲಿ, ಕಾಲಕ್ಕೆ ಅನುಗುಣವಾಗಿ ಮಾಡಲಿಲ್ಲ.
ಓ ಮಹಾರಾಜ, ಅದೇರೀತಿಯಲ್ಲಿ ಯಾರೇ ಆಗಲಿ ತನ್ನ ಕಾಲಕ್ಕೆ ಮುಂಚೆಯೇ ರೋಗದಿಂದಾಗಿ ಸತ್ತರೆ ಉದಾಹರಿಸುವುದಾದರೆ ಅತಿ ವಾತದೋಷದಿಂದ ಅಥವಾ ಅತಿಯಾದ ಪಿತ್ತದೋಷದಿಂದ ಅಥವಾ ಅತಿಯಾದ ಕಫ ದೋಷದಿಂದ ಅಥವಾ ಇವುಗಳ ಮಿಶ್ರಣದಿಂದ ಅಥವಾ ಋತು (ತಾಪ) ವೈಪರೀತ್ಯದಿಂದ ಅಥವಾ ಹಸಿವಿನಿಂದ, ಅಥವಾ ಬಾಯಾರಿಕೆಯಿಂದ ಅಥವಾ ಅಗ್ನಿಯಿಂದ, ಅಥವಾ ಜಲದಿಂದ, ಅಥವಾ ಶಸ್ತ್ರದಿಂದ ಸಾಯುತ್ತಾನೆ. ಓ ಮಹಾರಾಜ, ಯಾವುದರಿಂದಾಗಿ ಮನುಷ್ಯನು ಕಾಲಕ್ಕೆ ಮುಂಚೆಯೇ ಮರಣಿಸುತ್ತಾನೆಯೋ ಅವಕ್ಕೆಲ್ಲ ಇವೇ ಕಾರಣಗಳಾಗಿವೆ.
ಮತ್ತೆ ಓ ಮಹಾರಾಜ, ಶಕ್ತಿಶಾಲಿಯಾದ ಮತ್ತು ವಿಷಪೂರಿತವಾದ ಭಯಾನಕ ಹಾವೊಂದು ಕೋಪದಿಂದಾಗಿ ಒಬ್ಬನಿಗೆ ಕಚ್ಚುತ್ತದೆ. ಆಗ ಅದರ ವಿಷಪ್ರಭಾವದಿಂದ ಆತನು ಕಾಲವಿಳಂಬವಿಲ್ಲದೆ ಸಾಯುತ್ತಾನೆ, ಆತನ ಸಾವಿಗೆ ಯಾವುದು ತಡೆಯಾಗಲಿಲ್ಲ. ಅದೇರೀತಿಯಲ್ಲಿ ಒಬ್ಬನು ಯಾವುದೇ ತಡೆಯಿಲ್ಲದೆ, ಅಡಚಣೆಯಿಲ್ಲದೆ ದೀರ್ಘವಾಗಿ ಬದುಕುತ್ತಾನೆ. ವೃದ್ಧಾಪ್ಯವನ್ನೆಲ್ಲಾ ಕಂಡು ಸಾಯುತ್ತಾನೆ. ಅಂದರೆ ಕಾಲಮರಣವನ್ನು ಪಡೆದಿದ್ದಾನೆ. ಏಕೆಂದರೆ ಆತನ ದೀಘರ್ಾಯು ಯಾವುದೇ ಅಡಚಣೆ, ಅಪಘಾತ, ದುರ್ಘಟನೆ ಅಡ್ಡಿ ಆಗಲಿಲ್ಲ. ಆತನು ಪೂರ್ಣಕಾಲ ಜೀವಿಸಿದ್ದಾನೆ. ಆದರೆ ಈಗ ಒಬ್ಬನಿಗೆ ವಿಷಪೂರಿತ ಹಾವು ಕಚ್ಚಿದಾಗ, ಹಾವಾಡಿಗನೊಬ್ಬನು ಆತನಿಗೆ ಔಷಧಿಯನ್ನು ನೀಡುತ್ತಾನೆ. ಆಗ ಆತನು ಕಡಿತ ನೋವು ಅನುಭವಿಸುತ್ತಿದ್ದರೂ ಸಹಾ ಆತನು ವಿಷಮುಕ್ತನಾಗುತ್ತಾನೆ. ಇಲ್ಲಿ ವಿಷವು ಕಾಲವಿಳಂಬವಿಲ್ಲದೆ ಪರಿಣಾಮಕಾರಿಯಾಯಿತೆ?
ಇಲ್ಲ ಭಂತೆ, ಹಾಗಾಗಲಿಲ್ಲ.
ಆದರೆ ಓ ಮಹಾರಾಜ, ಇದರಲ್ಲಿ ಎರಡನೆಯ ವಿಷವು ಮೊದಲನೆಗಿಂತ ಸ್ವಭಾವದಲ್ಲಿ ಭಿನ್ನವೇ?
ಹಾಗೇನಿಲ್ಲ ಭಂತೆ, ಅದು ಸಹಾ ಅಷ್ಟೇ ಪ್ರಬಲ ವಿಷವಾಗಿತ್ತು. ಆದರೆ ತಕ್ಷಣ ಔಷಧ ನೀಡಿದ್ದರಿಂದಾಗಿ ಅದು ಪರಿಣಾಮಕಾರಿಯಾಗಲಿಲ್ಲ ಅಷ್ಟೇ.
ಅದೇರೀತಿಯಲ್ಲಿ ಓ ಮಹಾರಾಜ, ಒಬ್ಬನು ಕಾಲಮರಣವನ್ನು ಪಡೆಯದೇ ಅದಕ್ಕೆ ಮುಂಚೆಯೇ ಆತನು ಸತ್ತರೆ ಅದಕ್ಕೆ ಕಾರಣವು ಹಲವು ರೋಗಗಳಿರಬಹುದು. ಉದಾಹರಣೆಗೆ ಅತಿಯಾದ ವಾತದೋಷ ಅಥವಾ ಅತಿಯಾದ ಪಿತ್ತದೋಷ ಅಥವಾ ಅತಿಯಾದ ಕಫ ದೊಷ ಅಥವಾ ಈ ಮೂರರ ಮಿಶ್ರಣ ದೋಷ, ಅಥವಾ ತಾಪದ ವೈಪರೀತ್ಯ, ಅಥವಾ ಬಾಹ್ಯ ವ್ಯಕ್ತಿಯಿಂದ ಅಥವಾ ಹಸಿವಿನಿಂದ ಅಥವಾ ಬಾಯಾರಿಕೆಯಿಂದ ಅಥವಾ ಬೆಂಕಿಯಿಂದ ಅಥವಾ ಜಲದಿಂದ ಅಥವಾ ವಿಷದಿಂದ ಅಥವಾ ಶಸ್ತ್ರದಿಂದ ಇವೇ ಅಕಾಲಮರಣಕ್ಕೆ ನಾನಾ ಕಾರಣಗಳಾಗಿವೆ ಓ ಮಹಾರಾಜ.
ಮತ್ತೆ ಓ ಮಹಾರಾಜ, ಇದು ಬಿಲ್ಗಾರನಿಂದ ಹೊರಟ ಬಾಣದಂತೆ ಮಹಾರಾಜ. ಹೇಗೆ ಬಾಣವು ಬಿಲ್ಲಿನಿಂದ ಹೊರಟು, ತನ್ನ ದಾರಿಯಲ್ಲಿ ಯಾವರೀತಿಯ ಅಡಚಣೆಯಿಲ್ಲದೆ, ತನ್ನ ಗುರಿಯು ತಲುಪುವುದೋ ಅದೇರೀತಿಯಲ್ಲಿ ದೀಘರ್ಾಯುವಾಗಿ, ಪೂರ್ಣಕಾಲ ಜೀವಿಸಿದನು ಅಥವಾ ನಂತರ ಕಾಲಮರಣ ಹೊಂದಿದನು ಎನ್ನುತ್ತಾರೆ. ಆದರೆ ಯಾವಾಗ ಬಿಲ್ಗಾರ ಬಾಣವನ್ನು ಬಿಡುವನೋ, ಆಗ ವೀರನೊಬ್ಬನು ಮಧ್ಯದಲ್ಲೇ ಅದನ್ನು ಹಿಡಿದರೆ, ತಡೆದರೆ, ಆಗ ಆ ಬಾಣವು ತನ್ನ ಗುರಿ ತಲುಪಿತು ಅಥವಾ ಕಾಲವಿಳಂಬವಿಲ್ಲದೆ ಗುರಿಮುಟ್ಟಿತು ಎನ್ನಬಹುದೆ?
ಇಲ್ಲ ಭಂತೆ, ಹಾಗೆ ಹೇಳಲಾಗದು.
ಓ ಮಹಾರಾಜ, ಹಾಗಾದರೆ ಇದರಲ್ಲಿ ಎರಡನೆಯ ಬಾಣವು ಮೊದಲಿಗಿಂತ ಸ್ವಭಾವದಲ್ಲಿ ಭಿನ್ನವೇ?
ಹಾಗೇನಿಲ್ಲ, ಆದರೆ ಎರಡನೆಯ ಬಾಣಕ್ಕೆ ತಡೆಯಾಗಿ ಬಂಧನಕ್ಕೊಳಗಾಯಿತು.
ಅದೇರೀತಿಯಲ್ಲಿ ಓ ಮಹಾರಾಜ, ಒಬ್ಬನು ಅಕಾಲಮರಣ ಪಡೆದರೆ ಅದಕ್ಕೆ ಕಾರಣ ಇವುಗಳಲ್ಲಿ ಒಂದಾಗಿರುತ್ತದೆ. ಅವೆಂದರೆ ಅತಿಯಾದ ವಾತದೋಷ, ಅತಿಯಾದ ಪಿತ್ತದೋಷ, ಅತಿಯಾದ ಕಫ ದೋಷ, ಈ ಮೂರರ ಮಿಶ್ರ ದೋಷ, ಬಾಹ್ಯವ್ಯಕ್ತಿ, ಹಸಿವು, ಬಾಯಾರಿಕೆ, ಅಗ್ನಿ, ಜಲ, ಶಸ್ತ್ರ, ವಿಷ ಇವುಗಳ ಕಾರಣದಿಂದಾಗಿ ಒಬ್ಬನು ಅಕಾಲ ಮರಣಕ್ಕೆ ತುತ್ತಾಗುತ್ತಾನೆ.
ಮತ್ತೆ ಓ ಮಹಾರಾಜ, ಇದು ಹೇಗೆಂದರೆ ಹಿತ್ತಾಳೆ ಪಾತ್ರೆಗೆ ಒಬ್ಬನು ಹೊಡೆದಾಗ, ಆಗ ಧ್ವನಿಯು ಹೊರಹೊಮ್ಮುವುದು. ಹಾಗೆಯೇ ಆ ಧ್ವನಿಯು ಉದ್ದಕ್ಕೂ ಕಂಪಿಸುತ್ತ ದೀರ್ಘಕಾಲ ಗುಯ್ಗುಟ್ಟುವುದು. ಇದು ಆ ಶಬ್ದದ ಸ್ವಭಾವವಾಗಿದೆ. ಹೀಗೆ ಅದು ತನ್ನ ಗುರಿಯನ್ನು ಯಾವುದೇ ತಡೆಯಿಲ್ಲದೆ ಮುಟ್ಟುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರು ದೀಘರ್ಾಯುವಾಗಿ ಜೀವಿಸಿ, ವೃದ್ದಾಪ್ಯ ಕಳೆದು, ಯಾವುದೇ ಅಪಘಾತ ಅಥವಾ ವಿಪತ್ತು ಸಂಭವಿಸದೆ ಕೊನೆಗೆ ಮರಣಿಸುತ್ತಾನೆ. ಇದೇ ಕಾಲಮರಣವಾಗಿದೆ. ಆದರೆ ಒಬ್ಬನು ಹಿತ್ತಾಳೆ ಪಾತ್ರೆಗೆ ಹೊಡೆಯುತ್ತಾನೆ, ಆದರೆ ಆ ಶಬ್ದವು ಉದ್ದಕ್ಕೂ ಹೊರಹೊಮ್ಮುವ ಮೊದಲೇ ಇನ್ನೊಬ್ಬನು ಆ ಪಾತ್ರೆಗೆ ತಟ್ಟುತ್ತಾನೆ. ಇದರಿಂದಾಗಿ ಅದರ ಹಿಂದಿನ ಶಬ್ದವು ಅಳಿಯುತ್ತದೆ, ತಡೆಯಲ್ಪಡುತ್ತದೆ. ಹೀಗಾಗಿ ಅದು ಹಿತ್ತಾಳೆ ಶಬ್ದದ ಸ್ವಭಾವ ಪ್ರಕಟಿಸಿತೇ?
ಇಲ್ಲ ಭಂತೆ.
ಆದರೆ ಮಹಾರಾಜ, ಇದರಲ್ಲಿ 2ನೇಯ ಶಬ್ದವು, ತನ್ನ ಸ್ವಭಾವದಿಂದ ಮೊದಲನೆಯದಕ್ಕೆ ಭಿನ್ನವೇ?
ತಟ್ಟಿದ್ದರಿಂದಾಗಿ ಅದು ಮಧ್ಯೆಯಲ್ಲಿ ತಡೆಯಲ್ಪಟ್ಟಿತ್ತು ಆದ್ದರಿಂದಾಗಿ ಭಂತೆ ಶಬ್ದವು ಅಳಿಯಿತು.
ಅದೇರೀತಿಯಲ್ಲಿ ಓ ಮಹಾರಾಜ, ಯಾವುದೆಲ್ಲವೂ ಅದರ ಕಾಲಕ್ಕೆ ಮುಂಚೆಯೇ ಅಳಿಯುತ್ತದೋ, ಅದಕ್ಕೆ ಅಕಾಲವೆನ್ನುವರು. ಅಕಾಲ ಮೃತ್ಯುವು ಕೆಲವು ರೋಗದ ಪರಿಣಾಮದಿಂದಾಗಬಹುದು. ಅದೆಂದರೆ ಅತಿವಾತ, ಅತಿಪಿತ್ತ, ಅತಿಕಫ, ಈ ಮೂರರ ಮಿಶ್ರಣದಿಂದ, ತಾಪದ ವೈಪರೀತ್ಯದಿಂದಾಗಿ ಅಥವಾ ಪರರಿಂದ ಅಥವಾ ಹಸಿವು, ಬಾಯಾರಿಕೆ, ಅಗ್ನಿ, ಜಲದಿಂದ ಅಥವಾ ವಿಷ ಅಥವಾ ಶಸ್ತ್ರದಿಂದ ಮರಣಿಸಬಹುದು, ಇದೇ ಓ ಮಹಾರಾಜ, ಅಕಾಲ ಮೃತ್ಯುವಿಗೆ ಕಾರಣವಾಗಿದೆ.
ಮತ್ತೆ ಓ ಮಹಾರಾಜ, ಇದು ಹೇಗೆಂದರೆ ಧಾನ್ಯದ ಬೀಜದಂತೆ, ಅದನ್ನು ಹೊಲದಲ್ಲಿ ಬಿತ್ತಿ, ಮಳೆಯ ನೀರು ಸಕಾಲಕ್ಕೆ, ಸರಿಪ್ರಮಾಣದಲ್ಲಿ ಸಿಕ್ಕಿ, ಯಾವುದೇ ಕೊರತೆಯಿಲ್ಲದೆ ಅಥವಾ ಯಾವುದೇ ತೊಂದರೆಯಿಲ್ಲದೆ ಬೆಳೆದು ಅದು ಸಹಾ ಧಾನ್ಯ ನೀಡುತ್ತದೆ. ಕಾಲಕ್ಕೆ ಸರಿಯಾಗಿ ಬೆಳೆಯುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಒಬ್ಬನು ದೀರ್ಘಕಾಲ ಜೀವಿಸಿ, ಯಾವುದೇ ರೋಗವಿಲ್ಲದೆ, ತೊಂದರೆಯಿಲ್ಲದೆ ವೃದ್ಧಾಪ್ಯ ಕಳೆದು ಮರಣಿಸುತ್ತಾನೆ. ಕಾಲಮರಣ ಪಡೆಯುತ್ತಾನೆ. ಆದರೆ ಇಲ್ಲಿ ಧಾನ್ಯದ ಬೀಜವೊಂದು ಮೊಳಕೆ ಒಡೆದು, ಬೆಳೆದು, ಮಳೆ ಇಲ್ಲದೆ ಅಥವಾ ನೀರು ಇಲ್ಲದೆ ಸಾಯುತ್ತದೆ ಅಥವಾ ಕಳೆಯಿಂದ ಅಥವಾ ರೋಗದಿಂದ ಮರಣಿಸುತ್ತದೆ. ಅದು ತನ್ನ ಪೂರ್ಣಕಾಲ ಜೀವಿಸಿತೆ?
ಇಲ್ಲ ಭಂತೆ.
ಆದರೆ ಓ ಮಹಾರಾಜ, ಇದರಲ್ಲಿ 2ನೆಯ ಬೆಳೆ ಸ್ವಭಾವದಲ್ಲಿ ಮೊದಲನೆಯದಕ್ಕಿಂತ ಭಿನ್ನವಾಗಿತ್ತೇ?
ಭಂತೆ, ತಾಪ ವೈಪರೀತ್ಯ ಇತ್ಯಾದಿ ಕಾರಣದಿಂದಾಗಿ ಆ ಬೆಳೆಯು ನಾಶವಾಯಿತು.
ಅದೇರೀತಿಯಾಗಿ ಓ ಮಹಾರಾಜ, ಯಾರೇ ಆಗಲಿ, ಅಕಾಲ ಮೃತ್ಯು ಹೊಂದಿದರೆ ಅದಕ್ಕೆ ರೋಗಾದಿ ಕಾರಣಗಳು ಇರುತ್ತವೆ. ಹೇಳುವುದಾದರೆ, ವಾತದೋಷ, ಪಿತ್ತದೋಷ, ಕಫದೋಷ, ತ್ರಿದೋಷ, ತಾಪ ವೈಪರೀತ್ಯ ದೋಷ, ಪರದೋಷ, ಹಸಿವು, ಬಾಯಾರಿಕೆ, ಅಗ್ನಿ, ಜಲ, ಶಸ್ತ್ರ, ವಿಷ ಇವುಗಳಲ್ಲಿ ಯಾವುದಾದರೂ ಒಂದರಿಂದಲೂ ಸಹಾ ಅಕಾಲಮರಣ ಉಂಟಾಗುತ್ತದೆ.
ಮತ್ತೆ ಓ ರಾಜ, ನೀವು ಕೇಳಿರಲೇಬಹುದು. ಹೊಸ ಬೆಳೆಯು ತೆನೆಯನ್ನು ನೀಡುವ ಹೊತ್ತಿಗೆ ಹುಳುಗಳು ಉತ್ಪನ್ನವಾಗಿ ಅದರ ಬೇರುಗಳೆಲ್ಲಾ ನಾಶವಾಗಿರುವುದನ್ನು ನೀವು ಕಂಡಿರಬಹುದು?
ಹೌದು ಭಂತೆ, ನಾವೆಲ್ಲಾ ಕಂಡಿದ್ದೇವೆ.
ಸರಿ, ಓ ಮಹಾರಾಜ, ಅಲ್ಲಿ ಬೆಳೆ ನಷ್ಟವಾಗಿರುವುದು ಸಕಾಲದಲ್ಲೋ ಅಥವಾ ಅಕಾಲದಲ್ಲೋ?
ಅಕಾಲದಲ್ಲಿ ಭಂತೆ, ಖಂಡಿತವಾಗಿ ಆ ಹುಳುಗಳು ಆ ಬೆಳೆಯನ್ನು ನಷ್ಟಗೊಳಿಸದಿದ್ದಲ್ಲಿ ಅದು, ಸುಗ್ಗಿಕಾಲದವರೆಗೆ ಇರುತ್ತಿತ್ತು.
