7. ಸತಿ ಅರೂಪ ಧಮ್ಮವವತ್ಥಾನ ವಗ್ಗೊ
1. ಸತಿಉಪ್ಪಜ್ಜನ ಪನ್ಹೊ (ಸ್ಮರಣೆ ಉತ್ಪತ್ತಿಯ ಪ್ರಶ್ನೆ)
ಸತಿಉಪ್ಪಜ್ಜನ ಪನ್ಹೊ (ಸ್ಮರಣೆ ಉತ್ಪತ್ತಿಯ ಪ್ರಶ್ನೆ) (ಸ್ಮರಣೆಯ ವಿಧಗಳು)
ರಾಜರು ಕೇಳಿದರು ಭಂತೆ ನಾಗಸೇನ, ಎಷ್ಟು ರೀತಿಗಳಲ್ಲಿ ಸ್ಮರಣೆಯು ಉತ್ಪನ್ನವಾಗುತ್ತದೆ? (73)ಹದಿನೇಳು ರೀತಿಯಲ್ಲಿ ಮಹಾರಾಜ, ಅಂದರೆ ವಿವರವಾಗಿ ಹೇಳುವುದಾದರೆ:
(1) ವ್ಯಕ್ತಿಗತ ಪೂರ್ವ ಅನುಭವದಿಂದ, ಹೇಗೆಂದರೆ ಪೂಜ್ಯ ಆನಂದ ಅಥವಾ ಶ್ರದ್ಧಾಳು ಉಪಾಸಿಕ ಖುಜುತ್ತರಾ ಮತ್ತು ಇತರರು ತಮ್ಮ ಪೂರ್ವಜನ್ಮವನ್ನು ಸ್ಮರಿಸುವವರಾಗಿದ್ದರು (ಅಭಿಜಾನತೋ), ಅಥವಾ
(2) ಬಾಹ್ಯ ಸಹಾಯದಿಂದ ಹೇಗೆಂದರೆ ಪರರು ಮರೆಗುಳಿಯನ್ನು ನಿರಂತರ ನೆನಪಿಸುವಂತೆ ಅಥವಾ
(3) ವಿಶೇಷ ಸಂದರ್ಭದ ಮುದ್ರೆ ಆಗಿರುವುದು, ಹೇಗೆಂದರೆ ಇದನ್ನು ತನ್ನ ಪಟ್ಟಾಭಿಷೇಕದ ಸಂದರ್ಭ ನೆನೆಯುವಂತೆ ಅಥವಾ ನಾವು ನಮ್ಮ ಸೋತಾಪತ್ತಿಯ ದಿನವನ್ನು ನೆನೆಯುವಂತೆ ಅಥವಾ
(4) ಆನಂದದಿಂದ ಸ್ಮರಣೆಯು ಮುದ್ರೆ ಆಗಿರುವುದು.
5) ಹೇಗೆಂದರೆ ಒಬ್ಬನಿಗೆ ಆದ ದುಃಖದ (ನೋವಿನ) ಘಳಿಗೆಗಳನ್ನು ಒಬ್ಬರನ್ನು ನೋಡಿ
6)ನಾವು ತಾಯಿಯನ್ನೋ ಅಥವಾ ತಂದೆಯದೋ ಅಥವಾ ಸೋದರಿಯನ್ನೋ ಅಥವಾ ಸೋದರರನ್ನೋ ಅಥವಾ ಒಂಟೆಯನ್ನು ಅಥವಾ ಎತ್ತು ಅಥವಾ ಕತ್ತೆಯನ್ನು ನೋಡಿ ಅದರಂತೆಯೇ ಇರುವ ಇತರರನ್ನು ನೆನೆಯುವಂತೆ, ಅಥವಾ
(7) ವಿಭಿನ್ನತೆಯ ಗೋಚರತೆಯಿಂದ ಸ್ಮರಿಸುವಿಕೆ ಅಂದರೆ ಇಂತಹ ವರ್ಣದ, ಶಬ್ದದ, ವಾಸನೆಯ, ರುಚಿಯ, ಸ್ಪರ್ಶದ ಅನುಭವವು ವಿರುದ್ಧವಾಗಿ ಇಂತಹ ವಸ್ತುವಾಗಿತ್ತು ಎಂದು ಸ್ಮರಿಸುವಿಕೆ ಅಥವಾ
(8) ಭಾಷಾ ಜ್ಞಾನದಿಂದ ಹೇಗೆಂದರೆ ಸ್ವಾಭಾವಿಕ ಮರೆಗುಳಿಯನ್ನು ಪರರು ಭಾಷೆಯ ವಿಶೇಷತೆಯಿಂದ ವಿವರಿಸಿದಾಗ ಅತನಿಗೆ ನೆನಪಾಗುವಿಕೆ ಅಥವಾ
(9) ಚಿಹ್ನೆಯಿಂದ ಸ್ಮರಿಸುವಿಕೆ ಹೇಗೆಂದರೆ ಎಳೆಯುವ ಎತ್ತನ್ನು ಕಂಡು ಗುರುತಿನ ಮುದ್ರೆ ನೆನೆಯುವಂತೆ ಅಥವಾ ಪರ ಚಿಹ್ನೆಗಳನ್ನು ಕಂಡು ಕೆಲವನ್ನು ನೆನಯುವಿಕೆ ಅಥವಾ
(10) ಪ್ರಯತ್ನಶೀಲತೆಯಿಂದ ಸ್ಮರಿಸುವಿಕೆ ಹೇಗೆಂದರೆ ಸ್ವಾಭಾವಿಕ ಮರೆಗುಳಿಯು ಪದೇ ಪದೇ ಅದನ್ನು ನೆನೆಯಲು ಪ್ರಯತ್ನಿಸು ಎಂದು ಒತ್ತಡ ತೆಗೆದುಕೊಂಡು ನೆನೆಯುವಂತೆ ಅಥವಾ
(11) ಕಾಗುಣಿತದಿಂದ ಹೇಗೆಂದರೆ ಇದರ ನಂತರ, ಇದು ಬರುತ್ತದೆ ಎಂದು ಬರವಣಿಗೆಯಲ್ಲಿ ಶಿಕ್ಷಣ ಪಡೆದವನು ನೆನೆಯುವಂತೆ ಅಥವಾ
(12) ಅಂಕಗಣಿತದಂತೆ (ಗಣನಾತೊ) ಹೇಗೆಂದರೆ ಆಕೃತಿಗಳ ಜ್ಞಾನದಿಂದ ಲೆಕ್ಕಿಗನು ದೊಡ್ಡ ಲೆಕ್ಕಗಳನ್ನು ಮಾಡುವಂತೆ ಅಥವಾ
(13) ಕಂಠಪಾಠದಿಂದ ಅಂದರೆ ಶಾಸ್ತ್ರಗಳನ್ನು ಪುನರುಚ್ಚರಿಸಿ, ಪದೇ ಪದೇ ಬಾಯಿಪಾಠ ಮಾಡಿ ನೆನೆಯುವ ಕೌಶಲ್ಯ ಪಡೆಯುವಂತೆ ಅಥವಾ
(14) ಧ್ಯಾನದಿಂದ ಅಂದರೆ ಭಿಕ್ಷುವೊಬ್ಬನು ತನ್ನ ಕ್ಷಣಿಕ ಸ್ಥಿತಿಗಳು ಯಾವರೀತಿ ಹಿಂದಿನ ದಿನಗಳಲ್ಲಿ ಕಳೆದವು ಎಂದು ಸ್ಮರಿಸುವಿಕೆ ಅಥವಾ
(15) ಪುಸ್ತಕವನ್ನು ಪರಾಮಶರ್ಿಸುವಂತೆ, ಹೇಗೆಂದರೆ ರಾಜನು ಪುಸ್ತಕ ತೆಗೆದುಕೊಂಡು ಬಾ ಎಂದು ಆಜ್ಞಾಪಿಸಿ ಅದರಲ್ಲಿರುವ ಹಿಂದಿನ ನಿಯಮಗಳನ್ನು ನೆನೆಯುವಂತೆ ಅಥವಾ
(16) ಪ್ರತಿಜ್ಞೆಯಿಂದ ಹೇಗೆಂದರೆ ಅಡವಿಟ್ಟ ಸಾಮಗ್ರಿಗಳನ್ನು ಕಂಡು ಅವುಗಳು ಇಂತಹ ದಿನದವರೆಗೆ ಅಥವಾ ಆ ದಿನದಂದು ಇವು ವಚನಬದ್ಧವಾಗಿವೆ ಎಂದು ನೆನೆಯುವಂತೆ ಅಥವಾ
(17) ಸಂಪರ್ಕದಿಂದ ಹೇಗೆಂದರೆ ಒಂದು ವಸ್ತುವನ್ನು ನೋಡಿ ಅಥವಾ ಕೇಳಿ, ಅಥವಾ ಅಘ್ರಾಣಿಸಿ, ಅಥವಾ ರುಚಿಸಿ ಅಥವಾ ಸ್ಪಶರ್ಿಸಿ ಅಥವಾ ಗ್ರಹಿಸಿ ಇದನ್ನು ಹಿಂದೆಯು ಸಹಾ ಅನುಭವಿಸಿರುವೆನು ಎಂದು ನೆನೆಯುವಂತೆ, ಹೀಗೆ 17 ರೀತಿಯಲ್ಲಿ ಸ್ಮರಿಸಬಹುದು.
