7. ಕುಂಭ ವಗ್ಗೋ
1. ಕುಂಭಂಗ ಪನ್ಹೋ
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನೀರಿನ ಮಡಿಕೆಯ ಗುಣ ಯಾವುದು? (276)ಓ ಮಹಾರಾಜ, ಹೇಗೆ ತುಂಬುನೀರಿನ ಮಡಿಕೆಯು ಶಬ್ದ ಮಾಡುವುದಿಲ್ಲವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸಮಣತ್ವದ ಶಿಖರವನ್ನು ಪ್ರಾಪ್ತಿಮಾಡಿದಾಗ ಆತನಿಗೆ ಸಂಪ್ರದಾಯವೆಲ್ಲವೂ ತಿಳಿಯುತ್ತದೆ. ಹಾಗೆಯೇ ಕಲಿಯುವಿಕೆ ಮತ್ತು ಅರ್ಥವಿವರಣೆ ಎಲ್ಲವೂ ತಿಳಿಯುತ್ತಾನೆ. ಆದರೂ ಆತನ ಶಬ್ದಗಳನ್ನು ಮಾಡುವುದಿಲ್ಲ. ಅದರಿಂದಾಗಿ ಅಹಂಕಾರಪಡುವುದಿಲ್ಲ, ಅದನ್ನು ತೋರಿಸಿಕೊಳ್ಳಲು ಹೋಗುವುದಿಲ್ಲ. ಬದಲಾಗಿ ಅಹಂಕಾರ ಮತ್ತು ಸ್ವಶೀಲತೆಯಿಂದ ದೂರವೇ ಇರುತ್ತಾನೆ. ಆತನು ನೇರವಾಗಿ ಸ್ಪಷ್ಟವಾಗಿಯೇ ಇರುತ್ತಾನೆ ಹೊರತು ವಾಚಾಳಿ ಬಾಯಿಬಡುಕ ಆಗಿರುವುದಿಲ್ಲ. ಹಾಗೆಯೇ ಪರರನ್ನು ಕೀಳಾಗಿ ಕಾಣುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನೀರಿನ ಮಡಿಕೆಯ ಗುಣವಾಗಿದೆ. ಇದರ ಬಗ್ಗೆ ಭಗವಾನರು ದೇವಾದಿದೇವರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಯಾವುದು ತುಂಬಿಲ್ಲವೋ ಅದೇ ಸದ್ದು ಮಾಡುತ್ತದೆ. ಯಾವುದು ತುಂಬಿದೆಯೋ ಅದು ಶಬ್ದರಹಿತವಾಗಿ ಶಾಂತವಾಗಿರುತ್ತದೆ. ಮೂರ್ಖರು ಖಾಲಿ ಮಡಿಕೆಗಳಂತೆ, ಜ್ಞಾನಿಗಳಾದರೋ ಆಳವಾದ ಪ್ರಶಾಂತ ಸರೋವರದಂತೆ, ಸ್ಪಷ್ಟವಾಗಿ ಮತ್ತು ಪೂರ್ಣರಾಗಿರುತ್ತಾರೆ.
2. ಕಾಲಾಯಸಂಗ ಪನ್ಹೊ (ಕಪ್ಪು ಕಬ್ಬಿಣ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಕಪ್ಪು ಕಬ್ಬಿಣದ 2 ಗುಣಗಳಾವುವು? (277)
ಹೇಗೆ ಓ ಮಹಾರಾಜ, ಕಬ್ಬಿಣವು ಅಪಾರ ಹೊಡೆತಕ್ಕೆ ಈಡಾದರೂ ಅದೇ ಭಾರವನ್ನು, ಹೊಂದಿರುವುದೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು, ಯತ್ನದಲ್ಲಿ ಜಾಗರೂಕನಾಗಿ, ಸಮರ್ಥನಾಗಿ, ಯೋಗ್ಯವಾದ ಗಮನಹರಿಸುತ್ತ ಭಾರವಾದ ಹೊರೆಯನ್ನು ಅಂದರೆ ಶ್ರೇಷ್ಠವಾದ ಕಾರ್ಯವನ್ನು ಕೈಗೆತ್ತಿಕೊಂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕಬ್ಬಿಣದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಕಾದ ಕಬ್ಬಿಣವು ತಾನು ಹೀರಿದ ನೀರನ್ನು ವಾಂತಿ ಮಾಡುವುದಿಲ್ಲವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಪರಮಶ್ರೇಷ್ಠ ಬುದ್ಧರನ್ನು, ಪರಿಪೂರ್ಣ ಧಮ್ಮವನ್ನು ಮತ್ತು ಉತ್ತಮೋತ್ತಮ ಸಂಘವನ್ನು ಅರಿತಮೇಲೆ, ಎಂದಿಗೂ ತ್ರಿರತ್ನದ ಮೇಲಿನ ಶ್ರದ್ಧೆಯನ್ನು ತ್ಯಜಿಸುವುದಿಲ್ಲ. ಹಾಗೆಯೇ ಪಂಚಖಂಧಗಳು (ದೇಹ ಮನಸ್ಸುಗಳು) ಅನಿತ್ಯ ಎಂದು ಸ್ಪಷ್ಟವಾಗಿ ಅರಿತು, ಆ ಸಮ್ಮಾದೃಷ್ಟಿಯನ್ನು ತೊರೆಯುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕರಿ ಕಬ್ಬಿಣದ ದ್ವಿತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಯಾರ ಪ್ರಜ್ಞಾವು ಪರಿಶುದ್ಧವಾಗಿದೆಯೋ, ಆರ್ಯಧಮ್ಮದಲ್ಲಿ ಪಳಗಿರುವನೋ, ಸತ್ಯಗಳನ್ನು ಅವು ಇರುವಂತೆಯೇ ಅರಿತು ವ್ಯತ್ಯಾಸಗಳನ್ನು ತಿಳಿದಿರುವನೋ, ಆತನಿಗೆ ಖಂಡಿಸಬೇಕಾದ ಅಗತ್ಯವಿಲ್ಲ. ಆತನು ಭಾಗ ಮಾತ್ರದಲ್ಲಿ ಪೂರ್ಣವಾಗಿ ಅರಹತ್ವದ ಸ್ಪಷ್ಟ ಉನ್ನತಿ ಪಡೆಯುತ್ತಾನೆ.
