3. ಪಠವಿ ವಗ್ಗೋ
1. ಪಠವಿಅಂಗ ಪನ್ಹೋ (ಪೃಥ್ವಿ ಪ್ರಶ್ನೆ)
ಓ ಮಹಾರಾಜ, ಹೇಗೆ ಪೃಥ್ವಿಯು ತನ್ನಮೇಲೆ ಪ್ರಿಯವಾದ ಅಥವಾ ಅಪ್ರಿಯವಾದ ವಸ್ತುಗಳನ್ನು ಎಸೆದರೂ ಸಹಾ ಅದು ಸಮಾನಭಾವದಿಂದಿರುವುದೋ, ವಿವರವಾಗಿ ಹೇಳುವುದಾದರೆ, ಕಪರ್ೂರ, ಕತ್ತಾಳೆ, ಮಲ್ಲಿಗೆ, ಚಂದನ, ಕೇಸರಿ ಅಥವಾ ಹಾಗೆಯೇ ಕಫ, ಮಲಮೂತ್ರ, ಕೊಬ್ಬು, ಜೊಲ್ಲು, ಬೆವರು, ರಕ್ತ ಇತ್ಯಾದಿ ಎಸೆದರೂ ಸಹಾ ಪೃಥ್ವಿಯು ಸಮಾನಭಾವದಿಂದಲೇ ಇರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಲ್ಲಿ ನಿಷ್ಠನಾಗಿ ಸಮಚಿತ್ತತೆಯಲ್ಲಿ ಸ್ಥಿರವಾಗಿ, ಅಚಲನಾಗಿ, ಲಾಭ-ನಷ್ಟಗಳಲ್ಲಿ, ಜಯಪರಾಜಯದಲ್ಲಿ ಸ್ತುತಿನಿಂದೆಗಳಲ್ಲಿ, ಸುಖ-ದುಃಖಗಳಲ್ಲಿ ಸಲುಹುವಿಕೆ ಮತ್ತು ನಿರ್ಲಕ್ಷವಿಕೆಯಲ್ಲಿ ಸಮಭಾವದಿಂದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಯಾವುದೇ ಆಡಂಭರವಿಲ್ಲದೆ, ಹೂಹಾರಗಳಿಲ್ಲದ, ತನ್ನದೇ ಆದಂತಹ ನಿರಾಭರಣ ಸೌಂದರ್ಯದ ಸಹಜ ಸುವಾಸನೆಯಲ್ಲಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಲ್ಲಿ ನಿಷ್ಠನಾಗಿ, ಯಾವುದೇ ಆಡಂಬರ, ಆಭರಣವಿಲ್ಲದೆ, ಸರಳವಾಗಿ, ಸತ್ಯತೆಯ ಸವಿಯಿಂದ ಕೂಡಿ ಚಲಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಘನವೋ, ಯಾವುದೇ ರಂಧ್ರಗಳಿಲ್ಲದೆ, ಬಿರುಕುಗಳಿಲ್ಲದೆ, ಮಂದವಾಗಿ, ದಟ್ಟವಾಗಿ ಪ್ರತಿಯೊಂದು ಕಡೆಯಲ್ಲು ಹರಡಿದೆಯೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಅಛಿದ್ರ ಶೀಲದಿಂದ, ಅಭಂಗ ಶೀಲದಿಂದ, ಗಾಢವಾದ ಶೀಲದಿಂದ, ವಿಸ್ತಾರ ಶೀಲದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ 3ನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಎಂದಿಗೂ ಶಿಥಿಲವಾಗದೋ, ಅದು ತನ್ನಲ್ಲಿ ಹಳ್ಳಿಗಳು, ನಗರಗಳು, ಗಿಡಮರಗಳು, ಬೆಟ್ಟಗುಡ್ಡಗಳು, ನದಿ ಕೆರೆಗಳು, ಪ್ರಾಣಿ ಪಕ್ಷಿಗಳು, ಸ್ತ್ರೀಪುರುಷರ ಸಮೂಹಗಳಿಂದ ಕೂಡಿದ್ದರೂ ಸಹಾ ಅದು ಎಂದಿಗೂ ಬಳಲಿಕೆಪಡದು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ತನ್ನ ಪ್ರಯತ್ನಶೀಲತೆಯಲ್ಲಿ ದೃಢವಾಗಿ, ಎಂದಿಗೂ ಬಳಲಿಕೆ ಪಡುವುದಿಲ್ಲ, ಬೇಸರಪಡುವುದಿಲ್ಲ, ಹೇಗೆಂದರೆ, ಬೋಧಿಸುವಿಕೆಯಲ್ಲಿ, ಉಪದೇಶಿಸುವಿಕೆ, ವಿದ್ಯಾಭ್ಯಾಸದಲ್ಲಿ, ಗೌರವಿಸುವಿಕೆಯಲ್ಲಿ, ಸ್ಫೂತರ್ಿ ನೀಡುವಿಕೆಯಲ್ಲಿ, ಅನಂದಿಸುವಿಕೆಯಲ್ಲಿ ಇತ್ಯಾದಿಗಳಲ್ಲಿ ಆತನು ಬೇಸರ ಹಾಗು ಬಳಲಿಕೆ ತಾಳುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಅನುನಯ (ಪ್ರೀತಿ) ದಿಂದ, ಅಥವಾ ದ್ವೇಷದಿಂದಾಗಲಿ ಮುಕ್ತವಾಗಿರುವುದೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಉತ್ಸಾಹಿತನಾಗಿ, ಪೃಥ್ವಿಯಂತೆ ಯಾರಲ್ಲಿಯೂ, ಯಾವ ವ್ಯಕ್ತಿಯಲ್ಲೂ ಪ್ರೀತಿಯಾಗಲಿ ಅಥವಾ ದ್ವೇಷವಾಗಲಿ ತಾಳದೆ ಅವುಗಳಿಂದ ಮುಕ್ತನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಶ್ರದ್ಧಾವಂತೆಯಾದ ಚುಲ್ಲ ಸುಭದ್ರೆಯು ಹೀಗೆ ಹೇಳಿದ್ದಾಳೆ:
ಒಬ್ಬನು ಕೊಡಲಿಯಿಂದ ಒಂದು ಕೈ ಕತ್ತರಿಸಿದರೂ, ಇನ್ನೊಬ್ಬನು ವಾತ್ಸಲ್ಪದಿಂದ ಮಧುರ ಸುಗಂಧವನ್ನು ಲೇಪಿಸಿದರೂ, ಯಾರಲ್ಲಿಯೂ ದ್ವೇಷವಾಗಲಿ ಅಥವಾ ಪ್ರೀತಿಯಾಗಲಿ ತಾಳದೆ ಪೃಥ್ವಿಯಂತೆ ಅಚಲರಾಗಿ ನನ್ನ ಭಿಕ್ಷುಗಳ ಹೃದಯವಿರುತ್ತದೆ.
