4. ಉಪಚಿಕಾ ವಗ್ಗೋ
1. ಉಪಚಿಕಂಗ ಪನ್ಹೊ (ಬಿಳಿ ಇರುವೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಿಳಿ ಇರುವೆಯ ಗುಣವು ಯಾವುದು? (246)ಓ ಮಹಾರಾಜ, ಹೇಗೆ ಬಿಳಿ ಇರುವೆಯು ತನ್ನ ಛಾವಣಿಯನ್ನು ಸರಿಪಡಿಸಿಯೇ ಕೆಲಸಕ್ಕೆ ಹೋಗುವಂತೆ ಅದೇರೀತಿಯಲ್ಲಿ ಓ ರಾಜ, ಯತ್ನಶೀಲ ಭಿಕ್ಷುವು ನಿರಂತರ ಯತ್ನಶೀಲನಾಗಿ, ಭಿಕ್ಷಾಟನೆಗೆ ಹೋಗುವಾಗ ಜಾಗ್ರತಭಾವದಿಂದ ಮತ್ತು ಸ್ವನಿಯಂತ್ರಣದ ಛಾವಣಿ ಧರಿಸಿ ಹೋಗುತ್ತಾನೆ. ಹೀಗೆ ಆತನು ಹೋಗುವಾಗ ಎಲ್ಲಾರೀತಿಯ ಭಯಗಳಿಂದ ಮುಕ್ತನಾಗುತ್ತಾನೆ. ಇದೇ ಓ ಮಹಾರಾಜ, ಬಿಳಿ ಇರುವೆಯಿಂದ ಪಾಲಿಸಬೇಕಾದ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಶೀಲ ಸಂಯಮಗಳನ್ನು ಧರಿಸಿ, ಸತ್ಯತೆಯ ಛಾವಣಿಯಲ್ಲಿ ಆಶ್ರಯ ಪಡೆದು ಮತ್ತು ಸಂಯಮದಿಂದ, ಲೋಕದಿಂದ ಭಾಧಿತನಾಗದೆ, ಎಲ್ಲಾರೀತಿಯ ಭಯಗಳಿಂದ ಮುಕ್ತನಾಗುತ್ತಾನೆ.
2. ವಿಳಾರ ಪನ್ಹೋ (ಬೆಕ್ಕಿನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಬೆಕ್ಕಿನ 2 ಗುಣಗಳಾವುವು? (247)ಓ ಮಹಾರಾಜ, ಹೇಗೆ ಬೆಕ್ಕು ಗುಹೆಗಳಲ್ಲಿ, ರಂಧ್ರಗಳಲ್ಲಿ, ಮಹಡಿಗಳ ಒಳಗೆ ವಾಸಿಸುತ್ತದೋ, ಆದರೂ ಅದರ ಅನ್ವೇಷಣೆ ಇಲಿ ಹೆಗ್ಗಣಗಳೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಆತನು ಎಲ್ಲೇ ಹೋಗಲಿ ಅದು ಹಳ್ಳಿಯೇ ಆಗಿರಲಿ ಅಥವಾ ಕಾಡೇ ಆಗಿರಲಿ ಅಥವಾ ಮರದ ಬುಡವೇ ಆಗಿರಲಿ, ಅಥವಾ ಶೂನ್ಯ ಗೃಹವೇ ಆಗಿರಲಿ, ಆತ ಸತತ ಸ್ಮೃತಿವಂತನಾಗಿ, ಅಪ್ರಮಾದದಿಂದ ಇರುತ್ತಾನೆ. ಅವನ ಆಹಾರವೇ ಕಾಯಗತಾಸ್ಮೃತಿ ಆಗಿದೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾಗಿರುವ ಬೆಕ್ಕಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಬೆಕ್ಕು ತನ್ನ ಬೇಟೆಯನ್ನು ಬೆನ್ನಟ್ಟುವ ಮುನ್ನ ಕುಗ್ಗಿ ಕುಳಿತಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಪಂಚ ಉಪಾದಾನ ಖಂಧಗಳಲ್ಲಿ ಉದಯ ಅಳಿವುಗಳ ವೀಕ್ಷಣೆಯಲ್ಲಿ ವಿಹರಿಸುತ್ತಾನೆ. ಹೇಗೆಂದರೆ ಇದೇ ದೇಹ, ಇದೇ ದೇಹದ ಉದಯ, ಇದೇ ದೇಹದ ಅಂತ್ಯ, ಹಾಗೆಯೇ ಇದೇ ವೇದನೆಗಳು, ಇವೇ ವೇದನಾಗಳ ಉದಯ, ಇದೇ ವೇದನಾ ನಿರೋಧ, ಇವೇ ಸಞ್ಞಾ, ಇವೇ ಸಂಞ್ಞಗಳ ಉದಯ ಇವೇ ಸಂಞ್ಞಗಳ ಕೊನೆ ಇವೇ ಸಂಖಾರಗಳು, ಇವೇ ಸಂಖಾರಗಳ ಉದಯ, ಇವೇ ಸಂಖಾರಗಳ ಕೊನೆ, ಇದೇ ವಿಞ್ಞಾನ, ಇದೇ ವಿಞ್ಞಾನದ ಕೊನೆ ಇದೇ ಮಹಾರಾಜ ಭಿಕ್ಷುವು ಹೊಂದಬೇಕಾದ ಬೆಕ್ಕಿನ ದ್ವಿತೀಯ ಅಂಗವಾಗಿದೆ.