3. ಛತ್ತಂಗ ಪನ್ಹೊ (ಛತ್ರಿಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಛತ್ರಿಯ ಮೂರು ಗುಣಗಳಾವುವು? (278)
ಹೇಗೆ ಓ ಮಹಾರಾಜ, ಛತ್ರಿಯು ಒಬ್ಬನ ಮೇಲೆಯೇ ಉದ್ದಕ್ಕೂ ಹೋಗುವುದೋ ಅದೇರೀತಿ ಧ್ಯಾನಶೀಲ ಭಿಕ್ಷುವು ತನ್ನ ಯತ್ನದಲ್ಲಿ ಜಾಗರೂಕನಾಗಿ, ಎಲ್ಲಾ ಕ್ಲೇಷಗಳಿಂದ ಮೇಲಕ್ಕೆ ಇರುವಂತಹ ಚಾರಿತ್ರ್ಯವುಳ್ಳವನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಛತ್ರಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಛತ್ರಿಯನ್ನು ಹಿಡಿಯಿಂದ ಹಿಡಿದು ತಲೆಯ ಮೇಲಕ್ಕೆ ಹಿಡಿದಿರುತ್ತಾರೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಜ್ಞಾನೋಚಿತವಾದ ಗಮನಹರಿಸುವಿಕೆಯ ಹಿಡಿಯನ್ನು ಹಿಡಿದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಛತ್ರಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಛತ್ರಿಯು ಗಾಳಿಯಿಂದ, ಮಳೆಯಿಂದ, ತಾಪದಿಂದ ರಕ್ಷಣೆ ನೀಡುತ್ತದೆಯೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಅಸಂಖ್ಯಾತ ಮಿಥ್ಯಾಸಮಣರ ಬ್ರಾಹ್ಮಣರ ಟೊಳ್ಳು ನಂಬಿಕೆಗಳು, ಟೊಳ್ಳು ಸಿದ್ಧಾಂತಗಳ ಗಾಳಿಯಿಂದ ಪಾರಾಗುತ್ತಾನೆ. ಹಾಗೆಯೇ ತ್ರಿವಿಧ ಅಗ್ನಿಗಳಿಂದ (ರಾಗ, ದ್ವೇಷ, ಮೋಹ) ಪಾರಾಗುತ್ತಾನೆ ಮತ್ತು ಕ್ಲೇಷಗಳ ಮಳೆಯಿಂದಲೂ ಪಾರಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಛತ್ರಿಯ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಹೇಗೆ ಅಗಲವಾಗಿ ಹರಡಿರುವ ದೃಢವಾದ ಛತ್ರಿಯು ರಂಧ್ರಗಳಿಲ್ಲದೆ ಕಡ್ಡಿಯಿಂದ, ಅಂಚುಕಟ್ಟುನಿಂದ ಇದ್ದು ಸುಡುವ ತಾಪದಿಂದ ಮತ್ತು ದೇವತೆಗಳ ಬೃಹತ್ ಮಳೆಯಿಂದ ಕಾಪಾಡುತ್ತದೋ ಅದೇರೀತಿ ಬುದ್ಧರ ಮಕ್ಕಳು ಆಂತರ್ಯದಿಂದ ಶ್ರೇಷ್ಠವಾಗಿದ್ದು, ಶೀಲಛತ್ರಧಾರಿಗಳಾಗಿ ಕ್ಲೇಷಗಳ ಮಳೆಯನ್ನೇ ದೂರೀಕರಿಸುವರು. ಹಾಗೆಯೇ ತ್ರಿವಿಧದ ಅಗ್ನಿಯು ಭೀಕರ ತಾಪವನ್ನು ದೂರೀಕರಿಸುವರು.