ಹಾಗಾದರೆ ಓ ಮಹಾರಾಜ, ಆ ಬೆಳೆಗೆ ಮಧ್ಯದಲ್ಲಿ ಅಡಚಣೆಯಾಗದಿದ್ದಲ್ಲಿ, ರೋಗ ಬರದಿದ್ದಲ್ಲಿ ಅದು ಸುಗ್ಗಿಯ ಕಾಲದವರೆಗೂ ಇರುತ್ತಿತ್ತೇ?
ಹೌದು ಭಂತೆ.
ಅದೇರೀತಿಯಾಗಿ ಓ ಮಹಾರಾಜ, ಯಾರೆಲ್ಲ ಅಕಾಲ ಮರಣಕ್ಕೆ ತುತ್ತಾಗುತ್ತಿರುವರೋ ಅವರೆಲ್ಲಾ ಕೆಲವು ರೋಗಕ್ಕೆ ತುತ್ತಾಗಿ ಹೀಗಾಗುತ್ತಿರುವುದು ಉದಾಹರಿಸುವುದಾದರೆ ವಾತದೋಷ ಅಥವಾ ಪಿತ್ತದೋಷ ಅಥವಾ ಕಫದೋಷ ಅಥವಾ ತ್ರಿದೋಷ, ಅಥವಾ ಹವಾಮಾನ ವೈಪರೀತ್ಯ ಅಥವಾ ಪರರಿಂದ, ಅಥವಾ ಹಸಿವು ಅಥವಾ ಬಾಯಾರಿಕೆ, ಅಥವಾ ಶಸ್ತ್ರದಿಂದ ಹೀಗೆ ಓ ಮಹಾರಾಜ, ಇವುಗಳಿಂದಾಗಿ ಒಬ್ಬನು ಮುಂಚೆಯೇ ಮರಣವನ್ನಪ್ಪುವನು.
ಮತ್ತೆ ಓ ಮಹಾರಾಜ, ನೀವು ಇದನ್ನು ಸಹಾ ಕೇಳಿರಬಹುದು. ಯಾವ ತೆನೆಯು ಬೆಳೆದಿದೆಯೋ ಅದು ಕರಕ (ಆಣಿಕಲ್ಲು) ಮಳೆಗೆ ತುತ್ತಾಗಿ, ಅಂದಿನಿಂದ ಆ ಧಾನ್ಯಗಳ ಭಾರಕ್ಕೆ ಬೆಳೆಗಳೇ ಬಾಗಿಬಿಡುತ್ತವೆ.
ಹೌದು ಭಂತೆ, ಅಂತಹ ವಿಷಯ ಕೇಳಿದ್ದೇನೆ ಮತ್ತು ಕಂಡಿದ್ದೇನೆ ಸಹಾ.
ಸರಿ ಓ ಮಹಾರಾಜ, ಆ ಬೆಳೆಯು ಸಕಾಲದಲ್ಲಿ ನಾಶವಾಯಿತೋ ಅಥವಾ ಅಕಾಲದಲ್ಲಿ ನಾಶವಾಯಿತೋ?
ಭಂತೆ ಅಕಾಲದಲ್ಲಿ ನಾಶವಾಯಿತು. ಆ ಆಣಿಕಲ್ಲು ಮಳೆಯು ಬೀಳದಿದ್ದಲ್ಲಿ, ಆ ಬೆಳೆಯು ಸುಗ್ಗಿ ಕಾಲದವರೆಗೂ ಇರುತ್ತಿತ್ತು.
ಏನು, ಓ ಮಹಾರಾಜ, ವಿಪತ್ತಿನಿಂದಾಗಿ ಬೆಳೆಯು ನಷ್ಟವಾಯಿತು. ಆದರೆ ಗಾಯಗಳು ಆಗದಿದ್ದಲ್ಲಿ ಅದು ಸುಗ್ಗಿಯವರೆಗೂ ಉಳಿಯುತ್ತಿತ್ತು ಅಲ್ಲವೇ?
ಹೌದು ಭಂತೆ.
ಅದೇರೀತಿಯಲ್ಲಿ ಓ ಮಹಾರಾಜ, ಯಾರೇ ಆಗಲಿ ಅಕಾಲಮರಣಕ್ಕೆ ತುತ್ತಾದರೆ ಅದು ರೋಗದಿಂದ ಆಗಿರಬಹುದು. ಉದಾಹರಿಸುವುದಾದರೆ ಅತಿಯಾದ ವಾತದೋಷ, ಅತಿಯಾದ ಪಿತ್ತದೋಷ, ಅತಿಯಾದ ಕಫದೋಷ, ತ್ರಿದೋಷ, ತಾಪ ವೈಪರೀತ್ಯ ದೋಷ, ಪರದೋಷ, ಅಗ್ನಿ, ಜಲ, ಶಸ್ತ್ರ, ಹಸಿವೆ, ಬಾಯಾರಿಕೆ ಹೀಗೆ ಇವುಗಳಲ್ಲಿ ಯಾವುದಾದರೂ ಒಂದರಿಂದ ಅದರ ಮೃತ್ಯು ಆಗಿರುತ್ತದೆ. ಈ ಕಾರಣಗಳಿಂದಲೇ ಅವರು ಅಕಾಲ ಮೃತ್ಯುವಪ್ಪಿರುತ್ತಾರೆ.
ಅದ್ಭುತ ಭಂತೆ ನಾಗಸೇನ, ಆಶ್ಚರ್ಯ ಭಂತೆ ನಾಗಸೇನ, ಬಹು ವಿವರವಾಗಿ ಚೆನ್ನಾಗಿ ವಿವರಿಸಿದಿರಿ. ಕಾರಣಸಹಿತ, ಉಪಮೆಗಳ ಜೊತೆಗೆ, ನೀವು ಮೃತ್ಯು ಹೇಗೆ ಸಂಭವಿಸುತ್ತದೆ ಎಂದು ತೋರಿಸಿದಿರಿ, ಸ್ಪಷ್ಟೀಕರಿಸಿದಿರಿ, ಸಾಕ್ಷಿ ತೋರಿಸಿದಿರಿ. ಮೂಢನೊಬ್ಬನು ಸಹಾ ಭಂತೆ ನಿಮ್ಮ ಈ ಉಪಮೆ ಸಹಿತ ವಿವರಣೆಯಿಂದ ಅಕಾಲ ಮೃತ್ಯುವಿನ ಬಗ್ಗೆ ಅರಿಯುತ್ತಾನೆ. ಇನ್ನೂ ಸಮರ್ಥನ ಬಗ್ಗೆ ಹೇಳಬೇಕಿಲ್ಲ. ನಾನು ನಿಮ್ಮ ಮೊದಲ ಉಪಮೆಗೆ ಒಪ್ಪಿದೆನು, ಅರ್ಥಮಾಡಿಕೊಂಡೆನು. ಆದರೂ ಸಹಾ ಇನ್ನಷ್ಟು ಉಪಮೆಗಳು ಮತ್ತು ಇನ್ನಷ್ಟು ಪರಿಹಾರ ಮಾರ್ಗಗಳು ಹೊರಹೊಮ್ಮಲೆಂದು ನಾನು ಆಗ ಒಪ್ಪಲಿಲ್ಲ.
7. ಚೇತಿಪಯ ಪಾಟಿಹಾರಿಯ ಪನ್ಹೋ (ಚೈತ್ಯಗಳ ಪವಾಡದ ಪ್ರಶ್ನೆ)
ಭಂತೆ ನಾಗಸೇನ, ಪರಿನಿಬ್ಬಾಣ ಪಡೆದವರ ಎಲ್ಲರ ಚೈತ್ಯಗಳಲ್ಲಿ (ಸಮಾಧಿ ಮೇಲೆ ಕಟ್ಟಿದ ಪೂಜ್ಯ ಮಂದಿರ) ಪವಾಡ ನಡೆಯುವುದೇ? (181)
ಓ ಮಹಾರಾಜ, ಕೆಲವರ ಚೈತ್ಯದಲ್ಲಿ ಪವಾಡ ನಡೆಯುವುದು, ಆದರೆ ಇತರರಲ್ಲಿಲ್ಲ.ಆದರೆ ಭಂತೆ, ಯಾವುದರಲ್ಲಿ ಪವಾಡ ನಡೆಯುವುದು ಮತ್ತು ಯಾವುದರಲ್ಲಿ ನಡೆಯುವುದಿಲ್ಲ.
ಅದು ದೃಢವಾದ ನಿಧರ್ಾರದಿಂದ ಆಗುವುದು ಓ ಮಹಾರಾಜ, ಮೂರು ರೀತಿ ವ್ಯಕ್ತಿಗಳಿಂದಾಗಿ, ಅರಹಂತರ ಪರಿನಿಬ್ಬಾಣ ನಂತರ ಅದರ ಅವಶೇಷಗಳ ಮೇಲೆ ಕಟ್ಟಡ ಚೇತಿಯದಲ್ಲಿ ಪವಾಡಗಳು ನಡೆಯುವುದು ಮತ್ತು ಆ ಮೂವರು ಯಾರು? ಒಂದು: ಅರಹಂತರು ಇನ್ನೂ ಜೀವಂತವಾಗಿ ಇರುವಾಗಲೇ ದೇವತೆಗಳ ಮತ್ತು ಮಾನವರ ಒಳಿತಿಗಾಗಿ ಅಂತಹ ಪವಾಡಗಳ ಬಗ್ಗೆ ದೃಢ ನಿಶ್ಚಯ ಮಾಡುತ್ತಾರೆ: ಇಂತಿಂಥ ಪವಾಡಗಳು ನನ್ನ ಚೇತಿಯಾದಲ್ಲಿ ನಡೆಯಲಿ ಮತ್ತು ಆ ಕಾರಣದಿಂದಾಗಿ ಅಲ್ಲಿ ಅದ್ಭುತಗಳು ನಡೆಯುವುವು. ಹೀಗೆ ಕಶ್ಮಲಮುಕ್ತರಾದ ಅರಹಂತರ ದೃಢನಿಧರ್ಾರದಿಂದಾಗಿ ಅಲ್ಲಿ ಆ ಅದ್ಭುತಗಳು ಜರುಗುವುವು.
ಮತ್ತೆ ಓ ಮಹಾರಾಜ, ಪರಿಶುದ್ಧವಾದ ಅರಹಂತರ ಚೇತಿಯದಲ್ಲಿ ದೇವತೆಗಳ ಅನುಕಂಪದಿಂದಾಗಿಯು ಪವಾಡಗಳು ನಡೆಯುತ್ತದೆ. ಅವರು ಆಗ ಹೀಗೆ ಚಿಂತಿಸಿ ದೃಢನಿಶ್ಚಯ ತಾಳುತ್ತಾರೆ. ಈ ಅದ್ಭುತದಿಂದಾಗಿ ಮಾನವರಲ್ಲಿ ಮತ್ತು ಈ ಭೂಮಿಯಲ್ಲಿ ನಿಜವಾದ ಶ್ರದ್ಧೆಯು ಸದಾ ಸ್ಥಿರವಾಗಿ ಸ್ಥಾಪಿಸಲಿ ಮತ್ತು ಶ್ರದ್ಧೆಯು ಅನುಗ್ರಹದಲ್ಲಿ ವಿಕಸಿತವಾಗಲಿ. ಹೀಗೆ ದೇವತೆಗಳಿಂದಾಗಿ ಅರಹಂತರ ಅದ್ಭುತಗಳು ಜರುಗುತ್ತದೆ.
ಮತ್ತೆ ಓ ಮಹಾರಾಜ, ಕೆಲವು ಸ್ತ್ರೀಯರು ಅಥವಾ ಪುರುಷರು ಯಾರು ಸಮರ್ಥರೋ, ಪ್ರಜ್ಞಾವಂತರೋ, ಜ್ಞಾನಿಗಳೋ, ಶ್ರದ್ಧಾವಂತರೋ ಅವರು ಉದ್ದೇಶಪೂರ್ವಕವಾಗಿ ಸೌಗಂಧ ದ್ರವ್ಯಗಳನ್ನು ಅಥವಾ ಹೂಹಾರಗಳನ್ನು ಅಥವಾ ಬಟ್ಟೆಯನ್ನು ತೆಗೆದುಕೊಂಡು ಚೇತಿಯಾದ ಮೇಲಿಟ್ಟು ಈ ರೀತಿ ಸಂಕಲ್ಪ ಮಾಡುತ್ತಾರೆ: ಇಂತಿಂಥ ಪವಾಡಗಳು (ಅದ್ಭುತಗಳು) ನಡೆಯುವಂತಾಗಲಿ. ಹೀಗೆ ಅರಹಂತರ ಚೇತಿಯದಲ್ಲಿ ಮಾನವರ ಸಂಕಲ್ಪದಿಂದಾಗಿ ಅದ್ಭುತಗಳು ನಡೆಯುತ್ತದೆ.
ಓ ಮಹಾರಾಜ, ಹೀಗೆ ಈ ಮೂರು ವ್ಯಕ್ತಿಗಳಿಂದಾಗಿ ಅರಹಂತರ ಚೇತಿಯಾದಲ್ಲಿ ಪವಾಡಗಳು ಸಂಭವಿಸುತ್ತವೆ ಮತ್ತು ಯಾವಾಗ ಈ ರೀತಿ ದೃಢಸಂಕಲ್ಪಗಳು ಯಾರಿಂದಲೂ ಮಾಡುವುದಿಲ್ಲವೋ ಆಗ ಅಂತಹ ಅರಹಂತರ ಚೇತಿಯಗಳಲ್ಲಿ ಪವಾಡಗಳು ನಡೆಯುವುದಿಲ್ಲ. ಅಷ್ಟೇ ಅಲ್ಲ, ದೃಢಸಂಕಲ್ಪ ಮಾಡಿರದ ಘಟಭಿಜ್ಞಾ ಸಂಪನ್ನರಾದ ಅರಹಂತರ ಚೇತಿಯದಲ್ಲೂ ಅದ್ಭುತ ನಡೆಯಲಾರದು. ದೃಢಸಂಕಲ್ಪಕ್ಕೆ ಅಷ್ಟು ಮಹಾನ್ ಶಕ್ತಿಯಿದೆ. ಆದರೆ ಮಹಾರಾಜ ಅಂತಹ ಅದ್ಭುತ ಕಾಣದೆ ಇದ್ದಾಗಲೂ ಸಹಾ ಅರಹಂತರ ಪರಿಶುದ್ಧ ಜೀವನ, ಚಾರಿತ್ರ್ಯ ನೆನೆಸಿಕೊಂಡು ಶ್ರದ್ಧೆಯಿಂದ ಗೌರವಾದಿಗಳನ್ನು ಅಪರ್ಿಸಬೇಕು. ಹೇಗೆಂದರೆ: ಖಂಡಿತವಾಗಿಯೂ ಈ ಬುದ್ಧಪುತ್ರರು ಸುಪರಿನಿಬ್ಬಾಣವನ್ನು ಪಡೆದಿದ್ದಾರೆ.
ಸಾಧು ಭಂತೆ ನಾಗಸೇನ, ತಾವು ಹೇಳುವ ಈ ವಿವರಣೆಯನ್ನು ನಾನು ಮನಃಪೂರ್ವಕವಾಗಿ ಒಪ್ಪುತ್ತೇನೆ.
8. ಧಮ್ಮಾಭಿಸಮಯ ಪನ್ಹೋ (ಯಾರಿಗೆ ಧಮ್ಮ ಸಾಕ್ಷಾತ್ಕಾರವಾಗುತ್ತದೆ ಎಂಬ ಪ್ರಶ್ನೆ)
ಭಂತೆ ನಾಗಸೇನ, ಯಾರೆಲ್ಲರೂ ಯೋಗ್ಯವಾದ ಜೀವನದಿಂದಾಗಿ ನೇರವಾಗಿ ಜೀವಿಸುತ್ತಿರುವರೋ ಅವರೆಲ್ಲರೂ ಸಹಾ ಧಮ್ಮದ ಸಾಕ್ಷಾತ್ಕಾರ ಪಡೆಯುವರೇ? ಅಥವಾ ಕೆಲವರು ಪಡೆಯುವುದಿಲ್ಲವೇ? (182)
ಹಲವರು ಪಡೆಯುತ್ತಾರೆ ಓ ಮಹಾರಾಜ ಮತ್ತು ಹಲವರು ಪಡೆಯಲಾರರು?
ಹಾಗಾದರೆ ಯಾರು ಪಡೆಯುತ್ತಾರೆ ಭಂತೆ ಮತ್ತು ಯಾರು ಇಲ್ಲ?
ಯಾರು ಪ್ರಾಣಿಯಾಗಿರುವರೋ ಓ ಮಹಾರಾಜ, ಅದು ತನ್ನ ಜೀವನವನ್ನು ಎಷ್ಟೋ ಯೋಗ್ಯವಾಗಿ ಜೀವಿಸಿದರೂ ಸಹಾ ಅದಕ್ಕೆ ಧಮ್ಮ ಸಾಕ್ಷಾತ್ಕಾರವಾಗಲಾರದು. ಹಾಗೆಯೇ ಪ್ರೇತವಾಗಿ ಜನಿಸಿದವರಿಗೆ ಹಾಗೆಯೇ ಮಿಥ್ಯಾದೃಷ್ಟಿಯುಳ್ಳವರಿಗೆ, ಮೋಸಗಾರರಿಗೆ, ಮಾತೃಹಂತಕರಿಗೆ, ಪಿತೃಹಂತಕರಿಗೆ, ಅರಹಂತ ಹಂತಕರಿಗೆ, ಸಂಘಬೇಧಕರಿಗೆ, ಬುದ್ಧರಿಗೆ ಗಾಯ ಅಥವಾ ರಕ್ತ ತರಿಸಿದವರಿಗೆ, ಭಿಕ್ಷು ವೇಷಧಾರಿಯಾಗಿರುವ ವಂಚಕರಿಗೆ, ಪರಮತದಲ್ಲೇ ಆನಂದಿಸುವವನಿಗೆ, ಭಿಕ್ಷುಣಿಗೆ ಬಲಾತ್ಕಾರ ಮಾಡಿದವನಿಗೆ, ಪಾರಾಜಿಕ ತಪ್ಪನ್ನು ಮಾಡಿಯೂ ಅದನ್ನು ಸಂಘದಿಂದ ಮುಚ್ಚಿಡುವವನಿಗೂ, ನಪುಂಸಕರಿಗೂ, ದ್ವಿಲಿಂಗಿಗೂ, ಹಾಗೆಯೇ ಏಳು ವರ್ಷದ ಒಳಗಿನ ಮಗುವಿಗೂ ಧಮ್ಮ ಸಾಕ್ಷಾತ್ಕಾರವಾಗುವುದಿಲ್ಲ. ಹೇಗೆ ಇವರೆಲ್ಲರೂ ಎಷ್ಟೇ ಯೋಗ್ಯವಾಗಿ ಜೀವಿಸಲು, ಅವರಿಗೆ ಧಮ್ಮ ಸಾಕ್ಷಾತ್ಕಾರವಾಗುವುದಿಲ್ಲ. ಈ 16 ವ್ಯಕ್ತಿಗಳಿಗೆ ಯಾವರೀತಿಯ ಲೋಕೋತ್ತರ ಫಲವು ಸಿಗಲಾರದು. ಅವರು ಯೋಗ್ಯವಾಗಿ ಜೀವಿಸಿದರೂ ಸಿಗಲಾರದು ಮಹಾರಾಜ.
