Friday 22 December 2017

ಮಿಲಿಂದ ಪನ್ಹ ( ಪ್ರಶ್ನೆಗಳು) MILINDA PANHA in kannada 2. ಅಭೆಜ್ಜ ವಗ್ಗೋ

                                           2. ಅಭೆಜ್ಜ ವಗ್ಗೋ


1. ಖುದ್ದಾನುಖುದ್ದ ಪನ್ಹೊ (ಚಿಕ್ಕಪುಟ್ಟ ತಪ್ಪುಗಳ ಪ್ರಶ್ನೆ)


1. ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು: ಓ ಭಿಕ್ಖುಗಳೇ, ನಾನು ಅಭಿಜ್ಞಾದಿಂದ ಧಮ್ಮವನ್ನು ಉಪದೇಶಿಸುತ್ತೇನೆ, ಅನಭಿಜ್ಞಾದಿಂದಲ್ಲ. ಆದರೆ ಭಗವಾನರು ಇನ್ನೊಂದೆಡೆ ವಿನಯದ ಬಗ್ಗೆ ಹೇಳುವಾಗ ಆನಂದ, ನಾನು ಪರಿನಿಬ್ಬಾಣ ಪಡೆದನಂತರ, ಸಂಘವು ಇಚ್ಛಿಸಿದರೆ, ಚಿಕ್ಕಪುಟ್ಟ ನಿಯಮಗಳನ್ನು ರದ್ದು ಮಾಡಬಹುದು ಎಂದಿದ್ದಾರೆ. ಹೇಳಿ ನಾಗಸೇನ, ಹಾಗಿದ್ದರೆ ಚಿಕ್ಕಪುಟ್ಟ ನಿಯಮಗಳನ್ನು ಅಜ್ಞಾನದಿಂದಾಗಿ ನಿಯಮಿಸಿದ್ದರೆ ಅಥವಾ ಯಾವ ಕಾರಣವಿಲ್ಲದೆ ನಿಯಮಿಸಿದ್ದರೆ, ಹಾಗಿಲ್ಲದಿದ್ದರೆ ಪರನಿಬ್ಬಾಣದ ನಂತರ ಏಕೆ ಬದಲಿಸಲು ಹೇಳಿದರು? ಮೊದಲ ಹೇಳಿಕೆ ನಿಜವಾಗಿದ್ದ ಪಕ್ಷದಲ್ಲಿ, ಎರಡನೆಯದು ಸುಳ್ಳು ಅಥವಾ ಎರಡನೆಯ ಹೇಳಿಕೆ ನಿಜವಾದ ಪಕ್ಷದಲ್ಲಿ, ಮೊದಲ ಹೇಳಿಕೆ ಸತ್ಯವಲ್ಲ. ಇದು ದ್ವಿಮುಖ ಸಮಸ್ಯೆಯಾಗಿದೆ, ಸೂಕ್ಷ್ಮವಾಗಿದೆ, ಆಳವಾಗಿದೆ, ಗಹನವಾಗಿದೆ, ವಿವರಿಸಲು ಕಷ್ಟಕರವಾಗಿದೆ, ನಿಮಗೆ ಇದನ್ನು ಹಾಕಿದ್ದೇನೆ, ಬಿಡಿಸಲು ಪ್ರಯತ್ನಿಸಿರಿ. (101)
2. ಈ ಎರಡು ಪರಿಸ್ಥಿತಿಗಳಲ್ಲಿ ಓ ಮಹಾರಾಜ, ನೀವು ಹೇಳಿದ್ದನ್ನು ಭಗವಾನರು ನುಡಿದಿದ್ದರು, ಆದರೆ ಎರಡನೆಯ ಹೇಳಿಕೆಯು ಭಿಕ್ಷುಗಳಿಗೆ ಹಾಕಿದ ಪರೀಕ್ಷೆಯಾಗಿತ್ತು. ಭಗವಾನರು ಹಾಗೇ ಅನುಮತಿ ನೀಡಿದ ನಂತರವೂ ಅವರು ನಿಯಮಗಳಿಗೆ ಬದ್ಧರಾಗಿರುವರೇ? ಅಥವಾ ಮುರಿಯುವರೇ? ಹೇಗೆಂದರೆ ಚಕ್ರವತರ್ಿಯು ತನ್ನ ಮಕ್ಕಳಿಗೆ ಹೀಗೆ ಹೇಳುತ್ತಾರೆ ನನ್ನ ಮಕ್ಕಳೆ, ಈ ವಿಶಾಲ ದೇಶವು ಸಮುದ್ರದವರೆಗೆ ಪ್ರತಿ ಭಾಗದಲ್ಲು ಹರಡುತ್ತದೆ. ನಮ್ಮ ಹಂಚಿಕೆಯಿಲ್ಲದಿದ್ದಲ್ಲಿ ಇದನ್ನು ನಿಯಂತ್ರಿಸುವುದು ಅತಿ ಕಷ್ಟಕರವಾಗಿದೆ. ಆದ್ದರಿಂದ ಮಕ್ಕಳೇ ನನ್ನ ಮರಣದ ನಂತರ ನೀವು ಗಡಿಯಲ್ಲಿರುವ ಜಿಲ್ಲೆಗಳಿಗೆ ಖಚರ್ು ಮಾಡುವುದು ನಿಲ್ಲಿಸಿ. ಓ ಮಹಾರಾಜ, ಈಗ ಹೇಳಿ ಅ ರಾಜಕುಮಾರರು ಚಕ್ರವತರ್ಿಯ ಮರಣದ ನಂತರ ಖಚರ್ು ಮಾಡುವುದನ್ನು ನಿಲ್ಲಿಸುವರೇ?
ಇಲ್ಲ ಭಂತೆ, ರಾಜರು ಮಹತ್ವಾಕಾಂಕ್ಷೆಗಳಾಗಿರುತ್ತಾರೆ, ಹಾಗೆಯೇ ರಾಜಕುಮಾರರು ಸಹಾ ಅಧಿಕಾರ ದಾಹದಿಂದ ತಮ್ಮಲ್ಲಿರುವ ರಾಜ್ಯವನ್ನು ಎರಡಾವತರ್ಿ ಅಥವಾ ಮೂರುಪಟ್ಟು ಮಾಡುತ್ತಾರೆ ಹೊರತು ತಮ್ಮಲ್ಲಿರುವಷ್ಟರಲ್ಲಿ ತೃಪ್ತರಾಗುವುದಿಲ್ಲ.
ಓ ಮಹಾರಾಜ, ಅದೇರೀತಿಯಲ್ಲಿ ತಥಾಗತರು ಸಹಾ ಭಿಕ್ಷುಗಳಿಗೆ ಪರೀಕ್ಷಿಸಲೆಂದು ಹೀಗೆ ಹೇಳಿದ್ದರು ಆನಂದ, ನಾನು ಪರಿನಿಬ್ಬಾಣ ಪಡೆದಮೇಲೆ ಸಂಘವು ಇಚ್ಛಿಸಿದರೆ ಚಿಕ್ಕಪುಟ್ಟ ನಿಯಮಗಳನ್ನು ರದ್ದುಗೊಳಿಸಬಹುದು. ಆದರೆ ಓ ಮಹಾರಾಜ, ಬುದ್ಧರ ಮಕ್ಕಳಾದ ಭಿಕ್ಷುಗಳಿಗೆ ಧಮ್ಮದ ಮಹಾತ್ವಾಕಾಂಕ್ಷೆಯಿದೆ, ದುಃಖದಿಂದ ಮುಕ್ತರಾಗಲು, ಅವರು 250 ನಿಯಮಗಳಿಗೆ ಬದ್ಧರಾಗಿದ್ದರು. ಸಾಮಾನ್ಯವಾಗಿ ವಿಧಿಸಿದ ಆ ನಿಯಮಗಳನ್ನು ಅವರು ಎಂದಿಗೂ ಭಂಗ ಮಾಡಲಿಲ್ಲ.
ಭಂತೆ ನಾಗಸೇನ, ಭಗವಾನರು ಚಿಕ್ಕಪುಟ್ಟ ನಿಯಮಗಳ ಬಗ್ಗೆ ಹೇಳಿದ್ದನ್ನು ಕೇಳಿ, ಈ ಜನರು ದಿಗ್ಭ್ರಾಂತರಾಗಿ, ಸಂಶಯಕ್ಕೆ ಬಿದ್ದಿದ್ದಾರೆ, ಚಚರ್ೆಗೆ ಬಿದ್ದಿದ್ದಾರೆ, ತಡವರಿಕೆಯಲ್ಲಿ ಕಳೆದುಹೋಗಿದ್ದಾರೆ. ಅವರು ಯಾವುದು ಚಿಕ್ಕಪುಟ್ಟ ನಿಯಮಗಳೆಂದು ಗೊಂದಲದಲ್ಲಿದ್ದಾರೆ.
ಓ ಮಹಾರಾಜ, ದುಕ್ಕಟಂ (ವರ್ತನೆಗಳ ತಪ್ಪುಗಳಿಗೆ) ಚಿಕ್ಕ ತಪ್ಪುಗಳೆನ್ನುತ್ತಾರೆ ಮತ್ತು ದುಬರ್ಾಷಿತ್ವಕ್ಕೆ ಪುಟ್ಟ ನಿಯಮಗಳೆನ್ನುತ್ತಾರೆ. ಇವೆರಡೂ ಸೇರಿ ಚಿಕ್ಕಪುಟ್ಟ (ಖುದ್ದ ಮತ್ತು ಅನುಖುದ್ದ) ತಪ್ಪುಗಳೆನ್ನುತ್ತಾರೆ. ಓ ಮಹಾರಾಜ, ಹಿರಿಯ ಥೇರರಿಗೂ ಸಹಾ ಈ ವಿಷಯದಲ್ಲಿ ಸ್ವಲ್ಪಗೊಂದಲವೇ. ಅವರಲ್ಲಿ ಈ ವಿಷಯದಲ್ಲಿ ಐಕ್ಯಮತವಿಲ್ಲ ಮತ್ತು ಭಗವಾನರಿಗೂ ಈ ಸಮಸ್ಯೆ ಉಂಟಾಗುವುದು ಎಂದು ತಿಳಿದಿತ್ತು.
ಭಂತೆ ನಾಗಸೇನ, ಇಷ್ಟು ದೀರ್ಘಕಾಲದಿಂದ ಬಂದಂತಹ ಈ ಗೊಂದಲವು ಇಂದು ಪರಿಹಾರವಾಯಿತು, ಇಂದು ಜಗತ್ತಿಗೆ ಸತ್ಯ ಪ್ರಕಟವಾಯಿತು, ತೆರೆಸರಿಯಿತು, ಎಲ್ಲರಿಗೂ ಸತ್ಯ ಸ್ಪಷ್ಟವಾಯಿತು.