ವಿವರವಾಗಿ ಚೆನ್ನಾಗಿ ತಿಳಿಸಿದಿರಿ ನಾಗಸೇನ.
2. ಬುದ್ಧಗುಣಸತಿಪಟಿಲಾಭ ಪನ್ಹೊ (ಬುದ್ಧ ಸ್ಮರಣೆ ಲಾಭದ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ನೀವುಗಳು ಹೇಳುವಿರಿ ಒಬ್ಬ ಮನುಷ್ಯ 100 ವರ್ಷ ಪಾಪ ಮಾಡಿಯು ಕೊನೆಗಾಲದಲ್ಲಿ ಬುದ್ಧರನ್ನು ಸ್ಮರಿಸಿದರೆ ಹಾಗೆ ಸತ್ತರೆ ಆತನು ದೇವಲೋಕದಲ್ಲಿ ಜನ್ಮಿಸುವನು ಇದನ್ನು ನಾನು ನಂಬುವುದಿಲ್ಲ, ಹಾಗೆಯೇ ಸತ್ಪುರುಷನು ಒಂದು ಜೀವಹತ್ಯೆಯನ್ನು ಮಾಡಿದಾಗ ಆ ಒಂದು ತಪ್ಪಿನಿಂದಲೇ ಆತನು ನರಕದಲ್ಲಿ ಹುಟ್ಟುವನು ಇದನ್ನು ಸಹಾ ನಾನು ನಂಬಲಾರೆ. (74)ಆದರೆ ಮಹಾರಾಜ, ಇದಕ್ಕೆ ಉತ್ತರಿಸು, ಒಂದು ಸಣ್ಣ ಕಲ್ಲು ದೋಣಿಯಿಲ್ಲದೆ ತೇಲುವುದೇ?
ಖಂಡಿತ ಇಲ್ಲ.
ಹಾಗೆಯೇ 100 ಬಂಡಿಗಳ ಕಲ್ಲುಗಳು ಒಂದು ಹಡಗಿನಲ್ಲಿ ತೇಲುವುದೇ?
ಖಂಡಿತ ತೇಲುವುದು?
ಒಳ್ಳೆಯದು, ಹಾಗೆಯೇ ಕುಶಲ ಕರ್ಮಗಳು ಹಡಗಿನಂತೆ ಮಹಾರಾಜ.
ಬಹು ಚೆನ್ನಾಗಿ ವಿವರಿಸಿದಿರಿ ನಾಗಸೇನ.
3. ದುಃಖ ನಿರೋಧ ವ್ಯಾಯಾಮ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ನೀವುಗಳು ಪರಿಶ್ರಮಪಡುತ್ತಿರುವುದು ಹಿಂದಿನ ದುಃಖ ತೆಗೆಯುವುದಕ್ಕಾಗಿಯೇ? (75)ಇಲ್ಲ.
ಹಾಗಾದರೆ ನೀವು ಭವಿಷ್ಯದ ದುಃಖ ತೆಗೆಯಲು ಪರಿಶ್ರಮ ಪಡುತ್ತಿರುವಿರಾ?
ಇಲ್ಲ.
ಹಾಗಾದರೆ ವರ್ತಮಾನದ ದುಃಖ ತೆಗೆಯಲು ಇರಬೇಕಲ್ಲವೆ?
ಅದು ಸಹಾ ಇಲ್ಲ.
ಹಾಗಾದರೆ ನೀನು ಭೂತದ, ಭವಿಷ್ಯದ ಅಥವಾ ವರ್ತಮಾನದ ದುಃಖವನ್ನು ತೆಗೆಯಲು ಪರಿಶ್ರಮ ಪಡುತ್ತಿಲ್ಲವಾದರೆ ಏತಕ್ಕಾಗಿ ನೀವು ಪರಿಶ್ರಮ ಪಡುತ್ತಿರುವಿರಿ?
ನೀವು ಕೇಳುತ್ತಿರುವುದು ಏನನ್ನು ಓ ರಾಜ? ಈ ದುಃಖವು ನಿಲ್ಲಲೇಬೇಕು ಮತ್ತು ಬೇರೆ ಯಾವ ದುಃಖವು ಉದಯಿಸಬಾರದು. ಅದಕ್ಕಾಗಿಯೇ ನಾವು ಪರಿಶ್ರಮ (ವ್ಯಾಯಾಮ) ಮಾಡುತ್ತಿದ್ದೇವೆ.
ಆದರೆ ನಾಗಸೇನ, ಭವಿಷ್ಯದ ದುಃಖವೆಂಬುದು ಇಲ್ಲವೇ?
ಇಲ್ಲವೆನ್ನುತ್ತೇನೆ.
ಹಾಗಾದರೆ ನೀವು ಅತಿ ಪಂಡಿತರು, ಯಾವುದು ಇಲ್ಲವೆ ಇಲ್ಲವೋ ಅದನ್ನು ತೆಗೆಯಲು ಹಿಂದೆ ಬಿದ್ದಿರುವಿರಿ?
ಓ ಮಹಾರಾಜ, ಇದು ಎಂದಾದರೂ ನಿನಗೆ ಸಂಭವಿಸಿದೆಯೆ, ಕೆಲವು ರಾಜರು ನಿನ್ನ ವಿರುದ್ಧ ಶತ್ರುಗಳಂತೆ ದಂಗೆ ಎದ್ದಿರುವರೇ?
ಖಂಡಿತವಾಗಿ.
ಬಹುಶಃ ಆಗ ನೀವು ಕಂದಕಗಳನ್ನು ತೋಡಿರಬಹುದು, ಗೋಡೆಯು ಕಟ್ಟಿರಬಹುದು, ಕಾವಲು ಸ್ತಂಭಗಳನ್ನು ಕಟ್ಟಿರಬಹುದು, ಕೋಟೆಗಳನ್ನು ಸಹಾ ಆಗಲೇ ಕಟ್ಟಿಸಿ ಮತ್ತೆ ಅದೇ ಸಮಯದಲ್ಲಿ ಆಹಾರವನ್ನು ಸಂಗ್ರಹಿಸಿದ್ದಿರಲ್ಲವೆ?
ಹಾಗೇನು ಇಲ್ಲ, ಅವೆಲ್ಲಾ ಅದಕ್ಕಿಂತ ಮುಂಚೆಯೇ ಸಿದ್ಧಪಡಿಸಿದ್ದೆನು.
ಅಥವಾ ನೀವು ಆಗತಾನೆ ಗಜಗಳಿಗೆ ಯುದ್ಧಶಿಕ್ಷಣ ನೀಡಿರಬಹುದು ಮತ್ತು ಅಶ್ವರೋಹಿಗಳಿಗೆ, ರಥಿಗಳಿಗೆ ಮತ್ತು ಬಿಲ್ಲಾಳರಿಗೆ ಹಾಗು ಕತ್ತಿಯೋಧರಿಗೆ ಯುದ್ಧ ಸಮಯದಲ್ಲೇ ಶಿಕ್ಷಣ ನೀಡಿರಬೇಕಲ್ಲವೇ?
ಹಾಗೇನೂ ಇಲ್ಲ, ಅದಕ್ಕೆ ಪೂರ್ವದಲ್ಲೇ ನಾವು ಅವರನ್ನೆಲ್ಲಾ ಶಸ್ತ್ರಾಭ್ಯಾಸ ಕಲಿಸಿದ್ದೆವು.
ಆದರೆ ಏಕೆ?
ಭವಿಷ್ಯದ ಅಪಾಯ ದೂರೀಕರಿಸುವ ಉದ್ದೇಶದಿಂದ.
ಏತಕ್ಕಾಗಿ? ಭವಿಷ್ಯದಲ್ಲಿ ಏನಾದರೂ ಅಪಾಯವಿದೆಯೇ?
ಹಾಗೇನೂ ಇಲ್ಲ.
