Wednesday, 27 December 2017

ಮಿಲಿಂದ ಪನ್ಹ 5. ಸಂಥವ ವಗ್ಗೋ milinda panha santhava vaggo

                                       5. ಸಂಥವ ವಗ್ಗೋ



ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಸ್ನೇಹದಿಂದ ಭಯವು ಜನಿಸುತ್ತದೆ. ಗೃಹ ಜೀವನದಿಂದ ರಜೋ ಉದಯಿಸುತ್ತದೆ. ಅನಿಕೇತನವು (ಮನೆಯಿಲ್ಲದಿರುವಿಕೆಯು) ಹಾಗು ಸ್ನೇಹ ಮೀರುವಿಕೆಯೇ ಇದೇ ಮುನಿಗಳ ದರ್ಶನವಾಗಿದೆ. ಹಾಗೆಯೇ ಭಗವಾನರು ಹೀಗೂ ಹೇಳಿದ್ದಾರೆ: ಬುದ್ಧಿವಂತನು ರಮ್ಯವಾದ ವಿಹಾರಗಳನ್ನು ನಿಮರ್ಿಸಿ, ಬಹುಶೃತರೊಂದಿಗೆ ವಾಸಿಸಲಿ. ಭಂತೆ ನಾಗಸೇನ, ಒಂದುವೇಳೆ ಭಗವಾನರ ಮೊದಲ ಹೇಳಿಕೆಯು ಸತ್ಯವಾಗಿದ್ದರೆ, ಎರಡನೆಯ ಹೇಳಿಕೆ ಸುಳ್ಳಾಗಿರುತ್ತದೆ. ಆದರೆ ಭಗವಾನರು ಎರಡನೆಯ ಹೇಳಿಕೆಯಾದ ವಿಹಾರಗಳಲ್ಲಿ ಬಹುಶೃತರೊಂದಿಗೆ ವಾಸಿಸಲಿ ಇದು ಸತ್ಯವಾಗಿದ್ದ ಪಕ್ಷದಲ್ಲಿ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ. ಇದನ್ನು ನೀವೇ ಬಿಡಿಸಬೇಕು. (133)

ನೀವು ಹೇಳಿದಂತಹ 2 ಹೇಳಿಕೆಗಳು ತಥಾಗತರಿಂದಲೇ ಬಂದುದ್ದಾಗಿದೆ. ಮೊದಲ ಹೇಳಿಕೆ ವಸ್ತುವಿಷಯಗಳ ಸ್ವಭಾವವನ್ನು ಕುರಿತು ಹೇಳಿದಂತಹದ್ದಾಗಿದೆ. ಇದು ಎಲ್ಲವನ್ನೂ ಒಳಗೊಂಡ ವಾಕ್ಯ. ಅದು ಯಾವುದರಿಂದಲೂ ಅನುಬಂಧವಾಗುವ ಹಾಗಿಲ್ಲ. ಅದಕ್ಕೆ ಹೆಚ್ಚಿಗೆ ಏನೂ ಹಾಕುವ ಹಾಗಿಲ್ಲ. ಯಾವುದೇ ಯೋಗ್ಯ ಭಿಕ್ಷುವಿಗೆ ಏನೆಲ್ಲಾ ಅಗತ್ಯವಿದೆಯೋ ಅದೆಲ್ಲಾ ಅದರಲ್ಲಿದೆ. ಮತ್ತು ಜೀವನದಲ್ಲಿ ಯಾವುದನ್ನು ಭಿಕ್ಷುವು ಹೊಂದಾಣಿಕೆ ಮಾಡಿಕೊಳ್ಳಬೇಕೋ, ಹಾದಿಯುದ್ದಕ್ಕೂ ಪರಿಪಾಲಿಸಬೇಕೋ, ಸಾಧಿಸಬೇಕೋ ಅವೆಲ್ಲಾ ಅದರಲ್ಲಿದೆ. ಹೇಗೆಂದರೆ ಓ ಮಹಾರಾಜ, ಜಿಂಕೆಯೊಂದು ಕಾಡಿನಲ್ಲಿ ಅಡ್ಡಾಡಿ, ಇಷ್ಟಬಂದಕಡೆ ಮಲಗುವಂತೆ, ತನಗಾಗಿ ಎಂಬಂತಹ ಯಾವುದೇ ವಾಸಸ್ಥಳವಿಲ್ಲದೆ ಇರುವುದೋ ಹಾಗೆಯೇ ಭಿಕ್ಷು ಈ ಅಭಿಪ್ರಾಯವುಳ್ಳವನಾಗುತ್ತಾನೆ. ಸ್ನೇಹದಿಂದ ಭಯವು ಉದಯಿಸುತ್ತದೆ, ಗೃಹ ಜೀವನದಿಂದ ರಜೋ (ಧೂಳು) ತುಂಬಿಕೊಳ್ಳುತ್ತದೆ. ಆದರೆ ಭಗವಾನರು ರಮ್ಯವಾಸದಲ್ಲಿ ಬಹುಶೃತರೊಂದಿಗೆ ನೆಲೆಸಲಿ ಎಂದು ಏತಕ್ಕೆ ಹೇಳಿರುವರು ಎಂದರೆ ಎರಡು ಕಾರಣಗಳಿಂದಾಗಿ. ಯಾವುದದು ಎರಡು? ವಾಸಸ್ಥಳ (ವಿಹಾರ) ದಾನಗಳನ್ನು ಎಲ್ಲಾ ಬುದ್ಧರುಗಳು ಅತಿಯಾಗಿ ಪ್ರಶಂಸಿಸಿರುವರು ಮತ್ತು ಯಾರು ಅಂತಹ ದಾನಗಳನ್ನು ನೀಡುವರೋ ಅವರು ಜನ್ಮ, ಜರೆ, ಜರಾ ಮತ್ತು ಮೃತ್ಯುಗಳಿಂದ ಪಾರಾಗಲು ಸಹಾಯ ಸಿಗುತ್ತದೆ. ಇದು ವಿಹಾರ ದಾನದಿಂದಾಗುವ ಮೊದಲ ಲಾಭವಾಗಿದೆ, ಮತ್ತೆ ಭಿಕ್ಷುಣಿಯರಿಗೂ ನಿಗಧಿತ ವಾಸಸ್ಥಳ ಅಂದರೆ ವಿಹಾರಗಳು ಇದ್ದರೆ ಅವರಿಗೂ ಸಹಾ ವಾಸಿಸಲು ಪರರು ಭೇಟಿಯಾಗಲು ಸುಲಭವಾಗುತ್ತದೆ. ಈ ಎರಡು ಕಾರಣಗಳಿಂದಾಗಿಯೇ ಭಗವಾನರು ಈ ಗಾಥೆ ನುಡಿದಿದ್ದರು ರಮ್ಯವಾದ ವಿಹಾರಗಳನ್ನು ನಿಮರ್ಿಸಿ ಬಹುಶ್ರುತರು ನೆಲೆಸಲಿ. ಮತ್ತು ಎಂದಿಗೂ ಜಿನಪುತ್ತರು (ಭಿಕ್ಷುಗಳು) ಗೃಹಸ್ಥರು ಹೊಂದಿರುವಂತಹ ವಾಸಸ್ಥಳದ ಬಯಕೆಗಳನ್ನು ಹೊಂದಿದ್ದಾರೆ ಎಂದು ತಿಳಿಯಬಾರದು, ಅವರು ಅರಿತು ಬಳಸುತ್ತಾರೆ, ಅಂಟುವುದಿಲ್ಲ.

ಭಂತೆ ನಾಗಸೇನ, ಬಹುಚೆನ್ನಾಗಿ ವಿವರಿಸಿದಿರಿ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.


2. ಉದರ ಸಂಯಮದ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೂ ಹೇಳಿರುವರು: ಜಾಗೃತನಾಗು (ನಿಯಮಗಳಲ್ಲಿ) ಅಲಕ್ಷಬೇಡ, ಹೊಟ್ಟೆಯ (ಉದರದ) ವಿಷಯದಲ್ಲಿ ಸಂಯಮಿಯಾಗು. ಆದರೆ ಮತ್ತೊಂದೆಡೆ ಹೀಗೆ ಹೇಳಿದ್ದಾರೆ ಕೆಲವುವೇಳೆ ಉದಾಯಿ, ನಾನು ಪಿಂಡಪಾತ್ರೆಯ ತುಂಬ ಆಹಾರ ತಿಂದಿರುವೆನು. ಈಗ ಮೊದಲ ನಿಯಮ ಸರಿಯಾಗಿದ್ದರೆ, ಎರಡನೆಯದು ಮಿಥ್ಯವಾಗುತ್ತದೆ. ಹಾಗಲ್ಲದೆ ಎರಡನೆಯದೇ ಸತ್ಯವಾಗಿದ್ದ ಪಕ್ಷದಲ್ಲಿ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಮೊನೆಯ ಇಕ್ಕಟ್ಟಿನ ಸಮಸ್ಯೆಯಾಗಿದೆ. ಈಗ ನಿಮಗೆ ಹಾಕಿದ್ದೇನೆ, ಅದನ್ನು ನೀವೇ ಪರಿಹರಿಸಬೇಕು. (134)

ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರಿಂದಲೇ ಬಂದಿರುವುದ್ದಾಗಿದೆ. ಮೊದಲ ಹೇಳಿಕೆಯು ವಸ್ತು ವಿಷಯದ ಸ್ವಭಾವಗಳ ಕುರಿತದ್ದಾಗಿದೆ. ಇದು ಎಲ್ಲವನ್ನೂ ಒಳಗೊಂಡ ವಾಕ್ಯವಾಗಿದೆ. ಅದಕ್ಕೆ ಬೇರೇನೂ ಸೇರಿಸಬೇಕಾಗಿಲ್ಲ. ಅದು ವಾಸ್ತಾವಾಂಶ ಗಳಿಗೆ, ಸತ್ಯಕ್ಕೆ ಅನುಗುಣವಾದದ್ದು. ಅದನ್ನು ಸುಳ್ಳಾಗಿಸಲು ಸಾಧ್ಯವಿಲ್ಲ. ಅದು ಸಭಾವ ವಚನವಾಗಿದೆ, ಈಶತ್ವ ಸಾಧಿಸುವ ವಚನವಾಗಿದೆ, ಮುನಿ ವಚನವಾಗಿದೆ, ಭಗವಾನರ ವಚನವಾಗಿದೆ, ಪಚ್ಚೇಕಬುದ್ಧರ ವಚನವಾಗಿದೆ, ಜಿನವಚನವಾಗಿದೆ, ಸರ್ವಜ್ಞಸಂಪನ್ನರ ವಚನವಾಗಿದೆ. ಅದು ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಆಗಿರುವವರ ವಚನವಾಗಿದೆ.

ಓ ಮಹಾರಾಜ, ಯಾರು ಹೊಟ್ಟೆಯ ಬಗ್ಗೆಯ ಸಂಯಮಿಯಾಗಿರುವುದಿಲ್ಲವೋ ಆತನು ಪ್ರಾಣಗಳನ್ನು ತೆಗೆಯುವನು, ಕೊಡದಿರುವುದನ್ನು ತೆಗೆದುಕೊಳ್ಳುವನು, ಪರನಾರಿ ಗಮನ ಮಾಡುತ್ತಾನೆ, ಸುಳ್ಳು ಹೇಳುತ್ತಾನೆ, ಮದ್ಯಪಾನ ಮಾಡುತ್ತಾನೆ, ಮಾತಾಪಿತರ ಹತ್ಯೆ ಮಾಡುತ್ತಾನೆ, ಅರಹಂತರ ಜೀವ ತೆಗೆಯುತ್ತಾನೆ, ಸಂಘಬೇಧ ಮಾಡುವನು, ದುಷ್ಟಚಿತ್ತದಿಂದ ತಥಾಗತರಿಗೆ ಗಾಯ ಮಾಡುವನು, ಓ ಮಹಾರಾಜ, ದೇವದತ್ತನು ಹೊಟ್ಟೆಯನ್ನು ನಿಯಂತ್ರಿಸದಿದ್ದುದರಿಂದಲೇ ಅಲ್ಲವೆ ಆತನು ಸಂಘಬೇಧವನ್ನು ಮಾಡಿದ್ದು. ಇನ್ನಿತರ ಪಾಪಕರ್ಮ ಮಾಡಿದ್ದು, ಅದರಿಂದಾಗಿ ಇಡೀ ಕಲ್ಪಕಾಲ ನರಕದಲ್ಲಿ ಬೀಳುವಂತಾಗಲಿಲ್ಲವೆ? ಇದನ್ನು ನೆನೆಸಿಕೊಂಡಲ್ಲಿ ಭಗವಾನರು ಇಂತಹವುಗಳ ಬಗ್ಗೆಯೇ ಹೀಗೆ ಹೇಳಿದ್ದಾರೆ ಜಾಗೃತನಾಗು, ಪ್ರಮಾದನಾಗಬೇಡ, ಉದರದೊಂದಿಗೆ ಸಂಯಮಿತನಾಗು.

ಮತ್ತು ಯಾರು ಉದರದೊಂದಿಗೆ ಸಂಯಮಿತನಾಗುವನೋ ಆತನಿಗೆ ನಾಲ್ಕು ಆರ್ಯಗಳ ಜ್ಞಾನವು ಸ್ಪಷ್ಟವಾಗಿ ದೊರೆತು ಜೀವನದ ಸಮಞ್ಞದ ನಾಲ್ಕು ಪಲಗಳನ್ನು ಪಡೆಯುತ್ತಾನೆ ಮತ್ತು ನಾಲ್ಕು ಪಟಿಸಂಬಿದಾ ಜ್ಞಾನಗಳಲ್ಲಿ ಪ್ರಾವಿಣ್ಯತೆ ಪಡೆಯುತ್ತಾನೆ. ಅಷ್ಟಸಮಾಪತ್ತಿಗಳನ್ನು ಪಡೆಯುತ್ತಾನೆ. ಷಟಾಭಿಜ್ಞಾಗಳನ್ನು ಪ್ರಾಪ್ತಿ ಮಾಡುತ್ತಾನೆ ಮತ್ತು ಸಮಣ ಜೀವನದ ಎಲ್ಲವನ್ನು ಪೂರ್ಣಗೊಳಿಸುತ್ತಾನೆ. ಇದು ಕೇವಲ ಗಿಳಿಯ ಹಾಗಲ್ಲ, ಓ ಮಹಾರಾಜ, ಉದರ ನಿಯಂತ್ರಣವು ಸಾಮಾನ್ಯವಾದುದಲ್ಲ. ಅದರಿಂದಾಗಿ ತಾವತಿಂಸ ಲೋಕವನ್ನೇ ಕಂಪಿಸುವಂತಾಗಿಸಬಹುದು. ಅದರೊಡೆಯನಾದ ಶಕ್ರನನ್ನು ಕೆಳಕ್ಕೆ ತರಿಸಬಹುದು. ಈ ರೀತಿಯಾಗಿ ಬಹುವಿಧ ಕಾರಣಗಳಿಂದಾಗಿ ಭಗವಾನರು ಈ ರೀತಿ ಘೋಷಿಸಿದ್ದರು:

ಜಾಗೃತನಾಗು, ಪ್ರಮಾದಿತನಾಗಬೇಡ ಉದರದೊಂದಿಗೆ ಸಂಯಮಿತನಾಗಿರು.

ಆದರೆ ಓ ಮಹಾರಾಜ, ಯಾವಾಗ ಅವರು ಉದಾಯಿಯೊಂದಿಗೆ ಕೆಲವೊಮ್ಮೆ ಉದಯಿ, ಪಿಂಡಪಾತ್ರೆ ತುಂಬಾ ತಿಂದಿರುವುದುಂಟು. ಹೀಗೆ ಹೇಳಿದ್ದರೋ, ಆಗ ಅವರು ಮಾಡಬೇಕಾದುದನ್ನು ಮಾಡಿಯಾಗಿತ್ತು, ಪೂರ್ಣಗೊಳಿಸಬೇಕಾದುದನ್ನು ಪೂರ್ಣಗೊಳಿಸಿಯಾಗಿತ್ತು, ಅಂತ್ಯಗೊಳಿಸಬೇಕಾಗಿರುವುದನ್ನು ಅಂತ್ಯಗೊಳಿಸಿಯಾಗಿತ್ತು. ಸಿದ್ಧಿಸಬೇಕಾಗಿರುವುದನ್ನು ಸಿದ್ಧಿಸಿ ಆಗಿತ್ತು. ಪ್ರತಿ ತಡೆಗಳನ್ನು ದಾಟಿಯಾಗಿತ್ತು. ಸ್ವ-ಅವಲಂಬನೆ, ಸ್ವ-ನಿಯಂತ್ರಿತರಾಗಿದ್ದರು.

ಓ ಮಹಾರಾಜ, ಯಾರು ವಾಂತಿ ರೋಗಿಯೋ, ಭೇದಿವುಳ್ಳ ರೋಗಿಯೋ, ಬಸ್ತಿ ರೋಗಿಯೋ ಆತನಿಗೆ ಔಷಧ ಪಾನಿಯಗಳೊಂದಿಗೆ ಸೇವೆ ಮಾಡಬೇಕಾದ ಅವಶ್ಯಕತೆಯಿದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರು ಪಾಪಗಳಿಂದ ತುಂಬಿರುವನೊ, ಯಾರು ನಾಲ್ಕು ಆರ್ಯಸತ್ಯಗಳನ್ನು ಗ್ರಹಿಸಿಲ್ಲವೋ, ಆತನಿಗೆ ಮಿತಾಹಾರ ಅತ್ಯವಶ್ಯಕವಾಗಿದೆ. ಓ ಮಹಾರಾಜ, ಹೇಗೆ ಪರಿಪೂರ್ಣ ಮಣಿರತ್ನಕ್ಕೆ ಹೊಳಪು ನೀಡುವ ಅಗತ್ಯವಿಲ್ಲವೋ, ಉಜ್ಜುವಿಕೆಯ ಅಗತ್ಯವಿಲ್ಲವೋ, ಅದಕ್ಕೆ ತನ್ನದೇ ಆದ ದಿವ್ಯ ಪ್ರಕಾಶವಿರುತ್ತದೋ ಅದೇರೀತಿಯಲ್ಲಿ ಮಹಾರಾಜ, ತಥಾಗತರ ಎಲ್ಲಾ ಕ್ರಿಯೆಗಳು ಸ್ವಾಭಾವಿಕವಾಗಿ ಸಂಯಮಿತ ಆಗಿರುತ್ತವೆ. ಅವರು ಸಂಯಮಪಡಬೇಕಿಲ್ಲ. ತಥಾಗತರ, ಬುದ್ಧರ ವಿಷಯದಲ್ಲಿ ಪಾರಮಿಗಳು ಎಂದೋ ಪೂರ್ಣಗೊಳಿಸಲ್ಪಟ್ಟಿವೆ. ಅವರಿಗೆ ಕ್ರಿಯಾ ಕಾರಣದ ಆವರಣ ಇರುವುದಿಲ್ಲ. (ಅವರ ಪಿಂಡಪಾತ್ರೆಯು ತುಂಬಿತ್ತೇ ಹೊರತು ಅವರ ಹೊಟ್ಟೆಯು ತುಂಬಿರಲಿಲ್ಲ. ಅದು ಮಿತಹಾರದಿಂದಲೇ ಇತ್ತು. ಅವರು ಉದರದಲ್ಲಿ ಸ್ವಾಭಾವಿಕವಾಗಿ ಸಂಯಮಿತರಾಗಿದ್ದರು. ಅವರ ಬಾಹ್ಯ ಶರೀರದ 32 ಮಹಾಪುರುಷ ಲಕ್ಷಣಗಳಲ್ಲಿ ತೆಳುಹೊಟ್ಟೆ ಸಿಂಹಕಟಿಯನ್ನು ಹೊಂದಿದ್ದರು).