2. ಅಬ್ಯಾಕರಣೀಯ ಪನ್ಹೋ (ಪಕ್ಕಕ್ಕಿಡುವ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು ಆನಂದ, ಧಮ್ಮಕ್ಕೆ (ಸತ್ಯಗಳಿಗೆ) ಸಂಬಂಧಿಸಿದಂತೆ ತಥಾಗತರದ್ದು ಆಚಾರ್ಯಮುಷ್ಟಿಯಿಲ್ಲ (ಅಂದರೆ ಯಾವುದೇ ರಹಸ್ಯ ಅವರಲ್ಲಿರುವುದಿಲ್ಲ). ಆದರೆ ಮಾಲುಂಕ್ಯಪುತ್ತ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ಮಾಡಲಿಲ್ಲ. ಈ ಸಮಸ್ಯೆಗೆ ನಾಗಸೇನ, ಒಂದೇ ಉತ್ತರವಿರಲು ಸಾಧ್ಯ. ಏನೆಂದರೆ ಅವರಿಗೆ ಉತ್ತರಿಸಲು ಏಕೆ ಸಾಧ್ಯವಿಲ್ಲವೆಂದರೆ, ಅವರಿಗೆ ಆ ವಿಷಯದ ಬಗ್ಗೆ ಅಜ್ಞಾನವಿರಬೇಕು ಅಥವಾ ಅವರು ಸತ್ಯವನ್ನು ಮುಚ್ಚಿಡಲು ಇಚ್ಛಿಸಿರಬೇಕು, ಇಲ್ಲಿ ಮೊದಲ ವಾಕ್ಯವು ನಿಜವಾಗಿದ್ದ ಪಕ್ಷದಲ್ಲಿ ಅವರು ಉತ್ತರಿಸದಿರಲು ಕಾರಣ ಅಜ್ಞಾನವೇ ಎಂದು ತಿಳಿಯುತ್ತದೆ. ಆದರೆ ಅವರಿಗೆ ಗೊತ್ತಿದ್ದು, ಉತ್ತರಿಸಿಲ್ಲ ಎಂದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ, ಪರಿಹರಿಸಿರಿ. (102)
3. ಓ ಮಹಾರಾಜ, ಭಗವಾನರು ಆನಂದರಿಗೆ ಹೇಳಿದ್ದ ಹೇಳಿಕೆ ನಿಜವಾಗಿದೆ. ಹಾಗೆಯೇ ಅವರು ಮಾಲುಂಕ್ಯಪುತ್ತನ ಪ್ರಶ್ನೆಗೆ ಉತ್ತರಿಸಲಿಲ್ಲ. ಆದರೆ ಅದು ಅಜ್ಞಾನದಿಂದಲೂ ಅಲ್ಲ, ಹಾಗೆಯೇ ಸತ್ಯವನ್ನು ಅಡಗಿಸಲು ಅಲ್ಲ. ನಾಲ್ಕುರೀತಿಯಲ್ಲಿ ಪ್ರಶ್ನೆಗೆ ಉತ್ತರಿಸಲಾಗುತ್ತದೆ, ಯಾವುದವು ನಾಲ್ಕು ? (1) ಪ್ರಶ್ನೆಗೆ ನೇರವಾಗಿ ಮತ್ತು ಅಂತಿಮವಾಗಿ ಉತ್ತರಿಸುವಿಕೆ (2) ಪ್ರಶ್ನೆಗೆ ವಿವರವಾಗಿ, ವಿಶ್ಲೇಷಣೆಯಿಂದ ಉತ್ತರಿಸುವಿಕೆ (3) ಪ್ರಶ್ನೆಗೆ ಪ್ರತಿಪ್ರಶ್ನೆಯನ್ನು ಹಾಕಿ ಉತ್ತರಿಸುವಿಕೆ ಮತ್ತು (4) ಪ್ರಶ್ನೆಯನ್ನೇ ಪಕ್ಕಕ್ಕೆ ಇಡುವುದರಿಂದಾಗಿ.
ಮತ್ತೆ ಓ ಮಹಾರಾಜ, ಯಾವರೀತಿಯ ಪ್ರಶ್ನೆಗಳಿಗೆ ನೇರವಾಗಿ ಹಾಗು ಅಂತಿಮವಾಗಿ ಉತ್ತರಿಸಬಹುದು? ಅದು ಹೀಗಿರುತ್ತದೆ ದೇಹವು ಅನಿತ್ಯವೇ?, ಗ್ರಹಿಕೆಗಳು ಅನಿತ್ಯವೇ?, ಸಂಖಾರಗಳು ಅನಿತ್ಯವೇ?, ಅರಿವು ಅನಿತ್ಯವೇ?
ಮತ್ತೆ ಯಾವರೀತಿಯ ಪ್ರಶ್ನೆಗಳಿಗೆ ವಿವರವಾಗಿ ಮತ್ತು ವಿಶ್ಲೇಷಣೆಯಿಂದ ಉತ್ತರಿಸಲಾಗುತ್ತದೆ ದೇಹವು ಯಾವರೀತಿ ಅನಿತ್ಯಕರವಾಗಿರುತ್ತದೆ? (ಯಾವುದು ಅನಿತ್ಯಕರ ದೇಹವೇ?) ಇತ್ಯಾದಿ.
ಮತ್ತೆ ಯಾವರೀತಿಯ ಪ್ರಶ್ನೆಗಳನ್ನು ಪ್ರತಿಪ್ರಶ್ನೆಗಳನ್ನು ಹಾಕಿ ಉತ್ತರಿಸಬಹುದು? ಅದು ಹೀಗಿರುತ್ತದೆ ಮತ್ತೇನು ಕಣ್ಣು ಎಲ್ಲವನ್ನೂ ಅರಿಯಬಲ್ಲದೇ?
ಮತ್ತೆ ಎಂತಹ ಪ್ರಶ್ನೆಗಳನ್ನು ಪಕ್ಕಕ್ಕೆ ಇಡಬಹುದು? ಅವು ಹೀಗಿರುತ್ತದೆ ಲೋಕವು ಶಾಶ್ವತವೇ?, ಲೋಕವು ಅಶಾಶ್ವತವೇ?, ಲೋಕವು ಅಂತ್ಯವುಳ್ಳದ್ದೇ?, ಲೋಕವು ಅನಂತವೇ?, ಲೋಕವು ಅಂತ್ಯವೂ ಹಾಗು ಅನಂತವೂ ಅಲ್ಲವೆ?, ಜೀವ ಹಾಗು ಶರೀರವು ಒಂದೆಯೇ?, ಜೀವ ಹಾಗು ಶರೀರವು ಬೇರೆಬೇರೆಯೇ?, ತಥಾಗತರು ಸಾವಿನ ನಂತರ ಇರುವರೇ?, ತಥಾಗತರು ಮರಣದ ನಂತರ ಇರುವುದಿಲ್ಲವೇ? ತಥಾಗತರು ಮರಣದ ನಂತರ ಇರುತ್ತಾರೆ ಮತ್ತು ಇರುವುದಿಲ್ಲವೇ? ತಥಾಗತರು ಮರಣದ ನಂತರ ಇರುವುದಿಲ್ಲ ಹಾಗೆಯೇ ಇಲ್ಲದೇ ಹೋಗುವುದಿಲ್ಲವೇ?
ಓ ಮಹಾರಾಜ, ಮಾಲುಂಕ್ಯಪುತ್ತನು ಪ್ರಶ್ನಿಸಿದ ಪ್ರಶ್ನೆಗಳು ಪಕ್ಕಕ್ಕೆ ಇಡುವಂತಹ ದ್ದಾಗಿತ್ತು. ಆದ್ದರಿಂದಲೇ ಮಾಲುಂಕ್ಯಪುತ್ತನಿಗೆ ಭಗವಾನರು ಉತ್ತರಿಸಲಿಲ್ಲ ಮತ್ತು ಏತಕ್ಕಾಗಿ ಅಂತಹ ಪ್ರಶ್ನೆಗಳನ್ನು ಪಕ್ಕಕ್ಕೆ ಇಡಲಾಗುತ್ತದೆ? ಏಕೆಂದರೆ ಅವುಗಳಿಗೆ ಉತ್ತರಿಸಲು ಉದ್ದೇಶವಾಗಲಿ ಅಥವಾ ಕಾರಣವಾಗಲಿ ಇಲ್ಲದಿರುವುದರಿಂದಾಗಿ. ಆದ್ದರಿಂದಲೇ ಅದನ್ನು ಪಕ್ಕಕ್ಕೆ ಇಡುತ್ತಾರೆ ಮತ್ತು ಭಗವಾನರು ಕಾರಣವಿಲ್ಲದೆ ಅಥವಾ ಉದ್ದೇಶವಿಲ್ಲದೆ ಉತ್ತರಿಸಲಾರರು?
ಬಹುಚೆನ್ನಾಗಿ ಉತ್ತರಿಸಿದಿರಿ ನಾಗಸೇನ ! ಆದ್ದರಿಂದ ನೀವು ಹೇಳಿದ್ದನ್ನು ಒಪ್ಪುತ್ತೇನೆ.