2. ಅಪಂಗ ಪನ್ಹೊ (ಜಲದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜಲದ ಐದು ಗುಣಗಳಾವುವು? (237)
ಓ ಮಹಾರಾಜ, ಹೇಗೆ ಜಲವು (ಬಾವಿ ಕೆರೆಗಳಲ್ಲಿ) ಸ್ಥಿರವಾಗಿ, ಅಚಲವಾಗಿ ಇರುವುದೋ ಮತ್ತು ಕ್ಷೊಭೆಗೊಳ್ಳುವುದಿಲ್ಲವೋ ಮತ್ತು ಪರಿಶುದ್ಧವಾಗಿಯೇ ಇರುತ್ತದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ನಿಷ್ಠನಾಗಿ, ಕುಹಕತೆಯಿಂದ ಮತ್ತು ಕ್ಲೇಷದಿಂದ ದೂರನಾಗಿ, ಬಯಕೆಗಳ ಸಾಮಿಪ್ಯದಿಂದಲೂ, ಕೆಟ್ಟ ಎಲ್ಲಾರೀತಿಯ ಪ್ರಭಾವಗಳಿಗೂ ಒಳಗಾಗದೆ, ಪರಿಶುದ್ಧ ಸ್ವಾಭಾವದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಜಲದ ಪ್ರಥಮ ಗುಣವಾಗಿದೆ
ಮತ್ತೆ ಓ ಮಹಾರಾಜ, ಜಲವು ಸದಾ ಶೀತಲವಾದ ಪುನಃ ಉಲ್ಲಾಸಕಾರಿಯಾದ ಸ್ವಭಾವದ್ದಾಗಿದೆಯೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಸರ್ವಜೀವಿಗಳಲ್ಲಿ ಕ್ಷಮಾಶೀಲನಾಗಿ, ಮೈತ್ರಿ, ದಯಾಸಂಪನ್ನನಾಗಿ, ಹಿತವಾದ ಅನುಕಂಪ ತಾಳಿ ಅದನ್ನೇ ಗಾಢವಾಗಿ, ಸರ್ವಜೀವಿಗಳಲ್ಲೂ ಪ್ರಸರಿಸುತ್ತಾನೋ, ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಜಲದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಜಲವು ಕೊಳೆಯನ್ನು ಶುದ್ಧಗೊಳಿಸುವುದೋ, ಹಾಗೆಯೇ ಧ್ಯಾನಶೀಲ ಭಿಕ್ಷುವು, ಪರಿಶ್ರಮಭರಿತನಾಗಿ, ಆತನು ಎಲ್ಲೇ ಇರಲಿ, ಅದು ಹಳ್ಳಿಯಾಗಿರಲಿ, ಅರಣ್ಯವಾಗಿರಲಿ, ಅಲ್ಲಿ ಕಲಹಗಳಿಲ್ಲದೆ, ತಪ್ಪುಗಳಿಲ್ಲದೆ, ಗುರುಹಿರಿಯರೊಂದಿಗೆ ವಿನೀತನಾಗಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಿರುವ ಜಲದಲ್ಲಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಜಲವೂ ಎಲ್ಲಾ ಜೀವಿಗಳಿಗೂ ಇಷ್ಟವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ಅಲ್ಪೇಚ್ಛೆಯುಳ್ಳವನಾಗಿ, ಸಂತುಷ್ಟನಾಗಿ ಏಕಾಂತತೆಯಲ್ಲಿ ನಿರತನಾಗಿ, ಹೀಗೆ ಆತನು ಎಲ್ಲಾ ಲೋಕಗಳಿಂದಲೂ ಇಷ್ಟಪಡುವವನಾಗುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಿರುವ ಜಲದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಜಲವು ಮಾನವನಿಗೆ ಯಾವ ಹಾನಿಯು ಮಾಡದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಯಾರಿಗೂ ಹಾನಿ ಮಾಡದೆ, ವಾಚಾದಿಂದ ಆಗಲಿ, ಕರ್ಮದಿಂದಾಗಲಿ, ಮನಸ್ಸಿನಿಂದ ಆಗಲಿ ಯಾವುದೇ ಹಾನಿ ಮಾಡುವುದಿಲ್ಲ. ಪರರಲ್ಲಿ ಜಗಳ, ವಿವಾದ, ಅತೃಪ್ತಿ, ಕೋಪ, ಹಿಂಸೆ, ಆಗುವಂತಹುದು ಯಾವುದು ಆತನು ಮಾಡುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಲದಲ್ಲಿರುವ ಐದನೆಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಕಣ್ಹಾ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಸರ್ವಜೀವಿಗಳಿಗೆ ನಾಯಕನಾದ ಓ ಸಕ್ಕ, ನೀನು ನನಗೆ ವರವನ್ನೇ ನೀಡುವುದಾದರೆ ನನ್ನಿಂದ ಯಾರಿಗೂ, ಎಲ್ಲಿಯೂ, ಯಾವಾಗಲೂ ಕಾಯ, ವಾಚಾ, ಮನಸ್ಸಿನಿಂದ ಹಾನಿಯಾಗದಿರಲಿ, ಇದನ್ನೇ ಓ ಸಕ್ಕ ವರಗಳ ವರವಾಗಿ ನಾನು ಆಯ್ಕೆ ಮಾಡುವೆ.
3. ತೇಜಂಗ ಪನ್ಹೊ (ಅಗ್ನಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಅಗ್ನಿಯ 5 ಗುಣಗಳುಯಾವುವು? (238)
ಓ ಮಹಾರಾಜ ಹೇಗೆ ಅಗ್ನಿಯು ಹುಲ್ಲನ್ನು, ಕಡ್ಡಿಗಳನ್ನು, ಕೊಂಬೆಗಳನ್ನು ಮತ್ತು ಎಲೆಗಳನ್ನು ಸುಡುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ನಿಷ್ಠನಾಗಿ, ತನ್ನ ಪ್ರಜ್ಞೆಯ ಅಗ್ನಿಯಿಂದ ಆಂತರಿಕ ಅಥವಾ ಬಾಹ್ಯದ ಎಲ್ಲಾ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಆತನು ಚಿತ್ತಗೋಚರ ವಸ್ತುಗಳಾಗಲಿ, ಕತರ್ೃಸಂಬಂಧದ್ದೇ ಆಗಲಿ, ಇಷ್ಟವಿರುವ ವಿಷಯಗಳಾಗಲಿ, ಅನಿಷ್ಟ ವಿಷಯಗಳೇ ಆಗಲಿ, ಎಲ್ಲವನ್ನೂ ಸುಟ್ಟುಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಅಗ್ನಿಯ ಮೊದಲ ಗುಣವಾಗಿದೆ.