4. ಖೆತಂಗ ಪನ್ಹೊ (ಭತ್ತದ ಗದ್ದೆಯ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಭತ್ತದ ಗದ್ದೆಯ 3 ಗುಣಗಳಾವುವು? (279)
ಹೇಗೆ ಓ ಮಹಾರಾಜ, ಭತ್ತದ ಗದ್ದೆಯು ನೀರಾವರಿಯ ಕಾಲುವೆಗಳಿಂದ ಕೂಡಿರುತ್ತದೆಯೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸುಶೀಲ ಮನುಷ್ಯನ ಹಲವಾರು ನಿಯಮಗಳನ್ನು ಪಾಲಿಸುತ್ತಾನೆ. ಅದೇ ಆತನಿಗೆ ಕಾಲುವೆಗಳ ಹಾಗೆ, ಆಗ ಬುದ್ಧರ ಧಮ್ಮದ ಗದ್ದೆಯಲ್ಲಿ ನೀರು ಹರಿಯುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಭತ್ತದ ಗದ್ದೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಭತ್ತದ ಗದ್ದೆಯು ಅಣೆಕಟ್ಟಿಗೆ ಹೊಂದಿಸಲಾಗಿರುತ್ತದೋ ಅದರಿಂದ ನೀರು ಹರಿದು ಭತ್ತವು ಫಲವತ್ತತೆಗೆ ಬರುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸಮ್ಯಕ್ ಜೀವನದ ಅಣೆಕಟ್ಟನ್ನು ಹೊಂದಿಸಿಕೊಂಡಿರುತ್ತಾನೆ ಮತ್ತು ಪಾಪಲಜ್ಜೆ ಮತ್ತು ಸಮಣತ್ವದಲ್ಲಿ ದೃಢನಾಗಿದ್ದು ಫಲಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಭತ್ತದ ಗದ್ದೆಯ ದ್ವಿತೀಯ ಲಾಭವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಭತ್ತದ ಗದ್ದೆಯು ಫಲಕಾರಿಯೋ, ರೈತನಿಗೆ ಆನಂದ ತರುವುದೋ, ಬೀಜ ಅತಿ ಚಿಕ್ಕದ್ದಾಗಿದ್ದರೂ ಬೆಳೆಯು ಅಪಾರವೋ, ಬೀಜಗಳು ಹೆಚ್ಚಾದಷ್ಟು ಅಪಾರ ಬೆಳೆಯೋ ಅದೇರೀತಿಯಲ್ಲಿ ಭಿಕ್ಷುವು ಸಹಾ ಧ್ಯಾನಶೀಲನಾಗಿ ಪ್ರಯತ್ನದಲ್ಲಿ ಜಾಗರೂಕನಾಗಿ ಲೋಕೋತ್ತರ ಫಲಗಳನ್ನು ಪಡೆದು ಆತನ ಅವಲಂಬಿತರು ಅಪಾರ ಆನಂದಪಡುವರು. ಹೀಗಾಗಿ ಅಲ್ಪವನ್ನು ನೀಡಿ, ಮಹತ್ತರ ಫಲಿತಾಂಶ ಇದರಲ್ಲಿ ಪಡೆಯುತ್ತಾನೆ ಮತ್ತು ಸ್ವಲ್ಪ ಹೆಚ್ಚು ನೀಡಿದಾಗ ಅತಿಮಹತ್ತರ ಫಲಿತಾಂಶ ಪಡೆಯುತ್ತಾನೆ. ಇದೇ ಓ ಮಹಾರಾಜ, ಭತ್ತದ ಗದ್ದೆಯು ಹೊಂದಿರುವ ತೃತೀಯ ಗುಣವಾಗಿದೆ. ಇದನ್ನು ಭಿಕ್ಷುಗಳು ಹೊಂದಿರುತ್ತಾರೆ. ಇದರ ಬಗ್ಗೆ ಓ ಮಹಾರಾಜ, ವಿನಯಧರರಾದ ಉಪಾಲಿ ಥೇರರು ಹೀಗೆ ಹೇಳಿದ್ದಾರೆ:
ಭತ್ತದ ಬೆಳೆಯ ಹಾಗೆ ಫಲಕಾರಿಯಾಗಿರಿ, ಎಲ್ಲಿ ಫಲವತ್ತಾದ ಭೂಮಿಯು ಇರುತ್ತದೋ ಅಲ್ಲಿ ಎಲ್ಲವೂ ಸುಖಮಯವಾಗುವುದು, ಅಲ್ಲಿ ಬಿತ್ತುವವರಿಗೆ ಫಲಮಯ ಬೆಳೆ ದೊರೆಯುತ್ತದೆ.
