Wednesday 27 December 2017

ಮಿಲಿಂದ ಪನ್ಹ 4. ಸಬ್ಬನ್ಯುತಜ್ಞಾನ ವಗ್ಗೋ milinda panha sabbanyutanana vaggo

4. ಸಬ್ಬನ್ಯುತಜ್ಞಾನ ವಗ್ಗೋ


1. ಇದ್ದಿ ಕರ್ಮ ವಿಪಾಕ ಪ್ರಶ್ನೆ ಕರ್ಮ ಪರಿಣಾಮದ ಪ್ರಶ್ನೆ)



ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಓ ಭಿಕ್ಖುಗಳೇ, ನನ್ನ ಶಿಷ್ಯರಲ್ಲಿ ಇದ್ದಿಬಲಗಳಲ್ಲೇ (ಅತೀಂದ್ರಿಯ ಪವಾಡ ಶಕ್ತಿ) ಶ್ರೇಷ್ಠರು, ಪ್ರಧಾನರು ಇದ್ದಾರೆಂದರೆ ಅದು ಮೊಗ್ಗಲಾನ ಮಾತ್ರವೇ. ಆದರೆ ಇನ್ನೊಂದಡೆ ಗಮನಿಸುವುದಾದರೆ ಮೊಗ್ಗಲಾನ ಅವರನ್ನು ಶಸ್ತ್ರಾಸ್ತ್ರಗಳೊಂದಿಗೆ ಸಾಯುವವರೆಗೂ ಹೊಡೆದಿದ್ದು, ಇದರಿಂದಾಗಿ ಅವರ ತಲೆಯು ಒಡೆದು, ಮೂಳೆಗಳನ್ನು ಪುಡಿಪುಡಿಯಾಗುವಂತೆ ಹೊಡೆದು, ಮಾಂಸ, ರಕ್ತ, ನರ ಮೂಳೆಗಳು ಒಂದಾಗುವಂತೆ ಹೊಡೆದಿದ್ದರು. ಭಂತೆ ನಾಗಸೇನರವರೇ, ಮಹಾಥೇರರಾದ ಮೊಗ್ಗಲಾನರು ನಿಜಕ್ಕೂ ಇದ್ದಿಬಲಶಾಲಿಗಳಲ್ಲೇ ಅಗ್ರರಾಗಿದ್ದರೆ, ಅವರನ್ನು ಸಾಯುವವರೆಗೆ ಹೊಡೆದದ್ದು ಸುಳ್ಳಾಗುತ್ತದೆ. ಆದರೆ ಅವರ ಮರಣ ಹೀಗೆಯೇ ಸಂಭವಿಸಿದ್ದರೆ, ಅವರು ಇದ್ದಿಬಲಗಳಲ್ಲೇ ಅಗ್ರರೆನ್ನುವುದು ಸುಳ್ಳಾಗುತ್ತದೆ. ಹೇಗೆತಾನೆ ಇದ್ದಿಬಲಶಾಲಿಯು ತನ್ನ ರಕ್ಷಣೆ ಮಾಡಿಕೊಳ್ಳಲಾರ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಇದನ್ನು ಹಾಕಿದ್ದೇನೆ, ನೀವೇ ಇದನ್ನು ಪರಿಹರಿಸಬೇಕು.(123)

ಓ ಮಹಾರಾಜ, ಭಗವಾನರೇ, ಮಹಾಮೊಗ್ಗಲಾನರವರನ್ನು ಇದ್ದಿಬಲಗಳಲ್ಲಿ ಅಗ್ರರು ಎಂದು ಘೋಷಿಸಿದ್ದಾರೆ. ಅದು ಸತ್ಯವೇ ಆಗಿದೆ, ಸುಳ್ಳಾಗಲಾರದು. ಮತ್ತೆ ಅವರು ಶಸ್ತ್ರಾಸ್ತ್ರಗಳಿಂದ ಸಾಯುವ ಸ್ಥಿತಿಗೆ ಹೋಗುವಂತೆ ಹೊಡೆಯಲ್ಪಟ್ಟಿದ್ದರೆ ಅದು ಹಿಂದಿನ ಜನ್ಮದ ಪ್ರಬಲ ಕರ್ಮವಿಪಾಕವೇ ಅದಕ್ಕೆ ಕಾರಣವಾಗಿದೆ.