ಭಂತೆ ನಾಗಸೇನ, ನೀವು ಹೇಳಿದ ಮೊದಲ 15 ವ್ಯಕ್ತಿಗಳಿಗೆ ಧಮ್ಮ ಸಾಕ್ಷಾತ್ಕಾರವಾಗಬಹುದು ಅಥವಾ ನೀವು ಹೇಳಿದಂತೆಯೇ ಸಾಕ್ಷಾತ್ಕಾರವಾಗಲಾರದು. ಇದನ್ನು ನಾನು ಒಪ್ಪುತ್ತೇನೆ. ಆದರೆ ಯಾವ ಕಾರಣದಿಂದಾಗಿ 16ನೆಯ ವ್ಯಕ್ತಿಯಾದ ಮಗುವು ಏಳನೆಯ ವರ್ಷದ ಒಳಗಿದ್ದರೆ, ಯೋಗ್ಯಜೀವನ ನಡೆಸಿಯೂ ಏಕೆ ಧಮ್ಮ ಸಾಕ್ಷಾತ್ಕಾರ ಪಡೆಯಲಾರದು? ಇದು ಜಟಿಲವಾಗಿಯೇ ಇದೆ. ಸಾಮಾನ್ಯವಾಗಿ ಮಗುವಿನಲ್ಲಿ ಭಾವೋದ್ರೇಕವಾಗಲಿ, ದ್ವೇಷವಾಗಲಿ, ಮೋಹವಾಗಲಿ, ಅಹಂಕಾರವಾಗಲಿ, ಅತೃಪ್ತಿಯಾಗಲಿ, ನಾಸ್ತಿಕತೆಯಾಗಲಿ, ರಾಗವಾಗಲಿ ಇರಲಾರದು. ಯಾರನ್ನು ನಾವು ಕಶ್ಮಲಮುಕ್ತರೂ ಎನ್ನುವೆವೋ ಅದಕ್ಕೆ ಜೀವಂತ ಸಾಕ್ಷಿಯು ಮಗುವು. ಹೀಗಿರುವಾಗ ಅದು ಅರ್ಯಸತ್ಯದ ಕ್ಷಣಿಕ ದರ್ಶನವನ್ನು ಪಡೆಯಲಾರದೆ?
ಅದಕ್ಕೆಲ್ಲಾ ಕಾರಣಗಳಿವೆ ಮಹಾರಾಜ, ನಾನು ಹೇಳುವುದೇನೆಂದರೆ ಮಗುವು ಏಳು ವರ್ಷಕ್ಕೆ ಒಳಗಿದ್ದರೆ ಆಸೆಪಡುವ ವಿಷಯಗಳಿಗೆ ಆಸೆಪಡುತ್ತದೆ ಮತ್ತು ಕ್ರುದ್ಧನಾಗುವ ವಿಷಯಗಳಿಗೆ ತಪ್ಪಾಗಿಯೇ ಹೋಗುತ್ತದೆ. ತಪ್ಪುಹಾದಿಗೆ ಕರೆದೊಯ್ಯುವೆಡೆಗೆ ಮೂಢವಾಗುತ್ತದೆ. ಉನ್ಮತ್ತವಾಗುವ ವಿಷಯಗಳ ಬಗ್ಗೆ ಹುಚ್ಚಾಗುವಂತೆ ಆಡುತ್ತದೆ. ಯಾವಾಗ ಮಗುವು ಮಿಥ್ಯಾಧಮ್ಮಗಳನ್ನು ಸರಿಯಾಗಿ ಅರಿಯುವುದೋ ಯಾವಾಗ ಅದು ತೃಪ್ತಿ ಮತ್ತು ಅತೃಪ್ತಿ ಅರಿಯುವುದೋ, ಅವುಗಳ ವ್ಯತ್ಯಾಸ ಅರಿಯುವುದೋ ಯಾವಾಗ ಅದು ಶೀಲ ಮತ್ತು ದುಶ್ಶೀಲತೆಗಳ ಬಗ್ಗೆ ಸ್ಪಷ್ಟವಾಗಿ ಅರಿಯುವುದೋ, ಆಗ ಮಾತ್ರ ಅದಕ್ಕೆ ಪ್ರಜ್ಞಾ ಸಾಧ್ಯವಾಗುತ್ತದೆ. ಆದರೆ ಏಳನೆಯ ವಯಸ್ಸಿನ ಒಳಗಿನ ಮಗುವಿಗೆ ಪ್ರಜ್ಞಾಶಕ್ತಿಯು ಬಲಹೀನವಾಗಿರುತ್ತದೆ, ತೆಳ್ಳಗಿರುತ್ತದೆ, ಮಂಕಾಗಿರುತ್ತದೆ. ಆದರೆ ನಿಬ್ಬಾಣದ ಸಾರಯುತವು ಲೋಕೋತ್ತರವಾಗಿದೆ. ಪ್ರಾಧಾನ್ಯಕರ ವಿಷಯವಾಗಿದೆ. ಘನವಾದುದ್ದಾಗಿದೆ, ವೈಶಾಲ್ಯತೆಯನ್ನು ತಲುಪುವುದ್ದಾಗಿದೆ ಮತ್ತು ವ್ಯಾಪಕತೆಯದ್ದಾಗಿದೆ. ಆದ್ದರಿಂದ ಓ ಮಹಾರಾಜ, ಮಗುವು ಅಪರಿಪಕ್ವ ಮನಸ್ಸನ್ನು ಹೊಂದಿರುತ್ತದೆ. ಅದು ಪರಮಶ್ರೇಷ್ಠತೆಯನ್ನು ಹಿಡಿಯಲು ಅಸಮರ್ಥವಾಗಿರುತ್ತದೆ. ಇದು ಹೇಗೆಂದರೆ ಓ ಮಹಾರಾಜ, ಪರ್ವತಗಳ ರಾಜನಾದ ಸಿನೇರು, ಅತ್ಯಂತ ಘನವಾಗಿರುತ್ತದೆ, ಬಹು ಭಾರಯುತವಾಗಿರುತ್ತದೆ, ವಿಸ್ತಾರದಿಂದ ಕೂಡಿರುತ್ತದೆ ಮತ್ತು ಬೃಹತ್ ಆಕಾರದಿಂದಿರುತ್ತದೆ. ಅದನ್ನು ಸಾಧಾರಣ ಬಲದ ಮನುಷ್ಯನು ಆ ಮಹಾಪರ್ವತವನ್ನು ಬುಡಮೇಲು ಮಾಡುವನೇ?
ಖಂಡಿತವಾಗಿ ಇಲ್ಲ ಭಂತೆ.
ಆದರೆ ಏಕೆ ಇಲ್ಲ.
ಏಕೆಂದರೆ ಮಾನವನ ಬಲಹೀನತೆ ಮತ್ತು ಸಿನೇರು ಮಹಾ ಪರ್ವತದ ಬೃಹತ್ತತೆ ಆಗಿದೆ.
ಅದೇರೀತಿಯಲ್ಲಿ ಓ ಮಹಾರಾಜ, ಶಿಶುವಿನ ಚಿತ್ತವು ಮಹಾ ನಿಬ್ಬಾಣವನ್ನು ಅರಿಯಲಾರದು.
ಮತ್ತೆ ಇದು ವಿಸ್ತಾರವಾದ ಭೂಮಿಯಂತೆ ಓ ಮಹಾರಾಜ, ಉದ್ದವಾಗಿಯೂ ಮತ್ತು ಅಗಲವಾಗಿಯೂ ಇದೆ. ವಿಸ್ತಾರದಲ್ಲೂ ಮತ್ತು ವ್ಯಾಪಕತೆಯಲ್ಲೂ ಅಗಲವಾದುದು ಮತ್ತು ಬೃಹತ್ ಆಗಿರುವುದು. ಅಂತಹುದಕ್ಕೆ ಚಿಕ್ಕ ನೀರಿನ ಹನಿಯು ತೇವ ತರುವುದೇ? ಮತ್ತು ವಿಶಾಲಧರೆಗೆ ಕೆಸರನ್ನುಂಟು ಮಾಡುವುದೇ?
ಖಂಡಿತವಾಗಿ ಇಲ್ಲ ಭಂತೆ.
ಆದರೆ ಏಕಿಲ್ಲ ಓ ರಾಜ.
ಏಕೆಂದರೆ ಅತ್ಯಲ್ಪ ನೀರಿನ ಹನಿಯಾಗಿದ್ದರಿಂದ ಮತ್ತು ಬೃಹತ್ ವಿಸ್ತಾರವುಳ್ಳ ಪೃಥ್ವಿಯು ಇರುವುದರಿಂದಾಗಿ ಸಾಧ್ಯವಿಲ್ಲ.
ಓ ಮಹಾರಾಜ, ಅದೇರೀತಿಯಲ್ಲಿ ಮಗುವಿನ ಮನಸ್ಸು ಮತ್ತು ನಿಬ್ಬಾಣದ ಸಂಬಂಧವಾಗಿದೆ.
ಮತ್ತೆ ಓ ಮಹಾರಾಜ, ಊಹಿಸಿ. ಒಂದು ದುರ್ಬಲವಾದ ಅಶ್ಯಕ್ತ, ಚಿಕ್ಕ, ಪರಿಮಿತ, ಮಂದವಾದ ಅಗ್ನಿಯು ತನ್ನ ಬೆಳಕಿನಿಂದಾಗಿ ದೇವತೆಗಳ ಮತ್ತು ಮಾನವರ ಇಡೀ ಲೋಕಗಳ ಅಂಧಕಾರವನ್ನು ದೂರೀಕರಿಸುವುದೇ?
ಖಂಡಿತವಾಗಿ ಇಲ್ಲ ಭಂತೆ.
ಆದರೆ ಏಕಿಲ್ಲ ಮಹಾರಾಜ?
ಏಕೆಂದರೆ ಅಗ್ನಿಯ ಮಂದವಾಗಿರುವಿಕೆ ಮತ್ತು ಲೋಕಗಳ ಅತಿವೈಶಾಲ್ಯತೆಯ ಕಾರಣ.
ಅದೇರೀತಿಯಲ್ಲಿ ಓ ಮಹಾರಾಜ, ಏಳನೇ ವಯಸ್ಸಿನ ಒಳಗಿರುವ ಮಗುವಿನ ಮನಸ್ಸು ಬಲಹೀನವಾಗಿರುತ್ತದೆ ಮತ್ತು ದುರ್ಬಲವಾಗಿರುತ್ತದೆ ಮತ್ತು ಅಶಕ್ತವಾಗಿರುತ್ತದೆ, ಪರಿಮಿತವಾಗಿರುತ್ತದೆ. ಅವಿದ್ಯೆಯ ಅಂಧಕಾರದಿಂದಾಗಿ ಅವ್ಯಕ್ತವಾಗಿರುತ್ತದೆ. ಆದ್ದರಿಂದಾಗಿ ಜ್ಞಾನರ ಪ್ರಕಾಶದಲ್ಲಿ ಹೊಳೆಯುವುದು ಕಡುಕಷ್ಟಕರವಾಗಿದೆ. ಇವೆಲ್ಲಾ ಕಾರಣಗಳಿಂದಲೇ ಓ ಮಹಾರಾಜ, ಪುಟ್ಟ ಮಗುವು ಯೋಗ್ಯವಾಗಿ ಜೀವಿಸಿದರೂ ಸಹಾ ಲೋಕೋತ್ತರ ಫಲಗಳು ಪ್ರಾಪ್ತಿಯಾಗಲಾರದು.
ಮತ್ತೆ ಓ ಮಹಾರಾಜ, ಸಾಲಕವು (ಅತಿಚಿಕ್ಕ ಹುಳು/ಕೀಟ) ತನ್ನ ಅತಿ ಸೂಕ್ಷ್ಮ ಶರೀರಕ್ಕೆ ಪ್ರಸಿದ್ಧಿಯಾಗಿದೆ. ಅದು ಮದವೇರಿದ ಬೃಹತ್ ಆನೆಗೆ, ಆ ಆನೆಯಾದರೂ 9 ಗಜ ಉದ್ದ, 3 ಗಜ ಅಗಲ, 7 ಗಜ ಎತ್ತರವಾಗಿದೆ ಮತ್ತು 10 ಗಜ ಸುತ್ತಳತೆಯಾಗಿರುವ ಆನೆಯು ಅದರ ಗುಹೆಯೆಡೆಗೆ ಬರುವಾಗ ಆ ಸಾಲಕವು ಆನೆಯನ್ನು ಎಳೆದು ನುಂಗಲು ಪ್ರಯತ್ನಿಸಿದರೆ ಅದು ಸಾಧ್ಯವೇ? ಸಾಲಕಕ್ಕೆ ಅದು ಸಾಧ್ಯವೇ?
ಖಂಡಿತವಾಗಿ ಇಲ್ಲ ಭಂತೆ.
ಆದರೆ ಏಕೆ ಇಲ್ಲ ಓ ಮಹಾರಾಜ?
ಏಕೆಂದರೆ ಸಾಲಕದ ಸೂಕ್ಷ್ಮ ಶರೀರದಿಂದಾಗಿ ಮತ್ತು ಆನೆಯ ಬೃಹತ್ತತೆಯಿಂದಾಗಿ.
ಅದೇರೀತಿಯಲ್ಲೇ ಪುಟ್ಟ ಮಗುವಿನ ಮನಸ್ಸು ಅಶಕ್ತವಾಗಿರುತ್ತದೆ, ಬಲಹೀನವಾಗಿರುತ್ತದೆ ಮತ್ತು ದುರ್ಬಲವಾಗಿರುತ್ತದೆ, ಪರಿಮಿತವಾಗಿರುತ್ತದೆ, ಕ್ಷುಲ್ಲಕವಾಗಿರುತ್ತದೆ, ಅಸ್ಪಷ್ಟವಾಗಿರುತ್ತದೆ ಮತ್ತು ಮಂದವಾಗಿರುತ್ತದೆ. ಆದರೆ ನಿಬ್ಬಾಣವಾದರೂ ಪರಮ ಉದಾತ್ತವಾದುದು ಮತ್ತು ಲೋಕೋತ್ತರ ಧಮ್ಮವಾಗಿದೆ. ಇವೆಲ್ಲ ಕಾರಣಗಳಿಂದಲೇ 7ಕ್ಕಿಂತ ಕಡಿಮೆ ಆಯುವಿನ ಮಗುವು, ಸಮ್ಮಾಜೀವನ ನಡೆಸಿದರೂ ಅದು ಧಮ್ಮ ಸಾಕ್ಷಾತ್ಕಾರ ಮಾಡಲಾರದು.
ಸಾಧು ಭಂತೆ ನಾಗಸೇನ, ಇದು ಹೀಗಿರುವುದರಿಂದ ನಾನು ಸಹಾ ನೀವು ಹೇಳಿದಂತೆಯೇ ಒಪ್ಪುತ್ತೇನೆ.
9. ಏಕಾಂತ ಸುಖ ನಿಬ್ಬಾಣ ಪನ್ಹೊ (ನಿಬ್ಬಾಣವು ಪೂರ್ಣವಾಗಿ ಸುಖವೇ ಎಂಬ ಪ್ರಶ್ನೆ)
ಭಂತೆ ನಾಗಸೇನ, ಇದು ಹೇಗೆ? ನಿಬ್ಬಾಣವು ಸಂಪೂರ್ಣವಾಗಿ (ಇಡಿಯಾಗಿ) ಪರಮ ಸುಖವೇ ಅಥವಾ ಸ್ವಲ್ಪ ದುಃಖವೇನಾದರೂ ಅದರಲ್ಲಿ ಇದೆಯೇ? (183)
ಓ ಮಹಾರಾಜ, ನಿಬ್ಬಾಣವು ಸಂಪೂರ್ಣವಾಗಿ ಪರಮಸುಖವೇ ಆಗಿದೆ. ಅದರಲ್ಲಿ ದುಃಖವನ್ನು ಮಿಶ್ರಣಗೊಳಿಸದಿರಿ.
ಆದರೆ ಭಂತೆ, ನಿಬ್ಬಾಣವು ಪೂರ್ಣವಾಗಿ ಪರಮಸುಖವೆಂದು ನಾವು ಒಪ್ಪುವುದಿಲ್ಲ. ಈ ವಿಷಯದಲ್ಲಿ ಭಂತೆ ನಾಗಸೇನ, ನಾವು ನಿಬ್ಬಾಣವು ದುಃಖದಿಂದ ಮಿಶ್ರಿತವಾಗಿದೆ ಎಂದೇ ವಾದಿಸುತ್ತೇವೆ ಮತ್ತು ನಮ್ಮ ಈ ದೃಷ್ಟಿಕೋನಕ್ಕೆ ಕಾರಣವಿದೆ. ಏನು ಆ ಕಾರಣ? ಏನೆಂದರೆ ಭಂತೆ ನಾಗಸೇನ, ಯಾರು ನಿಬ್ಬಾಣವನ್ನು ಅನ್ವೇಷಿಸುತ್ತಿರುವರೋ, ಅವರು ಸಾಧನೆ ಮಾಡುವುದನ್ನು ಕಂಡಿದ್ದೇವೆ. ಆದರೂ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಪರಿಶ್ರಮಶೀಲತೆ ಮಾಡುತ್ತಾರೆ, ಅವರು ನಿಂತಿರುವಾಗ, ನಡೆಯುತ್ತಿರುವಾಗ, ಕುಳಿತಿರುವಾಗ, ಮಲಗಿರುವಾಗ ಮತ್ತು ತಿನ್ನುವಾಗ ಸಂಯಮ ವಹಿಸುತ್ತಾರೆ. ನಿದ್ದೆಯನ್ನು ಕಡಿಮೆ ಮಾಡುತ್ತಾರೆ, ಇಂದ್ರೀಯಗಳನ್ನು ಜಯಿಸುತ್ತಾರೆ, ಐಶ್ವರ್ಯವನ್ನು, ಧಾನ್ಯವನ್ನು ತ್ಯಾಗ ಮಾಡುತ್ತಾರೆ ಮತ್ತು ಬಂಧು-ಮಿತ್ರರಿಂದ ಪರಿತ್ಯಾಗ ಮಾಡುತ್ತಾರೆ. ಆದರೆ ಯಾರೆಲ್ಲರೂ ಈ ಲೋಕದಲ್ಲಿ ಆನಂದವಾಗಿರುವರೋ ಮತ್ತು ಸುಖಿಗಳಾಗಿರುವರೋ ಅವರೆಲ್ಲರೂ ಪಂಚೇಂದ್ರಿಯಗಳ ಸುಖಕ್ಕೆ ಅಂಟಿದ್ದಾರೆ. ಅವರೆಲ್ಲರೂ ಸುಂದರವಾದ ದೃಶ್ಯಗಳಲ್ಲಿ ಆನಂದಿತರಾಗುತ್ತಾರೆ. ಇಷ್ಟವಾದ ಕಡೆ ಹೋಗುತ್ತಾರೆ, ಇಂಪಾದ ಶಬ್ದಗಳಲ್ಲಿ ರಮಿಸುತ್ತಾರೆ. ಮೋಜಿನಲ್ಲಿ ಸಂಗೀತ, ಗಾನಗಳಲ್ಲಿ ಯಾವುದೇ ಸಮಯದಲ್ಲಿ ರಮಿಸುವರು. ಹಾಗೆಯೇ ನಾನಾವಿಧವಾದ ಹೂಗಳು, ಫಲಗಳು, ಎಲೆಗಳು, ತೊಗಟೆಗಳು ಮತ್ತು ಬೇರುಗಳು ಇವುಗಳಲ್ಲಿನ ಸುವಾಸನೆಯಲ್ಲಿ ಯಾವುದೇ ಸಮಯದಲ್ಲಿ ರಮಿಸುವರು. ಹಾಗೆಯೇ ನಾನಾಬಗೆಯ ಮೃದುವಾದ, ಗಟ್ಟಿಯಾದ ಆಹಾರಗಳು, ಪಾನಿಯಗಳು, ತಿಂಡಿಗಳು, ಇವುಗಳಲ್ಲಿನ ಸ್ವಾದಿಷ್ಟ ರುಚಿಯನ್ನು ಯಾವಾಗ ಬೇಕಾದರೂ ಸವಿಯಬಹುದು. ಹಾಗೆಯೇ ನಾನಾವಿಧವಾದ ಸುಖಗಳನ್ನು, ಪ್ರಿಯವಾದುದರ, ಕೋಮಲವಾದ ಮತ್ತು ಸೂಕ್ಷ್ಮವಾದ ಅನುಭೂತಿಯನ್ನು ಅವರು ಯಾವಾಗ ಬೇಕಾದರೂ ಅನುಭವಿಸುತ್ತಾರೆ. ಹಾಗೆಯೇ ಅವರು ಇಷ್ಟಪಡುವ ಒಳ್ಳೆಯ ಮತ್ತು ಕೆಟ್ಟ ಶುದ್ಧ ಮತ್ತು ಅಶುದ್ಧ ನಾನಾರೀತಿಯ ಭಾವನೆಗಳು, ಅಭಿಪ್ರಾಯಗಳು ಇವುಗಳಲ್ಲಿ ಅವರು ಯಾವಾಗ ಬೇಕಾದರೂ ಆನಂದಿಸುತ್ತಾರೆ. ಹಾಗೆಯೇ ಅವರು ಯಾವಾಗ ಬೇಕಾದರೂ ಅವನ್ನೆಲ್ಲಾ ನಿಲ್ಲಿಸಬಹುದು. ಆದರೆ ನೀವು ಈ ಆರು ಇಂದ್ರೀಯಗಳನ್ನು ಸಂಯಮಗೊಳಿಸುತ್ತೀರಿ. ಇದರಿಂದಾಗಿ ನೀವು ದೇಹ ಮತ್ತು ಮನಸ್ಸು ಕೆಡಿಸಿಕೊಳ್ಳುವಿರಿ. ಹೀಗಾಗಿ ನೀವು ಅಸುಖ ಮತ್ತು ನೋವನ್ನು ಅನುಭವಿಸುತ್ತೀರಿ. ಅಷ್ಟೇ ಮಾಗಂಡಿಯ ಸನ್ಯಾಸಿಯು ತಥಾಗತರಲ್ಲಿ ದೋಷ ಕಂಡುಹಿಡಿದು ಹೀಗೆ ಹೇಳಲಿಲ್ಲವೇ? ಸಮಣ ಗೋತಮರು ಅಭಿವೃದ್ಧಿಯ ನಾಶಕರು (ಭೂನಹು ಸಮಣೋ ಗೋತಮೋ).