3. ಮೃತ್ಯು ಭಯದ ಪ್ರಶ್ನೆ

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಎಲ್ಲರೂ ಶಿಕ್ಷೆಗೆ ಭಯಪಡುತ್ತಾರೆ, ಎಲ್ಲರೂ ಮೃತ್ಯುವಿಗೆ ಭಯಪಡುತ್ತಾರೆ. ಆದರೆ ಭಗವಾನರು ಇನ್ನೊಂದೆಡೆ ಹೀಗೆ ಹೇಳಿದ್ದಾರೆ: ಅರಹಂತರು ಎಲ್ಲಾರೀತಿಯ ಭಯದಿಂದ ಮುಕ್ತರಾಗಿರುತ್ತಾರೆ. ಹಾಗಾದರೆ ಹೇಗೆ ನಾಗಸೇನರವರೇ? ಅರಹಂತರು ಶಿಕ್ಷೆಗೆ ಹೆದರುವರೇ? ಅಥವಾ ನರಕದ ಜೀವಿಗಳು ಯಾವಾಗ ಸುಡಲ್ಪಡುವವು, ಬೇಯಿಸಲ್ಪಡುವವು, ಕಮರಿಸುವವರು ಮತ್ತು ಚಿತ್ರಹಿಂಸೆಪಡುವವು, ಅವೆಲ್ಲಾ ಜೀವಭಯದಿಂದ, ನರಕಾಗ್ನಿಯಿಂದ ಪಾರಾಗುವುದು ಯಾವುದರಿಂದ? ಭಂತೆ ನಾಗಸೇನ, ಭಗವಾನರು ಎಲ್ಲರೂ ಶಿಕ್ಷೆಗೆ ಮತ್ತು ಸಾವಿಗೆ ಭಯಪಡುತ್ತಾರೆ ಎಂದರೆ ಅರಹಂತರು ಭಯಗಳಿಂದ ಪಾರಾಗುತ್ತಾರೆ ಎಂಬುದು ಸುಳ್ಳಾಗುತ್ತದೆ. ಆದರೆ ಅರಹಂತರು ಭಯಗಳಿಂದ ಮುಕ್ತರಾಗುವುದು ನಿಜವಾದರೆ ಮೊದಲನೇ ಹೇಳಿಕೆ ಸುಳ್ಳಾಗುತ್ತದೆ. ಈ ದ್ವಿಮುಖ ಪೇಚಿನ ಪ್ರಶ್ನೆ ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವು ಪರಿಹರಿಸಬೇಕು. (103)
ಓ ಮಹಾರಾಜ, ಭಗವಾನರ ಈ ಹೇಳಿಕೆ ಎಲ್ಲರೂ ಶಿಕ್ಷೆಗೆ ಮತ್ತು ಸಾವಿಗೆ ಹೆದರುವರು. ಇದು ಅರಹಂತರಿಗೆ ಸಂಬಂಧಪಡುವುದಿಲ್ಲ. ಅರಹಂತರು ಈ ಹೇಳಿಕೆಗೆ ಹೊರತಾಗಿದ್ದಾರೆ. ಅರಹಂತರಲ್ಲಿ ಭಯಕ್ಕೆ ಕಾರಣವಾದ ಎಲ್ಲಾ ಕಾರಣಗಳು ತೆಗೆಯಲ್ಪಟ್ಟಿರುತ್ತದೆ. ಮೊದಲ ಹೇಳಿಕೆಯು ಆಸವಗಳುಳ್ಳ ಜೀವಿಗಳ ಬಗ್ಗೆ ಹೇಳಲಾಗಿದೆ. ಆ ಜೀವಿಗಳಿಗೆ ಆತ್ಮಮೋಹವಿರುತ್ತದೆ. ಅವರು ಸುಖ-ದುಃಖಗಳಿಂದ ಬಾಧಿಸಲ್ಪಡುತ್ತಾರೆ, ಓ ಮಹಾರಾಜ, ಅರಹಂತರು ತಮ್ಮ ಪುನರ್ಜನ್ಮಕ್ಕೆ ಕಾರಣವಾದ ಎಲ್ಲವನ್ನು ಕತ್ತರಿಸಿ ಹಾಕಿರುತ್ತಾರೆ. ನಾಲ್ಕು ವಿಧವಾದ ಭವವನ್ನು ನಾಶಪಡಿಸಿರುತ್ತಾರೆ, ಪುನರ್ಜನ್ಮ ನಿರೋಧಗೊಳಿಸಿರುತ್ತಾರೆ. ಜೀವಗೃಹದ ತೊಲೆಗಳು ಮುರಿಯಲ್ಪಟ್ಟಿದೆ, ಇಡೀ ಗೃಹವು ಎಳೆದು ಬಳಸಲ್ಪಟ್ಟಿದೆ, ಅಸ್ತಿತ್ವದ ಮೂಲಗಳು ಕಳೆದುಕೊಂಡಿದೆ. ಪಾಪ-ಪುಣ್ಯಗಳು ನಿರೋಧಗೊಂಡಿವೆ, ಅಜ್ಞಾನವು ನಾಶಗೊಂಡಿದೆ. ವಿಞ್ಞಾನಕ್ಕೆ ಮುಂದೆ ಯಾವುದೇ ಬೀಜವಿರುವುದಿಲ್ಲ, ಅವರ ಎಲ್ಲಾ ಪಾಪಗಳು ಸುಡಲ್ಪಟ್ಟಿವೆ ಮತ್ತು ಅವರು ಎಲ್ಲಾ ಪ್ರಾಪಂಚಿಕ ಸ್ಥಿತಿಗಳನ್ನು ದಾಟಿರುತ್ತಾರೆ. ಆದ್ದರಿಂದಲೇ ಅರಹಂತರು ಯಾವುದೇ ಭಯದಿಂದ ಕೂಡಿರುವುದಿಲ್ಲ.
ಊಹಿಸಿ ಓ ಮಹಾರಾಜ, ಒಬ್ಬ ರಾಜನಿಗೆ ನಾಲ್ಕು ಪ್ರಧಾನ ಮಂತ್ರಿಗಳಿರುತ್ತಾರೆ. ಅವರೆಲ್ಲರೂ ನಿಷ್ಟಾವಂತರು, ಖ್ಯಾತಿವಂತರು, ಪ್ರಮಾಣಿಕರು, ಉಚ್ಛ ಅಧಿಕಾರಿ ಗಳಾಗಿರುತ್ತಾರೆ. ಆಗ ತುತರ್ುಸ್ಥಿತಿಯು ಉದಯಿಸಿದಾಗ ಆತನು ಈ ರೀತಿ ಘೋಷಿಸುತ್ತಾನೆ, ಎಲ್ಲರೂ ಸಹಾ ತೆರಿಗೆಗಳನ್ನು ಕಟ್ಟಿ ಮತ್ತು ನನ್ನ ಅಧಿಕಾರಿಗಳೇ ಈ ತುತರ್ುಸ್ಥಿತಿಯಲ್ಲಿ ಅಗತ್ಯವಾದುದನ್ನು ನೀವು ಮಾಡಿರಿ. ಈಗ ಹೇಳಿ ಓ ರಾಜ, ತೆರಿಗೆಯ ಭಯವು ಆ ಅಧಿಕಾರಿಗಳಿಗೆ ಇರುವುದೇ?
ಇಲ್ಲ ಭಂತೆ, ಇರಲಾರದು.
ಏಕಿಲ್ಲ.
ಏಕೆಂದರೆ ಅವರು ರಾಜನಿಂದ ನೇಮಿಸಿದ ಮೇಲಧಿಕಾರಿಗಳಾಗಿರುವರು, ಅವರಿಗೆ ತೆರಿಗೆಯು ತಟ್ಟದು, ಅವರು ತೆರಿಗೆಗೆ ಅತೀತರಾಗಿದ್ದಾರೆ. ಮಿಕ್ಕವರೆಲ್ಲರೂ ತೆರಿಗೆ ಅಧೀನಕ್ಕೆ ಬರುತ್ತಾರೆ.
ಓ ಮಹಾರಾಜ, ಅದೇರೀತಿ ಎಲ್ಲರೂ ಶಿಕ್ಷೆಗೆ ಭಯಪಡುವರು ಹಾಗು ಮರಣಕ್ಕೆ ಭಯಪಡುವರು ಎಂಬುದು ಸತ್ಯವಿರುವಂತೆ ಅರಹಂತರು ಎಲ್ಲಾ ಭಯಗಳಿಂದ ಮುಕ್ತರು ಎಂಬುದು ಸತ್ಯವಾಗಿದೆ.
ಆದರೆ ಭಂತೆ ನಾಗಸೇನ, ಎಲ್ಲಾ ಎಂಬ ಪದಬಳಕೆಯಾದಾಗ ಮತ್ತಾವುದು ಬಿಟ್ಟಿರುವುದಿಲ್ಲ, ಈ ವಿಷಯದ ಬಗ್ಗೆ ಇನ್ನಷ್ಟು ವಿವರ ನೀಡಬಲ್ಲಿರಾ?
ಊಹಿಸಿ ಓ ಮಹಾರಾಜ, ಒಂದು ಹಳ್ಳಿಗೆ, ಹಳ್ಳಿಯ ಮುಖ್ಯಸ್ಥನು ಇರುತ್ತಾನೆ. ಆತನು ಡಂಗೂರದವನಿಗೆ ಹೀಗೆ ಆಜ್ಞೆ ಮಾಡುತ್ತಾನೆ. ಹೋಗು ಡಂಗೂರದವನೆ, ಎಲ್ಲಾ ಹಳ್ಳಿಯವರನ್ನು ಕ್ಷಿಪ್ರವಾಗಿ ನನ್ನೆದುರಿಗೆ ಕರೆದುತಾ. ಆಗ ಡಂಗೂರದವನು ಹಳ್ಳಿಯವರಿಗೆ ಮೂರುಬಾರಿ ಈ ರೀತಿ ಕೂಗಿ ಹೇಳುತ್ತಾನೆ ಎಲ್ಲಾ ಹಳ್ಳಿಯವರು ಮುಖ್ಯಸ್ಥನ ಎದುರಿಗೆ ಹಾಜರಾಗತಕ್ಕದ್ದು. ಆಗ ಎಲ್ಲರೂ ಅಲ್ಲಿ ಉಪಸ್ಥಿತರಾಗಿ ಮುಖ್ಯಸ್ಥನಲ್ಲಿ ಹೀಗೆ ಹೇಳುತ್ತಾರೆ ಎಲ್ಲಾ ಹಳ್ಳಿಯವರು ಸೇರಿದ್ದೇವೆ, ನೀವು ಮಾಡಬೇಕಾಗಿರುವುದನ್ನು ಮಾಡಬಹುದು. ಆದರೆ ಓ ಮಹಾರಾಜ, ಅಲ್ಲಿ ಎಲ್ಲರೂ ಸೇರಿದ್ದರೂ ಸಹಾ ಪೂರ್ಣ ಅರ್ಥದಲ್ಲಿ ಎಲ್ಲರೂ ಸೇರಿರುವುದಿಲ್ಲ. ಎಲ್ಲಾ ಪುರುಷರು ಮತ್ತು ಸ್ತ್ರೀಯರು, ಗುಲಾಮರು, ಸೇವಕರು, ರೈತರು, ರೋಗಿಗಳು, ಎತ್ತುಗಳು, ಎಮ್ಮೆಗಳು, ಕುರಿಗಳು, ಮೇಕೆಗಳು, ನಾಯಿಗಳು ಇವರೆಲ್ಲರೂ ಬಂದಿರುವುದಿಲ್ಲ. ಏಕೆಂದರೆ ಎಲ್ಲಾ ಎಂದಮಾತ್ರಕ್ಕೆ ಸರ್ವರೂ ಸೇರಬೇಕು ಎಂದು ಅರ್ಥವಲ್ಲ, ಮುಖ್ಯವಾಗಿ ಮನೆಯ ಮುಖಂಡರು ಎಂದು ಅರ್ಥ. ಅದೇರೀತಿಯಲ್ಲಿ ಓ ಮಹಾರಾಜ, ಅರಹಂತರು ಸಾವಿಗೆ ಭಯ ಬೀಳುವುದಿಲ್ಲ. ಎಲ್ಲರೂ ಭಯಪಡುತ್ತಾರೆ ಎಂಬ ವಾಕ್ಯದಲ್ಲಿ ಅರಹಂತರು ಸೇರುವುದಿಲ್ಲ. ಇದಕ್ಕೆ ಅರಹಂತರು ಹೊರತಾಗಿದ್ದಾರೆ, ಅವರಲ್ಲಿ ಭಯ ಉಂಟಾಗಲು ಯಾವ ಕಾರಣವೂ ಇರುವುದಿಲ್ಲ.
ಓ ರಾಜ, ಇದು ಒಳಗೊಳ್ಳದ ವ್ಯಕ್ತತೆಯಾಗಿದೆ. ಯಾವುದರ ಅರ್ಥವು ಒಳಗೊಳ್ಳದ್ದೋ ಮತ್ತು ಒಳಗೊಳ್ಳದ ವ್ಯಕ್ತತೆ ಅರ್ಥ ಒಳಗೊಂಡ, ಯಾವುದರ ಅರ್ಥ ಒಳಗೊಳ್ಳದ್ದೊ, ಅದರ ಒಳಗೊಂಡ ವ್ಯಕ್ತತೆಯಾಗಿದೆ ಮತ್ತು ಪ್ರತಿ ಸನ್ನಿವೇಶದಲ್ಲಿ ಅರ್ಥವನ್ನು ಅದರಂತೆಯೇ ಸ್ವೀಕರಿಸಬೇಕು ಮತ್ತು ಐದು ವಿಧದಲ್ಲಿ ಅರ್ಥಗಳನ್ನು ಖಚಿತಪಡಿಸಲಾಗುತ್ತದೆ. ಅವೆಂದರೆ ಸಂಪರ್ಕದಿಂದ, ರುಚಿಯಿಂದ, ಸಂಪ್ರದಾಯ ಗುರುಗಳಿಂದ ಅರ್ಥದಿಂದ, ಹೇರಳವಾದ ಕಾರಣಗಳಿಂದ ಮತ್ತು ಇಲ್ಲಿ ಸಂಪರ್ಕದ ಅರ್ಥವೆಂದರೆ ಸುತ್ತಗಳಲ್ಲಿ ಕಾಣುವಂತೆ ಎಂದರ್ಥ. ಇಲ್ಲಿ ರುಚಿಯ ಅರ್ಥವೆಂದರೆ ಬೇರೆ ಸುತ್ತಗಳ ಸಾಮರಸ್ಯದಂತೆ ಎಂದರ್ಥ. ಸಂಪ್ರದಾಯ ಗುರುಗಳಿಂದ ಎಂದರೆ ಯಾವುದನ್ನು ಅವರು ಹಿಡಿದಿರುವರೊ ಎಂದರ್ಥ. ಅರ್ಥ ಎಂದರೆ ಇಲ್ಲಿ ಅವರು ಏನು ಯೋಚಿಸುವರು ಎಂದರ್ಥ, ಹೇರಳವಾದ ಕಾರಣಗಳಿಂದ ಅಂದರೆ ಈ ನಾಲ್ಕರ ಸಂಗಮ ಎಂದರ್ಥ.