ಆದರೆ ಭಂತೆ ನಾಗಸೇನ, ಅವರು ಇದ್ದಿಗಳಲ್ಲಿ ಅಗ್ರರೆನ್ನುವುದು ಹಾಗೆಯೇ ಪ್ರಬಲ ಕರ್ಮವಿಪಾಕವೆನ್ನುವುದು ಇವೆರಡು ಸಹಾ ಅಚಿಂತ್ಯ (ಚಿಂತನಾತೀತ) ಎಂದೆನಿಸುವುದಿಲ್ಲವೇ? ಹಾಗು ಈ ಅಚಿಂತ್ಯವನ್ನು ಅಚಿಂತ್ಯವು ಹೊರತರಬಲ್ಲದೆ? ಹೇಗೆಂದರೆ ಸೇಬನ್ನು ಸೇಬಿನಿಂದ ಹೊಡೆದು ಬೀಳಿಸುವಂತೆ, ಮಾವನ್ನು ಮಾವಿನಿಂದ ಬೀಳಿಸುವಂತೆ. ಈ ವಿಷಯವು ಹೊರತರಲಾಗುವುದೇ?

ಓ ಮಹಾರಾಜ, ಕೆಲವು ವಿಷಯಗಳು ಕಲ್ಪನೆಗೆ ಅತೀತವಾಗಿದ್ದರೂ, ಒಂದರಿಂದ ಇನ್ನೊಂದು ಹೆಚ್ಚಾಗಿರುತ್ತವೆ. ಹೇಗೆಂದರೆ ಚಕ್ರವತರ್ಿಗಳು ನೋಡಲು ಸಾಧಾರಣ ರಾಜರಂತೆ ಇದ್ದರೂ ಸಹಾ, ಅವರು ಮಿಕ್ಕವರನ್ನು ಮೀರಿಸಿರುತ್ತಾರೆ. ತಮಗೆ ಅಧೀನರಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಕೆಲವಿಷಯವು ನಮ್ಮ ಚಿಂತನೆಗೆ, ಕಲ್ಪನೆಗೆ ಅತೀತವಾಗಿದ್ದರೂ ಸಹಾ ಅವುಗಳಲ್ಲಿ ಕರ್ಮವು, ಮಿಕ್ಕ ಎಲ್ಲಕ್ಕಿಂತ ದಾಟಿರುತ್ತದೆ. ಅದರ ಅಧೀನದಲ್ಲೇ ಮಿಕ್ಕವನ್ನು ಇಟ್ಟುಕೊಳ್ಳುತ್ತದೆ. ಯಾವಾಗ ಕರ್ಮವು ಕಾರ್ಯ ಮಾಡುತ್ತದೆಯೋ ಆಗ ಬೇರೆ ಯಾವುದೂ ಪ್ರಭಾವ ಬೀರಲಾರದು. ಇದು ಹೇಗೆಂದರೆ ನ್ಯಾಯಕ್ಕೆ ವಿರುದ್ಧವಾಗಿ ಪಾಪ ಮಾಡಿದ್ದವನೊಬ್ಬನನ್ನು ಆತನ ತಾಯಿ-ತಂದೆಯರಾಗಲಿ, ಸೋದರ-ಸೋದರಿಯರಾಗಲಿ, ಬಂಧು-ಮಿತ್ರರಾಗಲಿ, ಕಾಪಾಡಲಾರರು. ಆತನು ಕಾನೂನಿನ ಬಲೆಗೆ ಪೂರ್ಣವಾಗಿ ಸಿಕ್ಕಿಕೊಂಡಿರುತ್ತಾನೆ ಮತ್ತು ಹೀಗೇಕೆ? ಏಕೆಂದರೆ ಹಿಂದೆ ಅತನು ಮಾಡಿದ ಕೃತ್ಯವೇ ಕಾರಣ. ಆದ್ದರಿಂದಾಗಿ ಕರ್ಮದ ಪ್ರಭಾವವು ಮಿಕ್ಕೆಲ್ಲಾ ಪ್ರಭಾವಗಳನ್ನು ದಾಟುತ್ತದೆ. ಕರ್ಮದ ಪ್ರಭಾವವು ತಡೆಯಲಾಗದ ಅಂತ್ಯವನ್ನು ತರುತ್ತದೆ. ಹೇಗೆ ಕಾಡ್ಗಿಚ್ಚು ಅರಣ್ಯದಲ್ಲಿ ಹಬ್ಬಿದಾಗ ಅದನ್ನು ಸಾವಿರ ಮಡಿಕೆಗಳಷ್ಟು ನೀರಿನಿಂದಲೂ ಆರಿಸಲಾಗದೋ, ಮಹಾಗ್ನಿಯೇ ಮಹಾ ಪ್ರಭಾವ ತೋರುವುದೋ, ಹಾಗೆಯೇ ಕರ್ಮದ ಪರಿಣಾಮವು, ಎಲ್ಲಾ ಇತರ ಪ್ರಭಾವಗಳಿಂದ ದಾಟಿರುತ್ತದೆ. ಕರ್ಮದ ಪ್ರಭಾವವು ತಡೆಯಲಾಗದಂತಹುದು. ಆದ್ದರಿಂದಲೆ ಮಹಾರಾಜ, ಪೂಜ್ಯ ಮಹಾ ಮೊಗ್ಗಲಾನರವರು ಮಹಾ ಇದ್ದಿ ಸಂಪನ್ನರಾಗಿದ್ದರೂ ಸಹಾ ಅದನ್ನು ಕರ್ಮದ ಪ್ರಭಾವದಿಂದಾಗಿ ಬಳಸಲು ಸಾಧ್ಯವಾಗಲಿಲ್ಲ.