ಇದರ ಬಗ್ಗೆ ಓ ಮಹಾರಾಜ, ಭಗವಾನರು ದೇವಾದಿದೇವರು ಹೀಗೆ ಹೇಳಿದ್ದಾರೆ: ಭವಿಷ್ಯದಲ್ಲಿ ಸ್ಥಿತಿಗಳಲ್ಲಿ ಪುನರ್ಜನ್ಮವನ್ನು ಹುಡುಕಬೇಡ, ಸ್ವರ್ಗವು ತಾನೇ ಏನು ಲಾಭವಾಗಬಲ್ಲದು. ಈಗಿನ ವರ್ತಮಾನ ಜಗತ್ತಿನಲ್ಲಿ ಮತ್ತು ಈ ಸ್ಥಿತಿಯಲ್ಲಿ ನಿನ್ನನ್ನು ಹುಡುಕಿಕೊಳ್ಳುತ್ತ ಜಯಶಾಲಿಯಾಗು.
3. ಉಂದುರಂಗ ಪನ್ಹೊ (ಇಲಿ/ಹೆಗ್ಗಣ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು, ಹೆಗ್ಗಣದ ಯಾವ ಒಂದು ಗುಣದಿಂದ ಹೊಂದಿಕೊಳ್ಳಬೇಕು? (248)ಓ ಮಹಾರಾಜ, ಹೇಗೆ ಇಲಿಯು ಮುಂದೆ ಮತ್ತು ಹಿಂದೆ ಅಡ್ಡಾಡುತ್ತಿರುತ್ತದೋ ಸದಾ ಆಹಾರಕ್ಕಾಗಿ ಹುಡುಕಾಡುತ್ತಿರುತ್ತದೋ, ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಸದಾ ಚಿತ್ತದಲ್ಲಿ ಯೋಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆ ಯಿಂದಲೇ ತಲ್ಲೀನನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಇಲಿಯ ಒಂದು ಗುಣವಾಗಿದೆ. ಓ ರಾಜ ಇದರ ಬಗ್ಗೆ ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಸದಾ ಜಾಗೃತನಾಗಿ ಶಾಂತನಾಗಿರು, ಓ ವಿಪಸ್ಸನ ಸಾಧಕನೇ ಎಲ್ಲಕ್ಕಿಂತ ಶ್ರೇಷ್ಠವೆಂದು ಪ್ರಜ್ಞಾವೆಂದು ತೂಗಿ, ಎಲ್ಲಾ ಬಯಕೆಗಳಿಂದ, ಸುಖಗಳಿಂದ ದೂರವಾಗಿ ಸ್ವತಂತ್ರನಾಗಿರು?
4. ವಿಚ್ಛಿಕಂಗ ಪನ್ಹೊ (ಚೇಳಿನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಚೇಳಿನ ಒಂದು ಗುಣಯಾವುದು? (249)
ಓ ಮಹಾರಾಜ, ಹೇಗೆ ಚೇಳಿಗೆ ತನ್ನ ಬಾಲವೇ ಆಯುಧವೋ ಮತ್ತು ಅದು ಚಲಿಸುವಾಗ ಬಾಲವನ್ನು ನೇರವಾಗಿಟ್ಟುಕೊಂಡೇ ಹೋಗುವುದೋ ಅದೇರೀತಿಯಲ್ಲಿ ಓ ಮಹಾರಾಜ, ಪ್ರಯತ್ನಶಾಲಿ ಭಿಕ್ಷುವು, ಧ್ಯಾನಿಯು ತನ್ನ ಜ್ಞಾನವನ್ನೇ ಆಯುಧವಾಗಿ ಹೊಂದುತ್ತಾನೆ ಮತ್ತು ತನ್ನ ಜ್ಞಾನಾಯುಧವನ್ನು ಸಿದ್ಧವಾಗಿಯೇ ಇಟ್ಟುಕೊಂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚೇಳಿನ ಗುಣವಾಗಿದೆ. ಮತ್ತು ಇದರ ಬಗ್ಗೆ ಓ ರಾಜ, ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಜ್ಞಾನ ಖಡ್ಗವನ್ನು ಹಿಡಿದುಕೊಂಡು, ವಿಹರಿಸು ಓ ವಿಪಸ್ಸನ ಸಾಧಕನೇ (ಜ್ಞಾನಿಯೇ) ಸದಾ ಸಂಗ್ರಾಮದಲ್ಲಿ ಅಜೇಯನಾಗಿ ಸರ್ವಭಯಗಳಿಂದ ಮುಕ್ತನಾಗು.