ಮತ್ತೆ ಓ ರಾಜ, ಅಗ್ನಿಗೆ ಯಾವುದೇ ಕರುಣೆ, ಅನುಕಂಪವಿರುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಕ್ಲೇಷಗಳಲ್ಲಿ ಯಾವುದೇ ದಯೆ ತೋರಿಸುವುದಿಲ್ಲ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಶೀತವನ್ನು ನಾಶಗೊಳಿಸುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪರಿಶ್ರಮ ಪರಾಕ್ರಮದಿಂದ ಉತ್ಸಾಹದಿಂದ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಯಾವ ವ್ಯಕ್ತಿಯ ಮೇಲೂ ಕೃಪೆಯಾಗಲಿ ಅಥವಾ ದ್ವೇಷವಾಗಲಿ ತಾಳದೆ ಎಲ್ಲರಿಗೂ ಸಮವಾಗಿ ತಾಪವನ್ನು ನೀಡುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಅಗ್ನಿಯಂತೆ ಉತ್ಸಾಹಿತನಾಗಿ ಯಾರಲ್ಲೂ ಪ್ರಿಯಭಾವನೆ ಅಥವಾ ಅಪ್ರಿಯಭಾವನೆ ತಾಳದೆ ಚಿತ್ತ ಉಪೇಕ್ಷೆಯಿಂದಿರುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಕತ್ತಲೆಯನ್ನು ದೂರೀಕರಿಸುವುದೋ ಮತ್ತು ಹೊಂಬೆಳಕನ್ನು ನೀಡುತ್ತದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಅಜ್ಞಾನದ ಅಂಧಕಾರವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಪ್ರಕಾಶಿಸುವಂತೆ ಮಾಡುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ಐದನೆಯ ಗುಣವಾಗಿದೆ.
ಓ ಮಹಾರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ರಾಹುಲನಿಗೆ ಹೀಗೆ ಬೋಧಿಸಿದ್ದಾರೆ: ನೀನೇ ಅಭ್ಯಾಸಿಸು ರಾಹುಲ, ಆ ಧ್ಯಾನದಲ್ಲಿ ಅಗ್ನಿಯಂತೆ ವಿಜೃಂಭಿಸು, ಅದರಿಂದಾಗಿ ಇರುವ ಎಲ್ಲಾ ಕ್ಲೇಷಗಳು ನಾಶವಾಗಿ, ಹೊಸತು ಉಂಟಾಗದಿರಲಿ.
4. ವಾತಂಗ ಪನ್ಹೋ (ವಾಯು ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ವಾಯುವಿನ ಯಾವ ಐದು ಗುಣಗಳನ್ನು ಹೊಂದಬೇಕು? (239)ಓ ಮಹಾರಾಜ, ಹೇಗೆ ವಾಯು ಆಕಾಶದಲ್ಲಿ, ಕಾಡಿನಲ್ಲಿ ಮತ್ತು ತೋಪುಗಳಲ್ಲಿ, ಹೂಬಿಡುವ ಕಾಲದಲ್ಲಿ ಹಬ್ಬುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಧ್ಯಾನಗಳ ತೋಪಿನಲ್ಲಿ ಆನಂದಿಸಿದಾಗ ವಿಮುಕ್ತಿಯ ಹೂಗಳು ಅರಳುತ್ತವೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ವಾಯು ಭೂಮಿಯಲ್ಲಿ ಬೆಳೆದಿರುವ ಎಲ್ಲಾ ಮರಗಳನ್ನು ಜೋರಾಗಿ ಕಲಕುವಂತೆ ಮಾಡುತ್ತದೋ ಮತ್ತು ಅವುಗಳನ್ನು ಬಾಗುವಂತೆ ಮಾಡುತ್ತದೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಡಿನ ಮಧ್ಯೆ ಧ್ಯಾನಮಗ್ನನಾಗಿ, ಸಂಖಾರಗಳ ನಿಜಸ್ವರೂಪವನ್ನು ಅರಿಯುತ್ತ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವು ಆಕಾಶದಲ್ಲಿ ಅಡ್ಡಾಡುತ್ತದೆಯೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ತನ್ನ ಚಿತ್ತವನ್ನು ಲೋಕೋತ್ತರ ವಿಷಯಗಳಲ್ಲಿ ಅಡ್ಡಾಡುವಂತೆ ಪಳಗಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವು ಸುಗಂಧವನ್ನು ಜೊತೆಗೆ ತೆಗೆದುಕೊಂಡು ಹೋಗುವುದೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ತನ್ನೊಂದಿಗೆ ಸದಾ ಶೀಲವಂತಿಕೆಯ ಸುಗಂಧವನ್ನು ಪ್ರಸರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವಿಗೆ ವಾಸಿಸಲು ಮನೆಯಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವಿಗೆ ಸಹಾ ಯಾವುದೇ ಮನೆಯಿಲ್ಲದೆ ಅನಿಕಿತನವಾಗಿ, ಸಮಾಜಕ್ಕೆ ಅಂಟದೆ, ಚಿತ್ತಮುಕ್ತನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಐದನೇ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಸ್ನೇಹದಿಂದ ಭಯವು ಉಂಟಾಗುತ್ತದೆ, ಗೃಹಜೀವನದಿಂದ ರಜವು ಹುಟ್ಟುತ್ತದೆ. ಸ್ನೇಹ ಮತ್ತು ಮನೆಯ ಜೀವನದಿಂದ ಮುಕ್ತತೆಯೇ ಮುನಿದರ್ಶನವಾಗಿದೆ.