ನಿಬ್ಬಾಣವು ಓ ಮಹಾರಾಜ, ನೋವನ್ನು (ದುಃಖವನ್ನ) ಹೊಂದಿಲ್ಲ. ಅದು ಅಮಿಶ್ರಿತ ಪರಮಸುಖವಾಗಿದೆ ಮತ್ತು ಯಾವುದನ್ನು ನೀವು ದುಃಖ (ನೋವು) ಎಂದು ಕರೆಯುತ್ತಿರುವಿರೋ, ಅದು ನಿಬ್ಬಾಣವಲ್ಲ. ಅದು ಕೇವಲ ನಿಬ್ಬಾಣವನ್ನು ಸಾಕ್ಷಾತ್ಕರಿಸಲು ಬೇಕಾದ ಪ್ರಾರಂಭಿಕ ಅವಸ್ಥೆಯಷ್ಟೆ. ಅದು ನಿಬ್ಬಾಣವನ್ನು ಅನ್ವೇಷಿಸಲು ಬೇಕಾದ ಪ್ರಕ್ರಿಯೆಯಷ್ಟೆ. ಆದರೆ ನಿಬ್ಬಾಣವು ಸ್ವಯಂ ಪರಿಶುದ್ಧವಾದ ಪರಮಸುಖವಾಗಿದೆ ಮತ್ತು ಸರಳವಾಗಿದೆ ಮತ್ತು ಅದರಲ್ಲಿ ಯಾವುದೇರೀತಿಯ ದುಃಖವು ಮಿಶ್ರಿತವಾಗಿಲ್ಲ ಮತ್ತು ನಾನು ನಿಮಗೆ ಇದರ ಬಗ್ಗೆ ವಿವರಿಸುವೆ ಮಹಾರಾಜ, ಚಕ್ರವತರ್ಿಯ ಸುಖ ಅಥವಾ ರಾಜಸುಖ ಎಂಬುದು ಇದೆಯೇ?
ಖಂಡಿತವಾಗಿ ಇದೆ ಭಂತೆ.
ಮತ್ತು ಅದರಲ್ಲಿ ದುಃಖವು ಮಿಶ್ರಿತವಾಗಿಲ್ಲವೆ ಮಹಾರಾಜ ?
ಇಲ್ಲ ಭಂತೆ.
ಆದರೆ ಹಾಗಿದ್ದರೆ ಓ ಮಹಾರಾಜ, ಏತಕ್ಕಾಗಿ ಗಡಿಪ್ರಾಂತ್ಯಗಳು ಭುಗಿಲೆದ್ದು ದಂಗೆಯೇಳುತ್ತಾರೆ. ಆಗ ಮತ್ತೆ ಏಕೆ ಅವುಗಳನ್ನು ಅಡಗಿಸಿ ನಿಯಂತ್ರಣಕ್ಕೆ ತರುತ್ತಾರೆ. ಏತಕ್ಕಾಗಿ ಅವರು ತಮ್ಮ ಮನೆಗಳೆಲ್ಲವನ್ನು ಬಿಟ್ಟು, ಮಂತ್ರಿ, ಸೇನಾನಿಗಳ, ಸೈನಿಕರ ಮತ್ತು ಅಂಗರಕ್ಷಕರ ಸಹಿತ ಸಮವಾದ ಮತ್ತು ವಿಷಮವಾದ ಭೂಮಿಗಳನ್ನು ದಾಟುತ್ತ ಸೊಳ್ಳೆಗಳು, ಕೀಟಗಳು, ಬಿಸಿಗಾಳಿ, ಬಿಸಿಲು ಮತ್ತು ಭೀಕರ ಯುದ್ಧಗಳಲ್ಲಿ ತೊಡಗುತ್ತ ಸಾವಿನಂತಹ ದುಃಖವನ್ನು ಏತಕ್ಕೆ ಅನುಭವಿಸುತ್ತಾರೆ.
ಭಂತೆ ನಾಗಸೇನ, ಅದು ರಾಜಸುಖವಲ್ಲ, ಅದು ಕೇವಲ ರಾಜ ಸುಖಕ್ಕೆ ಪ್ರಾಥಮಿಕ ಹಂತವಾಗಿದೆ ಅಷ್ಟೆ. ಹೇಗೆ ಅವರು ನೋವು, ಕಷ್ಟಗಳನ್ನು ದಾಟಿಯೇ ಅವರು ರಾಜಸುಖವನ್ನು ಪಡೆಯುತ್ತಾರೆ. ನಂತರ ಅವರು ಆ ಸುಖ ಸೌಭಾಗ್ಯಗಳನ್ನೆಲ್ಲಾ ಅನುಭವಿಸುತ್ತಾರೆ ಮತ್ತು ಭಂತೆ ನಾಗಸೇನ, ಆ ಸುಖವು ನೋವಿನಿಂದ ಅಮಿಶ್ರಿತವಾಗಿದೆ, ಏಕೆಂದರೆ ರಾಜಸುಖದ ವಿಷಯವೇ ಒಂದು ಮತ್ತು ದುಃಖ (ನೋವು) ಇನ್ನೊಂದು ವಿಷಯವಾಗಿದೆ.
ಅದೇರೀತಿಯಲ್ಲಿ ಓ ಮಹಾರಾಜ, ನಿಬ್ಬಾಣವು ಸಂಪೂರ್ಣ ಪರಮಸುಖವಾಗಿದೆ ಮತ್ತು ಅದರಲ್ಲಿ ಯಾವುದೇ ನೋವು ಮಿಶ್ರಿತವಾಗಿಲ್ಲ. ಯಾರು ನಿಬ್ಬಾಣದ ಅನ್ವೇಷಣೆಯಲ್ಲಿ ಹೋಗುವರು, ಅವರಿಗೆ ಸ್ವಲ್ಪ ದೇಹ ಮತ್ತು ಮನಸ್ಸಿಗೆ ತೊಂದರೆಯಾಗಬಹುದು. ಇದು ನಿಜವೇ, ಏಕೆಂದರೆ ಅವರು ನಿಂತಾಗ, ನಡೆಯುವಾಗ, ಕುಳಿತಿರುವಾಗ, ಮಲಗಿರುವಾಗ ನಿಯಂತ್ರಿಸಿಕೊಳ್ಳುತ್ತಿರುತ್ತಾರೆ. ಅಹಾರದಲ್ಲಿ ಮಿತಿ ವಹಿಸುತ್ತಾರೆ. ನಿದ್ರೆಯನ್ನು ಕಡಿತಗೊಳಿಸುತ್ತಾರೆ, ಇಂದ್ರಿಯಗಳನ್ನು ವಶೀಕರಿಸುತ್ತಾರೆ ಮತ್ತು ತಮ್ಮ ದೇಹ ಮತ್ತು ಜೀವವನ್ನು ಅದಕ್ಕಾಗಿ ತೊರೆಯುತ್ತಾರೆ. ಆದರೆ ಅವರು ಹೀಗೆ ಸುಖ ತ್ಯಜಿತರಾಗಿ, ನೋವು ಸ್ವೀಕರಿಸಿಯೇ ನಿಬ್ಬಾಣ ಸಾಧಿಸುತ್ತಾರೆ. ನಂತರ ಅವರು ಕೇವಲ ನಿಬ್ಬಾಣದ ಅಮಿಶ್ರಿತ ಪರಮಸುಖವನ್ನು ಅನುಭವಿಸುತ್ತಾರೆ. ಹೇಗೆ ಚಕ್ರವತರ್ಿಯು ತಮ್ಮ ಎಲ್ಲಾ ಶತ್ರುಗಳನ್ನು ಕುಗ್ಗಿಸಿ ರಾಜ್ಯ ಸುಖವನ್ನು ಅನುಭವಿಸುತ್ತಾನೋ ಅದೇರೀತಿಯಲ್ಲಿ ಓ ಮಹಾರಾಜ, ನಿಬ್ಬಾಣವು ಇಡಿಯಾಗಿ ಪರಮಸುಖವಾಗಿದೆ ಮತ್ತು ಅದರಲ್ಲಿ ಯಾವುದೇ ದುಃಖವು ಮಿಶ್ರಿತವಾಗಿಲ್ಲ. ಏಕೆಂದರೆ ನಿಬ್ಬಾಣವೇ ಒಂದು ವಿಷಯವಾಗಿದೆ ಮತ್ತು ದುಃಖವೇ ಇನ್ನೊಂದು ವಿಷಯವಾಗಿದೆ.
ಮತ್ತ ಈ ವಿಷಯದ ಬಗ್ಗೆ ಮತ್ತೊಂದು ವಿವರಣೆಯನ್ನು ಕೇಳಿ ಓ ಮಹಾರಾಜ, ಶಿಕ್ಷಣದ ಸುಖ ಎಂಬುದು ಇದೆಯೆ, ಯಾವುದು ಗುರುಗಳಿಂದ ಶಿಷ್ಯನಿಗೆ ವಗರ್ಾಯಿಸುವುದು?
ಹೌದು ಭಂತೆ, ಅಂತಹುದು ಇದೆ.
ಸರಿ ಹಾಗಾದರೆ ಶಿಕ್ಷಣದ (ಜ್ಞಾನ) ಸುಖವು ದುಃಖದಿಂದ ಕೂಡಿದೆಯೆ?
ಇಲ್ಲ.
ಹಾಗಾದರೆ ಓ ಮಹಾರಾಜ, ಶಿಷ್ಯರು ಗುರುಗಳಿಗೆ ವಂದಿಸುವುದು, ಅವರ ಮುಂದೆ ನಿಲ್ಲುವುದು, ನೀರನ್ನು ತರುವುದು, ಕುಟೀರವನ್ನು ಗುಡಿಸುವುದು, ಗುರುಗಳಿಗೆ ಹಲ್ಲುಕಡ್ಡಿ ಮತ್ತು ನೀರನ್ನು ಸಿದ್ಧಪಡಿಸುವುದು, ಉಳಿದಿರುವುದರಲ್ಲಿ ಜೀವಿಸುವುದು, ಸ್ನಾನ ಮಾಡಿಸುವಿಕೆ, ಪಾದಗಳನ್ನು ತೊಳೆಯುವಿಕೆ, ತಮ್ಮ ಇಚ್ಛೆಯನ್ನು ಅದುಮಿಟ್ಟು ಪರರ ಇಚ್ಛೆಯಂತೆ ನಡೆಯುವಿಕೆ, ಅಹಿತಕರವಾಗಿ ಮಲಗುವಿಕೆ ಮತ್ತು ಅರುಚಿಕರ ಆಹಾರವನ್ನು ತಿನ್ನುವಿಕೆ, ಇವೆಲ್ಲವು ಶಿಕ್ಷಣದ (ಜ್ಞಾನದ) ಸುಖವೇ?
ಆದರೆ ಭಂತೆ ನಾಗಸೇನ, ಇವೆಲ್ಲವೂ ಜ್ಞಾನದ (ಶಿಕ್ಷಣದ) ಸುಖವಲ್ಲ. ಇವೆಲ್ಲವೂ ಪ್ರಾರಂಭಿಕ ಹಂತವಷ್ಟೇ. ಇದರ ನಂತರ ಗುರುವಿನಿಂದ ಬಂದಂತಹ ಜ್ಞಾನವೇ, ಜ್ಞಾನದ ಸುಖವಾಗಿದೆ. ಹೀಗೆ ಭಂತೆ ನಾಗಸೇನ ಶಿಕ್ಷಣದ ಸುಖವು ನೋವಿನಿಂದ ಹೊರತಾಗಿದೆ, ಅಮಿಶ್ರಿತವಾಗಿದೆ, ಜ್ಞಾನದ ಸುಖವೇ ಒಂದಾಗಿದೆ ಮತ್ತು ನೋವೇ ಇನ್ನೊಂದು ವಿಷಯವಾಗಿದೆ.
ಅದೇರೀತಿಯಲ್ಲಿ ಓ ಮಹಾರಾಜ, ನಿಬ್ಬಾಣವು ಪರಮಸುಖವಾಗಿದೆ ಮತ್ತು ಅದರಲ್ಲಿ ಯಾವ ನೋವು (ದುಃಖ) ಅಡಕವಾಗಿಲ್ಲ, ಯಾರು ನಿಬ್ಬಾಣದ ಅನ್ವೇಷಣೆಯಲ್ಲಿರುವರೋ ಅವರ ಮನಸ್ಸು ಮತ್ತು ಶರೀರವು ತ್ರಾಸಪಟ್ಟಿರಬಹುದು, ಇದು ನಿಜವೇ, ತಮ್ಮನ್ನು ನಿಂತಿರುವಾಗ, ನಡೆಯುವಾಗ, ಕುಳಿತಿರುವಾಗ, ಮಲಗಿರುವಾಗ ತಮ್ಮನ್ನು ನಿಯಂತ್ರಿಸುವರು. ಅವರು ಮಿತಹಾರ ಸೇವಿಸುವರು ಹಾಗು ನಿದ್ರೆಯನ್ನು ಕಡಿತಗೊಳಿಸಿ, ಇಂದ್ರೀಯಗಳನ್ನು ವಶೀಕರಿಸಿರುವರು. ತಮ್ಮ ಶರೀರ ಹಾಗು ಜೀವದ ಬಗ್ಗೆ ಯೋಚಿಸುವುದನ್ನೇ ಬಿಟ್ಟಿರುವರು. ಆದರೆ ಇಂತಹ ನೋವಿನ ಆನಂತರವೇ ಅವರು ನಿಬ್ಬಾಣವನ್ನು, ಅದರ ಅಮಿಶ್ರಿತ ಪರಮಸುಖವನ್ನು ಅನುಭವಿಸುವರು. ಹೇಗೆ ಜ್ಞಾನದ ಸುಖದಲ್ಲಿ ದುಃಖವಿಲ್ಲವೋ ರಾಜ್ಯ ಸುಖದಲ್ಲಿ ನೋವಿಲ್ಲವೋ ಹಾಗೆಯೇ ಓ ಮಹಾರಾಜ, ನಿಬ್ಬಾಣದಲ್ಲಿ ದುಃಖವಿಲ್ಲ, ಅದು ಸಂಪೂರ್ಣವಾಗಿ ಪರಮಸುಖವಾಗಿದೆ. ಏಕೆಂದರೆ ನಿಬ್ಬಾಣವು ಒಂದು ವಿಷಯವಾಗಿದೆ ಮತ್ತು ದುಃಖವು ಇನ್ನೊಂದು ವಿಷಯವಾಗಿದೆ.
ಸಾಧು ಭಂತೆ ನಾಗಸೇನ, ಇದು ಹೀಗಿರುವುದರಿಂದಾಗಿ ನಾನು ನೀವು ಹೇಳಿದ್ದನ್ನೇ ಒಪ್ಪುವೆನು.
10. ನಿಬ್ಬಾಣರೂಪ-ಸಣ್ಠಾನ ಪನ್ಹೊ (ನಿಬ್ಬಾಣದ ಲಕ್ಷಣಗಳ ಪ್ರಶ್ನೆ)
ಭಂತೆ ನಾಗಸೇನ, ನಿಬ್ಬಾಣ, ನಿಬ್ಬಾಣ ಎಂದು ಯಾವಾಗಲೂ ಹೇಳುತ್ತೀರಿ. ಅದನ್ನು ನೀವು ಉಪಮೆಯಿಂದಾಗಲೀ ಅಥವಾ ವಿವರಣೆಯಿಂದಾಗಲೀ ಅಥವಾ ತರ್ಕದಿಂದಾಗಲಿ ಅಥವಾ ಚಚರ್ೆಯಿಂದಾಗಲಿ ಅಥವಾ ಪ್ರಮಾಣದಿಂದಾಗಲಿ, ಅದರ ಆಕಾರವನ್ನೋ ಅಥವಾ ಗಾತ್ರವನ್ನೋ ಅಥವಾ ಕಾಲಾವಧಿಯನ್ನೋ, ರೂಪವನ್ನೋ ಅಥವಾ ಅಳತೆಯನ್ನೋ ಸ್ಪಷ್ಟೀಕರಿಸುವಿರಾ? (184)
ಓ ಮಹಾರಾಜ, ನಿಬ್ಬಾಣಕ್ಕೆ ಸಾದೃಶ್ಯವಾದುದು ಯಾವುದೂ ಇಲ್ಲ. ಅದನ್ನು ಉಪಮೆಯಿಂದಾಗಲೀ ಅಥವಾ ವಿವರಣೆಯಿಂದಾಗಲೀ ಅಥವಾ ತರ್ಕದಿಂದಾಗಲೀ ಅಥವಾ ಚಚರ್ೆಯಿಂದಾಗಲೀ ಅಥವಾ ಪ್ರಮಾಣದಿಂದಾಗಲಿ ಅದರ ಅಕಾರವನ್ನಾಗಲಿ, ರೂಪವನ್ನಾಗಲಿ, ಗಾತ್ರವನ್ನಾಗಲಿ, ಅವಧಿಯನ್ನಾಗಲಿ ಅಥವಾ ಅಳತೆಯನ್ನಾಗಲಿ ಸ್ಪಷ್ಟೀಕರಿಸಲು ಸಾಧ್ಯವಿಲ್ಲ.
ಅದನ್ನೇ ನಾನು ನಂಬುವುದಿಲ್ಲ ಭಂತೆ ನಾಗಸೇನ, ಆ ನಿಬ್ಬಾಣ ನಿಜಕ್ಕೂ ಇರುವಂತಹ ಒಂದು ಸ್ಥಿತಿಯಾಗಿದೆ. ಅದು ನಿಜಕ್ಕೂ ರೂಪದಿಂದ ಅಥವಾ ಆಕೃತಿಯಿಂದ ಅಥವಾ ಅವಧಿಯಿಂದ ಅಥವಾ ಅಳತೆಯಿಂದ ಅಥರ್ೈಸುವುದು ಅಸಾಧ್ಯವಾದರೆ, ನಿಬ್ಬಾಣದ ಲಕ್ಷಣಗಳ್ಳುಳ್ಳ ಯಾವುದೇ ವಸ್ತು ವಿಷಯಗಳಲ್ಲಿ ಅದರ ಹೋಲಿಕೆಯಿದ್ದರೆ ಅದನ್ನು ವಿವರಿಸಬಹುದೇ?
ಹಾಗೇ ಆಗಲಿ ಓ ಮಹಾರಾಜ, ನಾನು ಹಾಗೆಯೇ ಮಾಡುತ್ತೇನೆ. ಓ ಮಹಾರಾಜ, ಮಹಾಸಾಗರ ಇದೆಯೇ?
ಹೌದು ಸಾಗರ ಇದೆ.