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ ! ಖಂಡಿತವಾಗಿಯು ವಾಸ್ತವ ಹೀಗಿರುವುದರಿಂದಾಗಿ ನೀವು ಹೇಳಿದ್ದನ್ನು ನಾನು ಒಪ್ಪುವೆ.


3. ಬುದ್ಧ ಅಪ್ಪಾಬಾಧ ಪನ್ಹೋ (ಆರೋಗ್ಯ ಶರೀರದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಷುಗಳೇ ನಾನು ಬ್ರಾಹ್ಮಣನಾಗಿದ್ದೇನೆ, ಯೋಗದಲ್ಲಿ ಸದಾ ತಲ್ಲೀನನಾಗಿರುತ್ತೇನೆ, ಸದಾ ಶುದ್ಧ ಹಸ್ತದವನಾಗಿದ್ದೇನೆ, ಇದು ನನ್ನ ಅಂತಿಮ ಶರೀರವಾಗಿದೆ, ನಾನು ಶ್ರೇಷ್ಠ ವೈದ್ಯನಾಗಿದ್ದೇನೆ.

ಆದರೆ ಇನ್ನೊಂದೆಡೆ ಭಗವಾನರು ಹೀಗೂ ಹೇಳಿದ್ದಾರೆ: ಓ ಭಿಕ್ಷುಗಳೇ, ನನ್ನ ಶಿಷ್ಯರಲ್ಲಿ, ಆರೋಗ್ಯಕರವಾಗಿರುವವರಲ್ಲಿ ಬಕ್ಕುಲ ಶ್ರೇಷ್ಠನಾಗಿದ್ದಾನೆ.

ಭಂತೆ ನಾಗಸೇನ, ಹಲವುಸಾರಿ ಭಗವಾನರ ಶರೀರದಲ್ಲಿ ರೋಗಗಳು ಉದಯಿಸಿವೆ, ಹೀಗಿರುವಾಗ ಭಗವಾನರ ಶರೀರವು ಶ್ರೇಷ್ಠವೆನ್ನುವುದಾದರೆ, ಬಕ್ಕಲನ ಶರೀರ ಆರೋಗ್ಯಕರರಲ್ಲಿ ಶ್ರೇಷ್ಠ ಎನ್ನುವುದು ತಪ್ಪಾಗುತ್ತದೆ. ಆದರೆ ಆರೋಗ್ಯಕರರಲ್ಲಿ ಬಕ್ಕುಲನೇ ಶ್ರೇಷ್ಠ ಎನ್ನುವುದೇ ಸರಿಯಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ಎರಡುಕಡೆ ಮೊನಚಾಗಿರುವಂತಹ ಪ್ರಶ್ನೆಯಾಗಿದೆ, ನಿಮಗೆ ಈಗ ಹಾಕಲಾಗಿದೆ, ಅದನ್ನು ನೀವೇ ಬಿಡಿಸಬೇಕಾಗಿದೆ. (135)

ಓ ಮಹಾರಾಜ, ನಿಮ್ಮ ಹೇಳಿಕೆಗಳೆರಡು ಸರಿಯಾಗಿಯೇ ಇವೆ. ಆದರೆ ಬಕ್ಕಲನ ಬಗ್ಗೆ ಯಾವ ಭಿಕ್ಖುಗಳ ಮುಂದೆ ಹೇಳಿದರೊ ಅವರೆಲ್ಲ ಬಹುಶ್ರುತರಾಗಿದ್ದರು, ನೆನಪಿನ ಶಕ್ತಿಯುಳ್ಳವರಾಗಿದ್ದರು, ಅಪಾರ ಪ್ರಜ್ಞಾವಂತರಾಗಿದ್ದರು, ಸತ್ಸಂಪ್ರದಾಯ ಪಾಲಿಸುವವರಾಗಿದ್ದರು, ಅವರೆಲ್ಲರಲ್ಲೂ ವಿಶೇಷ ಗುಣಗಳು ಇದ್ದವು. ಆ ವಿಧವಾದ ವಿಶೇಷಗಳು ಅನ್ಯರಲ್ಲಿ ದುರ್ಲಭವಾಗಿತ್ತು. ಅಂತಹ ಕೆಲವು ಶಿಷ್ಯರಿಗೆ ನಡಿಗೆಯ ಧ್ಯಾನಿಗಳು ಎಂದು ಕರೆಯಲ್ಪಟ್ಟಿದ್ದರು. ಅವರು ಇಡೀ ರಾತ್ರಿ ಮತ್ತು ಇಡೀ ಹಗಲು ನಡಿಗೆಯ ಧ್ಯಾನದಲ್ಲೇ ತಲ್ಲೀನರಾಗಿರುತ್ತಿದ್ದರು. ಆದರೆ ಭಗವಾನರು ಅಹೋರಾತ್ರಿ ಧ್ಯಾನದಲ್ಲೇ ತಲ್ಲೀನರಾಗಿರುತ್ತಿದ್ದರು. ಅವರು ನಡಿಗೆಯ ಧ್ಯಾನದಲ್ಲಿ ಅಷ್ಟೇ ಅಲ್ಲ, ಪದ್ಮಾಸನ, ಸಿಂಹಾಶಯ್ಯಾಸನ (ತಥಾಗತ ಶಯ್ಯಾಸನ) ಅಂದರೆ ಕುಳಿತು ಹಾಗು ಮಲಗಿಯೂ ಧ್ಯಾನಿಸುತ್ತಿದ್ದರು. ಈ ರೀತಿಯ ನಡಿಗೆಯ ಧ್ಯಾನಿಗಳು ಬಕ್ಕುಲನನ್ನು ಆ ಧ್ಯಾನದಲ್ಲಿ ಮೀರಿಸಿಬಿಡುತ್ತಿದ್ದರು. ಮತ್ತೆ ಕೆಲವು ಭಿಕ್ಷುಗಳಿದ್ದರು, ಅವರು ಒಂದೇಕಡೆ ಕುಳಿತು, ಒಂದು ಹೊತ್ತಿನ ಊಟ ಸೇವಿಸಿ ಸಾಧನೆ ಮಾಡುತ್ತಿದ್ದರು. ಅವರು ಕುಳಿತೇ ನಿದ್ರಿಸುತ್ತಿದ್ದರು. ಆ ವಿಷಯದಲ್ಲಿ ಅವರು ಪರರನ್ನು ಮೀರಿಸಿಬಿಡುತ್ತಿದ್ದರು. ಈ ರೀತಿಯಾಗಿ ಪ್ರತಿ ಶಿಷ್ಯನು ತಮ್ಮ ತಮ್ಮ ವಿಶೇಷ ಗುಣದಿಂದ ಮಿಕ್ಕವರನ್ನೆಲ್ಲಾ ಮೀರಿಸುತ್ತಿದ್ದರು. ಆದರೆ ಓ ಮಹಾರಾಜ, ತಥಾಗತರು ತಮ್ಮ ಶ್ರೇಷ್ಠಶೀಲದಿಂದಾಗಿ, ಶ್ರೇಷ್ಠ ಸಮಾಧಿಯಿಂದಾಗಿ ಮತ್ತು ಅನುಪಮ ಪ್ರಜ್ಞಾದಿಂದಾಗಿ, ಅಸಮಾನ ವಿಮುಕ್ತಿಯಿಂದಾಗಿ ಅನುಪಮಸಂಪನ್ನ ರಾಗಿದ್ದರು. ಹಾಗು ವಿಮುಕ್ತಿಯ ಜ್ಞಾನ, ಈ ಎಲ್ಲವೂ ಬುದ್ಧರಲ್ಲಿ ಮಾತ್ರ ಪರಿಧಿಗೆ ಬರುವ ವಿಷಯಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹೀಗೆ ಹೇಳಲಾಗಿದೆ.

ಓ ಭಿಕ್ಷುಗಳೇ, ಸದಾ ವರನೀಡುವ, ಸದಾ ಪರೋಪಕಾರ ಮಾಡುವ ಹಸ್ತದವರಾದ, ಈ ಶರೀರವು ಅಂತಿಮದ್ದಾಗಿದೆ, ನಾನು ಶ್ರೇಷ್ಠ ವೈದ್ಯನಾಗಿದ್ದೇನೆ.

ಓ ಮಹಾರಾಜ, ಒಬ್ಬನು ಜನ್ಮದಿಂದ ಉತ್ತಮ ವಂಶಜನಾಗಿರಬಹುದು, ಇನ್ನೊಬ್ಬ ಭಾರಿ ಶ್ರೀಮಂತನಾಗಿದ್ದಿರಬಹುದು, ಇನ್ನೊಬ್ಬ ಪ್ರಜ್ಞಾವಂತನಾಗಿರಬಹುದು, ಮತ್ತೊಬ್ಬ ವಿದ್ಯಾವಂತನಾಗಿರಬಹುದು, ಮಗದೊಬ್ಬ ಧೈರ್ಯಶಾಲಿಯಾಗಿರಬಹುದು ಮತ್ತು ಬೇರೊಬ್ಬ ಕುಶಲಿಯಾಗಿರಬಹುದು, ಆದರೆ ಮಹಾರಾಜ, ಇವೆಲ್ಲವನ್ನು ಅತಿಶಯಿಸುವುದು ಗಮನಾರ್ಹ. ಪರಮಶ್ರೇಷ್ಠತೆಯಾಗಿದೆ. ಅದೇರೀತಿಯಲ್ಲಿ ಓ ಮಹಾರಾಜ, ಭಗವಾನರು ಪರಮಶ್ರೇಷ್ಠರಾಗಿದ್ದಾರೆ, ಗೌರವಕ್ಕೆ ಪೂಜ್ಯತೆಗೆ ಅತ್ಯಂತ ಅರ್ಹದವರಾಗಿದ್ದಾರೆ. ಸರ್ವಜೀವಿಗಳಲ್ಲೇ ಶ್ರೇಷ್ಠರಾಗಿದ್ದಾರೆ. ಹಾಗು ಬಕ್ಕುಲನು ಆರೋಗ್ಯಕರ ಶರೀರ ಹೊಂದಿರುವುದು ಹಿಂದಿನ ಜನ್ಮದಲ್ಲಿ ಪ್ರಬಲ ಇಚ್ಛೆ ಹೊಂದಿ ಪುಣ್ಯ ಮಾಡಿದ್ದರಿಂದಾಗಿಯೇ.  ಓ ಮಹಾರಾಜ, ಹಿಂದೆ ಅನೋಮದಸ್ಸಿ ಭಗವಾನ್ ಬುದ್ಧರಿಗೆ ರೋಗ ಉಂಟಾಗಿತ್ತು. ಅವರಿಗೆ ಹೊಟ್ಟೆಯಲ್ಲಿ ವಾತದೋಷವಿತ್ತು. ಮತ್ತೆ ವಿಪಸ್ಸಿ ಭಗವಾನ್ ಬುದ್ಧರು 68000 ಭಿಕ್ಷು ಶಿಷ್ಯರನ್ನು ಹೊಂದಿದ್ದರೂ ಅವರಿಗೂ ತಿನಾಪುಷ್ಪಕ ರೋಗ (ರಕ್ತ ಹರಿದ್ವರ್ಣ ರೋಗ) ಉಂಟಾಗಿತ್ತು. ಆಗ ಬಕ್ಕುಲನು ಋಷಿಯಾಗಿದ್ದನು, ಆತನು ಹಲವಾರು ಔಷಧಿಗಳನ್ನು ಬಳಸಿ ರೋಗವನ್ನು ನಿವಾರಿಸಿದ್ದನು. ಆ ಕರ್ಮದಿಂದಲೇ ಆತನಿಗೆ ಈ ಜನ್ಮದಲ್ಲಿ ಇಂತಹ ಆರೋಗ್ಯಕರ ಶರೀರ ಹೊಂದಿದ್ದಾನೆ.

ಆದ್ದರಿಂದಲೇ ಅವನ ಬಗ್ಗೆ ಹೀಗೆ ಹೇಳಲಾಗಿದೆ, ಓ ಭಿಕ್ಷುಗಳೇ, ಆರೋಗ್ಯಕರ ಶರೀರದ ವಿಷಯದಲ್ಲಿ ನನ್ನ ಶಿಷ್ಯರಲ್ಲೇ ಶ್ರೇಷ್ಠನಾಗಿರುವವನು ಬಕ್ಕುಲನಾಗಿದ್ದಾನೆ.

ಆದರೆ ಓ ಮಹಾರಾಜ, ಭಗವಾನರು ರೋಗದಿಂದ ದುಃಖಿಸುವುದಿಲ್ಲ, ಅವರು ತಾವಾಗಿಯೇ ದುತಂಗಗಳನ್ನು (ವಿಶೇಷ ವಿನಯ ನಿಯಮಗಳನ್ನು) ಪರಿಪಾಲಿಸಿದ್ದಾರೆ. ಅವರಂತಹ ಜೀವಿಯೇ ಇಲ್ಲ. ಓ ಮಹಾರಾಜ, ಸಂಯಕ್ತನಿಕಾಯದಲ್ಲಿ ಭಗವಾನರು ದೇವಾಧಿದೇವತೆಗಳಿಗೆ ಹೀಗೆ ಹೇಳಿದ್ದಾರೆ. ಓ ಭಿಕ್ಷುಗಳೇ (ದೇವತೆಗಳೇ) ದ್ವಿಪಾದಿಗಳಲ್ಲಿ ಅಥವಾ ಚತುಷ್ಪಾದಿಗಳಲ್ಲಿ, ಸಶರೀರಿಗಳಲ್ಲಿ ಅಥವಾ ಅಶರೀರಿಗಳಲ್ಲಿ ಅಸನ್ಯಾ ಜೀವಿಗಳಲ್ಲಿ ಅಥವಾ ಸನ್ಯಾಯುಕ್ತ ಜೀವಿಗಳಲ್ಲಿ ಅಥವಾ ನೇವಸನ್ಯಾನಸನ್ಯಾ ಜೀವಿಗಳಲ್ಲೇ ಆಗಲಿ ತಥಾಗತರು ಶ್ರೇಷ್ಠರಾಗಿದ್ದಾರೆ, ನಾಯಕರಾಗಿದ್ದಾರೆ. ತಥಾಗತರು ಅರಹಂತರು, ಸಮ್ಮಾಸಂಬುದ್ಧರು ಆದ ಅವರೇ ಪರಮಶ್ರೇಷ್ಠರಾಗಿದ್ದಾರೆ.

ಬಹುಚೆನ್ನಾಗಿದೆ ಭಂತೆ ನಾಗಸೇನ ! ಹೀಗಿರುವುದರಿಂದ ನೀವು ಹೇಳಿದ್ದನ್ನು ನಾನು ಒಪ್ಪುವೆ.


4. ಮಾಗ್ಗುಪ್ಪಾದನ ಪನ್ಹೊ (ಮಾರ್ಗದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು : ಓ ಭಿಕ್ಷುಗಳೇ, ತಥಾಗತರು, ಅರಹಂತರು ಆದ ಸಮ್ಮಾಸಂಬುದ್ಧರು ತಿಳಿಯದಿರುವಂತಹ ಅಜ್ಞಾತವಾದಂತಹ ಮಾರ್ಗವನ್ನು ಸಂಶೋಧಿಸಿದ್ದಾರೆ. ಆದರೆ ಇನ್ನೊಂದೆಡೆ ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಈಗ ನಾನು ಸನಾತನ ಹಾದಿಯನ್ನು ಹಿಂದಿನ ಬುದ್ಧರು ನಡೆದಂತಹ ಹಾದಿಯನ್ನು ಅರಿತಿದ್ದೇನೆ. ಈಗ ಹೇಳಿ ಭಂತೆ ನಾಗಸೇನ, ಭಗವಾನರು ಈ ಹಿಂದೆ ಸಂಶೋಧಿಸದ ಮಾರ್ಗವನ್ನು ಸಂಶೋಧಿಸಿದ್ದಾರೆ ಅಂದರೆ ಅವರು ಹಿಂದಿನ ಬುದ್ಧರ ಮಾರ್ಗವನ್ನು ಅರಿತಿದ್ದಾರೆ ಎನ್ನುವುದು ಸುಳ್ಳಾಗುತ್ತದೆ. ಆದರೆ ಅವರು ಅರಿತಿದ್ದು ಹಿಂದಿನ ಬುದ್ಧರ ಮಾರ್ಗವೇ ಆಗಿದ್ದ ಪಕ್ಷದಲ್ಲಿ ಅವರು ಅಜ್ಞಾತ, ಯಾರಿಗೂ ತಿಳಿಯದಿರುವ ಮಾರ್ಗ ಕಂಡುಹಿಡಿದಿದ್ದೇನೆ ಎಂಬುದು ಸುಳ್ಳಾಗುತ್ತದೆ. ಇದು ಸಹಾ ಎರಡುಕಡೆ ಚೂಪಾಗಿರುವ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ.(136)

ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳು ಸರಿಯಾಗಿಯೇ ಇವೆ. ಮತ್ತು ಎರಡು ಹೇಳಿಕೆಗಳು ಸತ್ಯದಿಂದ ಕೂಡಿವೆ. ಓ ಮಹಾರಾಜ, ಯಾವಾಗ ಹಿಂದಿನ ತಥಾಗತರು ಮರೆಯಾದರೋ ಆನಂತರ ಯಾವ ಗುರುಗಳು ಉಳಿದಿಲ್ಲ. ಹಾಗು ಅವರ ಮಾರ್ಗವು ಮರೆಯಾಯಿತು, ಇಲ್ಲದೇ ಹೋಯಿತು. ಈ ರೀತಿಯಾಗಿ ಮುರಿಯಲ್ಪಟ್ಟ, ಈ ರೀತಿ ಕ್ರಮವಾಗಿ ನಾಶಹೊಂದಿದ, ಶಿಥಿಲಗೊಂಡ, ಮುಗಿದ, ಉಳಿದಿಲ್ಲದ, ಮರೆಯಾದುದ್ದನ್ನು ತಥಾಗತರು ಸರ್ವಜ್ಞತ ಚಕ್ಷುವಿನಿಂದ ಕಂಡಿದ್ದಾರೆ ಮತ್ತು ಆದ್ದರಿಂದಲೇ ಅವರು ಹೀಗೆ ಹೇಳಿದ್ದಾರೆ.
ಓ ಭಿಕ್ಷುಗಳೇ, ಸನಾತನ ಮಾರ್ಗವನ್ನು, ಯಾವುದನ್ನು ಹಿಂದಿನ ಬುದ್ಧರು ಹಾದು ಹೋದರೋ ಅದನ್ನು ಅರಿತಿದ್ದೇನೆ.