5. ಪಬ್ಬತಂಗ ಪನ್ಹೊ (ಪರ್ವತದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಪರ್ವತದ 5 ಗುಣಗಳುಯಾವುವು? (240)
ಓ ಮಹಾರಾಜ, ಹೇಗೆ ಪರ್ವತವು ದೃಢವೋ, ಅಚಲವೋ, ಅಕಂಪನವೋ ಅದೇರೀತಿ ಧ್ಯಾನಶೀಲ ಭಿಕ್ಷುವು ಪರಿಶ್ರಮಯುತನಾಗಿ, ಆಮಿಷಗೊಳಪಡಿಸುವ ದೃಶ್ಯ, ಶಬ್ದ, ವಾಸನೆ, ರಸ, ಸ್ಪರ್ಶಗಳಿಂದಾಗಿ ಉದ್ರೇಕ ತಾಳುವುದಿಲ್ಲ. ಹಾಗೆಯೇ ಗೌರವ, ಉದ್ವೇಗದ ಸನ್ನಿವೇಶ, ಪೋಷಣೆ, ಅಲಕ್ಷ, ಅಗೌರವ, ಕೀತರ್ಿ, ಅಪಕೀತರ್ಿ, ಸ್ತುತಿ, ನಿಂದೆ, ಇದ್ಯಾವುದರಿಮದ ಕ್ಷೊಭೆಗೆ ಒಳಗಾಗುವುದಿಲ್ಲ. ಹಾಗೆಯೇ ತಪ್ಪು ಅಥವಾ ಅಸಂತೋಷ ತರುವಂತಹ ವಸ್ತುಗಳಿಂದಾಗಲಿ ಅಥವಾ ಸನ್ನಿವೇಶಗಳಿಂದ ಉದ್ವೇಗ ತಾಳುವುದಿಲ್ಲ, ಕುಪಿತನು ಆಗುವುದಿಲ್ಲ, ಪರ್ವತದ ಹಾಗೆ ದೃಢನಾಗಿರುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಪರ್ವತದ ಪ್ರಥಮ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಹೇಗೆ ಶಿಲೆಯು (ಹೆಬ್ಬಂಡೆಯು) ವಾಯುವಿನಿಂದ ಅಲುಗಾಡುವುದಿಲ್ಲವೋ ಹಾಗೆಯೇ ನಿಂದಾ ಪ್ರಶಂಸೆಗಳಿಂದ ಪಂಡಿತರು ವಿಚಲಿತರಾಗುವುದಿಲ್ಲ.
ಮತ್ತೆ ಓ ಮಹಾರಾಜ, ಹೇಗೆ ಪರ್ವತವು ದೃಢವಾಗಿರುವುದೋ ಪರವಸ್ತುಗಳಿಂದ ಅಮಿಶ್ರಿತವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪರಿಶ್ರಮಯುತನಾಗಿ ದೃಢನಾಗಿ, ಸ್ವತಂತ್ರನಾಗಿ, ಯಾರೊಂದಿಗೂ ಬೆರೆಯುವುದಿಲ್ಲ. ಇದೇ ಓ ಮಹಾರಾಜ, ಪರ್ವತದ ದ್ವಿತೀಯ ಗುಣವು ಭಿಕ್ಷುವು ಹೊಂದಬೇಕಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾರು ಗೃಹಸ್ಥರೊಂದಿಗೆ ಅಥವಾ ಸಮಣರೊಂದಿಗೆ ಬೆರೆಯುವುದಿಲ್ಲವೋ, ಒಂಟಿಯಾಗಿಯೇ ಚಲಿಸುವರೋ, ಅನಿಕೇತನನಾಗಿ, ಅಲ್ಪೇಚ್ಛೆಯುಳ್ಳವರಾಗಿರುವರೋ ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತದಲ್ಲಿ ಬೀಜವು ಮೊಳಕೆ ಒಡೆಯುವುದಿಲ್ಲವೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿದವನಾಗಿ, ತನ್ನ ಚಿತ್ತದಲ್ಲಿ ಕ್ಲೇಷಗಳು ಉತ್ಪನ್ನವಾಗಲು ಬಿಡುವುದಿಲ್ಲ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ತೃತೀಯ ಗುಣವಾಗಿದೆ. ಇದರ ಬಗ್ಗೆ ಓ ರಾಜ, ಥೇರ ಸುಭೂತಿಯು ಹೀಗೆ ಹೇಳಿದ್ದಾರೆ:
ಯಾವಾಗ ರಾಗಯುತ ಯೋಚನೆಗಳು ನನ್ನ ಚಿತ್ತದಲ್ಲಿ ಉದಯಿಸುತ್ತದೋ ಆಗಲೇ ಅದನ್ನು ಪರೀಕ್ಷಿಸಿ ಅದನ್ನು ಧಮಿಸುತ್ತೇನೆ. ಯಾರು ರಜಸ್ಸಿನಿಂದ, ಉದ್ರೇಕಿತರಾಗುತ್ತಾರೋ, ವಿರೋಧದಿಂದ ದ್ವೇಷಿಸುತ್ತಾರೋ, ಮೋಹದಿಂದಾಗಿ ಮೂಢರಾಗುತ್ತಾರೋ ಅಂತಹವರು ತೊರೆದು ವನಕ್ಕೆ ಹೋಗಲಿ, ಅವರ ವಾಸಸ್ಥಳವು ವಿಶುದ್ಧವಾದುದು, ತಪಸ್ಸಿನ ಜೀವನವು ನಿರ್ಮಲವಾದುದು, ವಿಶುದ್ಧತೆಗೆ ದೋಷತರದೆ, ತೊರೆದು ವನಕ್ಕೆ ತೆರಳಲಿ.
ಮತ್ತೆ ಹೇಗೆ ಪರ್ವತವು ಉಚ್ಛಮಟ್ಟದಲ್ಲಿ ಬೆಳೆಯುತ್ತದೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಜ್ಞಾನದ ಬಲದಿಂದಾಗಿ ಉನ್ನತಮಟ್ಟದಲ್ಲಿ ಬೆಳೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಪ್ರಮಾದವನ್ನು (ಅಲಕ್ಷವನ್ನು) ಅಪ್ರಮಾದದಿಂದ ಜ್ಞಾನಿಯು ದೂರೀಕರಿಸಿ, ಪ್ರಜ್ಞಾ ಪ್ರಸಾದವನ್ನು ಏರಿ, ಆ ಅಶೋಕನು, ಶೋಕದಿಂದ ಪೀಡಿತರಾಗಿರುವ ಜನರನ್ನು, ಪರ್ವತದ ತುದಿಯೇರಿ, ಕೆಳಭೂಮಿಯಲ್ಲಿರುವಂತಹ ದುಃಖಿತರನ್ನು ಧೀರನು ವೀಕ್ಷಿಸುತ್ತಾನೆ.
ಮತ್ತೆ ಓ ರಾಜ, ಹೇಗೆ ಪರ್ವತವು ಎತ್ತಲಾಗುವುದಿಲ್ಲವೋ ಅಥವಾ ಬಾಗಿಸಲಾರದೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲ ಭಿಕ್ಷುವನ್ನು ಯಾರು ಸ್ತುತಿ ಇತ್ಯಾದಿಗಳಿಂದ ಮೇಲೆತ್ತಲಾರರು. ಹಾಗೆಯೇ ನಿಂದೆ ಇತ್ಯಾದಿಗಳಿಂದ ಕುಗ್ಗಿಸಲಾರರು, ಬಾಗಿಸಲಾರರು, ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ಐದನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಶ್ರದ್ಧಾಳು ಉಪಾಸಿಕೆಯಂತಹ ಚುಲ್ಲಸುಭದ್ರ ಹೀಗೆ ಹೇಳಿದ್ದಾರೆ:
ಲಾಭದಿಂದ ಲೋಕವು ಉಬ್ಬುವುದು, ಅಲಾಭದಿಂದ ಕುಗ್ಗುವುದು. ಆದರೆ ನನ್ನ ಸಮಣರು ಲಾಭ ಅಲಾಭಗಳನ್ನು ಏಕಸಮವಾಗಿ ಕಂಡು ಸ್ಥಿರವಾಗಿಯೇ ಇರುವರು.
