6. ಮಕ್ಕಟ ವಗ್ಗೊ (ಮರ್ಕಟ ವರ್ಗ)
1. ಪಂಥ ಮಕ್ಕಟ (ದಾರಿ ಜೇಡದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜೇಡದ ಗುಣ ಯಾವುದು?(266)ಹೇಗೆ ಓ ಮಹಾರಾಜ, ಜೇಡವು ತನ್ನ ಬಲೆಯಿಂದ ಪರದೆಯನ್ನು ರಸ್ತೆಯಲ್ಲಿ ನಿಮರ್ಿಸುವುದೋ, ಆಗ ಅದರಲ್ಲಿ ಯಾವುದೇ ಕೀಟ ಸಿಕ್ಕಿಕೊಳ್ಳಲಿ, ಅದು ಹುಳುವಾಗಲಿ, ನೊಣವಾಗಲಿ, ದುಂಬಿಯಾಗಲಿ ಅದನ್ನು ಅದು ಹಿಡಿದು ಭಕ್ಷಿಸಿಯೇ ಬಿಡುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿದವನಾಗಿ, ಆರು ಇಂದ್ರೀಯ ದ್ವಾರಗಳಲ್ಲಿಯೂ ಸ್ಮೃತಿ ಪ್ರತಿಷ್ಠಾಪಿಸುತ್ತಾನೆ ಮತ್ತು ಆಗ ಯಾವುದೇ ಪಾಪದ ನೊಣಗಳು ಬಂದರೆ ಅದನ್ನು ಹಿಡಿಯುತ್ತಾನೆ, ನಾಶಪಡಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಹಾದಿಜೇಡದ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಥೇರ ಅನಿರುದ್ಧರು ಹೀಗೆ ಹೇಳಿದ್ದಾರೆ:
ಚಿತ್ತವು ಆರು ದ್ವಾರಗಳಲ್ಲಿಯು ಮುಚ್ಚಿರಬೇಕು, ಆತನು ಸ್ಮೃತಿ ಸ್ಥಾಪಿಸುವವರಲ್ಲಿ ಉತ್ತಮನಾಗಿರಲಿ, ಯಾವುದೇ ಕ್ಲೇಶವು ಸಿಕ್ಕರೆ ತಕ್ಷಣ ವಿಪಸ್ಸನಾ (ಪ್ರಜ್ಞಾ)ದ ಕತ್ತಿಯಿಂದ ಹತ್ಯೆ ಮಾಡಲಿ.
2. ಧನಸ್ಸಿತದಾರಕಂಗ ಪನ್ಹೊ
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ತಾಯಿಯ ವಕ್ಷದಲ್ಲಿರುವ ಮಗುವಿನಂತೆ ಇರುವ ಗುಣ ಯಾವುದು? (267)ಓ ಮಹಾರಾಜ, ಹೇಗೆ ಮಗುವು ತಾಯಿಯ ವಕ್ಷದಲ್ಲಿರುವುದೋ ಅದಕ್ಕೆ ತನ್ನದೇ ಲಾಭವಿದೆ. ಅದಕ್ಕೆ ಹಾಲು ಬೇಕಾದಾಗ ಅಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ತನ್ನ ಒಳಿತಿಗೆ ಅಂಟಿರುತ್ತಾನೆ. ಹಾಗೆಯೇ ಎಲ್ಲಾ ಬೋಧನೆಗೆ ಅಂಟಿರುತ್ತಾನೆ. ಹೇಳುವುದಾದರೆ, ಪ್ರಶ್ನಿಸುವಿಕೆ, ಉತ್ತರಿಸುವಿಕೆ, ಶೀಲ, ಏಕಾಂತತೆ, ಗುರು ಸಾನಿಧ್ಯದಲ್ಲಿರುವುದು, ಸುಮಿತ್ರತ್ವ ಹೊಂದಿರುವುದು, ಸತ್ಯಜ್ಞಾನಾನುಸಾರ ವತರ್ಿಸುವುದು, ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆ ಮಗುವಿನ ಗುಣವಾಗಿದೆ. ಇದರ ಬಗ್ಗೆ ದೀಘನಿಕಾಯದಲ್ಲಿ ದೇವಾದಿದೇವ ಭಗವಾನರು ಮಹಾಪರಿನಿಬ್ಬಾಣ ಸುತ್ತದಲ್ಲಿ ಹೀಗೆ ಹೇಳಿದ್ದಾರೆ:
ಓ ಆನಂದ, ಉತ್ಸಾಹಿತನಾಗಿರು, ನಿನ್ನ ಒಳಿತಿಗಾಗಿ ನಿಷ್ಟನಾಗಿರು, ಪ್ರಯತ್ನಶೀಲನಾಗು, ನಿನ್ನ ಹಿತಕ್ಕೆ ಪ್ರಕಾಶಮಾನನಾಗಿರು.