ಸರಿ ಊಹಿಸಿ, ನಿಮಗೆ ಯಾರಾದರೂ ಹೀಗೆ ಪ್ರಶ್ನಿಸಬಹುದು, ಮಹಾರಾಜ, ಸಾಗರದಲ್ಲಿ ಎಷ್ಟು ನೀರಿದೆ, ಸಾಗರದಲ್ಲಿ ಎಷ್ಟು ಜೀವಿಗಳು ವಾಸಿಸಿವೆ? ಎಂದು ಕೇಳಿದರೆ ನೀವು ಹೇಗೆ ಉತ್ತರಿಸುವಿರಿ?
ನಾನು ಅಂತಹ ಪ್ರಶ್ನೆಗೆ ಈ ರೀತಿ ಉತ್ತರಿಸುವೆ ಓ ಸುಪುರುಷನೆ! ನೀನು ಕೇಳಬಾರದ ಪ್ರಶ್ನೆಯನ್ನು ಕೇಳುತ್ತಿರುವೆ. ಅದು ಹಾಗೆಯೇ ಬಿಡಬೇಕಾದ ವಿಷಯವಾಗಿದೆ. ಲೋಕಕಾಯಿಕರು ಎಂದಿಗೂ ಸಾಗರವನ್ನು ಆ ರೀತಿಯಾಗಿ ಅಳೆಯಲಿಲ್ಲ ಮತ್ತು ಯಾರು ಸಹಾ ಇದುವರೆಗೂ ಸಾಗರವನ್ನು ಅಳೆಯಲಿಲ್ಲ ಮತ್ತು ಅದರಲ್ಲಿ ವಾಸಿಸುವ ಜೀವಿಗಳನ್ನು ಲೆಕ್ಕಾಚಾರ ಮಾಡಲಿಲ್ಲ ಎಂದು ಉತ್ತರಿಸುವೆ.
ಆದರೆ ಏಕೆ ಓ ಮಹಾರಾಜ, ಸಾಗರದ ಬಗ್ಗೆ ನೀವು ಹಾಗೇಕೆ ಉತ್ತರಿಸುವಿರಿ. ಅದಂತು ಇರುವಂತಹ, ಕಾಣಿಸುವಂತಹ ಸಂಗತಿಯಾಗಿದೆ. ಇದರ ಬದಲು ನೀವು ಅಳತೆ ಮಾಡಿ, ಲೆಕ್ಕಹಾಕಿ ಹೀಗೆ ಹೇಳಬಹುದಿತ್ತಲ್ಲ. ಇಷ್ಟಿಷ್ಟು ನೀರು ಸಾಗರದಲ್ಲಿದೆ ಮತ್ತು ಇಷ್ಟಿಷ್ಟು ಜೀವಿಗಳು ಸಾಗರದಲ್ಲಿವೆ ಎನ್ನಬಹುದಲ್ಲ.
ಅದು ಸಾಧ್ಯವಿಲ್ಲ ಭಂತೆ, ಈ ಪ್ರಶ್ನೆಗೆ ಉತ್ತರಿಸುವುದು ಒಬ್ಬನ ಶಕ್ತಿಗೆ ಮೀರಿದ್ದು.
ಓ ಮಹಾರಾಜ, ಹೇಗೆ ಸಮುದ್ರದಲ್ಲಿರುವ ನೀರಿನ ಅಳತೆ ಮತ್ತು ಜೀವಿಗಳ ಸಂಖ್ಯೆ ಹೇಳುವುದು ಅಸಾಧ್ಯವೋ ಹಾಗೆಯೇ ನಿಬ್ಬಾಣದ ಆಕಾರ, ರಚನೆ, ಕಾಲ, ಅಳತೆಗಳಿಂದ ಹೇಳುವುದು ಸಹಾ ಅಸಾಧ್ಯವಾಗಿದೆ ಮತ್ತು ಓ ಮಹಾರಾಜ, ಅತೀಂದ್ರಿಯ ಶಕ್ತಿಯಿಂದ ಬೇಕಾದರೆ ಸಮುದ್ರ ಅಳತೆ ಮತ್ತು ಸಮುದ್ರಲದಲ್ಲಿರುವ ಜೀವಿಗಳ ಸಂಖ್ಯೆ ಹೇಳಬಹುದು, ಆದರೆ ನಿಬ್ಬಾಣವನ್ನು ಆಕಾರದಿಂದಾಗಲಿ, ರಚನೆಯಿಂದಾಗಲಿ, ಕಾಲಾವಧಿಯಿಂದಾಗಲಿ, ಅಳತೆಯಿಂದಾಗಲಿ ಅಳೆಯಲು ಸಾಧ್ಯವಿಲ್ಲ.
ಮತ್ತೆ ಇನ್ನೊಂದು ವಿವರಣೆಯನ್ನು ಕೇಳಿ ಮಹಾರಾಜ, ಅರೂಪಕಾಯಿಕ ದೇವಗಳ ಬಗ್ಗೆ ಕೇಳಿದ್ದೀರಿ ಅಲ್ಲವೆ?
ಹೌದು ಭಂತೆ ಕೇಳಿದ್ದೇನೆ.
ಸರಿ ಓ ಮಹಾರಾಜ, ನೀವು ಉಪಮೆಯಿಂದಾಗಲಿ, ಅಥವಾ ವಿವರಣೆಯಿಂದಾಗಲಿ ಅಥವಾ ತರ್ಕದಿಂದಾಗಲಿ ಅಥವಾ ಚಚರ್ೆಯಿಂದಾಗಲಿ, ಅರೂಪ ದೇವಗಳ ಆಕಾರ, ಅಥವಾ ರಚನೆ ಅಥವಾ ಕಾಲಾವಧಿ ಅಥವಾ ಅಳತೆ ವಿವರಿಸಬಲ್ಲಿರಾ?
ಇಲ್ಲ ಭಂತೆ ಸಾಧ್ಯವಿಲ್ಲ.
ಹಾಗಾದರೆ ಮಹಾರಾಜ ಅವರು ಇಲ್ಲವೆ?
ಅವರು ಇದ್ದಾರೆ ಭಂತೆ, ಆದರೂ ಅವರುಗಳ ಆಕಾರ ಅಥವಾ ರಚನೆ ಕಾಲಾವಧಿ ಅಥವಾ ಅಳತೆ ವಿವರಿಸುವುದು ಅಸಾಧ್ಯವಾಗಿದೆ.
ಓ ಮಹಾರಾಜ, ಅರೂಪ ದೇವತೆಗಳು ಇದ್ದರೂ ಸಹಾ, ಅವುಗಳ ಆಕೃತಿ, ರಚನೆ, ಕಾಲಾವಧಿ ಅಥವಾ ಅಳತೆ ವಿವರಿಸುವುದು ಹೇಗೆ ಅಸಾಧ್ಯವೋ ಹಾಗೆಯೇ ನಿಬ್ಬಾಣವು ಇದ್ದರೂ ಸಹಾ ಅದರ ರಚನೆ, ಆಕೃತಿ, ಕಾಲದಲ್ಲಿ, ಅಳತೆ ವಿವರಿಸಲು ಸಾಧ್ಯವಿಲ್ಲ. (ಅರೂಪ ದೇವತೆಗಳನ್ನು ದಿವ್ಯದೃಷ್ಟಿಯಿಂದ ಅರಿಯಬಹುದು, ಆದರೆ ನಿಬ್ಬಾಣವನ್ನು ಆಕೃತಿಯಿಂದ ರಚನೆಯಿಂದ ಕಾಲಾವಧಿಯಿಂದ, ಅಳತೆಯಿಂದ, ಅಳೆಯಲು ಸಾಧ್ಯವಿಲ್ಲ).
ಭಂತೆ ನಾಗಸೇನ, ನಾನು ನಿಬ್ಬಾಣವು ಅಮಿಶ್ರಿತ ಪರಮಸುಖ ಎಂದು ಒಪ್ಪಿದ್ದೇನೆ. ಆದರೂ ಅದನ್ನು ಉಪಮೆಯಿಂದ ಅಥವಾ ವಿವರಣೆಯಿಂದ ಸ್ಪಷ್ಟೀಕರಿಸಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ತರ್ಕದಿಂದಾಗಲಿ ಅಥವಾ ಚಚರ್ೆಯಿಂದಾಗಲಿ ಅಥವಾ ಆಕೃತಿ, ರಚನೆ ಕಾಲಾವಧಿ ಅಥವಾ ಅಳತೆಯಿಂದಾಗಲಿ ಸ್ಪಷ್ಟೀಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಭಂತೆ, ಯಾವುದಾದರೂ ನಿಬ್ಬಾಣದ ಲಕ್ಷಣವು ಪರವಸ್ತುವಿನಲ್ಲಿ ಖಂಡಿತ ಇರಲೇಬೇಕು. ಅಂತಹವನ್ನು ಉಪಮೆಯಿಂದ ಸಾಕ್ಷೀಕರಿಸಬಹುದಲ್ಲವೇ?
ನಿಬ್ಬಾಣದಂತಹುದು ಇಲ್ಲಿ ಯಾವುದು ಇಲ್ಲದಿದ್ದರೂ, ಕೆಲವು ವಸ್ತುಗಳ, ಕೆಲ ಲಕ್ಷಣಗಳಂತು ನಿಬ್ಬಾಣದಲ್ಲಿವೆ.
ಓಹ್ ಎಂತೆಂಥ ಮಧುರ ವಚನವನ್ನು ನುಡಿದಿರಿ ಭಂತೆ ನಾಗಸೇನ, ಶೀಘ್ರವಾಗಿ ನುಡಿಯಿರಿ. ಅದಕ್ಕಾಗಿ ನನ್ನ ಹೃದಯವು ತಳಮಳಿಸುತಿಹುದು, ನೀವೇನಾದರೂ ಅದರ ಒಂದು ಗುಣವನ್ನಾದರೂ ಹೇಳಿದಲ್ಲಿ, ಅದು ನನ್ನ ಹೃದಯದ ಜ್ವರವನ್ನು ಹೋಗಲಾಡಿಸುವುದು. ಓ ಭಂತೆ, ನಿಮ್ಮ ಪದಗಳ ಸಿಹಿ ತಂಗಾಳಿಯಿಂದ ಹೃದಯವನ್ನು ಹಗುರಗೊಳಿಸಿ.
ಓಹ್ ಮಹಾರಾಜ, ಕಮಲದ ಒಂದು ಗುಣವು ನಿಬ್ಬಾಣದಲ್ಲಿದೆ ಮತ್ತು ನೀರಿನ ಎರಡು ಗುಣಗಳು ಮತ್ತು ಔಷಧಿಯ ಮೂರು ಗುಣಗಳು ಮತ್ತು ಸಮುದ್ರದ ನಾಲ್ಕು ಗುಣಗಳು ಮತ್ತು ಆಹಾರದ ಐದು ಗುಣಗಳು ಮತ್ತು ಆಕಾಶದ ಹತ್ತು ಗುಣಗಳು ಮತ್ತು ಮಣಿರತ್ನದ ಮೂರು ಗುಣಗಳು, ಕೆಂಪು ಶ್ರೀಗಂಧದ ಮೂರು ಗುಣಗಳು ಮತ್ತು ತುಪ್ಪದ ಮೂರು ಗುಣಗಳು ಮತ್ತು ಪರ್ವತ ಶಿಖರದ ಐದು ಗುಣಗಳು ನಿಬ್ಬಾಣದಲ್ಲಿ ಕಾಣಬಹುದು.
ಭಂತೆ ನಾಗಸೇನ, ಯಾವ ಕಮಲದ ಒಂದು ಗುಣವು ನಿಬ್ಬಾಣದಲ್ಲಿದೆ?(185)
ಓ ಮಹಾರಾಜ, ಕಮಲವು ಜಲದಿಂದ ಮಲಿನವಾಗುವುದಿಲ್ಲ (ಅಂಟುವುದಿಲ್ಲ). ಹಾಗೆಯೇ ನಿಬ್ಬಾಣವು ಪಾಪ ಸ್ಥಿತಿಗಳಿಂದ ಅಂಟುವುದಿಲ್ಲ. ಇದೇ ಕಮಲದಲ್ಲಿರುವ ಒಂದು ಗುಣ ನಿಬ್ಬಾಣದಲ್ಲಿದೆ.
ಭಂತೆ ನಾಗಸೇನ, ಜಲದ ಯಾವ ಎರಡು ಗುಣಗಳು ನಿಬ್ಬಾಣದಲ್ಲಿದೆ. (186)
ಓ ಮಹಾರಾಜ, ನೀರು ತಂಪಾಗಿದೆ ಮತ್ತು ತಾಪವನ್ನು ಶಾಂತಗೊಳಿಸುತ್ತದೆ. ಹಾಗೆಯೇ ನಿಬ್ಬಾಣವು ತಂಪಾದುದು, ಇದು ಪಾಪಸ್ಥಿತಿಗಳ ಜ್ವರವನ್ನು ತಗ್ಗಿಸಿ ಶಾಂತಗೊಳಿಸುತ್ತದೆ. ಇದು ಜಲದಲ್ಲಿರುವ ನಿಬ್ಬಾಣದ ಒಂದು ಗುಣ ಮತ್ತು ಓ ಮಹಾರಾಜ, ಹೇಗೆ ಜಲವು ಜನರ ಮತ್ತು ಪ್ರಾಣಿಗಳ ಬಾಯಾರಿಕೆಯನ್ನು ದೂರೀಕರಿಸುವುದೋ, ಅವರ, ದಣಿವು, ದಾಹ, ಒತ್ತಡ ಇವೆಲ್ಲವೂ ದೂರ ಮಾಡುವುದೋ ಹಾಗೆಯೇ ನಿಬ್ಬಾಣವು ಸಹಾ ತನ್ಹಾದ ತೀವ್ರ ಬಯಕೆಗಳೆಲ್ಲಾ ಶಾಂತಗೊಳಿಸುತ್ತದೆ, ಸಂತೃಪ್ತಿ ನೀಡುತ್ತದೆ. ಮೂರು ವಿಧದ ಕಾಮ ತನ್ಹಾ, ಭವತನ್ಹಾ ಮತ್ತು ವಿಭವತನ್ಹಾಗಳನ್ನು ಶಾಂತಗೊಳಿಸುತ್ತದೆ. ಈ ಎರಡು ಜಲದ ಗುಣಗಳು ನಿಬ್ಬಾಣದಲ್ಲಿದೆ.
ಭಂತೆ ನಾಗಸೇನ, ಔಷಧಿಯ ಯಾವ ಮೂರು ಗುಣಗಳು ನಿಬ್ಬಾಣದಲ್ಲಿವೆ?(187)
ಓ ಮಹಾರಾಜ, ವಿಷದಿಂದ ಪೀಡಿತರಾದವರು, ಔಷಧಕ್ಕೆ ಶರಣು ಹೋಗುತ್ತಾರೆ. ಹಾಗೆಯೇ ನಿಬ್ಬಾಣವು ಕ್ಲೇಷ ಮಾನಸಿಕ ಸ್ಥಿತಿಗಳಿಂದ ಪೀಡಿತರಾಗಿರುವರೆಲ್ಲಾ ನಿಬ್ಬಾಣಕ್ಕೆ ಶರಣು ಹೋಗುತ್ತಾರೆ. ಈ ಔಷಧಿಯಲ್ಲಿರುವ ಪ್ರಥಮ ಗುಣವು ನಿಬ್ಬಾಣದಲ್ಲಿಯೂ ಇದೆ. ಮತ್ತೆ ಓ ಮಹಾರಾಜ, ಹೇಗೆ ಔಷಧಿಯು ರೋಗಗಳ ಅಂತ್ಯವನ್ನು ಮಾಡುತ್ತದೆಯೋ ಹಾಗೆಯೇ ನಿಬ್ಬಾಣವು ಎಲ್ಲಾ ದುಃಖಗಳನ್ನು ಅಂತ್ಯಗೊಳಿಸುತ್ತದೆ. ಇದು ಔಷಧಿಯಲ್ಲಿರುವ ದ್ವಿತೀಯ ಗುಣವು ನಿಬ್ಬಾಣದಲ್ಲಿಯು ಇದೆ ಮತ್ತು ಓ ಮಹಾರಾಜ, ಹೇಗೆ ಔಷಧವು ಸರ್ವ ರೋಗ ನಿವಾರಣ ಅಮೃತದಂತಿದೆಯೋ ಹಾಗೆಯೇ ನಿಬ್ಬಾಣವು ಸಹಾ ಸರ್ವ ದುಃಖ ನಿವಾರಕ ಅಮರತ್ವವಾಗಿದೆ. ಇದೇ ಔಷಧಿಯಲ್ಲಿರುವ 3ನೆಯ ಗುಣವಾಗಿದೆ. ಅದು ನಿಬ್ಬಾಣದಲ್ಲಿಯೂ ಸಹಾ ಇದೆ.
ಭಂತೆ ನಾಗಸೇನ, ಮಹಾ ಸಾಗರದ ಯಾವ ನಾಲ್ಕು ಗುಣಗಳು ನಿಬ್ಬಾಣದಲ್ಲಿಯೂ ಸಹಾ ಇದೆ.? (188)
ಓ ಮಹಾರಾಜ, ಹೇಗೆ ಮಹಾ ಸಮುದ್ರವು ಶವಗಳಿಂದ ಕೂಡಿಲ್ಲವೊ, ಶವಶೂನ್ಯವೋ ಹಾಗೆಯೇ ನಿಬ್ಬಾಣವು ಸಹಾ ಸರ್ವಕ್ಲೇಷಗಳಿಂದ ಶೂನ್ಯವಾಗಿದೆ. ಇದು ನಿಬ್ಬಾಣದಲ್ಲಿಯೂ ಇರುವಂತಹ ಸಮುದ್ರದ ಒಂದನೇ ಗುಣವಾಗಿದೆ ಮತ್ತು ಓ ಮಹಾರಾಜ ಹೇಗೆ ಸಮುದ್ರವು ಬೃಹತ್ತಾಗಿದೆಯೋ ಮತ್ತು ಅಪರಿಮಿತವಾಗಿದೆಯೋ ಮತ್ತು ಎಲ್ಲಾ ನದಿಗಳು ಅಲ್ಲಿಗೆ ಬಂದು ಅದರಲ್ಲಿ ಹರಿದರೂ ಸಹಾ ತುಂಬುವುದಿಲ್ಲವೋ ಹಾಗೆಯೇ ನಿಬ್ಬಾಣವು ಸಹಾ ಬೃಹತ್ತಾಗಿದೆ ಮತ್ತು ಅಪರಿಮಿತವಾಗಿದೆ ಮತ್ತು ಎಷ್ಟೋ ಜೀವಿಗಳು ನಿಬ್ಬಾಣಪ್ರಾಪ್ತಿ ಪಡೆದರೂ ಸಹಾ ಅದು ತುಂಬುವುದಿಲ್ಲ. ಇದು ನಿಬ್ಬಾಣದಲ್ಲಿಯು ಇರುವಂತಹ ಮಹಾ ಸಮುದ್ರದ ಎರಡನೇ ಗುಣವಾಗಿದೆ. ಮತ್ತೆ ಓ ಮಹಾರಾಜ, ಹೇಗೆ ಮಹಾಸಮುದ್ರವು ಬೃಹತ್ ಜೀವಿಗಳ ಅವಾಸಸ್ಥಾನವೋ, ಹಾಗೆಯೇ ನಿಬ್ಬಾಣವು ಸಹಾ ಪರಮಶ್ರೇಷ್ಠ ಆರ್ಯರ (ಅರಹಂತರ) ಅವಾಸಸ್ಥಾನವಾಗಿದೆ. (ಅರಹಂತರಾದರೋ ಕ್ಷೀಣಾಸವ ವಿಮಲರು ಮತ್ತು ಸ್ವಪ್ರಭುತ್ವ ಹೊಂದಿರುವ ಮಹಾ ಬಲಶಾಲಿಗಳಾಗಿದ್ದಾರೆ). ಇದೇ ನಿಬ್ಬಾಣದಲ್ಲಿಯು ಸಹಾ ಇರುವ ಮಹಾ ಸಮುದ್ರದ ಮೂರನೆಯ ಗುಣವಾಗಿದೆ. ಮತ್ತೆ ಓ ಮಹಾರಾಜ, ಹೇಗೆ ಮಹಾ ಸಮುದ್ರವು ಅಲೆಗಳ ಸುಕುಸುಮಗಳಿಂದ ಅಲಂಕೃತವೋ ಹಾಗೆಯೇ ನಿಬ್ಬಾಣವು ಸಹಾ ಪರಿಶುದ್ಧತೆಯ ಜ್ಞಾನದ ಮತ್ತು ವಿಮುಕ್ತಿಯ ಅಸಂಖ್ಯಾತ ಪುಷ್ಪಗಳಿಂದ ಅಲಂಕೃತವಾಗಿದೆ. ಇದೇ ನಿಬ್ಬಾಣದಲ್ಲಿಯು ಇರುವಂತಹ ಮಹಾ ಸಮುದ್ರದ ನಾಲ್ಕನೆಯ ಗುಣವಾಗಿದೆ.