ಮತ್ತೆ ಯಾವ ಮಾರ್ಗವು ಹಿಂದಿನ ಬುದ್ಧರಿಂದ ಸಂಶೋಧಿಸಲ್ಪಟ್ಟಿತ್ತೋ, ಅದು ಬುದ್ಧರಿಲ್ಲದೆ, ಗುರುಗಳಿಲ್ಲದೆ ತುಂಡಾಗಿ, ಶಿಥಿಲಗೊಂಡು, ಕ್ರಮವಾಗಿ ನಾಶಹೊಂದಿ ಮುಗಿದು, ಮರೆಯಾಗಿ ಹೋಯಿತೋ, ಅದನ್ನು ಭಗವಾನರು ಪುನಃ ಸಂಶೋಧಿಸಿದರು, ಮತ್ತೆ ಅಸಾಧ್ಯವಾದುದನ್ನು, ಸಾಧ್ಯವನ್ನಾಗಿಸಿದರು. ಆದ್ದರಿಂದಲೇ ಹೀಗೆ ಹೇಳಿದರು: ಓ ಭಿಕ್ಷುಗಳೇ, ತಥಾಗತರು ಅರಹಂತರು ಆದ ಸಮ್ಮಾಸಂಬುದ್ಧರು ಅಜ್ಞಾತವಾಗಿದ್ದ, ಗೊತ್ತಿಲ್ಲದಿರುವ ಮಾರ್ಗವನ್ನು ಸಂಶೋಧಿಸಿದ್ದಾರೆ.

ಊಹಿಸಿ ಓ ಮಹಾರಾಜ, ಸಾರ್ವಭೌಮ, ಚಕ್ರವತರ್ಿಯು ಅಂತ್ಯವಾದ ನಂತರ, ಮಣಿರತ್ನವು ಗಿರಿಶಿಖರಗಳ ಆಂತರ್ಯದಲ್ಲಿ ಮಾಯವಾಗುವುದು, ಮತ್ತೆ ಕಾಲನಂತರ ಇನ್ನೋರ್ವ ಚಕ್ರವತರ್ಿ ಸಾರ್ವಭೌಮ ಗಾಂಭಿರ್ಯದಿಂದ ಬರುವಾಗ ಅದು ಆತನಿಗೆ ಪ್ರತ್ಯಕ್ಷವಾಗಿ ಕಾಣುವುದು. ಈಗ ಹೇಳಿ ಮಹಾರಾಜ, ಆ ಮಣಿರತ್ನವು ಆತನಿಂದ ಸೃಷ್ಠಿಯಾಯಿತೇ?

ಖಂಡಿತವಾಗಿ ಇಲ್ಲ ಭಂತೆ, ಆ ರತ್ನವು ತನ್ನ ಮೊದಲಿನ ಸ್ಥಿತಿಯಲ್ಲೇ ಇತ್ತು. ಆದರೆ ಹೊಸ ಜನ್ಮದಂತೆ ಅದು ಸ್ವೀಕಾರವಾಯಿತು.

ಓ ಮಹಾರಾಜ, ಅದೇರೀತಿಯಲ್ಲೇ ಭಗವಾನರು ತಮ್ಮ ಬುದ್ಧ ಚಕ್ಷುವಿನಿಂದ ಸರ್ವಜ್ಞಾನವನ್ನು ಪಡೆದರು. ಪುನಃಶ್ಚೇತನವನ್ನುಂಟು ಮಾಡಿ, ಆರ್ಯ ಅಷ್ಟಾಂಗದ ಮಧ್ಯಮ ಮಾರ್ಗವನ್ನು ನಿಜಸ್ಥಿತಿಯಲ್ಲೇ, ಹಿಂದಿನ ಬುದ್ಧರ ರೀತಿಯಲ್ಲೇ ಪ್ರಕಟಪಡಿಸಿದರು. ಹೀಗೆ ಅವರು ಹಿಂದಿನ ಬುದ್ಧರು ಮರೆಯಾದರು, ಅವರ ಬೋಧನೆಯು ಮರೆಯಾದರೂ, ಶಿಥಿಲವಾದರೂ, ಅಂತ್ಯವಾದರೂ, ಸಹಾ ಸಂಶೋಧಿಸಿದರು ಮತ್ತು ಆದ್ದರಿಂದಲೇ ಅವರು ಹೀಗೆ ಹೇಳಿದರು: ಓ ಭಿಕ್ಷುಗಳೇ, ತಥಾಗತರು ಅರಹಂತರು, ಸಮ್ಮಾಸಂಬುದ್ಧರಾಗಿ ಅಜ್ಞಾತವಾದ, ತಿಳಿದಿಲ್ಲದ ಅತ್ಯುತ್ತಮ ಮಾರ್ಗವನ್ನು ಸಂಶೋಧಿಸಿದ್ದಾರೆ.

ಓ ಮಹಾರಾಜ, ಇದು ಹೇಗೆಂದರೆ ತಾಯಿಯು ಗರ್ಭದಲ್ಲಿದ್ದ ಶಿಶುವನ್ನು ಹಡೆದರೆ, ಜನರು ಮಾತ್ರ ತಾಯಿಯು ಶಿಶುವಿಗೆ ಜನ್ಮ ನೀಡಿದಳು ಎನ್ನುತ್ತಾರೆ. ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ತಮ್ಮ ಸಮಂತ ಚಕ್ಷುವಿನಿಂದ ಸಂಪೂರ್ಣ ಬೋಧಿ ಪಡೆದರು. ಅದಕ್ಕೆ ಜೀವನೀಡಿ, ಮುರಿದಂತಹ, ಪುಡಿಪುಡಿಯಾಗಿದ್ದ, ಶಿಥಿಲವಾಗಿದ್ದ, ಅಂತ್ಯಗೊಂಡಂತಹ, ಮರೆಯಾಗಿದ್ದಂತಹ ಮಾರ್ಗವನ್ನು ಮತ್ತೆ ಅರಿತು ಬೋಧಿಸಿದರು.

ಇದು ಹೇಗೆಂದರೆ ಓ ಮಹಾರಾಜ, ಒಬ್ಬ ಮನುಷ್ಯ ಕಳೆದುಹೋಗಿದ್ದಂತಹ ವಸ್ತುವನ್ನು ಹುಡುಕಿದಾಗ, ಆತನಿಗೆ ಹೀಗೆ ಹೇಳುವರು, ಆತನು ಅದಕ್ಕೆ ಪುನಃ ಜೀವ ನೀಡಿದ ಮತ್ತು ಇದು ಹೇಗೆಂದರೆ ಒಬ್ಬನು ಅರಣ್ಯವನ್ನು ತೆರವುಗೊಳಿಸಿ, ವಾಸಮಾಡತಕ್ಕದಾದ ಭೂಮಿ ರಚಿಸಿದಾಗ, ಜನರು ಆತನಿಗೆ ಓಹ್ ಇದು ಆತನ ಭೂಮಿ. ಆದರೆ ಆ ಭೂಮಿಯು ಆತನಿಂದ ಸೃಷ್ಠಿಯಾಗಲಿಲ್ಲ. ಆದರೆ ಆತನು ಬಳಕೆಯುಕ್ತ ಭೂಮಿಯಾಗಿ ಪರಿವತರ್ಿಸಿದ್ದರಿಂದಾಗಿ ಆತನಿಗೆ ಭೂಮಾಲಿಕ ಎಂದು ಘೋಷಿಸುತ್ತಾರೆ.

ಅದೇರೀತಿಯಾಗಿ ತಥಾಗತರು ತಮ್ಮ ಪನ್ಯಾ ಚಕ್ಷುವಿನಿಂದ ಆ ಮರೆಯಾಗಿದ್ದ ಜ್ಞಾನವನ್ನು ಸಂಶೋಧಿಸಿದ್ದರಿಂದಾಗಿ ಅದಕ್ಕೆ ಪುನಃಶ್ಚೇತನ ನೀಡಿದಾಗ ಆ ಮಾರ್ಗವು ಅಲ್ಲೇ ಇತ್ತು. ಆದರೆ ಮುರಿದಿತ್ತು, ಶಿಥಿಲವಾಗಿತ್ತು, ಪುಡಿಪುಡಿಯಾಗಿತ್ತು. ಹೋಗಲು ಸಾಧ್ಯವಿಲ್ಲದಂತಹ ರೀತಿಯಲ್ಲಿ ಮರೆಯಾಗಿತ್ತು. ಆದರೆ ತಥಾಗತರು ಮತ್ತೆ ಅದನ್ನು ಸಂಶೋಧಿಸಿದ್ದಾರೆ, ಆದ್ದರಿಂದಲೇ ಅವರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ತಥಾಗತರು ಅರಹಂತರು, ಸಮ್ಮಾಸಂಬುದ್ಧರಾದಂತಹ ಅವರು ಅಜ್ಞಾತವಾಗಿದ್ದಂತಹ ಮಾರ್ಗವನ್ನು ಸಂಶೋಧಿಸಿದ್ದಾರೆ.

ಬಹು ಚೆನ್ನ ಭಂತೆ ನಾಗಸೇನ, ಅದು ಹೀಗೆಯೇ ಇದೆ ಮತ್ತು ನಾನು ಸಹಾ ನೀವು ಹೇಳಿದ್ದನ್ನು ಒಪ್ಪುತ್ತೇನೆ.


5. ಬುದ್ಧ ಅವಿಹೆರಕ ಪನ್ಹೋ (ಅಹಿಂಸೆಯ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು: ನಾನು ಹಿಂದಿನ ಜನ್ಮಗಳಲ್ಲಿಯೂ ಸಹಾ ಜೀವಿಗಳಿಗೆ ಹಿಂಸಿಸದಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೆನು. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಯಾವಾಗ ಋಷಿ ಲೋಮಸ ಕಸ್ಸಪರಾಗಿ ಬೋಧಿಸತ್ತರು ಜನಿಸಿದ್ದರೋ ಆಗ ಅವರು ನೂರಾರು ಪ್ರಾಣಿಗಳನ್ನು ಕಡಿದು ಬಲಿ ಅಪರ್ಿಸಿ ವಾಜಪೇಯ ಎಂಬ ಮಹಾಯಗ್ನವನ್ನು ಮಾಡಿದ್ದರು.

ಈಗ ಹೇಳಿ ನಾಗಸೇನ, ಭಗವಾನರು ಹೇಳಿರುವಂತೆ ಅವರು ಹಿಂದಿನ ಜನ್ಮಗಳಲ್ಲಿ ಜೀವಿಗಳನ್ನು ಹಿಂಸಿಸಿಲ್ಲವಾದರೆ ಲೋಮನ ಕಸ್ಸಪರವರ ಘಟನೆಯು ಸುಳ್ಳಾಗುತ್ತದೆ. ಆದರೆ ಆ ಘಟನೆಯೇ ಸತ್ಯವಾದರೆ, ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ನೀವೇ ಪರಿಹರಿಸಬೇಕು.(137)

ಓ ಮಹಾರಾಜ, ಭಗವಾನರು ಆಗಲೇ ಹೇಳಿದ್ದಾರೆ, ಅವರು ಹಿಂದಿನ ಜನ್ಮಗಳಲ್ಲಿ ಅಹಿಂಸೆಯಿಂದ ಜೀವಿಸಿದ್ದಾರೆಂದು ಮತ್ತು ಲೋಮಸ್ಸ ಕಸ್ಸಪರವರು ನೂರಾರು ಜೀವಿಗಳ ಹತ್ಯೆಯಿಂದ ವಾಜಪೇಯ ಯಗ್ನವನ್ನು ಮಾಡಿದ್ದು ಸತ್ಯವಾದರೂ, ಆಗ ಅವರ ಮನಸ್ಸು ರಾಗಕ್ಕೆ ವಶವಾಗಿ, ಅನಿಯಂತ್ರಿತವಾಗಿತ್ತು. ಅವರು ಆ ಕಾರ್ಯವನ್ನು ಅರಿವಿದ್ದು ಮಾಡಲಿಲ್ಲ.

ಭಂತೆ ನಾಗಸೇನ, ಜನರಲ್ಲಿ ಎಂಟು ವರ್ಗಗಳಿವೆ. ಈ ಎಂಟು ವರ್ಗದವರು ಜೀವಹತ್ಯೆಗಳನ್ನು ಮಾಡುತ್ತಾರೆ, ಅವರೆಂದರೆ ರಾಗಯುಕ್ತನು ರಾಗದಿಂದ, ಕ್ರೂರಿಯು ತನ್ನ ಕೋಪದಿಂದ, ಮೋಹಿಯು ತನ್ನ ಮೂರ್ಖತ್ವದಿಂದಾಗಿ, ಅಹಂಕಾರಿಯು ತನ್ನ ಅಹಂಕಾರದಿಂದಾಗಿ, ಲೋಭಿಯು ತನ್ನ ಲೋಭದಿಂದ ಮತ್ತು ಏನೂ ಇಲ್ಲದವ ಜೀವನೋಪಾಯಕ್ಕಾಗಿ, ಮೂರ್ಖನು ಹಾಸ್ಯಕ್ಕಾಗಿ, ರಾಜನು ಶಿಕ್ಷಾಕಾಂಕ್ಷಿಯಾಗಿ ಜೀವ ಹತ್ಯೆಗಳನ್ನು ಮಾಡುವರು. ಭಂತೆ ನಾಗಸೇನ, ಈ ಎಂಟು ವಿಧದವರು ಜೀವಹತ್ಯೆ ಮಾಡುತ್ತಾರೆ. ಭಂತೆ ನಾಗಸೇನ, ಭೋಧಿಸತ್ವರು ಸಹಾ ತಮ್ಮ ಸ್ವಭಾವ ಪ್ರವೃತ್ತಿಯಿಂದಾಗಿ ಹಾಗೆ ಮಾಡಿರಬಹುದೇ?

ಓ ಮಹಾರಾಜ, ಅದು ಹಾಗಲ್ಲ. ಬೋಧಿಸತ್ವರು ಸ್ವಭಾವ ಪ್ರವೃತ್ತಿಯಿಂದಾಗಿ ಹಾಗೆ ಮಾಡಲಿಲ್ಲ. ಅವರ ಸ್ವಭಾವ ಅಂತಹದಲ್ಲ, ಅದು ಆಕಸ್ಮಿಕವಾಗಿತ್ತು. ಬೋಧಿಸತ್ವರು ಸ್ವಭಾವಕ್ಕೆ ಅನುಗುಣವಾಗಿ ಹಾಗೆ ಮಾಡಿದ್ದರೆ ಅವರು ಈ ಗಾಥೆಯನ್ನು ಹೇಳುತ್ತಿರಲಿಲ್ಲ: ಸಾಗರ ಪರಿವೃತವಾದ ಸಮುದ್ರಸಹಿತ ಇಡೀ ಭೂಮಂಡಲದ ನಿಂದೆಗೆ ಒಳಗಾಗಿ ನಾನು ಇದನ್ನು ಇಚ್ಛಿಸುವುದಿಲ್ಲ, ಹೇ ಸಹ್ಯ ಅರಿತುಕೋ.

ಓ ಮಹಾರಾಜ, ಬೋಧಿಸತ್ವರು ಹಾಗೆ ಹೇಳಿದ್ದರೂ ಸಹಾ ಯಾವಾಗ ಅವರು ಚಂದಾವತಿ ರಾಜಕುಮಾರಿಯ ಸೌಂದರ್ಯ ನೋಡಿದರೋ, ಆಗ ಅವರಲ್ಲಿ ಪ್ರೇಮವುಕ್ಕಿ, ಮನಸ್ಸಿನಲ್ಲಿ ನಿಯಂತ್ರಣ ತಪ್ಪಿದರು. ಈ ರೀತಿಯಾದ ಕ್ಷೊಭೆಯಿಂದ, ಚದುರುವಿಕೆಯ ಮನದಿಂದಾಗಿ ಅವರು ವಾಜಪೇಯ ಯಗ್ನವನ್ನು ಮಾಡಿ ನೂರಾರು ಪ್ರಾಣಿಗಳ ಬಲಿಗೆ ಕಾರಣರಾದರು.

ಓ ಮಹಾರಾಜ, ಹೇಗೆ ಹುಚ್ಚನೊಬ್ಬನು ಬುದ್ಧಿಹೀನನಾಗಿ, ಧಗದಹಿಸುತ್ತಿರುವ ಕುಲುಮೆಗೆ ಧುಮುಕುವನೋ ಅಥವಾ ವಿಷಪೂರಿತ ಕುಪಿತ ಸರ್ಪವನ್ನು ಕೈಯಲ್ಲಿ ಹಿಡಿಯುತ್ತಾನೋ, ಅಥವಾ ಮದೋನ್ಮತ್ತ ಆನೆಯ ಕಡೆಗೆ ಧಾವಿಸುತ್ತಾನೋ ಮಹಾ ಪ್ರವಾಹಕ್ಕೆ ಧುಮುಕುವನೋ, ಆ ಕಡೆಯ ತೀರವನ್ನು, ಕಾಣಲಾರನೊ, ಕೆಸರಿನಲ್ಲಿ ಬಿದ್ದು ಸಿಕ್ಕಿಹಾಕಿಕೊಳ್ಳುವನೋ ಅಥವಾ ಮುಳ್ಳುಗಳ ಬೇಲಿಯಲ್ಲಿ ವೇಗವಾಗಿ ನುಗ್ಗುವನೊ, ಅಥವಾ ಕಡಿದಾದ ಪ್ರಪಾತದಲ್ಲಿ ಬೀಳುವನೊ, ಅಥವಾ ಮಲವನ್ನು ತಿನ್ನುತ್ತಾನೊ, ನಗ್ನವಾಗಿ ಬೀದಿಗಳಲ್ಲಿ ತಿರುಗಾಡುತ್ತಾನೋ, ಅಂತಹ ಇನ್ನಿತರ ಅಸಮಂಜಸ ಕೃತ್ಯಗಳನ್ನು ಮಾಡುವನೋ, ಅದೇರೀತಿಯಲ್ಲಿ ಚಂದಾದೇವಿಯ ದರ್ಶನ ಮಾತ್ರದಿಂದಲೇ ಬೋಧಿಸತ್ತರು ಮನದಿಂದ ನಿಯಂತ್ರಣ ತಪ್ಪಿದರು ಹಾಗು ಅಂತಹ ಸ್ಥಿತಿಯಲ್ಲಿ ಮಾತ್ರ ಅವರು ಹಾಗೆ ಮಾಡಿದರು.