3. ಚಿತ್ತಕಧರ ಕುಮ್ಮಂಗ ಪನ್ಹೊ (ನೆಲ ಆಮೆಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನೆಲ ಆಮೆಯ ಒಂದು ಗುಣ ಯಾವುದು? (268)ಹೇಗೆ ಓ ಮಹಾರಾಜ, ನೆಲ ಆಮೆಯು ನೀರಿಗೆ ಹೆದರುವುದೋ, ನೀರಿರುವ ಪ್ರದೇಶಗಳಿಂದ ದೂರವಿರುವುದೋ, ನೀರಿನಿಂದ ದೂರವಿರುವ ಅದರ ಸ್ವಭಾವವನ್ನು ಸದಾ ಪಾಲಿಸುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಸ್ಮೃತಿಹೀನತೆಗೆ ಅಲಕ್ಷಕ್ಕೆ, ಸ್ವಲ್ಪ ತಪ್ಪಿಗೂ ಭೀತಿಪಡುತ್ತಾನೆ. ಸದಾ ಸ್ಮೃತಿವಂತನಾಗಿರುತ್ತಾನೆ. ಅಲಕ್ಷದ ಅಪಾಯದ ಗ್ರಹಿಕೆಯ ವೃದ್ಧಿಯಿಂದಾಗಿ ಆತನ ಸಮಣತ್ವವು ಮಸುಕು ಆಗುವುದಿಲ್ಲ. ಬದಲಾಗಿ ನಿಬ್ಬಾಣದ ಕಡೆಗೆ ಹೋಗುತ್ತಿರುತ್ತದೆ. ಇದೇ ಓ ಮಹಾರಾಜ, ನೆಲ ಆಮೆಯು ಹೊಂದಿರುವ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾವ ಭಿಕ್ಷುವು ಎಚ್ಚರಿಕೆಯಲ್ಲಿ ಆನಂದಿಸುವನೋ, ಅಲಕ್ಷದ ಅಪಾಯಕ್ಕೆ ಹೆದರುವನೋ, ಅಂತಹವನು ಉನ್ನತ ಸ್ಥಿತಿಯಿಂದ ಎಂದಿಗೂ ಬೀಳಲಾರ, ಬದಲಾಗಿ ನಿಬ್ಬಾಣದ ಸಾನಿಧ್ಯದಲ್ಲಿ ವಿಹರಿಸುವನು.
4. ಪವನಂಗ ಪನ್ಹೊ (ಪರ್ವತ ಶಿಖರದ ಪ್ರಶ್ನೆ)
ಭಂತೆ ನಾಗಸೇನ, ಪರ್ವತ ಶಿಖರದ ಯಾವ 5 ಗುಣಗಳನ್ನು ಭಿಕ್ಷು ಹೊಂದಿರಬೇಕು? (269)ಹೇಗೆ ಓ ಮಹಾರಾಜ, ಪರ್ವತ ಶಿಖರವು ಪಾಪಿಗಳಿಗೆ ಅಡಗುದಾಣವಾಗಿದೆಯೋ ಅದೇರೀತಿ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿರುತ್ತಾನೆ. ಆತನು ಪರರ ತಪ್ಪುಗಳು, ಪಾಪಗಳು, ರಹಸ್ಯಗಳನ್ನು ತನ್ನಲ್ಲೇ ಅಡಗಿಸಿಟ್ಟುಕೊಂಡಿರುತ್ತಾನೆ, ಅದನ್ನು ಬಹಿರಂಗಪಡಿಸುವುದಿಲ್ಲ. ಇದೇ ಓ ಮಹಾರಾಜ, ಪರ್ವತಶಿಖರದ ಗುಣವನ್ನು ಭಿಕ್ಷು ಹೊಂದಿರುತ್ತಾನೆ.
