3. ಪಣಾಮಿತ ವಗ್ಗೋ
1. ಶ್ರೇಷ್ಠ ಧಮ್ಮದ ಪ್ರಶ್ನೆ
ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ಓ ವಾಸೆಟ್ಟೆ, ಇದೇ ಧಮ್ಮವಾಗಿದೆ. ಇದು ಲೋಕಗಳಲ್ಲೇ ಶ್ರೇಷ್ಠವಾಗಿದೆ. ಹೇಗೆಂದರೆ ನಾವು ಹಿಂದೆ ನೋಡಿದಂತೆ ಮತ್ತೆ ಮುಂದೆ ಬರುವಂತಹದಕ್ಕೆ ಹೋಲಿಸಿದಾಗಲೂ ಸಹಾ. ಅಂದರೆ ಮೆತ್ತ ಶ್ರದ್ಧೆಯಿಂದ ಕೂಡಿದ ಉಪಾಸಕನು ಸೋತಪನ್ನನಾಗಿದ್ದರೂ ಸಹಾ ಯಾವುದೇ ಆರ್ಯಸ್ಥಿತಿ ಮುಟ್ಟದ ಭಿಕ್ಷುವಿಗೆ ಗೌರವಿಸಬೇಕೆಂದು, ಎದ್ದು ಪೀಠವನ್ನು ಬಿಡಬೇಕೆಂದು ಸಂಘದ ಯಾವುದೇ ಸದಸ್ಯನಿಗೂ, ಸಮಣೇರನಿಗೂ ಗೌರವಿಸಬೇಕೆಂದು ಹೇಳುತ್ತಾರೆ. ಈಗ ಹೇಳಿ ಧಮ್ಮವೇ ಶ್ರೇಷ್ಠವಾಗಿದ್ದ ಪಕ್ಷದಲ್ಲಿ ಈ ಸಂಪ್ರದಾಯವು ಅಸಮಂಜಸವಾಗುತ್ತದೆ, ಸಂಪ್ರದಾಯವೇ ಇರಲಿ ಎಂದಾದರೆ ಧಮ್ಮವೇ ಶ್ರೇಷ್ಠವೆನ್ನುವುದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಪೇಚಿನ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕಿದ್ದೆನೆ, ನೀವು ಇದನ್ನು ಪರಿಹರಿಸಬೇಕು. (109)
ಓ ಮಹಾರಾಜ, ನೀವು ಹೇಳಿದ್ದನ್ನು ಭಗವಾನರು ಹೇಳಿದ್ದಾರೆ ಮತ್ತು ನೀವು ವಿನಯದ ಸಂಪ್ರದಾಯವನ್ನು ಸರಿಯಾಗಿಯು ತಿಳಿಸಿರುವಿರಿ. ಆದರೆ ಆ ನಿಯಮಕ್ಕೆ ಕಾರಣವಿದೆ, ಅದು ಈ ರೀತಿಯಾಗಿದೆ, ಏನೆಂದರೆ ಸಮಣನ ಸಮಣತ್ವಕ್ಕೆ 20 ವೈಯಕ್ತಿಕ ಸದ್ಗುಣಗಳನ್ನು ಹೊಂದಿರುತ್ತಾರೆ ಮತ್ತು ಬಾಹ್ಯ ಚಿಹ್ನೆಗಳನ್ನು ಹೊಂದಿರುತ್ತಾರೆ. ಆದ್ದರಿಂದಲೇ ಸಮಣನು ಗೌರವಕ್ಕೆ ಅರ್ಹನಾಗಿದ್ದಾನೆ ಮತ್ತು ಆದರಕ್ಕೆ ಅರ್ಹನಾಗಿರುತ್ತಾನೆ, ಅವು ಯಾವುವು? ಸಂಯಮದ ಶ್ರೇಷ್ಠ ಆಕಾರ, ನಿಯಮಗಳ ಪಾಲನೆಯಲ್ಲಿ ಅಗ್ರತೆ, ಶ್ರೇಷ್ಠಚರ್ಯೆ, ಶಾಂತತೆಯಲ್ಲಿ ವಿಹರಿಸುವಿಕೆ, ಸಂಯಮತೆ, ಇಂದ್ರೀಯ ನಿಗ್ರಹತೆ, ಶಾಂತಿಪಾಲನೆ, ಸೊರಕ್ಖಂ (ಭವ್ಯ/ಶ್ರೇಷ್ಠಸುಖ), ಏಕಾಂತವಾಸಿ, ಏಕಾಂತತೆಯಲ್ಲಿ ಆನಂದಿಸುವಿಕೆ, ಧ್ಯಾನದಲ್ಲಿ ತಲ್ಲೀನತೆ, ಹಿರಿಓತಪ್ಪ (ಪಾಪಲಜ್ಜೆ, ಪಾಪಭೀತಿ ಹೊಂದಿರುವಿಕೆ), ಪ್ರಯತ್ನಶಾಲಿಯಾಗಿರುವಿಕೆ, ಜಾಗೃತನಾಗಿರುವಿಕೆ, ಶಿಕ್ಷಣದಲ್ಲಿ ಆನಂದಿಸುವವನು, ಪಠಿಸುವವನು, ಧಮ್ಮಾವಿನಯದ ಪ್ರಶಂಸಿಸುವವನು, ಶೀಲಾನಂದನು, ಪ್ರಾಪಂಚಿಕತೆಯ ಗೃಹ (ಆಲಯ)ವನ್ನು ತ್ಯಜಿಸಿರುವವನು, ಶೀಲಗಳನ್ನು ಪೂರ್ಣಗೊಳಿಸಿದವನು, ಕಾಷಾಯ ಧರಿಸುವಿಕೆ, ಮುಂಡನ ಮಾಡಿಕೊಂಡರುವಿಕೆ, ಸಾಧನೆಯ ವಿಷಯ ಬಂದಾಗ ಇಡೀ ಸಂಘದ ಸದಸ್ಯರು ಹೀಗೆಯೇ ಜೀವಿಸುತ್ತಾರೆ, ಹೀಗಿದ್ದು ಯಾವ ಕೊರತೆಯಿಲ್ಲದೆ, ಎಲ್ಲದರಲ್ಲೂ ಪೂರ್ಣವಾಗಿ, ಸಿದ್ಧಿಸಿ, ಹೀಗೆಯೇ ಸಾಧಿಸುತ್ತಾ ಅರಹತ್ವವನ್ನು ಗಳಿಸುತ್ತಾರೆ. ಆಗ ಅವರಲ್ಲಿ ಕಲಿಯಬೇಕಾದ್ದು ಏನೂ ಉಳಿದಿರುವುದಿಲ್ಲ. ಅವರು ಎಲ್ಲಾ ಭೂಮಿಗಳನ್ನು ದಾಟುತ್ತ ಅಮರತ್ವ ಗಳಿಸುತ್ತಾರೆ. ಸಮಣರು ಅರಹಂತರ ಸಂಗದಲ್ಲಿರುತ್ತಾರೆ. ಆದ್ದರಿಂದ ಶ್ರದ್ಧಾಳು ಗೃಹಸ್ಥನು ಸಮಣರಿಗೆ ಪೂಜಿಸುವುದು, ಗೌರವಿಸುವುದು ಯೋಗ್ಯವೆಂದು ಭಾವಿಸುತ್ತಾನೆ. ಸಮಣರು ಪುಥುಜ್ಜನ (ಸಾಮಾನ್ಯ ವ್ಯಕ್ತಿ) ಆಗಿದ್ದರೂ ಅವರನ್ನೇ ಗೌರವಿಸುತ್ತಾನೆ. ಮೇಲಾಗಿ ಓ ಮಹಾರಾಜ, ಸಮಾಜ ವಿಹಾರದ ಸಂಪ್ರದಾಯಗಳನ್ನು ಮುಂದುವರೆಸುತ್ತಾ ಬರುತ್ತಾರೆ. ಈ ಕಾರಣದಿಂದಲೂ ಅವರಿಗೆ ಗೌರವಿಸುತ್ತಾನೆ. ಸಮಣರು ಅರಹಂತರ ಜೊತೆಯಲ್ಲಿರುತ್ತಾರೆ. ಅವರ ಆಸವಗಳು ನಾಶವಾಗಿರುತ್ತವೆ. ತಾನು ಅಂತಹವರ ಜೊತೆಯಲ್ಲಿಲ್ಲ ಎಂದು ಗೃಹಸ್ಥನಿಗೆ ಭಾಸವಾಗುತ್ತದೆ. ಆದ್ದರಿಂದಲೇ ಆತನು ಸಾಮಾನ್ಯ ಭಿಕ್ಷುವಿಗೂ ಗೌರವಿಸುತ್ತಾರೆ. ಸಾಮಾನ್ಯ ಭಿಕ್ಷುವು ಪಾತಿಮೊಕ್ಖದ ನಿಯಮ ಪಾಲಿಸುತ್ತಾನೆ. ಆದರೆ ತಾನಲ್ಲ. ಅವರು ಸಂಘಕ್ಕೆ ಸೇರಿ ಭಗವಾನರ ಬೋಧನೆಯನ್ನು ಹರಡಿಸುತ್ತಾರೆ. ಆದರೆ ತಾನು ಆ ಕಾರ್ಯ ಮಾಡಲು ಅಸಮರ್ಥ, ಅವರು ಪಾಲಿಸುವ ಅಸಂಖ್ಯ ನಿಯಮಗಳನ್ನು ತಾನು ಪಾಲಿಸಲಾರೆ. ಹೀಗೆಲ್ಲಾ ಯೋಚಿಸಿ ಆತನು ಸಾಮಾನ್ಯ ಭಿಕ್ಷುವಿಗೂ ಗೌರವಿಸುತ್ತಾನೆ. ಸಮಣರು ಸಮಣತ್ವದ ಬಾಹ್ಯ ಚಿಹ್ನೆಗಳನ್ನು ಧರಿಸಿ ಬುದ್ಧರ ಇಚ್ಛೆಗಳನ್ನು ಪಾಲಿಸುತ್ತಿದ್ದಾರೆ. ಆದರೆ ತಾನು ಅದರಿಂದ ದೂರವಿದ್ದೇನೆ ಎಂದು ಆತನಿಗೆ ಗೊತ್ತಿರುತ್ತದೆ. ತಾನು ಸಮಣರಂತೆ ಗಡ್ಡ, ಕೂದಲುಗಳನ್ನು ತೆಗೆಸಿ, ಸುವರ್ಣ ಆಭರಣಗಳನ್ನು ತ್ಯಜಿಸಿ, ಸತ್ಯತೆಯ ಆಭರಣವನ್ನು ಸಮಣರಂತೆ ಧರಿಸಲು ಸಾಧ್ಯವಿಲ್ಲ ಎಂದು ಉಪಾಸಕನಿಗೆ ತಿಳಿದಿರುತ್ತದೆ. ಹೀಗಾಗಿ ಆತನು ಭಿಕ್ಷುಗಳಿಗೆ ಗೌರವಿಸುವುದೇ ಸರಿಯೆಂದು ನಿರ್ಧರಿಸುತ್ತಾನೆ.
ಮೇಲಾಗಿ ಓ ಮಹಾರಾಜ, ಸಮಣರಲ್ಲಿರುವ 20 ವ್ಯಕ್ತಿಗತ ಸದ್ಗುಣಗಳು ಮತ್ತು ಬಾಹ್ಯದ ಎರಡು ಚಿಹ್ನೆಗಳು ಹಾಗು ಸಮಣರು ಪರರಿಗೂ ಸಹಾ ಸುಶಿಕ್ಷಣ ನೀಡುತ್ತಾರೆ. ಇದನ್ನು ಕಂಡಂತಹ ಸೋತಪನ್ನ ಉಪಾಸಕನು ಸಹಾ, ತಾನು ಆ ಸಂಪ್ರದಾಯದಲ್ಲಿಲ್ಲ ಎಂದು ಅರಿತು ಭಿಕ್ಷುವನ್ನು ವಂದಿಸುವುದೇ ಯೋಗ್ಯವೆಂದು ಅರಿಯುತ್ತಾನೆ. ಮಹಾರಾಜ ಊಹಿಸಿ ರಾಜಕುಮಾರನು ರಾಜಪುರೋಹಿತ ಬ್ರಾಹ್ಮಣನ ಬಳಿ, ಕ್ಷತ್ರಿಯರ ಕರ್ತವ್ಯಗಳನ್ನು ಕಲಿಯುತ್ತಾನೆ, ವಿದ್ಯೆಗಳನ್ನು ಕಲಿಯುತ್ತಾನೆ, ಮುಂದೆ ರಾಜಕುಮಾರನು ರಾಜನಾದ ಮೇಲು ಸಹಾ ಆ ಪುರೋಹಿತನಿಗೆ ಆತನು ಗೌರವಿಸುತ್ತಾನೆ. ಈ ರೀತಿ ಕುಟುಂಬದ ಸಂಪ್ರದಾಯಗಳನ್ನು ಪಾಲಿಸುತ್ತಾನೆ, ಹೀಗೆಯೇ ಸೋತಪನ್ನ ಉಪಾಸಕನು, ಸೋತಪನ್ನ ನಲ್ಲದ ಭಿಕ್ಷುವಿಗೆ ಗೌರವಿಸುತ್ತಾನೆ.