ಓ ಮಹಾರಾಜ, ಮನ ನಿಯಂತ್ರಣ ತಪ್ಪಿದವರನ್ನು ಜಗತ್ತು ಸಹಾ ಅವರ ಕೃತ್ಯವನ್ನು ಪಾಪವೆಂದು ಪರಿಗಣಿಸುವುದಿಲ್ಲ. ಹಾಗೆಯೇ ಅಂತಹವರಿಗೆ ಭವಿಷ್ಯದಲ್ಲಿ ಪಾಪಫಲವು ದೊರೆಯುವುದಿಲ್ಲ. ಹೇಳಿ ಮಹಾರಾಜ, ಹುಚ್ಚನೊಬ್ಬನು ಮಹಾ ಅಪರಾಧ ಮಾಡಿದಾಗ ಯಾವ ಶಿಕ್ಷೆಯನ್ನು ಆತನಿಗೆ ನೀವು ನೀಡುವಿರಿ?

ಹುಚ್ಚನಿಗೆ ಯಾವ ಶಿಕ್ಷೆ? ನಾವು ಆತನಿಗೆ ಹೊಡೆಯಲು ಆಜ್ಞೆನೀಡಿ ನಂತರ ಬಿಟ್ಟುಬಿಡುವೆವು, ಅಷ್ಟೇ ಆತನಿಗೆ ಶಿಕ್ಷೆ.

ಓ ಮಹಾರಾಜ, ಹಾಗಾದರೆ ಹುಚ್ಚನ ಅಪರಾಧಕ್ಕೆ ಯಾವ ಶಿಕ್ಷೆಯೂ ಇಲ್ಲ, ಇದರಿಂದಾಗಿ ಹುಚ್ಚನ ಕೃತ್ಯವು ಪಾಪವಲ್ಲವೆಂದಾಯಿತು. ಅದು ಕ್ಷಮಾರ್ಹ ಕೃತ್ಯವಾಗಿದೆ. ಓ ರಾಜ, ಅದೇರೀತಿಯಲ್ಲಿ ಲೋಮಸ ಕಸ್ಸಪ ವಿಷಯವು ಸಹಾ ಇದೆ. ಅವರು ಚಂದಾದೇವಿಯ ಮೇಲಿನ ಪ್ರೇಮದಿಂದಾಗಿ ಚಿತ್ತನಿಯಂತ್ರಣ ತಪ್ಪಿದರು. ಗೊಂದಲದಲ್ಲಿ ಸಿಲುಕಿದರು, ಅವರ ಚಿತ್ತವು ಚದುರಿ, ಕ್ಷೊಭೆಗೆ ಒಳಗಾಗಿದ್ದರು. ಇಂತಹ ಸ್ಥಿತಿಯಲ್ಲೇ ಅವರು ವಾಜಪೇಯ ಯಗ್ನ ಮಾಡಿದರು. ಮತ್ತೆ ಯಾವಾಗ ಅವರು (ಆನೆಯ ಶಿರಸ್ಸು ಕತ್ತರಿಸಲು ಹೋದಾಗ ಅದು ಭಯದಿಂದ ಘೀಂಕರಿಸಿತು, ಅದರ ಕೂಗನ್ನು ಕೇಳಿ, ತನ್ನ ಜಟಾದಿಗಳ ಕಡೆನೋಡಿ) ಹತ್ಯೆ ಮಾಡದೆ ಸಹಜಸ್ಥಿತಿಗೆ ಬಂದಾಗ, ತಮ್ಮ ಚಿತ್ತನಿಯಂತ್ರಣ ಪಡೆದರು. ಆಗ ಅವರು ಚಂದಾದೇವಿಯ, ಲೌಕಿಕತೆಯ ಎಲ್ಲಾ ಆಸೆಗಳನ್ನು ವಿಸಜರ್ಿಸಿ, ಮತ್ತೆ ಅಭಿನಿಷ್ಕ್ರಮಣ ಮಾಡಿದ ಕೂಡಲೇ ಅವರು ಪಂಚ ಅಭಿಜ್ಞಾಗಳನ್ನು ಮರಳಿಪಡೆದರು, ನಂತರ ಅವರು ಬ್ರಹ್ಮಲೋಕದಲ್ಲಿ ಪುನರ್ಜನ್ಮ ತಾಳಿದರು.

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ.


6. ಛದ್ಧಂತ ಹಾಗು ಜ್ಯೋತಿಪಾಲರ ಬಗ್ಗೆ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಹಿಂದೆ ಬೋಧಿಸತ್ತರು ಛದ್ಧಂತ ಆನೆಗಳ ನಾಯಕನಾಗಿದ್ದಾಗ, ನೀಚಬುದ್ಧಿಯ ಬೇಟೆಗಾರನಿಗೆ ಕೊಲ್ಲಲು ಸೊಂಡಿಲನ್ನು ಎತ್ತಿಕೊಂಡು ನುಗ್ಗಿತು. ಆದರೆ ಆತನು ಕಾಷಾಯವಸ್ತ್ರ ಧರಿಸಿರುವುದನ್ನು ಕಂಡು, ತನಗೆ ಬಾಣವು ನುಗ್ಗಿದ ನೋವು ಬಾಧಿಸುತ್ತಿದ್ದರೂ ಸಹಾ, ಅದು ಹೀಗೆ ಚಿಂತಿಸಿತು: ಈ ಕಾಷಾಯ ವಸ್ತ್ರವು ಅಹರಂತರ ಗುರುತು, ಧ್ವಜವಾಗಿದೆ, ಅರಹಂತರು ಧರಿಸುವಂತಹುದ್ದಾಗಿದೆ, ಅಹಿಂಸೆವಾದಿಗಳು, ಪವಿತ್ರರು ಧರಿಸುವಂತಹದ್ದಾಗಿದೆ ಎಂದು ಯೋಚಿಸಿ ಅದು ತನಗೆ ಪ್ರಾಣಹಾನಿ ಉಂಟುಮಾಡಿದಂತಹ ಬೇಟೆಗಾರನಿಗೆ ಹಿಂಸೆ ಮಾಡಲಿಲ್ಲ.

ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಹಿಂದೆ ಬೋಧಿಸತ್ವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ, ಅವರು ಕಸ್ಸಪ ಬುದ್ಧಭಗವಾನರನ್ನು ನಿಂದಿಸಿದರು ಹಾಗು ದೂಷಿಸಿದರು, ಅದೂ ಕಹಿಯಾದ ಪದಗಳನ್ನು ಬಳಸಿದರು.

ಈಗ ಭಂತೆ ನಾಗಸೇನ, ಅವರು ಪ್ರಾಣಿಯಾಗಿರುವಾಗಲೂ ಕಾಷಾಯವಸ್ತ್ರಕ್ಕೆ ಗೌರವಿಸುವವರಾಗಿದ್ದರೆ, ಅವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ ಶ್ರೇಷ್ಠ ಕಸ್ಸಪ ಸಮ್ಮಾಸಂಬುದ್ಧರಿಗೆ ನಿಂದಿಸುತ್ತಿರಲಿಲ್ಲ, ಈ ರೀತಿಯಲ್ಲಿ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಆದರೆ ಅವರು ನಿಂದಿಸಿದ್ದೇ ನಿಜವಾಗಿದ್ದರೆ, ಮೊದಲ ಹೇಳಿಕೆಯಾದ ಪ್ರಾಣಿಯಾಗಿದ್ದರೂ ಕಾಷಾಯ ವಸ್ತ್ರಕ್ಕೆ ಗೌರವಿಸಿತು ಎನ್ನುವುದು ಸುಳ್ಳಾಗುತ್ತದೆ. ಯೋಚಿಸಿ, ಅವರು ಪ್ರಾಣಿಯಾಗಿರುವಾಗ, ನೋವಿನಿಂದಲೂ ಕೂಡಿರುವಾಗ ಕಾಷಾಯವಸ್ತ್ರ ಕಂಡು ಬೇಟೆಗಾರನಿಗೆ ಜೀವತೆಗೆಯದೆ, ಜೀವದಾನ ಮಾಡಿತು. ಅಂತಹುದರಲ್ಲಿ ಬೋಧಿಸತ್ವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ, ದಶಬಲಧಾರಿಗಳು, ಲೋಕಶ್ರೇಷ್ಠರು, ಲೋಕನಾಥರು, ಸರ್ವಸುಖ್ಯಾತಿವುಳ್ಳವರು, ಅರಹಂತರು, ಸಮ್ಮಾಸಂಬುದ್ಧರು ಆಗಿರುವ ಕಸ್ಸಪ ಬುದ್ಧರಿಗೆ ಗೌರವಿಸುವುದಿರಲಿ, ಅವರನ್ನು ನಿಂದಿಸಿದರು. ಹೀಗೇಕಾಯಿತು? ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (138)

ಓ ಮಹಾರಾಜ, ನೀವು ಈವರೆಗೆ ಹೇಳಿದ್ದು ಭಗವಾನರಿಂದಲೇ ಬಂದಿದೆ ಮತ್ತು ಜ್ಯೋತಿಪಾಲ ಬ್ರಾಹ್ಮಣರು ಕಹಿಯಾದ ಮಾತುಗಳಿಂದ ವ್ಯರ್ಥ ಭಿಕ್ಷು ಎಂದು ಕಸ್ಸಪ ಬುದ್ಧ ಭಗವಾನರಿಗೆ ನುಡಿದರು. ಆದರೆ ಅವರು ಹಾಗೆ ಮಾಡಿದ್ದಕ್ಕೆ ಕಾರಣವೇನೆಂದರೆ ಅವರ ಹುಟ್ಟು ಮತ್ತು ಕುಲದ ಪರಿಸರವೇ ಕಾರಣವಾಗಿತ್ತು. ಅವರ ವಂಶವು ಅಶ್ರದ್ಧಾಳುಗಳಿಂದ ಕೂಡಿತ್ತು. ಅವರಿಗೆ ಶ್ರದ್ಧೆಯಿರಲಿಲ್ಲ, ಅವರ ತಾಯಿ-ತಂದೆ, ಸೋದರ ಸೋದರಿಯರು, ಸೇವಕ, ಸೇವಕಿಯರು ಇವರೆಲ್ಲರೂ ಸಹಾ ಬ್ರಹ್ಮನ ಆರಾಧಕರಾಗಿದ್ದರು. ಹಾಗಿದ್ದ ಅವರ ಕುಲದಲ್ಲಿ ಬ್ರಾಹ್ಮಣರೇ ಶ್ರೇಷ್ಠರು ಹಾಗು ಗೌರವಾರ್ಹ ವ್ಯಕ್ತಿಗಳಾಗಿದ್ದರು. ಹೀಗಾಗಿ ಅವರು ಗೃಹಸ್ಥ ಜೀವನವನ್ನು ತೊರೆದವರನ್ನು ಕಂಡರೆ ನಿಂದಿಸುತ್ತಿದ್ದರು. ಘಟಿಕಾರನೆಂಬ ಕುಂಬಾರನು ಜ್ಯೋತಿಪಾಲನಿಗೆ ಭಗವಾನರಿಗೆ ಬೇಟಿಯಾಗುವಂತೆ ಆಹ್ವಾನಿಸಿದಾಗ ಆ ಬೋಳುತಲೆಯವರನ್ನು ನಿಷ್ಪ್ರಯೋಜಕ ಭಿಕ್ಖುಗಳ ಭೇಟಿಯಲ್ಲಿ ಏನು ಒಳಿತಿದೆ? ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಓ ಮಹಾರಾಜ, ಅಮೃತವನ್ನು ಸಹಾ ವಿಷದೊಂದಿಗೆ ಬೆರೆಸಿದಾಗ ಅದು ಹುಳಿಯಾಗುತ್ತದೆ, ಹಾಗೆಯೇ ತಂಪಾದ ನೀರು ಸಹಾ ಅಗ್ನಿಯ ಸಂಪರ್ಕಕ್ಕೆ ಬಂದಾಗ ಅದು ಬಿಸಿಯಾಗುತ್ತದೆ. ಹೀಗಿರುವಾಗ ಜ್ಯೋತಿಪಾಲ ಬ್ರಾಹ್ಮಣ, ಬ್ರಾಹ್ಮಣರ, ಅಶ್ರದ್ಧಾಳುಗಳ ಕುಟುಂಬದಲ್ಲಿ ಹುಟ್ಟಿ, ಬೆಳೆದುದರಿಂದಲೇ ಹಾಗೆ ವತರ್ಿಸಿದರು. ಮತ್ತೆ ಮಹಾರಾಜ, ಹೇಗೆ ಬೃಹತ್ ಪ್ರಜ್ವಲಿಸುವ ಅಗ್ನಿಯು ಸಹಾ ನೀರಿನ ಸಂಪರ್ಕಕ್ಕೆ ಬಂದಾಗ ಹೇಗೆ ಶಾಂತವಾಗುವುದೋ, ಅದರ ದಿವ್ಯ ಪ್ರಕಾಶತೆ ಕುಂದಿಹೋಗುವುದೋ, ಕರಕಲಾಗಿ ಹೋಗುವುದೋ, ಹಾಗೆಯೇ ಜ್ಯೋತಿಪಾಲರು ಅಪಾರ ಪುಣ್ಯಶಾಲಿಗಳಾಗಿದ್ದರೂ, ಶ್ರದ್ಧೆಯಿಂದಿದ್ದರು, ಅಪಾರ ಜ್ಞಾನಿಗಳಾಗಿದ್ದರೂ ಸಹಾ ಅಶ್ರದ್ಧಾಳುಗಳ ವಂಶದಲ್ಲಿ, ಹುಟ್ಟಿದ್ದರಿಂದಾಗಿ ಶ್ರದ್ಧಾರಹಿತರಾಗಿ, ಅಂಧರಾಗಿ ತಥಾಗತರಿಗೆ ಹೀಗೆ ಹೇಳಿದರು. ಆದರೆ ಅವರು ಹೊರಟನಂತರ, ಜ್ಯೋತಿಪಾಲರಿಗೆ ಬುದ್ಧರ ಸದ್ಗುಣಗಳು ಅರಿವಾಗಿ ಅವರ ಆಪ್ತಸೇವಕರಾದರು ಹಾಗು ಅನಿಕೇತನರಾಗಿ, ಸಂಘವನ್ನು ಸೇರಿ, ಪಂಚಅಭಿಜ್ಞಾವನ್ನು ಹಾಗು ಅಷ್ಟಸಮಾಪತ್ತಿಗಳನ್ನು ಸಹಾ ಪ್ರಾಪ್ತಿಮಾಡಿ ಬ್ರಹ್ಮಲೋಕಗಾಮಿಯಾದರು.

ಬಹು ಚೆನ್ನಾಗಿ ಪರಿಹರಿಸಿದಿರಿ ನಾಗಸೇನ, ಅದು ಹೀಗೆ ಇದೆ ಮತ್ತು ನಿಮ್ಮ ಹೇಳಿಕೆಯನ್ನು ನಾನು ಒಪ್ಪುತ್ತೇನೆ.


7. ಘಟಿಕಾರನ ಬಗ್ಗೆ ಪ್ರಶ್ನೆ


ಭಂತೆ ನಾಗಸೇನ, ಇದು ಸಹಾ ಭಗವಾನರಿಂದಲೇ ಹೇಳಲಾಗಿದೆ: ಘಟಿಕಾರ ಕುಂಬಾರನ ಸ್ಥಳ ಮಾತ್ರ ಮೂರು ಮಾಸದ ತನಕ ತೆರೆದ ಆಕಾಶವಾಗಿತ್ತು ಮತ್ತು ಯಾವುದೇ ಮಳೆ ಬೀಳಲಿಲ್ಲ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಕಸ್ಸಪ ತಥಾಗತರ ಕುಟಿಯ ಮೇಲೆ ಮಳೆಯು ಬಿತ್ತು. ಭಂತೆ ನಾಗಸೇನ, ತಥಾಗತರ ಕುಟಿಯ ಮೇಲೆ ಮಳೆ ಹೇಗೆ ತಾನೆ ಬಿತ್ತು! ಅವರ ಪುಣ್ಯವು ಅಳೆಯಲಾಗದ್ದು, ಆದರೂ ಆ ಕುಟೀರವು ನೆನೆದಿದ್ದೇಕೆ? ತಥಾಗತರಿಗೆ ಅದನ್ನು ತಡೆಯುವ ಶಕ್ತಿಯಿದೆಯಲ್ಲವೆ? ಎಂದು ಒಬ್ಬರು ಯೋಚಿಸಬಹುದು. ಈಗ ಹೇಳಿ ನಾಗಸೇನರವರೇ, ಘಟಿಗಾರನ ಮನೆ ನೆನೆಯಲಿಲ್ಲವೆಂದರೆ, ತಥಾಗತರ ಕುಟೀರವು ನೆನೆಯಿತು ಎಂದರೆ ಅದು ಸುಳ್ಳಾಗುತ್ತದೆ. ಅದೇ ಸತ್ಯವಾದರೆ ಘಟಿಕಾರ ಮನೆ ನೆನೆಯದಿದ್ದುದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ, ಅದನ್ನು ನೀವೇ
ಪರಿಹರಿಸಬೇಕು. (139)

ಓ ಮಹಾರಾಜ, ನಿಮ್ಮ ಎರಡೂ ಹೇಳಿಕೆಗಳು ಸರಿಯಾಗಿಯೇ ಇವೆ. ಘಟಿಗಾರನು ಒಳ್ಳೆಯ ಮನುಷ್ಯನಾಗಿದ್ದನು, ಸುಂದರ ಚಾರಿತ್ರ್ಯದವನು, ಆಳವಾದ ಪುಣ್ಯಶಾಲಿ, ಆತನು ತನ್ನ ವೃದ್ಧ ಹಾಗು ಅಂಧರಾಗಿದ ತಂದೆ-ತಾಯಿಯರಿಗೆ ಸಲಹುತ್ತಿದ್ದನು. ಆತನು ಹೊರಗೆ ಇದ್ದಾಗ, ಜನರು ಆತನಲ್ಲಿ ಕೇಳದೆ ಆತನ ವಾಸಸ್ಥಳದ ಛಾವಣಿ ತೆಗೆದುಕೊಂಡು ತಥಾಗತರ ಕುಟೀರ ನಿಮರ್ಿಸಿದರು. ನಂತರ ಅಚಲ, ಸ್ಥಿರವಾಗಿದ್ದ ಆತನ ಛಾವಣಿಯು ಹೀಗೆ ತೆರೆದು ಹಾಕಿದಾಗ ಅದನ್ನು ಆತನು ಈ ರೀತಿ ಯೋಚಿಸಿದನು: ತಥಾಗತರು, ಲೋಕನಾಯಕರು, ನನ್ನಲ್ಲಿ ನಂಬಿಕೆ ಇಟ್ಟಿದ್ದಾರೆ ಹೀಗೆ ಯೋಚಿಸಿ ಅಪಾರ ಪುಣ್ಯಗಳಿಸಿ ಅದರ ಫಲವನ್ನು ಆ ಜನ್ಮದಲ್ಲೇ ಪಡೆದನು.