ಮತ್ತೆ ಓ ಮಹಾರಾಜ, ಪರ್ವತ ಶಿಖರವು ಜನರಿಂದ ಶೂನ್ಯವಾಗಿರುವುದೋ, ಹಾಗೆಯೇ ಭಿಕ್ಷುವು ಸಹಾ ಪ್ರಯತ್ನಪರನಾಗಿ, ಆಸೆಯಿಂದ, ಕೋಪದಿಂದ, ಮೂರ್ಖತ್ವದಿಂದ, ಅಹಂಕಾರದಿಂದ, ದೃಷ್ಟಿಜಾಲದಿಂದ, ಸರ್ವಕ್ಲೇಶಗಳಿಂದ ಶೂನ್ಯನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪರ್ವತಶಿಖರದ ದ್ವಿತೀಯ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಪರ್ವತಶಿಖರವು ಏಕಾಂತ ಸ್ಥಳವಾಗಿದೆಯೋ, ಜನಜಂಗುಳಿಯಿಂದ ರಹಿತವಾಗಿದೆಯೋ ಅದೇರೀತಿ, ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪರಿಶ್ರಮದಿಂದ ಕೂಡಿ, ಏಕಾಂತತೆಯಲ್ಲಿ ನೆಲೆಸುತ್ತಾನೆ. ಪಾಪಗಳಿಂದ ಅನರ್ಹ ಗುಣಗಳಿಂದ ಕೂಡಿರುವುದಿಲ್ಲ. ಉದಾತ್ತರಲ್ಲದವರ ಜೊತೆಯಲ್ಲಿ ಸೇರುವುದಿಲ್ಲ. ಇದೇ ಓ ಮಹಾರಾಜ, ಪರ್ವತ ಶಿಖರದ ತೃತೀಯ ಗುಣ. ಇದನ್ನು ಭಿಕ್ಷುವು ಹೊಂದಿರುತ್ತಾನೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತಶಿಖರವು ಸ್ವಚ್ಛವಾಗಿ, ಪರಿಶುದ್ಧವಾಗಿದೆಯೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲದಿಂದ ಕೂಡಿದ್ದು, ಪರಿಶುದ್ಧತೆಯಿಂದ, ಸುಖದಿಂದ, ವಿಕರ್ಷಣೆಯಿಂದ ಸುಶೀಲತೆಯಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಿರುವ ಪರ್ವತದ ಶಿಖರದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತದ ಶಿಖರವು ಉದಾತ್ತರಿಗೆ ಆಶ್ರಯ ತಾಣವೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಆರ್ಯಜನರ ಸೇವನೆ ಮಾಡುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ಐದನೆಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವರಾದ ಭಗವಾನರು ಹೀಗೆ ಸಂಯುಕ್ತನಿಕಾಯದಲ್ಲಿ ಹೇಳಿದ್ದಾರೆ:
ಪರ್ವತ ಶಿಖರದಲ್ಲಿರುವ ಆರ್ಯರ (ಉದಾತ್ತದ) ರೀತಿ, ಪರ್ವತ ಶಿಖರದಲ್ಲಿರುವ ಏಕಾಂತವಾಸಿಗಳ ರೀತಿ, ಯಾರು ಅರಹತ್ವದ ಕಡೆ ಗಂಭೀರವಾಗಿ ಬಾಗಿರುವರೋ, ಯಾರ ಚಿತ್ತವು ಉನ್ನತವಾದ ಅಗ್ರಸ್ಥಿತಿಯಲ್ಲಿದೆಯೋ ಅಂತಹ ಉತ್ಸಾಹಿ, ಪ್ರಾಜ್ಞಾ ಪಂಡಿತರ ಸಹವಾಸದಲ್ಲಿರಲಿ.
5. ವೃಕ್ಷ ಪ್ರಶ್ನೆ (ರುಕ್ಖಂಗ ಪನ್ಹೊ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ವೃಕ್ಷದ 5 ಗುಣಗಳಾವುವು?(270)
ಓ ಮಹಾರಾಜ, ಹೇಗೆ ವೃಕ್ಷವು ಹೂ ಹಣ್ಣುಗಳನ್ನು ನೀಡುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ವಿಮುಕ್ತಿಯ ಪುಷ್ಪಗಳನ್ನು ಮತ್ತು ಸಮಣತ್ವದ ಫಲವನ್ನು ಹೊಂದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ಪ್ರಥಮ ಗುಣವಾಗಿದೆ.ಮತ್ತೆ ಓ ಮಹಾರಾಜ, ಹೇಗೆ ವೃಕ್ಷಗಳು ತಮ್ಮ ಕೆಳಗೆ ಇರುವವರ ಮೇಲೆ ಛಾಯೆ ನೀಡುವುದೋ ಅದೇರೀತಿ ಧ್ಯಾನಶೀಲ ಜಾಗರೂಕ ಭಿಕ್ಷುವು ತಮ್ಮ ಸಾನಿಧ್ಯದಲ್ಲಿರುವವರ ಧಾಮರ್ಿಕ ಅವಶ್ಯಕತೆಗಳನ್ನು, ಅರ್ಥವನ್ನು ದಯೆಯಿಂದ ನೀಡುವವನು ಆಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ದ್ವಿತೀಯ ಗುಣವಾಗಿದೆ.