ಒಳ್ಳೆಯದು ನಾಗಸೇನ, ನೀವು ಹೇಳಿದ್ದನ್ನು ಒಪ್ಪುವೆ. ಅರಹಂತರು ಇದಕ್ಕೆ ಹೊರತಾಗಿದ್ದಾರೆ ಮತ್ತು ಮಿಕ್ಕವರೆಲ್ಲಾ ಭಯದಿಂದ ಕೂಡಿದ್ದಾರೆ. ಆದರೆ ನರಕದ ಜೀವಿಗಳ ಬಗ್ಗೆ ನಾನು ಕೇಳುತ್ತಿದ್ದೆನೆ. ನರಕದ ಜೀವಿಗಳು ಅಪಾರ ನೋವಿನಿಂದ ಕೂಡಿರುತ್ತಾರೆ. ಅವರು ಚಿತ್ರಹಿಂಸೆ ಅನುಭವಿಸುತ್ತ, ತಮ್ಮ ದೇಹಗಳನ್ನು ಸುಡಿಸುತ್ತ, ಪ್ರಲಾಪಿಸುತ್ತ ಮತ್ತು ಕರುಣಾಜನಕ ಕೂಗುಗಳನ್ನು ಹಾಕುತ್ತ, ಅಳುತ್ತ, ದುಃಖಿಸುತ್ತ, ಅವರು ಯಾವ ಶರಣುವನ್ನು ಕಾಣಲಾರದೆ, ಯಾವ ರಕ್ಷಣೆ ಕಾಣಲಾರದೆ, ಯಾವ ಸಹಾಯ ಇಲ್ಲದೆ, ಅಳೆಯಲಾಗದ ದುಃಖದಿಂದ ಕೂಡಿ, ಅವರ ಸ್ಥಿತಿಗಳೆಲ್ಲಾ ಮತ್ತಷ್ಟು ನೋವಿನೆಡೆಗೆ ಸಾಗುತ್ತಿರುತ್ತವೆ, ಅವರು ಬಿಸಿಯಾದ, ಹರಿತವಾದ, ಭಯಾನಕವಾದ, ಕ್ರೂರ ಜ್ವಾಲೆಗಳಿಂದ ದಹಿಸುತ್ತಿರುತ್ತಾರೆ. ಅವರ ಆಕ್ರಂದನಗಳು ಭಯಾನಕವಾಗಿರುತ್ತವೆ. ಎಲ್ಲಾಕಡೆಗಳಿಂದಲೂ ಜ್ವಾಲೆಗಳಿಂದ ಆವೃತವಾದ, ನೂರು ಯೋಜನೆಗಳಷ್ಟು ಸುತ್ತಲೂ ಬೆಂಕಿಯಿಂದ ಆವೃತವಾದ ಆ ನರಕಜೀವಿಗಳು ಸಾವಿನ ಭಯವನ್ನು ಪಡುತ್ತವೆಯೇ?
ಹೌದು, ಅವು ಭಯಪಡುತ್ತವೆ.
ಆದರೆ ಭಂತೆ ನಾಗಸೇನ, ನರಕವು ನೋವುಗಳ ಸ್ಥಳವಲ್ಲವೇ? ಹಾಗಿದ್ದರೂ ಸಹಾ ಅಲ್ಲಿನ ಜೀವಿಗಳು ಸಾವಿಗೆ ಏಕೆ ಭೀತಿ ಬೀಳಬೇಕು. ಅವರೇನು ನರಕದಲ್ಲಿ ಆನಂದಿಸುತ್ತಾರೆಯೇ?
ಇಲ್ಲ ಹಾಗೇನು ಇಲ್ಲ, ಅವರೇನು ನರಕವನ್ನು ಇಷ್ಟಪಡುವುದಿಲ್ಲ. ಅವರು ಅದರಿಂದ ಮುಕ್ತರಾಗಲು ಭಯಪಡುತ್ತಾರೆ, ಆದರೆ ಮೃತ್ಯುವಿನ ಶಕ್ತಿಗೆ ಅವರು ಹೆದರುತ್ತಾರೆ.
ಇಲ್ಲ ಭಂತೆ ನಾಗಸೇನ, ನಾನು ಇದನ್ನು ನಂಬುವುದಿಲ್ಲ, ಯಾರು ಮುಕ್ತರಾಗಲು ಇಚ್ಛಿಸುವರೋ ಅವರು ಪುನರ್ಜನ್ಮಕ್ಕೆ ಹೆದರುತ್ತಾರೆ. ಖಂಡಿತವಾಗಿಯು ನಾಗಸೇನ, ಅವರು ಜೀವ ತೊರೆಯುವುದರಲ್ಲಿ ಆನಂದಿಸುತ್ತಾರೆ. ಬೇರೆ ವಿಧದಲ್ಲಿ ನನಗೆ ವಿವರಿಸಿ.
ಓ ಮಹಾರಾಜ, ಯಾರು ಮರಣ ಸ್ಥಿತಿಯನ್ನು ಕಂಡಿಲ್ಲವೋ ಅವರಿಗೆ ಹೆದರಿಕೆಯಿರುವುದಿಲ್ಲ. ಆದರೆ ಭಯಾನಕ ಸ್ಥಿತಿಯಲ್ಲಿರುವುದರಿಂದಾಗಿ ಅವರಿಗೆ ಮರಣದ ಭಯ ಹೆಚ್ಚಾಗಿರುತ್ತದೆ. ಉದಾಹರಣೆಗೆ ಯಾರೆಲ್ಲರೂ ಕರಿನಾಗರಕ್ಕೆ, ಆನೆಗೆ, ಸಿಂಹಕ್ಕೆ, ಹುಲಿಗೆ, ಚಿರತೆಗೆ ಅಥವಾ ಬೆಂಕಿಗೆ, ನೀರಿಗೆ, ಶಸ್ತ್ರಗಳಿಗೆ ಹೆದರುವರೋ ಈ ಪ್ರತಿಯೊಂದು ಸ್ಥಿತಿಯು ಅವರಿಗೆ ಭಯಾನಕವಾಗಿರುವುದರಿಂದಲೇ ಅವರೆಲ್ಲರು ಅವುಗಳಿಂದ ಭೀತಿಪಡುತ್ತಿರುವರು. ಇದೇ ಓ ಮಹಾರಾಜ, ಮರಣದ ಸ್ವರೂಪವಾಗಿದೆ ಮತ್ತು ಯಾವ ಜೀವಿಗಳು ಪಾಪದಿಂದ ಅಕುಶಲದಿಂದ ಪಾರಾಗಿಲ್ಲವೋ ಅವರು ಭಯದ ಮುಂದೆ ನಡುಗುವರು. ಈ ರೀತಿಯಾಗಿ ನರಕದ ಜೀವಿಗಳು ಅದರಿಂದ ಮುಕ್ತರಾಗಲು ಬಯಸಿದಂತೆಯೇ ಸಾವಿಗೂ ಹೆದರುವರು.
ಊಹಿಸಿ ಓ ಮಹಾರಾಜ, ಮಾನವನ ದೇಹದಲ್ಲಿ ಒಂದು ಗುಳ್ಳೆಯೊಂದು ಎದ್ದಿದೆ. ಆ ನೋವಿಗೆ ಹೆದರಿ ಆತನು ರೋಗದಿಂದ ಮುಕ್ತನಾಗಲು ಶಸ್ತ್ರವೈದ್ಯನನ್ನು ಕರೆಸುತ್ತಾನೆ ಮತ್ತು ವೈದ್ಯನು ಸಹಾ ಆತನನ್ನು ಗುಣಮುಖವಾಗಿಸಲು ಸಿದ್ಧನಾಗಿ, ಹರಿತವಾದ ಶಸ್ತ್ರಗಳನ್ನು ಹೊರತೆಗೆಯುತ್ತಾನೆ, ಬೆಂಕಿಯನ್ನು ಕ್ಷಾರಕ್ಕಾಗಿ ಸಿದ್ಧಗೊಳಿಸುತ್ತಾನೆ, ಬೀಸುಗಲ್ಲಿನಲ್ಲಿ ಉಪ್ಪು ದ್ರಾವಕ ಸಿದ್ಧಪಡಿಸುತ್ತಾನೆ. ಈಗ ಆ ರೋಗಿಯು ಗುಳ್ಳೆ, ಕತ್ತರಿಸುವಿಕೆ ಅಥವಾ ಕ್ಷಾರದ ಬೆಂಕಿಗೆ ಅಥವಾ ಔಷಧದ ದ್ರವ ಲೇಪನಕ್ಕೆ ಹೆದರುವುದಿಲ್ಲವೇ?
ಹೌದು ಹೆದರುತ್ತಾನೆ.
ಆದರೆ ಆ ರೋಗಿಯು ರೋಗದಿಂದ ಮುಕ್ತನಾಗಲು, ನೋವಿನಿಂದ ಮುಕ್ತನಾಗಲು ಬಯಸಿಯು ಸಹಾ ನೋವಿಗೆ ಹೆದರುತ್ತಿದ್ದಾನಲ್ಲವೇ? ಅದೇರೀತಿಯಲ್ಲಿ ನರಕದ ಜೀವಿಗಳಲ್ಲಿ, ಅವುಗಳಿಂದ ಪಾರಾಗಲು ಇಚ್ಛಿಸಿಯು ಮರಣದ ಭಯ ಕೂಡಿರುತ್ತದೆ.
ಊಹಿಸಿ ಮಹಾರಾಜ, ವ್ಯಕ್ತಿಯೊಬ್ಬನು ಭೀಕರ ಅಪರಾಧ ಮಾಡಿ ಸಂಕೋಲೆಗಳಿಂದ ಬಂಧಿತನಾಗಿ, ಬಂಧಿಖಾನೆಯಲ್ಲಿ ತಳ್ಳಲ್ಪಡುತ್ತಾನೆ. ಆತನಿಗೆ ಮುಕ್ತನಾಗಲು ಅಪೇಕ್ಷೆಯಿರುತ್ತದೆ ಮತ್ತು ಅದೇವೇಳೆಗೆ ರಾಜ್ಯಪಾಲಕನು ಅವನಿಗೆ ಬಿಡುಗಡೆ ಮಾಡುವ ಉದ್ದೇಶದಿಂದ ಆತನನ್ನು ಕರೆಸುತ್ತಾನೆ. ಆಗ ಅಪರಾಧಿಯು ರಾಜನನ್ನು ಭೇಟಿ ಮಾಡಲು ಹೆದರುವುದಿಲ್ಲವೇ?
ಹೌದು ಭಂತೆ ಹೆದರುತ್ತಾನೆ.
ಈ ಸಾಧಾರಣ ಸ್ಥಿತಿಗಳಲ್ಲಿ ಹೀಗಿರುವಾಗ, ಇನ್ನು ನರಕದ ಜೀವಿಗಳು ಆ ಸ್ಥಿತಿಗಳಿಂದ ಮುಕ್ತಿ ಬಯಸಿಯು, ಮರಣಕ್ಕೆ ಹೆದರುವುದಿಲ್ಲವೇ?
ಭಂತೆ ದಯವಿಟ್ಟು ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸುವಿರಾ?
ಊಹಿಸಿ ಓ ಮಹಾರಾಜ, ಒಬ್ಬನು ವಿಷಪೂರಿತ ಹಾವಿನಿಂದ ಕಡಿಯಲ್ಪಟ್ಟು ಹೆದರಿದ್ದಾನೆ ಮತ್ತು ಆ ವಿಷದ ಪ್ರಭಾವದಿಂದ ಆತನು ಸಂಕಟದಿಂದ ಹೊರಳಾಡುತ್ತಿರುತ್ತಾನೆ ಮತ್ತು ಇನ್ನೊಬ್ಬ ಮಂತ್ರಶಕ್ತಿಯಿಂದ ಆ ವಿಷವನ್ನು ಹೀರುವಂತೆ ಮಾಡಲು ಸರ್ಪವನ್ನು ಹಿಡಿದು ಹತ್ತಿರ ಬರುತ್ತಾನೆ. ಈಗ ಸರ್ಪದಿಂದ ಕಡಿಯಲ್ಪಟ್ಟಿರುವವನು ಆ ಹಾವಿನಿಂದ ಗುಣಮುಖನಾಗುತ್ತೇನೆ ಎಂದು ತಿಳಿದು ಸಹಾ, ಆತನು ಹಾವಿಗೆ ಹೆದರುತ್ತಾನೆ ಅಲ್ಲವೇ?
ಹೌದು ಭಂತೆ, ಖಂಡಿತವಾಗಿಯು.
ಅದೇರೀತಿಯಲ್ಲಿ ನರಕದ ಜೀವಿಗಳು ಸಹಾ ಮೃತ್ಯುಭಯಪಡುತ್ತವೆ, ಮೃತ್ಯುವು ಎಲ್ಲಾ ಜೀವಗಳಿಂದಲೂ ದ್ವೇಷಿಸಲ್ಪಡುತ್ತದೆ ಮತ್ತು ಅದ್ದರಿಂದಲೇ ಅವು ಮುಕ್ತರಾಗಲು ಬಯಸುತ್ತವೆ.
ಅದ್ಭುತ ಭಂತೆ ನಾಗಸೇನಾ, ತುಂಬಾ ಚೆನ್ನಾಗಿ ವಿವರಿಸಿದಿರಿ ಭಂತೆ, ನಾನು ನೀವು ಹೇಳಿದ್ದನ್ನು ಒಪ್ಪುವೆ.