ಓ ಮಹಾರಾಜ, ತಥಾಗತರು ತತ್ಕಾಲಿಕ ಅಸೌಕರ್ಯತೆಗಳಿಂದ ವಿಚಲಿತರಾಗುವುದಿಲ್ಲ (ಮಳೆ). ಓ ಮಹಾರಾಜ, ಹೇಗೆ ಸಿನೆರು ಪರ್ವತಗಳ ರಾಜ, ಚಲಿಸಲಾರನೊ, ಅಪಾರ ಚಂಡಮಾರುತಗಳಿಗೂ ಅಲುಗಾಡುವುದಿಲ್ಲವೋ, ಹೇಗೆ ಮಹಾ ಸಮುದ್ರವು ಮಹಾ ಜಲಕ್ಕೆ ವಾಸಸ್ಥಳವೋ, ಅದು ತುಂಬದಿರುವುದರಿಂದಾಗಿ ಕ್ಷೊಭೆ ತಾಳುವುದಿಲ್ಲವೋ, ಅದೇರೀತಿಯಾಗಿ ತಥಾಗತರು ಅಸೌಕರ್ಯಕ್ಕೆ ವಿಚಲಿತರಾಗುವುದಿಲ್ಲ.

ಮತ್ತು ಜನಸಮೂಹಕ್ಕೆ ತಥಾಗತರ ಕುಟೀರದ ಮೇಲೆ ಮಳೆ ಬೀಳುವುದು ಅಂತಹ ಪರಿಗಣನೀಯ ಅಂಶವಲ್ಲ, ಎರಡು ಪರಿಸ್ಥಿತಿಗಳಲ್ಲಿ ತಥಾಗತರು ತಮ್ಮ ಅತೀಂದ್ರಿಯ ಶಕ್ತಿಯನ್ನು ಸೌಕರ್ಯಕ್ಕೆ ಬಳಸಿಕೊಳ್ಳುವುದಿಲ್ಲ. ಯಾವುದದು ಎರಡು? ಮಾನವರಾಗಲಿ ಅಥವಾ ದೇವತೆಗಳಾಗಲಿ ತಮ್ಮ ಜನ್ಮಗಳಿಂದ ಅಥವಾ ದುಃಖದಿಂದ ಪಾರಾಗಲು ಬುದ್ಧರಿಗೆ ಪರಿಕರಗಳನ್ನು (ಆಹಾರ, ವಸತಿ) ನೀಡುವರು. ಅದಕ್ಕಾಗಿ ತಥಾಗತರು ಅತೀಂದ್ರಿಯ ಬಲಗಳನ್ನು ಪ್ರಯೋಗಿಸಿದರೆ ಜನರು ಈ ರೀತಿ ಹೇಳುವರು. ಅವರು ಪವಾಡಗಳನ್ನು ಪ್ರದಶರ್ಿಸಿ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಓ ಮಹಾರಾಜ, ಸಕ್ಕ ದೇವೇಂದ್ರ ಅಥವಾ ಬ್ರಹ್ಮ ಸಹಾ ಕುಟೀರವನ್ನು ಒಣಗಿಸಬಹುದು, ಆದರೆ ಆಗಲೂ ಸಹಾ ಜನರು ಹೀಗೆ ಹೇಳಬಹುದು ಈ ಬುದ್ಧರು ತಮ್ಮ ಕೌಶಲ್ಯದಿಂದ ಮರಳುಮಾಡಿ ಜಗತ್ತನ್ನು ಅಧಿಪತ್ಯ ನಡೆಸುತ್ತಿರುವರು. ಆದ್ದರಿಂದಲೇ ಅನವಶ್ಯಕವಾಗಿ ಅಂತಹ ಕ್ರಿಯೆಗಳನ್ನು ಅವರು ಮಾಡುವುದಿಲ್ಲ. ಓ ಮಹಾರಾಜ, ತಥಾಗತರು ಯಾವುದೇ ಲಾಭವನ್ನು ಕೇಳುವುದಿಲ್ಲ, ಆದ್ದರಿಂದಲೇ ಅವರು ಆಕ್ಷೇಪಣೆರಹಿತರಾಗಿ, ಅದನ್ನೇ ಎತ್ತಿಹಿಡಿದಿದ್ದಾರೆ.

ಬಹುಚೆನ್ನಾಗಿ ಪರಿಹರಿಸಿದಿರಿ ಭಂತೆ ನಾಗಸೇನ, ನಿಮ್ಮ ಅಭಿಪ್ರಾಯವನ್ನು ನಾನು ಸಹಾ ಒಪ್ಪುತ್ತೇನೆ.


8. ಬ್ರಾಹ್ಮಣ - ರಾಜ ಕುರಿತ ಪ್ರಶ್ನೆ


ಭಂತೆ ನಾಗಸೇನ, ತಥಾಗತರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ನಾನು ಬ್ರಾಹ್ಮಣನಾಗಿದ್ದೇನೆ, ಸದಾ ಯೋಗದಲ್ಲಿ ತಲ್ಲೀನನಾಗಿರುತ್ತೇನೆ. ಆದರೆ ಇನ್ನೊಂದೆಡೆ ಹೀಗೆ ಹೇಳಿದ್ದಾರೆ: ಸೇಲ ನಾನು ರಾಜನಾಗಿದ್ದೇನೆ. ಭಂತೆ ನಾಗಸೇನ, ಭಗವಾನರು ಬ್ರಾಹ್ಮಣರಾಗಿದ್ದಲ್ಲಿ ಅವರು ರಾಜನಾಗಿರುವುದು ಸುಳ್ಳಾಗುತ್ತದೆ, ಅವರು ರಾಜರೇ ಆಗಿದ್ದ ಪಕ್ಷದಲ್ಲಿ ಬ್ರಾಹ್ಮಣನೆನ್ನುವುದು ಸುಳ್ಳಾಗುತ್ತದೆ. ಅವರು ಬ್ರಾಹ್ಮಣರಾಗಿದ್ದಾರೆ ಅಥವಾ ಕ್ಷತ್ರಿಯರಾಗಿದ್ದಾರೆ, ಒಂದೇ ಜನ್ಮದಲ್ಲಿ ಎರಡು ಕುಲಕ್ಕೆ ಸೇರುವುದಿಲ್ಲ, ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ನೀವೇ ಪರಿಹರಿಸಬೇಕು.(140)

ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಅವರು ಬ್ರಾಹ್ಮಣರು ಹಾಗು ಕ್ಷತ್ರಿಯರು ಹೇಗೆ ಆಗಿದ್ದಾರೆ ಎಂಬುದಕ್ಕೆ ಕಾರಣಗಳಿವೆ.

ಭಂತೆ ನಾಗಸೇನ, ಅದನ್ನು ತಿಳಿಸುವಿರಾ?

ಈ ಎಲ್ಲಾ ಅಕುಶಲ ಸ್ಥಿತಿಗಳು ಪುಣ್ಯವನ್ನು ಉತ್ಪಾದಿಸುವುದಿಲ್ಲ, ಅಂತಹವುಗಳನ್ನೆಲ್ಲಾ ತಥಾಗತರು ಧಮಿಸಿದ್ದಾರೆ, ತ್ಯಜಿಸಿದ್ದಾರೆ, ದೂರೀಕರಿಸಿದ್ದಾರೆ, ಬುಡಸಮೇತ ಕಿತ್ತುಹಾಕಿದ್ದಾರೆ, ನಾಶಗೊಳಿಸಿದ್ದಾರೆ, ಅಂತ್ಯಗೊಳಿಸಿದ್ದಾರೆ, ಇಲ್ಲದಂತೆ ಮಾಡಿದ್ದಾರೆ ಮತ್ತು ನಿರೋಧವನ್ನುಂಟು ಮಾಡಿದ್ದಾರೆ. ಆದ್ದರಿಂದಲೇ ಅವರು ತಮ್ಮನ್ನು ಬ್ರಾಹ್ಮಣ ಎನ್ನುತ್ತಾರೆ. ಓ ಮಹಾರಾಜ, ಬ್ರಾಹ್ಮಣನು ತಡವರಿಸುವಿಕೆಗೆ, ಸಂದೇಹಕ್ಕೆ, ಗೊಂದಲಕ್ಕೆ, ಮಿಥ್ಯಾಜ್ಞಾನಕ್ಕೆ ಅತೀತನಾಗಿದ್ದಾನೆ, ಇವೆಲ್ಲಾ ತಥಾಗತರು ಮಾಡಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನು ಎಲ್ಲಾರೀತಿಯ ಎಲ್ಲಾ ವರ್ಗದ ಭವದಿಂದ (ಸಂಭವಿಸುವಿಕೆಯಿಂದ) ಪಾರಾಗಿದ್ದಾನೆ, ಪೂರ್ಣವಾಗಿ ಅಕುಶಲದಿಂದ ಪಾರಾಗಿ, ಕಲೆರಹಿತರಾಗಿದ್ದಾನೆ, ತನ್ನಲ್ಲೇ ಅವಲಂಬಿತನಾಗುತ್ತಾನೆ ಹಾಗು ತಥಾಗತರು ಇವೆಲ್ಲಾ ಸಾಧಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣ ಎಂದರೆ ಯಾರು ಪರಮೋಚ್ಛ ಸ್ಥಿತಿಯನ್ನು ವೃದ್ಧಿಗೊಳಿಸಿರುವನೋ ಅತ್ಯುನ್ನತೆಯನ್ನು ಮತ್ತು ಪರಮ ಉತ್ಕೃಷ್ಟವಾದುದರಲ್ಲಿ ಶ್ರೇಷ್ಠತೆಯನ್ನು ಮತ್ತು ಚಿತ್ತದಲ್ಲಿ ಅತ್ಯಂತ ಮಹತ್ವತೆಯನ್ನು ಪ್ರಾಪ್ತಿಗೊಳಿಸಿರುವರೋ, ಅವರೇ ತಥಾಗತರು. ಇವೆಲ್ಲಾ ಸಾಧಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಧಮ್ಮವಿನಯದ ಸನಾತನ ಸಂಪ್ರದಾಯ ಪಾಲಿಸುವುದು, ದಾನ, ಇಂದ್ರಿಯನಿಗ್ರಹ, ಸ್ವನಿಯಂತ್ರಣ, ಪ್ರಯತ್ನತತ್ಪರನಾಗಿರುವುದು. ತಥಾಗತರು ಇವೆಲ್ಲವನ್ನೂ ಪಾಲಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಧ್ಯಾನದ ಪರಮಸುಖದಲ್ಲಿ ತಲ್ಲೀನನಾಗಿರುವವನು ಹಾಗು ತಥಾಗತರು ಹೀಗಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಯಾರು ಜನ್ಮ, ಪುನರ್ಜನ್ಮಗಳ ಸರ್ವಜಾಲವನ್ನು ಅರಿತಿರುವರೋ ಅವರೇ ಭಗವಾನರು. ಅದನ್ನೆಲ್ಲಾ ಅರಿತಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ತಥಾಗತರಿಗೆ ಬ್ರಾಹ್ಮಣನೆಂಬ ನಾಮಧೇಯವನ್ನು ತಂದೆ-ತಾಯಿಗಳಾಗಲಿ, ಸೋದರ ಸೋದರಿಯರಾಗಲಿ, ಬಂಧು-ಮಿತ್ರರಾಗಲಿ, ಯಾವುದೇ ಗಣದ ಧಾಮರ್ಿಕ ಗುರುಗಳಾಗಲೀ, ಅಥವಾ ದೇವತೆಗಳಾಗಲಿ ನೀಡಿಲ್ಲ. ಏಕೆಂದರೆ ಅವರ ಮುಕ್ತಿಯು ಬುದ್ಧಭಗವಾನರ ಹೆಸರಿನಲ್ಲೇ ಆಗುತ್ತದೆ. ಯಾವಾಗ ಅವರು ಬೋಧಿವೃಕ್ಷದ ಬುಡದಲ್ಲಿ ಮಾರಸೈನ್ಯವನ್ನು ದೂರೀಕರಿಸಿದರೊ, ಪಾಪಯುತ ಅಕುಶಲ ಧರ್ಮಗಳನ್ನು ಧಮಿಸಿದರೋ ಮತ್ತು ಸರ್ವಜ್ಞತೆಯನ್ನು ಪ್ರಾಪ್ತಿ ಮಾಡಿದರೋ ಆ ಪರಮಜ್ಞಾನದ ಪಡೆಯುವಿಕೆಯಿಂದ, ಆ ಸತ್ಯದ ಗುರುತೇ ಬ್ರಾಹ್ಮಣ. ಆದ್ದರಿಂದಲೇ ತಥಾಗತರಿಗೆ ಬ್ರಾಹ್ಮಣ ಎನ್ನುತ್ತಾರೆ.


ಮತ್ತೆ ಓ ಮಹಾರಾಜ, ಯಾವ ಕಾರಣದಿಂದಾಗಿ ತಥಾಗತರನ್ನು ರಾಜನೆಂದು ಕರೆಯುತ್ತಾರೆ? ಓ ಮಹಾರಾಜ, ರಾಜನೆಂದರೆ ಜಗತ್ತನ್ನು ಆಳುತ್ತ ಮಾರ್ಗದಶರ್ಿ ಯಾಗಿರುವವನು ಮತ್ತು ಭಗವಾನರು ಧಮ್ಮದಿಂದಾಗಿ ದಶಸಹಸ್ರ ಲೋಕ ವ್ಯವಸ್ಥೆಯನ್ನು ಆಳುತ್ತಿದ್ದಾರೆ, ಅವರು ಇಡೀ ಮಾನವ ಮತ್ತು ದೇವತೆಗಳಿಗೆ ಮಾರ್ಗದಶರ್ಿಯಾಗಿದ್ದಾರೆ, ಜೊತೆಗೆ ಬ್ರಹ್ಮ ಮಾರರಿಗೂ ಸಹಾ, ಹಾಗೆಯೇ ಎಲ್ಲಾ ಸಮಣ ಬ್ರಾಹ್ಮಣರಿಗೂ ಸಹಾ ಮಾರ್ಗದಶರ್ಿಯಾಗಿರುವರು. ಆದ್ದರಿಂದಲೇ ತಥಾಗತರಿಗೆ ರಾಜನೆಂದು ಕರೆಯುವರು. ಓ ಮಹಾರಾಜ, ರಾಜನೆಂದರೆ ಯಾರು ಸಾಮಾನ್ಯ ಜನರಿಂದ ಉನ್ನತಮಟ್ಟಕ್ಕೆ ಏರಿರುತ್ತಾನೆ, ತನಗೆ ಸಂಬಂಧಪಟ್ಟವರಿಗೆಲ್ಲಾ ರಂಜಿಸುತ್ತಾನೆ, ಯಾರು ವಿರೋಧಿಸುತ್ತಾರೋ ಅವರು ಶೋಕಿಸುತ್ತಾರೆ, ಸಮ್ರಾಜ್ಯದ ರವಿಕವಚವನ್ನು ಉಚ್ಛಮಟ್ಟದಲ್ಲಿ ಏರಿಸುತ್ತಾನೆ, ಪರಿಶುದ್ಧವಾದ, ಕಲೆರಹಿತ ಮತ್ತು ಅದರ ಹಿಡಿಯು ದೃಢವಾದ ಮರದಿಂದಾಗಿರುತ್ತದೆ ಮತ್ತು ಅದಕ್ಕೆ ನೂರಾರು ಸಲಾಕೆಗಳಿರುತ್ತವೆ. ಇದೇ ಆತನ ಬೃಹತ್ ವೈಭೋಗಕ್ಕೆ ಮತ್ತು ಸತ್ಕೀತರ್ಿಗೆ ಸಂಕೇತವಾಗಿದೆ. ಮತ್ತೆ ಓ ಮಹಾರಾಜ, ಭಗವಾನರು ಸಹಾ ಮಾರಸೈನ್ಯವನ್ನು ಹಾಗು ಮಿಥ್ಯಾ ಸಿದ್ಧಾಂತಗಳನ್ನೆಲ್ಲಾ ಗೆದ್ದಿರುವರು, ಯಾರೆಲ್ಲರು ಅತ್ಯುತ್ತಮ ಧರ್ಮದಲ್ಲಿ ಆನಂದಿಸುವರೋ, ಉತ್ತಮಾಕಾಂಕ್ಷಿಗಳಾದ ದೇವ ಮತ್ತು ಮನುಷ್ಯರುಗಳ ಹೃದಯದಲ್ಲಿ ಆನಂದವುಕ್ಕಿಸಿ ರಂಜಿಸಿದ್ದಾರೆ, ದಶಸಹಸ್ರ ಲೋಕ ವ್ಯವಸ್ಥೆಗಳಿಗೆ ಉನ್ನತಿಗೇರಿಸಿದ್ದಾರೆ ಅವರ ಸಾರ್ವಭೌಮತ್ವದ ಸೂರ್ಯಕವಚವು ಪರಿಶುದ್ಧವಾಗಿ ಮತ್ತು ಕಲೆರಹಿತವಾಗಿ ವಿಮುಕ್ತಿಯ ಶ್ವೇತತನದಿಂದ ಕೂಡಿದೆ. ಜೊತೆಗೆ ಅದರ ನೂರಾರು ಸಲಾಕೆಗಳು ಶ್ರೇಷ್ಠ ಪ್ರಜ್ಞಾವನ್ನು ಸೂಚಿಸುತ್ತದೆ ಮತ್ತು ಅದರ ಹಿಡಿಯು ದೃಢವಾಗಿ ಮತ್ತು ಬಲಿಷ್ಠವಾಗಿದೆ. ಇದು ಅವರ ಬೃಹತ್ ಸುಖ್ಯಾತಿಯ ಮತ್ತು ಮಹಾಭವ್ಯತೆಯ ಸಂಕೇತವಾಗಿದೆ. ಇದು ಸಹಾ ತಥಾಗತರು ರಾಜನೆನ್ನುವುದಕ್ಕೆ ಕಾರಣೀಯ ಅಂಶವಾಗಿದೆ. ಒಬ್ಬ ರಾಜನು ಸಮೂಹಗಳಿಂದ ಪೂಜ್ಯನಿಯತೆಗೆ ಒಳಪಡುತ್ತಾನೆ. ಅವರೆಲ್ಲರು ಆತನ ಬಳಿಗೆ ಬಂದು ಗೌರವಾರ್ಪಣೆ ಮಾಡುತ್ತಾರೆ. ಹಾಗೆಯೇ ಭಗವಾನರು ಸಹಾ ಅಸಂಖ್ಯಾತ ಜೀವಿಗಳಿಂದ ಪೂಜ್ಯನಿಯರಾಗಿದ್ದಾರೆ. ಅವರಲ್ಲಿ ದೇವತೆಗಳು ಹಾಗು ಮಾನವರೂ ಇದ್ದಾರೆ. ಯಾರೆಲ್ಲರೂ ಅವರ ಬಳಿಗೆ ಬರುತ್ತಾರೋ ಅವರೆಲ್ಲರೂ ಗೌರವ ಪೂಜೆ ಮಾಡುತ್ತಾರೆ. ಇದು ಸಹಾ ಅವರು ರಾಜನೆನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜನು ಶ್ರಮ ಸೇವಕರಿಂದ ಸಂತುಷ್ಟನಾದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡಿ ಅವರಿಗೆ ಸಂತೋಷಪಡಿಸುತ್ತಾನೆ. ಅದೇರೀತಿಯಲ್ಲಿ ಭಗವಾನರು ಸಹಾ ತ್ರಿಕರಣಪೂರ್ವಕವಾಗಿ ಭಿಕ್ಷುಗಳು/ಉಪಾಸಕರು ಪ್ರಯತ್ನಶಾಲಿಗಳಾಗಿ ಇದ್ದರೆ, ಭಗವಾನರು ಆನಂದದಿಂದ ಪರಮಶ್ರೇಷ್ಠ ಉಡುಗೊರೆಯಾದ ದುಃಖವಿಮುಕ್ತಿ ನೀಡುತ್ತಿದ್ದರು. ಅದು ಪ್ರಾಪಂಚಿಕ ಉಡುಗೊರೆಗಳಿಂದ ಎಷ್ಟೋ ಆಚೆಗಿನದು. ಇದು ಸಹಾ ಅವರನ್ನು ರಾಜರೆನ್ನುವುದಕ್ಕೆ ಕಾರಣೀಯ ಅಂಶವಾಗಿದೆ. ರಾಜರು ಸಾಮಾನ್ಯವಾಗಿ ತಪ್ಪಿತಸ್ಥರಿಗೆ ಬಹಿಷ್ಕಾರ, ದಂಡ, ಮೊದಲಾದ ಶಿಕ್ಷೆಗಳನ್ನು ನೀಡುವರು. ಅದೇರೀತಿ ತಥಾಗತರು ಸಹಾ ವಿನಯದ ನಿಯಮ ಉಲ್ಲಂಘಿಸಿ ಪಾಪ ಅಥವಾ ತಪ್ಪು ಮಾಡಿದವರನ್ನು, ನಾಚಿಕೆ ಇಲ್ಲದವರನ್ನು, ಅತೃಪ್ತರನ್ನು ಕಡೆಗಣಿಸಲಾಗುತ್ತಿತ್ತು. ಅನುಗ್ರಹ ತಪ್ಪಿಸಲಾಗುತ್ತಿತ್ತು ಮತ್ತು ಹೊರಹಾಕಲಾಗುತ್ತಿತ್ತು. ಇದು ಸಹಾ ತಥಾಗತರು ರಾಜರೆನ್ನಲು ಸಾಕ್ಷಿಯಾಗಿದೆ. ರಾಜನು ತಲೆತಲಾಂತರದಿಂದ ಬಂದಂತಹ ನೀತಿ, ಕಟ್ಟಳೆಗಳನ್ನು, ಕಾನೂನುಗಳನ್ನು ಪಾಲಿಸುತ್ತ ಪರರಿಗೆ ಆ ಕಾಯಿದೆ ಕಾನೂನುಗಳನ್ನು ವಿಧಿಸುತ್ತಿರುತ್ತಾನೆ. ಹಾಗೆಯೇ ಜನರಿಗೆ ಪ್ರಿಯರಾಗಿ, ಸತ್ಯಧಮ್ಮದಿಂದ ರಾಜ್ಯಭಾರ ನಡೆಸುತ್ತಾರೆ. ತನ್ನ ಸಾಮ್ರಾಜ್ಯ ವಿಸ್ತರಿಸುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ಸಹಾ ಹಿಂದಿನ ಬುದ್ಧರ ಹಾಗೇ ಸನಾತನ ಕ್ರಮದಿಂದ, ಧಮ್ಮ, ವಿನಯಗಳ ನಿಯಮಗಳನ್ನು ಹಾಕುತ್ತಾರೆ ಮತ್ತು ಧಮ್ಮಚಕ್ರವತರ್ಿಯಾಗಿ ಈ ಲೋಕಗಳನ್ನು ಆಳುತ್ತಾರೆ. ಅವರು ಸಹಾ ಮಾನವರಿಗೆ ಮತ್ತು ದೇವತೆಗಳಿಗೆ ಪ್ರಿಯರಾಗಿ ತಮ್ಮ ಸತ್ಯತೆಯ ಪ್ರೇರಣ ಶಕ್ತಿಯಿಂದಾಗಿ, ಚಾಲನಾಬಲವಾಗಿ ಈ ಲೋಕದಲ್ಲಿ ದೀರ್ಘಕಾಲ ಧಮ್ಮ ಉಳಿಯುವಂತೆ ಮಾಡುತ್ತಾರೆ. ಇದು ಸಹಾ ತಥಾಗತರು ರಾಜನೆನ್ನಲು ಪ್ರಬಲ ಕಾರಣೀಯ ಅಂಶವಾಗಿದೆ.