ಓ ಮಹಾರಾಜ, ಹೇಗೆ ವೃಕ್ಷವು ತನ್ನ ನೆರಳನ್ನು ಎಲ್ಲರ ಮೇಲೆ ನಿಷ್ಪಕ್ಷಪಾತದಿಂದ ನೀಡುವುದೋ ಅದೇರೀತಿ ಧ್ಯಾನಶೀಲ ಭಿಕ್ಷುವು ಯಾರ ಮೇಲೂ ಭೇದಭಾವವನ್ನು ತೋರುವುದಿಲ್ಲ. ಆತನು ಸಮಾನರೀತಿಯ ಮೈತ್ರಿಯನ್ನು ತನ್ನನ್ನು ದೋಚುವವರ ಅಥವಾ ಹಿಂಸಿಸುವವರ ಅಥವಾ ದ್ವೇಷಿಸುವವರ ಮೇಲೂ ಸಹಾ ತನ್ನ ಬಾಂಧವರಂತೆ ಮೈತ್ರಿ ತೋರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ವಧಿಸಲು ಪ್ರಯತ್ನಿಸಿದ ದೇವದತ್ತನ ಮೇಲೆ, ಚೋರ ಅಂಗುಲಿಮಾಲನ ಮೇಲೆ, ಧನಪಾಲ (ನಾಲಾಗಿರಿ) ಆನೆಯ ಮೇಲೆ, ಪುತ್ರ ರಾಹುಲನ ಮೇಲೆ ಹೀಗೆ ಸರ್ವರ ಮೇಲೂ ಶ್ರೇಷ್ಠ ಮುನಿಯು (ಬುದ್ಧರು) ಸಮಾನವಾದ ಮೈತ್ರಿಯನ್ನು ತೋರಿದ್ದರು.
6. ಮೇಘಂಗ ಪನ್ಹೊ (ಮಳೆಯ ಮೋಡದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಳೆಯ 5 ಗುಣಗಳಾವುವು?(271)ಓ ಮಹಾರಾಜ, ಹೇಗೆ ಮಳೆಯು ಯಾವುದೇ ಉತ್ಪನ್ನವಾಗಿರುವ ಧೂಳನ್ನು ಶಾಂತಗೊಳಿಸುತ್ತದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಯತ್ನದಲ್ಲಿ ಜಾಗರೂಕನಾಗಿ, ಉತ್ಪನ್ನವಾಗುವ ಕ್ಲೇಷಗಳ ಧೂಳನ್ನು ಶಾಂತಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಳೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯು ಭೂಮಿಯಲ್ಲಿನ ತಾಪವನ್ನು ತಂಪುಗೊಳಿಸುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ತನ್ನ ಮೆತ್ತ ಧ್ಯಾನದಿಂದಾಗಿ ಸರ್ವಲೋಕ ದೇವತೆಗಳನ್ನು ಮತ್ತು ಮಾನವರನ್ನು ಸಂತೈಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಮಳೆಯು ಎಲ್ಲಾ ವಿಧವಾದ ಸಸ್ಯಗಳು ಬೆಳೆಯುವಂತೆ ಮಾಡುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯತ್ನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸರ್ವಜೀವಿಗಳಲ್ಲೂ ಶ್ರದ್ಧೆಯು ಉಂಟಾಗುವಂತೆ ಮಾಡುತ್ತಾನೆ ಮತ್ತು ಆ ಶ್ರದ್ಧೆಯು 3 