ತುಂಬಾ ಚೆನ್ನಾಗಿ ಇದರ ಬಗ್ಗೆ ವಿವರಣೆ ನೀಡಿದ್ದೀರಿ ಭಂತೆ ನಾಗಸೇನ, ನಾನು ಇದನ್ನು ಒಪ್ಪುತ್ತೇನೆ.


2. ಧಮ್ಮವಿನಯ ಪಟಿಚ್ಛನ್ನ ಪನ್ಹೋ (ಧಮ್ಮವಿನಯದ ಪ್ರದರ್ಶನದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ತಥಾಗತರಿಂದ ನುಡಿಯಲ್ಪಟ್ಟ ಧಮ್ಮ ಮತ್ತು ವಿನಯವು ಪ್ರದಶರ್ಿಸಲ್ಪಟ್ಟಾಗ (ಹೇಳಿದಾಗ) ಮಾತ್ರ ಪ್ರಕಾಶಿಸುವುದು, ಗುಟ್ಟಾಗಿಟ್ಟರೆ ಇಲ್ಲ. ಆದರೆ ಇನ್ನೊಂದೆಡೆ ಪಾತಿಮೊಕ್ಖದ ಪಠಣೆಯಲ್ಲಿ ಹಾಗು ಇಡೀ ವಿನಯಪಿಟಿಕವು ರಹಸ್ಯವಾಗಿಯೇ ಇಡಲಾಗಿದೆ, ಅಡಗಿಸಿಡಲಾಗಿದೆ. ಹೀಗಿರುವಾಗ ಭಂತೆ ನಾಗಸೇನ, ನೀವು ಭಗವಾನರ ಬೋಧನೆಯನ್ನು ನ್ಯಾಯವಾಗಿಯೆ, ಯೋಗ್ಯವಾಗಿಯೆ, ಶ್ರದ್ಧೆಯಿಂದ ಪಾಲನೆ ಮಾಡುವವರಾಗಿದ್ದೀರಿ. ವಿನಯ ಪಿಟಕವನ್ನು ತೆರೆದ ವಿಷಯವನ್ನಾಗಿಸಿ, ಪ್ರಕಾಶಗೊಳಿಸಿ, ಹೀಗೆ ಮುಚ್ಚುಮರೆ ಏಕೆ? ಏಕೆಂದರೆ ಎಲ್ಲಾ ಬುದ್ಧಿವಾದಗಳು ಅದರಲ್ಲಿವೆ. ಶೀಲ, ಸಂಯಮ, ವಿಧೇಯತೆ, ನಿಯಮಗಳು, ಇವೆಲ್ಲಾ ಸತ್ಯದ ಸಾರಗಳಾಗಿವೆ ಹಾಗು ಚಿತ್ತವಿಶುದ್ಧಿ ನೀಡುವಂತಹದ್ದಾಗಿದೆ. ಆದರೆ ಭಗವಾನರು ಧಮ್ಮ, ವಿನಯವನ್ನು ತೆರೆದಿಡಿ ಆಗಲೇ ಅವು ಪ್ರಕಾಶಿಸುತ್ತವೆ ಎಂದು ಹೇಳಿರುವುದು ನಿಜವೇ ಆಗಿದ್ದರೆ, ಪಾತಿಮೊಕ್ಖದ ಪಠಣೆ ಮತ್ತು ಇಡೀ ವಿನಯಪಿಟಕದ ರಹಸ್ಯತೆಯು ಸುಳ್ಳಾಗುತ್ತದೆ. ಆದರೆ ಈ ರಹಸ್ಯತೆಯು ಸರಿ ಎಂದಾದ ಪಕ್ಷದಲ್ಲಿ ಭಗವಾನರ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (124)

ಓ ಮಹಾರಾಜ, ಭಗವಾನರು ಧಮ್ಮ ವಿನಯಗಳನ್ನು ಪ್ರಕಟಪಡಿಸಬೇಕು, ಆಗಲೇ ಅವು ಪ್ರಕಾಶಿಸುವದು, ಅದವನ್ನು ರಹಸ್ಯವಾಗಿಟ್ಟರೆ ಪ್ರಕಾಶಿಸುವುದಿಲ್ಲ ಎಂದು ಹೇಳಿರುವುದು ಸತ್ಯವೇ ಆಗಿದೆ. ಆದರೆ ಮತ್ತೊಂದೆಡೆ ಪಾತಿಮೊಕ್ಖದ ಪಠನೆ ಹಾಗು ಇಡೀ ವಿನಯಪಿಟಕವು ಗೃಹಸ್ಥರಿಂದ ರಹಸ್ಯವಾಗಿಡಲಾಗಿದೆ. ಏಕೆಂದರೆ ಅದರಿಂದಾಗಿ ಗೃಹಸ್ಥರಿಗೆ ಅಂತಹ ಪ್ರಯೋಜನ ಏನೂ ಇಲ್ಲ. ಅದು ಎಲ್ಲರಿಗಾಗಿ ಅಲ್ಲ, ಅದು ಭಿಕ್ಖುಗಳಿಗಾಗಿ. ಅವರಿಗಾಗಿ ಅದು ತೆರೆದೇ ಇದೆ. ಈ ರಹಸ್ಯತೆಗೆ ಸ್ವಲ್ಪವೇ ಮಿತಿಯಿದೆ ಮತ್ತು ಪಾತಿಮೋಕ್ಖದ ಪಠನೆಯನ್ನು ಮೂರು ಕಾರಣಗಳಿಂದಾಗಿ ಕೆಲಹಂತದವರೆಗೆ ರಹಸ್ಯವಾಗಿ ಇಡಲಾಗಿದೆ. ಅವೆಂದರೆ: ಒಂದನೆಯ ಕಾರಣವೇನೆಂದರೆ ಅದು ಹಿಂದಿನ ತಥಾಗತರಿಂದ ಬಂದ ಸಂಪ್ರದಾಯವಾಗಿದೆ. ಎರಡನೆಯದು ಧಮ್ಮದ ಗೌರವಕ್ಕಾಗಿ ಮತ್ತು ಮೂರನೆಯ ಕಾರಣವೇನೆಂದರೆ ಸಂಘದ ಸದಸ್ಯರ ಮೇಲಿನ ಗೌರವಕ್ಕಾಗಿ ಹೀಗೆ ಮಾಡಲಾಗಿದೆ.