4. ಮೃತ್ಯು ಪಾಶದ ಮುಕ್ತಿಯ ಪ್ರಶ್ನೆ

ಭಂತೆ ನಾಗಸೇನ, ಭಗವಾನರ ಗಾಥೆ ಹೀಗಿರುವುದು: ಆಕಾಶದಲ್ಲಿಯಾಗಲಿ, ಸಮುದ್ರದ ಮಧ್ಯೆಯಾಗಲಿ ಅಥವಾ ಪರ್ವತದಲ್ಲಿರುವ ಏಕಾಂತ ಕಂದರಗಳಲ್ಲಾಗಲಿ ಅಥವಾ ಇಡೀ ಜಗತ್ತಿನಲ್ಲಿ ಎಲ್ಲೇ ಆಗಲಿ, ಮೃತ್ಯುವಿನ ಪಾಶದಿಂದ ಪಾರಾಗಲು ಸಾಧ್ಯವಿಲ್ಲ. ಆದರೆ ಇನ್ನೊಂದೆಡೆ ಭಗವಾನರಿಂದ ಪರಿತ್ತವು ಹೇಳಲ್ಪಟ್ಟಿತ್ತು, ಉದಾಹರಣೆಗೆ ಹೇಳುವುದಾದರೆ ರತನಸುತ್ತ, ಖಂದಪರಿತ್ತ, ಮೋರಪರಿತ್ತ, ಧಜಗ್ಗಿಪರಿತ್ತ, ಆಟನಾಟಿಯ ಪರಿತ್ತ ಮತ್ತು ಅಂಗುಲಿಮಾಲಾ ಪರಿತ್ತ.
ಭಂತೆ ನಾಗಸೇನರವರೆ, ಮಾನವನು ಅಂತರಿಕ್ಷದಲ್ಲಾಗಲಿ, ಸಮುದ್ರದ ಮಧ್ಯೆಯಲ್ಲಾಗಲಿ, ಪರ್ವತದ ಗುಹೆಗಳಲ್ಲಾಗಲಿ, ಮೃತ್ಯುವಿನಿಂದ ಪಾರಾಗಲು ಸಾಧ್ಯವಿಲ್ಲವಾದರೆ ಎರಡನೆಯ ಹೇಳಿಕೊಳ್ಳದ ಪವಿತ್ರದ ಪಠನೆಯಿಂದ ಮೃತ್ಯುವಿನಿಂದ ಪಾರಾಗಬಹುದು ಎಂಬುದು ಅಸತ್ಯವಾಗುತ್ತದೆ. ಅದು ವ್ಯರ್ಥವಾದ ಕ್ರಿಯೆಯಾಗುತ್ತದೆ. ಪರಿತ್ತವೇ ಸತ್ಯವಾದರೆ ಮೇಲಿನ ಧಮ್ಮಪದದ ಪ್ರಸಿದ್ಧ ಗಾಥೆಯು ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖವುಳ್ಳ ಇಕ್ಕಟ್ಟಿನ ಪ್ರಶ್ನೆಯಾಗಿದೆ, ಕಗ್ಗಂಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕುತ್ತಿದ್ದೇನೆ, ಇದನ್ನು ನೀವೇ ಪರಿಹರಿಸಬೇಕು. (104)
ಓ ಮಹಾರಾಜ, ನೀವು ಹೇಳಿದ ಗಾಥೆಯನ್ನು ಭಗವಾನರು ನುಡಿದಿದ್ದಾರೆ, ಅದು ಸತ್ಯವಾಗಿಯೇ ಇದೆ. ಹಾಗೆಯೇ ಅವರು ಪರಿತ್ತಗಳಿಗೆ ಅಂಗೀಕಾರ ನೀಡಿರುವುದು ಸಹಾ ಸತ್ಯವಾಗಿದೆ. ಆದರೆ ಪರಿತ್ತದ ಬಳಕೆಯಾಗುವಂತೆ ಮಾಡುವುದು ಅವರಲ್ಲಿ ಇನ್ನೂ ಸ್ವಲ್ಪ ಜೀವವಿದ್ದಾಗ ಮಾತ್ರ. ಯಾರಿಗೆ ಪೂರ್ಣ ಆಯಸ್ಸು ಇದೆಯೋ ಹಾಗೂ ಪಾಪಕರ್ಮದಿಂದ ಮುಕ್ತರೋ ಅವರಿಗೆ ಮಾತ್ರ. ಹೊರತು ಯಾರ ಆಯಸ್ಸು ಕೊನೆಯಾಯಿತೋ, ಅಂತಹವರಿಗೆಲ್ಲಾ ಯಾವುದೇ ರೀತಿಯ ಪವಿತ್ರ ಸಮಾರಂಭ, ಕೃತಕತೆಯಿಂದ ಬದುಕಿಸಲಾಗುವುದಿಲ್ಲ. ಹೇಗೆಂದರೆ ಓ ಮಹಾರಾಜ, ಜೀವವಿಲ್ಲದ, ಒಣಗಿದ, ಮೃತಪಟ್ಟ ಮರದ ತುಂಡಿನಿಂದ ಯಾವ ಜೀವವು ಉಂಟಾಗಲಾರದು. ಅದಕ್ಕೆ ಸಾವಿರ ಚಿಂದಿಗಳಷ್ಟು ನೀರು ಸುರಿದರೂ ಸಹಾ ಅದರಿಂದ ಯಾವುದೇ ಎಲೆಗಳು ಬರಲಾರವು, ಅದೇ ಅಡಿಯಲ್ಲಿ ಯಾರ ಆಯಸ್ಸಿನ ನಿಗಧಿತ ಕಾಲ ಕೊನೆಯಾಯಿತೋ ಅವರಿಗೆ ಯಾವುದೇ ಔಷಧಿಯಿಂದ ಅಥವಾ ಪರಿತ್ತದಿಂದ ಅಥವಾ ಯಾವುದೇ ಸಮಾರಂಭದಿಂದ ಯಾವ ಪ್ರಯೋಜನವೂ ಇಲ್ಲ.
ಆದರೆ ಓ ರಾಜ, ಯಾರಿಗೆ ಇನ್ನೂ ಆಯಸ್ಸು ಇದೆಯೊ, ಜೀವದಿಂದ ಇರುವರೋ ಮತ್ತು ಯಾರು ಪಾಪಕರ್ಮದಿಂದ ವಿಮುಖರೋ ಅವರಿಗೆ ಮಾತ್ರ ಫಲಕಾರಿಯಾಗುತ್ತದೆ. ಅವರಿಗಾಗಿ ಭಗವಾನರು ಪರಿತ್ತವನ್ನು ಹೇಳಿದ್ದಾರೆ. ಓ ಮಹಾರಾಜ, ಹೇಗೆ ರೈತನು ಫಲಿತ, ಉಪಯುಕ್ತ ಬೀಜವನ್ನು ಬಿತ್ತುತ್ತಾನೆಯೋ ಮತ್ತು ಅದಕ್ಕೆ ಎಳೆಯತನದಿಂದಲೇ ನೀರನ್ನು ಹಾಕುತ್ತಾನೆಯೋ, ಜೀವವಿರುವಾಗಲೇ ಆರೈಕೆ ಮಾಡುತ್ತಾನೆಯೋ ಅದೇರೀತಿಯಲ್ಲಿ ಓ ರಾಜ, ಪರಿತ್ತವನ್ನು ಯಾರ ಆಯಸ್ಸು ಮುಗಿದಿದೆಯೋ ಅವರಿಗೆ ಮಾಡಲಾಗುವುದಿಲ್ಲ. ಬದಲಿಗೆ ಯಾರು ಜೀವದಿಂದಿರುವರೊ, ಯಾರ ಆಯು ಉಳಿದಿದೆಯೋ ಮತ್ತು ಪಾಪವಿಮುಖರೋ ಅವರಿಗೆ ಪಠಿಸಲಾಗುತ್ತದೆ ಮತ್ತು ಅವರು ಮಾತ್ರ ಅದರಿಂದ ಪ್ರಯೋಜನ ಪಡೆಯುತ್ತಾರೆ.
ಆದರೆ ನಾಗಸೇನ, ಯಾರ ಆಯಸ್ಸು ಇದೆಯೋ ಮತ್ತು ಯಾರು ಸತ್ತಿಲ್ಲವೋ ಆಗ ಔಷಧಿ ಮತ್ತು ಪರಿತ್ತ ಎರಡೂ ವ್ಯರ್ಥವೇ ಆಗಿದೆ.
ಓ ಮಹಾರಾಜ, ನೀವು ಎಂದಾದರೂ ರೋಗವು ಔಷಧಿಯಿಂದ ವಾಸಿಯಾಗಿರುವು ದನ್ನು ಕಂಡಿರುವಿರಾ?
ಹೌದು, ನೂರಾರುಬಾರಿ ಕಂಡಿರುವೆ.
ಹಾಗಾದರೆ ಓ ರಾಜ, ನೀವು ಹೇಳುವಂತಹ ಪರಿತ್ತ ಮತ್ತು ಔಷಧಿಯು ವ್ಯರ್ಥ ಎಂಬುದು ಸುಳ್ಳಾಯಿತು.
ಭಂತೆ ನಾಗಸೇನ, ವೈದರು ಔಷಧಿಗಳಿಂದ, ಲೇಪಗಳಿಂದ, ಸಲುಹಿಸಿ ರೋಗಗಳು ಕಡಿಮೆಯಾಗಿರುವುದು ನಾನು ಕಂಡಿರುವೆ.
ಮತ್ತೆ ಓ ಮಹಾರಾಜ, ಯಾವಾಗ ಪರಿತ್ತ ಪಠಿಸುವವರ ಶಬ್ದವು ಕೇಳಿಸುವುದೋ, ನಾಲಿಗೆಗಳು ಬಾಗುತ್ತವೆ, ಹೃದಯಬಡಿತವು ನಿಧಾನವಾಗುತ್ತದೆ, ಗಂಟಲು ಒರಟಾಗುತ್ತದೆ, ಆದರೂ ಆ ಪಠನದಿಂದಾಗಿ, ರೋಗಗಳು ವಾಸಿಯಾಗುತ್ತವೆ ಮತ್ತು ವಿಪತ್ತುಗಳು ದೂರವಾಗುತ್ತವೆ. ಮತ್ತೆ ಓ ಮಹಾರಾಜ, ನೀವು ಎಂದಾದರೂ ಮಂತ್ರಶಕ್ತಿಯಿಂದ ಹಾವು ಕಚ್ಚಿದ ವ್ಯಕ್ತಿಯಲ್ಲಿ ಮತ್ತೆ ಬಾಯಿಟ್ಟು ವಿಷವನ್ನು ಪುನಃ ಹೀರಿ ಆತನನ್ನು ಬದುಕಿಸುವುದು ಕಂಡಿರುವಿರಾ? ಅಥವಾ ಆ ಭಾಗದ ಮೇಲೆ, ಕೆಳಗೆ, ಮುಲಾಮನ್ನು ಹಚ್ಚಿ, ಆ ವಿಷವನ್ನು ತಗ್ಗಿಸುವುದು ಕಂಡಿರುವಿರಾ?
ಹೌದು ಕಂಡಿರುವೆ, ಇವೆಲ್ಲಾ ಇಂದಿನ ಸಮಾಜದಲ್ಲಿ ಕಂಡುಬರುವಂತಹ ಸಾಮಾನ್ಯ ಘಟನೆಗಳಾಗಿವೆ.
ಹಾಗಿದ್ದ ಮೇಲೆ, ನೀವೇ ಹೇಳಿದಂತೆ ಪರಿತ್ತ ಮತ್ತು ಔಷಧಿಯು ವ್ಯರ್ಥವೆನ್ನುವುದು ತಪ್ಪಾಗಿದೆ. ಯಾವಾಗ ಪರಿತ್ತ ಮಂತ್ರ ಪಠನವಾಗುತ್ತದೋ ಆಗ ಹಾವು ಸಹಾ ಕಚ್ಚಲು ಬಾಯಿ ತೆರೆಯಲಾರದು. ಡಕಾಯಿತರು ಹೊಡೆಯಲು ಮುಂದಾಗಿದ್ದರೂ ಹೊಡೆಯಲಾರರು, ಅವರು ಶಸ್ತ್ರತ್ಯಾಗ ಮಾಡುವರು, ಹಾಗೆಯೇ ಕ್ರೋಧಗೊಂಡ ಆನೆಯು ಸಹಾ ಶಾಂತವಾಗುವುದು, ಉರಿಯುತ್ತಿರುವ ಜ್ವಾಲೆಯೂ ಸಹಾ ನಂದಿಹೋಗುತ್ತದೆ, ಕಾಲಕೂಟವನ್ನು ಆತನು ಸೇವಿಸಿದ್ದರೂ ಅದು ಸಹಾ ಆಹಾರವಾಗಿ ಪರಿವತರ್ಿತವಾಗುತ್ತದೆ. ಕೊಲೆಗಾರರು ಸಹಾ ಕಾವಲುಗಾರರಾಗುತ್ತಾರೆ. ಹಿಡಿಯಲು ಬಂದವರು ಸಹಾ ಬಿಟ್ಟುಬಿಡುವರು, ಇದೆಲ್ಲಾ ಪರಿತ್ತ ಮಂತ್ರಶಕ್ತಿಯಾಗಿದೆ.
ಮತ್ತೆ ಮಹಾರಾಜ, ಇದಂತು ನೀವು ಕೇಳಿರಬಹುದು, ಬೇಟೆಗಾರನು ನವಿಲೊಂದನ್ನು 700 ವರ್ಷಕಾಲ ಬೇಟೆಯಾಡಲು ವಿಫಲನಾಗಿ, ಒಂದುದಿನ ಪರಿತ್ತ ಪಠಿಸದ ದಿನದಲ್ಲಿ ಅದನ್ನು ಹಿಡಿದನು.
ಹೌದು, ಅದರ ಬಗ್ಗೆ ಕೇಳಿರುವೆನು, ಆ ಸಂಗತಿಯು ಈಗಾಗಲೇ ವಿಶ್ವಖ್ಯಾತಿ ಹೊಂದಿರುವುದು.
ಹಾಗಿದ್ದಮೇಲೆ ಪರಿತ್ತವು ಮತ್ತು ಔಷಧಿಯು ವ್ಯರ್ಥವೆನ್ನುವುದು ಸುಳ್ಳಾಗಿದೆ ಮತ್ತು ನೀವು ದಾನವನ ಬಗ್ಗೆ ಕೇಳಿರುವಿರಾ? ಅದರಲ್ಲಿ ದಾನವನೊಬ್ಬನು ತನ್ನ ಪತ್ನಿಯನ್ನು ಪೆಟ್ಟಿಗೆಯಲ್ಲಿ ಹಾಕಿ ಮತ್ತು ಆ ಪೆಟ್ಟಿಗೆಯನ್ನು ನುಂಗಿ ಆಕೆಯನ್ನು ರಕ್ಷಿಸುತ್ತಿದ್ದನು. ಮತ್ತು ಅದರಲ್ಲಿ ವಿದ್ಯಾಧರನೊಬ್ಬನು ತನ್ನ ಮಂತ್ರಬಲದಿಂದ ಆತನ ಬಾಯಿಯ ಮೂಲಕ ಹೊಟ್ಟೆಗೆ ಹೋಗಿ, ಆತನ ಪತ್ನಿಯೊಂದಿಗೆ ಸಲ್ಲಾಪವಾಡುತ್ತಿದ್ದನು. ಅದನ್ನು ಅರಿತ ದಾನವ ವಾಂತಿಮಾಡಿ ಪೆಟ್ಟಿಗೆ ತೆರೆದಾಗ, ಆಗ ತಕ್ಷಣ ವಿದ್ಯಾಧರನು ತಪ್ಪಿಸಿಕೊಂಡನು, ನೀವು ಇದನ್ನು ಕೇಳಿಲ್ಲವೇ?
ಹೌದು, ನಾನು ಕೇಳಿದ್ದೇನೆ, ಇದು ಸಹಾ ಎಲ್ಲೆಡೆ ಹರಡಿರುವ ಸಂಗತಿಯಾಗಿದೆ.
ಮತ್ತೆ ಅದರಲ್ಲಿ ವಿದ್ಯಾಧರ ತಪ್ಪಿಸಿಕೊಂಡಿದ್ದು ಮಂತ್ರಬಲದಿಂದ (ಪರಿತ್ತ) ಅಲ್ಲವೇ?
ಹೌದು.
ಹಾಗಾದರೆ ಪರಿತ್ತಕ್ಕೆ (ಮಂತ್ರಶಕ್ತಿಗೆ) ಬಲವಿದೆ ಮತ್ತು ನೀವು ಈ ವಿಷಯವನ್ನು ಕೇಳಿರಬಹುದು. ಅದರಲ್ಲಿ ವಿದ್ಯಾಧರನೊಬ್ಬನು ಕಾಶಿರಾಜನ ಅಂತಃಪುರದಲ್ಲಿ ಮಹಾರಾಣಿಯ ಜೊತೆ ಅನೈತಿಕ ಸಂಬಂಧ ಮಾಡಿದನು ಮತ್ತು ಹಿಡಿದಾಗ ಆತನು ಮಂತ್ರಬಲದಿಂದ ಅಗೋಚರವಾದನು, ಪರಾರಿಯಾದನು.
ಹೌದು, ನಾನು ಆ ಸಂಗತಿಯನ್ನು ಕೇಳಿದ್ದೇನೆ.
ಅವರಲ್ಲಿ ಆತನು ಸಹಾ ಬಿಡುಗಡೆ ಪಡೆದಿದ್ದು ಪರಿತ್ತದ ಬಲದಿಂದಲೇ ಅಲ್ಲವೇ?
ಹೌದು ಭಂತೆ.
ಹಾಗಾದರೆ ಓ ಮಹಾರಾಜ, ಪರಿತ್ತಕ್ಕೆ ಬಲವಿದೆ.
ಭಂತೆ ನಾಗಸೇನ, ಪರಿತ್ತವು ಪ್ರತಿಯೊಬ್ಬರನ್ನೂ ರಕ್ಷಿಸುವುದೇ?
ಹಲವರನ್ನು ರಕ್ಷಿಸುವುದು ಮತ್ತು ಇತರರಿಗೆ ಇಲ್ಲ.
ಹಾಗಾದರೆ ಅದು ಸದಾ ಉಪಯುಕ್ತವಲ್ಲ.
ಆಹಾರವು ಜನರಿಗೆ ಸದಾ ಜೀವಂತವಾಗಿಡುವುದೇ?
ಕೇವಲ ಹಲವರಿಗೆ ಮತ್ತು ಇತರರಿಗೆ ಇಲ್ಲ.
ಆದರೆ ಏಕಿಲ್ಲ.
ಏಕೆಂದರೆ ಕೆಲವರು ಅತಿಯಾಗಿ ತಿಂದು ಕಾಲರದಿಂದ ಸತ್ತಿರುವವರಿದ್ದಾರೆ.
ಹಾಗಾದರೆ ಅದು ಸಹಾ ಜೀವ ನೀಡುವಂತಹದಲ್ಲ.
ಜೀವಹಾನಿಗೆ ಎರಡು ಕಾರಣಗಳಿವೆ: (1) ಅತಿಯಾದ ಭೋಗ (2) ಜೀರ್ಣತೆಯ ದುರ್ಬಲತೆ ಮತ್ತು ಕೆಟ್ಟ ಮಂತ್ರದಿಂದ ಜೀವ ನೀಡುವ ಆಹಾರವು ಸಹಾ ಪಾಷಾಣ ವಾಗುವುದು.
ಅದೇರೀತಿಯಲ್ಲಿ ಓ ಮಹಾರಾಜ, ಪರಿತ್ತವು ಹಲವರಿಗೆ ರಕ್ಷಣೆ ನೀಡುತ್ತದೆ ಮತ್ತು ಇತರರಿಗೆ ಇಲ್ಲ. ಅದು ವಿಫಲವಾಗಲು ಮೂರು ಕಾರಣಗಳಿವೆ. ಅವೆಂದರೆ: ಕರ್ಮದ ಅಡ್ಡಿ, ಪಾಪ ಮತ್ತು ನಂಬಿಕೆಹೀನತೆ. ಈ ರೀತಿಯಾಗಿ ಪರಿತ್ತದಿಂದ ಆ ಜೀವಿಗಳು ರಕ್ಷಣಬಲವನ್ನು ಕಳೆದುಕೊಳ್ಳುತ್ತಾರೆ. ಓ ಮಹಾರಾಜ, ಇದು ಹೇಗೆಂದರೆ ತಾಯಿಯೊಬ್ಬಳು ತನ್ನ ಕಂದ ಗರ್ಭ ಪ್ರವೇಶಿಸಿದ ಮೇಲೆ ಅದನ್ನು ಗರ್ಭದಲ್ಲೇ ಚೆನ್ನಾಗಿ ಸಲಹುವಳು, ಮತ್ತೆ ಆ ಮಗುವು ಜನಿಸಿದ ಮೇಲೆ ಆಕೆಯು ಕೊಳಕನ್ನು, ಕಲೆಗಳನ್ನು, ಲೊಳೆಯನ್ನೆಲ್ಲಾ ಶುದ್ಧಿಗೊಳಿಸುತ್ತಾಳೆ. ಆತನಿಗೆ ಚೆನ್ನಾಗಿ ಸಲಹಿ ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಾಳೆ ಮತ್ತು ಯಾವಾಗ ಪರರು ಮಗುವಿಗೆ ಹಾಗೆ ಮಾಡಲು ಬಂದರೆ ಆಕೆಯು ಅವರನ್ನು ಹಿಡಿದು ರಾಜನ ಬಳಿಯಲ್ಲಿ ಒಪ್ಪಿಸುತ್ತಾಳೆ. ಆದರೆ ಆ ಬಾಲಕನು ತುಂಟನಾಗಿ, ನಿಧಾನವಾಗಿ ಮನೆಗೆ ಬಂದರೆ ಆಕೆ ಆತನನ್ನು ಹೊಡೆಯುತ್ತಾಳೆ. ಈ ಕೃತ್ಯಕ್ಕೆ ಆಕೆಯನ್ನು ನ್ಯಾಯಾಲಯದಲ್ಲಿ ಕರೆತರಲಾಗುತ್ತದೆಯೇ?
ಇಲ್ಲ ಭಂತೆ.
ಏಕಿಲ್ಲ.
ಏಕೆಂದರೆ ಅದು ಆ ಮಗುವಿನ ತಪ್ಪು ಆಗಿದೆ.
ಅದೇರೀತಿಯಲ್ಲಿ ಮಹಾರಾಜ, ಪರಿತ್ತವು ಜೀವಿಗಳನ್ನು ರಕ್ಷಿಸುತ್ತದೆ. ಹಾಗೆಯೇ ಜೀವಿಗಳ ತಪ್ಪಿನಿಂದಾಗಿ ಅವರಿಗೆ ವಿರುದ್ಧವಾಗಿಯು ಕಾರ್ಯ ಮಾಡುತ್ತದೆ.
ಭಂತೆ ನಾಗಸೇನ, ತುಂಬಾ ಚೆನ್ನಾಗಿ ಈ ಸಮಸ್ಯೆಗೆ ಪರಿಹಾರ ಮಾಡಿದಿರಿ. ಗಹನವಾದುದು ತಿಳಿಯಾಯಿತು. ಅಂಧಕಾರದಿಂದ ತುಂಬಿದ್ದು ಬೆಳಕಾಯಿತು, ಮಾಯಾಜ್ವಾಲೆಯಿಂದ ಮುಕ್ತಿ ಸಿಕ್ಕಿತು. ಓ ಭಂತೆ ನಾಗಸೇನ ನೀವು ಗಣನಾಯಕರಲ್ಲೆ ಶ್ರೇಷ್ಠರಾಗಿರುವಿರಿ.