5. ನಕುಲಂಗ ಪನ್ಹೊ (ಮುಂಗೂಸಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಂಗೂಸಿಯ ಒಂದು ಗುಣ ಯಾವುದು? (250)ಓ ಮಹಾರಾಜ, ಹೇಗೆ ಮುಂಗೂಸಿಯು ಸರ್ಪಕ್ಕೆ ಆಕ್ರಮಣ ಮಾಡುವ ಮುನ್ನ, ತನ್ನ ಶರೀರವನ್ನು ಪ್ರತ್ಯೌಷಧಗಳಿಂದ ರಕ್ಷಿಸಿಕೊಂಡಿರುತ್ತದೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲನು, ಕ್ರೋಧದಿಂದ, ಆಘಾತಗಳಿಂದ, ದ್ವೇಷದಿಂದ, ಕಲಹದಿಂದ, ವಿಗ್ರಹ, ವಿವಾದ, ವಿರೋಧಗಳಿಂದ ವ್ಯಾಪಿತವಾದ ಈ ಲೋಕದಲ್ಲಿ ಸಂಚರಿಸುವಾಗ, ವ್ಯವಹರಿಸುವಾಗ ಅದಕ್ಕೆ ಮುಂಚೆಯೇ ಮಹಾ ಪ್ರತ್ಯೌಷಧಿಯಾದ ಮೈತ್ರಿಯಿಂದ ಕೂಡಿದವನಾಗಿರುತ್ತಾನೆ. ಮೈತ್ರಿಯಿಂದ ಕೂಡಿರುವಾಗ ಆತನಿಗೆ ಯಾವ ಹಾನಿಯು ಆಗದು. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಮುಂಗೂಸಿಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ಧಮ್ಮಾಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಆದ್ದರಿಂದ ಮೆತ್ತಭಾವನೆಯಿಂದ ತನ್ನ ಬಂಧುಗಳಂತೆ ಪರರಿಗೂ, ಅಪರಿಚಿತರಿಗೂ ಮತ್ತು ಇಡೀ ಜಗತ್ತಿಗೂ ಮೆತ್ತಾಭಾವನೆಯಿಂದ (ಮೆತ್ತ ಚಿತ್ತದಿಂದ) ವ್ಯಾಪಿಸಬೇಕು. ಇದೇ ಬುದ್ಧರ ಶಾಸನವಾಗಿದೆ.
6. ಜರಸಿಂಗಾಲ ಪನ್ಹೊ (ಮುದಿನರಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಮುದಿನರಿಯ ಯಾವ 2 ಗುಣಗಳಿಂದಕೂಡಿರಬೇಕು? (251)
ಓ ಮಹಾರಾಜ, ಹೇಗೆ ಮುದಿನರಿಯು ಯಾವುದೇ ಆಹಾರವು ಸಿಗಲಿ ಅದು ಅಸಹ್ಯಪಡುವುದಿಲ್ಲ. ಅದು ಅಗತ್ಯವಿದ್ದಷ್ಟು ತಿನ್ನುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ತನ್ನನ್ನು ಜೀವಂತವಾಗಿರಿಸುವ ಸಲುವಾಗಿ ಏನೇ ಆಹಾರವು ಭಿಕ್ಷೆಯಲ್ಲಿ ದೊರೆತರೂ ಅದನ್ನು ತಿನ್ನುತ್ತಾನೆ. ಇದೇ ಓ ರಾಜ, ಮುದಿನರಿಯಲ್ಲಿ ಕಂಡುಬರುವ ಭಿಕ್ಷು ಪಾಲಿಸುವಂತಹ ಗುಣವಾಗಿದೆ. ಇದರ ಬಗ್ಗೆ ಓ ರಾಜ ಥೇರ ಮಹಾಕಸ್ಸಪರವರು ಹೀಗೆ ಹೇಳಿದ್ದಾರೆ:
ನನ್ನ ವಾಸಸ್ಥಳವನ್ನು ಬಿಡುತ್ತಾ ನಾನು ಆಹಾರಕ್ಕೆ ಹೊರಟೆನು. ಹಳ್ಳಿಯ ಹಾದಿಯಲ್ಲಿ ಅಲ್ಲಿ ಒಬ್ಬ ಕುಷ್ಠರೋಗಿಯು ಆಹಾರ ಸೇವಿಸುತ್ತಿದ್ದನು. ಆತನನ್ನು ಕಂಡು ಆತ ದಾನ ನೀಡಲೆಂದು, ಇಚ್ಛಾಪೂರ್ವಕವಾಗಿ ಆತನ ಬಳಿಯಲ್ಲಿ ನಿಂತೆನು. ಆತನು ತನ್ನ ಕುಷ್ಟರೋಗದ ಕೈಯಿಂದ ನನ್ನ ಪಿಂಡಪಾತ್ರೆಗೆ ಮುಷ್ಠಿ ಅನ್ನವನ್ನು ಹಾಕಿದನು. ಹಾಗೆ ಹಾಕುವಾಗ ಆತನ ಶಿಥಿಲ ಬೆರಳೊಂದು ಸಹ ಮುರಿದು ಪಿಂಡಪಾತ್ರೆಯಲ್ಲಿ ಬಿದ್ದಿತು. ಗೋಡೆಯ ಬದಿಯಲ್ಲಿ ಕುಳಿತು ಮುಷ್ಠಿ ಆಹಾರವನ್ನು ನಾನು ಅಂತರಂಗದಲ್ಲಿ ಯಾವುದೇ ಅಸಹ್ಯವನ್ನು ತಾಳದೆ ತಿಂದೆನು.