ಹಾಗಾದರೆ ನೀವು ರಾಜರುಗಳು ಅತಿ ಪಂಡಿತರು, ಯಾವ ಅಪಾಯವೂ ಇಲ್ಲವೇ ಇಲ್ಲವೋ ಅದನ್ನು ದೂರೀಕರಿಸಲು ನಿಮ್ಮನ್ನು ನೀವೇ ಕಷ್ಟಕ್ಕೆ ಗುರುಮಾಡಿಕೊಳ್ಳುತ್ತ ಇರುವಿರಿ.
ದಯವಿಟ್ಟು ಇನ್ನೊಂದು ಉಪಮೆ ನೀಡುವಿರಾ?
ಇದಕ್ಕೆ ಉತ್ತರಿಸಿ ಮಹಾರಾಜ, ನಿಮಗೆ ಯಾವಾಗ ಬಾಯಾರಿಕೆ ಆಗುವುದೋ ಆಗ ನೀವು ಬಾವಿ ತೋಡಲು ಅಥವಾ ಕೆರೆ ನಿಮರ್ಿಸಲು ಅಥವಾ ಜಲಾಶಯಗಳನ್ನು ನಿಮರ್ಿಸಲು ಹೋಗುವಿರಾ?
ಖಂಡಿತ ಇಲ್ಲ, ಅವೆಲ್ಲಾ ಆ ಹಿಂದೆಯೇ ನಿಮರ್ಿಸಿರುತ್ತೇವೆ.?
ಆದರೆ ಏಕೆ?
ಭವಿಷ್ಯದ ಬಾಯಾರಿಕೆಯನ್ನು ತಡೆಯುವ ಉದ್ದೇಶದಿಂದ.
ಆದರೆ ಏಕೆ? ಭವಿಷ್ಯದಲ್ಲಿ ಬಾಯಾರಿಕೆ ಎನ್ನುವುದು ಇದೆಯೇ?
ಹಾಗೇನೂ ಇಲ್ಲ.
ಹಾಗಾದರೆ ನೀವು ಅತಿ ಪಂಡಿತರು ಓ ರಾಜ, ಇಲ್ಲದ ಆ ಭವಿಷ್ಯದ ಬಾಯಾರಿಕೆ ತಡೆಯಲು ಇಲ್ಲದ ಪರಿಶ್ರಮ ತೆಗೆದುಕೊಳ್ಳುವಿರಿ.
ಇನ್ನೊಂದು ಉಪಮೆ ನೀಡುವಿರಾ?
ಇದಕ್ಕೆ ಉತ್ತರಿಸಿ ಮಹಾರಾಜ, ಯಾವಾಗ ನಿಮಗೆ ಹಸಿವು ಆಗುವುದೋ ಆಗ ನೀವು ನೇಗಿಲು ಹೊಡೆಯಲು ಅಥವಾ ಬಿತ್ತಲು ಅಥವಾ ನೀರು ಹಾಯಿಸಲು ಅಥವಾ ಫಸಲು ಕೊಯ್ಯಲು ಹೋಗುವಿರಾ?
ಖಂಡಿತ ಇಲ್ಲ, ಅದನ್ನೆಲ್ಲಾ ಹಿಂದೆಯೇ ಮಾಡಿರುತ್ತೇವೆ.
ಆದರೆ ಏಕೆ ?
ಭವಿಷ್ಯದ ಹಸಿವು ತಡೆಯುವ ಉದ್ದೇಶದಿಂದ.
ಆದರೆ ಏಕೆ? ಭವಿಷ್ಯದಲ್ಲಿ ಹಸಿವು ಎನ್ನುವುದು ಇದೆಯೇ?
ಹಾಗೇನೂ ಇಲ್ಲ.
ಹಾಗಾದರೆ ನೀವು ಅತಿ ಪಂಡಿತರು ಓ ರಾಜ, ಇಲ್ಲದ ಆ ಭವಿಷ್ಯದ ಹಸಿವು ತಡೆಯಲು ಇಲ್ಲದ ಪರಿಶ್ರಮ ತೆಗೆದುಕೊಳ್ಳುವಿರಿ.
ಉಪಮೆ ಮೂಲಕ ಉತ್ತರಿಸುವುದರಲ್ಲಿ ನೀವು ನಿಪುಣರು ನಾಗಸೇನ.
4. ಬ್ರಹ್ಮಲೋಕದ ಬಗ್ಗೆ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಇಲ್ಲಿಂದ ಬ್ರಹ್ಮಲೋಕಕ್ಕೆ ಎಷ್ಟು ದೂರ?(76)ತುಂಬಾ ದೂರವಿದೆ ಓ ರಾಜ, ಮೇಲ್ಭಾಗದ ಕೋಣೆಯಷ್ಟು ದೊಡ್ಡ ಬಂಡೆಯನ್ನು ಅಲ್ಲಿಂದ ತಳ್ಳಿದರೆ, ಅದು ಪ್ರತಿನಿತ್ಯ 84000 ಯೋಜನಗಳಷ್ಟು ವೇಗದಲ್ಲಿ ಬಂದರೂ ಸಹಾ ಭೂಮಿಗೆ ಬಂದು ಸೇರುವಷ್ಟರಲ್ಲಿ ನಾಲ್ಕು ತಿಂಗಳಾಗುತ್ತದೆ.
ಒಳ್ಳೆಯದು ನಾಗಸೇನ, ಆದರೆ ನೀವೇ ಹೇಳುವಂತೆ ಇದ್ದಿಪಾದವನ್ನು ಕರಗತ ಮಾಡಿಕೊಂಡ ಭಿಕ್ಷುವು (ಮನೋ ಪ್ರಭುತ್ವ ಗಳಿಸಿದವನು), ಜಂಬುದ್ವೀಪದಿಂದ ಬ್ರಹ್ಮಲೋಕಕ್ಕೆ ಬಲಿಷ್ಠ ಮಾನವನು ಮಡಚಿದ ಕೈಯನ್ನು ತೆರೆಯುವಷ್ಟು ಅಥವಾ ತೆರೆದ ಕೈ ಮಡಚಿದ ವೇಗದಲ್ಲಿ ಅಲ್ಲಿರುತ್ತಾನೆ ಎನ್ನುವಿರಿ. ಇದನ್ನು ನಾನು ನಂಬಲಾರೆ. ಅಷ್ಟೇ ಬೇಗ, ಅಷ್ಟು ಯೋಜನೆಗಳನ್ನು ಆತನು ಹೇಗೆ ಕ್ರಮಿಸಬಲ್ಲನು.
ಥೇರರು ಕೇಳಿದರು : ಓ ರಾಜ, ನೀವು ಹುಟ್ಟಿದಂತಹ ಜನ್ಮಭೂಮಿ ಯಾವುದು?
ಅಲಸಂದ (ಬ್ಯಾಕ್ಟಿರೀಯಾದ ಅಲೆಕ್ಸಾಂಡ್ರಿಯಾ) ದ್ವೀಪದಲ್ಲಿ, ಅಲ್ಲೇ ನಾನು ಹುಟ್ಟಿದ್ದು.
ಆ ಅಲಸಂದ ದ್ವೀಪವು ಇಲ್ಲಿಂದ ಎಷ್ಟು ದೂರದಲ್ಲಿದೆ?
ಬಹುಶಃ 200 ಯೋಜನೆಗಳಷ್ಟು.
ಅಲ್ಲಿ ಯಾವುದಾದರೂ ಕರ್ತವ್ಯದ ಮೇಲೆ ಹೋಗಿದ್ದಂತಹ ನೆನಪನ್ನು ಈಗ ಸ್ಮರಿಸಬಲ್ಲಿರಾ?
ಖಂಡಿತವಾಗಿ.
ಇಷ್ಟು ಕ್ಷಿಪ್ರವಾಗಿಯೇ ಮಹಾರಾಜ, ಅದಂತು 200 ಯೋಜನೆಗಳಷ್ಟು ದೂರದಲ್ಲಿದೆ. ಅಷ್ಟು ಬೇಗ ಅಲ್ಲಿ ಹೋಗಿದ್ದೀರಾ? ಇದೇರೀತಿಯಲ್ಲಿ ಮಹಾರಾಜ, ಇದ್ದಿ ಸಂಪನ್ನನು ಹೋಗುತ್ತಾನೆ.
ನೀವು ಉತ್ತರಿಸುವುದರಲ್ಲಿ ಚತುರರು ನಾಗಸೇನ.