ಮತ್ತೆ ಓ ರಾಜ, ನಿಮಗಂತೂ ಭಿಕ್ಷುವಿನ ಘನತೆಗಳ, ಅಸಮಾನ ಬದ್ಧತೆಯು ತಿಳಿದಿದೆ. ಒಂದುವೇಳೆ ಗೃಹಸ್ಥನು ಶ್ರದ್ಧೆಯಿಂದ ಆರ್ಯ ಮಾರ್ಗವನ್ನು ಅನುಸರಿಸಿದರೆ ಮುಂದೆ ಆತನು ಅರಹಂತನಾಗುತ್ತಾನೆ, ಆಗ ಆತನಿಗೆ ಎರಡು ದಾರಿಗಳು ಮಾತ್ರ ಇರುತ್ತದೆ. ಆತನು ಹಾಗೆಯೇ ಆ ದಿನವೇ ಪರಿನಿಬ್ಬಾಣ ಪಡೆಯುತ್ತಾನೆ. ಇಲ್ಲದೆ ಹೋದರೆ ಆತನು ಭಿಕ್ಷುವಾಗಿ ಸಂಘಕ್ಕೆ ಸೇರುತ್ತಾನೆ. ಓ ಮಹಾರಾಜ, ಆ ತ್ಯಾಗದ ಸ್ಥಿತಿಯು, ಭವ್ಯವಾದುದು ಮತ್ತು ಅತ್ಯುನ್ನತವಾದುದು, ಆದ್ದರಿಂದಲೇ ಆತನು ಸಂಘವನ್ನು ಸೇರುತ್ತಾನೆ.
ಭಂತೆ ನಾಗಸೇನ, ಈ ಸೂಕ್ಷ್ಮ ಸಮಸ್ಯೆಯು ನಿಮ್ಮ ಪ್ರಬಲವಾದ ಮತ್ತು ಶ್ರೇಷ್ಠ ಪ್ರಜ್ಞಾದಿಂದ ಪರಿಹಾರವಾಯಿತು. ನಿಮ್ಮಷ್ಟು ಪ್ರಾಜ್ಞರಲ್ಲದಿದ್ದರೆ, ಬೇರ್ಯಾರು ಇದನ್ನು ಪರಿಹರಿಸಲಾರರು.
2. ಸಬ್ಬಸತ್ತಹಿತಫರಣ ಪನ್ಹೊ (ಸರ್ವಜೀವಿಗಳ ಹಿತ ಪ್ರಶ್ನೆ)
ಭಂತೆ ನಾಗಸೇನ, ನೀವು ಹೇಳುವಿರಿ ತಥಾಗತರು ಸರ್ವಜೀವಿಗಳನ್ನು ಹಿಂಸೆಯಿಂದ ರಕ್ಷಿಸುವರು ಹಾಗು ಹಿತಸುಖವನ್ನುಂಟು ಮಾಡುವರು. ಮತ್ತೆ ನೀವು ಹೇಳಿದಂತಹ ಪ್ರಸಂಗವೇನೆಂದರೆ ಭಗವಾನರು ಉರಿಯುತ್ತಿರುವ ಜ್ವಾಲೆಯ ಉಪಮೆಯ ಸುತ್ತವನ್ನು ಉಪದೇಶಿಸುತ್ತಿರುವಾಗ ಅದನ್ನು ಆಲಿಸುತ್ತಿರುವ ಅರವತ್ತು ಭಿಕ್ಷುಗಳ ಬಾಯಲ್ಲಿ ಬಿಸಿಯಾದ ರಕ್ತವು ಹೊರಬಂದಿತು. ಈ ಸುತ್ತವನ್ನು ಉಪದೇಶಿಸುವಾಗಲೇ ಭಿಕ್ಷುಗಳಿಗೆ ಈ ಹಾನಿಯಾಗಿದೆ, ಒಳಿತಾಗಿಲ್ಲ. ಆದ್ದರಿಂದ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದಲ್ಲಿ ಎರಡನೆಯದು ಸುಳ್ಳಾಗಿದೆ ಮತ್ತು ಎರಡನೆಯದು ಸರಿಯಾಗಿದ್ದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಪೇಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ, ಅದನ್ನು ನೀವೇ ಬಿಡಿಸಬೇಕು. (110)ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿದೆ, ಆದರೆ ಆ ಭಿಕ್ಷುಗಳಿಗೆ ಭಗವಾನರಿಂದೇನೂ ಆಗಲಿಲ್ಲ, ಅದು ಅವರಿಂದಲೇ ಆಯಿತು.
ಆದರೆ ನಾಗಸೇನ, ಭಗವಾನರು ಆ ಉಪದೇಶ ನೀಡದಿದ್ದಲ್ಲಿ ಅವರು ಬಿಸಿರಕ್ತವನ್ನು ವಾಂತಿ ಮಾಡುತ್ತಿದ್ದರೆ?
ಇಲ್ಲ, ಆ ಭಿಕ್ಷುಗಳು ಭಗವಾನರ ಉಪದೇಶವನ್ನು ತಪ್ಪಾಗಿ ಗ್ರಹಿಸಿದರು, ಆಗ ಅವರ ದೇಹದೊಳಗೆ ಉರಿಯೆದ್ದು ಬಾಯಿಂದ ರಕ್ತಕಾರಿದರು.
ಹಾಗಾದರೆ ಅದು ಆಗಲೇಬೇಕಲ್ಲವೆ ಭಂತೆ ನಾಗಸೇನ, ಅದು ತಥಾಗತರ ಕ್ರಿಯೆಯಿಂದಲೇ ಆಯಿತು. ಅದಕ್ಕೆ ಕಾರಣ ತಥಾಗತರೇ ಆಗಿದ್ದಾರೆ. ಆದ್ದರಿಂದಲೇ ಅವರಿಗೆ ಹಾನಿಯಾಗಿದೆ. ಊಹಿಸಿ ನಾಗಸೇನ, ಸರ್ಪವೊಂದು ಹುತ್ತದೊಳಗೆ ಹೋಗಿದೆ. ಮಣ್ಣಿನ ಅಗತ್ಯವಿದ್ದ ಮನುಷ್ಯನೊಬ್ಬನು ಹುತ್ತವನ್ನು ಅಗೆಯತೊಡಗಿದನು. ಪರಿಣಾಮವಾಗಿ ಹುತ್ತದ ದ್ವಾರವು ಮುಚ್ಚಿಹೋಗಿ ಹಾವು ಉಸಿರಾಡಲು ಆಗದೆ ಸತ್ತಿತು. ಈಗ ಹೇಳಿ ಅದು ಸಾವನ್ನಪ್ಪಿದ್ದು ಆ ಮಾನವನ ಕ್ರಿಯೆಯಿಂದಲೇ?
ಹೌದು ಓ ರಾಜ.
ಅದೇರೀತಿಯಾಗಿ ಭಂತೆ ನಾಗಸೇನ, ತಥಾಗತರಿಂದಲೇ ಅವರ ಹಾನಿಯಾಯಿತು.
ಓ ಮಹಾರಾಜ, ತಥಾಗತರು ಸುತ್ತವನ್ನು ಉಪದೇಶಿಸುತ್ತಿದ್ದುದು ಹೊಗಳಿಕೆಗಾಗಿ ಅಲ್ಲ, ಹಾಗೆಯೇ ದ್ವೇಷದಿಂದಲೂ ಅಲ್ಲ. ಇವೆರಡರಿಂದಲೂ ಮುಕ್ತರಾದ ಅವರು ಕರುಣೆಯಿಂದ ಉಪದೇಶಿಸಿದರು. ಅದನ್ನು ಯೋಗ್ಯವಾಗಿ ಆಲಿಸಿದವರು ಪ್ರಾಜ್ಞರಾಗುತ್ತಾರೆ. ಆದರೆ ಯಾರು ತಪ್ಪಾಗಿ ಗ್ರಹಿಸುವರೋ ಅವರು ಬೀಳುವರು. ಇದು ಹೇಗೆಂದರೆ ಓ ಮಹಾರಾಜ, ಒಬ್ಬ ಮನುಷ್ಯನು ಮಾವಿನ ಮರ ಅಥವಾ ನೇರಳೆಯ ಮರ ಅಥವಾ ಮಧುಕ ವೃಕ್ಷವನ್ನು ಅಲ್ಲಾಡಿಸುವಾಗ, ಅಂತಃಸಾರವುಳ್ಳ ಬಲವಾಗಿ ಅಂಟಿರುವುವು ಅಕ್ಷೊಭೆಯಿಂದಿರುತ್ತದೆ, ಆದರೆ ಕೊಳೆತ ಕಡ್ಡಿಗಳ ಮತ್ತು ಸಡಿಲವಾಗಿ ಅಂಟಿರುವವು ನೆಲಕ್ಕೆ ಬೀಳುವುವು. ಅದೇರೀತಿ ಅವರ ಉಪದೇಶವಾಗಿತ್ತು. ಓ ಮಹಾರಾಜ, ಇದು ಹೇಗೆಂದರೆ ರೈತನೊಬ್ಬನು ಗೋಧಿ ಬೆಳೆ ಪಡೆಯಲು ನೇಗಿಲು ಹೊಡೆಯುತ್ತಾನೆ. ಆದರೆ ಹಾಗೆ ಮಾಡುವಾಗ ಸಾವಿರಾರು ಹುಲ್ಲು ನಾಶವಾಗುತ್ತದೆ. ಅಥವಾ ಇನ್ನೊಂದು ಉದಾಹರಣೆ ಕೇಳಿ. ಸಿಹಿಗಾಗಿ ಮನುಷ್ಯನು ಕಬ್ಬನ್ನು ಯಂತ್ರದಿಂದ ಹಿಂಡುತ್ತಾನೆ, ಆದರೆ ಹಾಗೆ ಮಾಡುವಾಗ ಕೆಲವು ಸಣ್ಣ ಕೀಟಗಳು ಸಹಾ ಸತ್ತುಹೋಗುವವು. ಅದೇರೀತಿಯಾಗಿ ಯಾರ ಮನಸ್ಸುಗಳು ಪಕ್ವವಾಗಿವೆಯೋ, ಸಿದ್ಧವಾಗಿದೆಯೋ ಅವರಿಗೆ ತಥಾಗತರು ಹೊಗಳಿಕೆಯಿಲ್ಲದೆ ಅಥವಾ ದ್ವೇಷವಿಲ್ಲದೆ ಧಮ್ಮೋಪದೇಶ ಮಾಡುವರು. ಅದನ್ನು ಯೋಗ್ಯವಾಗಿ ಗ್ರಹಿಸಿದವರು ಪ್ರಾಜ್ಞರಾಗುತ್ತಾರೆ, ತಪ್ಪಾಗಿ ಗ್ರಹಿಸಿದವರು ಬೀಳುತ್ತಾರೆ.
ಹಾಗಾದರೆ ಬಿದ್ದ ಆ ಭಿಕ್ಖುಗಳಿಗೆ ಹಾಗೆ ಆಗಿದ್ದು ಉಪದೇಶ ಆಲಿಸಿಯೇ?
ಬಡಗಿಗಾರನು ಮರದ ತುಂಡಿಗೆ ಏನೂ ಮಾಡದೆ ನೇರವಾಗಿ ಉಪಯುಕ್ತವಾಗಿ ಮಾಡಬಲ್ಲನೇ?
ಇಲ್ಲ ಭಂತೆ, ಆತನು ಆ ಬಾಗುವಿಕೆಗಳನ್ನೆಲ್ಲಾ ದೂರೀಕರಿಸಬೇಕಾಗುತ್ತದೆ. ನಂತರವೇ ಅದು ಉಪಯುಕ್ತವಾಗಬಲ್ಲದು.
ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ಕೇವಲ ಭಿಕ್ಖುಗಳನ್ನು ಗಮನಿಸಿಯೆ, ನೋಡಲು ಸಿದ್ಧರಾಗಿರುವವರ ಕಣ್ಣುಗಳನ್ನು ತೆರೆಯಲಾಗದು. ಆದರೆ ತಪ್ಪಾಗಿ ಗ್ರಹಿಸುವವರನ್ನು ಬಿಟ್ಟು ರಕ್ಷಿಸಬಹುದಾದಂತಹವರನ್ನು ರಕ್ಷಿಸುತ್ತಾರೆ ಮತ್ತು ಇದೆಲ್ಲವೂ ಅವರ ಸ್ವತಃ ಕ್ರಿಯೆಯಿಂದಾಗುತ್ತದೆ. ಓ ಮಹಾರಾಜ, ಹೇಗೆಂದರೆ, ಆಲದ ಮರದಂತೆ ಅಥವಾ ಬಿದಿರಿನ ಮರದಂತೆ ಅಥವಾ ಹೆಸರಕತ್ತೆಯಂತೆ ಜನ್ಮ ನೀಡಿ ಸಾಯುವಂತೆ ಪಾಪಚಿತ್ತವುಳ್ಳವರು ಬೀಳುವರು, ಓ ಮಹಾರಾಜ, ಹೇಗೆ ಡಕಾಯಿತರು ತಮ್ಮ ದುಷ್ಕೃತ್ಯದಿಂದಾಗಿಯೇ ತಮ್ಮ ಕಣ್ಣುಗಳನ್ನು ಕೀಳಿಸಲ್ಪಡುವರೋ ಅಥವಾ ಶೂಲಕ್ಕೆ ಹಾಕಲ್ಪಡುವರೋ ಅಥವಾ ಗಲ್ಲಿಗೇರಿಸಲ್ಪಡುವರೋ ಅದೇರೀತಿಯಾಗಿ ಪಾಪಚಿತ್ತವುಳ್ಳವರು, ತಮ್ಮ ತಪ್ಪುಗ್ರಹಿಕೆಯಿಂದ ತಥಾಗತರ ಬೋಧನೆಯಿಂದ ಹೊರಗೆ ಬೀಳುವರು.