6. ಆಕಾಸಂಗ ಪನ್ಹೋ (ಆಕಾಶದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಆಕಾಶದ ಐದು ಗುಣ
ಗಳಾವುವು? (241)ಓ ಮಹಾರಾಜ, ಹೇಗೆ ಆಕಾಶವನ್ನು ಹಿಡಿಯಲಾಗದೋ, ಅಸಾಧ್ಯವೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲ ಭಿಕ್ಷುವನ್ನು ಕ್ಲೇಷಗಳು ಹಿಡಿಯಲಾರವು. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಋಷಿಗಳಿಗೆ, ತಪಸ್ವಿಗಳಿಗೆ, ಯಕ್ಷ ದೇವತೆಗಳಿಗೆ ಮತ್ತು ಪಕ್ಷಿಗಳಿಗೆ ಪ್ರಿಯವಾದ ಆವಾಸ ಸ್ಥಾನವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷು ಪ್ರಯತ್ನದಲ್ಲಿ ನಿರತನಾಗಿ, ಸಂಖಾರಗಳೆಲ್ಲವೂ ಅನಿತ್ಯ ದುಃಖ, ಅನಾತ್ಮ ಎಂದು ಮಾನಸದಲ್ಲಿ ಸಂಚರಿಸುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಸಂತಸವನ್ನುಂಟು ಮಾಡುವುದೋ, ಅದೇರೀತಿ ಧ್ಯಾನಶೀಲ ಭಿಕ್ಷುವು, ಧ್ಯಾನದಲ್ಲಿ ಎಲ್ಲಾ ಭವಗಳ, ಪಟಿಸಂಧಿಗಳನ್ನು ವೀಕ್ಷಿಸಿ ಉದ್ವೇಗ ತಾಳುತ್ತಾನೆ, ಭಯ ತಾಳುತ್ತಾನೆ. ನಂತರ ಅದರಲ್ಲಿ ಆನಂದಿಸುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಅನಂತವೋ, ಅಪ್ರಮಾಣವೋ, ಅಪರಿಮಿತವೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅನಂತ ಶೀಲದಿಂದ, ಅಪರಿಮಿತ ಜ್ಞಾನದಿಂದ ಅಪ್ರಮಾಣ ಧ್ಯಾನದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಯಾವುದರಿಂದಲೂ ನೇತಾಡಿ ಕೊಂಡಿಲ್ಲವೋ, ಯಾವುದಕ್ಕೂ ಅಂಟಿಲ್ಲವೋ ಯಾವುದರಿಂದಲೂ ವಿಶ್ರಾಂತಿ ಪಡೆಯುತ್ತಿಲ್ಲವೋ, ಯಾವುದರಿಂದಲೂ ನಿಲ್ಲಿಸಲಾಗುವುದಿಲ್ಲವೋ, ಓ ಮಹಾರಾಜ, ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಯಾವುದಕ್ಕೂ ಅವಲಂಬಿತನಾಗದೆ, ಯಾವುದಕ್ಕೂ ಅಂಟಿಕೊಳ್ಳದೆ, ಯಾವುದರಲ್ಲೂ ವಿಶ್ರಾಂತಿ (ಆಧಾರ) ಪಡೆಯದೆ, ಯಾವುದರಿಂದಲೂ ತಡೆಯಲ್ಪಡದೆ, ಆತನಿಗೆ ಕುಟುಂಬಗಳು ಆಡಳಿತ ಮಾಡಲಾಗುವುದಿಲ್ಲ. ಅಥವಾ ಶಿಷ್ಯರು ಸಹಾಯಕ್ಕಾಗಲಿ, ಅಥವಾ ದ್ವೇಷಕರಾಗಲಿ ಆತವಾ ವಾಸಸ್ಥಳವಾಗಲಿ, ಅಥವಾ ಪರಿಕರಗಳಾಗಲಿ, ಅಥವಾ ಧಮ್ಮ ಜೀವನದ ತಡೆಗಳಾಗಲಿ, ಅಥವಾ ಯಾವುದೇ ಕ್ಲೇಷಗಳಾಗಲಿ ಇವ್ಯಾವುದೂ ಅತನಿಗೆ ತಡೆಯಾಗಲಿ, ತಡೆಯುವುದಾಗಲಿ ಮಾಡಲಾರದು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಐದನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಭಗವಾನರು, ದೇವಾದಿದೇವರು ಆಗಿರುವ ಬುದ್ಧರು ರಾಹುಲನಿಗೆ ಬೋಧಿಸುವಾಗ ಹೀಗೆ ನುಡಿದಿದ್ದರು:
ರಾಹುಲ, ಹೇಗೆ ಆಕಾಶವು ಯಾವುದರ ಮೇಲೂ ಯಾವುದರಿಂದಲೂ ಆಧಾರವಾಗಿಲ್ಲವೋ ಹಾಗೆಯೇ ನೀನು ಸಹಾ ಧ್ಯಾನವನ್ನು ಆಕಾಶದಂತೆ ವೃದ್ಧಿಸು. ಆಗ ನಿನ್ನಲ್ಲಿ ಪ್ರಿಯವೇದನೆ ಅಥವಾ ಅಪ್ರಿಯ ವೇದನೆಗಳಾಗಲಿ, ಉದಯಿಸಲಾರವು.