5. ದ್ದಿನ್ನಂ ಲೋಕುಪ್ಪನ್ನಾ ನಂ ಸಮಕಭಾವ ಪನ್ಹೊ (ಪುನರ್ಜನ್ಮದ ಅವಧಿಯ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಒಬ್ಬನು ಇಲ್ಲಿಯೇ ಸತ್ತು ಬ್ರಹ್ಮಲೋಕದಲ್ಲಿ ಜನ್ಮಿಸುತ್ತಾನೆ ಮತ್ತು ಮತ್ತೊಬ್ಬನು ಅದೇ ವೇಳೆಯಲ್ಲಿ ಇಲ್ಲೇ ಸತ್ತು ಕಾಸ್ಮಿರ (ಕಾಶ್ಮಿರ)ದಲ್ಲಿ ಹುಟ್ಟುತ್ತಾನೆ. ಇವರಿಬ್ಬರಲ್ಲಿ ಯಾರು ಬೇಗ ತಲುಪುತ್ತಾರೆ? (77)ಇಬ್ಬರೂ ಏಕಾಕಾಲದಲ್ಲೇ, ಓ ಮಹಾರಾಜ.
ಉಪಮೆಯಿಂದ ವಿವರಿಸಬಲ್ಲಿರಾ?
ಮಹಾರಾಜ ನೀವು ಜನಿಸಿದ್ದು ಯಾವ ಊರಿನಲ್ಲಿ?
ಕಲಸಿ ಎಂಬ ಹಳ್ಳಿಯಲ್ಲೇ ನಾನು ಜನಿಸಿದ್ದು.
ಇಲ್ಲಿಂದ ಕಲಸಿ ಎಷ್ಟು ದೂರದಲ್ಲಿದೆ?
ಸುಮಾರು 200 ಯೋಜನೆಗಳಷ್ಟಿದೆ.
ಇಲ್ಲಿಂದ ಕಾಸ್ಮಿರ ಎಷ್ಟು ದೂರದಲ್ಲಿದೆ?
12 ಯೋಜನೆಗಳು ದೂರದಲ್ಲಿದೆ?
ಈಗ ಕಲಸಿಯ ಬಗ್ಗೆ ಯೋಚಿಸಿ ರಾಜ.
ಆಯಿತು.
ಈಗ ಕಾಶ್ಮಿರದ ಬಗ್ಗೆ ಯೋಚಿಸಿ ಮಹಾರಾಜ.
ಆಯಿತು.
ಯಾವುದರ ಬಗ್ಗೆ ನೀವು ಕ್ಷಿಪ್ರವಾಗಿ ಯೋಚಿಸಿದಿರಿ?
ಎರಡನ್ನೂ ಸಹಾ ಅಷ್ಟೇ ಕಾಲದಲ್ಲಿ ಯೋಚಿಸಿದೆನು.
ಹಾಗೆಯೇ ಮಹಾರಾಜ, ಬ್ರಹ್ಮಲೋಕವಾಗಲಿ, ಕಾಶ್ಮಿರವಾಗಲಿ ಪುನರ್ಜನ್ಮ ಪಡೆಯಲು ಅಷ್ಟೇಕಾಲ ಹಿಡಿಯುತ್ತದೆ ಹೊರತು ಬ್ರಹ್ಮಲೋಕಕ್ಕೇನೂ ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಇದಕ್ಕೆ ಉತ್ತರಿಸು ಮಹಾರಾಜ, ಎರಡು ಪಕ್ಷಿಗಳು ಹಾರಾಡುತ್ತಿವೆ, ಒಂದು ಎತ್ತರವಾದ ಮರಕ್ಕಿಂತಲೂ ಎತ್ತರದಲ್ಲಿ ಹಾರಾಡುತ್ತಿದೆ. ಇನ್ನೊಂದು ಸಣ್ಣ ಗಿಡದ ಮೇಲೆ ಹಾರಾಡುತ್ತಿದೆ. ಈಗ ಇವರಡರಲ್ಲಿ ಯಾವುದರ ನೆರಳು ನೆಲದಲ್ಲಿ ಮೊದಲು ಬೀಳುವುದು.
ಎರಡರ ನೆರಳು ಸಮಕಾಲದಲ್ಲೇ ಜೊತೆಯಲ್ಲೇ ಕಾಣುವುವು?
ಅದೇರೀತಿಯಲ್ಲಿ ಮಹಾರಾಜ, ಇಬ್ಬರೂ ಏಕಕಾಲದಲ್ಲಿ ಪುನರ್ಜನ್ಮ ಪಡೆಯುವರು.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
6. ಬೊಜ್ಝಾಂಗಗಳ ಪ್ರಶ್ನೆ (ಬೋಧಿ ಅಂಗಗಳ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಬೋಧಿ ಅಂಗಗಳೆಷ್ಟು? (78)ಮಹಾರಾಜ, ಏಳು ಬೋಧಿ ಅಂಗಗಳಿವೆ.
ಎಷ್ಟು ಅಂಗಗಳಿಂದ ಒಬ್ಬನು ಬೋಧಿ ಪಡೆಯುತ್ತಾನೆ ಹಾಗು ಪ್ರಾಜ್ಞನಾಗುತ್ತಾನೆ.
ಒಂದರಿಂದ, ಅದೇ ಸತ್ಯದ ಅನ್ವೇಷಣೆಯ ಬೋಧಿ ಅಂಗ (ಧಮ್ಮವಿಚಯ ಸಂಬೋಧಿ ಅಂಗ)ದಿಂದ ಆಗುತ್ತಾನೆ.
ಹಾಗಾದರೆ ನೀವು ಏತಕ್ಕಾಗಿ 7 ಬೋಧಿ ಅಂಗಗಳಿವೆ ಎಂದು ಹೇಳಿದಿರಿ?
ನನಗೆ ಉತ್ತರಿಸಿ ಓ ರಾಜ, ಬಹುಶಃ ಕತ್ತಿಯು ಒರೆಯಲ್ಲೇ ಇದ್ದಾಗ, ಕೈಯಲ್ಲಿ ತೆಗೆದುಕೊಳ್ಳದೆ ಇದ್ದಾಗ, ಅದು ನೀವು ಇಚ್ಛಿಸುವುದನ್ನು ಕತ್ತರಿಸಬಲ್ಲದೇ?
ಖಂಡಿತ ಇಲ್ಲ.
ಅದೇ ರೀತಿಯಲ್ಲಿ ಮಹಾರಾಜ, ಮಿಕ್ಕ ಬೋಧಿ ಅಂಗಗಳ ಹೊರತು ಸತ್ಯ ಅನ್ವೇಷಣೆಗೆ ಬೋಧಿ ಗಳಿಸಲಾರವು.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
7. ಪಾಪ ಪುಣ್ಯಾನಂ ಅಪ್ಪಾನಪ್ಪಭಾವ ಪ್ರಶ್ನೆ (ಪಾಪ ಪುಣ್ಯಗಳಲ್ಲಿ ಶ್ರೇಷ್ಠತನದ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಯಾವುದು ಹೆಚ್ಚು ಪುಣ್ಯವೇ ಅಥವಾ ಪಾಪವೇ? (79)ಪುಣ್ಯ.
ಆದರೆ ಏಕೆ?
ಓ ಮಹಾರಾಜ, ಯಾರು ತಪ್ಪು ಮಾಡುತ್ತಾನೆಯೋ, ಆತನಲ್ಲಿ ಪಶ್ಚಾತ್ತಾಪ ಉಂಟಾಗುತ್ತದೆ ಮತ್ತು ತನ್ನ ಪಾಪವನ್ನು ಅರಿತುಕೊಳ್ಳುತ್ತಾನೆ ಮತ್ತು ತಿದ್ದಿಕೊಳ್ಳುತ್ತಾನೆ. ಹೀಗಾಗಿ ಪಾಪವು ಹೆಚ್ಚಾಗುವುದಿಲ್ಲ. ಆದರೆ ಒಬ್ಬ ಪುಣ್ಯ ಮಾಡುವಾಗ ಪಶ್ಚಾತ್ತಾಪ ಉಂಟಾಗುವುದಿಲ್ಲ. ಆನಂದವು ಉತ್ಪನ್ನವಾಗುತ್ತದೆ. ಪ್ರಮೋದವು ಉಂಟಾಗುತ್ತದೆ. ಇದರ ಪರಿಣಾಮವಾಗಿ ಇಡೀ ಕಾಯವೆಲ್ಲಾ ಪ್ರಶಾಂತತೆ ಆವರಿಸುತ್ತದೆ, ನಂತರ ಸುಖವು ಉದಯಿಸುತ್ತದೆ. ಇಡೀ ಚಿತ್ತವೆಲ್ಲಾ ಸುಖವು ಆವರಿಸಿ ಸಮಾಧಿಯು ಲಭಿಸುತ್ತದೆ. ಹೀಗೆ ಸಮಾಹಿತವಾದ ಚಿತ್ತವು ಯಥಾಭೂತವಾದ ಸತ್ಯವನ್ನು ಅರಿಯುತ್ತದೆ. ಆದ್ದರಿಂದ ಪುಣ್ಯವು ಹೆಚ್ಚಿನದು. ಉದಾಹರಣೆಗೆ ಒಬ್ಬನ ಕೈಕಾಲು ಕತ್ತರಿಸಲ್ಪಟ್ಟಿದ್ದರೂ ಆತನು ಬುದ್ಧರಿಗೆ ಹಿಡಿಯಷ್ಟು ಹೂಗಳನ್ನು ದಾನವಾಗಿ ನೀಡಿದ್ದೇ ಆದರೆ ಆತನು 91 ಕಲ್ಪಗಳಷ್ಟು ಕಾಲ ನರಕವನ್ನು ಪ್ರವೇಶಿಸುವುದಿಲ್ಲ. ಆದ್ದರಿಂದಲೇ ನಾನು ಹೇಳುವೆನು ಓ ರಾಜ, ಪುಣ್ಯವೇ ದೊಡ್ಡದು, ಹೆಚ್ಚಿನದು ಪಾಪವಲ್ಲ.