ಅದೇರೀತಿಯಲ್ಲಿ ಆ ಅರವತ್ತು ಭಿಕ್ಷುಗಳು ತಥಾಗತರ ಕ್ರಿಯೆಯಿಂದ ಅಥವಾ ಬೇರೆ ಯಾರಿಂದಲೂ ಬೀಳಲಿಲ್ಲ, ಬದಲಾಗಿ ತಮ್ಮ ಕ್ರಿಯೆಗಳೊಂದರಿಂದಲೇ ಹಾಗಾದರು. ಊಹಿಸಿ, ಓ ರಾಜ, ಒಬ್ಬ ಮಾನವನು ಎಲ್ಲರಿಗೂ ಅಮೃತವನ್ನು ನೀಡುತ್ತಾನೆ. ಆದರೆ ಅದನ್ನು ತಿಂದಕೂಡಲೇ ಅವರೆಲ್ಲರೂ ಆರೋಗ್ಯ ಹಾಗು ದೀಘರ್ಾಯುಗಳು, ರೋಗಗಳಿಂದ ಮುಕ್ತರಾಗುತ್ತಿದ್ದರು. ಆದರೆ ಒಬ್ಬನು ತನ್ನ ಅಜೀರ್ಣತೆಯಿಂದಾಗಿ ಅದನ್ನು ಸೇವಿಸಿಯು ಮೃತಪಟ್ಟನು. ಈಗ ಹೇಳಿ ಮಹಾರಾಜ, ಅಮೃತ ನೀಡಿದವನು ದೋಷಿಯೇ?
ಇಲ್ಲ ಭಂತೆ.
ಓ ಮಹಾರಾಜ, ಅದೇರೀತಿಯಲ್ಲಿ ತಥಾಗತರು ದಶಸಹಸ್ರ ಲೋಕ ವ್ಯವಸ್ಥೆಯಲ್ಲಿರುವ ದೇವ ಹಾಗು ಮಾನವರಿಗೆ ಅಮರತ್ವದ ಉಪದೇಶ ನೀಡಿದ್ದಾರೆ. ಯಾರು ಸಾಮಥ್ರ್ಯವುಳ್ಳವರು ಅದನ್ನು ಆಲಿಸಿ, ಪ್ರಾಜ್ಞರಾಗಿ ಮುಕ್ತರಾಗಿರುವರು. ಅವರಲ್ಲಿ ಯಾರು ಸಹಾ ನಾಶವಾಗಲಿಲ್ಲ ಮತ್ತು ಬೀಳಲಿಲ್ಲ.
ಭಂತೆ ನಾಗಸೇನ, ನೀವು ತುಂಬಾ ಚೆನ್ನಾಗಿ ಇದನ್ನು ಪರಿಹರಿಸಿದಿರಿ. ನೀವು ಹೇಳಿದ್ದನ್ನು ನಾನು ಒಪ್ಪುವೆ.
3. ವಸ್ತು ಗುಹ್ಯ ನಿದರ್ಶನ ಪ್ರಶ್ನೆ
ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ಕಾಯದಲ್ಲಿ ಸಂಯಮ ಸಾಧುವಾದುದು (ಒಳ್ಳೆಯದು). ಮಾತಿನಲ್ಲೂ ಸಂಯಮ ಸಾಧುವಾದುದು. ಮನಸ್ಸಿನಲ್ಲೂ ಸಂಯಮ ಸಾಧುವಾದುದು. ಎಲ್ಲದರಲ್ಲೂ ಸಂಯಮ ಸಾಧುವಾದುದು. ಆದರೂ ಸಹ ತಥಾಗತರು ನಾಲ್ಕು ಪರಿಷತ್ತಿನ ಮಧ್ಯೆ, ಬ್ರಾಹ್ಮಣ ಸೇಲನಿಗೆ ಬಹಿರಂಗವಾಗಿ ತೋರಿಸಬಾರದ್ದನ್ನು ತೋರಿಸಿದರು (ಅಂದರೆ ಕೋಶದಿಂದ ಆವೃತವಾದ ಗುಹ್ಯ). ಅವರು ಹೀಗೆ ಮಾಡಿದ್ದರೆ ಮೊದಲನೆಯ ಗಾಥೆ ಸುಳ್ಳಾಗುತ್ತದೆ. ಅವರು ತೋರಿಸಿಲ್ಲ ಎಂದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇದು ಅತಿ ಸೂಕ್ಷ್ಮವಾದ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ ಬಿಡಿಸಿ. (111)
ಓ ಮಹಾರಾಜ, ನೀವು ಹೇಳಿದ ಎರಡೂ ಹೇಳಿಕೆಗಳು ಸರಿಯಾಗಿಯೇ ಇದೆ. ಆದರೆ ಇಲ್ಲಿ ಗಮನಿಸಿ. ಭಗವಾನರು ಸೇಲ ಬ್ರಾಹ್ಮಣನಿಗೆ ತೋರಿಸಿದ್ದು ಎಲ್ಲರಿಗೂ ಕಾಣುವಂತೆ ಬಹಿರಂಗವಾಗಿ ಅಲ್ಲ, ಬದಲಾಗಿ ತಮ್ಮ ಅತೀಂದ್ರಿಯ ಬಲದಿಂದಾಗಿ ಕೇವಲ ಸೇಲನಿಗೆ ಕಾಣುವಂತೆ (ಬಿಂಬ) ಚಿತ್ರವನ್ನು ಸೃಷ್ಟಿಸಿದರು. ಹೀಗೆ ಏಕೆ ಮಾಡಿದ್ದರೆಂದರೆ ಆತನಿಗೆ ತಥಾಗತರ ಮೇಲೆ ಸಂಶಯ ಉಂಟಾಗಿತ್ತು. ಅದಕ್ಕೆ ಪರಿಹಾರವೆಂದರೆ ಆತನು ನಂಬುವಂತೆ 32 ಮಹಾಪುರುಷ ಲಕ್ಷಣಗಳನ್ನು ತೋರಿಸುವುದೇ ಆಗಿತ್ತು. ಆದ್ದರಿಂದಾಗಿ ಆತನಿಗೆ 32 ಮಹಾಪುರುಷ ಲಕ್ಷಣಗಳನ್ನು ಆತನಿಗೆ ತೋರಿಸಿದರು. ಕೋಶದಿಂದ ಆವೃತವಾಗಿದ್ದ ಗುಹ್ಯ ಹಾಗು ಉದ್ದವಾದ ನಾಲಿಗೆಯ ವಿನಃ ಆತನಿಗೆ ಎಲ್ಲವೂ ಗೋಚರವಾಗಿತ್ತು. ಅವೆರಡನ್ನು ಆತನು ಕಾಣಲು ಪರಿತಪಿಸುತ್ತಿದ್ದ, ಸಂಶಯ ಪಡುತ್ತಿದ್ದನು. ಆತನ ಸಂಶಯ ನಿವಾರಣೆಯಾದಾಗಲೇ ಆತನಿಗೆ ಬೋಧಿಸುವ ಧಮ್ಮ ಅರ್ಥವಾಗುತ್ತಿತ್ತು. ಆದ್ದರಿಂದಾಗಿ ಭಗವಾನರು ಹಾಗೆ ಮಾಡಬೇಕಾಯಿತು.
ಓ ಮಹಾರಾಜ, ಭಗವಾನರು ಉಪಾಯ ಕೌಶಲ್ಯದಲ್ಲಿ ನಿಪುಣರಾಗಿದ್ದರು. ಅವರು ಬಗೆಬಗೆಯ ಜನರಿಗೆ ವಿವಿಧರೀತಿಯಲ್ಲಿ ಪ್ರಜ್ಞಾ ಪ್ರಕಾಶ ನೀಡುತ್ತಿದ್ದರು. ಉದಾಹರಣೆಗೆ ಪೂಜ್ಯ ನಂದರನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಅಪ್ಸರೆಯರನ್ನು ತೋರಿಸಿ ಮೊದಲು ಆಸೆ ಮೂಡಿಸಿ, ನಂತರ ವೈರಾಗ್ಯ ಉಂಟಾಗುವಂತೆ ಮಾಡಿದರು. ಅದೇರೀತಿ ಪೂಜ್ಯ ಚುಲ್ಲಪಂಥಕನಿಗೆ ಬಿಳಿಯ ಬಟ್ಟೆಯನ್ನು ಉಜ್ಜುತ್ತಾ ರಜೋಹರಣಂ ಜಪಿಸುವಂತೆ ಹೇಳಿ ಅಶುಭಾ ಧ್ಯಾನದಲ್ಲಿ ಜಾಗೃತನಾಗಿ ಅರಹಂತನನ್ನಾಗಿ ಮಾಡಿದರು. ಅದೇರೀತಿಯಲ್ಲಿ ಮಹಾರಾಜ, ತಥಾಗತರು ಯೋಗಞ್ಞರು ಉಪದೇಶ ಕೌಶಲ್ಯವುಳ್ಳವ ರಾಗಿದ್ದರು. ಆದ್ದರಿಂದಲೇ ಅವರು ಹಾಗೆ ಮಾಡಬೇಕಾಯಿತು.
ಸಾಧು ಭಂತೆ ನಾಗಸೇನ, ಬಹುವಿಧದ ಉದಾಹರಣೆ ನೀಡಿ, ಗಹನವಾದುದನ್ನು ಅಗಹನ ಮಾಡಿದಿರಿ. ಅಂಧಕಾರವನ್ನು ಬೆಳಗಿಸಿದಿರಿ, ಬಿಡಿಬಿಡಿಯಾಗಿ ವಿಶ್ಲೇಷಿಸಿದಿರಿ, ಪರವಾದವನ್ನು ಭಂಗ ಮಾಡಿದಿರಿ. ಜಿನಪುತ್ರರಲ್ಲಿ ಚಕ್ಷುವನ್ನು ಉತ್ಪಾದಿಸಿದಿರಿ. ನೀವು ನಿಜಕ್ಕೂ ಗಣಪರಿವಾರಕ್ಕೆ ನಾಯಕರಾಗಿರುವಿರಿ.
4. ಫರೂಸವಾಚಾಭಾವ ಪನ್ಹೊ (ಅಪ್ರಿಯ ನುಡಿಯ ಪ್ರಶ್ನೆ)
ಭಂತೆ ನಾಗಸೇನ, ಧಮ್ಮ ಸೇನಾನಿಯಾದ ಸಾರಿಪುತ್ತರು ಹೀಗೆ ಹೇಳಿದ್ದರು: ಭಿಕ್ಷುಗಳೇ, ತಥಾಗತರು ಸೌಜನ್ಯಯುತ ಮಾತಿನಲ್ಲಿ ಪರಿಶುದ್ಧರು ಹಾಗು ಸಂಪೂರ್ಣರಾಗಿದ್ದಾರೆ. ಅವರ ವಾಣಿಯಲ್ಲಿ ಯಾವ ತಪ್ಪನ್ನು ಹುಡುಕಲಾಗದು, ಇದು ಪರರು ಅರಿಯಬಾರದು ಎಂಬ ಸ್ವಾರ್ಥವು ಅವರಲ್ಲಿಲ್ಲ. ಆದರೆ ಮತ್ತೊಂದೆಡೆ ತಥಾಗತರು ಪ್ರಥಮ ಪಾರಾಜಿಕ ನಡೆಸುತ್ತಿದ್ದಾಗ, ಕಲಂದದ ಸುದಿನ್ನನಿಗೆ ಅಪ್ರಿಯ ನುಡಿಗಳಿಂದ ಸಂಬೋಧಿಸಿ ವ್ಯರ್ಥವಾದ (ದಡ್ಡ) ವ್ಯಕ್ತಿ ಎಂದು ಹೇಳಿದರು. ಮತ್ತು ಆ ಥೇರ ಆ ರೀತಿಯಿಂದ ಕರೆಯಲ್ಪಟ್ಟಾಗ, ಗುರುಗಳ ಮೇಲೆ ಭೀತಿಯಿಂದ, ಪಶ್ಚಾತ್ತಾಪಕ್ಕೆ ಒಳಗಾಗಿ ಅತನಿಗೆ ಆಗ ಶ್ರೇಷ್ಠ ಮಾರ್ಗವು ಅರಿಯಲಾಗಲಿಲ್ಲ. ಈಗ ಇಲ್ಲಿ ಮೊದಲ ವಾಕ್ಯವು ಸರಿಯಾಗಿದ್ದರೆ, ಕಲಂದದ ಸುದಿನ್ನನಿಗೆ ಹಾಗೆ ನುಡಿದಿದ್ದು ಸುಳ್ಳಾಗುತ್ತದೆ. ಅದೇ ನಿಜವಾಗಿದ್ದರೆ ಸಾರಿಪುತ್ತರ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಕೇಳಿದ್ದೇನೆ, ನೀವೇ ಇದನ್ನು ಪರಿಹರಿಸಬಲ್ಲಿರಿ. (112)ಓ ಮಹಾರಾಜ, ಸಾರಿಪುತ್ತರ ಹೇಳಿಕೆ ಸತ್ಯವಾಗಿದೆ. ಹಾಗೆಯೇ ಭಗವಾನರು ಸುದಿನ್ನನಿಗೆ ಒಂದು ಸಂದರ್ಭದಲ್ಲಿ ಹಾಗೆ ಕರೆದಿದ್ದು ನಿಜವೇ ಆಗಿದೆ. ಆದರೆ ಹಾಗೆ ನುಡಿದದ್ದು ಒರಟುತನದಿಂದಲ್ಲ, ಅಲ್ಲಿ ಆತನ ನಿಜಸ್ವರೂಪವನ್ನು ಆತನಿಗೆ ತಿಳಿಯಪಡಿಸಿದರಷ್ಟೇ. ಇದರಿಂದಾಗಿ ಅತನಿಗೆ ಹಾನಿಯಾಗಲಿಲ್ಲ, ಬದಲಾಗಿ ಲಾಭವೇ ಆಯಿತು. ಆತನು ತನ್ನ ತಪ್ಪನ್ನು ತಿದ್ದಿಕೊಂಡನು. ಓ ಮಹಾರಾಜ, ಯಾವುದೇ ಮನುಷ್ಯನು ಈ ಜನ್ಮದಲ್ಲಿ ಆರ್ಯಸತ್ಯಗಳ ಸಾಕ್ಷಾತ್ಕಾರದ ಅರಿವು ಪಡೆದಿಲ್ಲದವರಾದರೆ ಆತನ ಮಾನವತ್ವವು ವ್ಯರ್ಥವೇ ಸರಿ. ಆದರೆ ಆತನು ವಿಭಿನ್ನವಾಗಿ ವತರ್ಿಸಿದರೆ ಆತನು ಬದಲಾಗುತ್ತಾನೆ, ಆದ್ದರಿಂದ ಭಗವಾನರು ಕಲಂದದ ಸುದಿನ್ನನಿಗೆ ಅಪ್ರಿಯವಾದ ಸತ್ಯವನ್ನು ನುಡಿದರೇ ಹೊರತು ಸತ್ಯವಿಹಿನ ವಿಷಯಗಳೇನೂ ಹೇಳಲಿಲ್ಲ.