ಪ್ರಾಪ್ತಿಗಳು ಆಗುವಂತೆ ಮಾಡುತ್ತಾನೆ ಮತ್ತು ಕೆಳಪ್ರಾಪ್ತಿಗಳೆಂದರೂ ಸಹಾ ಸುಗತಿಯಲ್ಲಿ ದೇವತೆಗಳಾಗಿಯು ಮತ್ತು ಪೃಥ್ವಿಯಲ್ಲಿ ಮಾನವರಾಗಿಯೂ ಹುಟ್ಟುತ್ತಾರೆ. ಆದರೆ ಪ್ರಾಪ್ತಿಗಳಲ್ಲಿ ಉಚ್ಚವಾದುದೆಂದರೆ ಅರಹತ್ವವಾಗಿದೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಮಳೆಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯ ಮೋಡವು ತಾಪಕಾಲದಲ್ಲಿ ಮೇಲೇಳುತ್ತದೋ ಹಾಗು ಹುಲ್ಲಿಗೆ, ಔಷಧಿಯ ಗಿಡಮೂಲಿಕೆಗಳಿಗೆ, ಗಿಡ-ಮರಗಳಿಗೆ ರಕ್ಷಣೆ ಕೊಡುವಂತೆ ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಯೋಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆಯಿಂದ ಸಮಣ ಧಮ್ಮವನ್ನು ರಕ್ಷಿಸುತ್ತಾನೆ. ಯೊಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆಯೇ ಕುಶಲಧಮ್ಮದ ಮೂಲವಾಗಿದೆ. ಇದೇ ಮಹಾರಾಜ, ಭಿಕ್ಷವು ಹೊಂದಬೇಕಾದ ಮಳೆಯ ಚತುರ್ಥ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯು ಸುರಿದು, ನದಿಗಳು, ಕೆರೆಗಳು, ಸರೋವರಗಳು, ಗವಿಗಳು, ಕಣಿವೆಗಳು, ಕೊಳಗಳು, ಬಿರುಕುಗಳು, ರಂಧ್ರಗಳು, ಬಾವಿಗಳು ನೀರಿನಿಂದ ಕೂಡಿರುತ್ತವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಆಗಮ ಪರಿಪತ್ತಿಯಾದ ಧಮ್ಮದ ಮಳೆಯು ಸುರಿದು ಸಂಪ್ರದಾಯದಿಂದ ಹರಿದುಬರುತ್ತದೆ ಮತ್ತು ಹಾಗೆಯೇ ಯಾರು ಬೋಧನೆಯಲ್ಲಿ ಆಸಕ್ತರೋ ಅವರಿಗೆ ಪೂರ್ಣತೃಪ್ತಿ ನೀಡುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಳೆಯ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಧಮ್ಮ ಸೇನಾಪತಿಯಾದ ಸಾರಿಪುತ್ತರು ಹೀಗೆ ಹೇಳಿದ್ದಾರೆ:
ಮಹಾ ಮುನಿಯಾದ ಬುದ್ಧರಿಗೆ ಬೋಧಿ ಪಡೆಯುವಂತಹ ಜನಗಳು ಸಹಸ್ರ ಸಹಸ್ರ ಯೋಜನೆಗಳ, ದೂರವಿದ್ದರೂ ಸಹಾ ಕಾಣಿಸುತ್ತಾರೆ. ಕ್ಷಣದಲ್ಲಿ ಅಲ್ಲಿಗೆ ಹೋಗಿ ಧಮ್ಮವನ್ನು ಬೋಧಿಸುವರು.