ಬಹಳ ಒಳ್ಳೆಯದು ನಾಗಸೇನ.
8. ಜಾನಂತಾ ಜಾನಂತ ಪಾಪಕರಣ ಭಾವ ಪನ್ಹೊ (ಪಾಪಪ್ರಜ್ಞೆಯ ಪ್ರಶ್ನೆ)
ರಾಜರು ಕೇಳಿದರು : ಭಂತೆ ನಾಗಸೇನ, ಯಾವುದು ದೊಡ್ಡ ಪಾಪ, ಅರಿವಿದ್ದು ಪಾಪ ಮಾಡುವಿಕೆಯೋ ಅಥವಾ ಅಜಾಗರೂಕವಾಗಿ (ಅರಿವಿಲ್ಲದೆ) ಪಾಪ ಮಾಡುವಿಕೆಯೋ? (80)ಓ ಮಹಾರಾಜ, ಅರಿವಿಲ್ಲದೆಯೇ ಅಜಾಗರೂಕನಾಗಿ ಪಾಪ ಮಾಡುವುದರಿಂದಾಗಿ ಹೆಚ್ಚು ಪಾಪವಿದೆ.
ಹಾಗಾದರೆ ಭಂತೆ, ನಾವು ನಮ್ಮ ಕುಟುಂಬದ ಅಥವಾ ಸಭೆಯಲ್ಲಿ ಯಾರಾದರೂ ಅರಿವಿಲ್ಲದೆ ತಪ್ಪು ಮಾಡಿದರೆ, ದ್ವಿಗುಣ ಶಿಕ್ಷೆ ನೀಡೋಣವೇ?
ಓ ಮಹಾರಾಜ, ಇದನ್ನು ನೀವು ಹೇಗೆ ಯೋಚಿಸುವಿರಿ? ಒಬ್ಬನು ಆತನ ಅರಿವು ಇರುವಂತೆಯೇ ಕೆಂಪಗೆ ಕಾದ ಸಲಾಕಿ ಹಿಡಿಯುತ್ತಾನೆ ಮತ್ತು ಮತ್ತೊಬ್ಬ ಅರಿವಿಲ್ಲದೆ ಹಿಡಿಯುತ್ತಾನೆ ಇವರಲ್ಲಿ ಯಾರಿಗೆ ಹೆಚ್ಚು ಸುಟ್ಟಗಾಯಗಳಾಗಿರುತ್ತದೆ?
ಯಾರು ಅರಿವಿಲ್ಲದೆ ಹಿಡಿದಿರುವನೋ ಆತನಿಗೆ.
ಓ ಮಹಾರಾಜ, ಅದೇರೀತಿಯಲ್ಲಿ ಪಾಪವು ಸಹಾ ಅರಿವಿಲ್ಲದೆ ಮಾಡಿದರೆ ಹೆಚ್ಚು ಹಾನಿ ತರುತ್ತದೆ.
ತುಂಬಾ ಒಳ್ಳೆಯದು ನಾಗಸೇನ.
9. ಉತ್ತರ ಕುರುಕಾದಿಗಮನ ಪನ್ಹೋ (ಸಶರೀರ ಪ್ರಯಾಣ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಯಾರಾದರೂ ಸಶರೀರವಾಗಿ ಉತ್ತರ ಕುರು ರಾಜ್ಯಕ್ಕೆ ಅಥವಾ ಬ್ರಹ್ಮಲೋಕಕ್ಕೆ ಅಥವಾ ಇತರ ನಾಲ್ಕು ಖಂಡಗಳಿಗೆ ಹೋಗಬಹುದೇ? (81)ಖಂಡಿತವಾಗಿ ಹೋಗಬಲ್ಲರು, ಅಂತಹವರಿದ್ದಾರೆ.
ಆದರೆ ಹೇಗೆ?
ಓ ರಾಜ, ನೀವು ಎರಡು ಅಡಿ ನೆಲವನ್ನು ಯಾವಾಗಲಾದರೂ ಹಾರಿದ್ದೀರಾ?
ಭಂತೆ ನಾಗಸೇನ, ನಾನು 12 ಅಡಿಯನ್ನು ಲಂಘನ (ಜಿಗಿಯಬಲ್ಲೆ) ಮಾಡಬಲ್ಲೆ.
ಆದರೆ ಹೇಗೆ ?
ನಾನು ಅಲ್ಲಿಗೆ ಹಾರುವಂತೆ ಮನಸ್ಸಿನಿಂದ ನಿರ್ಧರಿಸುತ್ತೇನೆ ಮತ್ತು ನನ್ನ ನಿಧರ್ಾರದ ಕ್ಷಣದಿಂದಲೇ ನನ್ನ ಶರೀರವು ಹಗುರವಾದಂತೆ ಭಾಸವಾಗಿ ಜಿಗಿದಿರುತ್ತೇನೆ.
ಅದೇರೀತಿ ಮಹಾರಾಜ, ಭಿಕ್ಷುವು ತನ್ನ ಇದ್ದಿಬಲದಿಂದ ಮತ್ತು ಮನೋ ಪ್ರಭುತ್ವದಿಂದ, ನಿಧರ್ಾರದಿಂದ ಯಾವಾಗಲಾದರೂ ಸಂದರ್ಭ ಬಂದಾಗ ಸಶರೀರದಿಂದ ಆಕಾಶದಲ್ಲಿ ಹಾರುತ್ತಾನೆ.
ಬಹಳ ಒಳ್ಳೆಯದು ನಾಗಸೇನ.
10. ದೀಘಟ್ಟಿ ಪನ್ಹೊ (ದೀರ್ಘ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ನೀವು ಹೇಳುವಿರಿ, 100 ಯೋಜನಕ್ಕಿಂತಲೂ ಉದ್ದವಾದ ಮೂಳೆಗಳಿರುತ್ತವೆ ಎಂದು. ಆದರೆ 100 ಯೋಜನದ ಯಾವ ಮರವೂ ಇಲ್ಲ. ಹಾಗಿರುವಾಗ ಮೂಳೆ ಹೇಗೆ ಅಷ್ಟು ಉದ್ದವಿರುತ್ತದೆ? (82)ಆದರೆ ಮಹಾರಾಜ ನೀವು ಕೇಳಿರಬಹುದು, ಸಮುದ್ರದಲ್ಲಿ 500 ಯೋಜನೆಗಳಷ್ಟು ಉದ್ದವಾದ ಮೀನುಗಳಿರುತ್ತವೆ (ತಿಮಿಂಗಿಲ), ನೀವು ಕೇಳಿಲ್ಲವೆ?
ಹೌದು, ನಾನು ಕೇಳಿದ್ದೇನೆ.
ಹಾಗಿರುವಾಗ 100 ಯೋಜನ ಉದ್ದವಾದ ಮೂಳೆ ಇರಲಾರದೆ?
ಬಹಳ ಒಳ್ಳೆಯದು ನಾಗಸೇನ.
11. ಅಸ್ಸಾಸ ಪಸ್ಸಾಸ ನಿರೋಧ ಪನ್ಹೊ (ಉಸಿರಾಟದ ನಿರೋಧ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಉಶ್ವಾಸ ಮತ್ತು ನಿಶ್ವಾಸವನ್ನು ನಿಗ್ರಹಿಸಬಹುದೆಂದು ಅದು ಸಾಧ್ಯವೆಂದು ನೀವು ಹೇಳುವಿರಿ, ಇದು ಸಾಧ್ಯವೇ?(83)ಹೌದು ಇದು ಸಾಧ್ಯ.
ಆದರೆ ಹೇಗೆ?