ಆದರೆ ನಾಗಸೇನ, ಒಬ್ಬನು ಇನ್ನೊಬ್ಬನಿಗೆ ಬಯ್ಯುವಾಗಲು ಸತ್ಯವನ್ನೇ ಹೇಳುತ್ತಿರುತ್ತಾನೆ. ಆದರೂ ಆತನಿಗೆ ದಂಡವನ್ನು ಹಾಕುತ್ತೇವೆ, ಆತನು ತಪ್ಪಿತಸ್ಥನಾಗುತ್ತಾನೆ. ಅದೂ ಅಲ್ಲದೆ ಅಪ್ರಿಯವಾದ ಸತ್ಯದ ನುಡಿಗಳನ್ನು ಹೇಳಿದಾಗ ವಿನಯಭಂಗ ವಾಗುವುದಿಲ್ಲವೇ?
ಓ ಮಹಾರಾಜ, ಜನರು ಅಪರಾಧಿಗಳಿಗೆ ಗೌರವದಿಂದ ಎದ್ದು ಬಾಗಿ ನಮಸ್ಕರಿಸುವುದನ್ನು, ಸತ್ಕಾರ ಮಾಡುವುದನ್ನು, ಉಡುಗೊರೆಗಳನ್ನು ನೀಡುವುದನ್ನು ನೀವು ಕೇಳಿರುವಿರಾ?
ಇಲ್ಲ ಭಂತೆ, ವ್ಯಕ್ತಿಯು ಯಾವುದೇರೀತಿಯ ಅಪರಾಧಗಳನ್ನು ಮಾಡಿರಲಿ, ಆತನು ಆಕ್ಷೇಪಣೆಗೆ, ದಂಡನೆಗೆ, ಶಿಕ್ಷೆಗೆ ಅರ್ಹನಾಗುತ್ತಾನೆ. ಅಪರಾಧಿಗಳಿಗೆ ಸಾಮಾನ್ಯವಾಗಿ ತಲೆ ತೆಗೆಯುತ್ತಾರೆ ಅಥವಾ ಚಿತ್ರಹಿಂಸೆ ನೀಡುತ್ತಾರೆ, ಬಂಧಿಸುತ್ತಾರೆ ಅಥವಾ ಮರಣದಂಡನೆ ವಿಧಿಸುತ್ತಾರೆ.
ಓ ಮಹಾರಾಜ, ಭಗವಾನರು ನ್ಯಾಯಯುತವಾಗಿ ವತರ್ಿಸುವರೇ ಅಥವಾ ಇಲ್ಲವೇ?
ಭಂತೆ, ಭಗವಾನರು ನ್ಯಾಯಯುತವಾಗಿ, ಯೋಗ್ಯಯುತವಾಗಿ, ಸಮಂಜಸ ವಾಗಿಯೇ ವತರ್ಿಸುವರು, ಅವರು ಸರ್ವಲೋಕದಲ್ಲಿ ಪರರಿಗಿಂತ ಹೆಚ್ಚಾಗಿ, ಪಾಪಲಜ್ಜೆ ಹಾಗು ಪಾಪಭೀತಿಯಿಂದ ಕೂಡಿರುವರು. ಅವರು ಕೆಟ್ಟವರೊಂದಿಗೆ ಸೇರುವುದಾಗಲಿ ಅಥವಾ ಕೆಟ್ಟದ್ದನ್ನು ಮಾಡುವುದಾಗಲಿ ಮಾಡಲಾರರು?
ಓ ಮಹಾರಾಜ, ಒಬ್ಬ ವೈದ್ಯನು, ಎಲ್ಲಾ ದೋಷಗಳು ಆಕ್ರಮಣ ಮಾಡಿದ, ಇಡೀ ಶರೀರ ಅಸ್ತವ್ಯಸ್ತಗೊಂಡ, ರೋಗಗಳಿಂದ ತುಂಬಿದ ರೋಗಿಗೆ ಪ್ರಿಯವಾಗಿರುವ ಸಿಹಿಯಾಗಿರುವ ಔಷಧಿಗಳನ್ನು ನೀಡಬಹುದೇ?
ಖಂಡಿತವಾಗಿ ಇಲ್ಲ, ಆ ರೋಗಿಯು ಮುಕ್ತನಾಗಬೇಕಾದರೆ, ಆತನಿಗೆ ಹರಿತವಾದ ಮತ್ತು ಕಹಿಯಾದ ಔಷಧಿಗಳನ್ನೇ ನೀಡಬೇಕು.
ಓ ಮಹಾರಾಜ, ಅದೇರೀತಿಯಲ್ಲಿ ಭಗವಾನರು ಸಹಾ, ಪಾಪಗಳ ರೋಗಗಳನ್ನು ಹೊತ್ತಿರುವ ಭಿಕ್ಷುಗಳೊಂದಿಗೆ ವತರ್ಿಸುತ್ತಾರೆ. ತಥಾಗತರ ವಾಣಿಯು ನಿಷ್ಠುರವಾಗಿದ್ದರೂ ಸಹಾ ಜನರನ್ನು ಮೃದುವನ್ನಾಗಿಸಿ ಕೋಮಲವನ್ನಾಗಿಸುತ್ತದೆ. ಓ ಮಹಾರಾಜ, ಹೇಗೆ ಬಿಸಿನೀರನ್ನು ಮೃದುವನ್ನಾಗಿಸುವುದೋ, ಅದೇರೀತಿಯಲ್ಲಿ ತಥಾಗತರ ವಚನಗಳು ನಿಷ್ಠೂರವಾಗಿದ್ದರೂ, ಮೃದುವನ್ನಾಗಿಸುತ್ತದೆ, ಹಿತಕಾರಿಯಾಗಿವೆ. ಅದು ದಯಾಮಯ ತಂದೆಯು ತನ್ನ ಮಕ್ಕಳನ್ನು ತಿದ್ದುವ ರೀತಿಯಲ್ಲಿದೆ. ಓ ಮಹಾರಾಜ, ಹೇಗೆ ಕೆಟ್ಟ ವಾಸನೆಯ ಕಷಾಯಗಳನ್ನು, ಔಷಧಿಗಳನ್ನು ಸೇವಿಸಿದರೆ ಮಾನವನ ಶರೀರದ ದೌರ್ಬಲ್ಯಗಳು ನಾಶವಾಗುವವು. ಅದೇರೀತಿ ಬುದ್ಧ ವಚನವು ಅಪ್ರಿಯವಾಗಿದ್ದರೂ ಲಾಭವನ್ನು, ಹಿತವನ್ನು, ಸುಖವನ್ನು ತರುತ್ತದೆ. ಏಕೆಂದರೆ ಅದು ಕರುಣಾಭರಿತವಾಗಿದೆ. ಓ ಮಹಾರಾಜ, ಹೇಗೆ ಹತ್ತಿಯು ಮಾನವನ ಮೇಲೆ ಬಿದ್ದರೂ ಆತನಿಗೆ ಯಾವ ಗಾಯವು, ಹಾನಿಯೂ ಆಗುವುದಿಲ್ಲವೋ ಹಾಗೆಯೇ ತಥಾಗತರ ವಾಣಿಯು ಹಿತಕಾರಿಯಾಗಿದೆ.
ಒಳ್ಳೆಯದು ನಾಗಸೇನ, ಬಹುವಿಧದ ಉದಾಹರಿಸುವಿಕೆಯಿಂದಾಗಿ, ಕ್ಲಿಷ್ಟವಾದ ಈ ಸಮಸ್ಯೆ ಬಿಡಿಸಿದಿರಿ. ನೀವು ಹೇಳಿದ್ದನ್ನು ನಾನು ಒಪ್ಪುವೆ.
5. ರುಕ್ಖ-ಅಚೇತನಭಾವ ಪನ್ಹೊ (ವೃಕ್ಷದ ಪ್ರಶ್ನೆ)
ಭಂತೆ ನಾಗಸೇನ, ತಥಾಗತರು ಒಮ್ಮೆ ಹೀಗೆ ಹೇಳಿದ್ದಾರೆ ಬ್ರಾಹ್ಮಣ, ಏಕೆ ನೀನು ಅಚೇತನವಾದ ವಸ್ತುವಿನಲ್ಲಿ ಬೇಡಿಕೊಳ್ಳುವೆ? ಅದಂತು ಆಲಿಸದು, ಇದು. ಹೇಗಿದೆ? ಕ್ರಿಯಾತ್ಮಕವಾಗಿ, ಪ್ರಾಜ್ಞವಾಗಿ, ಜೀವಯುತವಾಗಿದೆಯೇ? ಈ ಕಾಡಿನ ಪಲಾಸ ವೃಕ್ಷ ಅಚೇತನಾ ವಸ್ತುವಾಗಿದೆ, ಇದರೊಂದಿಗೆ ನೀನು ಹೇಗೆ ಮಾತನಾಡುವೆ?
ಮತ್ತೊಂದೆಡೆ ಹೀಗೆ ಹೇಳಿದ್ದಾರೆ: ಮತ್ತೆ ಈ ಅಸ್ಪ ಮರವು ಪ್ರತಿಕ್ರಿಯೆ ಮಾಡುವುದು, ನಾನು ಭಾರಾಧ್ವಜ ಮಾತನಾಡುತ್ತಿರುವುದು ಕೇಳುತ್ತಿರುವೆಯಾ?
ಈಗ ಭಂತೆ ನಾಗಸೇನಾ, ವೃಕ್ಷವು ಅಚೇತನಾವಾಗಿದ್ದರೆ, ಅಸ್ಪ ವೃಕ್ಷವು ಬಾರಧ್ವಜನೊಂದಿಗೆ ಮಾತನಾಡಿದ್ದು ಸುಳ್ಳಾಗಿದೆ. ಆದರೆ ಇದು ನಿಜವಾಗಿದ್ದರೆ, ವೃಕ್ಷವು ಅಚೇತನಾ ಎನ್ನುವುದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಪೇಚಿನ ಪ್ರಶ್ನೆಯಾಗಿದೆ, ಇದನ್ನು ನಿಮಗೆ ಹಾಕುತ್ತಿದ್ದೇನೆ, ಬಿಡಿಸಿ. (113)
ಒ ಮಹಾರಾಜ, ಭಗವಾನರು ವೃಕ್ಷವನ್ನು ಅಚೇತನಾ (ಮನಸ್ಸಿಲ್ಲದ್ದು) ವಸ್ತು ಎಂದಿದ್ದಾರೆ ಮತ್ತು ಬಾರದ್ವಜರೊಂದಿಗೆ ಮಾತನಾಡಿದ್ದು, ವ್ಯವಹಾರಿಕವಾಗಿ ಹೇಳಲಾಗಿದೆ. ಹೇಗೆಂದರೆ ಮರವು ಅಚೇತನಾ ಮಾತನಾಡಲಾರದು, ಆದರೆ ಮರದಲ್ಲಿರುವ ವೃಕ್ಷದೇವತೆಯು ಮಾತನಾಡಬಲ್ಲದು. ಇಲ್ಲಿ ವೃಕ್ಷ ದೇವತೆಗೆ ಮರವೆಂದು ಸಂಬೋಧಿಸಲಾಗಿದೆ. ಓ ಮಹಾರಾಜ, ಯಾವ ಬಂಡಿಯಲ್ಲಿ ಧಾನ್ಯ ತುಂಬುವರೋ, ಅದನ್ನು ಧಾನ್ಯದ ಬಂಡಿ ಎನ್ನುತ್ತಾರೆ. ಆ ಬಂಡಿಯನ್ನು ಧಾನ್ಯದಿಂದ ಏನೂ ಸಿದ್ಧಪಡಿಸಿರುವುದಿಲ್ಲ. ಆದರೂ ವ್ಯವಹಾರಿಕವಾಗಿ ಧಾನ್ಯದ ಬಂಡಿ ಎನ್ನುವೆವು. ಹಾಗೆಯೇ ಒಬ್ಬ ಮೊಸರನ್ನು ಕಡೆಯುತ್ತಿದ್ದರೆ, ಆತನಿಗೆ ಬೆಣ್ಣೆ ಕಡೆಯುತ್ತಿದ್ದಾರೆ ಎನ್ನುವೆವು. ಹಾಗೆಯೇ ಯಾವಾಗ ಒಬ್ಬ ವ್ಯಕ್ತಿ ಏನನ್ನಾದರೂ ಸಿದ್ಧಪಡಿಸುತ್ತಿದ್ದರೆ, ಅದೇ ಹೆಸರಿನಿಂದ ಆತನಿಗೆ ಕರೆಯುವರು. ಅದರಂತೆಯೇ ತಥಾಗತರು ಸಹಾ ಧಮ್ಮವನ್ನು ವಿವರಿಸುವಾಗ ಅವರ ಭಾಷೆಯಲ್ಲೇ ಹೇಳುತ್ತಾರೆ. ಏಕೆಂದರೆ ಅದು ಜನಹಿತಕಾರಿ ಆಗಿರುವುದರಿಂದಾಗಿ.