ಓ ಮಹಾರಾಜ, ಹೀಗೆ ತಥಾಗತರು ರಾಜರೆನ್ನಲು ಹಾಗೆಯೇ ಬ್ರಾಹ್ಮಣರೆನ್ನಲು ಹಲವಾರು ಕಾರಣಗಳಿವೆ. ಅರ್ಹ ಭಿಕ್ಖುವು ಈ ಕಲ್ಪದಲ್ಲೇ ಏಣಿಕೆಗೆ ಸಿಗುವುದು ಕಷ್ಟಕರವಾಗಿದೆ. ಇದರ ಬಗ್ಗೆ ನಾನು ಇನ್ನೂ ಏಕೆ ವಿಸ್ತರಿಸಬೇಕು? ನನ್ನ ಸಂಕ್ಷಿಪ್ತ ವಿವರಣೆ ಒಪ್ಪಿಗೆಯೇ?
ಖಂಡಿತ ಭಂತೆ ನಾಗಸೇನ, ನಿಮ್ಮ ಅಭಿಪ್ರಾಯಗಳನ್ನು ನಾನು ಒಪ್ಪಿದ್ದೇನೆ.



9. ಗಾಥಾಭಿಗೀತ ಭೋಜನ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಗಾಥಾಭಿಗೀತೆಗೆ ಉಡುಗೊರೆಯೇ? ಅಂತಹ ದಾನ ನಾನು ಸ್ವೀಕರಿಸುವುದಿಲ್ಲ. ಯಾರೆಲ್ಲರೂ ಸತ್ಯವನ್ನು ಕಂಡಿರುವರೋ ಅವರು ಇದೇ ಅನುಷ್ಠಾನದಲ್ಲಿರುವರು, ಬುದ್ಧರು ಪ್ರತಿಫಲಕ್ಕಾಗಿ ಗಾಥೆ ನುಡಿಯುವುದಿಲ್ಲ. ಪ್ರತಿಕಾಲಕ್ಕೂ, ಪ್ರತಿಸಲವು ಸತ್ಯ ಪ್ರಕಟಿಸುವಾಗಲು ಇದೇ ಅವರ ಸ್ಥಿರಚಾರಿತ್ರ್ಯವಾಗಿರುತ್ತದೆ.

ಆದರೆ ಮತ್ತೊಂದೆಡೆ ಭಗವಾನರು ಧಮ್ಮ ಬೋಧಿಸುವಾಗ, ದಾನದ ಮಹತ್ವದಿಂದಲೇ ಪ್ರಾರಂಭಸುತ್ತಾರೆ. ನಂತರ ಶೀಲದ ಲಾಭಗಳನ್ನು ಹೇಳುತ್ತಾರೆ, ಹೀಗಾಗಿ ದೇವತೆಗಳು ಮತ್ತು ಮಾನವರು ಆ ಬೋಧನೆಗಳನ್ನು ಕೇಳಿ ಭಗವಾನರಿಗೆ ಮತ್ತು ಸಂಘಕ್ಕೆ ದಾನಗಳನ್ನು ನೀಡುತ್ತಾರೆ. ಈಗ ನಾಗಸೇನರವರೇ, ಭಗವಾನರು ಗಾಥೆಗಳನ್ನು ಧಮ್ಮ ಬೋಧನೆಗಳನ್ನು ನುಡಿದ ನಂತರ ದಾನ ಸ್ವೀಕರಿಸುವುದಿಲ್ಲವೆಂದರೆ, ಅವರು ದಾನದ ಬಗ್ಗೆಯ ಮೊದಲು ಬೋಧಿಸುವುದು ತಪ್ಪಾಗುತ್ತಾದೆ. ಹಾಗಲ್ಲದೆ ಅವರು ದಾನದ ಬಗ್ಗೆ ಒತ್ತಿ ಹೇಳುವುದು ತಪ್ಪಿಲ್ಲದಿದ್ದರೆ, ಅವರ ಬೋಧನೆಯ ನಂತರ ದಾನ ಸ್ವೀಕರಿಸುವುದಿಲ್ಲ ಎನ್ನುವುದು ಸುಳ್ಳಾಗುತ್ತದೆ. ಏಕೆಂದರೆ ಯಾರಾದರೂ ದಾನಕ್ಕೆ ಅರ್ಹರಾಗಿದ್ದು, ಉಪಾಸಕರಿಗೆ ಅದರ ಫಲಗಳನ್ನು ಹೇಳಿದರೆ, ಅವರು ಅದನ್ನು ಆಲಿಸಿ, ಸಂತಸಗೊಂಡು, ಮತ್ತೆ ಮತ್ತೆ ದಾನ ನೀಡುವರು ಮತ್ತು ಯಾರು ದಾನದಲ್ಲಿ ಅನಂದಿಸುವರೋ ಅವರು ಸಹಾ ತಮ್ಮ ಗಾಥೆಗಳಿಂದ ದಾನ ಸಂಪಾದಿಸುವುದರಲ್ಲಿ ಆನಂದಿಸುತ್ತಾರೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ಇದನ್ನು ನೀವೇ ಪರಿಹರಿಸಬೇಕು. (141)

ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳು ಭಗವಾನದಿಂದಲೇ ನುಡಿಯಲ್ಪಟ್ಟಿವೆ. ಮತ್ತು ಅವರು ತಮ್ಮ ಬೋಧನೆಯಲ್ಲಿ ದಾನಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದರು. ಏಕೆಂದರೆ ಅದು ಎಲ್ಲಾ ತಥಾಗತರ ಸಂಪ್ರದಾಯವಾಗಿದೆ. ಮೊದಲ ದಾನದ ಬೋಧನೆಯಿಂದ ಶ್ರೋತುಗಳ ಮನಸ್ಸು ಅದರಲ್ಲಿ ಬಾಗುತ್ತದೆ ಮತ್ತು ನಂತರ ಶೀಲಾದಿ ಸತ್ಯಗಳ ಕಡೆ ಅವರು ಒಲವು ತೋರಿಸುತ್ತಾರೆ. ಇದು ಹೇಗೆಂದರೆ ಓ ಮಹಾರಾಜ, ರಾಜನು ಮೊದಲು ತನ್ನ ಕುಮಾರರನ್ನು ಆಟವಾಡಲು ನಾನಾರೀತಿಯ ಆಟಿಕೆಗಳನ್ನು ನೀಡುತ್ತಾನೆ, ನೇಗಿಲ ಗೊಂಬೆ, ಘಟಿಕಂ ಗೊಂಬೆ (ಬೆಕ್ಕು), ಗಾಳಿಯಂತ್ರದ ಗೊಂಬೆ, ಎಲೆಗಳ ಅಳತೆಗಳು, ವಾಹನಗಳ ಗೊಂಬೆಗಳು, ಬಿಲ್ಲಬಾಣಗಳ ಗೊಂಬೆಗಳನ್ನು ನೀಡುತ್ತಾನೆ. ನಂತರ ಅವರಿಗೆ ಪ್ರತ್ಯೇಕವಾದ ಕೆಲಸಗಳಲ್ಲಿ ತೊಡಗಿಸುತ್ತಾನೆ. ಅಥವಾ ವೈದ್ಯನೊಬ್ಬನು ಮೊದಲು ರೋಗಿಗಳಿಗೆ ಮೊದಲು ಎಣ್ಣೆಯನ್ನು ಕುಡಿಸುತ್ತಾನೆ. ಹೀಗೆ ನಾಲ್ಕೈದು ದಿನಗಳ ನಂತರ ಅವರು ಬಲಿಷ್ಠರನ್ನಾಗಿಸಿ ಅವರ ಶರೀರವನ್ನು ಮೃದುವಾಗಿಸುತ್ತಾನೆ ಮತ್ತು ನಂತರ ಅವರಿಗೆ ಶುದ್ಧೀಕರಣ ಕ್ರಿಯೆ ಮಾಡಿಸುತ್ತಾನೆ. ಓ ಮಹಾರಾಜ, ಶ್ರದ್ಧಾನುಯಾಯಿಗಳು ಅಪಾರವಾಗಿ ದಾನ ನೀಡುತ್ತಾರೆ. ಹೀಗಾಗಿ ಅವರ ಹೃದಯವು ಮೃದುಗೊಳ್ಳುತ್ತದೆ. ಕೋಮಲವಾಗುತ್ತದೆ, ಪರಿಣಾಮಕಾರಿಯಾಗಿರುತ್ತದೆ. ತಾವು ನೀಡಿದ ದಾನಗಳ ಸಹಾಯದಿಂದಲೇ ಅವರು ಆಚೆಗಿನ ದಡವನ್ನು ದಾಟುತ್ತಾರೆ. ದಾನದಿಂದಲೇ ಸಹಾಯ ಪಡೆಯುತ್ತಾರೆ. ಈ ರೀತಿಯಾಗಿ ಬುದ್ಧರು ಯಾವುದೇ ತಪ್ಪು ಸಂದೇಶ ವ್ಯಕ್ತಪಡಿಸಲಿಲ್ಲ.


ಭಂತೆ ನಾಗಸೇನ, ನೀವು ವ್ಯಕ್ತಪಡಿಸುವಿಕೆ (ವಿಞ್ಞತ್ತಿ) ಬಗ್ಗೆ ಹೇಳಿದಿರಿ, ಏನಿದು ವಿಞ್ಞತ್ತಿ? (142)


ಓ ಮಹಾರಾಜ, ಎರಡು ಬಗೆಯ ವಿಞ್ಞತ್ತಿಗಳಿವೆ, ಕಾಯವಿನ್ನತ್ತಿ (ಶಾರೀರಿಕ ವ್ಯಕ್ತತೆ) ಮತ್ತು ವಚಿವಿಞ್ಞತ್ತಿ (ಮಾತಿನ ವ್ಯಕ್ತತೆ) ಮತ್ತು ಒಂದು ಶಾರೀರಿಕ ವಿಞ್ಞತಿಯಿದೆ, ಅದು ತಪ್ಪು ಮತ್ತು ಇನ್ನೊಂದು ಅದಲ್ಲ. ಹಾಗೆಯೇ ಒಂದು ವಚಿ ವಞ್ಞತಿಯಿದೆ ಅದು ತಪ್ಪು ಮತ್ತು ಇನ್ನೊಂದು ಅದಲ್ಲ. ಯಾವ ಕಾಯ ವಿಞ್ಞತ್ತಿಯು ತಪ್ಪಾದುದು? ಉದಾಹರಿಸುವುದಾದರೆ ಸಂಘದ ಸದಸ್ಯನು (ಭಿಕ್ಖು) ಆಹಾರಕ್ಕಾಗಿ ಹೊರಟಿರುವಾಗ, ಮನೆಯಿಲ್ಲದಿರುವ ಕಡೆ ನಿಂತು ಅದನ್ನು ಆಯ್ಕೆಮಾಡುತ್ತಾನೆ. ಇದು ಶಾರೀರಿಕ ತಪ್ಪು ವರ್ತನೆಯಾಗಿದೆ. ನಿಜ, ಭಿಕ್ಖುಗಳು ಎಂದಿಗೂ ಕೇಳಿ ಆಹಾರ ಪಡೆಯುವುದಿಲ್ಲ, ಹಾಗೆ ತಪ್ಪಾಗಿ ವತರ್ಿಸುವವರು ಕೀಳಾಗಿ ಕಾಣಲ್ಪಡುವರು, ಗೌರವಿಸಲ್ಪಡುವುದಿಲ್ಲ, ನಿಂದೆಗೆ ಒಳಗಾಗುತ್ತಾರೆ, ಪರಿಗಣಿಸಲ್ಪಡುವುದಿಲ್ಲ. ಆರ್ಯ ಧರ್ಮದಲ್ಲಿ ಚೆನ್ನಾಗಿ ಚಿಂತಿಸಿರುವುದಿಲ್ಲ. ಆತನು ನಿಯಮಭಂಗಿ ಎಂದು ಗುತರ್ಿಸಲ್ಪಡುತ್ತಾನೆ. ಮತ್ತೆ ಯಾವುದೇ ಸಂಘದ ಸದಸ್ಯನು ಭಿಕ್ಷಾಟನೆಗೆ ಹೊರಟಾಗ ಆತನು ಮನೆಯಿಲ್ಲದೆ ಕಡೆ ನಿಂತು ನವಿಲಿನಂತೆ ಕತ್ತನ್ನು ಚಾಚಿ ಈ ಜನರು ನನ್ನನ್ನು ಕಾಣುವರು ಎಂದು ವ್ಯಕ್ತಪಡಿಸುವ ಭಂಗಿಯು ಸಹಾ ತಪ್ಪಾದುದು. ನಿಜವಾದ ಭಿಕ್ಷುವು ಭಿಕ್ಷೆಯನ್ನು ಯಾಚಿಸುವುದಿಲ್ಲ, ಯಾರು ಈರೀತಿ ವತರ್ಿಸುವರೋ ಅವರು ಕೊನೆಯವರಂತೆ ಕಾಣಲ್ಪಡುತ್ತಾರೆ. ಮತ್ತೆ ಓ ರಾಜ, ಯಾರಾದರು ಭಿಕ್ಷು ದವಡೆಯಿಂದ ಅಥವಾ ಹುಬ್ಬಿನಿಂದ ಅಥವಾ ಬೆರಳಿನಿಂದ ಆತನು ದೇಹದಿಂದ (ಸನ್ನೆ) ವ್ಯಕ್ತಪಡಿಸಿದರೆ ಆ ದೈಹಿಕ ವ್ಯಕ್ತತೆ ತಪ್ಪಾದುದು, ನಿಜ ಭಿಕ್ಷುವು ಈ ರೀತಿಯಾಗಿ ಭಿಕ್ಷೆ ಯಾಚಿಸುವುದಿಲ್ಲ.