ಮಹಾರಾಜ, ನೀವು ಕೆಲವು ಮನುಷ್ಯನು ಗೊರಕೆ ಹೊಡೆಯುವುದನ್ನು ಕೇಳಿರಬೇಕಲ್ಲವೇ?
ಹೌದು.
ಆದರೆ ಆ ಗೊರಕೆ ಶಬ್ದಗಳನ್ನು ಒಂದುರೀತಿ ದೇಹವನ್ನು ಬಾಗಿಸಿದಾಗ ತಡೆಯಬಹುದು ಅಲ್ಲವೇ?
ಹೌದು.
ಗೊರಕೆಯ ಶಬ್ದಗಳನ್ನು ಕೇವಲ ದೇಹವನ್ನು ಬಾಗಿಸುವುದರಿಂದ ತಡೆಯ ಬಹುದಾಗಿದ್ದರೆ, ಶೀಲದಿಂದ, ಸಮಾಧಿಯಿಂದ ಮತ್ತು ಪ್ರಜ್ಞಾದ ಅಭಿವೃದ್ಧಿಯಿಂದ ಉಸಿರಾಟದ ನಿಲುಗಡೆ ಸಾಧ್ಯವಿಲ್ಲವೆ? ಮತ್ತು ಯಾರು ಚತುರ್ಥ ಸಮಾಧಿಯನ್ನು ಪ್ರಾಪ್ತಿಗಳಿಸಿರುವನೋ ಆತನ ಉಸಿರಾಟವು ನಿಂತಿರುತ್ತದೆ.
ಬಹು ಒಳ್ಳೆಯದು ನಾಗಸೇನ.
12. ಸಮುದ್ರ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಸಮುದ್ರ, ಸಮುದ್ರ ಎಂದು ಕರೆಯುವರು. ಯಾವ ಕಾರಣದಿಂದ ನೀರನ್ನು ಸಮುದ್ರ ಎಂದು ಕರೆಯುತ್ತಾರೆ? (84)ಥೇರರು ಹೇಳಿದರು ಏಕೆಂದರೆ ನೀರು ಇರುವಷ್ಟೇ ಲವಣ (ಉಪ್ಪು)ವಿದೆ. ಹಾಗೆಯೇ ಲವಣವಿರುವಷ್ಟು ನೀರಿದೆ (ಉದಕ). ಹೀಗೆ ಸಮ ಪ್ರಮಾಣದ ಉದಕ (ನೀರು) ಇರುವುದರಿಂದ ಸಮುದ್ರ ಎನ್ನುತ್ತಾರೆ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
13. ಸಮುದ್ರದ ಏಕರಸದ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಯಾವ ಕಾರಣದಿಂದ ಸಮುದ್ರವು ಏಕರಸ(ರುಚಿ)ವಾದ ಉಪ್ಪಿನ ರುಚಿ ಹೊಂದಿದೆ. (85)ಏಕೆಂದರೆ ಚಿರಕಾಲದಿಂದ ನಿಂತಿರುವುದರಿಂದ ಸಮುದ್ರವು ಉಪ್ಪಿನ ಏಕೈಕ ರುಚಿಯನ್ನು ಹೊಂದಿದೆ.
14. ಸುಖುಮ ಪನ್ಹೊ (ಸೂಕ್ಷ್ಮ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಅತ್ಯಂತ ಸೂಕ್ಷ್ಮವಾದದ್ದನ್ನು ವಿಭಜಿಸಬಹುದೇ? (86)ಹೌದು ಮಹಾರಾಜ, ಅತ್ಯಂತ ಸೂಕ್ಷ್ಮವಾದುದನ್ನು ವಿಭಜಿಸಬಹುದು.
ಮತ್ತೆ ಭಂತೆ, ಎಲ್ಲಕ್ಕಿಂತ ಅತ್ಯಂತ ಸೂಕ್ಷ್ಮವಾದುದು ಯಾವುದು? (87)
ಧಮ್ಮ (ಸತ್ಯ/ಮನಸ್ಸಿನ ವಿಷಯ) ಮಹಾರಾಜ, ಅತ್ಯಂತ ಸೂಕ್ಷ್ಮವಾಗಿದೆ, ಹಾಗಿದ್ದರೂ ಎಲ್ಲಾ ಧಮ್ಮಗಳೂ ಸೂಕ್ಷ್ಮವಲ್ಲ. ಕೆಲವು ಸ್ಥೂಲವಾಗಿಯು ಇದೆ. ಸೂಕ್ಷ್ಮ ಮತ್ತು ಸ್ಥೂಲಗಳ ವಿವರಣೀಯ ಭಾವನೆಗಳಾಗಿವೆ. ಆದರೆ ಏನೆಲ್ಲವನ್ನು ವಿಭಜಿಸಬಹುದೋ, ಅದೆಲ್ಲವನ್ನು ಪ್ರಜ್ಞಾದಿಂದ (ಪ್ರಜ್ಞಾ) ವಿಭಜಿಸಬಹುದು ಮತ್ತು ಪಞ್ಞವನ್ನು ವಿಭಜಿಸುವಂತಹುದು ಬೇರೆ ಯಾವುದೂ ಇಲ್ಲ.
ಅತ್ಯಂತ ವಿಶ್ಲೇಷಣೆಯಿಂದ ಉತ್ತರಿಸಿದಿರಿ ನಾಗಸೇನ.
15. ವಿಞ್ಞಾನ ನಾನತ್ತ ಪನ್ಹೊ (ನಾನಾರ್ಥದ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ವಿಞ್ಞಾಣ, ಪಞ್ಞಾ ಮತ್ತು ಆತ್ಮ (ಭೂತಸ್ಮಿಂ ಜೀವೋ) ಇವು ಮೂರರ ಅಕ್ಷರ ಮತ್ತು ವ್ಯಂಜನ (ಅರ್ಥ/ಸಾರ) ಬೇರೆ ಬೇರೆ ಆಗಿದೆಯೇ ಅಥವಾ ಸಾರ/ಅರ್ಥ ಒಂದೇ ಆಗಿದ್ದು ಕೇವಲ ಪದಗಳು (ಅಕ್ಷರ) ಬೇರೆಯೇ? (88)ಓ ಮಹಾರಾಜ, ಅರಿಯುವಿಕೆಯು (ವಿಜಾನನ) ವಿನ್ಯಾಣದ ಲಕ್ಷಣವಾಗಿದೆ. ವಿವೇಚನೆಯು (ಪಜಾನನವು) ಪಞ್ಞಾದ ಲಕ್ಷಣವಾಗಿದೆ, ಜೀವಿಗಳಲ್ಲಿ ಜೀವಿ (ಆತ್ಮ)ಯು ಲಭಿಸುವುದಿಲ್ಲ (ಇರುವುದಿಲ್ಲ).
ಆದರೆ ಆತ್ಮದಂತಹ ವಿಷಯವು ನಮ್ಮಲ್ಲಿ ಇಲ್ಲವಾದರೆ ಕಣ್ಣಿನಿಂದ ನೋಡು ವಂತಹುದು, ಕಿವಿಯಿಂದ ಕೇಳುವಂತಹುದು, ಮೂಗಿನಿಂದ ಆಘ್ರಾಣಿಸುವಂತಹುದು, ನಾಲಿಗೆಯಿಂದ ರುಚಿಸುವುದು, ದೇಹದಿಂದ ಸ್ಪಶರ್ಿಸುವಂತಹುದು ಮತ್ತು ಮನಸ್ಸಿನಿಂದ ಅರಿಯುವಂತಹುದು ಅದು ಯಾವುದು? ಏನು?
ಆಗ ಥೇರರು ಉತ್ತರಿಸಿದರು ನೀವು ಹೇಳುವ ಹಾಗೇ ಆತ್ಮವು ದೇಹದಿಂದ ಪೂರ್ಣವಾಗಿ ಬೇರೆಯಾಗಿ ಈ ಎಲ್ಲಾ ಕಾರ್ಯವು ಮಾಡುವ ಹಾಗಿದ್ದರೆ ಕಣ್ಣಿನ ದ್ವಾರವನ್ನು (ಕಣ್ಣನ್ನು) ಕಿತ್ತು ಹಾಕಿದರೆ ಅಗಲವಾಗಿ ಹರಿದರೆ ಅದು ಇನ್ನೂ ಚೆನ್ನಾಗಿ ವಿಶಾಲವಾಗಿ ನೋಡುತ್ತಿತ್ತು, ಕಿವಿಗಳನ್ನು ಹರಿದಿದ್ದರೆ ಇನ್ನೂ ಹೆಚ್ಚು ಧ್ವನಿಯನ್ನು ಕೇಳುತ್ತಿತ್ತು. ಮೂಗನ್ನು ಕತ್ತರಿಸಿದ್ದರೆ ಇನ್ನೂ ಹೆಚ್ಚು ವಾಸನೆಗಳನ್ನು ಆಘ್ರಾಣಿಸುತ್ತಿತ್ತು ಹಾಗೆಯೇ ದೇಹವನ್ನು ನಾಶಗೊಳಿಸಿದರೆ, ಚೂರು ಚೂರಾಗಿ ಕತ್ತರಿಸಿದ್ದರೆ ಇನ್ನೂ ವಿಶಾಲವಾಗಿ ಸ್ಪರ್ಶದ ಅನುಭೂತಿ ಪಡೆಯುತ್ತಿತ್ತೇ?