ತುಂಬಾ ಒಳ್ಳೆಯದು ನಾಗಸೇನ, ಇದು ನಿಜಕ್ಕೂ ಹೀಗೆ ಇದೆ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.
6. ಪಿಂಡಪಾತ ಮಹತ್ಫಲ ಪ್ರಶ್ನೆ
ಭಂತೆ ನಾಗಸೇನ, ಹೀಗೆ ಥೇರರಿಂದ ಪಠಿಸಲಾಗಿದೆ: ಯಾವಾಗ ಅವರು ಚುಂದನ ಮನೆಯಲ್ಲಿ ತಿಂದರೊ, ನಂತರ ಬುದ್ಧರು ಭಯಾನಕವಾದ ರೋಗದ ನೋವು ಅನುಭವಿಸಿದರು, ಅದು ಮರಣಾಂತಿಕ ನೋವಾಗಿತ್ತು. ಮತ್ತೆ ಭಗವಾನರು ಹೀಗೆ ಹೇಳಿದ್ದಾರೆ ಓ ಆನಂದ, ಎರಡು ದಾನಗಳು ಸಮಾನವಾದ ಮಹತ್ಪಲವಾದ ದಾನಗಳಾಗಿದೆ. ಸಮನಾದ ಪರಿಣಾಮ ತೋರುತ್ತದೆ, ಅದು ಬೇರೆ ಯಾವುದೇ ದಾನಕ್ಕಿಂತ ಅತ್ಯಂತ ಮಹತ್ಫಲಯುತವಾಗಿದೆ.
ಈಗ ಹೇಳಿ ಭಂತೆ ನಾಗಸೇನರವರೆ, ಅವರು ತಾಮ್ರಕಾರ ಚುಂದನ ಮನೆಯಲ್ಲಿ ಆಹಾರ ಸೇವಿಸಿಯೇ ಆ ಮರಣಾಂತಿಕ ನೋವು ಅನುಭವಿಸಿದ್ದರೆ. ಎರಡನೆಯ ಹೇಳಿಕೆ ಸುಳ್ಳಾಗುತ್ತದೆ, ಆದರೆ ಆ ಹೇಳಿಕೆಯೇ ನಿಜವಾದ ಪಕ್ಷದಲ್ಲಿ ಮೊದಲ ವಿವರಣೆ ಸುಳ್ಳಾಗುತ್ತದೆ. ಹೇಗೆತಾನೆ ಮರಣಾಂತಿಕ ನೋವುಕಾರಕ ದಾನವು ಮಹತ್ಫಲವಾಗಲು ಸಾಧ್ಯ? ಈ ವಿಪರೀತತೆಯ ಹೇಳಿಕೆಗಳ ಸತ್ಯಾಂಶ ವಿವರಿಸಿರಿ, ಜನರಿಗೂ ಸಹಾ ಈ ವಿಷಯದಲ್ಲಿ ಕುತೂಹಲವಿದೆ. ಕೆಲವರು ಲೋಭದಿಂದ ಅತಿ ತಿಂದು ಅಜೀರ್ಣ ವಾಗಿರಬಹುದೆ ಎಂದು ಯೋಚಿಸುತ್ತಾರೆ, ಆದ್ದರಿಂದ ಸತ್ಯವನ್ನು ಪ್ರಕಟಪಡಿಸಿ. (114)
ಓ ಮಹಾರಾಜ, ಎರಡುಬಗೆಯ ದಾನಗಳು ಮಹತ್ಫಲವಾಗಿವೆ. ಅವು ಸಮನಾದ ಫಲವನ್ನು, ಸಮನಾದ ಪರಿಣಾಮಗಳನ್ನು ನೀಡುತ್ತದೆ. ಅವು ಬೇರೆ ಯಾವುದೇ ದಾನಕ್ಕಿಂತ ಅತ್ಯಂತ ಮಹತ್ವತೆ ಪಡೆದಿವೆ. ಅವೆಂದರೆ ತಥಾಗತರು ಬೋಧಿಪ್ರಾಪ್ತಿಯ ಹಿಂದಿನ ದಾನ ಮತ್ತು ಪರಿನಿಬ್ಬಾಣಕ್ಕೆ ಹಿಂದಿನ ದಾನ. ಆ ಸಂದರ್ಭದ ದಾನ ಅತ್ಯಂತ ಮಹತ್ಫಲ ನೀಡುವುದು. ಆ ಸಂದರ್ಭದಲ್ಲಿ ದೇವತೆಗಳು ಸಹಾ ಆನಂದನಿಂದ ಹೀಗೆ ಯೋಚಿಸುವರು: ಇದು ತಥಾಗತರ ಕೊನೆಯ ಭೋಜನವಾಗಿದೆ. ಆಗ ಸೂಕರ ಮದ್ದವವನ್ನು ಸೇವಿಸಿದರು. ಆ ಆಹಾರವು ಉತ್ತಮ ಸ್ಥಿತಿಯಲ್ಲಿತ್ತು, ಹಗುರವಾಗಿತ್ತು, ಸುಖಕರವಾಗಿತ್ತು, ಸುವಾಸಿತವಾಗಿತ್ತು, ಜೀಣರ್ಿಸಲು ಸುಲಭವಾಗಿತ್ತು, ಅದರಿಂದಾಗಿಯೇ ಭಗವಾನರಿಗೆ ರೋಗ ಉಂಟಾಗಲಿಲ್ಲ. ಅದು ಅತಿಯಾದ ಶಾರೀರಿಕ ದುರ್ಬಲತೆ ಯಿಂದಾಗಿತ್ತು. ಏಕೆಂದರೆ ಅದರ ಕಾಲಾವಧಿಯು ಮೀರಿತ್ತು. ಅದರಿಂದಾಗಿ ರೋಗ ಉದಯಿಸಿತು ಮತ್ತು ಪರಿಸ್ಥಿತಿ ಕೆಡುತ್ತಾ ಬಂದಿತು. ಹೇಗೆಂದರೆ ಓ ರಾಜ, ಸಾಮಾನ್ಯ ಬೆಂಕಿಯು ಇಂಧನ ಸಿಕ್ಕರೆ ಇನ್ನಷ್ಟು ಉರಿಯುವಂತೆ ಅಥವಾ ಹೊಳೆಗೆ ಮಳೆಯ ಆಸರೆ ಸಿಕ್ಕರೆ ಪ್ರವಾಹವಾಗುವಂತೆ. ಹೀಗಾಗಿ ಓ ಮಹಾರಾಜ, ಅದು ಆಹಾರದ ದೋಷವಲ್ಲ, ಅಲ್ಲಿ ಕಾಲವನ್ನಷ್ಟೇ ಸೂಚಿಸಲಾಗಿದೆ. ಕಾರಣದಂತೆ ಸೂಚಿಸಿಲ್ಲ.
ಆದರೆ ಪೂಜ್ಯ ನಾಗಸೇನ, ಏತಕ್ಕಾಗಿ ಆ ಎರಡು ದಾನಗಳು ಅಷ್ಟು ಮಹತ್ಫಲಕಾರಿಯಾಗಿದೆ? (115)
ಏಕೆಂದರೆ ಆ ಆಹಾರದ ಪರಿಣಾಮವಾಗಿಯೇ (ಸಹಕಾರಿಯಾಗಿಯೇ) ಅವರು ಆ ಅತ್ಯುನ್ನತ ಸ್ಥಿತಿಗಳನ್ನು ಪ್ರಾಪ್ತಿಮಾಡಿದರು.
ಭಂತೆ ನಾಗಸೇನ, ಯಾವ ಸ್ಥಿತಿಗಳನ್ನು ಉದ್ದೇಶಿಸಿ ನೀವು ಮಾತನಾಡುತ್ತಿರುವಿರಿ?
ನವಸಮಾಪತ್ತಿಗಳನ್ನು ಅವರು ಆಗ ಅನುಲೋಮವಾಗಿ ಹಾಗು ವಿಲೋಮವಾಗಿ ನೆಲೆಸಿ ವಿಹರಿಸುತ್ತಾರೆ.
ಭಂತೆ ನಾಗಸೇನ, ಅವರು ಕೇವಲ ಆ ಎರಡು ದಿನಗಳಲ್ಲಿ ಮಾತ್ರ ಆ ಸ್ಥಿತಿಗಳನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಾಪ್ತಿ ಮಾಡುತ್ತಾರೆಯೇ? (116)
ಹೌದು, ಮಹಾರಾಜ.
ಓಹ್ ಭಂತೆ ನಾಗಸೇನ, ಇದು ನಿಜಕ್ಕೂ ಅದ್ಭುತ ಸಂಗತಿಯಾಗಿದೆ, ಆಶ್ಚರ್ಯಕರ ಸಂಗತಿಯಾಗಿದೆ, ಅತಿಶ್ರೇಷ್ಠಕರವು ಹಾಗು ಭವ್ಯವಾದ ಆ ಎರಡು ದಾನಗಳು ಮಿಕ್ಕ ದಾನಗಳಿಗೆ ಹೋಲಿಸಲು ಸಾಧ್ಯವಾಗುವುದಿಲ್ಲ. ಆ ನವಸಮಾಪತ್ತಿಗಳು ಸಹಾ ಅದ್ಭುತವಾಗಿದೆ, ಭವ್ಯವಾಗಿದೆ, ನಿಜಕ್ಕೂ ಇವು ಮಹತ್ಫಲವೇ ಆಗಿದೆ. ತುಂಬಾ ಒಳ್ಳೆಯದು ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆ.
7. ಬುದ್ಧ ಪೂಜೆಯ ಪ್ರಶ್ನೆ
ಈಗ ಇಲ್ಲಿ ಮೊದಲ ಹೇಳಿಕೆ ನಿಜವಾದಲ್ಲಿ, ಎರಡನೆಯದು ಸುಳ್ಳಾಗುತ್ತದೆ ಮತ್ತು ಎರಡನೆಯ ಹೇಳಿಕೆ ನಿಜವಾದಲ್ಲಿ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ, ಇದನ್ನು ನಿಮಗೆ ಹಾಕಲಾಗಿದೆ ಮತ್ತು ನೀವೇ ಇದನ್ನು ಪರಿಹರಿಸಬೇಕು. (117)
ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರೇ ನುಡಿದಿದ್ದಾರೆ. ಆದರೆ ಇದು ಎಲ್ಲಾ ಜನರಿಗಾಗಿ ಅಲ್ಲ. ಜಿನಪುತ್ರರಿಗಾಗಿ ಅವರು ಈ ತಥಾಗತರ ಪೂಜೆಗಾಗಿ ನಿಮ್ಮನ್ನು ನೀವೇ ತಡೆಮಾಡಿಕೊಳ್ಳದಿರಿ ಎಂದಿದ್ದಾರೆ.
ಧಾತು ಪೂಜೆಯು ಜಿನಪುತ್ತರ ಕಾರ್ಯವಲ್ಲ. ಬದಲಾಗಿ ಅವರು ಎಲ್ಲಾ ಸ್ಥಿತಿಗಳ ನಿಜಸ್ವರೂಪವನ್ನು ಗ್ರಹಿಸಬೇಕಾಗಿದೆ. ಸಮಾಧಿ, ಸತಿಪಟ್ಟಾನ ಅನುಸ್ಸತಿ, ಸಾರವಾದುದನ್ನು ಅರಿಯುವಿಕೆ, ಕ್ಲೇಶದೊಡನೆ ಯುದ್ಧ, ತಮ್ಮ ಹಿತದಲ್ಲೇ ತಲ್ಲೀನವಾಗುವಿಕೆ ಇವು ಜಿನಪುತ್ತರ (ಭಿಕ್ಖುಗಳ) ಕರ್ತವ್ಯವಾಗಿದೆ, ಶರೀರ ಪೂಜೆಯು ಧಾತುಪೂಜೆಯು ಮಿಕ್ಕ ಗೃಹಸ್ಥರು ಮಾಡಬೇಕಾಗಿದೆ.