7. ಚಂದಂಗ ಪನ್ಹೋ (ಚಂದಿರನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಂದಿರನ ಐದು ಗುಣಗಳಾವುವು? (242)
ಓ ಮಹಾರಾಜ, ಹೇಗೆ ಚಂದಿರನು ಶುಕ್ಲ ಪಕ್ಷದಲ್ಲಿ ಪ್ರಕಾಶಿಸುತ್ತ, ವೃದ್ಧಿಸುತ್ತ ಹೋಗುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಆಚಾರದಲ್ಲಿ, ಶೀಲಾಧಿ ಗುಣಗಳಲ್ಲಿ, ಅನುಷ್ಠಾನದಲ್ಲಿ, ಕರ್ತವ್ಯಪರತೆಯಲ್ಲಿ, ಆಗಮ ಅಧಿಗಮದಲ್ಲಿ, (ಶಾಸ್ತ್ರ ಮತ್ತು ಅಧ್ಯಯನದಲ್ಲಿ) ವಿರಕ್ತಿಯಲ್ಲಿ, ಸ್ಮೃತಿ ಪ್ರತಿಷ್ಠಾನದಲ್ಲಿ, ಇಂದ್ರಿಯಗಳ ದ್ವಾರದಲ್ಲಿ ರಕ್ಷಿತನಾಗಿ, ಮಿತಹಾರಿಯಾಗಿ, ಜಾಗರೂಕನಾಗಿ ಸಾಧನೆ ಮಾಡುವನು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ಉಶಾರಾಧಿಪತಿಯೋ (ಬೃಹತ್ ಅಧಿಪತಿಯೋ) ಅದೇರೀತಿ ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಲ್ಲಿ ನಿಷ್ಠನಾಗಿ ತನ್ನ ಇಚ್ಛೆಯಂತೆ ಮಹಾ ಅಧಿಪತಿ ಆಗಿರುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ದ್ವಿತೀಯ ಗುನವಾಗಿದೆ. ಮತ್ತೆ ಓ ಮಹಾರಾಜ, ಚಂದಿರನು ರಾತ್ರಿಯಲ್ಲಿ ಸಂಚರಿಸುವಂತೆ ಧ್ಯಾನಶೀಲ ಭಿಕ್ಷುವು ನಿಷ್ಠೆಯಿಂದ ಏಕಾಂತದಲ್ಲಿ ತಲ್ಲೀನನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ವಿಮಾನ ಕೇತುವನ್ನು ಹೊಂದಿದ್ದಾನೆಯೋ (ಎತ್ತರದ ನಿವಾಸದ ಎತ್ತರಕ್ಕೆ ಧ್ವಜವನ್ನು ಹೊಂದಿರುವನೋ) ಅದೇರೀತಿ ಓ ರಾಜ, ಧ್ಯಾನಶೀಲ ಭಿಕ್ಷುವು ಶೀಲವನ್ನು ವೃದ್ಧಿಸಿ ಪತಾಕೆ ಹಾರಿಸುತ್ತಾನೆ, ಪ್ರಯತ್ನದಲ್ಲಿ ನಿಷ್ಠನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ಕೇಳಿಕೊಂಡಾಗ, ಪ್ರಾಥರ್ಿಸಿದಾಗ ಮೇಲೆ ಏರುವನೋ ಹಾಗೆಯೇ ಧ್ಯಾನಶೀಲ ಪರಾಕ್ರಮಿ ಭಿಕ್ಷುವಿಗೆ ಆಗಾಗ್ಗೆ ಕುಟುಂಬದವರು ಕೇಳಿಕೊಂಡಾಗ ಅವರಲ್ಲಿ ಆತಿಥ್ಯ ಸ್ವೀಕರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಓ ಮಹಾರಾಜ, ದೇವಾಧಿದೇವರು ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ಚಂದಿರನಂತೆ ಆಗಾಗ್ಗೆ ಗೃಹಸ್ಥರಲ್ಲಿ ಭೇಟಿನೀಡಿ, ಆದರೆ ಹಿಮ್ಮುಖವಾಗಿ ಎಳೆದಂತೆ, ಬಾಹ್ಯದಿಂದ ಅಪರಿಚಿತರಂತೆ ಅವರಿಂದ ನಿವೃತ್ತಿ ತಾಳಿ. ಹೇಗೆ ಬಾವಿಯನ್ನು ಅಥವಾ ಪರ್ವತದಿಂದ ಕೆಳ ನೋಡುವಾಗ, ಪ್ರವಾಹವನ್ನು ನೋಡುವಾಗ ಹೇಗೆ ಹಿಂದಕ್ಕೆ ಸರಿಯುವರೋ ಹಾಗೆ ಗೃಹಸ್ಥರಿಂದ ಹಿಂದಕ್ಕೆ ಸರಿಯಿರಿ.
8. ಸೂರಿಯಂಗ ಪನ್ಹೋ (ಸೂರ್ಯನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸೂರ್ಯನ 7 ಗುಣಗಳಾವುವು?(243)ಓ ಮಹಾರಾಜ, ಹೇಗೆ ಸೂರ್ಯನು ನೀರನ್ನೆಲ್ಲಾ ಆವಿಯಾಗಿಸುವನೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪರಿಶ್ರಮಬದ್ಧನಾಗಿ, ತನ್ನಲ್ಲಿರುವ ಎಲ್ಲಾ ಕ್ಲೇಷಗಳನ್ನು ನಿಶ್ಶೇಷವಾಗಿ ಇಲ್ಲದಂತೆ ಮಾಡಲು ಕಾರಣಕರ್ತನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಅಂಧಕಾರವನ್ನು ದೂರೀಕರಿಸುವನೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲವಾಗಿ, ತನ್ನೆಲ್ಲಾ ರಾಗವನ್ನು, ದ್ವೇಷವನ್ನು, ಮೋಹವನ್ನು, ಅಹಂಕಾರವನ್ನು, ದಿಟ್ಟಿಯನ್ನು (ಮಿಥ್ಯಾದೃಷಿ), ಕ್ಲೇಷಗಳನ್ನು ಸರ್ವ ದುಶ್ಚರಿತೆಯನ್ನು ದೂರೀಕರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ದ್ವಿತೀಯ ಗುಣವಾಗಿದೆ.