ಭಂತೆ ನಾಗಸೇನ, ನಿಬ್ಬಾಣದಲ್ಲಿಯು ಇರುವಂತಹ ಆಹಾರದ ಐದು ಗುಣಗಳು ಯಾವುವು? (189)
ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳ ಜೀವಕ್ಕೆ ಆಧಾರವಾಗಿದೆಯೋ, ಹಾಗೆಯೇ ನಿಬ್ಬಾಣವು ಸಹಾ ಸಾಕ್ಷಾತ್ಕರಿಸಿದಾಗ, ವೃದ್ಧಾಪ್ಯ ಮತ್ತು ಮರಣವನ್ನು ದೂರೀಕರಿಸುತ್ತದೆ. ಇದು ನಿಬ್ಬಾಣದಲ್ಲಿರುವಂತಹ, ಆಹಾರದ ಪ್ರಥಮ ಗುಣವಾಗಿದೆ. ಮತ್ತೆ ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳ ಶಕ್ತಿಯನ್ನು ವೃದ್ಧಿಸುವುದೋ ಹಾಗೆಯೇ ನಿಬ್ಬಾಣವು ಸಾಕ್ಷಾತ್ಕಾರಗೊಂಡಾಗ ಎಲ್ಲಾ ಜೀವಿಗಳ ಇದ್ದಿಬಲವನ್ನು ವೃದ್ಧಿಸುತ್ತದೆ. ಇದು ನಿಬ್ಬಾನದಲ್ಲಿಯು ಇರುವಂತಹ ಆಹಾರದ ಎರಡನೆಯ ಗುಣವಾಗಿದೆ. ಮತ್ತೆ ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳ ಸೌಂದರ್ಯಕ್ಕೆ ಅಕರವೋ ಹಾಗೆಯೇ ನಿಬ್ಬಾಣವನ್ನು ಸಾಕ್ಷಾತ್ಕರಿಸದಾಗ, ಜೀವಿಗಳ ಪವಿತ್ರ ಸೌಂದರ್ಯಕ್ಕೆ ಅದೇ ಅಕರವಾಗಿದೆ. ಇದೇ ನಿಬ್ಬಾಣದಲ್ಲಿರುವಂತಹ ಆಹಾರದ ಮೂರನೆಯ ಗುಣವಾಗಿದೆ. ಮತ್ತೆ ಓ ಮಹಾರಾಜ, ಹೇಗೆ ಆಹಾರವು ಸರ್ವಜೀವಿಗಳ ದುಃಖ ಉತ್ಪತ್ತಿಗೆ ತಡೆಹಾಕುವುದೋ ಹಾಗೆಯೇ ನಿಬ್ಬಾಣ ಸಾಕ್ಷಾತ್ಕಾರದಂತಹ ಎಲ್ಲಾ ಜೀವಿಗಳ ಪಾಪಕ್ಲೇಷಗಳ ಮತ್ತು ದುಃಖಗಳ ಉತ್ಪತ್ತಿಗೆ ತಡೆಹಾಕುತ್ತದೆ. ಇದು ನಿಬ್ಬಾಣದಲ್ಲೂ ಇರುವಂತಹ ಆಹಾರದ ನಾಲ್ಕನೆಯ ಗುಣವಾಗಿದೆ. ಮತ್ತೇ ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳಿಗೂ ಹಸಿವಿನಿಂದ ಉಂಟಾಗುವ ದುರ್ಬಲತೆಗಳನ್ನು ಮತ್ತು ಎಲ್ಲಾ ನೋವುಗಳನ್ನು ದೂರೀಕರಿಸುವುದೋ ಹಾಗೆಯೇ ಯಾವಾಗ ನಿಬ್ಬಾಣವು ಸಾಕ್ಷಾತ್ಕಾರಗೊಂಡಾಗ ಎಲ್ಲಾರೀತಿಯ ದುರ್ಬಲತೆಗಳು ಮತ್ತು ದುಃಖಗಳು ಇನ್ನಿಲ್ಲವಾಗುತ್ತದೆ. ಇದೇ ನಿಬ್ಬಾಣದಲ್ಲಿಯು ಇರುವಂತಹ ಆಹಾರದ ಐದನೆಯ ಗುಣವಾಗಿದೆ.
ಭಂತೆ ನಾಗಸೇನ, ನಿಬ್ಬಾಣದಲ್ಲಿರುವಂತಹ ಆಕಾಶದ 10 ಗುಣಗಳು
ಯಾವುವು? (190)
ಓ ಮಹಾರಾಜ, ಹೇಗೆ ಆಕಾಶಕ್ಕೆ ಹುಟ್ಟಿಲ್ಲವೋ, ಜೀಣರ್ಿಸುವಿಕೆ (ಕೊಳೆಯುವಿಕೆ/ವೃದ್ಧವಾಗುವಿಕೆ) ಇಲ್ಲವೋ, ಮೃತ್ಯುವಿಲ್ಲವೋ, ಅಳಿಯುವಿಕೆಯಿಲ್ಲವೋ ಹಾಗೇ ಉದಯಿಸುವಿಕೆಯಿಲ್ಲವೋ, ಅಜೇಯವಾದುದೋ, ಕುಗ್ಗಿಸಲಾರದಂತಹುದೋ, ಚೋರರಿಂದ ಅಪಹರಣವಾಗದಂತಹುದೋ, ಯಾವುದಕ್ಕೂ ಅಂಟದಂತಹುದು (ಯಾವುದರಲ್ಲೂ ಆಧಾರವಿಲ್ಲದಂತಹುದು) ಪಕ್ಷಿಗಳ ಹಾರಾಟ ಕ್ಷೇತ್ರವೋ, ನಿರಾವರಣವು, ಅನಂತವು ಆಗಿದೆ. ಅದೇರೀತಿಯಲ್ಲಿ ಓ ಮಹಾರಾಜ, ನಿಬ್ಬಾಣವು ಸಹಾ (ಅಜಾತವು (ಹುಟ್ಟಿಲ್ಲದ), ಅಜೀಯ (ಅಜೀರ್ಣ)ವೂ, ಅಮರವು, ಅನುದಯವು, ಅಳಿಯದೆ ಇರುವಂತಹುದು, ಅಜೇಯವು, ಅಚೋರ ಹರಣವು, ಅನಿಸ್ಸಿತ್ತಂ (ಅಂಟದೆ, ಆಧಾರವಿಲ್ಲದೆ ಇರುವಂತಹುದು), ಅರಹಂತರ ಕ್ಷೇತ್ರವು ನಿವರ್ಿಘ್ನ (ನಿರಾವರಣವು)ವು ಮತ್ತು ಅನಂತವು ಅಗಿದೆ. ಇವೇ ಆ ಆಕಾಶದ ಹತ್ತು ಗುಣಗಳು, ನಿಬ್ಬಾಣದಲ್ಲಿ ಇವೆ.
ಭಂತೆ ನಾಗಸೇನ, ನಿಬ್ಬಾಣದಲ್ಲಿರುವ ಯಾವ ಮೂರು ಗುಣಗಳು ಮಣಿರತ್ನದಲ್ಲಿದೆ.(191)
ಓ ಮಹಾರಾಜ, ಮಣಿರತ್ನವು ಎಲ್ಲಾ ಬಯಕೆಗಳನ್ನು ತೃಪ್ತಿಪಡಿಸುತ್ತದೆ. ಹಾಗೆಯೇ ನಿಬ್ಬಾನವು ಸಹಾ ಮಣಿರತ್ನವು ಆನಂದವನ್ನು ನೀಡುತ್ತದೆ, ಹಾಗೆಯೇ ನಿಬ್ಬಾಣವು ಸಹಾ ಮಣಿರತ್ನವು ಅತ್ಯಂತ ಪ್ರಭೆಯಿಂದ ಕೂಡಿರುತ್ತದೆ. ಹಾಗೆಯೇ ನಿಬ್ಬಾಣವು ಸಹಾ. ಇವೇ ಮಹಾರಾಜ, ನಿಬ್ಬಾಣದಲ್ಲಿರುವ ಮೂರು ಗುಣಗಳು ಮಣಿರತ್ನದಲ್ಲಿದೆ.
ಭಂತೆ ನಾಗಸೇನ, ಯಾವ ಕೆಂಪು ಶ್ರೀಗಂದ ಗುಣಗಳು ನಿಬ್ಬಾಣದಲ್ಲಿಯೂ ಇದೆ? (192)
ಓ ಮಹಾರಾಜ, ಹೇಗೆ ಕೆಂಪು ಶ್ರೀಗಂಧವು (ಲೋಹಿತ ಚಂದನ) ಅತಿ ಕಡುಕಷ್ಟಕರವಾಗಿ ದೊರೆಯುತ್ತದೋ ಹಾಗೆಯೇ ನಿಬ್ಬಾಣವು ಸಹಾ ದುರ್ಲಭವೇ (ದುಸ್ತರ) ಆಗಿದೆ. ಇದೇ ಲೋಹಿತ ಚಂದನದ ಪ್ರಥಮ ಗುಣವಾಗಿದೆ ಮಹಾರಾಜ. ಮತ್ತೆ ಓ ಮಹಾರಾಜ, ಲೋಹಿತ ಚಂದನವು ತನ್ನ ಸೌಗಂಧದಲ್ಲಿ ಅಸಮಾನವಾದುದು ಆಗಿದೆ. ಹಾಗೆಯೇ ನಿಬ್ಬಾಣವು ಸಹಾ. ಇದೇ ಲೋಹಿತ ಚಂದನದಲ್ಲಿರುವ ದ್ವಿತೀಯ ಗುಣವು, ಅದು ನಿಬ್ಬಾಣದಲ್ಲಿಯೂ ಇದೆ. ಮತ್ತೆ ಮಹಾರಾಜ, ಲೋಹಿತ ಚಂದನವನ್ನು ಸಜ್ಜನರೆಲ್ಲರೂ ಪ್ರಶಂಸಿಸುತ್ತಾರೆ, ಹಾಗೆಯೇ ನಿಬ್ಬಾಣವನ್ನು ಎಲ್ಲಾ ಆರ್ಯ ಸಜ್ಜನರು ಪ್ರಶಂಸಿಸುತ್ತಾರೆ, ಇದೇ ಲೋಹಿತ ಚಂದನದಲ್ಲಿರುವ ಮೂರನೆಯ ಗುಣವಾಗಿದೆ. ಇದು ನಿಬ್ಬಾಣದಲ್ಲಿಯು ಇದೆ.
ಭಂತೆ ನಾಗಸೇನ, ನಿಬ್ಬಾಣದಲ್ಲಿರುವ ಯಾವ ಮೂರು ಗುಣಗಳು ತುಪ್ಪದಲ್ಲಿದೆ?(193)
ಓ ಮಹಾರಾಜ, ತುಪ್ಪವು ಅತ್ಯಂತ ಸುಮಧುರವಾದ ವರ್ಣವನ್ನು ಹೊಂದಿರುತ್ತದೆ. ಹಾಗೆಯೇ ನಿಬ್ಬಾಣವು ಸಹಾ ಗುಣವರ್ಣ ಸಂಪನ್ನವಾಗಿದೆ, ಇದೇ ನಿಬ್ಬಾಣದಲ್ಲಿರುವಂತಹ ತುಪ್ಪದ ಪ್ರಥಮ ಗುಣವಾಗಿದೆ. ಮತ್ತೆ ಓ ಮಹಾರಾಜ, ತುಪ್ಪವು ಸುಂಗಧ ಸಂಪನ್ನವಾಗಿದೆ. ಹಾಗೆಯೇ ನಿಬ್ಬಾಣವು ಸಹಾ ಶೀಲಸುಗಂಧ ಸಂಪನ್ನವಾಗಿದೆ. ಇದೇ ನಿಬ್ಬಾಣದಲ್ಲಿರುವಂತಹ ತುಪ್ಪದ ದ್ವಿತೀಯ ಗುಣವಾಗಿದೆ. ಮತ್ತೆ ಓ ಮಹಾರಾಜ, ತುಪ್ಪವು ಸ್ವಾದಿಷ್ಟ ರಸಸಂಪನ್ನವಾಗಿದೆ, ಹಾಗೆಯೇ ನಿಬ್ಬಾಣವು ಸಹಾ, ಇದೇ ನಿಬ್ಬಾನದಲ್ಲಿರುವಂತಹ ತುಪ್ಪದ ತೃತೀಯ ಗುಣವಾಗಿದೆ.
ಭಂತೆ ನಾಗಸೇನ, ಯಾವ ನಿಬ್ಬಾಣದಲ್ಲಿರುವ ಗುಣಗಳು ಪರ್ವತ ಶಿಖರದಲ್ಲಿದೆ.(194)
ಓ ಮಹಾರಾಜ, ಹೇಗೆ ಪರ್ವತ ಶಿಖರವು (ಗಿರಿಶಿಖರವು), ಅತಿ ಉಚ್ಛವೋ ಹಾಗೆಯೇ ನಿಬ್ಬಾಣವು ಸಹಾ ಅತಿ ಉಚ್ಛ ಉತ್ಕೃಷ್ಟವಾಗಿದೆ. ಇದು ಗಿರಿಶಿಖರದಲ್ಲಿನ ಪ್ರಥಮ ಗುಣವಾಗಿದೆ. ಅದು ನಿಬ್ಬಾಣದಲ್ಲೂ ಕಾಣಿಸುತ್ತದೆ. ಮತ್ತೆ ಓ ಮಹಾರಾಜ, ಗಿರಿಶಿಖರವು ಅಚಲವು ಆಗಿರುತ್ತದೆ, ಹಾಗೆಯೇ ನಿಬ್ಬಾಣವು ಸಹಾ ಅಚಲವಾಗಿದೆ. ಇದು ಗಿರಿಶಿಖರದಲ್ಲಿನ ದ್ವಿತೀಯ ಗುಣವಾಗಿದೆ. ಮತ್ತೆ ಓ ಮಹಾರಾಜ, ಗಿರಿಶಿಖರದ ಮೇಲೆ ಸಸ್ಯಗಳಾಗಲಿ, ಕಸವಾಗಲಿ ಇರಲಾರವು, ಬೆಳೆಯಲಾರವು, ಹಾಗೆಯೇ ನಿಬ್ಬಾಣದಲ್ಲಿ ಕ್ಲೇಷಗಳು ಉದಯಿಸಲಾರವು, ಇದೇ ಗಿರಿಶಿಖರದಲ್ಲಿನ ನಾಲ್ಕನೇ ಗುಣವಾಗಿದೆ. ಮತ್ತೆ ಓ ಮಹಾರಾಜ, ಗಿರಿಶಿಖರವು ಯಾವುದೇರೀತಿಯ ಪಕ್ಷಪಾತದಿಂದಿರುವುದಿಲ್ಲ. ಹಾಗೆಯೇ ಪೂವರ್ಾಗ್ರಹಪೀಡಿತವಾಗಿರುವುದಿಲ್ಲ. ಹಾಗೆಯೇ ನಿಬ್ಬಾಣವು ಸಹಾ. ಇದೇ ಮಹಾರಾಜ ಗಿರಿಶಿಖರದಲ್ಲಿರುವ ಐದನೇ ಗುಣವು ನಿಬ್ಬಾಣದಲ್ಲೂ ಇದೆ.
ಸಾಧು ಭಂತೆ ನಾಗಸೇನ! ಬಹುಚೆನ್ನಾಗಿ ವಿವರಣೆ ಹಾಗು ಉಪಮೆಗಳಿಂದ ನುಡಿದಿರಿ, ಇದೆಲ್ಲವೂ ನಾನು ಒಪ್ಪುತ್ತೇನೆ.
11. ನಿಬ್ಬಾಣ ಸಾಕ್ಷಾತ್ಕರದ ಪ್ರಶ್ನೆ
ಭಂತೆ ನಾಗಸೇನ, ನೀವು ಹೇಳುವಿರಿ ನಿಬ್ಬಾಣವು ಅತೀತವಲ್ಲ, ಹಾಗೆಯೇ ಭವಿಷ್ಯವೂ ಅಲ್ಲ, ಹಾಗೆಯೇ ವರ್ತಮಾನವೂ ಅಲ್ಲ, ಅದು ಉತ್ಪನ್ನವಲ್ಲ ಹಾಗೆಯೇ ಅನುತ್ಪನ್ನವು ಅಲ್ಲ, ಹಾಗೆಯೇ ಉತ್ಪಾದನೀಯವೂ ಅಲ್ಲ ಎನ್ನುವಿರಿ. ಆದರೆ ಹೀಗಾದರೆ ಒಬ್ಬ ಸಮ್ಯಕ್ ರೀತಿಯಲ್ಲಿ ಜೀವಿಸಿ, ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ. ಅಲ್ಲಿ ಆತನು ಮೊದಲೇ ಉತ್ಪನ್ನವಾಗಿರುವ ನಿಬ್ಬಾಣವನ್ನು ಸಾಕ್ಷಾತ್ಕರಿಸುವನೋ ಅಥವಾ ತಾನೇ ಉತ್ಪನ್ನಗೊಳಿಸಿ, ಬಳಿಕ ಸಾಕ್ಷಾತ್ಕಾರ ಮಾಡಿಕೊಳ್ಳುವನೋ. (195)
ಮೊದಲನೆಯದು ಇಲ್ಲ, ಹಾಗೆಯೇ ಎರಡನೆಯದು ಇಲ್ಲ. ಮತ್ತು ಹೀಗಿರುವಾಗಲು ಓ ಮಹಾರಾಜ, ಆತನು ನಿಬ್ಬಾಣಧಾತುವನ್ನು ಸಾಕ್ಷಾತ್ಕರಿಸುತ್ತಾನೆ ಮತ್ತು ನಿಬ್ಬಾಣದಾತು ಇದೆ.
ಭಂತೆ ನಾಗಸೇನ, ಜಟಿಲವಾಗಿರುವ ಇದಕ್ಕೆ ಮತ್ತಷ್ಟು ಕತ್ತಲೆ ಮಾಡದಿರಿ, ಅದನ್ನು ತೆರೆದಂತಹವರಾಗಿ, ಬೆಳಕು ಚೆಲ್ಲಿ ಸರಳಗೊಳಿಸಿ. ನೀವು ಕಲಿತಿರುವುದೆಲ್ಲಾ ಬಳಸಿ ಇಚ್ಛೆಯಿಂದ, ಪರಿಶ್ರಮದಿಂದ, ಜ್ಞಾನವನ್ನು ಸುರಿಯಿರಿ. ಯಾವ ವಿಷಯದ ಬಗ್ಗೆ ಜನರು ದಿಗ್ಭ್ರಮೆಗೊಂಡಿರುವರೋ, ದಿಕ್ಕುತೋಚದೆ ಮುನ್ನುಗ್ಗಿ ಧುಮುಕುತ್ತಿರುವರೋ, ಸಂಶಯಗಳಲ್ಲಿ ಕಳೆದುಹೋಗಿರುವರೋ, ಅಂತಹದೆಲ್ಲವನ್ನು, ಆ ದ್ವಂದ್ವವನ್ನು ಚದುರಿಸಿ, ಅದು ಭಲ್ಲೆಯಂತೆ ಚುಚ್ಚುತ್ತಿರುವುದು.