ಮತ್ತೆ ಓ ರಾಜ, ಹೇಗೆ ಮುದಿನರಿಗೆ ಆಹಾರವು ಸಿಕ್ಕಾಗ ಅದು ಪರೀಕ್ಷಿಸಿಕೊಂಡು ನಿಲ್ಲುವುದಿಲ್ಲ. ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ಆತನಿಗೆ ಆಹಾರ ದೊರೆತಾಗ, ಆತನು ಅದು ಕಹಿಯೋ, ಸಿಹಿಯೋ, ಸುಗಂಧಿತವೋ ಅಥವಾ ದುರ್ಗಂಧಿತವೋ ಗಮನಿಸದೆ ಸೇವಿಸುತ್ತಾನೆ. ಇದೇ ಓ ರಾಜ, ಮುದಿನರಿಯ ಗುಣಗಳನ್ನು ಭಿಕ್ಷುವು ಹೊಂದಬೇಕಾಗಿದೆ. ಇದರ ಬಗ್ಗೆ ಓ ರಾಜ, ಥೇರ ಉಪಸೇನಾ ವಂಗಂತಪುತ್ತರು ಹೀಗೆ ಹೇಳುತ್ತಾರೆ:
ಕಹಿಯಾದ ಆಹಾರದಲ್ಲು ಆತನು ಆನಂದಿತನಾಗುತ್ತಾನೆ. ಹಾಗೆಯೇ ಸಿಹಿಯನ್ನೇ ಬಯಸಲಾರ, ಯಾರ ಚಿತ್ತವು ರಸಲಾಲಸೆಯನ್ನು ಹೊಂದಿರುವುದೋ ಅದು ಉನ್ನತ ಸಮಾಧಿ ಸ್ಥಿತಿಗಳಲ್ಲಿ ಆನಂದಿಸಲಾರದು. ಯಾರು ಸಿಕ್ಕಷ್ಟರಲ್ಲೇ ಸಂತೃಪ್ತನೋ ಆತನು ಮಾತ್ರ ಸಮನತ್ವವನ್ನು ಪೂರ್ಣಗೊಳಿಸುವನು.
7. ಮಿಗಂಗ ಪನ್ಹೊ (ಜಿಂಕೆಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಜಿಂಕೆಯ ಯಾವ 3 ಗುಣಗಳನ್ನು ಹೊಂದಿರ ಬೇಕು? (252)ಓ ಮಹಾರಾಜ, ಹೇಗೆ ಜಿಂಕೆಯು ಪದೇಪದೇ ಅಡವಿಗೆ ಹಗಲಿನಲ್ಲೇ ಹೋಗುವುದು ಮತ್ತು ರಾತ್ರಿಯು ತೆರೆದ ಗಾಳಿಯಲ್ಲಿರುವುದು. ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ಹಗಲಿನಲ್ಲಿ ಕಾಡಿನಲ್ಲಿ ನೆಲೆಸಿ, ರಾತ್ರಿಯಲ್ಲಿ ತೆರೆದ ಆಕಾಶದಲ್ಲಿ ಇರುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ಪ್ರಥಮ ಗುಣವಾಗಿದೆ. ಇದರ ಬಗ್ಗೆ ಓ ರಾಜ, ದೇವಾದಿದೇವ ಭಗವಾನರು ಲೋಮಹಂಸಕನ ಪರಿಯಾಯದಲ್ಲಿ ಹೀಗೆ ಹೇಳಿದ್ದಾರೆ:
ಮತ್ತು ನಾನು, ಸಾರಿಪುತ್ರ ರಾತ್ರಿಯು ತಂಪಾಗಿರುವಾಗ ಮತ್ತು ಹೇಮಂತ ಋತುವಿನಲ್ಲಿ ಮತ್ತು ಯಾವಾಗ ಹಿಮವು ಬೀಳುತ್ತಿರುವುದೋ ಅಂತಹ ಸಮಯದಲ್ಲಿ ನಾನು ತೆರೆದ ಆಕಾಶದಲ್ಲೇ ಕಾಲ ಕಳೆಯುತ್ತಿದ್ದೆನು ಮತ್ತು ಹಗಲನ್ನು ಕಾಡಿನಲ್ಲಿ ಕಳೆಯುತ್ತಿದ್ದನು ಮತ್ತು ಬೇಸಿಗೆಯ ಕೊನೆಯ ಮಾಸದಲ್ಲಿ ನಾನು ಹಗಲಿನಲ್ಲಿ ತೆರೆದ ಆಕಾಶದಲ್ಲಿದ್ದು ರಾತ್ರಿಯಲ್ಲಿ ಅರಣ್ಯದಲ್ಲೇ ವಾಸಿಸುತ್ತಿದ್ದೆನು.