ಮತೆ ಓ ಮಹಾರಾಜ, ಹೇಗೆ ಸೂರ್ಯನು ಸದಾ ಚಲಿಸುತ್ತಿರುತ್ತಾನೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಸದಾ ಯತ್ನಶೀಲನಾಗಿ, ಯೋಗ್ಯವಾದ, ಜ್ಞಾನೋಚಿತ ಗಮನಹರಿಸುವವನಾಗಿ ಸದಾ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಸೂರ್ಯನು ಪ್ರಭಾಶೀಲ ಕಿರಣಗಳಿಂದ ಕೂಡಿರುತ್ತಾನೆ. ಹಾಗೆಯೇ ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ ಧ್ಯಾನದಿಂದ ಉದಯಿಸಿದ ಪ್ರಭಾಕಿರಣಗಳಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ಚತುರ್ಥ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಸಕಲ ಜೀವರಾಶಿಗಳಿಗೆ ತಾಪವನ್ನುಂಟು ಮಾಡುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಸದಾಚಾರದಿಂದ, ಶೀಲಾದಿ ಗುಣಗಳಿಂದ, ಜ್ಞಾನ ಅನುಷ್ಠಾನದಿಂದ, ಜ್ಞಾನದಿಂದ, ವಿಮೋಕ್ಷದಿಂದ, ಸಮಾಧಿ ಸಮಾಪತ್ತಿ, ಇಂದ್ರೀಯ, ಬಲ, ಬೋಧಿಅಂಗ, ಸತಿಪಟ್ಠಾನ, ಸಮ್ಮಾಪದಾನ, ಇದ್ದಿಪಾದಗಳಿಂದಾಗಿ ಸಕಲ ದೇವಲೋಕ, ಸರ್ವಲೋಕಗಳಿಗೂ, ಶಾಂತಿ, ಆನಂದ, ಸ್ಪೂತರ್ಿ ನೀಡುವವರಾಗಿದ್ದಾರೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ಪಂಚಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನಿಗೆ ಗ್ರಹಣಗಳ ಭಯ ಕಾಡುವುದೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಸಹಾ ದುಶ್ಚರಿತೆಗೆ, ದುರ್ಗತಿಗೆ, ವಿಷಮ ಕರ್ಮ ವಿಪಾಕ (ಫಲಕ್ಕೆ)ಕ್ಕೆ ವಿನಿಪಾತಕ್ಕೆ, ಕ್ಲೇಷಜಾಲಕ್ಕೆ, ದೃಷ್ಟಿಗೆ, ಕುಪಥಕ್ಕೆ, ಕುಮಾರ್ಗಕ್ಕೆ, ನರಕಗಳಿಗೆ, ಹೀನವಾದ ಜನ್ಮಗಳಿಗೆ, ಜನ್ಮಗಳಿಗೆ ಭೀತನಾಗುತ್ತಾನೆ, ಸಂವೇಗ ತಾಳುತ್ತಾನೆ, ಭಯಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ಆರನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಕಲ್ಯಾಣ ಚರಿತ್ರರಿಗೂ ಹಾಗು ಪಾಪಿಗಳಿಗೂ ಸ್ಪಷ್ಟವಾಗಿ ವ್ಯಕ್ತವಾಗುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಿಂದ ಕೂಡಿ, ಇಂದ್ರೀಯಗಳನ್ನು, ಬಲಗಳನ್ನು, ಬೋಧಿ ಅಂಗಗಳನ್ನು, ಸ್ಮೃತಿ ಪ್ರತಿಷ್ಠಾನಗಳನ್ನು, ಯೋಗ್ಯ ಪ್ರಯತ್ನಗಳನ್ನು, ಇದ್ದಿಪಾದಗಳನ್ನು, ಲೋಕಿಯ ಧಮ್ಮಗಳನ್ನು, ಲೋಕೋತ್ತರ ಧಮ್ಮಗಳನ್ನು ಸರ್ವರಿಗೂ ಉಪದೇಶಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ 7ನೆಯ ಅಂಗವಾಗಿದೆ. ಇದರ ಬಗ್ಗೆ ವಂಗೀಸ ಥೇರರು ಹೀಗೆ ಹೇಳಿದ್ದಾರೆ:
ಹೇಗೆ ಸೂರ್ಯನು ಉದಯಿಸುವನೋ, ಪ್ರಾಣಿಗಳಿಗೆ ರೂಪ ದಶರ್ಿಸಲು ಅವಕಾಶ ನೀಡುತ್ತಾನೆ, ಶುದ್ಧ, ಅಶುದ್ಧ ಆಕಾರಗಳಿಗೂ, ಕುಶಲ ಮತ್ತು ಅಕುಶಲ ಆಕಾರಗಳಿಗೂ ಕಾಣುವಂತೆ ಮಾಡುತ್ತಾರೆ. ಅದೇರೀತಿಯಲ್ಲಿ ಭಿಕ್ಷುವು ಧಮ್ಮಧರನು ಅವಿದ್ಯೆಯಿಂದ ಅಂಧರಾದ ಜನರಿಗೆ ಉದಾತ್ತ ಪಥದ ಜ್ಞಾನ ಮತ್ತು ಶಾಂತಿಯ ವಿವಿಧ ಭಾಗಗಳನ್ನು ದಶರ್ಿಸುವಂತೆ ಮಾಡುವನು.
9. ಸಕ್ಕಂಗ ಪನ್ಹೋ (ಸಕ್ಕ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಸಕ್ಕನ ಮೂರು ಗುಣಗಳಾವುವು?(244)ಓ ಮಹಾರಾಜ, ಹೇಗೆ ಸಕ್ಕನು ಏಕಾಂತ ಸುಖದಲ್ಲಿ (ದಿವ್ಯ ಆನಂದದಲ್ಲಿ) ಸಮಪರ್ಿತನಾಗಿರುವನೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಏಕಾಂತದಲ್ಲಿ ಧ್ಯಾನಸುಖ ವೃದ್ಧಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಕ್ಕನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಯಾವಾಗ ಸಕ್ಕನು ತನ್ನ ಸುತ್ತಲು ದೇವತೆಗಳು ಇರುವಾಗ, ಅವರಿಗೆ ಅನುಗ್ರಹ ತೋರಿಸಿ ಅವರಲ್ಲಿ ಆನಂದ ತುಂಬಿಸುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ತನ್ನ ಚಿತ್ತವನ್ನು ವಿರಾಗಯುತವಾಗಿ, ಜಾಗೃತವಾಗಿ, ಪ್ರಶಾಂತವಾಗಿ ಆನಂದ ಉಕ್ಕಿಸುತ್ತಾನೆ. ಕುಶಲ ಧಮ್ಮಗಳಲ್ಲಿ ಈ ರೀತಿಯಾಗಿ ವಿಕಾಸಗೊಳಿಸಿ ಶ್ರಮಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಕ್ಕನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಸಕ್ಕನು ಎಂದಿಗೂ ಅಸಂತೃಪ್ತಿಯನ್ನು ವ್ಯಕ್ತಪಡಿಸುವುದಿಲ್ಲ. ಅದೇರೀತಿಯಲ್ಲಿ ಧ್ಯಾನಶೀಲನಾದ ಭಿಕ್ಷುವು ಯತ್ನಶೀಲತೆಯಲ್ಲಿ ನಿರತನಾಗಿ, ಏಕಾಂತತೆಯಲ್ಲಿ ಎಂದಿಗೂ ಅಸಮಾಧಾನ ತಾಳುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸಕ್ಕನ ತೃತೀಯ ಗುಣವಾಗಿದೆ. ಇದರ ಬಗ್ಗೆ ಪೂಜ್ಯ ಥೇರ ಸುಭೂತಿಯವರು ಹೀಗೆ ಹೇಳಿದ್ದಾರೆ:
ಮಹಾವೀರರ ಶಾಸನದಲ್ಲಿ ಎಂದು ನಾನು ಪಬ್ಬಜಿತನಾದೆನೋ ಅಂದಿನಿಂದ ನನ್ನಲ್ಲಿ ಯಾವುದೇ ಕಾಮವು ಉಂಟಾಗಲಿಲ್ಲ.