ಖಂಡಿತವಾಗಿ ಇಲ್ಲ ಭಂತೆ.
ಹಾಗಿದ್ದರೆ ದೇಹದಲ್ಲಿ ಆತ್ಮವು ಇಲ್ಲ.
ನೀವು ವಿಶ್ಲೇಷಣೆಯಿಂದ ಉತ್ತರಿಸುವುದರಲ್ಲಿ ನಿಪುಣರು ನಾಗಸೇನ.
16. ಅರೂಪಧಮ್ಮವವತ್ಥಾನ ದುಕ್ಕರ ಪನ್ಹೊ (ದುಸ್ತರ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ದುಸ್ತರವಾದುದು ಏನಾದರೂ ಭಗವಾನರು ಮಾಡಿದ್ದಾರೆಯೇ? (89)ಥೇರರು ಹೇಳಿದರು ಅತ್ಯಂತ ದುಕ್ಷರವಾದ (ದುಸ್ತರವಾದ)ದನ್ನು ಭಗವಾನರು ಸಾಧಿಸಿದ್ದಾರೆ ಮಹಾರಾಜ.
ಭಗವಾನರು ಸಾಧಿಸಿದಂತಹ ಆ ದುಸ್ತರವಾದದು ಯಾವುದು?
ಮಹಾರಾಜ, ಭಗವಾನರು ಅರೂಪ ಧಮ್ಮಗಳಾದ ಚಿತ್ತ, ಚೇತಸಿಕಾಗಳಲ್ಲಿ, ಎಲ್ಲಾ ಮಾನಸಿಕಾ ಸ್ಥಿತಿಗಳು ಯಾವ ಇಂದ್ರೀಯವನ್ನು ಅವಲಂಬಿಸಿವೆ, ಹೇಗೆ ಪ್ರಕ್ರಿಯೆ ನಡೆಯುತ್ತಿದೆ, ಇಂತಹ ಇಂದ್ರೀಯ, ಇಂತಹ ಸ್ಪರ್ಶ, ಇಂತಹ ವೇದನೆ, ಇಂತಹ ಗ್ರಹಿಕೆ, ಇಂತಹ ಇಚ್ಛೆ ಮತ್ತು ಇಂತಹ ಮನಸ್ಸು (ಚಿತ್ತ) ಎಂದು ವಿಶ್ಲೇಷಿತವಾಗಿ ವಿವೇಚಿತವಾಗಿ ವಿವರಿಸುತ್ತಾರೆ.
ಇದನ್ನು ಉಪಮೆಯೊಂದಿಗೆ ವಿವರಿಸುವಿರಾ?
ಊಹಿಸಿ ಮಹಾರಾಜ ಒಬ್ಬನು ಸಮುದ್ರದ ನೀರನ್ನು ಕೈಯಲ್ಲಿ ತೆಗೆದುಕೊಂಡು ನಾಲಗೆಯಿಂದ ರುಚಿನೋಡಿ ಪರೀಕ್ಷಿಸಿ ಆ ನೀರಿನ ಮೂಲವನ್ನು ಹೀಗೆ ಹೇಳುತ್ತಾನೆಯೇ? ಇದು ಗಂಗಾನದಿಯದು, ಜಮುನಾ ನದಿಯದು, ಅಚಿರಾವತಿಯದು, ಸರವೂ ನದಿಯದು ಅಥವಾ ಮಾಹಿ ನದಿಯದು ಎಂದು.
ಅದು ಅಸಾಧ್ಯ ಭಂತೆ.
ಓ ಮಹಾರಾಜ, ಅದಕ್ಕಿಂತಲೂ ದುಸ್ತರವಾದದು ಇಂದ್ರೀಯಗಳೊಂದಿಗೆ ಚಿತ್ತ ಚೇತಸಿಕಾಗಳ ವಿಶ್ಲೇಷಣೆ, ವಿವೇಚನೆ ಆಗಿದೆ ಮಹಾರಾಜ.
ಬಹು ಚೆನ್ನಾಗಿ ವಿವೇಚನೆಯುತವಾಗಿ ಉತ್ತರಿಸಿದಿರಿ ನಾಗಸೇನ.
ಇಲ್ಲಿಗೆ 7ನೇಯ ವರ್ಗ ಮುಗಿಯಿತು
(ಇದರಲ್ಲಿ 16 ಪ್ರಶ್ನೆಗಳಿವೆ).
ಮಿಲಿಂದ ಪನ್ಹಾ ಪುಚ್ಛಾ ವಿಸಜ್ಜನಾ
(ಮಿಲಿಂದ ಪ್ರಶ್ನೆಗಳಿಗೆ ಮಧ್ಯಂತರ ವಿರಾಮ)
ಥೇರರು ಕೇಳಿದರು ಓ ರಾಜನೇ, ಈಗ ಕಾಲವೆಷ್ಟು ತಿಳಿದಿದೆಯೇ?ಹೌದು ಭಂತೆ ಗೊತ್ತಿದೆ, ಮೊದಲನೆಯ ರಾತ್ರಿ ಜಾವವು ಮುಗಿದಿದೆ (10 ಗಂಟೆ ರಾತ್ರಿ) ಮಧ್ಯದ ಜಾವವು ಪ್ರಾರಂಭವಾಗಿದೆ. ಎಲ್ಲೆಡೆ ದೀಪಗಳು ಹಚ್ಚಲಾಗಿದೆ. ನಾಲ್ಕು ಧ್ವಜಗಳು ಹಾರಾಡಲು ಆಜ್ಞೆ ನೀಡಲಾಗಿದೆ ಮತ್ತು ಉಚಿತವಾದ ದಾನಗಳನ್ನು ಕೋಶದಿಂದ ನೀಡಲು ಸಿದ್ಧವಾಗಿವೆ.
ಆಗ ಯೋನಕರು ಹೀಗೆ ಹೇಳಿದರು ಮಹಾರಾಜ, ತುಂಬಾ ಒಳ್ಳೆಯದು, ಈ ಭಿಕ್ಖುವು ಅತ್ಯಂತ ಜ್ಞಾನಿಗಳು, ಅರ್ಹರಾಗಿದ್ದಾರೆ.
ಹೌದು ನನ್ನ ಜನರೇ, ಇವರು ಅತ್ಯಂತ ಅರ್ಹರಾದ ಭಿಕ್ಕುಗಳಾಗಿದ್ದಾರೆ, ಜೀವಿಗಳಾಗಿದ್ದಾರೆ. ನನ್ನಂತಹ ಶಿಷ್ಯನನ್ನು ಸಹಾ ಸತ್ಯದ ಬಳಿಗೆ ಕರೆದೊಯ್ಯಲು ತಡಮಾಡದ ಶ್ರೇಷ್ಠ ಗುರುಗಳು ಇವರು ಆಗಿದ್ದಾರೆ ಎಂದು ಮಿಲಿಂದರು ನುಡಿದರು.
ರಾಜನಿಗೆ ತಾನು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ ನಾಗಸೇನರ ಬಗ್ಗೆ ಸಂತೃಪ್ತಿಯಾಗಿತ್ತು. ಅವರಿಗಾಗಿ ಲಕ್ಷ ಕಹಪಣಗಳ ಮೌಲ್ಯವುಳ್ಳ ಚೀವರವನ್ನು ದಾನ ಮಾಡಿದರು ಮತ್ತು ಹೀಗೆ ನುಡಿದರು ಪೂಜ್ಯ (ಭಂತೆ) ನಾಗಸೇನ, ಇಂದಿನಿಂದ 800 ದಿನಗಳವರೆಗೆ ನಮ್ಮಲ್ಲಿ ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಮತ್ತು ಅರಮನೆಯಲ್ಲಿ ನಿಮಗೆ ಇಷ್ಟವಾದ ಏನನ್ನು ಸಹಾ ನೀವು ಸ್ವೀಕರಿಸಬಹುದು.