ಓ ಮಹಾರಾಜ, ನಿಬ್ಬಾಣದಾತುವು ಅತಿ ಶಾಂತವಾದುದು, ಪರಮಸುಖವಾದುದು, ಅತಿ ಸೂಕ್ಷ್ಮಕರವಾದುದು, ಇರುವಂತಹುದು ಮತ್ತು ಅದನ್ನು ಯಾರು ಸಮ್ಯಕ್ ರೀತಿಯಲ್ಲಿ ಧಮ್ಮಪಾಲಿಸಿ (ಶೀಲವಂತಿಕೆ, ಇಂದ್ರೀಯ ಸಂಯಮ ಪಾಲಿಸಿ) ಜಿನಶಾಸನದ ಅನುಸಾರವಾಗಿ ಯೋಗ್ಯರೀತಿಯಿಂದಾಗಿ ಸಂಖಾರಗಳನ್ನು ಅರಿಯುವುದರಿಂದ ಗ್ರಹಿಸುವುದರಿಂದ, ಆತನು ತನ್ನ ಪ್ರಜ್ಞಾದಿಂದಾಗಿ, ನಿಬ್ಬಾಣ ಸಾಕ್ಷಾತ್ಕರಿಸುವನು. ಆತನು ಶಿಷ್ಯನಾಗಿದ್ದರೂ ಬುದ್ಧರ ಶಾಸನದಲ್ಲಿ ಅನುಷ್ಠಾನಬದ್ಧನಾದರೆ, ತನ್ನ ವಿದ್ಯೆಯಿಂದ, ಪನ್ಯಾದಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸುವನು ಮತ್ತು ನೀವು ಕೇಳಬಹುದು ನಿಬ್ಬಾಣವನ್ನು ಹೇಗೆ ದಶರ್ಿಸಬಹುದು? ಅದು ಖಿನ್ನತೆ ಮತ್ತು ಅಪಾಯಗಳ ಬಿಡುಗಡೆಯಿಂದಾಗಿ, ಶ್ರದ್ಧೆಯಿಂದಾಗಿ, ಶಾಂತತೆಯಿಂದಾಗಿ, ಪ್ರಸನ್ನತೆಯಿಂದಾಗಿ, ಪರಮಸುಖದಿಂದಾಗಿ, ಆನಂದದಿಂದಾಗಿ, ಸೂಕ್ಷ್ಮತೆಯ ಗ್ರಹಿಕೆಯಿಂದಾಗಿ, ಪರಿಶುದ್ಧತೆಯಿಂದಾಗಿ, ಶೀತಲತೆಯಿಂದಾಗಿ.
ಓ ಮಹಾರಾಜ, ಹೇಗೆ ಒಬ್ಬನು ಪ್ರಚಂಡಾಗ್ನಿಯ ಪ್ರಜ್ವಲಿಸುವ ಕುಲುಮೆಯಲ್ಲಿ, ಸೌದೆ, ಒಣಕಡ್ಡಿಗಳ ರಾಶಿಯಲ್ಲಿ ಸಿಲುಕಿ ಸುಡುತ್ತಿರುತ್ತಾನೆ. ನಂತರ ಆತನು ಶಕ್ತಿಮೀರಿದ ಪರಿಶ್ರಮದಿಂದಾಗಿ ತನ್ನನ್ನು ಅದರಿಂದ ಪಾರಾಗುವಂತೆ ಮಾಡಿಕೊಂಡು ಬಿಡುಗಡೆ ಪಡೆದು ಆತನು ತಂಪಾದ ಸ್ಥಳಕ್ಕೆ ಬರುತ್ತಾನೆ. ಆಗ ಆತನಿಗೆ ಪರಮ ಹಿತಸುಖಕಾರಿಯಾದ ಅನುಭವವು ಉಂಟಾಗುತ್ತದೆ. ಅದೇರೀತಿಯಲ್ಲಿ ಯಾರೇ ಆಗಲಿ, ತನ್ನ ಜೀವನವನ್ನು ಯೋಗ್ಯವಾದ ರೀತಿಯಲ್ಲಿ ಜೀವಿಸಿ, ತನ್ನ ಸಂಖಾರಗಳನ್ನು, ಅದರ ಆಗು ಹೋಗುವಿಕೆಯನ್ನು ಸಮ್ಮಾರೀತಿಯಲ್ಲಿ ಅರಿಯತೊಡಗಿದಾಗ, ಆತನು ನಿಬ್ಬಾಣದ ಪರಮ ಸುಖವನ್ನು ಸಾಕ್ಷಾತ್ಕರಿಸುವನು. ಆಗ ರಾಗ, ದ್ವೇಷ ಮತ್ತು ಮೋಹದ ತ್ರಿಅಗ್ನಿಗಳು ಆರಿಹೋದಾಗ, ಹೇಗೆ ಕುಲುಮೆಯ ಅಗ್ನಿಯ ಭೀಕರವೋ ಹಾಗೆಯೇ ರಾಗ, ದ್ವೇಷ, ಮೋಹಾಗ್ನಿಗಳು ಸಹಾ ಎಂದು ಅರಿತು, ಹೇಗೆ ಕುಲುಮೆಯಿಂದ ಪಾರಾಗುವನೋ ಹಾಗೆಯೇ ಲೋಭ, ದ್ವೇಷ ಮತ್ತು ಮೋಹಾಗ್ನಿಯಿಂದ ಪಾರಾಗಿ ನಿಬ್ಬಾಣದ ತಂಪಾದ ಸಾಕ್ಷಾತ್ಕಾರ ಪಡೆಯುವನು.
ಅಥವಾ ಮತ್ತೆ ಓ ಮಹಾರಾಜ, ಊಹಿಸಿ, ಒಬ್ಬನು ಹಾವುಗಳ, ನಾಯಿಗಳ ಮತ್ತು ಮಾನವರ ಶವಗಳಿಂದ ಕೂಡಿದ ಹೊಂಡದಲ್ಲಿ ಬಿದ್ದಿರುತ್ತಾನೆ. ಆತನ ಶರೀರಕ್ಕೆ ಶವಗಳ ಕೂದಲುಗಳಲ್ಲೇ ಗಂಟು ಕಟ್ಟಿರುತ್ತದೆ. ಆತನಿಗೆ ತನ್ನ ಭೀಭತ್ಸ, ಅಸಹ್ಯಕರ ಸ್ಥಿತಿ ಗಮನಿಸಿ ಆತನು ಅಪಾರ ಪರಿಶ್ರಮಪಟ್ಟು, ಅಲ್ಲಿಂದ ಪಾರಾಗಿ ಶವಗಳಿಲ್ಲದ ಸ್ಥಳಕ್ಕೆ ಬಂದು ಸುಖದ ಅನುಭೂತಿ ಅನುಭವಿಸುತ್ತಾನೆ. ಅದೇರೀತಿಯಲ್ಲಿ ಒಬ್ಬನು ಯೋಗ್ಯವಾದ ಜೀವನ ನಡೆಸಿ ತನ್ನ ಯೋಗ್ಯವಾದ ಗಮನಹರಿಸುವಿಕೆಯಿಂದಾಗಿ, ಪ್ರಜ್ಞಾದಿಂದಾಗಿ ನಿಬ್ಬಾಣದ ಪರಮಸುಖವನ್ನು ಅನುಭವಿಸುವನು. ಹೇಗೆ ಶವಗಳನ್ನು ಕಂಡು ಅಸಹ್ಯಿಸುವನೋ ಹಾಗೆಯೇ ಆತನು ಇಂದ್ರಿಯ ಸುಖಗಳನ್ನು ಕಂಡು ಅಸಹ್ಯಿಸುವನು. ಶವಗಳ ಗುಂಡಿಯಿಂದ ಹೊರಬಂದಂತೆ ಆತನು ಕ್ಲೇಷಗಳಿಂದ ಮುಕ್ತನಾಗಿ ನಿಬ್ಬಾಣ ಪಡೆಯುವನು.
ಅಥವಾ ಓ ಮಹಾರಾಜ, ಹೇಗೆ ಶಸ್ತ್ರಗಳೊಂದಿಗೆ ಇರುವ ಶತ್ರುಗಳಿಂದ ಸುತ್ತುವರೆದ ಮನುಷ್ಯನು, ಭಯದಿಂದ, ಕಂಪನದಿಂದ ಕೂಡಿ ಅಸಮಾನ್ಯ ವೀರತನದಿಂದ, ಪರಾಕ್ರಮದಿಂದ ತನ್ನನ್ನು ಕಾಪಾಡಿಕೊಂಡು ಸುರಕ್ಷಿತವಾದ ಸ್ಥಳಕ್ಕೆ, ಕ್ಷೇಮಕರವಾದ ಸ್ಥಾನಕ್ಕೆ ತಲುಪುತ್ತಾನೆ. ಆಗ ಆತನು ನಿರಾಳವಾದ, ನೆಮ್ಮದಿಯಿಂದ ಕೂಡಿರುವ ಆನಂದವನ್ನು ಸುಖವನ್ನು ಅನುಭವಿಸುತ್ತಾನೆ. ಅದೇರೀತಿಯಲ್ಲಿ ಯಾರು ತನ್ನ ಜೀವನವನ್ನು ಯೋಗ್ಯವಾಗಿ ಜೀವಿಸಿ, ಯೋಗ್ಯರೀತಿಯ ಗಮನಹರಿಸುವಿಕೆಯಿಂದ, ಪ್ರಜ್ಞಾದಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ. ಆಗ ಆತನು ಭಯದಿಂದ ಮತ್ತು ಕಂಪನದಿಂದ ಮುಕ್ತನಾಗುತ್ತಾನೆ. ಓ ಮಹಾರಾಜ, ಹೇಗೆ ಜನ್ಮದಿಂದ, ಮುಪ್ಪಿನಿಂದ, ರೋಗದಿಂದ ಮತ್ತು ಮರಣದಿಂದ ಪುನಃ ಪುನಃ ಆಗುವ ದುಃಖದಿಂದಾಗಿ ಭೀತನಾಗಿ ಆತನು ಯೋಗ್ಯ ಜೀವನ ಆಚರಿಸಿ, ನಿಬ್ಬಾಣವನ್ನು ಆಶ್ರಯಸ್ಥಾನವನ್ನಾಗಿ ಪಡೆಯುವನು.
ಅಥವಾ ಓ ಮಹಾರಾಜ, ಒಬ್ಬನು ಕೊಳಕಾದ, ಕಸ, ನಾನಾ ಕಶ್ಮಲಗಳಿಂದ ಕೂಡಿದ, ಕೆಸರಿನಿಂದ ಕೂಡಿರುವ ಹಳ್ಳಕ್ಕೆ ಬೀಳುತ್ತಾನೆ. ನಂತರ ತನ್ನ ಅಪ್ರತಿಮ ಪರಿಶ್ರಮದಿಂದ ಆತನು ಅದರಿಂದ ಹೊರಬರುತ್ತಾನೆ. ನಂತರ ಒಂದು ಸ್ವಚ್ಛವಾದ ಕಲೆರಹಿತವಾದ, ಪರಿಶುದ್ಧವಾದ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಆತನು ಪರಮಾನಂದ ಅನುಭವಿಸುತ್ತಾನೆ. ಅದೇರೀತಿಯಲ್ಲಿ ಯಾರೆಲ್ಲರೂ ಯೋಗ್ಯಜೀವನದಿಂದಾಗಿ, ಜಾಗರೂಕತೆಯಿಂದ, ಯೋಗ್ಯವಾದ ಗಮನಹರಿಸುವಿಕೆಯಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ. ಅದರಿಂದಾಗಿ ಆತನು ಕಲೆಗಳಿಂದ ಮತ್ತು ಕ್ಲೇಷಗಳ ಕೆಸರಿನಿಂದ ಮುಕ್ತನಾಗುತ್ತಾನೆ. ಹೇಗೆ ಕೆಸರು, ಕಶ್ಮಲಗಳಿಂದ ಪಾರಾಗಿ ಪರಿಶುದ್ಧ ಸ್ಥಳಕ್ಕೆ ಆತನು ಬಂದನೋ ಹಾಗೆಯೇ ಆತನು ಕೀತರ್ಿ, ಪ್ರಶಂಸೆ, ಅಪಾಯಗಳ ಕೆಸರಿನಿಂದ, ಚಿತ್ತ ಕ್ಲೇಷಗಳ ಕಶ್ಮಲಗಳಿಂದ ಪಾರಾಗಿ ಪರಿಶುದ್ಧವಾದ ನಿಬ್ಬಾಣದೆಡೆಗೆ ತಲುಪುತ್ತಾನೆ.
ಮತ್ತೆ ನೀವು ಕೇಳಬಹುದು, ಹೇಗೆತಾನೆ ಆತನು ಯೋಗ್ಯಜೀವನದಿಂದಾಗಿ ನಿಬ್ಬಾಣ ಸಾಕ್ಷಾತ್ಕರಿಸುತ್ತಾನೆ? ಎಂದು. ಅದಕ್ಕೆ ನಾನು ಹೇಳುವುದೇನೆಂದರೆ ಆತನು ಸಮ್ಯಕ್ ಜೀವನದ ಶೀಲವಂತಿಕೆಯಿಂದ, ಸರಿಯಾದ ಗಮನಹರಿಸುವಿಕೆಯಿಂದ ಸತ್ಯವನ್ನು ಸರಿಯಾಗಿ ಗ್ರಹಿಸುವನು. ಹೀಗೆ ಆತನು ಎಲ್ಲಾ ವಿಷಯಗಳ ವಿಕಾಸ ಮಾಡುತ್ತಾನೆ ಮತ್ತು ಯಾವಾಗ ಆತನು ಹೀಗೆ ಮಾಡುತ್ತಾನೋ ಆಗ ಆತನು ಜನ್ಮವನ್ನು ಗ್ರಹಿಸುತ್ತಾನೆ. ಹಾಗೆಯೇ ರೋಗವನ್ನು, ಮುಪ್ಪನ್ನು ಮತ್ತು ಮರಣವನ್ನು ಗ್ರಹಿಸುತ್ತಾನೆ. ಆದರೆ ಆತನಿಗೆ ಅಲ್ಲಿ ಯಾವುದೇ ಸುಖ ಕಾಣಸಿಗುವುದಿಲ್ಲ. ಹೀಗಾಗಿ ಆತನು ಅದನ್ನೆಲ್ಲಾ ಸುಖವೆಂದು ಗ್ರಹಿಸುವುದಿಲ್ಲ. ಆತನಿಗೆ ಆದಿ, ಅಮರ ಮತ್ತು ಅಂತ್ಯವ್ಯಾವುದು ಕಂಡುಬರುವುದಿಲ್ಲ. ಆತನಿಗೆ ಹಿಡಿಯಲು ಅಥವಾ ತೃಪ್ತಿಪಡುವಂತಹುದು ಯಾವುದೂ ಕಾಣಿಸುವುದಿಲ್ಲ. ಹೇಗೆ ಮಹಾರಾಜ ಕಬ್ಬಿಣದ ಸಲಾಕೆ ಇಡೀದಿನ ಕಾಯಿಸಿದಾಗ ಅದು ಹೊಳೆಯುತ್ತದೆ, ಕೆಂಪಾಗುತ್ತದೆ, ದಹಿಸುತ್ತದೆ. ಅದನ್ನು ಹಿಡಿಯಲು ತುದಿಗಳಾಗಲಿ, ಮಧ್ಯಭಾಗವಾಗಲಿ ಸಾಧ್ಯವಾಗುವುದಿಲ್ಲ. ಏಕೆಂದರೆ ಎಲ್ಲವೂ ಚೆನ್ನಾಗಿ ಕಾದಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರು ಸಮ್ಯಕ್ ರೀತಿಯಲ್ಲಿ ಜೀವಿಸುವರೋ, ಆತನು ಸರಿಯಾದ ವಿಷಯಗಳ ಬಗ್ಗೆ, ಸಂಖಾರಗಳ ಬಗ್ಗೆ, ಸತ್ಯದ ಬಗ್ಗೆ ಅರಿಯುತ್ತಾನೆ. ಆತನು ಜನ್ಮದ ಬಗ್ಗೆ, ಮುಪ್ಪಿನ ಬಗ್ಗೆ, ರೋಗದ ಬಗ್ಗೆ, ಮರಣದ ಬಗ್ಗೆ ಅರಿಯುತ್ತಿರುತ್ತಾನೆ. ಅದೇ ಪುನರಾವತರ್ಿತವಾಗುವುದನ್ನು ಕಾಣುತ್ತಾನೆ. ಅದರಲ್ಲಿ ಆತನು ಯಾವುದೇ ಸುಖವನ್ನಾಗಲಿ ಅಥವಾ ಆನಂದವಾಗಲಿ ಕಾಣಲಾರ. ಹಾಗೆಯೇ ಅದರಲ್ಲಿ ಆತನು ಆದಿಯನ್ನು, ಮಧ್ಯವನ್ನು ಮತ್ತು ಅಂತ್ಯವನ್ನು ಕಾಣಲಾರ. ಹಿಡಿಯಲು ಯೋಗ್ಯವಾದುದನ್ನು ಆತನು ಇಡೀ ಅಸ್ತಿತ್ವದಲ್ಲೇ ಕಾಣಲಾರ. ಮತ್ತು ಆತನಲ್ಲಿ ಭಯಾನಕತೆ, ಅಪಾಯವೇ ಕಂಡುಬರುತ್ತದೆ. ಅಸಹ್ಯಿಸುವಿಕೆಯೇ ಕಂಡುಬರುತ್ತದೆ. ಆತನಿಗೆ ಯಾವುದು ಕ್ಷೇಮವಾಗಿ ಕಾಣಿಸುವುದಿಲ್ಲ. ಯಾವುದು ನಂಬಿಕೆಗೆ ಅರ್ಹವಾಗಿ ಕಾಣಿಸುವುದಿಲ್ಲ. ಆತನಿಗೆ ವಿರಾಗ ಹೆಚ್ಚಾಗಿ ಜ್ವರ ಬಂದಂತಾಗುತ್ತದೆ. ಯಾವುದೇ ಕ್ಷೇಮಕರ ಶರಣು ಕಾಣದೆ, ಆತನು ಪುನರಾವತರ್ಿತ ಜನ್ಮಗಳಿಂದಾಗಿ ವಿರಾಗ ತಾಳುತ್ತಾನೆ. ಹೇಗೆ ಕಬ್ಬಿಣದ ಕುಲುಮೆಯಲ್ಲಿ ಒಬ್ಬನು ಎಸೆದಾಗ ಹೇಗೆ ಆತನು ಯಾವ ರಕ್ಷಣೆ, ಶರಣು ಕಾಣದೆ ಕಂಗಾಲಾಗುವನೋ ಹಾಗೆ ಆತನಲ್ಲಿ ಅರತಿಯು ಉಂಟಾಗುತ್ತದೆ, ಅಸಂತೋಷವು ಉಂಟಾಗುತ್ತದೆ. ಆಗ ಆತನಿಗೆ ಯಾವುದು ನಂಬಿಕೆಗೆ ಅರ್ಹವಾದುದು ಕಾಣಿಸುವುದಿಲ್ಲ. ಆತನಿಗೆ ಜನ್ಮಗಳಲ್ಲಿ ಸಂತೋಷವೇ ಸಿಗುವುದಿಲ್ಲ. ಆತನು ಹೀಗೆ ಗ್ರಹಿಸುವಾಗ, ಕ್ಷಣಿಕ ಜೀವನದಲ್ಲಿ ಅಭದ್ರತೆ ಕಾಡುವುದು, ಆತನ ಚಿಂತನೆಯು ಹೀಗಿರುತ್ತದೆ: ಈ ಅನಂತ್ಯ ಸಂಭವಿಸುವಿಕೆಯಲ್ಲಿ ಎಲ್ಲೆಲ್ಲೂ ಅಗ್ನಿಯೇ ಕಾಣಿಸುತ್ತದೆ, ಉರಿಯುವುದೇ ಕಾಣಿಸುವುದು ಮತ್ತು ಪ್ರಜ್ವಲಿಸುವಿಕೆಯೇ ಕಂಡುಬರುತ್ತದೆ. ತುಂಬ ನೋವು, ನಿರಾಶೆಯೇ ಇದೆ. ಇದ್ಯಾವುದೂ ಇಲ್ಲದ ಭವವಿಲ್ಲದ, ಪರಮಶಾಂತವಾದ ಎಲ್ಲಾ ಸ್ಥಿತಿಗಳ ನಿರೋಧ ಸ್ಥಿತಿಯಾದ, ಎಲ್ಲಾ ದೋಷಗಳಿಂದ, ಉಪಾದಿಗಳಿಂದ ವಿಮುಕ್ತವಾದ ತನ್ಹಾದ ಅಂತ್ಯಸ್ಥಿತಿಯಾದ, ಭಾವೋದ್ರೇಕವಿಲ್ಲದ, ಶಾಂತವಾದ ನಿಬ್ಬಾಣವಿದ್ದಿದ್ದರೆ? ಮತ್ತು ಆಗಲೇ ಆತನ ಮನಸ್ಸು ಆ ಸ್ಥಿತಿಗೆ ಹಾರುತ್ತದೆ, ಭವವಿಲ್ಲದ ಆ ಸ್ಥಿತಿಯಲ್ಲಿ ಪರಮಶಾಂತತೆಯನ್ನು ಕಾಣುತ್ತಾನೆ. ತಾನು ಕೊನೆಗೂ ಶರಣುವನ್ನು ಪಡೆದೆ ಎಂದು ತೃಪ್ತಿತಾಳುತ್ತಾನೆ. ಓ ಮಹಾರಾಜ, ಹೇಗೆ ಒಬ್ಬನು ಅಪರಿಚಿತ ಭೂಮಿಗೆ ಹೋಗಿ, ಅಲ್ಲಿ ಮಾರ್ಗ ತಪ್ಪಿರುತ್ತಾನೆ. ನಂತರ ಮಾರ್ಗದ ಅರಿವು ಮೂಡಿ, ಅರಣ್ಯದಿಂದ ಪಾರಾಗಿ ಮನೆಗೆ ಹಿಂತಿರುಗುತ್ತಾನೆ. ಆಗ ಆತನು ಆನಂದಿತನಾಗಿ ನಾನು ಕೊನೆಗೂ ಮಾರ್ಗವನ್ನು ಕಂಡುಹಿಡಿದೆ ಎಂದು ನಲಿಯುತ್ತಾನೆ.