5. ಅಗದಂಗ ಪನ್ಹೊ (ಔಷಧದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಔಷಧಿಯ 2 ಗುಣಗಳಾವುವು?(280)ಓ ಮಹಾರಾಜ, ಹೇಗೆ ಔಷಧದಿಂದ ಹುಳುಗಳು ಉದಯಿಸಲಾರವೋ ಹಾಗೆಯೇ ಧ್ಯಾನಶೀಲ, ಸತತ ಜಾಗರೂಕನಲ್ಲಿ ಕ್ಲೇಷಗಳು ಉದಯಿಸಲಾರವು. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಔಷಧದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಔಷಧಿಯು ಸೇವಿಸಿದಾಗ ಅದು ಪ್ರತ್ಯೌಷಧದಂತೆ ಕಾರ್ಯಮಾಡಿ ಕಡಿತದಿಂದ ಅಥವಾ ಸ್ಪರ್ಶದಿಂದ ಆಗಿರುವ ವಿಷವನ್ನು ನಾಶಗೊಳಿಸುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ರಾಗ, ದ್ವೇಷ, ಮೋಹ, ಅಹಂಕಾರ, ಮಿಥ್ಯಾದೃಷ್ಟಿಗಳ ಎಲ್ಲಾ ವಿಷಗಳನ್ನು ತನ್ನಲ್ಲೇ ನಾಶಗೊಳಿಸಿ ಕೊಳ್ಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಔಷಧಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಧ್ಯಾನಶೀಲ ಭಿಕ್ಷುವು ಸಂಖಾರಗಳ ಸತ್ಯದ ಸ್ವರೂಪ ಅರ್ಥವನ್ನು ನೋಡಲು ಬಯಸುತ್ತಾನೆ, ಆಗ ಅದೇ ಪ್ರತ್ಯೌಷಧಿಯಾಗಿ ಕ್ಲೇಷಗಳ ವಿನಾಶವಾಗುತ್ತದೆ.
6. ಭೋಜನಂಗ ಪನ್ಹೊ (ಭೋಜನದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಭೋಜನದ ಮೂರು ಗುಣಗಳಾವುವು? (281)
ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳಿಗೂ ಪೋಷಣೆ ಆಧಾರ ನೀಡುವುದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸರ್ವಜೀವಿಗಳಿಗೂ ಆರ್ಯ ಅಷ್ಠಾಂಗ ಮಾರ್ಗದ ಬಾಗಿಲಿನ ಹಿಡಿಯಾಗುತ್ತಾನೆ. ಅದರಿಂದಾಗಿ ಸರ್ವಜೀವಿಗಳು ಲಾಭ ಪಡೆಯುತ್ತಾರೆ. ಇದೇ ಓ ಮಹಾರಾಜ, ಆಹಾರದಲ್ಲಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಹಾರವು ಜನರ ಶಕ್ತಿಯನ್ನು ಹೆಚ್ಚಿಸುತ್ತದೋ, ಹಾಗೆಯೇ ಧ್ಯಾನಶೀಲ ಭಿಕ್ಷುವು ಸಹಾ ತನ್ನ ಶೀಲದಿಂದ ಶಕ್ತಿಯನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಹಾರವು ಸರ್ವರಿಂದಲೂ ಇಷ್ಟವಾಗಬಲ್ಲದೋ ಅದೇರೀತಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ದೃಢನಾಗಿ, ಇಡೀ ಲೋಕದಿಂದ ಇಷ್ಟಪಡಲ್ಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷವು ಹೊಂದಬೇಕಾದ ಭೋಜನದ ತೃತೀಯ ಗುಣವಾಗಿದೆ. ಇದರ ಬಗ್ಗೆ ಮಹಾ ಮೊಗ್ಗಲಾನರವರು ಹೀಗೆ ಹೇಳಿದ್ದಾರೆ:
ಸಂಯಮದಿಂದ, ಶಿಕ್ಷಣದಿಂದ, ಶೀಲದಿಂದ, ಕರ್ತವ್ಯದಿಂದ, ಫಲಗಳನ್ನು ಪ್ರಾಪ್ತಿಗೊಳಿಸುತ್ತಾರೆ. ಅಂತಹ ಭಿಕ್ಷುವು ಸರ್ವಲೋಕಗಳಿಂದ ಇಷ್ಟಪಡಲ್ಪಡುತ್ತಾನೆ.