7. ಮಣಿರತನಂಗ ಪನ್ಹೊ (ದಿವ್ಯವಾದ ಮಣಿರತ್ನದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಣಿರತ್ನದ 3 ಗುಣಗಳಾವುವು? (272)
ಓ ಮಹಾರಾಜ, ಹೇಗೆ ಮಣಿರತ್ನವು ಸಂಪೂರ್ಣವಾಗಿ ಪರಿಶುದ್ಧವೋ ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಪರಿಶುದ್ಧವಾದ ಜೀವನದಿಂದ ಆತನು ಕೂಡಿರುತ್ತಾನೆ. ಇದೆ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಣಿರತ್ನದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಮಣಿರತ್ನವು ಯಾವುದೇ ವಸ್ತುವಿನೊಂದಿಗೆ, ಯಾವುದೇ ಸಂಯುಕ್ತದೊಂದಿಗೆ ಬೆರೆಯಲಾರದೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಪಾಪಿಗಳೊಂದಿಗೆ ಬೆರೆಯುವುದಿಲ್ಲ, ಸ್ನೇಹ ಮಾಡುವುದಿಲ್ಲ. ಇದೇ ಓ ಮಹಾರಾಜ ಭಿಕ್ಷು ಹೊಂದಬೇಕಾದ ಮಣಿರತ್ನದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಣಿರತ್ನವು ಅತ್ಯಮೂಲ್ಯವಾದ ರತ್ನಗಳೊಂದಿಗೆ ಬೆರೆಯುವುದೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ಶ್ರೇಷ್ಠರೊಂದಿಗೆ ಬೆರೆಯುತ್ತಾನೆ. ಅಂದರೆ ಸೋತಪನ್ನ, ಸಕದಾಗಾಮಿ, ಅನಾಗಾಮಿ, ಅರಹಂತ, ತ್ರಿವಿದ್ಯೆ ಪಡೆದವರು, ಆರು ಅಭಿಜ್ಞಾ ಪಡೆದವರು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಣಿರತ್ನದ ತೃತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಸುತ್ತ ನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಪರಿಶುದ್ಧರೊಂದಿಗೆ ಪರಿಶುದ್ಧರು ಬೆರೆಯಲಿ, ಸದಾ ಅನುಸ್ಮೃತಿಯಲ್ಲಿ ದೃಢನಾಗಿರಲಿ. ಹೀಗೆ ಸೌಹಾರ್ದತೆಯಿಂದ ಪ್ರಾಜ್ಞರು ವಾಸಿಸಿ ಎಲ್ಲಾ ದುಃಖಗಳನ್ನು ಅಂತ್ಯಗೊಳಿಸಲಿ.
8. ಮಾಗವಿಕಂಗ ಪನ್ಹೊ (ಬೇಟೆಗಾರನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ನಾಲ್ಕು ಗುಣಗಳಾವುವು? (273)ಓ ಮಹಾರಾಜ, ಹೇಗೆ ಬೇಟೆಗಾರನು ಧಣಿವನ್ನೇ ಮೀರಿರುತ್ತಾನೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಯತ್ನದಲ್ಲಿ ಜಾಗರೂಕನಾಗಿ ದಣಿವನ್ನೇ ಮೀರಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ತನ್ನ ಗಮನವೆಲ್ಲಾ ಜಿಂಕೆಯ ಮೇಲೆಯೇ ಕೇಂದ್ರೀಕೃತಗೊಳಿಸುವಂತೆ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ತನ್ನ ಗಮನವೆಲ್ಲಾ ಧ್ಯಾನ ವಿಷಯದ ಮೇಲೆಯೇ ಕೇಂದ್ರೀಕೃತಗೊಳಿಸಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ತನ್ನ ಕಾರ್ಯದ ಸರಿಯಾದ ಕಾಲವನ್ನು ಅರಿತಿರುತ್ತಾನೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಈ ಸಮಯವು ಏಕಾಂತದ್ದು ಮತ್ತು ಈ ಸಮಯವು ತ್ಯಾಗದ್ದು ಎಂದು ಸರಿಯಾಗಿ ಅರಿತಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ಜಿಂಕೆಯನ್ನು ಕಂಡ ಕ್ಷಣದಲ್ಲಿ ನಾನು ಅದನ್ನು ಖಂಡಿತ ಪಡೆಯುವೆ ಎಂದು ಆನಂದಪಡುತ್ತಾನೋ, ಹಾಗೆಯೇ ಧ್ಯಾನಶೀಲನಾದ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಧ್ಯಾನ ವಿಷಯ ಕಂಡ ಕ್ಷಣದಲ್ಲಿ ಅಥವಾ ಕೇಳಿದ ಕ್ಷಣದಲ್ಲಿ ಆನಂದಭರಿತನಾಗಿ ನಾನು ಹುಡುಕುತ್ತಿದ್ದ ಧ್ಯಾನ ವಿಷಯವು ಇಂದು ಹಿಡಿದೆನು. ಇದೇ ಓ ಮಹಾರಜ ಭಿಕ್ಷುವು ಹೊಂದಬೇಕಾದ ಚತುರ್ಥ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಥೇರ ಮೋಘರಾಜರು ಹೀಗೆ ಹೇಳಿದ್ದಾರೆ:
ನಿಬ್ಬಾಣದ ಕಡೆ ಬಾಗಿರುವ ಭಿಕ್ಷುವಿನ ಮನಸ್ಸು ಧ್ಯಾನದ ವಿಷಯ ಪಡೆದಾಗ, ಆನಂದ ಭರವಸೆಗಳಿಂದ ಕೂಡಿ ನಾನು ಈ ಪರಮೋಚ್ಛ ಗುರಿಯನ್ನು ಪಡೆವೆನು.