5. ಬುದ್ಧಲಾಭಂತರಾಯ ಪನ್ಹೋ (ಬುದ್ಧರ ಪರಿಕರದ ಪ್ರಶ್ನೆ)

ಭಂತೆ ನಾಗಸೇನ, ನೀವು ಹೇಳುವಿರಿ: ತಥಾಗತರು, ನಿರಂತರ ಚೀವರ, ಪಿಂಡಪಾತ, ವಸತಿ ಮತ್ತು ಔಷಧಿಗಳಂತಹ ಪರಿಕರಗಳನ್ನು ಪಡೆಯುತ್ತಾರೆ ಮತ್ತೆ ನೀವು ಹೀಗೂ ಹೇಳಿರುವಿರಿ: ಯಾವಾಗ ತಥಾಗತರು ಬ್ರಾಹ್ಮಣರ ಐದು ಸಾಲುವೃಕ್ಷಗಳ ಹಳ್ಳಿಗೆ ಹೋದಾಗ ಅವರು ಆಹಾರವನ್ನು ಪಡೆಯಲಿಲ್ಲ. ಬರಿದಾದ ಪಿಂಡಪಾತ್ರೆಯಿಂದ ಹಿಂತಿರುಗಿದರು.
ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದರೆ, ಎರಡನೆಯ ಹೇಳಿಕೆ ಸುಳ್ಳಾಗಿರುತ್ತದೆ ಮತ್ತು ಇಲ್ಲಿ ಎರಡನೆಯ ಹೇಳಿಕೆ ಸತ್ಯವಾದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಸಮಸ್ಯೆಯಾಗಿದೆ. ಒಂದು ಬೃಹತ್ ಸಮಸ್ಯೆಯಾಗಿದೆ, ಪರಿಹರಿಸಲು ಕಷ್ಟಕರವಾದುದು, ನಿಮಗೆ ಇದನ್ನು ಹಾಕಿದ್ದೇನೆ, ಇದನ್ನು ನೀವೇ ಪರಿಹರಿಸ
ಬೇಕಾಗಿದೆ. (105)
ಎರಡು ಹೇಳಿಕೆಗಳು ಸತ್ಯವಾಗಿದೆ. ಆದರೆ ಅವರು ಆ ದಿನ ಆಹಾರ ಪಡೆಯದಿದ್ದುದಕ್ಕೆ ಮಾರ ಕಾರಣಕರ್ತನಾಗಿದ್ದಾನೆ.
ಹಾಗಾದರೆ ಭಂತೆ ನಾಗಸೇನ, ಭಗವಾನರು ಅಸಂಖ್ಯಾ ಕಲ್ಪಗಳು ಸಂಪಾದಿಸಿದ ಪುಣ್ಯವು ಅಂದಿಗೆ ಅಂತ್ಯವಾಯಿತೇ? ಹೇಗೆ ಮಾರನಂತಹ ತುಚ್ಛನು ಅಪಾರ ಶಕ್ತಿಶಾಲಿಯಾದ ಮತ್ತು ಪುಣ್ಯಪ್ರಭಾವಿಗಳ ಮೇಲೆ ಮೇಲುಗೈ ಸಾಧಿಸುತ್ತಾನೆ. ಈ ರೀತಿಯಾದರೆ ಭಂತೆ ನಾಗಸೇನ, ಇಲ್ಲಿ ನಿಂದೆಯು ಎರಡರಲ್ಲಿ ಒಂದಕ್ಕೆ ಬೀಳುವುದು. ಪಾಪವು ಪುಣ್ಯಕ್ಕಿಂತ ಶಕ್ತಿಶಾಲಿಯೇ ಅಥವಾ ಮಾರಬಲವು ಬುದ್ಧಬಲಕ್ಕಿಂತ ಹಿರಿದಾದುದೇ? ಮರದ ಬೇರು ತುಂಡಿಗಿಂತ ಬಾರವಾದುದೇ? ಪಾಪಿಯು ಪುಣ್ಯರಾಶಿಗಿಂತ ಶಕ್ತಿಶಾಲಿಯೇ?
ಮಹಾರಾಜ, ಇವರೋ ಅಥವಾ ಅವರೋ ಎಂದು ತೀಮರ್ಾನಿಸಲು ಈ ಆಧಾರಗಳು ಸಾಕಾಗುವುದಿಲ್ಲ. ಆದರೂ ಸಹಾ ಈ ವಿಷಯದಲ್ಲಿ ಖಂಡಿತವಾಗಿ ಕುತೂಹಲವಿದೆ. ಊಹಿಸಿ ಮಹಾರಾಜ, ಒಬ್ಬ ಮನುಷ್ಯ ಚಕ್ರವತರ್ಿಗೆ ಉಡುಗೊರೆ ನೀಡಲು ಜೇನನ್ನು ಅಥವಾ ಇನ್ನೆನಾದರೂ ನೀಡಲು ಹೋಗುತ್ತಾನೆ. ಆದರೆ ದ್ವಾರಪಾಲಕನು ತಡೆದು ಹೀಗೆ ಹೇಳುತ್ತಾನೆ. ಇದು ರಾಜರನ್ನು ಭೇಟಿ ಮಾಡಲು ಅಕಾಲವಾಗಿದೆ, ಆದ್ದರಿಂದ ಓ ಮನುಷ್ಯನೇ, ನಿನ್ನ ಉಡುಗೊರೆ ತೆಗೆದುಕೊಂಡು ಓಡು. ಇಲ್ಲದಿದ್ದರೆ ರಾಜನು ದಂಡ ಹಾಕುವನು. ಆಗ ಆ ಮನುಷ್ಯನು ಭಯಭೀತನಾಗಿ ಅಲ್ಲಿಂದ ವೇಗವಾಗಿ ಪಲಾಯನ ಮಾಡುವನು. ಈಗ ಹೇಳಿ ಮಹಾರಾಜ ಈ ಸನ್ನಿವೇಶದಲ್ಲಿ ದ್ವಾರಪಾಲಕನೇ ಬಲಶಾಲಿಯೇ ಅಥವಾ ಶಕ್ತಿವಂತನೇ? ಅಥವಾ ಚಕ್ರವತರ್ಿಯು ಎಂದಿಗೂ ಉಡುಗೊರೆಗಳನ್ನು ಪಡೆಯಲಾರನೆ?
ಇಲ್ಲ ಭಂತೆ, ಇಲ್ಲಿ ದ್ವಾರಪಾಲಕನು ತನ್ನ ವಕ್ರಬುದ್ಧಿಯಿಂದ ದಾನಿಯನ್ನು ಓಡಿಸಿದ್ದಾನೆ ಮತ್ತು ಬೇರೊಂದು ದ್ವಾರದಿಂದ ಶತಸಹಸ್ರ ಮೌಲ್ಯದ ಉಡುಗೊರೆ ತೆಗೆದುಕೊಂಡು ಹೊಗುತ್ತಾನೆ.
ಅದೇರೀತಿಯಲ್ಲಿ ಮಹಾರಾಜ, ಇಲ್ಲಿ ಮಾರನ ಅಸೂಯೆಯಿಂದಾಗಿ, ಪಂಚಸಾಲ ಹಳ್ಳಿಯ ಬ್ರಾಹ್ಮಣರು ದಾನ ನೀಡಲಾಗಿಲ್ಲ ಮತ್ತು ಶತಸಹಸ್ರ ಬೇರೆ ದೇವತೆಗಳು ಬುದ್ಧರಲ್ಲಿಗೆ ಬಂದು ದೇವಲೋಕದ ಅಮೃತದಂತಹ ಶಕ್ತಿಶಾಲಿಯಾದ ಆಹಾರ ನೀಡುತ್ತಾ, ಗೌರವದಿಂದ ನಿಂತು, ಕೈಜೋಡಿಸುತ್ತ, ಪೂಜಿಸುತ್ತ ದಾನಗೌರವ ಸಲ್ಲಿಸುವರು.
ನೀವು ಹೇಳಿದ್ದು ಸರಿ ಭಂತೆ ನಾಗಸೇನ, ಭಗವಾನರು ನಾಲ್ಕು ವಿಧದ ಪರಿಕರಗಳನ್ನು ಸುಲಭವಾಗಿಯೇ ಪಡೆಯುತ್ತಾರೆ. ಅವರು ಲೋಕಗಳಲ್ಲಿ ಶ್ರೇಷ್ಠರೇ ಸರಿ. ದೇವತೆಗಳ ಮತ್ತು ಮಾನವರ ಕಲ್ಯಾಣಕ್ಕಾಗಿ ಅವರು ದಾನವನ್ನು ಸ್ವೀಕರಿಸುತ್ತಾರೆ. ಆದರೂ ಮಾರನು ತನ್ನ ಇಚ್ಛೆಯಿಂದ ಭಗವಾನರಿಗೆ ಆಹಾರ ನಿಲ್ಲಿಸಿದ್ದು, ನನ್ನ ಸಂಶಯ ಇನ್ನೂ ಪರಿಹಾರವಾಗಿಲ್ಲ, ನಾನು ಇನ್ನೂ ಗೊಂದಲದಲ್ಲಿದ್ದೇನೆ. ಭಗವಾನರು ಲೋಕಗಳಿಗೆಲ್ಲ ಶ್ರೇಷ್ಠರು, ದೇವತೆಗಳಿಗೆ ಮಾನವರಿಗೆ ಗುರುವು, ತಥಾಗತರು ಸಮ್ಮಾಸಂಬುದ್ಧರು, ಪುಣ್ಯದಲ್ಲಿ ಅವರಿಗೆ ಸರಿಸಮಾನರ್ಯಾರೂ ಇಲ್ಲ. ಅನುಪಮರು, ಅದ್ವಿತೀಯರು, ಅಸಮಾನರು ಅಂಥಹವರಿಗೆ ಒಬ್ಬ ತುಚ್ಛ, ಪಾಪಿ, ಮಾರನು ದಾನಕ್ಕೆ ತಡೆಯಾಗಬಲ್ಲ.
ಓ ಮಹಾರಾಜ, ದಾನಕ್ಕೆ ನಾಲ್ಕು ತಡೆಗಳಿವೆ. ಅದೆಂದರೆ: (1) ದಾನವನ್ನು (ಉಡುಗೊರೆಯನ್ನು) ಯಾವುದೇ ವ್ಯಕ್ತಿಗೆ ನೀಡಲು ಇಚ್ಛೆ (ನಿಧರ್ಾರ) ಮಾಡದಿರುವುದು, (2) ದಾನವನ್ನು (ಉಡುಗೊರೆಯನ್ನು) ಬೇರೆ ಯಾರಿಗೋ ಪ್ರತ್ಯೇಕವಾಗಿ ಇಟ್ಟಿರುವುದು, (3) ದಾನವನ್ನು ಬೇರೆ ಒಬ್ಬನಿಗೆ ಸಿದ್ಧಪಡಿಸುತ್ತಿರುವುದು ಮತ್ತು (4) ಬೇರೆಯವರಿಗೆ ದಾನ ಮಾಡಿರುವುದು. ಇಲ್ಲಿ ಮೊದಲನೆಯದರಲ್ಲಿ ಉಡುಗೊರೆಯು ಸಿದ್ಧವಾಗಿರುತ್ತದೆ. ಆದರೆ ಯಾರಿಗೆ ನೀಡಬೇಕೆಂದು ಯೋಚಿಸಿರುವುದಿಲ್ಲ. ಅವರ ಮನಸ್ಸಿನಲ್ಲಿ ಯಾವುದೇ ವ್ಯಕ್ತಿಯನ್ನು ನಿಧರ್ಾರ ಮಾಡಿರುವುದಿಲ್ಲ. ಅವರ ಮನಸ್ಸಿನಲ್ಲಿ ದಾನದಿಂದ ಪ್ರಯೋಜನವಾದರೂ ಏನು? ಎಂಬ ಯೋಚನೆ ಇರುತ್ತದೆ. ಎರಡನೆಯದರಲ್ಲಿ ಆತನು ಉಡುಗೊರೆಯನ್ನು ಸಿದ್ಧಪಡಿಸಿ ಬೇರೆ ಯಾವುದೋ ವ್ಯಕ್ತಿಗೆ ನಿಗದಿಪಡಿಸಿರುತ್ತಾನೆ, ಮೂರನೆಯದರಲ್ಲಿ ಯಾರು ಬೇಕಾದರೂ ಅಡ್ಡಿ ಮಾಡಬಹುದು, ಇಲ್ಲಿ ಉಡುಗೊರೆ ಸಿದ್ಧವಾಗಿರುತ್ತದೆ. ಆದರೆ ಸ್ವೀಕಾರವಾಗಿರುವುದಿಲ್ಲ, ನಾಲ್ಕನೆಯದರಲ್ಲಿ ಬೇರೆ ಯಾರಿಗೋ ನೀಡಿ ಅಡ್ಡಿಮಾಡಿರುತ್ತಾನೆ.
ಮತ್ತು ಇಲ್ಲಿ ಪಂಚಸಾಲ ವೃಕ್ಷಹಳ್ಳಿಯಲ್ಲಿನ ಬ್ರಾಹ್ಮಣರು ಮತ್ತು ಗೃಹಸ್ಥರು ಯಾವುದೇ ಆಹಾರವನ್ನು ಸಿದ್ಧಪಡಿಸಿರಲಿಲ್ಲ, ಹೊಂದಿರಲಿಲ್ಲ. ಅವರು ಬುದ್ಧರಿಗಾಗಿ ಎಂದು ಇಚ್ಛಿಸಿರಲಿಲ್ಲ. ಇಲ್ಲಿ ಅಡ್ಡಿಯು ಮುಂಚೆಯೇ ಪ್ರಾರಂಭವಾಗಿದೆ. ಅವರು ಯಾರಿಗೂ ದಾನ ಮಾಡಲು ಇಚ್ಛಿಸಲೇ ಇಲ್ಲ ಮತ್ತು ಆ ದಿನ ಯಾರೆಲ್ಲರೂ ಆ ಹಳ್ಳಿಗೆ ಹೋಗಿದ್ದರೋ ಅವರೆಲ್ಲರೂ ದಾನವಿಲ್ಲದೆ ಹಿಂತಿರುಗಿದರು. ಓ ಮಹಾರಾಜ, ಬುದ್ಧರಿಗಾಗಿ ಎಂದು ಅವರು ಇಚ್ಛಿಸಿದ್ದರೆ ಅಥವಾ ಬುದ್ಧರಿಗಾಗಿ ಎಂದು ಸಿದ್ಧಪಡಿಸಿದ್ದರೆ, ಅಥವಾ ಬುದ್ಧರಿಗಾಗಿ ಎಂದು ಪ್ರತ್ಯೇಕವಾಗಿ ತೆಗೆದು ಇಟ್ಟಿದ್ದರೆ ಅಥವಾ ಬುದ್ಧರಿಗಾಗಿ ಎಂದು ಅವರು ಭಗವಾನರಿಗೆ ನೀಡಿದ್ದರೆ ಆ ವಿಷಯವೇ ಬೇರೆಯದಾಗಿತ್ತು. ಹಾಗೇ ಇಚ್ಛಿಸಿದ, ಸಿದ್ಧಪಡಿಸಿದ, ಇಟ್ಟ ದಾನವನ್ನು ಅಡ್ಡಿಪಡಿಸಲು ಮಾರರಿಗಾಗಲಿ, ಬ್ರಾಹ್ಮಣರಿಗಾಗಲಿ, ದೇವರಿಗಾಗಲಿ ಯಾರಿಂದಲೂ ಸಾಧ್ಯವಿಲ್ಲ. ಮತ್ತು ಯಾರಾದರೂ ಬುದ್ಧರಿಗೆ ದಾನ ನೀಡಲು ಇಚ್ಛಿಸಿದರೆ, ಸಿದ್ಧಪಡಿಸಿದರೆ, ಪ್ರತ್ಯೇಕವಾಗಿ ಇಟ್ಟಿದ್ದರೆ ಅಥವಾ ನೀಡಲು ಬಂದರೆ ಅಂತಹವರನ್ನು ಯಾರಾದರೂ ಅಡ್ಡಿಪಡಿಸಲು ಬಂದರೆ ಅವರ ತಲೆಯು ಶತ ಅಥವಾ ಸಹಸ್ರ ಹೋಳಾಗುವುದು.
ಓ ಮಹಾರಾಜ, ತಥಾಗತರಿಗೆ ಸಂಬಂಧಿಸಿದಂತೆ ನಾಲ್ಕು ವಿಷಯಗಳಿವೆ, ಅವುಗಳಿಗೆ ಯಾರೂ ಸಹಾ ಹಾನಿ ಮಾಡಲಾರರು, ಯಾವುದದು ನಾಲ್ಕು? ಬುದ್ಧರಿಗೆಂದು ಇಚ್ಛಿಸಿದ ದಾನ, ಬುದ್ದಾರಿಗಾಗಿ ಎಂದು ಸಿದ್ಧಪಡಿಸಿದ ದಾನ, ಮಾರುದ್ಧದ ಭಗವಾನ ಪ್ರಭೆ, ಅವರ ಸರ್ವಜ್ಞತೆಯ ಅರಿವಿಗೆ ಮತ್ತು ಅವರ ಜೀವಕ್ಕೆ ಯಾರು ಹಾನಿ ಮಾಡಲಾರರು. ಇವೆಲ್ಲಾ ವಿಷಯಗಳು ಒಂದೇ ಸಾರದಿಂದ ಕೂಡಿದೆ ಓ ರಾಜ, ಅದೆಂದರೆ: ದ್ವೇಷರಹಿತತೆ, ಅಚಲತೆ, ಪರಜೀವಿಗಳಿಂದ ಅನಾಕ್ರಮಣ ಮತ್ತು ಯಾವುದೇ ಪರಿಸ್ಥಿತಿಗೆ ಬದಲಾಗದಿರುವಿಕೆ ಮತ್ತು ಮಾರನು ಪಾಪಿಯು, ಅಗೋಚರನಾಗಿ ಪಂಚಸಾಲ ವೃಕ್ಷದ ಬ್ರಾಹ್ಮಣರನ್ನು ಹಿಡಿದಿದ್ದನು. ಊಹಿಸಿ ಮಹಾರಾಜ, ಡಕಾಯಿತರು ದೂರದೃಷ್ಟಿಗೂ ಬೀಳದೆ ಹೆದ್ದಾರಿಗಳಲ್ಲಿ, ಗಡಿಗಳಲ್ಲಿ ದಾಳಿ ನಡೆಸಬಹುದು. ಆದರೆ ರಾಜನ ದೃಷ್ಟಿಗೆ ಅವರು ಬಿದ್ದರೆ ಅವರು ಸುರಕ್ಷಿತರಾಗಿರುವರೇ?
ಖಂಡಿತವಾಗಿಯೂ ಇಲ್ಲ ಭಂತೆ, ರಾಜನು ಆ ಡಕಾಯಿತರನ್ನು ಶತ ಅಥವಾ ಸಹಸ್ರ ಭಾಗವಾಗಿ ಅವರನ್ನು ಕಡಿಸುತ್ತಿದ್ದನು.
ಹಾಗೆಯೇ ಮಹಾರಾಜ, ಮಾರನು ಅಗೋಚರನಾಗಿ ಅವರನ್ನು ವಶಪಡಿಸಿಕೊಂಡಿದ್ದನು. ಊಹಿಸಿ ಮಹಾರಾಜ, ವಿವಾಹಿತ ಸ್ತ್ರೀಯೊಬ್ಬಳು, ಆಗಾಗ್ಗೆ ಅಡಗುತಾಣಗಳಲ್ಲಿ ತನ್ನ ಪ್ರೇಮಿಯನ್ನು ಸೇರುತ್ತಿರುತ್ತಾಳೆ. ಆದರೆ ಓ ರಾಜ, ಆಕೆ ಆ ಒಳಸಂಚನ್ನು ತನ್ನ ಪತಿ ಎದುರಿನಲ್ಲಿ ಮಾಡಿದಾಗ ಆಕೆಯು ಕ್ಷೇಮವಾಗಿರಬಲ್ಲಳೇ?
ಇಲ್ಲ ಭಂತೆ, ಆತನು ಆಕೆಯನ್ನು ಕೊಲ್ಲಬಹುದು ಅಥವಾ ಗಾಯಗೊಳಿಸಬಹುದು ಅಥವಾ ಬಂಧನದಲ್ಲಿಡಬಹುದು ಅಥವಾ ಗುಲಾಮಳನ್ನಾಗಿ ಮಾಡಬಹುದು.
ಹಾಗೆಯೇ ಮಹಾರಾಜ, ಮಾರನು ಅಗೋಚರನಾಗಿ ಅವರನ್ನು ವಶಪಡಿಸಿ ಕೊಂಡಿದ್ದನು. ಆದರೆ ಓ ಮಹಾರಾಜ, ಆ ವಿಷಯ ಹಾಗಲ್ಲದೆ, ಬುದ್ಧರಿಗಾಗಿ ಎಂದು ಇಚ್ಛಿಸಿದ್ದರೆ, ಬುದ್ಧರಿಗಾಗಿ ಎಂದು ಆಹಾರ ಸಿದ್ಧಪಡಿಸಿದ್ದರೆ, ಅವರಿಗಾಗಿ ಪ್ರತ್ಯೇಕವಾಗಿ ಇಟ್ಟಿದ್ದರೆ, ಬುದ್ಧರಿಗಾಗಿ ನೀಡಲು ಹೋದರೆ ಆಗ ಮಾರನು ಅಡ್ಡಿಪಡಿಸಿದ್ದರೆ ಅತನ ತಲೆಯು ಶತಸಹಸ್ರ ಹೋಳಾಗುತ್ತಿತ್ತು.
ಭಂತೆ ನಾಗಸೇನರವರೇ, ನೀವು ಹೇಳಿದಂತೆಯೇ ಇಲ್ಲಿ ಮಾರನು ಅಗೋಚರನಾಗಿ ಡಕಾಯಿತರಂತೆ ವಶಪಡಿಸಿಕೊಂಡಿದ್ದಾನೆ, ಹಾಗಲ್ಲದೆ ಆತನು ಬುದ್ಧರಿಗಾಗಿ, ಎಂದು ಮಿಸಲಾಗಿಸಿದ್ದ ದಾನಕ್ಕೆ ಅಡ್ಡಿ ಮಾಡಿದ್ದರೆ ಆತನು ತಲೆಯು ಶತಸಹಸ್ರ ಚೂರು ಚೂರಾಗುತ್ತಿತ್ತು. ಆತನ ದೇಹವು ಧೂಳಾಗುತ್ತಿತ್ತು. ತುಂಬಾ ಒಳ್ಳೆಯದು ನಾಗಸೇನ, ನೀವು ಹೇಳಿದಕ್ಕೆ ನನ್ನ ಸಮ್ಮತಿಯಿದೆ, ನಾನು ಒಪ್ಪುತ್ತೇನೆ
.