7. ಇಸ್ಸಾಸಂಗ ಪನ್ಹೋ
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಬಿಲ್ಗಾರನ ನಾಲ್ಕು ಗುಣಗಳು ಯಾವುವು? (282)ಹೇಗೆ ಓ ಮಹಾರಾಜ, ಬಿಲ್ಗಾರನು ಬಾಣಗಳನ್ನು ಬಿಡುವಾಗ ತನ್ನ ಎರಡು ಕಾಲುಗಳನ್ನು ನೆಲದಲ್ಲಿ ಊರಿರುತ್ತಾನೆ. ತನ್ನ ಮೊಣಕಾಲನ್ನು ನೇರವಾಗಿಟ್ಟಿರುತ್ತಾನೆ. ತನ್ನ ಬತ್ತಳಿಕೆಯನ್ನು ಸೊಂಟಕ್ಕೆ ಲಂಬವಾಗಿಟ್ಟಿರುತ್ತಾನೆ. ಇಡೀ ದೇಹವನ್ನು ಸ್ಥಿರವಾಗಿ ಇಟ್ಟಿರುತ್ತಾನೆ. ಎರಡು ಕೈಗಳು ದೃಢವಾಗಿರುತ್ತದೆ, ಆತನು ಮುಷ್ಟಿಯು ಮುಚ್ಚಿದ್ದು, ಬೆರಳುಗಳ ನಡುವೆಯಾದ ರಂಧ್ರವು ಕಾಣಿಸುವುದಿಲ್ಲ, ತನ್ನ ಕುತ್ತಿಗೆಯನ್ನು ಚಾಚಿರುತ್ತಾನೆ. ಬಾಯನ್ನು ಮುಚ್ಚಿ, ಒಂದೇ ಕಣ್ಣಿನಿಂದ ಗುರಿ ಇಡುತ್ತಾನೆ ಮತ್ತು ಹೀಗೆ ಯೋಚಿಸುತ್ತಾನೆ ನಾನು ಅದನ್ನು ಹೊಡೆಯುವೆ. ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸತ್ಯದ ಆಧಾರದ ಮೇಲೆ ತನ್ನ ಪಾದಗಳನ್ನು ದೃಢವಾಗಿ ಊರಿರುತ್ತಾನೆ. ತನ್ನ ಹೃದಯದಲ್ಲಿ ದಯೆಯಿಂದಾಗಿ ಕೋಮಲಗೊಳಿಸುತ್ತಾನೆ, ಮನಸ್ಸನ್ನು ಇಂದ್ರಿಯ ನಿಗ್ರಹದಲ್ಲಿ ಇಟ್ಟಿರುತ್ತಾನೆ. ಸಂಯಮ ಮತ್ತು ಕರ್ತವ್ಯಪರತೆಯಿಂದ ಸಿದ್ಧನಾಗಿರುತ್ತಾನೆ. ಉದ್ರೇಕ ಮತ್ತು ಭೀತಿಯನ್ನು ಧಮಿಸಿರುತ್ತಾನೆ. ನಿರಂತರ ಯೋಚನೆಯಿಂದಾಗಿ ಮಧ್ಯೆ ರಂಧ್ರಗಳನ್ನು (ವಿಶ್ರಾಂತಿ, ಚಂಚಲತೆ) ಬಿಡಲಾರ. ಉತ್ಸಾಹದಿಂದ ಮುನ್ನುಗ್ಗುತ್ತಾನೆ. ಆರು ಇಂದ್ರೀಯಗಳ ದ್ವಾರಗಳನ್ನು ಮುಚ್ಚಿರುತ್ತಾನೆ. ಸತತ ಸ್ಮೃತಿವಂತನಾಗುತ್ತಾನೆ ಮತ್ತು ಆನಂದದಿಂದ ಹೀಗೆ ಯೋಚಿಸುತ್ತಾನೆ: ನನ್ನ ಜ್ಞಾನದ ಈಟಿಯಿಂದ, ನಾನು ನನ್ನ ಕ್ಲೇಷಗಳೆಲ್ಲವನ್ನು ಸಿಗಿದುಹಾಕುವೆ. ಇದೇ ಓ ಮಹಾರಾಜ, ಬಿಲ್ಗಾರನು ಹೊಂದಿರುವ ಭಿಕ್ಷುವು ಹೊಂದಬೇಕಾದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಸಾಧನವನ್ನು ಹೊಂದಿದ್ದು, ಅದರಿಂದಾಗಿ ಬಾಗಿದ ಮತ್ತು ವಕ್ರವಾಗಿರುವ ಅಸಮವಾಗಿರುವ ಬಾಣಗಳನ್ನು ನೇರವಾಗಿಸಿಕೊಳ್ಳುತ್ತಾನೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಕಾಯದಲ್ಲಿ ಸತಿಪಟ್ಠಾನವನ್ನು ಸದಾ ಪ್ರತಿಷ್ಠಾಪಿಸಿರುತ್ತಾನೆ. ಅದರಿಂದಾಗಿ ಆತನು ವಕ್ರವಾದ, ಬಾಗಿರುವ ದೃಷ್ಟಿಕೋನಗಳನ್ನು ನೇರವಾಗಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಿಲ್ಗಾರನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಹೇಗೆ ಗುರಿಯನ್ನು ಸಾಧಿಸಲು ಅಭ್ಯಸಿಸುವನೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಎಲ್ಲಿಯವರೆಗೆ ದೇಹವಿರುವುದು, ಅಲ್ಲಿಯವರೆಗೆ ಅಭ್ಯಸಿಸುತ್ತಾನೆ ಮತ್ತು ಆತನು ಹೇಗೆ ಅಭ್ಯಸಿಸುತ್ತಾನೆ? ಆತನು ಅನಿತ್ಯತೆಯನ್ನು ಅಭ್ಯಸಿಸುತ್ತಾನೆ, ದುಃಖದ ಅರಿವನ್ನು ಅಭ್ಯಸಿಸುತ್ತಾನೆ, ಅನಾತ್ಮದ ಅರಿವನ್ನು ಅಭ್ಯಸಿಸುತ್ತಾನೆ. ದುಃಖ ಹೇಗೆಂದರೆ ರೋಗಗಳ ನೋವಿನ ಬಗ್ಗೆ ಅರಿಯುತ್ತಾನೆ, ಪರವಾಲಂಬನೆಯ ದುಃಖ, ಪ್ರಾಕೃತಿಕ ವಿಪತ್ತುಗಳು, ಅಪಾಯಗಳು, ಭಯ, ಜೀವನದ ಅನಿಶ್ಚಿತತೆ, ಬಾಧ್ಯತೆಯ ಭಂಗ, ದೃಢತೆಯ ಕೊರತೆ, ಜೀವಿಯೇ ಕ್ಷೇಮವಿಲ್ಲದಿರುವಿಕೆ, ರಕ್ಷಣೆಯಿಲ್ಲದಿರುವಿಕೆ, ಭರವಸೆಯಿಲ್ಲದಿರುವಿಕೆ, ವ್ಯರ್ಥ, ಶೂನ್ಯ, ಅಪಾಯ ಮತ್ತು ಅಸ್ಥಿರತೆ ಈ ದೇಹವು ನೋವಿಗೆ, ಶಿಕ್ಷೆಗೆ, ಅಶುಚಿಗೆ, ವಾಸಸ್ಥಾನವಾಗಿದೆ. ಅಸಂಬದ್ಧ ಕೂಡಿಕೆಯಾಗಿದೆ, ಬೆರಕೆಯಾಗಿದೆ. ಜೀವಿಯ ಆಹಾರವು ಸಹಾ ಅಶುದ್ಧವೇ ಆಗಿದೆ. ಜೀವಿಗೆ ಸ್ವಾಭಾವಿಕ ಹೊಣೆಗಾರಿಕೆಗಳಾದ ಜನ್ಮ, ಅನಾರೋಗ್ಯ, ಮುದಿತನ, ಮೃತ್ಯು, ಶೋಕ, ಪ್ರಲಾಪ, ವಿಷಾಧ ಮತ್ತು ಆತನಲ್ಲಿ ತೀವ್ರ ಬಯಕೆಗಳು ಸದಾ ಇರುತ್ತವೆ, ಇಲ್ಲದೆ ಇರುವುದಿಲ್ಲ. ಈ ಚಿಂತನೆಯಿಂದ ಕಾಯಾನುಪಸ್ಸನ ಅಭ್ಯಾಸದಿಂದ ಆತನು ಪ್ರವೀಣನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಿಲ್ಗಾರನಲ್ಲಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಬೇಗ ಮತ್ತು ನಿಧಾನವಾಗಿ ಅಭ್ಯಾಸಿಸುವನೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಧ್ಯಾನವನ್ನು ಬೇಗ ಮತ್ತು ನಿಧಾನವಾಗಿ ಅಭ್ಯಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಬಿಲ್ಗಾರನ ನಾಲ್ಕನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ತ ಥೇರರು ಹೀಗೆ ನುಡಿದಿದ್ದಾರೆ:
ಬೇಗ ಮತ್ತು ನಿಧಾನವಾಗಿ ಬಿಲ್ಗಾರನು ಅಭ್ಯಸಿಸುತ್ತಾನೆ. ಈ ರೀತಿಯ ಅಲಕ್ಷಾತೀತ ಕಲೆಯಿಂದ ಕೌಶಲ್ಯದಿಂದಾಗಿ ಆತನು ಬಿರುದು ಬಾವಲಿ ಭತ್ಯೆಗಳನ್ನು ಪಡೆಯುವನು. ಅದೇರೀತಿಯಲ್ಲಿ ಬುದ್ಧಪುತ್ರರು ಸಹಾ ತಮ್ಮ ಕಲೆಯಾದ ಧ್ಯಾನವನ್ನು ಅಭ್ಯಸಿಸುವರು, ಅವರು ಸಹಾ ಅಲಕ್ಷವನ್ನು ಪಡದೆ, ಕಾಯಾನುಪಸ್ಸನಾವನ್ನು ಅಭ್ಯಾಸ ಮಾಡುವರು. ಅರಹಂತ ಫಲವನ್ನು ಪಡೆಯುವರು.