ಮತ್ತೆ ಓ ರಾಜ, ಹೇಗೆ ಜಿಂಕೆಯ ಬಾಣವನ್ನು ಬಿಡುವಾಗ ಅಥವಾ ಈಟಿಯನ್ನು ಎಸೆಯುವಾಗ ಅದು ಬಾಗಿ ಅಥವಾ ಹಾರಿ ಅಥವಾ ಪಕ್ಕಕ್ಕೆ ಸರಿದು ಪರಾರಿಯಾಗುತ್ತದೆ. ತನ್ನ ದೇಹವನ್ನು ಗಾಸಿಯಾಗುವುದಕ್ಕೆ ಬಿಡಿವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಆತನಲ್ಲಿ ಪಾಪಯುತವಾದ ಇಚ್ಛೆಗಳು, ಯೋಚನೆಗಳು ಉಂಟಾದರೂ ಅದಕ್ಕೆ ಸಿಕ್ಕಿಕೊಳ್ಳುವುದಿಲ್ಲ. ಅದರಿಂದ ಪಾರಾಗುತ್ತಾನೆ. ತನ್ನ ಚಿತ್ತದಲ್ಲಿ ಆ ವಿತರ್ಕವನ್ನು ಇಡಲಾರ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಜಿಂಕೆಗೆ ಮಾನವರು ಕಂಡುಬಂದರೆ ಅದು ಈ ಬದಿಗೆ ಅಥವಾ ಆ ಬದಿಗೆ ಪರಾರಿಯಾಗಿ ಜನರ ಕಣ್ಣಿಗೆ ಬೀಳದಂತೆ ಹೋಗುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಿಂದ ಕೂಡಿ, ಜಗಳವಾಡುವ ಜನರನ್ನು ಕಂಡಾಗ, ವಿವಾದಶೀಲ, ದುಶ್ಶೀಲರನ್ನು ಕಂಡಾಗ, ಅಥವಾ ಸೋಮಾರಿಗಳನ್ನು, ಸಂಗಗಳಲ್ಲಿ ನಲಿಯುವ ಜನರನ್ನು ಕಂಡಾಗ ಆತನು ಈ ದಾರಿಯನ್ನು ಆ ದಾರಿಯನ್ನು ಬಳಸಿ ಅವರ ಕಣ್ಣಿಗೆ ಕಾಣದಂತೆ ಅದೃಷ್ಯನಾಗುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿ ಮಹಾಥೇರರಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ: ಪಾಪಿಚ್ಛೆವುಳ್ಳವನು ಸೋಮಾರಿಯು, ಹೀನವೀರ್ಯನು, ಉತ್ಸಾಹಹೀನನು ಅಲ್ಪಶ್ರುತನು, ಅನಾಚಾರಿಯು ನನಗೆ ಎಲ್ಲಿಯೂ ಯಾವಾಗಲೂ ನನ್ನ ಸಂಗಾತಿಯಾಗದಿರಲಿ ಅಥವಾ ನನ್ನೊಂದಿಗೆ ಇರದಿರಲಿ.
8. ಗೊರೂಪಂಗ ಪನ್ಹೊ (ಗೂಳಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಗೂಳಿಯ ಯಾವ ನಾಲ್ಕು ಗುಣಗಳಿಂದಕೂಡಿರಬೇಕು? (253)
ಓ ಮಹಾರಾಜ, ಹೇಗೆ ಗೂಳಿಯು ಎಂದಿಗೂ ತನ್ನ ಕೊಟ್ಟಿಗೆಯನ್ನು ಬಿಡಲಾರದೊ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ಎಂದಿಗೂ ತನ್ನ ಕಾಯದ ಬಗ್ಗೆ ತಪ್ಪು ಅಭಿಪ್ರಾಯ ತಾಳದೆ, ಈ ರೀತಿಯ ಯೋಗ್ಯ ತಿಳುವಳಿಕೆ ಹೊಂದಿರುತ್ತಾನೆ: ಈ ಶರೀರವು ಅನಿತ್ಯವಾದುದು, ಶಿಥಿಲವಾಗುವಂತಹುದು, ವಿಘಟವಾಗುವಂತಹುದು, ಅಸಹ್ಯವು ಜರಾಮರಣಕ್ಕೆ ಈಡಾಗುವಂತಹುದು. ಇದೇ ಓ ರಾಜ, ಭಿಕ್ಷು ಹೊಂದಿರುವ ಗೂಳಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಗೂಳಿಯು ನೇಗಿಲನ್ನು ಹೊತ್ತುಕೊಂಡಾಗ, ಅದು ನೋವಾಗಲಿ ಅಥವಾ ಹಿತಕರವಾಗಲಿ ಅದನ್ನು ಸಹಿಸಿಕೊಳ್ಳುತ್ತದೆ. ಅದೇರೀತಿ ಓ ರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಸಮಣ ಜೀವನದಲ್ಲಿ ಹೊಕ್ಕಾಗ, ಅದರೊಂದಿಗೆ ಇರುತ್ತಾನೆ. ಸುಖವಾಗಲಿ ಅಥವಾ ದುಃಖವಾಗಲಿ, ಜೀವಿತದ ಕೊನೆಯವರೆಗೂ, ಕೊನೆ ಉಸಿರಿನವರೆಗೂ ಸಮಣ ಜೀವನದಲ್ಲಿ ಯೋಗ್ಯವಾಗಿ ಜೀವಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಳಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಗೂಳಿಯು ನೀರನ್ನು ಕುಡಿಯುವಾಗ ಎಂದಿಗೂ ತೃಪ್ತಿಯಾಗಲಾರದು. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ಗುರುಗಳಿಂದ, ಆಚಾರ್ಯರಿಂದ ಉಪದೇಶ ಪಡೆಯುವಾಗ ಆನಂದಿತವಾಗಿ ಎಂದಿಗೂ ತೃಪ್ತಿಹೊಂದಲಾರ. ಇದೇ ಓ ರಾಜ, ಗೂಳಿಯು ಹೊಂದಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಗೂಳಿಗೆ ಯಾರೇ ನೇಗಿಲು ತೊಡಿಸಲಿ, ಸಮವಾಗಿ ಸಹಿಸುವುದು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಬೋಧನೆ ನೀಡುವವರು ಯಾರೇ ಆಗಲಿ, ಅವರು ಆಚಾರ್ಯರು, ಹಿರಿಯರು, ಕಿರಿಯರು ಗೃಹಸ್ಥರು ಯಾರೇ ಆಗಲಿ ಬೋಧಿಸುವಾಗ ತಲೆಬಾಗಿಸಿ ಅದನ್ನು ಸ್ವೀಕರಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಳಿಯ ನಾಲ್ಕನೆಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
7 ವರ್ಷದ ಸಮಣೇರನಾಗಲಿ, ಇಂದೇ ಸಂಘಕ್ಕೆ ಸೇರಿದವನಾಗಲಿ, ಆತನು ಸಹಾ ನನಗೆ ಬೋಧಿಸಿದರೆ, ತಲೆಬಾಗಿಸಿ ಆನಂದದಿಂದ ಆತನ ಬುದ್ಧಿವಾದವನ್ನು ಸಹಿಸುವೆನು. ಕಾಲಕಾಲಕ್ಕೆ ಆತನ ಭೇಟಿಯಾದಾಗ ವಾತ್ಯಲ್ಯದಿಂದ, ಮೈತ್ರಿಯಿಂದ ಆತನನ್ನು ಕಾಣುತ್ತೇನೆ, ಆತನು ಶುದ್ಧನಾಗಿದ್ದರೆ ಗುರು ಸ್ಥಾನದಲ್ಲಿ ಕಾಣುತ್ತೇನೆ.
9. ವರಾಹಂಗ ಪನ್ಹೋ (ಹಂದಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹಂದಿಯ ಯಾವ 2 ಗುಣಗಳನ್ನು ಹೊಂದಿರಬೇಕು? (254)
ಓ ಮಹಾರಾಜ, ಹೇಗೆ ಹಂದಿಯು ಗೀಷ್ಮ ಮಾಸದಲ್ಲಿ ನೀರು ಇರುವ ಕಡೆ ಆಶ್ರಯ ಪಡೆಯುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿರುತ್ತಾನೆ. ಯಾವಾಗ ಆತನ ಚಿತ್ತವು ಚದುರುತ್ತದೋ ಮತ್ತು ಬೀಳುವಂತಿರುತ್ತದೋ ಕೋಪದಿಂದ ವ್ಯಗ್ರವಾಗಿದೆಯೋ, ಆಗ ಆತನು ಮೈತ್ರಿಯ ತಂಪಾದ ಸಿಹಿ ನೀರಿನಿಂದ ಚೈತನ್ಯ ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಹಂದಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಹಂದಿಯು ಕೆಸರಿನಲ್ಲಿ ಆಶ್ರಯ ಪಡೆಯುತ್ತದೋ, ಅದು ಕೆಸರಿನಲ್ಲಿ ಅಗೆಯುತ್ತ, ತನ್ನ ಮೂತಿಯಿಂದ ಕೊರೆಯುತ್ತ ನೀರಿನ ತೊಟ್ಟಿಯಂತೆ ಮಾಡಿ ಅದರಲ್ಲಿ ತಂಪಾಗಿ ನೆಲೆಸುತ್ತದೊ, ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಯದ ಮೇಲೆ ಚಿತ್ತವಿಟ್ಟು ಮಲಗುತ್ತ ಕಾಯಗತಸತಿ ಸಾಧಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಿರುವ ಹಂದಿಯ ದ್ವಿತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಪಿಂಡೋಲ ಭಾರಧ್ವಜ ಥೇರರು ಹೀಗೆ ಹೇಳಿದ್ದಾರೆ:
ಏಕಾಂಗಿಯಾಗಿ ಯಾರು ಹತ್ತಿರವಿರದೆ, ವಿಪಸ್ಸನ ಸಾಧಕನು, ಈ ಕಾಯದ ನಿಜಸ್ವರೂಪವನ್ನು ಅರಿಯಲು ಸಂಶೋಧಿಸುತ್ತಾನೆ. ಆಳ ಚಿಂತನೆಯ ಮಧುರವಾದ ಹಾಸಿಗೆಯಲ್ಲಿ ಆತನು ಮಲಗಿ ವಿಶ್ರಮಿಸುತ್ತಾನೆ.