9. ಬಾಳಿಸಿಕಂಗ ಪನ್ಹೊ (ಮೀನುಗಾರ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಿರುವ ಮೀನುನಾರನ 2 ಗುಣಗಳಾವುವು?(274)ಹೇಗೆ ಓ ಮಹಾರಾಜ, ಮೀನುಗಾರನು ತನ್ನ ಗಾಳದಿಂದ ಮೀನುಗಳನ್ನು ಹಿಡಿಯುತ್ತಾನೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ತನ್ನ ಜ್ಞಾನದಿಂದ ವ್ಯೂಹರಚಿಸಿ, ಪರಮೋಚ್ಛ ಸಮಣತ್ವದ ಫಲವಾದ ಅರಹಂತತ್ವವನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮೀನುಗಾರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮೀನುಗಾರನು, ಅಲ್ಪವನ್ನು ತ್ಯಾಗಮಾಡಿ, ಮಹತ್ತರವಾದ ಲಾಭವನ್ನು ಪಡೆಯುತ್ತಾನೊ, ಅದೇರೀತಿ ಭಿಕ್ಷುವು ಧ್ಯಾನಶೀಲನಾಗಿ, ಯತ್ನದಲ್ಲಿ ಜಾಗರೂಕನಾಗಿ, ಅಲ್ಪವಾದ ಪ್ರಾಪಂಚಿಕ ವಸ್ತು ವಿಷಯಗಳನ್ನೆಲ್ಲಾ ತ್ಯಾಗಮಾಡಿ, ಆ ತ್ಯಾಗದಿಂದಾಗಿ ಮಹತ್ತರವಾದ ಸಮಣತ್ವದ ಫಲಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮೀನುಗಾರನ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಓ ರಾಜ, ಥೇರ ರಾಹುಲರು ಹೀಗೆ ಹೇಳಿದ್ದಾರೆ:
ಶೂನ್ಯದ ನಿಮಿತ್ತ (ಚಿಹ್ನೆ)ದಿಂದ ಹಾಗು ಆಸೆರಹಿತದ ನಿಮಿತ್ತದಿಂದ, ವಿಮೋಕ್ಷ ಪಡೆಯುವರು ಹಾಗೆಯೇ ನಾಲ್ಕು ಫಲಗಳನ್ನು ಪಡೆದು ಆರು ಅಭಿಜ್ಞಾಗಳನ್ನು ಸಾಧಿಸುವರು. ಇವುಗಳನ್ನೆಲ್ಲಾ ಲೋಕದಲ್ಲೇ ಪಡೆಯುವರು.
10. ತಚ್ಛಕಂಗ ಪನ್ಹೊ (ಬಡಗಿಗಾರ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಡಗಿಯವನ 2 ಗುಣಗಳಾವುವು? (275)
ಓ ಮಹಾರಾಜ, ಹೇಗೆ ಬಡಗಿಯವನು ಕೊಳೆತ ಮರದ ತುಂಡನ್ನು ಬಿಟ್ಟು ಘನವಾದ ಮರದ ತುಂಡನ್ನು ಆರಿಸುವಂತೆ, ವ್ಯರ್ಥವಾದ ಭಾಗವನ್ನು ಕತ್ತರಿಸಿ ಬಿಸಾಡುವಂತೆ, ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಸತ್ಯದ ಆಧಾರದಲ್ಲೇ ನಿಲ್ಲುತ್ತಾನೆ. ಜ್ಞಾನದ ಗರಗಸದ ಶ್ರದ್ಧೆಯ ಹಿಡಿಯನ್ನು ಹಿಡಿದು, ಕ್ಲೇಶಗಳನ್ನು ಕತ್ತರಿಸಿಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಡಗಿಯವನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಡಗಿಯವನು ಮೃದುವಾದ ಭಾಗಗಳನ್ನು ತೊರೆದು ಕಠಿಣವಾದ ಜಾಗವನ್ನು ಆರಿಸುವಂತೆ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಮಿಥ್ಯಾದೃಷ್ಟಿಗಳ ಪಥವನ್ನು ತೊರೆಯುತ್ತಾನೆ. ಅವೆಂದರೆ ಶಾಶ್ವತವಾದ, ಉಚ್ಛೆದವಾದ (ನಾಶವಾಗುತ್ತದೆ ಎಂಬ ವಾದ) ಶರೀರ ಮತ್ತು ಜೀವ ಎರಡೂ ಒಂದೇ, ಶರೀರ ಮತ್ತು ಜೀವ ಇವೆರಡು ಅನ್ಯ, ತದುತ್ತಮ ಅನ್ಯದುತ್ತಮ (ಎಲ್ಲರ ಬೋಧನೆ ಉತ್ತಮ) ಅಕತಮ ಪಬ್ಬ (ಕರ್ಮದಿಂದ ಪ್ರಯೋಜನವಿಲ್ಲ), ಅಪುರಿಸಕಾರ (ಪುರುಷನ ಕ್ರಿಯೆಯಿಂದ ಲಾಭವಿಲ್ಲ), ಅಬ್ರಹ್ಮಚಾರಿಯವಾಸಂ (ಬ್ರಹ್ಮಚರ್ಯೆಯಿಂದ ಲಾಭವಿಲ್ಲ), ಸತ್ತಾವಿನಾಸಂ (ಜೀವಿಯು ನಾಶವಾಗುತ್ತಾನೆ) ನವಸತ್ತಪಾತುಭಾವಂ (ಜೀವಿ ಸತ್ತಾಗ 9 ಬಗೆಯ ಜೀವಿಗಳು ಉದಯಿಸುತ್ತದೆ). ಸಂಖಾರಸಸ್ಸತ ಭಾವಂ (ಸಂಖಾರಗಳು ಶಾಶ್ವತ) ಯೋ ಕರೋತಿ, ಕೊ ಪಟಿಸಂವೇದಿತಿ (ಕ್ರಿಯೆ ಮಾಡುವವನು ಹಾಗು ಫಲ ಅನುಭವಿಸುವವನು ಒಂದೇ). ಅನ್ಯೂಕರೂತಿ, ಅನ್ಯೂ ಪಟಿಸಂವೆದೆತಿ (ಕ್ರಿಯೆ ಮಾಡುವವನು ಬೇರೆ, ಫಲ ಅನುಭವಿಸುವವನು ಬೇರೆ) ಮತ್ತು ಇತರೆ ಅಂತಹ ಕರ್ಮಫಲದರ್ಶನಗಳು ಮತ್ತು ಕ್ರಿಯಫಲ ದೃಷ್ಟಿಗಳನ್ನು ತೊರೆಯುತ್ತಾನೆ. ಇವೆಲ್ಲಾ ಸಿದ್ಧಾಂತಗಳು ಪಾಖಂಡಿತ್ಯವನ್ನು ಹೊಂದಿವೆ. ಇವೆಲ್ಲಾ ಮಿಥ್ಯಾದೃಷ್ಟಿಗಳನ್ನು ತ್ಯಜಿಸುತ್ತಾನೆ. ಈ ಎಲ್ಲಾ ಸಂಖಾರಗಳಿಂದ ಅತೀತವಾಗಿ ಪರಮಶೂನ್ಯತೆ ಪಡೆಯುತ್ತಾನೆ. ಅಲ್ಲಿ ಯಾವ ವ್ಯಕ್ತಿ ಭಾವವು ಇರುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಡಗಿಯವನ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವರಾದ ಭಗವಾನರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಈ ಮಲಗಳಿಂದ ಮುಕ್ತರಾಗಿ, ಈ ಕಸವನ್ನೆಲ್ಲಾ ನಿಮ್ಮಿಂದ ದೂರವಿಡಿ, ಹುರಳಿಲ್ಲದ್ದನ್ನು ಗಾಳಿಗೆ ತೂರಿ, ಯಾರು ಈ ಎಲ್ಲಾ ಮಿಥ್ಯಾದೃಷ್ಟಿಗಳನ್ನು ಹಿಡಿದಿರುವರೋ ಅವರು ನಿಜ ಸಮಣರಲ್ಲ. ಪಾಪಯುತ ಅಕುಶಲ ಯೋಚನೆಗಳಿಂದ ಪಾಪಜೀವನದಿಂದ ಹೊರಬನ್ನಿ, ನಿಮ್ಮನ್ನು ಯೋಗ್ಯವಾಗಿ ಗಮನಿಸುತ್ತಾ ಪರಿಶುದ್ಧರಾಗಿ, ಪರಿಶುದ್ಧರೊಡನೆ ಬೆರೆಯಿರಿ.
(ಆರನೆಯ ಮಕ್ಕಟಕ ವರ್ಗ ಮುಗಿಯಿತು )
No comments:
Post a Comment