10. ಚಕ್ಕವತ್ತಿ (ಚಕ್ರವತರ್ಿ ಪ್ರಶ್ನೆ) ಪನ್ಹಾ
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ನಾಲ್ಕು ಗುಣಗಳಾವುವು? (245)
ಓ ಮಹಾರಾಜ, ಹೇಗೆ, ಚಕ್ರವತರ್ಿಯು ತನ್ನ ನಾಲ್ಕು ಧಾತುಗಳಿಂದಾಗಿ ಜನರ ಆದರ ಪ್ರೀತಿ ಗಳಿಸುತ್ತಾನೆ. ಅದೆಂದರೆ ದಾನ, ಸೌಜನ್ಯ, ನ್ಯಾಯಪರತೆ ಮತ್ತು ನಿಷ್ಪಕ್ಷಪಾತ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಇಂತಹ ಗುಣಗಳನ್ನು ಹೊಂದಿ, ಯತ್ನಶೀಲನಾಗಿ, ಭಿಕ್ಷು-ಭಿಕ್ಷುಣಿಯರ, ಉಪಾಸಕ ಉಪಾಸಿಕೆಯರ ಗೌರವ, ಆದರ, ಪಡೆದು ಅವರಲ್ಲಿ ಆನಂದ ತರುವವನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ಪ್ರಥಮ ಗುಣವಾಗಿದೆ.ಮತ್ತೆ ಓ ಮಹಾರಾಜ, ಹೇಗೆ ಚಕ್ರವತರ್ಿಯು ತನ್ನ ಸಾಮ್ರಾಜ್ಯದಲ್ಲಿ ಯಾವುದೇರೀತಿ ಕಳ್ಳತನವಾಗಲು ಬಿಡುವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನಲ್ಲಿ ಯಾವುದೇರೀತಿಯ ಕಾಮ, ರಾಗ, ದ್ವೇಷ, ಹಿಂಸೆಯ ಯೋಚನೆಗಳು ಉತ್ಪತ್ತಿಯಾಗಲು ಬಿಡುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾರು ಕುವಿತರ್ಕಗಳ (ಕೆಟ್ಟ ಯೋಚನೆಗಳು) ಅಳಿವಿನಲ್ಲಿ ಆನಂದಪಡುವರೋ, ಸದಾ ಸ್ಮೃತಿವಂತರಾಗಿ ಲೋಕವು ಯಾವುದರ ಬಗ್ಗೆ ಸುಂದರವೆಂದು ಭಾವಿಸುತ್ತದೋ ಅದರ ಬಗ್ಗೆ ಆಶುಭಗಳ (ಅಸಹ್ಯತೆಯ ಧ್ಯಾನ) ವೃದ್ಧಿಯಲ್ಲಿರುವರೋ ಅಂತಹವನು ಮಾತ್ರ ಮಾರ ಬಂಧನವನ್ನು ಛೇದಿಸುತ್ತಾನೆ.
ಮತ್ತೆ ಓ ಮಹಾರಾಜ, ಹೇಗೆ ಚಕ್ರವತರ್ಿಯು ಪ್ರಜೆಗಳ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ತಿಳಿಯಲು, ಇಡೀ ಜಗತ್ತನ್ನು ಸಾಗರದ ತೀರಗಳನ್ನು ಸಂದಶರ್ಿಸಿ ಪರೀಕ್ಷಿಸುವನೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಕ್ರಿಯೆಗಳನ್ನು, ವಾಚಾವನ್ನು ಮತ್ತು ಚಿತ್ತವನ್ನು ಪ್ರತಿನಿತ್ಯವು ಹೀಗೆ ಹೇಳಿಕೊಳ್ಳುತ್ತ ಪರೀಕ್ಷಿಸಿಕೊಳ್ಳುತ್ತಾನೆ. ಈ ಮೂರು ವಿಧವಾಗಿ ನಾನು ಇಂದು ದೋಷರಹಿತವಾಗಿ ನಡೆದುಕೊಂಡನೆ? ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ತೃತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಅಂಗುತ್ತರ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ನಿರಂತರ ಗಂಭೀರತೆಯಿಂದ ಭಿಕ್ಷುವು ತನ್ನನ್ನು ರಾತ್ರಿ-ಹಗಲು ಪರೀಕ್ಷಿಸುತ್ತ, ಹೇಗೆ ರಾತ್ರಿ, ಹಗಲುಗಳು ಬೇಗನೆ ಕಳೆಯುವನೋ ಹೇಗೆ ನನ್ನನ್ನು ಹುಡುಕುವವರು ಕಾಣುವರೋ ಮತ್ತು ಹೇಗೆ ಬಿಡುವುದು ಎಂದು ಯೋಚಿಸುವನು.
ಮತ್ತೆ ಓ ಮಹಾರಾಜ, ಚಕ್ರವತಿಯು ಪೂರ್ಣವಾಗಿ ರಕ್ಷಣೆ ಪಡೆಯುತ್ತಾನೆ. ಆತ ಒಳಗೆ, ಹೊರಗೆ, ಎರಡು ವಿಧದಲ್ಲೂ ರಕ್ಷಣೆ ಹೊಂದುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಯತ್ನಶೀಲನಾಗಿ ಅಕುಶಲದ ವಿರುದ್ಧ ರಕ್ಷಣೆ ಪಡೆಯಲು ದ್ವಾರಪಾಲಕನಂತೆ ಎಚ್ಚರವಹಿಸುತ್ತಾನೆ. ಎಲ್ಲಾ ಇಂದ್ರಿಯಗಳಲ್ಲಿ ಸ್ಮೃತಿ ವಹಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ 4ನೇ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ದ್ವಾರಗಳಲ್ಲಿ ಜಾಗ್ರತನಾಗಿರು ಭಿಕ್ಷುವೇ, ಆರಿಯ ಶ್ರಾವಕನು ಅಕುಶಲವನ್ನು ತೊರೆಯುತ್ತಾನೆ, ಕುಶಲವನ್ನು ವೃದ್ಧಿಸುತ್ತಾನೆ, ವಜ್ರ್ಯವಾದುದ್ದನ್ನು, ದೋಷವಾದುದನ್ನು ತೊರೆಯುತ್ತಾನೆ, ದೋಷರಹಿತವಾದುದನ್ನು ವೃದ್ಧಿಸುತ್ತಾನೆ, ಪರಿಶುದ್ಧತೆಯನ್ನು ಸಂರಕ್ಷಿಸುತ್ತಾನೆ.
(ಮೂರನೆಯ ಪಠವಿ ವಗ್ಗೊ ಮುಗಿಯಿತು
No comments:
Post a Comment