(ಇಲ್ಲಿಗೆ ಉಪಮೆಯ ವರ್ಗವು ಮುಗಿಯಿತು)
ಇಲ್ಲಿಗೆ 262 ಪ್ರಶ್ನೆಗಳನ್ನು ಮಿಲಿಂದನು ಕೇಳಿದ್ದನು. ಅದು ಆರು ಭಾಗಗಳಾಗಿ 23 ವರ್ಗಗಳಾಗಿವೆ ಮತ್ತು ನೀಡಲಾಗದ 42 ಪ್ರಶ್ನೆಗಳು ಇವೆ. ಎಲ್ಲವನ್ನು ತೆಗೆದುಕೊಂಡಾಗ 304 ಮಿಲಿಂದ ಪ್ರಶ್ನೆಗಳಾಗುತ್ತವೆ (ನೀಡಲಾಗದ 42 ಮೂಲ ಪಾಳಿಯಲ್ಲಾಗಲಿ, ಆಂಗ್ಲ ಭಾಷೆಯಲ್ಲಾಗಲಿ ದೊರೆಯಲಿಲ್ಲ, ಅದಕ್ಕಾಗಿ ಅನುವಾದಕ ವಿಷಾಧಿಸುತ್ತಾನೆ).
ನಿರ್ಗಮನ
ಈ ರೀತಿಯಾಗಿ ಜಟಿಲ ಪ್ರಶ್ನೆಗಳಿಗೆ ಅತ್ಯಂತ ಸಮಂಜಸವಾಗಿ ಉತ್ತರಿಸಿದಾಗ ಚಚರ್ೆಯ ಅಂತ್ಯಕಾಲದಲ್ಲಿ ಮಹಾಪೃಥ್ವಿಯು 84000 ಯೋಜನಗಳ ವಿಸ್ತಾರ ಭೂಮಿಯು ಆರುಬಾರಿ ಕಂಪಿಸಿತು, ಸಾಗರದುದ್ದಕ್ಕೂ ಕಂಪಿಸಿತು, ಮಿಂಚುಗಳು ಮಿಂಚಿದವು, ದೇವತೆಗಳು ಆಕಾಶದಿಂದ ಪುಷ್ಪಮಳೆಗೆರೆದವು, ಮಹಾಬ್ರಹ್ಮನು ಸಹಾ ಅಭಿನಂದಿಸಿದನು ಮತ್ತು ಆಗ ಬೃಹತ್ ಘರ್ಜನೆಯು ಆಯಿತು. ಮಿಂಚುಸಿಡಿಲು ಆಳವಾಗಿ ಘಜರ್ಿಸಿದವು. ಈ ಅದ್ಭುತ ಕಂಡು ರಾಜನ 500 ಮಂತ್ರಿಗಳು ಮತ್ತು ಅಂತಃಪುರದ ಸ್ತ್ರೀಯರು, ನಗರವಾಸಿಗಳು ಎಲ್ಲರೂ ನಾಗಸೇನರಿಗೆ ಕೈಜೋಡಿಸಿ ವಂದಿಸಿದರು, ನಂತರ ನಿರ್ಗಮಿಸಿದರು.ಮಿಲಿಂದ ಮಹಾರಾಜರಿಗೆ ಆನಂದ ಉಕ್ಕಿತು. ಅವರ ಅಹಂಕಾರವು ಪೂರ್ಣವಾಗಿ ಅಡಗಿತು. ಆತನಿಗೆ ಸ್ಪಷ್ಟವಾಗಿ ಬುದ್ಧರ, ಧಮ್ಮದ ಮತ್ತು ಸಂಘದ ಮೌಲ್ಯ ತಿಳಿಯಿತು. ಆತನಲ್ಲಿ ತ್ರಿರತ್ನದ ಬಗೆಗಿನ ಎಲ್ಲಾ ಸಂಶಯಗಳು ಅಳಿಯಿತು. ಆತನು ಪರಸಿದ್ಧಾಂತಗಳ ದೃಷ್ಟಿ ಜಾಲಾದಿಂದ ಹೊರಬಂದಿದ್ದನು. ಆತನು ತನ್ನ ಹಠವನ್ನು ತ್ಯಜಿಸಿದನು ಮತ್ತು ಥೇರರ ಅತ್ಯುನ್ನತ ಗುಣಗಳಿಗೆ ಅಪಾರ ತೃಪ್ತಿ ಹೊಂದಿದನು. ಅವರ ಶುದ್ಧ ವರ್ತನೆಗಳಿಂದಾಗಿ ಆತನ ಶ್ರದ್ಧೆಯು ಹಿಗ್ಗಿತು ಮತ್ತು ಆತನು ಬಯಕೆಗಳಿಂದ, ಅಹಂಕಾರದಿಂದ ಬಿಡುಗಡೆ ಹೊಂದಿ, ಸ್ವಶೀಲ ಒಂದೇ ಹೃದಯದಲ್ಲಿ ಉಳಿಯಿತು. ಆತನು ಹಲ್ಲುಕಿತ್ತ ಹಾವಿನಂತೆ ಆದನು. ನಂತರ ಹೀಗೆ ಹೇಳಿದನು:
ಸಾಧು ಭಂತೆ ನಾಗಸೇನ, ಯಾವ ಜಟಿಲ ಪ್ರಶ್ನೆಗಳು ಬುದ್ಧರಿಂದ ಮಾತ್ರ ಪರಿಹರಿಸಬಹುದಿತ್ತೋ, ಅವು ನಿಮ್ಮಿಂದ ಪರಿಹರಿಸಲ್ಪಟ್ಟಿತ್ತು. ಧಮ್ಮಸೇನಾನಿ ಸಾರಿಪುತ್ತರ ನಂತರ ಯಾರಾದರೂ ಜ್ಞಾನದಲ್ಲಿ ಶ್ರೇಷ್ಠರಿರುವುದಾದರೆ ಅದು ನೀವೇ ಆಗಿರುವಿರಿ. ನಿಮ್ಮಂತೆ ಬೇರಾರು ಇಲ್ಲ. ಭಂತೆ ನಾಗಸೇನ, ನನ್ನ ತಪ್ಪುಗಳನ್ನು ಕ್ಷಮಿಸಿರಿ ಮತ್ತು ನನ್ನನ್ನು ಇಂದಿನಿಂದ ಉಪಾಸಕನನ್ನಾಗಿ ಸ್ವೀಕರಿಸಿ ನೀವೇ ನನ್ನ ಗುರುಗಳು ಆಚಾರ್ಯರು ಆಗಿರುವಿರಿ. ಇಂದಿನಿಂದ ಜೀವನಪರ್ಯಂತ ಹೀಗೆ ಉಪಾಸಕನಾಗಿರುವೆನು.