6. ಅಪುಞಹ ಪನ್ಹೊ (ಅಪುಣ್ಯ ಪ್ರಶ್ನೆ)

ಭಂತೆ ನಾಗಸೇನ, ನೀವು ಹೇಳುವಿರಿ: ಯಾರೇ ಆಗಲಿ, ಜೀವಹತ್ಯೆ ಮಾಡುತ್ತಾನೆಯೋ ಆತನಿಗೆ ತಾನು ಮಾಡುತ್ತಿರುವುದು ತಿಳಿಯದಿದ್ದರೂ, ಆತನು ಅಪಾರ ಪಾಪಗಳನ್ನು ಗಳಿಸುತ್ತಾನೆ. ಆದರೆ ಇನ್ನೊಂದೆಡೆ ಭಗವಾನರು ವಿನಯ ಪಿಟಕದಲ್ಲಿ ಹೀಗೆ ಹೇಳಿದ್ದಾರೆ: ಅರಿಯದೆ ಮಾಡಿದ ಕ್ರಿಯೆಯು ಪಾಪವಲ್ಲ (ತಪ್ಪಲ್ಲ).
ಈಗ ಹೇಳಿ ಮೊದಲ ಹೇಳಿಕೆ ಸರಿಯಾಗಿದ್ದರೆ, ಎರಡನೆಯ ಹೇಳಿಕೆ ಸುಳ್ಳಾಗಿರುತ್ತದೆ. ಅಥವಾ ಎರಡನೆಯ ಹೇಳಿಕೆ ಸರಿಯಾಗಿದ್ದರೆ ಮೊದಲನೆಯದು ಸುಳ್ಳಾಗಿರುತ್ತದೆ. ಇದು ಸಹಾ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ. ಪ್ರಾವಿಣ್ಯತೆ ಪಡೆಯಲು ಕಷ್ಟಕರವಾದುದು, ದಾಟಲು ಕ್ಲಿಷ್ಟಕರವಾದುದು, ಇದನ್ನು ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವೇ ಪರಿಹರಿಸಬೇಕು. (106)
ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳು ಭಗವಾನರಿಂದಲೇ ಬಂದಿರುವುದಾಗಿವೆ. ಆದರೆ ಅವುಗಳ ತಿಳುವಳಿಕೆ ಮಾತ್ರ ವಿಭಿನ್ನವಾಗಿದೆ. ಹೇಗೆ? ಹೇಗೆಂದರೆ ಗ್ರಹಿಕೆಯ ಸಹಕಾರವಿಲ್ಲದೆ ಆಗುವ ಪಾಪಗಳಿವೆ ಮತ್ತು ಹಾಗೆಯೇ ಗ್ರಹಿಕೆಯ ಸಹಕಾರದಿಂದ ಆಗುವ ಪಾಪಗಳೂ ಸಹಾ ಇವೆ. ಈ ರೀತಿಯಾಗಿಯೇ ಭಗವಾನರು ಹೀಗೆ ಹೇಳಿದ್ದಾರೆ ಅರಿವಿಲ್ಲದೆ ಮಾಡುವ ಕ್ರಿಯೆಯು ಪಾಪವಲ್ಲ.
ತುಂಬಾ ಒಳ್ಳೆಯದು ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆ.