ಓ ಮಹಾರಾಜ, ಇದು ಹೇಗೆಂದರೆ ರಾಜಕುಮಾರರ ಕರ್ತವ್ಯ ಏನೆಂದರೆ ಚತುರಂಗ ಬಲದ ಶಸ್ತ್ರವಿದ್ಯೆ ಕಲಿಯುವಿಕೆ, ಲೇಖನ ಮುದ್ರವನ್ನು ಕಲಿಯುವಿಕೆ, ಕ್ಷಾತ್ರವರ್ಣದ ಸಂಪ್ರದಾಯ ಪಾಲನೆ, ಶತೃಗಳಿಂದ ದೇಶ, ಜನರನ್ನು ಕಾಪಾಡುವಿಕೆ ಇವೇ ಮುಂತಾದವು ಆಗಿದೆ. ಆದರೆ ಕೃಷಿಯು ಕೆಲವರ ವೃತ್ತಿಯಾದರೆ, ವ್ಯಾಪಾರವು ಕೆಲವರ ವೃತ್ತಿಯಾಗಿದೆ. ಬ್ರಾಹ್ಮಣರು ಋಗ್ವೇದವನ್ನು, ಯಜುವರ್ೆದವನ್ನು, ಸಾಮವೇದವನ್ನು ಅಥರ್ವವೇದವನ್ನು, ಲಕ್ಷಣಶಾಸ್ತ್ರವನ್ನು, ಇತಿಹಾಸವನ್ನು, ಪುರಾಣವನ್ನು, ನಿಘಂಟುವನ್ನು ಅಕ್ಷರ ಶಾಸ್ತ್ರವನ್ನು, ವ್ಯಾಕರಣವನ್ನು, ಭಾಸಮಾಗ್ಗಂ, ಖಗೋಳಶಾಸ್ತ್ರವನ್ನು, ಸ್ವಪ್ನಫಲವನ್ನು, ನಿಮಿತ್ತವನ್ನು, ಷಟವೇದಾಂಗವನ್ನು, ಗ್ರಹಣ, ಧೂಮಕೇತು, ಸಿಡಿಲು, ಗ್ರಹಗತಿ, ಭೂಕಂಪ, ಆಕಾಶಚಿಹ್ನೆಗಳನ್ನು, ಅಂಕಗಣಿತ, ಪ್ರಾಣಿಗಳ ವರ್ತನೆಯ ಶಕುನ, ಪಕ್ಷಿಗಳ ಕೂಗುಗಳ ಶಕುನ, ದ್ರವಗಳ ಮಿಶ್ರಣ (ರಸಾಯನಶಾಸ್ತ್ರ), ಇವುಗಳನ್ನು ಅಭ್ಯಸಿಸುತ್ತಾರೆ. ಮಿಕ್ಕವರು ಬೇಸಾಯ, ವ್ಯಾಪಾರ, ಗೋಪಾಲನೆ, ಇತ್ಯಾದಿಗಳನ್ನು ಮಾಡುತ್ತಾರೆ. ಇವೆಲ್ಲಾ ಪ್ರಾಪಂಚಿಕ ಕಾರ್ಯವಾಗಿದೆ. ಓ ಮಹಾರಾಜ, ಇವುಗಳಲ್ಲಿ ಗಮನಹರಿಸದಂತೆ ಭಗವಾನರು ಹೀಗೆ ಹೇಳಿದ್ದಾರೆ: ಇಂತಹ ನೀಚ ವೃತ್ತಿಗಳಲ್ಲಿ ನೀವು ತೊಡಗಬೇಡಿ ಭಿಕ್ಷುಗಳೆ, ಈ ವಿಷಯಗಳು ಹೀಗಿವೆ. ಭಿಕ್ಷುಗಳ ಪರಮಾರ್ಥ ಉನ್ನತಿಗಾಗಿಯೇ ಭಗವಾನರು ಹೀಗೆ ಹೇಳಿದ್ದರು: ಆನಂದ, ತಥಾಗತರ ಶರೀರ ಪೂಜೆ ಮಾಡುತ್ತಾ ನಿಮ್ಮನ್ನು ನೀವು ತಡೆಗೊಳಿಸಿಕೊಳ್ಳಬೇಡಿ. ಓ ಮಹಾರಾಜ, ಭಗವಾನರು ಹಾಗೆ ಹೇಳದಿದ್ದರೆ, ಈಗಾಗಲೇ ಭಿಕ್ಷುಗಳು ಅವರ ಪಿಂಡಪಾತ್ರೆ ಮತ್ತು ಚೀವರ ತೆಗೆದುಕೊಂಡು ಕೇವಲ ಬುದ್ಧರ ಪೂಜೆಯಲ್ಲೇ ತಲ್ಲೀನರಾಗುತ್ತಿದ್ದರು.
ತುಂಬಾ ಒಳ್ಳೆಯದು ನಾಗಸೇನ, ನಿಜಕ್ಕೂ ಇದು ಹೀಗೆಯೇ ಇದೆ. ನೀವು ಹೇಳಿದ್ದನ್ನು ನಾನು ಒಪ್ಪುವೆ.
8. ಪಾದಸಕಲಿಕಾಹತ ಪನ್ಹೋ (ಪಾದಗಾಯದ ಪ್ರಶ್ನೆ)
ಪೂಜ್ಯ ನಾಗಸೇನ, ನೀವು ಭಿಕ್ಷುಗಳು ಹೀಗೆ ಹೇಳುವಿರಿ: ತಥಾಗತರು ಭೂಮಿಯ ಮೇಲೆ ನಡೆಯುತ್ತಿದ್ದರೆ, ಭೂಮಿಯು ಅಚೇತನಾ ವಸ್ತುವಾಗಿದ್ದರೂ ಸಹಾ ಹಳ್ಳಗಳು ಮುಚ್ಚಲ್ಪಟ್ಟು ನೆಲಸಮವಾಗುತ್ತಿತ್ತು. ಆದರೆ ಮತ್ತೊಂದೆಡೆ ನೀವೇ ಹೇಳುವಿರಿ, ಬಂಡೆಯ ಚೂರು ಸಿಡಿದು ತಾಗಿ ಅವರ ಪಾದವು ಗಾಯವಾಯಿತೆಂದು. ಯಾವಾಗ ಬಂಡೆಯು ಬೀಳುತ್ತಿತ್ತೊ ಅದೇಕೆ ಪಕ್ಕಕ್ಕೆ ಸರಿಯಲಿಲ್ಲ? ಮೊದಲ ಹೇಳಿಕೆ ಸರಿಯಾದ ಪಕ್ಷದಲ್ಲಿ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಆದರೆ ಎರಡನೆಯ ಹೇಳಿಕೆ ಸರಿಯಾಗಿದ್ದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ಇದನ್ನು ನಿಮಗೆ ಹಾಕಿದ್ದೇನೆ, ಬಿಡಿಸಿ. (118)
ಓ ಮಹಾರಾಜ, ಈ ಎರಡು ಹೇಳಿಕೆಗಳು ಸಹಾ ಸರಿಯಾಗಿಯೇ ಇವೆ. ಆದರೆ ಇಲ್ಲಿ ಗಮನಿಸಿ ರಾಜ, ಆ ಬಂಡೆಯು ತಾನಾಗಿಯೇ ಬೀಳಲಿಲ್ಲ. ಅದು ದೇವದತ್ತನಿಂದ ತಳ್ಳಲ್ಪಟ್ಟಿತ್ತು. ಓ ಮಹಾರಾಜ, ದೇವದತ್ತ ಲಕ್ಷ ಜನ್ಮಗಳ ಹಿಂದಿನಿಂದಲೂ ಬೋಧಿಸತ್ತರನ್ನು ದ್ವೇಷಿಸುತ್ತಲೇ ಬಂದಿದ್ದಾನೆ. ಆತನು ದ್ವೇಷದಿಂದ ಬೃಹತ್ ಬಂಡೆಯನ್ನು ಹಿಡಿದು, ಭಗವಾನರ ತಲೆಯ ಮೇಲೆ ಬೀಳುವಂತೆ ತಳ್ಳಿದನು. ಆದರೆ ಅದರ ಜೊತೆಯಲ್ಲಿ ಬೇರೆ ಬಂಡೆಗಳು ಬಂದಿದ್ದರಿಂದಾಗಿ. ಅವು ತಥಾಗತರ ಬಳಿಗೆ ಬರುವ ಮುಂಚೆಯೇ ತಡಗೊಳ್ಳಲ್ಪಟ್ಟವು. ಆದರೆ ಅವುಗಳ ಘರ್ಷಣೆಯ ಬಲದಿಂದಾಗಿ ಬಂಡೆಯ ಚೂರು ಏರ್ಪಟ್ಟು, ಸಿಡಿದು, ಭಗವಾನರ ಕಾಲಿಗೆ ಚುಚ್ಚಿತು.
ಆದರೆ ನಾಗಸೇನ, ಯಾವಾಗ ಎರಡು ಬೃಹತ್ ಬಂಡೆಗಳು ತಡೆಗೊಳ್ಳಲ್ಪಟ್ಟಿದ್ದರೆ ಆ ಚೂರು ಏಕೆ ತಡೆಗೊಳ್ಳಲ್ಪಟ್ಟಿಲ್ಲ.
ಆದರೆ ಮಹಾರಾಜ, ಒಂದು ವಿಷಯ ತಡೆಗೊಳ್ಳಲ್ಪಡಬಹುದು, ಪಾರಾಗಬಹುದು, ಹೇಗೆಂದರೆ ನೀವು ಪಾರಾಗುವರೀತಿ, ಬೆರಳುಗಳಿಂದ ಅದನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಾಲು, ಅಥವಾ ಮಜ್ಜಿಗೆ ಅಥವಾ ತುಪ್ಪ, ಅಥವಾ ಎಣ್ಣೆ ಅಥವಾ ಮೀನುಸಾರು ಅಥವಾ ಸೂಕ್ಷ್ಮವಾದ ಮಣ್ಣಿನ ಧೂಳು, ಇದನ್ನು ತೆಗದುಕೊಂಡು ಮುಷ್ಠಿ ಮುಚ್ಚಿದಾಗ, ಅವು ಪಾರಾಗುತ್ತದೆ. ಅಥವಾ ನೀವು ಅನ್ನವನ್ನು ತೆಗೆದುಕೊಂಡು ಬಾಯಲ್ಲಿ ತೆಗೆದುಕೊಳ್ಳುವ ಮೊದಲೇ ಆ ಅನ್ನದ ಅಗಳು ಪಾರಾಗುತ್ತವೆ.
ಆಯಿತು ಭಂತೆ ನಾಗಸೇನ, ಅದು ಹೀಗಿದ್ದ ಪಕ್ಷದಲ್ಲಿ ನಾನು ಒಪ್ಪುವೆ. ಆದರೆ ಆ ಬಂಡೆಯ ಚೂರು, ಭೂಮಿಯಂತೆ ಭಗವಾನರಿಗೆ ಗೌರವ ಸೂಚಿಸಬಹುದಿತ್ತಲ್ಲ.
ಓ ಮಹಾರಾಜ, ಹನ್ನೆರಡು ರೀತಿಯ ಜನರು ಗೌರವ ನೀಡುವುದಿಲ್ಲ. ಅವರೆಂದರೆ ರಾಗಯುಕ್ತನಾದ ಮನುಷ್ಯನು ರಾಗದಿಂದ ಇದ್ದಾಗ, ದ್ವೇಷಿಯು ತನ್ನ ಕೋಪದಿಂದ ಕೂಡಿದಾಗ, ಮೋಹಿಯು ಮೂಢತ್ವದಿಂದ ಕೂಡಿರುವಾಗ, ಅಹಂಕಾರಿಯು ಮುಖಸ್ತುತಿಗೊಂಡಾಗ, ನಿಗರ್ುಣಿಯು ಪಕ್ಷಪಾತದಿಂದ ಕೂಡಿರುವಾಗ, ಹಠಮಾರಿಯು ನಮ್ರತೆ ಬಯಸಿದಾಗ, ಹೀನನಾಗಿರುವವನು ಹೀನತ್ವದಿಂದ ಕೂಡಿರುವಾಗ, ಮಾತುಗಾರನು ಒಣಹೆಮ್ಮೆಯಿಂದ ಕೂಡಿರುವಾಗ, ಪಾಪಿಯು ಕ್ರೂರತ್ವದಿಂದ ಇದ್ದಾಗ, ದುಃಖಿಯು ಶೋಕದಿಂದ ಇದ್ದಾಗ ಮತ್ತು ಜೂಜುಗಾರನು. ಏಕೆಂದರೆ ಆತನು ಲೋಭದಿಂದ ಆವೃತನಾಗಿ ಮತ್ತು ಕಾರ್ಯನಿರತನೂ ಮತ್ತೊಂದು ಲಾಭದ ಹಿಂದೆ ಬಿದ್ದಾಗ, ಅವರೆಲ್ಲ ಗೌರವಿಸಲಾರರು, ಆದರೆ ಇಲ್ಲಿ ಬಂಡೆಯ ಚೂರು, ಘರ್ಷಣೆಯಿಂದ ಸಿಡಿದು ಅಕಸ್ಮಾತ್ತಾಗಿ ಹಾರಿದಾಗ, ಅದು ಭಗವಾನರ ಕಾಲಿಗೆ ಚುಚ್ಚಿ ಆಗಿತ್ತು. ಹೇಗೆ ಸೂಕ್ಷ್ಮವಾದ, ಮಣ್ಣಿನ ಧೂಳು, ವಾಯುವಿನ ಬಲದಿಂದಾಗಿ ಚಲಿಸುವವೋ ಆಗ ಅವು ಯಾವ ದಿಕ್ಕಿಗೆ ಚಲಿಸುತ್ತವೋ ಅದೇರೀತಿಯಲ್ಲಿ ಮಹಾರಾಜ, ಬಂಡೆಯ ಚೂರು ಸಿಡಿದಾಗ ಅದು ಭೂಮಿಯಲ್ಲಿ ಇರಲಿಲ್ಲ. ಗಾಳಿಯಲ್ಲಿ ಸ್ಥಿರವಾಗಿರಲಿಲ್ಲ. ಅಂತಹ ಸ್ಥಿತಿಯಲ್ಲಿ, ಅದು ಬಲಪ್ರಯೋಗಗೊಂಡ ದಿಕ್ಕಿನಲ್ಲಿಯೇ ಚಲಿಸಿತು ಹಾಗು ಭಗವಾನರ ಕಾಲಿಗೆ ಅಪ್ಪಳಿಸಿತು. ಹೇಗೆ ಉದುರಿದ ಒಣ ಎಲೆಯು ಗಾಳಿಗೆ ಸಿಲುಕಿ ಹಾರುವುದೋ ಹಾಗೇ ಇಲ್ಲೂ ಆಯಿತು. ಇದಕ್ಕೆ ಕಾರಣ ಬಂಡೆಯ ಚೂರಲ್ಲ, ಅದಕ್ಕೆ ದೇವದತ್ತನ ಕೃತಘ್ನತೆ, ಪಾಪಯುತ ಮನಸ್ಸು ಮತ್ತು ಆತನ ಪಾಪಕೃತ್ಯವೇ ಕಾರಣವಾಗಿದೆ.
ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ. ಅದು ಹೀಗೆಯೇ ಇದೆ ಮತ್ತು ಇದನ್ನು ನಾನು ಒಪ್ಪುವೆ.