ನಂತರ ರಾಜ ಮತ್ತು ಆತನ ಮಂತ್ರಿಗಳು, ಇತರ ಆಸ್ಥಾನಿಕರು ಎಲ್ಲರೂ ನಾಗಸೇನರನ್ನು ಗೌರವಿಸಿ ವಂದಿಸಲಾರಂಭಿಸಿದರು ಮತ್ತು ರಾಜನು ವಿಹಾರವನ್ನು ಕಟ್ಟಿ ಅದಕ್ಕೆ ಮಿಲಿಂದ ವಿಹಾರ ಎಂದು ನಾಮಕರಣ ಮಾಡಿ ನಾಗಸೇನರಿಗೆ ಅಪರ್ಿಸಿದನು. ನಾಗಸೇನರು ಅಪಾರ ಅರ್ಹಂತ ಸಮೂಹಕ್ಕೆ ನಾಯಕರಾಗಿದ್ದರು. ಅವರೆಲ್ಲರಿಗೂ ಆತನು ಪರಿಕರಗಳನ್ನು ಅಪರ್ಿಸಿದನು. ನಂತರ ಥೇರರವರ ಜ್ಞಾನದಿಂದ ಆನಂದಿತನಾಗಿ ಆತನು ತನ್ನ ಮಗನಿಗೆ ರಾಜ್ಯವನ್ನು ಅಪರ್ಿಸಿ, ಗೃಹಸ್ಥ ಜೀವನವನ್ನು ತ್ಯಜಿಸಿ, ಭಿಕ್ಷುವಾಗಿ ಪ್ರಜ್ಞಾದಲ್ಲಿ ಮಹತ್ತರವಾಗಿ ವೃದ್ಧಿಹೊಂದಿ ಅರಹಂತನಾದನು. ಅದರಿಂದ ಇದು ಹೇಳಲಾಗಿದೆ:
ಪಞ್ಞವು ಇಡೀ ಲೋಕಗಳಲ್ಲಿ ವೈಭವಯುತವಾಗಿದೆ ಮತ್ತು ಸದ್ಧಮ್ಮವು ಚಿರಕಾಲ ನಿಲ್ಲಲೆಂದು ಬೋಧಿಸಲಾಗುತ್ತದೆ. ಅವರು ಪಞ್ಞದಿಂದ ಸಂಶಯತೀತರಾಗುವರು. ಪ್ರಾಜ್ಞರು ಉನ್ನತ ಪ್ರಶಾಂತಸ್ಥಿತಿ ಮುಟ್ಟುವರು.
ಯಾರಲ್ಲಿ ಪ್ರಜ್ಞಾವು ದೃಢವಾಗಿ ನೆಲೆದಿರುವುದೋ ಮತ್ತು ಸ್ಮೃತಿಯು ಯೋಗ್ಯ ಗಮನಹರಿಸುವಿಕೆಯು ಇದೆಯೋ ಆತನಿಗೆ ಅವನತಿಯಿಲ್ಲ. ಯಾರು ದಾನವನ್ನು ಸ್ವೀಕರಿಸುವರೋ ಅವರು ಸರ್ವರಲ್ಲಿ ಶ್ರೇಷ್ಠರಾಗಿರುತ್ತಾರೆ. ಆದ್ದರಿಂದ ಸಮರ್ಥ ಮನುಷ್ಯರು ತಮ್ಮ ಹಿತಕ್ಕಾಗಿ ಪ್ರಾಜ್ಞರನ್ನು ಗೌರವಿಸಿ ಅವರ ಚೇತಿಯಗಳಿಗೂ ಗೌರವ ಅಪರ್ಿಸಲಿ.
(ಇಲ್ಲಿಗೆ ಮಿಲಿಂದ ಪನ್ಹಾ ಮುಗಿಯಿತು )