ಅದೇರೀತಿಯಲ್ಲಿ ಆತನು ಕ್ಷಣಿಕವಾದ ಜನ್ಮಗಳ ಸರಣಿಗಳನ್ನು ಕಂಡು ಹೀಗೆ ಯೋಚಿಸುತ್ತಾನೆ: ದುಃಖದಿಂದ, ನೋವಿನಿಂದ ಪೂರ್ಣವಾಗಿ ತುಂಬಿದ ಅನಂತ್ಯವಾದ ಸಂಭವಿಸುವಿಕೆಯು ಅಗ್ನಿಯಂತೆ ಉರಿಯುತ್ತಿದೆ ಮತ್ತು ಪ್ರಜ್ವಲಿಸುತ್ತಿದೆ. ಎಲ್ಲರೂ ಈ ಅಗ್ನಿಯ ಮೇಲೆಯೇ ಇದ್ದಾರೆ. ಎಲ್ಲಿ ಸಂಭವಿಸುವಿಕೆಯು ಇಲ್ಲವೋ ಅಲ್ಲೇ ಪರಮಶಾಂತತೆಯಿದೆ, ಅದು ಮಾತ್ರ ಮಧುರವಾಗಿದೆ, ಅದು ಎಲ್ಲಾ ಸ್ಥಿತಿಗಳ ನಿರೋಧವಾಗಿದೆ, ಎಲ್ಲಾ ಉಪಾದಿಗಳಿಂದ ಮುಕ್ತವಾದ ಸ್ಥಿತಿಯದು, ತಂಪಾದ ಅಂತ್ಯಸ್ಥಿತಿಯದು, ಭಾವೋದ್ರೇಕವಿಲ್ಲದ, ಪರಮಶಾಂತವಾದ, ನಿಬ್ಬಾಣವನ್ನು ಒಬ್ಬನು ತಲುಪಿದರೆ ಹೇಗೆ? ಮತ್ತು ಆ ಕ್ಷಣದಲ್ಲೇ ಆತನು ಚಿತ್ತವು ಹಾರಿ ಆ ಭವವಿಲ್ಲದ ಸ್ಥಿತಿ ತಲುಪಿ ಶಾಂತತೆ ಪಡೆಯುತ್ತಾನೆ. ಆಗ ಆತನು ತೃಪ್ತನಾಗಿ ಹೀಗೆ ಯೋಚಿಸುತ್ತಾನೆ: ಕೊನೆಗೂ ನಾನು ಶರಣುವನ್ನು ಪಡೆದೆನು ಮತ್ತು ಹೀಗೆ ಆತನು ಸಂಖಾರ ನಿರೋಧಕ್ಕೆ ಪರಿಶ್ರಮಬದ್ಧನಾಗುತ್ತಾನೆ, ಅತ್ಯಂತ ಜಾಗರೂಕತೆ ಸ್ಥಾಪಿಸುತ್ತಾನೆ, ಆನಂದದಿಂದ ಸಮತೋಲನಗೊಳಿಸುತ್ತಾನೆ. ಯೋಗ್ಯವಾದ ಗಮನಹರಿಸುವಿಕೆಯಿಂದ, ಹಾಗೆಯೇ ಆತನು ಕ್ಷಣಿಕತೆಯ ಆಚೆಗೆ ತಲುಪುತ್ತಾನೆ ಮತ್ತು ಸತ್ಯವನ್ನು ಸಾಕ್ಷಾತ್ಕರಿಸುತ್ತಾನೆ, ಶ್ರೇಷ್ಠಫಲವಾದ ಅರಹತ್ವಫಲ ಪಡೆಯುತ್ತಾನೆ ಮತ್ತು ಹೀಗೆ ಆತನು ತನ್ನ ಜೀವನ ಯೋಗ್ಯವಾಗಿ ಜೀವಿಸಿ, ಈ ರೀತಿ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ.
ಸಾಧು ಭಂತೆ ನಾಗಸೇನ, ಇದು ಹೀಗಿರುವುದರಿಂದಾಗಿ ನಾನು ಸಹಾ ನೀವು ಹೇಳಿದಂತೆಯೇ ಒಪ್ಪುತ್ತೆನೆ.
12. ನಿಬ್ಬಾಣ ಸನ್ನಿಹಿತ ಪನ್ಹೊ (ನಿಬ್ಬಾಣ ನೆಲೆಯ ಪ್ರಶ್ನೆ)
ಭಂತೆ ನಾಗಸೇನ, ನಿಬ್ಬಾಣವು ನೆಲೆಯಾಗಿರುವ ಪ್ರದೇಶವು ಪೂರ್ವದಲ್ಲಿರುವುದೇ ಅಥವಾ ದಕ್ಷಿಣದಲ್ಲಿರುವುದೇ ಅಥವಾ ಉತ್ತರದಲ್ಲಿರುವುದೇ ಅಥವಾ ಪಶ್ಚಿಮದಲ್ಲಿರುವುದೋ ಅಥವಾ ಮೇಲಿದೆಯೋ ಅಥವಾ ಕೆಳಗಿದೆಯೇ? ಅಥವಾ ದಿಗಂತ (ಕ್ಷಿತಿಜ)ದಲ್ಲಿದೆಯೇ? (196)ಓ ಮಹಾರಾಜ, ನಿಬ್ಬಾಣವಿರುವ ಪ್ರದೇಶ ಪೂರ್ವದಲ್ಲಾಗಲಿ ಅಥವಾ ದಕ್ಷಿಣದಲ್ಲಾಗಲಿ ಅಥವಾ ಪಶ್ಚಿಮದಲ್ಲಾಗಲಿ ಅಥವಾ ಉತ್ತರದಲ್ಲಾಗಲಿ ಅಥವಾ ಮೇಲಾಗಲಿ ಅಥವಾ ಕೆಳಗಾಗಲಿ ಅಥವಾ ದಿಗಂತ (ಕ್ಷಿತಿಜ)ದಲ್ಲಾಗಲಿ ಇಲ್ಲ.
ಹಾಗಿದ್ದರೆ ಭಂತೆ ನಾಗಸೇನ, ನಿಬ್ಬಾಣವೇ ಇಲ್ಲ. ಮತ್ತು ಯಾರು ಅದನ್ನು ಸಾಕ್ಷಾತ್ಕರಿಸಿರುವರೋ ಅವರ ಸಾಕ್ಷಾತ್ಕಾರವು ವ್ಯರ್ಥ ಮತ್ತು ನಾನು ನಿಮಗೆ ಇದರ ವಿವರಣೆ ನೀಡುತ್ತೇನೆ. ಭಂತೆ ಭೂಮಿಯಲ್ಲಿ ಹೊಲಗಳು ಮತ್ತು ತೋಟಗಳಿವೆ. ಅಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೆಯೇ ಸುಗಂಧ ದ್ರವ್ಯಗಳನ್ನು ಹೂಗಳಿಂದ ಪಡೆಯುತ್ತಾರೆ. ಮರಗಳಿಂದ ಹಣ್ಣುಗಳನ್ನು ಪಡೆಯುತ್ತಾರೆ. ಗಣಿಗಳಿಂದ ರತ್ನಗಳನ್ನು ಪಡೆಯುತ್ತಾರೆ. ಹೀಗೆ ಏನೆಲ್ಲಾ ಆಸೆಗಳು ಇರುತ್ತವೋ ಅದೆಲ್ಲವನ್ನು ಆ ಪ್ರದೇಶಕ್ಕೆ ಹೋಗಿ ಪಡೆಯುತ್ತೇವೆ. ಅದೇರೀತಿಯಲ್ಲಿ ನಾಗಸೇನ, ನಿಬ್ಬಾಣವು ಎಲ್ಲಿಯಾದರೂ ಇರುವುದಾದರೆ ಅಲ್ಲಿ ಹೋಗಿ ಅದನ್ನು ಉತ್ಪಾದಿಸಬಹುದು (ಪಡೆಯಬಹುದು). ಆದರೆ ಅದು ಇಲ್ಲದೆ ಇರುವುದರಿಂದಾಗಿ, ಆದ್ದರಿಂದ ನಾನು ಘೋಷಿಸುವುದು ಏನೆಂದರೆ ನಿಬ್ಬಾಣವೇ ಇಲ್ಲ, ಯಾರು ಅದನ್ನು ಸಾಕ್ಷಾತ್ಕರಿಸುವರೋ ಅದು ವ್ಯರ್ಥ ಎಂದು.
ಓ ಮಹಾರಾಜ, ನಿಬ್ಬಾಣವಿರುವಂತಹ ಯಾವ ಪ್ರದೇಶವು ಇಲ್ಲ ಮತ್ತು ಆದರೂ ನಿಬ್ಬಾಣವಿದೆ ಮತ್ತು ಯಾರು ಜೀವನವನ್ನು ಯೋಗ್ಯವಾಗಿ ಜೀವಿಸಿರುವರೋ, ಯೋಗ್ಯವಾದ ಜ್ಞಾನಯುತವಾದ ಗಮನಹರಿಸುವಿಕೆಯಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸಬಹುದು. ಹೇಗೆ ಅಗ್ನಿಯು ಇರುವುದೋ ಮತ್ತು ಆದರೂ ಅಗ್ನಿಯು ಎಲ್ಲಿಯೂ ಮೃತ್ಯುರೂಪದಲ್ಲಿ ಸಂಗ್ರಹವಾಗಿ ಇಲ್ಲವೋ, ಆದರೆ ಯಾವಾಗ ವ್ಯಕ್ತಿಯು ಎರಡು ಕಡ್ಡಿಗಳನ್ನು ಉಜ್ಜಿದಾಗ ಅಗ್ನಿಯು ಬರುವುದೋ, ಹಾಗೆಯೇ ಓ ಮಹಾರಾಜ, ನಿಬ್ಬಾಣವು ಇದೆ. ಆದರೂ ಅದು ಇರಬಹುದಾದಂತಹ ಯಾವ ಪ್ರದೇಶವೂ ಇಲ್ಲ ಮತ್ತು ಯಾರೆಲ್ಲರೂ ಜೀವನವನ್ನು ಯೋಗ್ಯವಾಗಿ ಜೀವಿಸಿದಾಗ ಮತ್ತು ಜ್ಞಾನಯೋಚಿತವಾದ ಗಮನಹರಿಸುವಿಕೆಯಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸಬಹುದು.
ಮತ್ತೆ ಓ ಮಹಾರಾಜ, ಚಕ್ರವತರ್ಿಯ ಬಳಿ ಏಳು ರತ್ನಗಳಿರುತ್ತವೆ. ಅವೆಂದರೆ ಚಕ್ರರತ್ನ, ಆನೆರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿರತ್ನ (ವಾಣಿಜ್ಯಮಂತ್ರಿ) ಮತ್ತು ಪರಿಣಾಮಕರ (ಬುದ್ಧಿವಾದ) ರತ್ನ ಮತ್ತು ಈ ಎಲ್ಲಾ ರತ್ನಗಳು ದೊರಕಬಹುದಾದಂತಹ ಯಾವ ಪ್ರದೇಶವೂ ಇಲ್ಲವಾಗಿದೆ. ಆದರೆ ಯಾವಾಗ ಚಕ್ರವತರ್ಿಯು ತನ್ನನ್ನು ಸರಿಯಾಗಿ ನಡೆಸಿಕೊಂಡಾಗ ಅವು ಸ್ವಯಂ ಆಗಿ ಉದ್ಭವವಾಗಿ ಆತನಿಗೆ ಕಾಣಿಸಿಕೊಳ್ಳುತ್ತವೆ. ಅದೇರೀತಿಯಾಗಿ ಓ ಮಹಾರಾಜ, ನಿಬ್ಬಾಣವು ಇದೆ. ಆದರೆ ಅದು ಎಲ್ಲಿಯೂ ಇಲ್ಲ. ಆದರೆ ಯಾರು ಸಮ್ಯಕ್ ಜೀವನವನ್ನು ನಡೆಸಿ, ಜ್ಞಾನ ಉಚಿತವಾದ ಗಮನಹರಿಸುವಿಕೆಯಿಂದಾಗಿ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತೇನೆ.
ಭಂತೆ ನಾಗಸೇನ, ನಾವು ನಿಬ್ಬಾಣವು ಎಲ್ಲಿಯೂ ಇಲ್ಲ ಎಂದು ಒಪ್ಪಿದೆವು ಎಂದು ಇಟ್ಟುಕೊಳ್ಳಿ. ಆದರೆ ಜೀವನವನ್ನು ಯೋಗ್ಯಗೊಳಿಸಲು, ಸಮ್ಯಕ್ ಜೀವನವನ್ನು ಪಾಲಿಸಿ ನಿಬ್ಬಾಣ ಸಾಕ್ಷಾತ್ಕರಿಸಲು ನೆಲೆಯಾವುದಾದರೂ ಇರಬೇಕಲ್ಲ?
ಹೌದು ಮಹಾರಾಜ, ಅಂತಹ ಸ್ಥಳವೊಂದಿದೆ.
ಯಾವುದು ಆ ಸ್ಥಾನ.
ಶೀಲವೇ ಮಹಾರಾಜ, ಯಾವಾಗ ಆತನು ಶೀಲದಲ್ಲಿ ಸುಪ್ರತಿಷ್ಠಾಪಿಸಿ ಮತ್ತು ಜ್ಞಾನೋಚಿತವಾದ ಗಮನಹರಿಸುವಿಕೆಯಿಂದ, ಜಾಗರೂಕತೆಯಿಂದ ಆತನು ಎಲ್ಲೇ ಇರಲಿ, ಅದು ಸಕ್ಕಯವನ ದೇಶವಾಗಬಹುದು ಅಥವಾ ಚೀನಾ ಅಥವಾ ವಿಲಾತ ಅಥವಾ ಅಲಸಂದ (ಅಲೆಗ್ಸಾಂಡ್ರಿಯ) ಅಥವಾ ನಿಕುಂಬಾ ಅಥವಾ ಕಾಶಿಕೋಶಲ ಅಥವಾ ಕಾಶ್ಮೀರ, ಗಂಧಾರ ಅಥವಾ ಪರ್ವತಶಿಖರದಲ್ಲಿ ಅಥವಾ ಬ್ರಹ್ಮಲೋಕದಲ್ಲಿ ಅಥವಾ ಎಲ್ಲಿಯಾದರೂ ಆಗಲಿ, ಆತನು ಸಮ್ಯಕ್ ಜೀವನದಿಂದ ಹಾಗು ಜ್ಞಾನೋಚಿತ ಗಮನಹರಿಸುವಿಕೆಯಿಂದಾಗಿ, ನಿಬ್ಬಾಣವನ್ನು ಸಾಕ್ಷಾತ್ಕರಿಸುವನು. ಹೇಗೆ ಓ ಮಹಾರಾಜ, ಯಾರು ಚಕ್ಷುವಿರುವವನು ಆತನು ಸಕ್ಕಯವನ, ಚೀನಾ, ವಿಲಾತ, ಅಲಸಂದ, ನಿಕುಂಬ, ಕಾಶಿ, ಕಾಶ್ಮೀರ, ಪರ್ವತಶಿಖರ ಅಥವಾ ಬ್ರಹ್ಮಲೋಕ ಇನ್ಯಾವುದೇ ಇರಲಿ, ಆತನು ಚಕ್ಷುವಿನಿಂದ ಅದನ್ನೆಲ್ಲಾ ಕಾಣುವನು. ಅದೇರೀತಿಯಲ್ಲಿ ಓ ಮಹಾರಾಜ, ಯಾರು ಸಮ್ಯಕ್ ಜೀವನದಿಂದಾಗಿ ಮತ್ತು ಜ್ಞಾನಯೋಚಿತ ಗಮನಹರಿಸುವಿಕೆಯಿಂದಾಗಿ, ಆತನು ಯಾವುದೇ ಪ್ರದೇಶದಲ್ಲಿರಲಿ ಆತನು ನಿಬ್ಬಾಣ ಸಾಕ್ಷಾತ್ಕಾರ ಮಾಡುತ್ತಾನೆ.
ಸಾಧು ಭಂತೆ ನಾಗಸೇನ, ನೀವು ನಿಬ್ಬಾಣದ ಕುರಿತು ಉಪದೇಶಿಸಿದಿರಿ, ಹಾಗೆಯೇ ನಿಬ್ಬಾಣ ಸಾಕ್ಷಾತ್ಕಾರದ ಕುರಿತು ಹಾಗೆಯೇ ಶೀಲದ ಲಾಭಗಳನ್ನು, ವಿವರಿಸಿದಿರಿ, ಮತ್ತು ಸಮ್ಮಾಪಟಿಪತ್ತಿ (ಲೋಕೊತ್ತರ ಪ್ರಾಪ್ತಿ) ದಶರ್ಿಸಿರುವಿರಿ, ಧಮ್ಮಧ್ವಜವನ್ನು ಹಾರಿಸಿರುವಿರಿ, ಧಮ್ಮ ನೇತ್ರವನ್ನು ಸ್ಥಾಪಿಸಿರುವಿರಿ, ಹಾಗೆಯೇ ನೀವು ಶ್ರೇಷ್ಠರ ಗುರಿ ಮತ್ತು ಸಾಧನೆ ಅಫಲಕಾರಿಯಲ್ಲ ಎಂದು ತೋರಿಸಿರುವಿರಿ, ಓ ಗಣಿವರಪವರ ನೀವು ಹೇಳಿದ್ದೆಲ್ಲವನ್ನು ನಾನು ಒಪ್ಪುವೆನು.
2ನೆಯ ವೆಸ್ಸಂತರ ವರ್ಗ ಮುಗಿಯಿತು (ಇದರಲ್ಲಿ ದ್ವಾದಶ ಪ್ರಶ್ನೆಗಳಿವೆ)
No comments:
Post a Comment