9. ಅಗ್ಗಗ್ಗ ಸಮಣ ಪನ್ಹೋ (ಸಮಣತ್ವದ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ ಒಬ್ಬನು ಅಸ್ರವಗಳ ನಾಶದಿಂದಲೇ ಸಮಣನಾಗುತ್ತಾನೆ ಆದರೆ ಮತ್ತೊಂದೆಡೆ ಯಾರಲ್ಲಿ ಈ ನಾಲ್ಕು ಗುಣಗಳಿವೆಯೋ ಆತನೇ ಸಮಣ ಅವೆಂದರೆ-ಕ್ಷಾಂತಿ, ಮಿತಹಾರ, ತ್ಯಾಗ ಮತ್ತು ಏನನ್ನೂ ಹೊಂದದಿರುವಿಕೆ. ಈಗ ಈ ನಾಲ್ಕು ಗುಣಗಳು ಪರರಲ್ಲೂ ಕಾಣುತ್ತೇವೆ. ಅವರ ಆಸವಗಳು ಪೂರ್ಣವಾಗಿ ನಾಶವಾಗಿರುವುದಿಲ್ಲ. ಈಗ ಹೇಳಿ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದರೆ ಎರಡನೆಯದು ತಪ್ಪಾಗುತ್ತದೆ, ಎರಡನೆಯದು ಸರಿಯಾಗಿದ್ದರೆ ಮೊದಲನೆಯದು ತಪ್ಪಗಿರುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವು ಬಿಡಿಸಬೇಕು. (119)
ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರಿಂದಲೇ ಬಂದಿವೆ. ಆದರೆ ಎರಡನೆಯ ಹೇಳಿಕೆಯು ಇಂತಿಂಥ ಗುಣಲಕ್ಷಣಗಳಿಂದ ಇರಬೇಕು ಎಂದಿದ್ದಾರೆ. ಆದರೆ ಮೊದಲ ಹೇಳಿಕೆಯು ಎಲ್ಲ ಅರ್ಥವನ್ನು ಒಳಗೊಂಡಿದೆ. ಏನೆಂದರೆ ಯಾರಲ್ಲಿ ಆಸವಗಳು ನಾಶವಾಗಿದೆಯೋ ಆತನೇ ಸಮಣ ಮತ್ತು ಯಾರೆಲ್ಲರೂ ತಮ್ಮ ಅಕುಶಲಗಳ ಧಮನದಿಂದಾಗಿ ಪೂರ್ಣರೆಂದು ಹೇಳುವರೊ, ಅವರನ್ನೆಲ್ಲಾ ಒಂದೆಡೆ ನಿಲ್ಲಿಸಿದಾಗ ಅಸವಗಳ ನಾಶದಿಂದ ಅರಹಂತನಾಗಿರುವವನು ಪ್ರಧಾನವಾಗಿ ಎದ್ದು ಕಾಣಿಸುವನು. ಹೇಗೆಂದರೆ ಮಹಾರಾಜ, ಯಾವೆಲ್ಲ ಪುಷ್ಪಗಳು ನೀರಿನಲ್ಲೇ ಆಗಲಿ ಅಥವಾ ಭೂಮಿಯಲ್ಲೇ ಆಗಲಿ, ವಷರ್ಿಕ (ದ್ವಿಮಲ್ಲಿಗೆ) ಪುಷ್ಪವೇ ಚೆನ್ನಾಗಿರುತ್ತದೆ ಹಾಗು ಜನಪ್ರಿಯವಾಗಿವೆ. ಅಥವಾ ಓ ಮಹಾರಾಜ, ಎಲ್ಲಾರೀತಿಯ ಧಾನ್ಯಗಳಲ್ಲಿ ಅಕ್ಕಿಯೇ ಶ್ರೇಷ್ಠವಾಗಿದೆ, ಅದನ್ನೇ ಇಷ್ಟಪಟ್ಟು ಆಹಾರಕ್ಕೆ ಬಳಸುತ್ತಾರೆ.
ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ, ಹೀಗಾದಲ್ಲಿ ನೀವು ಹೇಳಿದ್ದನ್ನು ನಾನು ಒಪ್ಪುವೆ.
10. ವಣ್ಣಭಣನ ಪನ್ಹೊ (ವರ್ಣನೆ ಬಗ್ಗೆ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಯಾರಾದರೂ ನನಗಾಗಲೀ ಅಥವಾ ಧಮ್ಮಕ್ಕಾಗಲಿ ಅಥವಾ ಸಂಘಕ್ಕಾಗಲಿ ಪ್ರಶಂಸಿಸಿದರೆ ನೀವು ಆನಂದಗೊಳ್ಳಬಾರದು, ಸೋಮನಸ್ಸು ಹೊಂದಬಾರದು, ಚಿತ್ತವನ್ನು ಉಬ್ಬಿಸಬಾರದು. ಆದರೆ ಇನ್ನೊಂದೆಡೆ ಸೇಲ ಬ್ರಾಹ್ಮಣನಿಂದ ಪ್ರಶಂಸಿತಗೊಂಡಾಗ ಅವರು ಆನಂದಪಟ್ಟವರಂತೆ ಕಾಣುತ್ತಾರೆ. ಹಾಗೆಯೇ ಅವರು ಹೀಗೆ ಹೇಳುತ್ತಾರೆ: ರಾಜನಾಗಿದ್ದೇನೆ ನಾನು ಸೇಲ, ಅನುತ್ತರ ಧಮ್ಮರಾಜ, ಧಮ್ಮಚಕ್ರವನ್ನು ಪ್ರವತ್ತಿಸಿದ್ದೇನೆ, ಆ ಚಕ್ರವನ್ನು ಯಾರೂ ಸಹಾ ಹಿಂತಿರುಗಿಸಲಾರರು ಎಂದಿದ್ದಾರೆ. ಈಗ ಇಲ್ಲಿ ಮೊದಲನೆಯದು ಸತ್ಯವಾಗಿದ್ದರೆ ಎರಡನೆಯದು ಸುಳ್ಳಾಗುತ್ತದೆ. ಎರಡನೆಯದು ಸತ್ಯವಾಗಿದ್ದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ಇದನ್ನು ನಿಮಗೆ ಹಾಕಿದ್ದೇನೆ ಮತ್ತು ನೀವೇ ಪರಿಹರಿಸಬೇಕು. (120)ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳೆಲ್ಲಾ ಸರಿಯಾಗಿಯೇ ಇದೆ. ಆದರೆ ಇಲ್ಲಿ ಮೊದಲ ಹೇಳಿಕೆಯು ಧಮ್ಮಾನುಸಾರವಾಗಿ, ಸಾರಯುತವಾಗಿ, ಸತ್ಯದ ವಾಸ್ತವಿಕತೆಯಲ್ಲಿ ಜೀವಿಸುವ ರೀತಿ ಹೇಳಿದ್ದಾರೆ ಮತ್ತು ಎರಡನೆಯ ಹೇಳಿಕೆಯು ಅವರು ಯಾವುದೇ ಲಾಭಕ್ಕಾಗಿ ಅಥವಾ ಪ್ರಶಂಸೆಗಾಗಿ ಅಥವಾ ಪ್ರಶಂಸಿತರಾಗಿ, ಅಥವಾ ಎಚ್ಚರತಪ್ಪಿ ಮೋದಗೊಂಡು ಅಥವಾ ಅನುಚರರನ್ನು ಗೆಲ್ಲಲು ಹೇಳಲಿಲ್ಲ. ಬದಲಾಗಿ ದಯೆಯಿಂದ, ಕರುಣೆಯಿಂದ, ಪರಹಿತವನ್ನು ನೆನಪಿಟ್ಟು, 300 ಯುವ ಬ್ರಾಹ್ಮಣರಲ್ಲಿ ಶ್ರದ್ಧೆಯುಕ್ಕಿಸಲು, ಅವರಲ್ಲಿ ಜ್ಞಾನ ವಿಕಾಸವಾಗಿಸಲು ಸತ್ಯವನ್ನೇ ಅವರು ಹೇಳಿದ್ದಾರೆ.
ಸೇಲ, ನಾನು ಅನುತ್ತರ ಧಮ್ಮರಾಜನಾಗಿದ್ದೇನೆ, ಧಮ್ಮಚಕ್ರವನ್ನು ಪ್ರವತರ್ಿಸಿದ್ದೇನೆ, ಅದನ್ನು ಯಾರು ಸಹಾ ಹಿಂತಿರುಗಿಸಲಾರರು ಎಂದಿದ್ದಾರೆ (ಜನರೇ ಹೀಗೆ ಸತ್ಯ ಹೇಳಿದರೆ ಪ್ರಶಂಸೆ ಮಾಡಿಕೊಂಡ ಎನ್ನುತ್ತಾರೆ, ಸತ್ಯ ಹೇಳದಿದ್ದರೆ ಕೊರತೆ ಇರಬಹುದಾ ಎಂದು ಸಂದೇಹಪಡುತ್ತಾರೆ).
ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ, ಹೀಗೆಯೇ ವಾಸ್ತವಾಂಶವು ಇದೆ. ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.
11. ಅಹಿಂಸಾಸಿಗ್ಗಹ ಪನ್ಹೊ (ಅಹಿಂಸೆ ನಿಗ್ರಹ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು : ಯಾರಿಗೂ ಹಿಂಸೆ ಮಾಡದಿರಿ, ಮೆತ್ತ ಮತ್ತು ಕರುಣೆಯಿಂದ ಲೋಕದಲ್ಲಿ ವಿಹರಿಸಿರಿ. ಆದರೆ ಮತ್ತೊಂದೆಡೆ ಹೀಗೆ ಹೇಳಿದ್ದಾರೆ ಯಾರು ನಿಗ್ರಹಕ್ಕೆ ಅರ್ಹರೋ ಅವರನ್ನು ನಿಗ್ರಹಿಸಿ ಮತ್ತು ಯಾರು ಪ್ರೋತ್ಸಾಹಕ್ಕೆ ಅರ್ಹರೋ ಅವರನ್ನು ಪ್ರೋತ್ಸಾಹಿಸಿ ಎಂದಿದ್ದಾರೆ. ಭಂತೆ ನಾಗಸೇನ, ಶಿಕ್ಷೆ (ನಿಗ್ರಹ) ಎಂದರೆ ಕೈಕಾಲು ಕತ್ತರಿಸುವುದು, ವಧಿಸುವುದು, ಬಂಧಿಸುವುದು, ಚಿತ್ರಹಿಂಸೆ, ನೀಡುವುದು, ಗಲ್ಲಿಗೇರಿಸುವುದು, ಜೀವಾವಧಿ ಕಾಗಾಗೃಹ. ಈಗ ಹೇಳಿ ಇಲ್ಲಿ ಮೊದಲ ಹೇಳಿಕೆ ಸತ್ಯವಾದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇಲ್ಲವೇ ಎರಡನೆಯ ಹೇಳಿಕೆ ಸತ್ಯವಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ ಬಿಡಿಸಿ. (121)
ಓ ಮಹಾರಾಜ, ನೀವು ಹೇಳಿದಂತಹ ಹೇಳಿಕೆಗಳು ಸರಿಯಾಗಿಯೇ ಇವೆ. ಮೊದಲನೆಯದು, ಅಹಿಂಸೆಯಿಂದ ಜೀವಿಸುವುದು ಹಾಗು ಮೆತ್ತ ಕರುಣೆಯಿಂದ ವಿಹರಿಸುವುದು, ಇದು ಎಲ್ಲಾ ಬುದ್ಧರಿಂದ ಬಂದಿದ್ದುದಾಗಿದೆ. ಅದೇ ಧಮ್ಮಾದೇಶನವಾಗಿದೆ, ಧಮ್ಮವಾಗಿದೆ ಮತ್ತು ಧಮ್ಮದ ಲಕ್ಷಣವೆಂದರೆ ಯಾವುದೇ ಪಾಪವನ್ನು (ಕೆಟ್ಟದ್ದನ್ನು) ಮಾಡದಿರುವುದು. ಇದು ಸರಿಯಾಗಿಯೇ ಇದೆ, ಆದರೆ ಎರಡನೆಯ ಹೇಳಿಕೆಯು ವಿಶೇಷ ಅರ್ಥದಲ್ಲಿ ಹೇಳಲಾಗಿದೆ. ಅದನ್ನು ನೀವು ಅಪಾರ್ಥವಾಗಿ ಭಾವಿಸಿರುವಿರಿ, ಅದೆಂದರೆ ನಿಗ್ರಹಿಸಬೇಕಾದುದನ್ನು ನಿಗ್ರಹಿಸಿ, ಪ್ರೋತ್ಸಾಹಿಸಬೇಕಾದ್ದನ್ನು ಪ್ರೋತ್ಸಾಹಿಸಿ. ಓ ಮಹಾರಾಜ, ಇಲ್ಲಿ ಅಹಂಕಾರವನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ವಿಧೇಯತೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಪಾಪಚಿತ್ತವನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಎಚ್ಚರಿಕೆಯನ್ನು, ಯೋಗ್ಯ ಗಮನಹರಿಸುವಿಕೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಮಿಥ್ಯಾದೃಷ್ಟಿಗಳನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಸಮ್ಮಾದೃಷ್ಟಿಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಆರ್ಯರಲ್ಲದವರನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಆರ್ಯರನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಚೋರರನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಅಚೋರರನ್ನು ಪ್ರೋತ್ಸಾಹಿಸಬೇಕಾಗುತ್ತದೆ.
ಭಂತೆ ನಾಗಸೇನ, ನಿಮ್ಮ ಕೊನೆಯ ವಾಕ್ಯವು ನನ್ನ ಬಲವನ್ನು ಬಲಪಡಿಸಿದೆ, ನಾನು ಭಾವಿಸಿದ ರೀತಿಯಲ್ಲೇ ನೀವು ಹೇಳಿರುವಿರಿ. ಈಗ ಹೇಳಿ ಚೋರರನ್ನು ಹೇಗೆ ನಿಗ್ರಹಿಸಬೇಕು?