ಅದಕ್ಕೆ ನಾಗಸೇನರವರು ತಾವು ಸಂತೃಪ್ತರು ಹಾಗು ಅವಶ್ಯಕವಾದುದೆಲ್ಲಾ ತಮ್ಮಲ್ಲಿ ಇದೆ ಎಂದು ನುಡಿದು ನಿರಾಕರಿಸಿದರು.
ಆಗ ರಾಜರು ಹೀಗೆಂದರು ನನಗೆ ಗೊತ್ತಿದೆ ಭಂತೆ, ನಿಮಗೆ ಜೀವನಕ್ಕೆ ಬೇಕಾಗುವಷ್ಟು ಇದೆ. ಆದರೆ ನೀವು ನನ್ನನ್ನು ಕಾಪಾಡಬೇಕು ಮತ್ತು ನಿಮ್ಮನ್ನು ಕಾಪಾಡಿಕೊಳ್ಳಬೇಕು. ಏಕೆಂದರೆ ನನ್ನಿಂದ ನೀವು ಏನನ್ನು ಪಡೆಯಲಿಲ್ಲ ಮತ್ತು ನಾನು ನಿಮಗೆ ಏನನ್ನೂ ನೀಡಿಲ್ಲ ಎಂಬ ನಿಂದೆ ಬಾರದಿರಲಿ, ನಾನು ನಿಮಗೆ ಏನಾದರೂ ನೀಡುವಂತಾಗಲಿ.
ನಿಮ್ಮ ಇಚ್ಛೆಯಿದ್ದಂತೆ ಆಗಲಿ ಮಹಾರಾಜ ಎಂದರು ಥೇರರು.
ಆಗ ರಾಜರು ಹೀಗೆ ಹೇಳಿದರು ಹೇಗೆ ಪ್ರಾಣಿಗಳ ರಾಜ, ಸಿಂಹವು ಚಿನ್ನದ ಪಂಜರದಲ್ಲಿ ಇಟ್ಟರೂ, ಹೊರಹೋಗಿ ಸ್ವತಂತ್ರವಾಗಲು ತವಕಿಸುವಂತೆ, ನಾನು ಸಹಾ ಪ್ರಾಪಂಚಿಕತೆಯಲ್ಲಿ ಇದ್ದರೂ ಸಹಾ, ನನ್ನ ಮನವು ಭಿಕ್ಷುಗಳ ಶ್ರೇಷ್ಠ ಜೀವನಕ್ಕೆ ಹಂಬಲಿಸುತ್ತಾ ಇದೆ. ಆದರೆ ಭಂತೆ, ಬಹಳಷ್ಟು ಶತ್ರುಗಳಿರುವ ಪ್ರಾಪಂಚಿಕ ಜೀವನದಲ್ಲಿ ನಾನು ಬಹಳ ಕಾಲ ಬಾಳಲಾರೆ. ನಾನು ಗೃಹತ್ಯಾಗ ಮಾಡಿ ಪ್ರಾಪಂಚಿಕತೆಯನ್ನು ತೊರೆದರೆ ಹೇಗೆ ?
ನಂತರ ಭಂತೆ ನಾಗಸೇನರು ಮಿಲಿಂದ ರಾಜರಿಂದ ಬಂದ ಪ್ರಶ್ನೆಗಳಿಗೆ ಸಮಾಧಾನಿಸಿ ತಮ್ಮ ಪೀಠದಿಂದ ಎದ್ದು ಆಶ್ರಮಕ್ಕೆ ಹೊರಟರು.
* * *
ಅವರು ಹೋದ ಸ್ವಲ್ಪ ಕಾಲದ ನಂತರ, ಮಿಲಿಂದರು ತಮ್ಮನ್ನು ಹೀಗೆ ಅವಲೋಕಿಸಿಕೊಂಡರು ನಾನು ಸರಿಯಾಗಿ, ಯೋಗ್ಯವಾಗಿ ಪ್ರಶ್ನೆಗಳನ್ನು ಕೇಳಿದೆನೇ? ಹಾಗೆಯೇ ನಾಗಸೇನರವರಿಂದಲೂ ಅದೇರೀತಿಯಾಗಿ ಸರಿಯಾಗಿ, ಯೋಗ್ಯವಾಗಿ, ಉತ್ತರಗಳು ಸಿಕ್ಕವೇ? ಆಗ ಅವರಿಗೆ ಪ್ರಶ್ನೆಗಳು ಯೋಗ್ಯವಾಗಿ ಸರಿಯಾಗಿ ಕೇಳಲ್ಪಟ್ಟವು ಮತ್ತು ಉತ್ತರಗಳು ಸರಿಯಾಗಿ, ಯೋಗ್ಯವಾಗಿ ಸಿಕ್ಕವು ಎಂದು ಖಾತರಿಯಾಯಿತು.
ನಾಗಸೇನರವರು ತಮ್ಮ ಆಶ್ರಮದಲ್ಲಿ ತಲುಪಿದ ನಂತರ ಅವರು ಸಹಾ ಇದೇರೀತಿಯ ಚಿಂತನೆ ಮಾಡಿದರು, ಯೋಗ್ಯ ಪ್ರಶ್ನೆಗಳಿಗೆ ತಾನು ಯೋಗ್ಯ ಉತ್ತರ ನೀಡಿದೆನೇ? ಆಗ ಅವರಿಗೂ ಸಹಾ ಯೋಗ್ಯ ಉತ್ತರಗಳು ನೀಡಲ್ಪಟ್ಟವು ಎಂದು ಸಮಾಧಾನವಾಯಿತು.
ಮಾರನೆಯದಿನ ನಾಗಸೇನರವರು ಚೀವರ ಧರಿಸಿ, ಪಿಂಡಪಾತ್ರೆ ತೆಗೆದುಕೊಂಡು ಅರಮನೆಗೆ ಹೊರಟರು ಮತ್ತು ಅಲ್ಲಿ ತಮಗಾಗಿ ಸಿದ್ಧಪಡಿಸಿದ್ದ ಪೀಠದಲ್ಲಿ ಕುಳಿತರು ಮತ್ತು ಮಿಲಿಂದರು ನಾಗಸೇನರವರಿಗೆ ವಂದಿಸಿದರು. ಗೌರವದಿಂದ, ವಿಧೇಯರಾಗಿ ಪಕ್ಕದಲ್ಲಿ ಕುಳಿತರು. ಮತ್ತು ಹೀಗೆ ಹೇಳಿದರು ಹೀಗೆ ಹೇಳುವೆನೆಂದು ದಯವಿಟ್ಟು ತಪ್ಪು ತಿಳಿಯಬೇಡಿ ಭಂತೆ, ನಾನು ತಮಗೆ ಪ್ರಶ್ನಿಸಿದ್ದನ್ನೇ ನೆನೆಯುತ್ತ ಉಳಿದ ಇಡೀ ರಾತ್ರಿಯನ್ನು ಕಳೆದೆನು. ನನ್ನಲ್ಲೇ ನಾನು ಯೋಗ್ಯವಾಗಿ ಪ್ರಶ್ನಿಸಿದ್ದು ಮತ್ತು ನೀವು ಯೋಗ್ಯವಾಗಿ ಉತ್ತರಿಸಿದರೆ? ಹೀಗೆ ತೃಪ್ತನಾಗಿ ಕಾಲಕಳೆದನು.
ಆಗ ಥೇರರು ಹೀಗೆ ಉತ್ತರಿಸಿದರು ದಯವಿಟ್ಟು ತಪ್ಪಾಗಿ ಊಹಿಸಿದಿರಿ ಮಹಾರಾಜ, ನಾನು ಸಹಾ ಉಳಿದ ರಾತ್ರಿಯನ್ನು ನಿಮ್ಮ ಪ್ರಶ್ನೆಗಳಿಗೆ ಯೋಗ್ಯವಾಗಿ ಉತ್ತರಿಸಿದೆನೆಂದು, ಚಚರ್ೆಯನ್ನೇ ಪುನರ್ ಅವಲೋಕಿಸುತ್ತಾ ಯೋಗ್ಯ ಪ್ರಶ್ನೆಗಳು ಬಂದವು, ಯೋಗ್ಯ ಉತ್ತರಗಳು ನೀಡಲ್ಪಟ್ಟವು ಎಂದು ಆನಂದದಿಂದ ರಾತ್ರಿ ಕಳೆದೆನು.
ಹೀಗೆ ಇಬ್ಬರು ಮಹಾಪುರುಷರು ಪರಸ್ಪರ ಅಭಿನಂದನೆ ಮಾಡಿದರು.
ಇಲ್ಲಿಗೆ ಮಿಲಿಂದ ಪ್ರಶ್ನೆಗಳ ಸಮಸ್ಯೆಗಳಿಗೆ ಉತ್ತರ ಮುಗಿಯಿತು
No comments:
Post a Comment