ಮತ್ತೆ ಯಾವರೀತಿಯ ಕಾಯಕ ವಿಞ್ಞತ್ತಿ (ವ್ಯಕ್ತತೆ) ತಪ್ಪಲ್ಲ? ಇಲ್ಲಿ ಭಿಕ್ಷುವು ಆಹಾರಕ್ಕೆ ಹೋಗಿರುವಾಗ, ಸ್ವ-ಜಾಗೃತಿವುಳ್ಳವನಾಗಿರುತ್ತಾನೆ, ಪ್ರಶಾಂತನಾಗಿರುತ್ತಾನೆ, ತನ್ನ ಕ್ರಿಯೆಗಳ ಬಗ್ಗೆ ಅರಿವನ್ನು ಹೊಂದಿರುತ್ತಾನೆ. ಆತನು ನಿಂತೇ ಇರಲಿ, ಅಥವಾ ಎಲ್ಲಿಯಾದರೂ ಯೋಗ್ಯ ಸ್ಥಳಕ್ಕೆ ಹೋಗಲಿ, ಎಲ್ಲಿ ಜನರು ಇಷ್ಟಪಟ್ಟು ನೀಡುವರೋ ಮತ್ತು ಎಲ್ಲಿ ಇಷ್ಟಪಟ್ಟು ನೀಡುವುದಿಲ್ಲವೋ ಅಲ್ಲೆಲ್ಲಾ ಆತನು ನಿಲ್ಲುತ್ತಾನೆ, ಹಾಗೆಯೇ ಆತನು ನಿಲ್ಲದೆ ಹೋದರೆ, ಆ ಕಾಯವಿನ್ನತಿ ತಪ್ಪಲ್ಲ. ಈ ರೀತಿ ಶುದ್ಧ ಸಂಘವು ಆಹಾರಕ್ಕಾಗಿ ನಿಲ್ಲುತ್ತದೆ. ಈ ರೀತಿಯಾಗಿ ಕಾಯದಿಂದಲೂ, ವಾಚಾದಿಂದಲೂ ಕೇಳದೆ ಕೇವಲ ನಿಲ್ಲುವಿಕೆಯನ್ನು ಆರ್ಯರು ಪ್ರಶಂಸಿಸುತ್ತಾರೆ, ಶ್ರೇಷ್ಠವೆಂದು ಭಾವಿಸುತ್ತಾರೆ, ಈ ರೀತಿಯ ಜೀವನೋಪಾಯವನ್ನು ಶುದ್ಧವೆಂದು ಹೇಳುತ್ತಾರೆ. ಇದರ ಬಗ್ಗೆ ದೇವಾಧಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ.

ನಿಜಪ್ರಾಜ್ಞರು ಯಾಚಿಸುವುದಿಲ್ಲ, ಅರಹಂತರು ಯಾಚನೆಗೆ ತಾತ್ಸಾರ ಮಾಡುತ್ತಾರೆ, ಅವರು ಆಹಾರಕ್ಕಾಗಿ ಕೇವಲ ಮೌನವಾಗಿ ನಿಲ್ಲುತ್ತಾರೆ. ಈ ರೀತಿಯಾಗಿ ಆರ್ಯರು ಯಾಚಿಸುತ್ತಾರೆ.

ಮತ್ತು ಯಾವ ವಚಿವಿಞ್ಞತಿ (ಮಾತಿನಲ್ಲಿ ವ್ಯಕ್ತಪಡಿಸುವಿಕೆ) ತಪ್ಪಾದುದು? ಇಲ್ಲಿ ಓ ಮಹಾರಾಜ, ಸೋದರನು ಅಗತ್ಯ ವಸ್ತುಗಳಾದ ಚೀವರ, ಪಿಂಡಪಾತ್ರೆ, ಹಾಸಿಗೆ ಮತ್ತು ಔಷಧಿಗಳನ್ನು ಮಾತಿನಿಂದ ಯಾಚಿಸಿದರೆ ಆ ಮಾತಿನ ವ್ಯಕ್ತತೆ ತಪ್ಪಾಗಿದೆ. ಹಾಗೆ ಕೇಳುವವರನ್ನು ಆರ್ಯಸಂಘವು ಸ್ವೀಕರಿಸುವುದಿಲ್ಲ ಮತ್ತು ಹಾಗೆ ಮಾಡುವವರನ್ನು ಕೀಳಾಗಿ ಕಾಣಲ್ಪಡುವರು, ಗೌರವಿಸಲ್ಪಡುವುದಿಲ್ಲ. ನಿಂದೆಗೆ ಗುರಿಯಾಗುತ್ತಾರೆ. ಪರಿಗಣಿಸಲ್ಪಡುವುದಿಲ್ಲ. ಜೀವನೋಪಾಯಕ್ಕಾಗಿ ಭಂಗಗೊಂಡವನು ಎಂದೆನಿಸುತ್ತಾನೆ. ಮತ್ತೆ ಓ ಮಹಾರಾಜ, ಭಿಕ್ಷುವಿನೊಂದಿಗೆ, ಉಪಾಸಕರಿಗೆ ಕೇಳಿಸುವಂತೆ ಭಿಕ್ಷುವು ನನಗೆ ಇಂತಿಂಥಹ ವಸ್ತುಗಳ ಅಗತ್ಯವಿದೆ ಎಂದು ಹೇಳಿ ನಂತರ ಆ ವಸ್ತುಗಳನ್ನು ಪರೋಕ್ಷವಾಗಿ ಪಡೆದರೆ ಅದು ಸಹಾ ಮಾತಿನ ದೋಷವೆಂದು ಪರಿಗಣಿಸಲಾಗುವುದು. ನಿಜ ಭಿಕ್ಕುಗಳು ಹಾಗೆ ಪಡೆಯಲಾರರು, ಹಾಗೆ ಮಾಡುವವರು ಕೊನೆಯವರಂತೆ ಪರಿಗಣಿಸಲ್ಪಡುವರು ಮತ್ತು ಭಿಕ್ಷುವೇನಾದರೂ ತನ್ನ ಮಾತಿನಲ್ಲಿ ವಿಸ್ತರಿಸಿ ಮಾತನಾಡುವಾಗ ಅವರಿಗೆ ಅರ್ಥವಾಗುವಂತೆ ತನ್ನ ಅಗತ್ಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇಳಿದಾಗ ಅದನ್ನು ಆಲಿಸಿ ಅವರು ಅದರಂತೆ ನಡೆದುಕೊಂಡರೆ ಅದು ಸಹಾ ಮಾತಿನ ತಪ್ಪಾಗುತ್ತದೆ. ನಿಜ ಭಿಕ್ಷುಗಳು ಈ ರೀತಿಯಾಗಿ ವಸ್ತುಗಳನ್ನು ಪಡೆಯಲಾರರು, ಅಂತಹವರನ್ನು ಕೊನೆಯವರೆಂದು ಪರಿಗಣಿಸಲ್ಪಡುತ್ತಾರೆ. ಓ ಮಹಾರಾಜ, ಮಹಾಥೇರರಾದ ಸಾರಿಪುತ್ತರು ಮೌನ ಮುರಿದರು ಮತ್ತು ಹೀಗೆ ಮೌನ ಭಂಗದಿಂದ ಔಷಧಿ ದೊರೆಯಿತು, ಆಗ ಸಾರಿಪುತ್ತರು ತಮ್ಮಲ್ಲಿ ಹೀಗೆ ಹೇಳಿಕೊಂಡರು ಈ ಔಷಧಿಯು ತನ್ನ ಮೌನಭಂಗದಿಂದ ದೊರೆಯಿತು, ನನ್ನ ಜೀವನೋಪಾಯ ನಿಯಮಗಳು ಭಂಗವಾಗದಿರಲಿ ಎಂದು ಅವರು ಆ ಔಷಧಿಯನ್ನು ಸ್ವೀಕರಿಸಲಿಲ್ಲ. ಏಕೆಂದರೆ ಅವರು ಮಾತಿನಿಂದ ದೋಷವಾಯಿತೆಂದು ಭಾವಿಸಿದರು. ಸಂಘದ ನಿಜ ಭಿಕ್ಖುಗಳು ಹಾಗೆ ಪಡೆಯಲಾರರು. ಹಾಗೆ ಮಾಡುವವರು ಕೊನೆಯವರೆಂದು ಪರಿಗಣಿಸಲ್ಪಡುವರು.

ಮತ್ತೆ ಯಾವರೀತಿಯ ವಾಚವಿಞ್ಞತ್ತಿಯು ಸರಿಯಾದುದು? ಓ ಮಹಾರಾಜ, ಭಿಕ್ಷುವಿಗೆ ಏನಾದರೂ ಅಗತ್ಯ ವಸ್ತುಗಳು ಬೇಕಾದಲ್ಲಿ ಆತನು ತನ್ನ ಸಾಮಿಪ್ಯದವರಾದ ಕುಟುಂಬದವರೊಡನೆ ಅಥವಾ ತನ್ನನ್ನು ವಷರ್ಾವಾಸ ಕಳೆಯಲೆಂದು ಆಹ್ವಾನಿಸಿದ ಸಹೃದಯರೊಂದಿಗೆ ಆತನು ಔಷಧಿ ಇನ್ನಿತರ ಅಗತ್ಯ ವಸ್ತುಗಳನ್ನು ಕೇಳಬಹುದು, ಅದು ತಪ್ಪಾಗಲಾರದು. ನಿಜ ಭಿಕ್ಷುಗಳು ಹೀಗೆಯೇ ಕೇಳಿಕೊಳ್ಳುತ್ತಾರೆ. ಅಂತಹವರಿಗೆ ಆರ್ಯರು ಪ್ರಶಂಸಿಸುತ್ತಾರೆ, ಶ್ರೇಷ್ಠರೆಂದು ಪರಿಗಣಿಸುತ್ತಾರೆ, ಶುದ್ಧ ಜೀವನದವರೆಂದು ಭಾವಿಸುತ್ತಾರೆ, ತಥಾಗತರು, ಅರಹಂತರು ಆದ ಸಮ್ಮಾಸಂಬುದ್ಧರಿಂದಲೂ ಸ್ವೀಕೃತರಾಗುತ್ತಾರೆ ಮತ್ತು ಓ ಮಹಾರಾಜ, ತಥಾಗತರು ಕಸಿಭಾರಧ್ವಜ ಬ್ರಾಹ್ಮಣನಿಂದ ಆಹಾರ ನಿರಾಕರಣೆಗೆ ಕಾರಣವಿದೆ. ಬಾರದ್ವಜನು ಪರೀಕ್ಷಿಸಲು ಜಟಿಲ ಪ್ರಶ್ನೆಯನ್ನು ಹಾಕಿ, ನಂತರ ಮಾಡಿದ್ದನ್ನು ನಿಲ್ಲಿಸಲು ಇಚ್ಛಿಸಿದನು, ಆತನನ್ನು ಸರಿಹಾದಿಗೆ ಎಳೆಯುವ ಕಾರಣದಿಂದ ದೋಷಿಯೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು, ಹಾಗೆಯೇ ಆಹಾರಕ್ಕಾಗಿ ಬೋಧಿಸಲಿಲ್ಲ ಎಂದು ಅರಿವುಂಟು ಮಾಡಲು ಆತನ ಆಹಾರವನ್ನು ಸ್ವೀಕರಿಸಲಿಲ್ಲ.

ಭಂತೆ ನಾಗಸೇನ, ತಥಾಗತರು ಆಹಾರ ಸೇವಿಸುವಾಗ ದೇವತೆಗಳು ದೇವಲೋಕದ ಸತ್ವಸಾರವನ್ನು ಅವರ ಪಿಂಡಪಾತ್ರೆಗೆ ಸುರಿಯುತ್ತಿದ್ದರು, ಇದನ್ನು ಅವರು ಸದಾ ಮಾಡುತ್ತಿದ್ದರೆ ಅಥವಾ ಎರಡು ರೀತಿಯ ಆಹಾರಗಳಾದ ಸೂಕದ ಮದ್ದವ (ಹಣಬೆ ಅಥವಾ ಮೃದು ಮಾಂಸ) ಮತ್ತು ಮಧು ಪಾಯಸಕ್ಕೆ ಮಾತ್ರ ಅವರು ಸುರಿಯುತ್ತಿದ್ದರೆ?

ಓ ಮಹಾರಾಜ, ಭಗವಾನರು ಯಾವಾಗೆಲ್ಲ ಆಹಾರ ಸೇವಿಸುತ್ತಿದ್ದರೊ, ಆಗೆಲ್ಲಾ ದೇವತೆಗಳು ಸಹಾ ದೇವಲೋಕದ ಸತ್ವಸಾರವನ್ನು ಓಜಸ್ಸನ್ನು ಹಾಕುತ್ತಿದ್ದರು. ಹೇಗೆಂದರೆ ರಾಜನಿಗೆ ರಾಜ ಅಡುಗೆಗಾರನು ತಿನ್ನುವಾಗ ಪ್ರತಿ ತುತ್ತಿಗೆ ಸಾರನ್ನು ಸುರಿಯುವಂತೆ ಹಾಕುತ್ತಿದ್ದರು. ಮತ್ತು ವೇರಂಜಾದ ಬಳಿ ತಥಾಗತರು ಒಣಗಿದ ಬಾರ್ಲಿಯ ಫುಲಕವನ್ನು ತಿನ್ನಿತ್ತಿರುವಾಗ ದೇವತೆಗಳು ಓಜಸ್ಸಿನ ದ್ರವದಿಂದ ಅದನ್ನು ತೇವಗೊಳಿಸಿ ನೀಡುತ್ತಿದ್ದರು. ಹೀಗಾಗಿಯೇ ತಥಾಗತರ ಶರೀರವು ಪುನಃ ಪ್ರಫುಲ್ಲಿತರಾಗುತ್ತಿದ್ದರು.


ಭಂತೆ ನಾಗಸೇನರವರೆ, ನಿಜಕ್ಕೂ ಆ ದೇವತೆಗಳ ಸೌಭಾಗ್ಯವು ನಿಜಕ್ಕೂ ಶ್ರೇಷ್ಠವಾದುದ್ದೇ. ಏಕೆಂದರೆ ಅವರು ಸದಾ ತಥಾಗತರ ಶರೀರವನ್ನು ಉತ್ಸಾಹಭಕ್ತಿಯಿಂದ ಸಲಹುತ್ತಿದ್ದರು. ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ಉತ್ತರವನ್ನು ನಾನು ಒಪ್ಪುತ್ತೇನೆ.





10. ಧಮ್ಮದೇಸನಾಯ ಅಪ್ಪೋಸ್ಸುಕ ಪನ್ಹೋ (ಧಮ್ಮ ದೇಶನದ ಪ್ರಶ್ನೆ)



ಭಂತೆ ನಾಗಸೇನ, ನೀವು ಹೇಳುವಿರಿ: ತಥಾಗತರು ನಾಲ್ಕು ಅಸಂಖ್ಯೇಯ ಕಲ್ಪಗಳ ತರುವಾಯ ಸರ್ವಹಿತಕ್ಕಾಗಿ ಅವರ ಸರ್ವಜ್ಞತಾ ಜ್ಞಾನವು ಪರಿಪೂರ್ಣ ವಾಯಿತೆಂದು ಹೇಳುವಿರಿ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಯಾವಾಗ ಅವರು ಸಮ್ಮಾಸಂಭೋದಿ ಪ್ರಾಪ್ತಿ ಮಾಡಿದರೋ, ಅನಂತರ ಅವರ ಮನಸ್ಸು ಸತ್ಯಗಳ ಪ್ರಕಟನೆಗಳಿಗೆ ಬಾಗಲಿಲ್ಲ, ಬದಲಾಗಿ ವಿಶ್ರಾಂತಿಯಲ್ಲಿತ್ತು.


ಓ ನಾಗಸೇನ, ಇದು ಹೇಗಾಯಿತೆಂದರೆ ಒಬ್ಬ ಬಿಲ್ಲುಗಾರನು ಅಥವಾ ಬಿಲ್ಗಾರನ ಶಿಷ್ಯನು ಧನುವರ್ಿದ್ಯಾಭ್ಯಾಸವನ್ನು ಯುದ್ಧ ಉದ್ದೇಶದಿಂದ ಹಲವಾರು ದಿನಗಳವರೆಗೆ ಅಭ್ಯಾಸಿಸಿ, ಯಾವಾಗ ಯುದ್ಧಘೋಷಿತ ದಿನದಂದು ಬಂದಿತೋ ಆತನು ಯುದ್ಧಮಾಡದೆ ಹಿಂತಿರುಗುತ್ತಾನೆ. ಅದೇರೀತಿಯಲ್ಲಿ ತಥಾಗತರು ಸಹಾ ಅಸಂಖ್ಯಾತ ಕಲ್ಪಗಳವರೆಗೆ ಸರ್ವಜ್ಞತೆಗೆ ಪ್ರಯತ್ನಪಟ್ಟು, ಅದನ್ನು ಜನಗಳಿಗಾಗಿ ಪ್ರಾಪ್ತಿಮಾಡಿಯೂ ಸಹಾ ಅದನ್ನು ಹೇಳಲು ಹಿಂಜರಿದಿದ್ದುದು ಏಕೆ? ಇದು ಹೇಗೆಂದರೆ ಜಟ್ಟಿಯೊಬ್ಬನು ಕುಸ್ತಿಯಲ್ಲಿ ಗೆಲ್ಲಲೆಂದು ಹಲವಾರು ದಿನಗಳವರೆಗೆ ಸಾಧನೆ ಮಾಡಿ, ಪಂದ್ಯದ ದಿನದಂದು ಕುಸ್ತಿಮಾಡದೆ, ಹಿಂಜರಿಯುತ್ತಾನೆ, ಹಿಂತಿರುಗುತ್ತಾನೆ. ಅದೇರೀತಿಯಲ್ಲಿ ತಥಾಗತರು ಸಹಾ ಧಮ್ಮ ನುಡಿಯಲೆಂದು ಅಸಂಖ್ಯಾತ ಕಲ್ಪಗಳ ಕಾಲ ಪಾರಮಿಗಳನ್ನು ಪೂರ್ಣಗೊಳಿಸಿಯು ಸಹಾ ನಂತರ ಬೋಧಿಯನ್ನು ಪ್ರಾಪ್ತಿಗೊಳಿಸಿಯೂ ಸಹಾ ಧಮ್ಮವನ್ನು ಪ್ರಕಟಪಡಿಸಲಿಲ್ಲ.