ಮಹಾರಾಜ, ಖಂಡಿಸಬೇಕಾದವನನ್ನು ಖಂಡಿಸಬೇಕು, ದಂಡ ಹಾಕಬೇಕಾಗಿರುವ ವನನ್ನು ದಂಡ ಹಾಕಬೇಕು, ಗಡಿಪಾರು ಮಾಡಬೇಕಾಗಿರುವವನನ್ನು ಗಡಿಪಾರು ಮಾಡಬೇಕು, ಮರಣದಂಡನೆಗೆ ಅರ್ಹರಾದವರಿಗೆ ಮರಣದಂಡನೆ ನೀಡಬೇಕು.
ಹಾಗಾದರೆ ಭಂತೆ ನಾಗಸೇನ, ಚೋರರಿಗೆ ಗಲ್ಲಿಗೇರಿಸುವುದು, ತಥಾಗತರ ಬೋಧನೆಯೇ?
ಖಂಡಿತವಾಗಿಯು ಇಲ್ಲ, ಓ ಮಹಾರಾಜ.
ಹಾಗಾದರೆ ತಥಾಗತರು ಚೋರರನ್ನು ನಿಗ್ರಹಿಸಲು ಆಜ್ಞಾಪಿಸಿರುವುದು ಏಕೆ?
ಓ ಮಹಾರಾಜ, ಯಾರೇ ಆಗಲಿ ಮರಣದಂಡನೆಗೆ ಗುರಿಯಾಗಿರುವಾಗ ಆತನು ಆ ಶಿಕ್ಷೆಯನ್ನು ಅನುಭವಿಸುತ್ತಿರುವುದು ತಥಾಗತರ ಅಭಿಪ್ರಾಯದಿಂದ ಎಂದಲ್ಲ. ಬದಲಾಗಿ ಆತನು ತಾನು ಮಾಡಿದ ಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಹೇಳಿ ಮಹಾರಾಜ, ಯಾರಾದರೂ ನಿರಪರಾಧಿ ಮುಗ್ಧನನ್ನು ಬಂಧಿಸಿ ಮರಣದಂಡನೆಗೆ ನೀಡುವರೇ?
ಖಂಡಿತ ಇಲ್ಲ.
ಏಕೆ?
ಏಕೆಂದರೆ ಆತನು ನಿರಪರಾಧಿಯಾಗಿದ್ದಾನೆ.
ಅದೇರೀತಿಯಲ್ಲಿ ಮಹಾರಾಜ, ಚೋರರು ಶಿಕ್ಷೆಗೆ ಗುರಿಯಾಗುತ್ತಿರುವುದು, ತಥಾಗತ ವಚನದಿಂದಲ್ಲ (ತಥಾಗತರ ವಚನವು ಕಳ್ಳತನ ಮಾಡಬೇಡಿ ಎಂದಾಗಿದೆ). ಆದರೆ ತನ್ನ ಹೀನ ಕೃತ್ಯದ ಕಾರಣದಿಂದಾಗಿಯೇ ಶಿಕ್ಷೆಗೆ ಗುರಿಯಾಗುತ್ತಿದ್ದಾನೆ. ಹೇಗೆ ತಾನೆ ಭಗವಾನರ ಧಮ್ಮದಲ್ಲಿ ತಪ್ಪು ಸಿಗುವುದು?
ಹೌದು ಭಂತೆ, ಸಿಗಲಾರದು.
ಹಾಗಾದರೆ ನೀವು ತಥಾಗತರ ಬೋಧನೆಯಲ್ಲಿ ಸತ್ಯವನ್ನು, ಒಳ್ಳೆಯದನ್ನು ಕಾಣುತ್ತಿರುವಿರಿ ಅಲ್ಲವೇ?
ಹೌದು ನಾಗಸೇನ, ಅದು ನಿಜಕ್ಕೂ ಒಳಿತಿನಿಂದಲೇ ಕೂಡಿದೆ, ನೀವು ಹೇಳಿದ್ದನ್ನು ನಾನು ಒಪ್ಪುವೆ.
13. ಭಿಕ್ಖು ಪಣಾಮಿತ ಪನ್ಹೋ (ಕೋಪದ ಬಗ್ಗೆ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ನಾನು ಕೋಪದಿಂದಾಗಲಿ ಅಥವಾ ಸಿಡುಕಿನಿಂದಾಗಲಿ ಕೂಡಿರುವುದಿಲ್ಲ. ಆದರೆ ಮತ್ತೊಂದೆಡೆ ಒಮ್ಮೆ ತಥಾಗತರು ಪೂಜ್ಯ ಸಾರಿಪುತ್ತ ಮತ್ತು ಪೂಜ್ಯ ಮೊಗ್ಗಲಾನರ ಸಮೇತ ಅವರ 500 ಶಿಷ್ಯಗಣವನ್ನು ಹೊರಕಳುಹಿಸಿದರು. ಈಗ ಹೇಳಿ ನಾಗಸೇನ ಅವರು ಹಾಗೆ ಮಾಡಿದ್ದು ಕೋಪದಿಂದಲ್ಲವೇ? ಅಥವಾ ಆನಂದದಿಂದ ಮಾಡಿದರೆ? ದಯವಿಟ್ಟು ಇದನ್ನು ವಿವರಿಸಿ, ಅವರು ಕೋಪದಿಂದ ಮಾಡಿದ್ದರೆ ಅವರಿಗೆ ಮಾತ್ರ ಕೋಪಗೊಳ್ಳಲು ಸ್ವಾತಂತ್ರ್ಯವಿದೆಯೇ? ಅಥವಾ ಆನಂದದಿಂದ ಹಾಗೆ ಮಾಡಿದ್ದರೆ ಅವರು ಅಜ್ಞಾನದಿಂದ ಮಾಡಿದ್ದಾರೆ ಅನಿಸುತ್ತದೆ ಅಥವಾ ಕಾರಣವಿಲ್ಲದೆ ಮಾಡಿದ್ದಾರೆ ಅನಿಸುತ್ತದೆ, ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ, ನಿಮಗೆ ಹಾಕುತ್ತಿದ್ದೇನೆ, ನೀವೇ ಪರಿಹರಿಸಬೇಕು. (122)
ಓ ಮಹಾರಾಜ, ಭಗವಾನರು ಹೀಗೆ ಹೇಳಿದ್ದಾರೆ ನಾನು ಕೋಪದಿಂದಾಗಲಿ ಅಥವಾ ಸಿಡುಕಿನಿಂದಾಗಲಿ ಕೂಡಿರುವುದಿಲ್ಲ ಎಂದು ಹೇಳಿರುವುದು ನಿಜ. ಹಾಗೆಯೇ ಅವರು ಸಾರಿಪುತ್ತ ಹಾಗು ಮೊಗ್ಗಲಾನರನ್ನು ಅವರ ಶಿಷ್ಯರ ಸಮೇತ ಹೊರಕಳುಹಿಸಿದ್ದು ನಿಜವೇ ಆಗಿದೆ. ಆದರೂ ಸಹಾ ಅವರು ಹಾಗೆ ಮಾಡಿದ್ದು ಕೋಪದಿಂದಲ್ಲ. ಊಹಿಸಿ ಮಹಾರಾಜ, ಒಬ್ಬ ಮನುಷ್ಯ ಕಲ್ಲಿಗೆ ಅಥವಾ ಕಾಂಡಕ್ಕೆ ಅಥವಾ ಮಡಿಕೆಗೆ ಅಥವಾ ಸಮವಲ್ಲದ ಭೂಮಿಗೆ ಮುಗ್ಗರಿಸಿದಾಗ, ಹಾಗೆ ಮುಗ್ಗರಿಸಿ ನೆಲಕ್ಕೆ ಬಿದ್ದಾಗ ಈ ವಿಶಾಲಧರೆಯು ಆತನ ಮೇಲೆ ಕೋಪಗೊಳ್ಳುವುದೇ?
ಇಲ್ಲ ಭಂತೆ, ಆ ಧರೆಯು ಆತನ ಮೇಲೆ ಕೋಪವಾಗಲಿ ಅಥವಾ ಆನಂದವಾಗಲಿ ಪಡಲಾರದು. ಧರೆಯು ದ್ವೇಷದಿಂದ ಹೊರತಾಗಿದೆ, ಅದು ಯಾರೊಂದಿಗೂ ಸಿಡುಕಲಾರದು. ಅದು ಮುಗ್ಗುರಿಸಿದ ಮಾನವನ ಅಲಕ್ಷದಿಂದಾದ ತಪ್ಪಾಗಿದೆ.
ಅದೇರೀತಿಯಲ್ಲಿ ಮಹಾರಾಜ, ತಥಾಗತರು ಯಾವುದೇ ಮನುಷ್ಯನ ಮೇಲೆ ಕೋಪವಾಗಲಿ, ಅಹಂಕಾರವಾಗಲಿ ಪಡಲಾರರು. ಸಮ್ಮಾಸಂಬುದ್ಧರನಷ್ಟೇ ಅಲ್ಲ, ಪಚ್ಚೇಕಬುದ್ಧರಾಗಲಿ, ಅರಹಂತರಾಗಲಿ, ದ್ವೇಷದಿಂದ ಮುಕ್ತರಾಗಿರುತ್ತಾರೆ, ಅವರು ಯಾರೊಂದಿಗೂ ಕೋಪಗೊಳ್ಳಲಾರರು, ಅದು ಆ ಶಿಷ್ಯರಿಂದಾದ ತಪ್ಪಿಗಾಗಿ, ಅವರನ್ನು ತಿದ್ದುವುದಕ್ಕಾಗಿ ಹಾಗೆ ಮಾಡಬೇಕಾಯಿತು, ಹೇಗೆ ಸಾಗರವು ಶವವನ್ನು ತನ್ನಲ್ಲಿ ಇಟ್ಟುಕೊಳ್ಳದೆ ದಡಕ್ಕೆ ಎಸೆಯುವುದು. ಹಾಗೆಯೇ ದಡಕ್ಕೆ ಎಸೆಯುವ ಸಾಗರವು ಕೋಪದಿಂದ ಕೂಡಿರುವುದೇ?
ಖಂಡಿತ ಇಲ್ಲ ಭಂತೆ, ವಿಶಾಲ ಸಾಗರವು ಎಂದಿಗೂ ಯಾರೊಂದಿಗೂ ಕೋಪವನ್ನಾಗಲಿ ಅಥವಾ ನಲಿವನ್ನಾಗಲಿ ಪಡಲಾರದು. ಅದು ಯಾರಿಗೂ ಸಂತೋಷಪಡಿಸುವುದಾಗಲಿ ಹಾಗೆಯೇ ಹಿಂಸಿಸುವುದಾಗಲಿ ಮಾಡಲಾರದು.
ಓ ಮಹಾರಾಜ, ಅದೇರೀತಿಯಲ್ಲಿ, ತಥಾಗತರು ಸಹಾ ಯಾವುದೇ ಮಾನವನ ಮೇಲೆ, ಕೋಪಪಡಲಾರರು, ಹಾಗೆಯೇ ಅವರು ಯಾವುದೇ ಮನುಷ್ಯನ ಮೇಲೆ ನಂಬಿಕೆಯು ಇಡಲಾರರು. ತಥಾಗತರು ಅರಹಂತರು ಮತ್ತು ಸಮ್ಮಾಸಂಬುದ್ಧರಾಗಿರುವ ಅವರು ಎಲ್ಲಾಬಗೆಯ ಬಯಕೆಗಳಿಂದ ಮುಕ್ತರಾಗಿರುವರು. ಹಾಗೆಯೇ ಯಾವುದೇ ವ್ಯಕ್ತಿಯ ಮೇಲೆ ಅನುಗ್ರಹವಾಗಲಿ ಅಥವಾ ಹೀನಾಭಾವನೆಯಾಗಲಿ ಇಡಲಾರರು. ಅದು ಆ ಶಿಷ್ಯರ ತಪ್ಪಿನಿಂದಾಗಿಯೇ ಅವರನ್ನು ಹೊರಗೆ ಕಳುಹಿಸಲಾಯಿತು. ಓ ಮಹಾರಾಜ, ಹೇಗೆ ಕಲ್ಲನ್ನು ಎಡವಿ ವ್ಯಕ್ತಿಯು ಭೂಮಿಗೆ ಬೀಳುವನೊ, ಹೇಗೆ ಸಾಗರವು ಶವವನ್ನು ಇಟ್ಟುಕೊಳ್ಳುವುದಿಲ್ಲವೋ ಹಾಗೆಯೇ ಯಾರು ಜನಶ್ರೇಷ್ಠರ ಬೋಧನೆಯಲ್ಲಿ ಎಡವುವರೋ ಅಂತಹವರನ್ನು ತಥಾಗತರು ಹೊರಕಳುಹಿಸುವರು. ಅದು ಕೇವಲ ಅವರ ಒಳಿತಿಗಾಗಿ, ಅವರ ಲಾಭಕ್ಕಾಗಿ, ಅವರ ಚಿತ್ತ ಶುದ್ಧಿಗಾಗಿ. ಅವರು ಜನ್ಮ, ಜರೆ, ಜರಾ ಮೃತ್ಯುವಿನಿಂದ ಮುಕ್ತಿ ಹೊಂದುವುದಕ್ಕಾಗಿ ಹಾಗೆ ಮಾಡುತ್ತಾರೆ.
ತುಂಬಾ ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನೀವು ಹೇಳಿದ್ದನ್ನು ನಾನು ಅಕ್ಷರಷಃ ಒಪ್ಪುವೆ.
No comments:
Post a Comment