7. ಭಿಕ್ಖುಸಂಘ ಪರಿಹರಣ ಪನ್ಹೊ (ಭಿಕ್ಷು ಸಂಘ ಅವಲಂಬನೆ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು ಆನಂದ, ತಥಾಗತರು ತಮ್ಮನ್ನೇ ಸಂಘವು ಅವಲಂಬಿಸಿದೆ ಅಥವಾ ತಾನು ಸಂಘವನ್ನು ನಡೆಸುತ್ತಿದ್ದೇನೆ ಎಂದು ಭಾವಿಸಿಲ್ಲ. ಆದರೆ ಇನ್ನೊಮ್ಮೆ ಭಗವಾನರು ಮೆತ್ತೆಯ್ಯ ಬುದ್ಧ ಭಗವಾನರ ಸದ್ಗುಣಗಳ ಬಗ್ಗೆ ವಿವರಿಸುವಾಗ ಹೀಗೆ ಹೇಳಿದ್ದಾರೆ: ಅವರು ಹಲವಾರು ಸಹಸ್ರ ಸಂಖ್ಯೆಯ ಭಿಕ್ಷುಗಣಕ್ಕೆ ನಾಯಕರಾಗುತ್ತಾರೆ. ಹೇಗೆಂದರೆ ನಾನು ಈಗ ಹಲವು ನೂರು ಭಿಕ್ಷುಗಣಕ್ಕೆ ನಾಯಕನಾಗಿರುವಂತೆ ಇರುತ್ತಾರೆ. ಇಲ್ಲಿ ಮೊದಲ ವಾಕ್ಯ ಸತ್ಯವಾದರೆ, ಎರಡನೆಯದು ಸುಳ್ಳಾಗುತ್ತದೆ ಅಥವಾ ಎರಡನೆಯದು ಸತ್ಯವಾದರೆ, ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ, ನೀವೇ ಇದನ್ನು ಬಿಡಿಸಬೇಕು. (107)
ನೀವು ಹೇಳಿರುವ ಹೇಳಿಕೆಗಳು ಸರಿಯಾಗಿವೆ ಓ ಮಹಾರಾಜ, ಆದರೆ ಈ ಪ್ರಶ್ನೆಯಲ್ಲಿ ನೀವು ಹೇಳಿದಂತಹ ಭಾವನೆಯು ಒಂದರಲ್ಲಿ ಒಳಗೊಂಡಿದೆ ಮತ್ತು ಇನ್ನೊಂದರಲಿಲ್ಲ. ಓ ಮಹಾರಾಜರೇ, ತಥಾಗತರು ಭಿಕ್ಖುಗಣವನ್ನು ಹಿಂಬಾಲಿಸುವುದಿಲ್ಲ. ಆದರೆ ಭಿಕ್ಖು ಸಮೂಹವೇ ಅವರನ್ನು ಹಿಂಬಾಲಿಸುವುದು. ಓ ಮಹಾರಾಜನೆ, ಇದು ನಾನು ಅಥವಾ ಇದು ನನ್ನದು ಎಂಬುದು ಕೇವಲ ವ್ಯವಹಾರಿಕ ಅಭಿಪ್ರಾಯವಾಗಿದೆ (ಭಾಷೆಯಾಗಿದೆ). ಇದು ಪರಮಾರ್ಥ ಸತ್ಯವಲ್ಲ, ಭಗವಾನರಿಂದ ಅಂಟುವಿಕೆಯು, ಅಹಂಕಾರವು ತೆಗೆಯಲ್ಪಟ್ಟಿದೆ. ಅವರು ಇದು ನಾನು ಅಥವಾ ಇದು ನನ್ನದು ಎಂಬ ಮೋಹದಿಂದ ಬಿಡುಗಡೆ ಹೊಂದಿದ್ದಾರೆ. ಅವರು ಕೇವಲ ಪರರಿಗೋಸ್ಕರ, ಪರಹಿತಕ್ಕಾಗಿ ಜೀವಿಸುತ್ತಿದ್ದಾರೆ. ಓ ಮಹಾರಾಜ, ಹೇಗೆ ಈ ಪೃಥ್ವಿಯು ಈ ಲೋಕದ ಎಲ್ಲಾ ಜೀವಿಗಳಿಗೆ ಸಲಹುತ್ತಿದೆಯೋ, ಆಶ್ರಯವಾಗಿದೆಯೋ ಅವರೆಲ್ಲರೂ ಪೃಥ್ವಿಗೆ ಅವಲಂಬಿತವಾಗಿದ್ದಾರೋ, ಆದರೆ ಆ ಪೃಥ್ವಿಗೆ ಇವೆಲ್ಲಾ ನನ್ನದು, ನನ್ನನ್ನೇ ಆಶ್ರಯಿಸಿದ್ದಾರೆ ಎಂಬ ಭಾವನೆಯಿಲ್ಲವೋ ಹಾಗೆಯೇ ಭಗವಾನರು ಸಹಾ ಪೃಥ್ವಿಯಂತೆ ಇದ್ದಾರೆ. ಹೇಗೆ ಬೃಹತ್ತಾದ ಮೋಡವು ಮಳೆಯನ್ನು ನೀಡುತ್ತದೆಯೋ ಎಲ್ಲಾರೀತಿಯ ಹುಲ್ಲು, ಗಿಡ, ಮರಗಳಿಗೆ ಹಾಗೆಯೇ ಎಲ್ಲಾ ಜೀವ ಸಂಕುಲಕ್ಕೆ ಪೋಷಿಸುತ್ತಿದೆಯೋ, ಅವುಗಳ ವಂಶನಡೆಯುವಂತೆ ನೋಡಿಕೊಳ್ಳುವುದೂ, ಎಲ್ಲಾ ಜೀವರಾಶಿಗಳು ಮೋಡಕ್ಕೆ ಆಶ್ರಯಿತವಾಗಿದ್ದರೂ, ಅದಕ್ಕೆ ಮಾತ್ರ ಇವೆಲ್ಲಾ ನನ್ನದು ಎಂಬ ಭಾವನೆ ಇಲ್ಲವೋ ಅದೇರೀತಿಯಲ್ಲಿ ತಥಾಗತರು ಮೋಡದಂತಿದ್ದಾರೆ, ಹಾಗೆಯೇ ತಥಾಗತರು ಸರ್ವಜೀವಿಗಳಿಗೆ ಯಾವುದು ಕುಶಲ ಧಮ್ಮ ಎಂದು ಅರಿವು ಮಾಡಿಸುತ್ತಾರೆ ಮತ್ತು ಅವರನ್ನೆಲ್ಲಾ ಕುಶಲದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಎಲ್ಲಾ ಜೀವಿಗಳ ಜೀವನವು ಅವರಲ್ಲಿದೆ, ಆದರೂ ಸಹಾ ತಥಾಗತರಲ್ಲಿ ಇದು ನನ್ನದು ಎಂಬ ಭಾವನೆಯೇ ಉಂಟಾಗುವದಿಲ್ಲ. ಏಕೆ? ಏಕೆಂದರೆ ಅವರಲ್ಲಿ ಆತ್ಮ (ಸ್ವ/ವ್ಯಕ್ತಿತ್ವ)ಕ್ಕೆ ಸಂಬಂಧಿಸಿದ ಎಲ್ಲಾ ದೃಷ್ಟಿಕೋನಗಳು ನಾಶಗೊಳಿಸಲ್ಪಟ್ಟಿದೆ.
ತುಂಬಾ ಒಳ್ಳೆಯದು ನಾಗಸೇನ, ಈ ಸಮಸ್ಯೆಯು ಬಹುವಿಧದಿಂದ ಪರಿಹರಿಸಲ್ಪಟ್ಟಿತು, ಅರಣ್ಯವು ತೆರೆದಂತಾಯಿತು, ಅಂಧಕಾರವು ಅಲೋಕವಾಗಿ (ಬೆಳಕು) ಪರಿವತರ್ಿತವಾಯಿತು. ವಿರೋಧಿಯ ವಾದಗಳೆಲ್ಲಾ ನುಚ್ಚು ನೂರಾಯಿತು, ನಿಜಕ್ಕೂ ಜಿನಾಪುತ್ತರಲ್ಲಿ ಚಕ್ಷುವು ಉದಯಿಸಿದೆ.

8. ಅಭೆಜ್ಜಪರಿಸ ಪನ್ಹೊ (ಹಿಂಬಾಲಕರ ಬೇಪರ್ಾಟಿನ ಪ್ರಶ್ನೆ)

ಭಂತೆ ನಾಗಸೇನ, ನೀವು ಹೇಳುವಿರಿ: ತಥಾಗತರು ಇಂಥ ಅದ್ಭುತ ವ್ಯಕ್ತಿಯು, ಅವರ ಹಿಂಬಾಲಕರು ಎಂದಿಗೂ ಭಂಗವಾಗಲಾರರು. ಆದರೆ ಮತ್ತೆ ನೀವೇ ಹೇಳುವಿರಿ: ಒಂದೇ ಭಾಷಣದಿಂದ ದೇವದತ್ತನು ಸಂಘದ 500 ಜನರನ್ನು ತನ್ನ ಹಿಂಬಾಲಕರನ್ನಾಗಿ ಮಾಡಿಕೊಂಡನು. ಇಲ್ಲಿ ಮೊದಲ ವಾಕ್ಯವು ಸತ್ಯವಾದರೆ, ಎರಡನೆಯದು ಸುಳ್ಳಾಗುತ್ತದೆ. ಇಲ್ಲವೇ ಎರಡನೆಯ ವಾಕ್ಯ ಸತ್ಯವಾದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಇಕ್ಕಟ್ಟಿನ ಪ್ರಶ್ನೆಯಾಗಿದೆ. ಕ್ಲಿಷ್ಟಕರವಾಗಿದೆ, ಬಿಡಿಸಲು ಕಷ್ಟಕರವಾಗಿದೆ, ಹಲವು ಕಗ್ಗಂಟುಗಳಿಂದ ಕೂಡಿದೆ. ಇದರಿಂದಲೇ ಜನರು ಆವರಿಸಿಕೊಂಡಿದ್ದಾರೆ, ತಡೆಗೊಂಡಿದ್ದಾರೆ, ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನು ಅನಾವರಣಗೊಳಿಸಿ ತಡೆ ಮುರಿದು, ಬಿಡಿಸಿ ಇಲ್ಲಿ ವಿರೋಧಿಯ ವಾಗ್ಮಿತೆಯ ವಾದಕ್ಕೆ ನಿಮ್ಮ ಕೌಶಲ್ಯ ಪ್ರಕಟಪಡಿಸಿ. (108)
ಎರಡು ಹೇಳಿಕೆಗಳು ಸರಿಯಾಗಿಯೇ ಇವೆ ಮಹಾರಾಜ, ಆದರೆ ಎರಡನೆಯದರಲ್ಲಿ ಕರ್ತವ್ಯ ಉಲ್ಲಂಘನೆಯ ಬಲದಿಂದ ಕೂಡಿದೆ, ಸಂಘಬೇಧದಿಂದ ಕೂಡಿದೆ. ಎಲ್ಲಿ ಐಕ್ಯತೆಯ ಭಂಗವಾಗುವುದೋ, ಆಗ ಅಲ್ಲಿ ತಾಯಿಯು ಮಗನಿಂದ ಬೇರ್ಪಡುವಳು. ಹಾಗೆಯೇ ಮಗನು ಸಹಾ ತಾಯಿಯಿಂದ ಬೇರ್ಪಡುವನು. ಹಾಗೆಯೇ ತಂದೆಯಿಂದ ಮಗನು ಅಥವಾ ಮಗನಿಂದ ತಂದೆಯು ಬೇರ್ಪಡುವರು. ಅಥವಾ ಸೋದರನಿಂದ ಸೋದರಿಯು, ಸೋದರಿಯಿಂದ ಸೊದರನು ಬೇರ್ಪಡುವರು. ಮಿತ್ರನಿಂದ ಮಿತ್ರನು ಬೇರ್ಪಡುವನು. ಒಂದು ಹಡಗು ಸಹಾ ಅಲೆಗಳ ಬಲದಿಂದಾಗಿ, ಅದರ ಎಲ್ಲಾ ಹಲಗೆಗಳು, ಹಗ್ಗಗಳು ಕತ್ತರಿಸಲ್ಪಡುತ್ತದೆ, ನಾಶವಾಗುತ್ತದೆ. ಹಾಗೆಯೇ ಬಿರುಗಾಳಿಯ ಬಲದಿಂದಾಗಿ ಮರಗಳೆಲ್ಲಾ ಬುಡಮೇಲಾಗುತ್ತದೆ. ಹಾಗೆಯೇ ತಾಮ್ರದಿಂದಾಗಿ ಅತ್ಯುತ್ತಮ ಮಟ್ಟದ ಚಿನ್ನವೂ ಸಹಾ ಬೇರ್ಪಡುತ್ತದೆ. ಆದರೆ ಇದು ಪ್ರಜ್ಞಾವಂತ ಇಚ್ಛೆಯಲ್ಲ, ಇದು ಭಗವಾನರ ಉದ್ದೇಶವೂ ಅಲ್ಲ. ಇದು ಭಗವಾನರನ್ನು ನಿಜವಾಗಿ ಹಿಂಬಾಲಿಸುವವರ ಬಯಕೆಯು ಸಹಾ ಅಲ್ಲ. ಸಂಘದಲ್ಲಿ ಇರುವಂತಹ ಶೀಲವಂತ ಹಾಗು ಪ್ರಜ್ಞಾವಂತರ ಬಯಕೆಯು ಅಲ್ಲ. ಸಂಘಬೇಧವಾಗುವುದಿಲ್ಲ ಎಂದು ವಿಶೇಷ ಅರ್ಥದಲ್ಲಿ ಹೇಳಲಾಗಿದೆ. ಖಂಡಿತವಾಗಿ ಅದು ಕೇಳಿರದ ಸಂಗತಿಯಾಗಿದೆ. ಎಲ್ಲಿಯವರೆಗೆ ನನಗೆ ಗೊತ್ತು, ಅಲ್ಲಿಯವರೆಗೆ ಸಂಘಬೇಧವಾಗುವುದಿಲ್ಲ. ಅದು ಏನಾದರೂ ಮಾಡಿಯಾಗಲಿ, ತೆಗೆದುಕೊಂಡಾಗಲಿ, ಕೆಟ್ಟ ಮಾತಿನಿಂದಾಗಲಿ, ಕೆಟ್ಟ ಕೃತ್ಯದಿಂದಾಗಲಿ, ಅನ್ಯಾಯದಿಂದಾಗಲಿ, ಯಾವುದೇ ರೀತಿಯಲ್ಲಿ ಆಗುವುದಿಲ್ಲ. ಅವರ ನಿಜವಾದ ಸಂಘವು ಎಂದಿಗೂ ಭಂಗವಾಗಲಾರದು, ಏಕೆಂದರೆ ಅಂತಹ ಅಂಶಗಳಾವುವು ಸಂಘದಲ್ಲಿಲ್ಲ. ನಿಮಗೂ ಸಹಾ ತಿಳಿದಿದೆ. ಹೇಗೆ ನವಾಂಶ ಬುದ್ಧಶಾಸನದಲ್ಲಿ ಬೋಧಿಸತ್ವರು ಏನೇ ಮಾಡಿದರೂ ತಥಾಗತರನ್ನು ಹಿಂಬಾಲಿಸಲಿಲ್ಲವೇ?
ಇಲ್ಲ ಭಂತೆ, ಅಂತಹ ಸಂಗತಿ ನಾನು ಎಂದಿಗೂ ಕೇಳಿಲ್ಲ ಅಥವಾ ನೋಡಿಲ್ಲ. ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.

ಎರಡನೆಯ ಅಭೆಜ್ಜ ವರ್ಗವು ಮುಗಿಯಿತು
(ಈ ವರ್ಗದಲ್ಲಿ ಎಂಟು ಪ್ರಶ್ನೆಗಳಿವೆ 

No comments:

Post a Comment