ಓ ಭಂತೆ ನಾಗಸೇನರವರೇ, ಅವರು ಹಾಗೆ ಮಾಡಿದ್ದು ಭಯದಿಂದಲೇ ಅಥವಾ ದೌರ್ಬಲ್ಯದಿಂದಲೇ ಅಥವಾ ಅವರು ಸರ್ವಜ್ಞತೆಯನ್ನು ಪಡೆಯಲೇ ಇಲ್ಲವೇ? ಇದಕ್ಕೆಲ್ಲಾ ಕಾರಣಗಳೇನು? ದಯವಿಟ್ಟು ಇದಕ್ಕೆಲ್ಲಾ ಕಾರಣ ತಿಳಿಸಿ. ಅದರಿಂದ ನನ್ನ ಸಂಶಯಗಳೆಲ್ಲವೂ ತೆಗೆಯುವಂತಾಗಲಿ, ಅವರು ಪರಹಿತಕ್ಕಾಗಿಯೇ ಅಷ್ಟು ಕಲ್ಪಗಳ ಕಾಲ ಶ್ರಮಿಸಿದ್ದರೆ ಅದೇ ನಿಜವಾಗಿದ್ದರೆ ಬೋಧನೆ ನೀಡಲು ಹಿಂಜರಿದುದ್ದದು ಸುಳ್ಳಾಗುತ್ತದೆ. ಆದರೆ ಅವರು ಹಿಂಜರಿದುದ್ದದು ನಿಜವಾಗಿದ್ದ ಪಕ್ಷದಲ್ಲಿ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಜಟಿಲ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ನೀವೇ ಇದನ್ನು ಪರಿಹರಿಸಬೇಕು. (143)


ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ಭಗವಾನರು ಧಮ್ಮಬೋಧನೆಗೆ ಮನಸ್ಸನ್ನು ಬಾಗಿಸಲಿಲ್ಲ ಎಂಬುದು ಮಾತ್ರ ಸರಿಯಲ್ಲ. ಅವರು ಹಾಗೆ ಮಾಡಿದುದಕ್ಕೆ ಕಾರಣವಿದೆ. ಅದೆಂದರೆ ಅವರು ಪರಮಶ್ರೇಷ್ಠ ಸತ್ಯಗಳನ್ನು ಅರಿತಿದ್ದರು. ಅದು ಅರಿಯಲು ಅತ್ಯಂತ ಕ್ಲಿಷ್ಟಕರವಾಗಿತ್ತು, ಅತ್ಯಂತ ಸೂಕ್ಷ್ಮವಾಗಿತ್ತು, ಅರಿಯಲು ಕಠಿಣವಾಗಿತ್ತು. ಜೀವಿಗಳು ಹೇಗೆ ತಮ್ಮ ರಾಗಗಳಲ್ಲಿ ತೃಪ್ತರಾಗಿವೆ, ಹೇಗೆ ಮಿಥ್ಯಾದೃಷ್ಟಿಗಳಲ್ಲಿ ಬಿದ್ದು ಸಕ್ಕಾಯದಿಟ್ಟಿಯ ಬಂಧನಗಳಲ್ಲಿದ್ದಾರೆ ಎಂದು ಅರಿತರು. ಹಾಗು ಅವರು ಮೊದಲು ಯಾರಿಗೆ ಬೋಧಿಸಲಿ? ಯಾವರೀತಿ ಬೋಧಿಸಲಿ ಎಂಬ ಚಿಂತನೆಯಲ್ಲಿದ್ದರು ಹೊರತು ಬೋಧಿಸಬಾರದೆಂದು ನಿಶ್ಚಯಿಸಿರಲಿಲ್ಲ.


ಓ ಮಹಾರಾಜ, ಇದು ಹೇಗೆಂದರೆ ರಾಜನಾಗಿ, ರಾಜತ್ವದಿಂದ ಚಕ್ರವತರ್ಿಯಾಗಿದ್ದಾಗ, ಆತನು ತನಗೆ ಅವಲಂಬಿಸಿದವರ ಮೇಲೆ ಅಂದರೆ, ಕಾವಲುಗಾರ, ಅಂಗರಕ್ಷಕ, ರಾಜಪರಿವಾರ, ವ್ಯಾಪಾರಿಗಳು, ಸೈನಿಕರು, ರಾಜದೂತರು, ಮಂತ್ರಿಗಳು ಮತ್ತು ಕ್ಷತ್ರಿಯರು ಇವರಿಗೆಲ್ಲ ನಾನು ಹೇಗೆ ಒಲಿಸಿಕೊಳ್ಳಲಿ ಎಂದು ಚಿಂತಿಸುವಂತೆ ತಥಾಗತರು ಅತ್ಯಂತ ಕ್ಲಿಷ್ಟಕರವಾದ ಧಮ್ಮವನ್ನು ಹೇಗೆ ರಾಗಯುಕ್ತರಾದ ಮೋಹಯುಕ್ತರಾದ, ಸಕ್ಕಾಯದಿಟ್ಟಿಯಲ್ಲಿ ಬಿದ್ದಿರುವ ಜೀವಿಗಳಿಗೆ ಹೇಗೆ ಬೋಧಿಸಲಿ ಎಂದು ಹೀಗೆ ಯೋಚಿಸುತ್ತಿದ್ದರು. ಯಾರಿಗೆ ಬೋಧಿಸಲಿ? ಹೇಗೆ ಬೋಧಿಸಲಿ? ಎಂದು ಅವರ ಮನಸ್ಸು ವಾಲಿತ್ತೇ ಹೊರತು ಬೋಧಿಸಬಾರದೆಂದು ನಿಶ್ಚಯಿಸಿರಲಿಲ್ಲ.


ಮತ್ತೆ, ಇನ್ನೂ ಒಂದು ಕಾರಣವಿದೆ ಮಹಾರಾಜ, ಅದೆಂದರೆ ಎಲ್ಲಾ ತಥಾಗತರು ಬ್ರಹ್ಮನ ಯಾಚನೆಯವರೆಗೆ ಕಾಯುತ್ತಾರೆ. ಬ್ರಹ್ಮನು ಧಮ್ಮವನ್ನು ಬಹುಜನಹಿತಕ್ಕಾಗಿ, ಬಹುಜನಸುಖಕ್ಕಾಗಿ, ದೇವತೆ ಮಾನವರ ಹಿತಸುಖಕ್ಕಾಗಿ ಬೋಧಿಸಿ ಎಂದು ಯಾಚಿಸುತ್ತಾರೆ. ಏಕೆಂದರೆ ಆಗ ಎಲ್ಲಾ ಜನರು ಸಮಣ ಬ್ರಾಹ್ಮಣರು, ಸಂಚಾರಿ ಸಾಧಕರು ಇವರೆಲ್ಲರೂ ಬ್ರಹ್ಮನ ಆರಾಧಕರಾಗಿದ್ದರು. ಬ್ರಹ್ಮನನ್ನು ಪೂಜಿಸುವವರಾಗಿದ್ದರು. ಬ್ರಹ್ಮನ ಮೇಲೆಯೇ ನಂಬಿಕೆ ಇಟ್ಟಿರುವವರಾಗಿದ್ದರು ಮತ್ತು ಯಾವಾಗ ಇಂತಹ ಬಲಿಷ್ಠ ಮತ್ತು ಬೃಹತ್ ಭವ್ಯವುಳ್ಳವ ಬ್ರಹ್ಮನು ಧಮ್ಮಬೋಧನೆಗೆ ಒತ್ತಾಯಿಸಿದರೆ, ಆಗ ಇಡೀ ಲೋಕಗಳ ದೇವತೆಗಳು ಮತ್ತು ಮಾನವರು ಸಹಾ ಧಮ್ಮದ ಕಡೆ ಬಾಗುತ್ತಾರೆ, ಶ್ರದ್ಧೆಯಿಡುತ್ತಾರೆ. ಆದ್ದರಿಂದಲೇ ಓ ಮಹಾರಾಜ, ತಥಾಗತರು ಬ್ರಹ್ಮನ ಯಾಚನೆಯ ನಂತರ ಧಮ್ಮವನ್ನು ಬೋಧಿಸುತ್ತಾರೆ. ಇದು ಹೇಗೆಂದರೆ ಯಾವರೀತಿ ಚಕ್ರವತರ್ಿಯು ಅಥವಾ ಮಂತ್ರಿಯು ಶರಣು ಹೋಗುತ್ತಾರೋ ಅಥವಾ ಪೂಜಿಸುತ್ತಾರೋ ಅದೇರೀತಿ ಮಿಕ್ಕ ಮಾನವರು ಅನುಸರಿಸುತ್ತಾರೆ, ಈ ರೀತಿಯಾಗಿ ಓ ಮಹಾರಾಜ, ಯಾವಾಗ ಬ್ರಹ್ಮನು ತಥಾಗತರ ಅನುಪಮೇಯ ವ್ಯಕ್ತಿತ್ವ ಹಾಗು ಅವರ ಶ್ರೇಷ್ಠ ಧಮ್ಮವನ್ನು ಅರಿತನೋ ಆಗ ಆತನು ತಥಾಗತರಿಗೆ ಶರಣಾಗಿ ಪೂಜಿಸುತ್ತಾನೆ. ನಂತರ ಇಡೀ ಲೋಕಗಳ ದೇವತೆಗಳು ಮತ್ತು ಮಾನವರು ಅದರಂತೆಯೇ ಅನುಸರಿಸುತ್ತಾರೆ ಮತ್ತು ಆದ್ದರಿಂದಲೇ ಬ್ರಹ್ಮನು ಸಹಾ ತಥಾಗತರಿಗೆ ಧಮ್ಮಬೋಧಿಸುವಂತೆ ಯಾಚಿಸಿ, ಎಲ್ಲರಿಗೂ ಅರಿವಾಗುವಂತೆ ಮಾಡುತ್ತಾನೆ.

ಬಹುಚೆನ್ನಾಗಿದೆ ಭಂತೆ ನಾಗಸೇನ, ಈ ಜಟಿಲವಾದ ಇಕ್ಕಟ್ಟಿನ ಸಮಸ್ಯೆಯನ್ನು ಪರಿಹರಿಸಿದಿರಿ, ನಿಮ್ಮ ಉತ್ತರವನ್ನು ನಾನು ಒಪ್ಪುತ್ತೇನೆ.


11. ಆಚಾರ್ಯ ನಆಚಾರ್ಯ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ನನಗೆ ಆಚಾರ್ಯರೂ ಯಾರೂ ಇಲ್ಲ ಮತ್ತು ನನಗೆ ಸರಿಸಮಾನರೂ ಸಹಾ ಅಸ್ತಿತ್ವದಲ್ಲಿ ಇಲ್ಲ, ದೇವತೆಗಳನ್ನು ಒಳಗೊಂಡ ಈ ಎಲ್ಲಾ ಲೋಕಗಳಲ್ಲಿ ನನ್ನಂಥವರಿಲ್ಲ (ನನಗೆ ಪ್ರತಿಸ್ಪಧರ್ಿ ಯಾರೂ ಇಲ್ಲ). ಆದರೆ ಪುನಃ ಮತ್ತೊಂದೆಡೆ ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಆಲಾರಕಾಲಾಮರು ನನಗೆ ಆಚಾರ್ಯರಾಗಿದ್ದರು ಮತ್ತು ನಾನು ಅವರ ಶಿಷ್ಯನಾಗಿದ್ದೆನು. ಆಗ ಅವರು ನನಗೆ ತಮ್ಮ ಸಮಾನದಜರ್ೆಗೆ ಏರಿಸಿದರು ಮತ್ತು ಅತಿ ಗೌರವದಿಂದ ಗೌರವಿಸಿದರು.

ಈಗ ಇಲ್ಲಿ ಹಿಂದಿನ ಹೇಳಿಕೆ ಸತ್ಯವಾದರೆ ನಂತರದ್ದು ಸುಳ್ಳಾಗುತ್ತದೆ. ಹಾಗಲ್ಲದೆ ಎರಡನೆಯ ಹೇಳಿಕೆ ಸತ್ಯವಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ಇಕ್ಕಟ್ಟಿನ ಜಟಿಲ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ, ನೀವೇ
ಪರಿಹರಿಸಬೇಕು. (144)

ಓ ಮಹಾರಾಜ, ನೀವು ಹೇಳಿರುವ ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ನೀವು ಹೇಳಿರುವ ಅಲಾರಕಾಲಾಮರು ಅವರಿಗೆ ಆಚಾರ್ಯರೆನ್ನುವುದು ಅವರು ಬೋಧಿಸತ್ವರಾಗಿದ್ದಾಗ ಅದು ನಿಜವಾಗಿತ್ತು. ಅಂದರೆ ಆಗಿನ್ನು ಅವರಿಗೆ ಬುದ್ಧತ್ವ ಪ್ರಾಪ್ತಿಯಾಗಿರಲಿಲ್ಲ ಮತ್ತು ಅಂತಹ 5 ಗುರುಗಳು ಅವರಿಗಿದ್ದರು. ಓ ರಾಜ, ಅವರಿಂದ ಬೋಧಿಸತ್ವರು ಹಲವಾರು ಸ್ಥಳಗಳಲ್ಲಿ ಹಲವರಿಂದ ಲೌಕಿಕ ಶಿಕ್ಷಣ ಪಡೆದಿದರು. ಯಾರು ಅವರು?

ಎಂಟು ಬ್ರಾಹ್ಮಣರಿದ್ದರು, ಅವರು ಬೋಧಿಸತ್ವರ ಜನ್ಮವಾದ ತಕ್ಷಣ ಅವರ ದೇಹದ ಮಹಾಪುರುಷ ಲಕ್ಷಣಗಳನ್ನು ಗಮನಿಸಿದವರಾದ ರಾಮ, ಧಜ, ಲಕ್ಖಣ, ಮಂತಿ, ಯಞ್ಞ, ಸುಯಾಮ, ಸುಭೂಜೋ ಮತ್ತು ಸುದತ್ತರು. ಆಗ ಅವರೇ ಇವರ ಭವಿಷ್ಯದ ಬಗ್ಗೆ ತಿಳಿಸಿದ್ದರು. ಹಾಗು ಎಚ್ಚರಿಕೆಯಿಂದ ಪಾಲನೆ ಮಾಡಬೇಕೆಂದು ಹೇಳಿ ರಕ್ಷಿಸಿದವರಾದ ಪ್ರಥಮ ಗುರುಗಳಿವರು.

ಮತ್ತೆ ಓ ಮಹಾರಾಜ, ಬ್ರಾಹ್ಮಣ ಸಬ್ಬಮಿತ್ತ (ಸರ್ವಮಿತ್ರ)ರವರು ಉದಿಚ್ಚ ಜಾತಿವಂತರಾದ ಅಭಿಜಾನರು ಆಗಿದ್ದರು. ಅವರು ವ್ಯಾಕರಣದಲ್ಲಿ, ಭಾಷಾಶಾಸ್ತ್ರದಲ್ಲಿ ಆರು ವೇದಾಂಗಗಳಲ್ಲಿ, ಪರಿಣಿತರಾಗಿದ್ದರು. ಅವರಲ್ಲಿಗೆ ಬೋಧಿಸತ್ವರು ತಂದೆ, ರಾಜ  ಸುದ್ಧೋಧನರು ತಮ್ಮ ಪುತ್ತರನ್ನು ಅವರಿಗೆ ಒಪ್ಪಿಸಿ ಚಿನ್ನದ ಪಾತ್ರೆಯಿಂದ ನೀರನ್ನು ಹಾಕಿ ಸಮಪರ್ಿಸಿದ್ದರು. ಅವರೇ ಬೋಧಿಸತ್ವರಿಗೆ ಎರಡನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ಒಬ್ಬ ದೇವ ಬೋಧಿಸತ್ವರ ಹೃದಯದಲ್ಲಿ ಉದ್ವಿಗ್ನತೆಯನ್ನುಂಟು ಮಾಡಿ ಆ ಶಬ್ದದಿಂದ, ಆ ವಾಕ್ಯಗಳಿಂದ ಬೋಧಿಸತ್ವರು ಚಾಲನೆಗೆ ಒಳಪಟ್ಟು, ಆ ಕ್ಷಣದಿಂದಲೇ ಅವರು ಮಹಾಭಿನಿಷ್ಕ್ರಮಣ ಸಿದ್ಧರಾದರು. ಅವರೇ ಅವರ ಮೂರನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ಆಲಾರಕಾಲಾಮರು ಅವರಿಗೆ ನಾಲ್ಕನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ರಾಮರ ಪುತ್ರರಾದ ಉದ್ಧಕರು (ಉದ್ಧಕರಾಮಪುತ್ರ) ಅವರು ಐದನೆಯ ಆಚಾರ್ಯರಾಗಿದ್ದರು.

ಓ ಮಹಾರಾಜ, ಇವರೇ ಆ ಐದು ಆಚಾರ್ಯರು ಭಗವಾನರು ಇನ್ನೂ ಬೋಧಿಸತ್ವರಾಗಿದ್ದಾಗ, ಇನ್ನೂ ಸಂಬೋಧಿ ಪ್ರಾಪ್ರಿ ಮಾಡದಿದ್ದಾಗ ಆಚಾರ್ಯರಾಗಿದ್ದರು. ಆದರೆ ಅವರು ಪ್ರಾಪಂಚಿಕ ಜ್ಞಾನವನ್ನು ಬೋಧಿಸಿದರು. ಆದರೆ ಯಾವ ಧಮ್ಮವು ಲೋಕೋತ್ತರವೋ ಸರ್ವಜ್ಞತ ಜ್ಞಾನವೋ ಅಂತಹ ಸಮ್ಮಾಸಂಭೋಧಿಗೆ ಯಾರೂ ಆಚಾರ್ಯರು ಇರಲಿಲ್ಲ. ಅದನ್ನು ಯಾರು ತಥಾಗತರಿಗೆ ಕಲಿಸಿಲ್ಲ. ಸ್ವ-ಅವಲಂಬಿತರಾಗಿಯೇ ಯಾವುದೇ ಆಚಾರ್ಯರಿಲ್ಲದೆ ಅದನ್ನು ಪ್ರಾಪ್ತಿ ಮಾಡಿದರು. ಆದ್ದರಿಂದಲೇ ತಥಾಗತರು ಹೀಗೆ ಹೇಳಿದ್ದಾರೆ: ಆಚಾರ್ಯಾರು ನನಗೆ ಇಲ್ಲ, ನನಗೆ ಸರಿಸಮಾನರು ಯಾರೂ ಇಲ್ಲ. ದೇವತೆಗಳ ಸಹಿತ ಇಡೀ ಲೋಕಗಳಲ್ಲಿ ನನಗೆ ಪ್ರತಿಸ್ಪಧರ್ಿ ಇಲ್ಲ.

ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ವಿವರಣೆಯನ್ನು ನಾನು ಒಪ್ಪುತ್ತೇನೆ.

ಐದನೆಯ ಸಂಧವ ವರ್ಗ ಮುಗಿಯಿತು (ಇದರಲ್ಲಿ 11 ಪ್ರಶ್ನೆಗಳಿವೆ )

No comments:

Post a Comment