10. ಹತ್ಥಿಂಗ ಪನ್ಹೊ (ಆನೆಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಆನೆಯ ಐದು ಗುಣಗಳಾವುವು? (255)
ಓ ಮಹಾರಾಜ, ಹೇಗೆ ಆನೆಯು ನಡೆಯುತ್ತದೋ ಆಗ ಅದು ಭೂಮಿಯನ್ನು ತುಳಿಯುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಯದ ಸ್ವರೂಪದಲ್ಲಿ ನೈಪುಣ್ಯತೆ ಪಡೆದು, ಪಾಪವನ್ನು ತುಳಿಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಆನೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಆನೆಯು ನೋಡುವಾಗ ಅದು ಇಡೀ ಶರೀರವನ್ನು ತಿರುಗಿಸಿ ನೋಡುತ್ತದೆ. ಸದಾ ತನ್ನ ಎದುರಿಗೆ ನೇರವಾಗಿ ನೋಡುತ್ತದೆ ಮತ್ತು ಈ ರೀತಿ ಆ ರೀತಿಯಾಗಿ ದೃಷ್ಟಿ ಹರಿಸುವುದಿಲ್ಲ. ಅದೇರೀತಿ ಓ ಮಹಾರಾಜ, ಧ್ಯಾನಶೀಲನಾದ ಭಿಕ್ಷುವು ಪ್ರಯತ್ನಪರನಾಗಿ, ಆತನು ನೋಡುವಾಗ ಇಡೀ ಶರೀರವನ್ನು ತಿರುಗಿಸುತ್ತಾನೆ. ಸದಾ ತನ್ನ ನೇರಕ್ಕೆ ನೋಡುತ್ತಾನೆ. ಈ ಕಡೆ, ಆ ಕಡೆ ದೃಷ್ಟಿಹರಿಸುವುದಿಲ್ಲ. ಎತ್ತರದ ಕಡೆ ನೋಡುವುದಿಲ್ಲ. ಹಾಗೆಯೇ ಪಾದದ ಕಡೆಗೂ ನೋಡುವುದಿಲ್ಲ. ಆದರೆ ಕಣ್ಣುಗಳನ್ನು ಕೇಂದ್ರೀಕರಿಸಿ ತನ್ನಿಂದ ನೇಗಿಲ ದೂರವಷ್ಟು ನೆಲಕ್ಕೆ ನೋಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಆನೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಆನೆಗೆ ಯಾವುದು ಶಾಶ್ವತ ವಿಶ್ರಾಂತಿ ತಾಣ ಇರುವುದಿಲ್ಲ. ಹಾಗೆಯೇ ಅದರ ಆಹಾರ ಸಿಗುವ ಸ್ಥಳವು ಒಂದೇ ನಿಧರ್ಿಷ್ಟ ಸ್ಥಳವಲ್ಲ, ಹಾಗೆಯೇ ನಿದರ್ಿಷ್ಟವಾದ ವಾಸಸ್ಥಳವು ಅದಕ್ಕೆ ಇಲ್ಲ. ಓ ಮಹಾರಾಜ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವಿಗೂ ನಿದರ್ಿಷ್ಟ ವಿಶ್ರಾಂತಿ ಸ್ಥಳವಾಗಲಿ, ನಿದರ್ಿಷ್ಟ ಆಹಾರ ಸಿಗುವ ಮನೆಯಾಗಲಿ, ನಿಧರ್ಿಷ್ಟ ವಾಸಸ್ಥಳವೂ ಇಲ್ಲ. ಬದಲಾಗಿ ಆತನು ಭಿಕ್ಷೆಯಿಂದ ಆಹಾರ ಪಡೆದು, ಪೂರ್ಣ ಪ್ರಜ್ಞೆಯಿಂದ ಅವನಿಗೆ ಎಲ್ಲಿ ಇಷ್ಟವಾಗುತ್ತದೋ ಅದೇ ಆತನ ವಾಸಸ್ಥಳವಾಗುತ್ತದೆ. ಅದು ಕುಟೀರವಾಗಿರಬಹುದು, ಮರದ ಬುಡವಾಗಿರಬಹುದು, ಗುಹೆಯಾಗಿರಬಹುದು, ಪರ್ವತದ ಬದಿಯಾಗಿರಬಹುದು, ಹೀಗೆ ನಿಲರ್ಿಪ್ತತೆಯಿಲ್ಲದೆ ಆತನು ವಾಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಆನೆಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆನೆಯು ನೀರಿನಲ್ಲಿ ಕ್ರೀಡೆಯಾಡುತ್ತದೋ, ಭವ್ಯವಾದ ಕಮಲಗಳ ಕೊಳದಲ್ಲಿ ತಂಪಾದ, ಪರಿಶುದ್ಧವಾದ, ಸ್ಪಷ್ಟವಾದ ತುಂಬಿದ ಆ ಸರೋವರದಲ್ಲಿ ಎಲ್ಲ ಹಳದಿ, ನೀಲಿ, ಕೆಂಪು ಮತ್ತು ಶ್ವೇತ ಕಮಲಗಳು ಇವೆಯೋ ಅಲ್ಲಿ ಆ ಬೃಹತ್ ಪ್ರಾಣಿಗಳು ಆನಂದಿಸುತ್ತವೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಭವ್ಯವಾದ ಮಹಾ ಸ್ಮೃತಿಪಟ್ಠಾನದ ಪುಷ್ಕರಣೆಯಲ್ಲಿ ಮುಳುಗುತ್ತಾನೆ, ಈಜುತ್ತಾನೆ, ಅಲ್ಲಿ ವಿಮುಕ್ತಿಯ ಪುಷ್ಪಗಳು ನೆರೆದಿವೆ, ನಿರ್ಮಲವಾದ ಸತ್ಯದ ಮಧುರವಾದ ನೀರು ಅಲ್ಲಿರುತ್ತದೆ. ಅಲ್ಲಿ ಆತನು ತನ್ನ ಜ್ಞಾನದಿಂದಲೇ ಸಂಖಾರಗಳನ್ನು ದೂರೀಕರಿಸುತ್ತಾನೆ. ಈ ರೀತಿಯ ಮಾನಸ ಲೋಕದಲ್ಲಿ ಆತನು ಕ್ರೀಡೆಯಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆನೆಗಳ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ರಾಜ, ಆನೆಯು ಎಚ್ಚರಿಕೆಯಿಂದ ಪಾದವನ್ನು ಮೇಲೆ ಎತ್ತುತ್ತದೆ ಮತ್ತು ಹಾಗೆಯೇ ಪಾದವನ್ನು ಎಚ್ಚರಿಕೆಯಿಂದ ಕೆಳಗೆ ಇಳಿಸುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ, ಪರಿಶ್ರಮಯುತನಾಗಿ, ಜಾಗೃತ ಭಾವದಿಂದ ಸ್ಪಷ್ಟವಾದ ಅರಿವಿನಿಂದ ಪಾದವನ್ನು ಎತ್ತುತ್ತಾನೆ ಮತ್ತು ಸ್ಮೃತಿಯಿಂದ ಸ್ಪಷ್ಟವಾದ ಅರಿವಿನಿಂದ ಪಾದವನ್ನು ನೆಲಕ್ಕೆ ಇಡುತ್ತಾನೆ. (ಈ ರೀತಿಯಲ್ಲಿ ನಡಿಗೆಯ ಧ್ಯಾನ ಮಾಡುತ್ತಾನೆ). ಅದೇರೀತಿಯಲ್ಲಿ ಹೋಗುವಾಗ ಅಥವಾ ಹಿಂತಿರುಗುವಾಗ, ಕೈ ಮಡಚುವಾಗ ಹಾಗೆಯೇ ತೆರೆಯುವಾಗ, ಆತನು ಎಲ್ಲೇ ಇರಲಿ, ಆತನು ಸದಾ ಸ್ಮೃತಿವಂತನಾಗಿರುತ್ತಾನೆ ಮತ್ತು ಸ್ಪಷ್ಟ ಅರಿವಿನಿಂದ ಕೂಡಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಆನೆಯ ಪಂಚಮ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಹೀಗೆ ಸಂಯುಕ್ತ ನಿಕಾಯದಲ್ಲಿ ಹೇಳಿದ್ದಾರೆ:
ಕಾಯದಲ್ಲಿ ಸಂಯಮದಿಂದಿರುವುದು ಒಳ್ಳೆಯದು. ಮಾತಿನಲ್ಲಿ ಸಂಯಮದಿಂದ ಇರುವುದು ಒಳ್ಳೆಯದು. ಮನಸ್ಸಿನಲ್ಲಿ ಸಂಯಮದಿಂದಿರುವುದು ಒಳ್ಳೆಯದು. ಎಲ್ಲರದಲ್ಲೂ ಸಂಯಮದಿಂದಿದ್ದು ಆತನು ಪಾಪಲಜ್ಜೆಯಿಂದ ಕೂಡಿದ್ದು, ಎಲ್ಲದರಿಂದ ರಕ್ಷಿಸಲ್ಪಡುತ್ತಾನೆ.
ನಾಲ್ಕನೆಯ ಉಪಚಿಕಾ ವಗ್ಗೊ ಮುಗಿಯಿತು (ಇದರಲ್ಲಿ ಹತ್ತು ಪ್ರಶ್ನೆಗಳಿವೆ.
No comments:
Post a Comment