ಓ ಮಹಾರಾಜ, ಮೊದಲನೆಯದು ಸಾರ್ವತ್ರಿಕ ಸಂಪ್ರದಾಯವಾಗಿದೆ. ಹಿಂದಿನ ಬುದ್ಧರೆಲ್ಲಾ ಪಾತಿಮೋಕ್ಖವನ್ನು ಸಂಘದ ಮಧ್ಯದಲ್ಲೇ ಪಠಿಸುತ್ತಿದ್ದರು. ಅಲ್ಲಿ ಪರರ ಪ್ರವೇಶ ನಿಷಿದ್ಧವಾಗಿತ್ತು. ಓ ರಾಜ, ಹೇಗೆಂದರೆ ಕ್ಷತ್ರಿಯ ಕುಲಗಳಲ್ಲಿ ಕ್ಷತ್ರಿಯ ಮಧ್ಯೆಯೇ ಅವರಲ್ಲಿಯೇ ಕ್ಷಾತ್ರವಿದ್ಯೆ ಹರಿಯುವಂತೆ, ಅವರಲ್ಲಿಯೇ ರಹಸ್ಯವಿನಿಯವು ಸಂಪ್ರದಾಯ ಹರಿಯುವಂತೆ, ಹಿಂದಿನ ಬುದ್ಧರಿಂದ ಬಂದ ಸಂಪ್ರದಾಯದಂತೆ ಪಾತಿಮೋಕ್ಖವನ್ನು ಬಿಕ್ಖುಗಳ ಮಧ್ಯೆಯೇ ಪಠಿಸುತ್ತಾರೆ. ಅವರಲ್ಲಿಯೇ ರಹಸ್ಯ ಹಂಚುತ್ತಾರೆ, ಪರರೊಂದಿಗೆ ಅಲ್ಲ. ಮತ್ತೆ ಓ ರಾಜ ಜನರಲ್ಲಿ ಕೆಲ ಪಂಗಡಗಳಿವೆ. ಅವರು ತಮ್ಮ ವರ್ಗದ ಜನರಲ್ಲಿ ಮಾತ್ರ ತಮ್ಮಲ್ಲಿ ಮಾತ್ರ ರಹಸ್ಯ ಹಂಚಿಕೊಳ್ಳುತ್ತಾರೆ, ಪರರೊಂದಿಗೆ ಅಲ್ಲ. ಅವರೆಂದರೆ: ಜಟ್ಟಿಗಳು, ದೊಂಬರಾಟದವರು, ಗಾರುಡಿಗರು, ನಟರು, ನರ್ತಕರು, ಸೂರ್ಯಚಂದ್ರ ಆರಾಧಕರು, ರಹಸ್ಯಪಂಥಿಯರು, ರಹಸ್ಯ ಪೂಜಕರು, ಪಿಸಾಚಪಂತಿಯರು, ಮಣಿಬದ್ರ, ಪುಣ್ಣಭದ್ರ, ಸಿರಿದೇವತಾ, ರಾಶಿದೇವತಾ, ಸಿವಾ (ಶಿವ), ವಸುದೇವ, ಧನಿಕಾ, ಆಸಿಪಾನ, ಭದ್ದಿಪುತ್ರ ಇತರರು ತಮ್ಮ ರಹಸ್ಯಗಳನ್ನು ಇತರರಿಗೆ ಹೇಳುವುದಿಲ್ಲ. ತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಅದರಂತೆಯೇ ತಥಾಗತರು ಸಹಾ ಹಿಂದಿನ ಬುದ್ಧ ಸಂಪ್ರದಾಯದಂತೆ ಕೇವಲ ಸಂಘದ ಮಧ್ಯೆಯೇ ಪಾತಿಮೊಕ್ಖ ಪಠಿಸುತ್ತಾರೆ. ಇದು ಹಿಂದಿನ ತಥಾಗತರ ಸಂಪ್ರದಾಯಕ್ಕೆ ಅನುಸಾರವಾಗಿದೆ.

ಮತ್ತೆ ಧಮ್ಮಕ್ಕೆ ಗೌರವಿಸುವಂತೆ ಹೇಗೆ ಪಾತಿಮೋಕ್ಖವನ್ನು ಪಠಿಸುತ್ತಾರೆ? ಓ ಮಹಾರಾಜ, ಧಮ್ಮವು ಅತ್ಯಂತ ಪೂಜ್ಯಾರ್ಹವು ಹಾಗು ಘನವಾದುದು. ಯಾರು ಶ್ರೇಷ್ಠವಾದುದನ್ನು ಪ್ರಾಪ್ತಿ ಮಾಡಿರುವನೋ ಆತನು ಪರರಿಗೆ ಹೀಗೆ ಬುದ್ಧಿವಾದ ನೀಡಬಹುದು. ಹೇಗೆಂದರೆ : ಈ ಧಮ್ಮವು ಪೂರ್ಣಸತ್ಯದಿಂದ ಇರದಿದ್ದರೆ, ಮಹಾ ಶ್ರೇಷ್ಠರು ಅಲ್ಲದಿದ್ದರೆ, ಇದು ಅಕುಶಲದ, ಅಪಾರಂಗತರ ಕೈಗೆ ಬಿದ್ದು ಬಿಡುತ್ತಿತ್ತು. ನಂತರ ಕೀಳಾಗಿ ಕಾಣಲ್ಪಡುತ್ತಿತ್ತು, ನಿಂದಿಸಲ್ಪಡುತ್ತಿತ್ತು, ಲಜ್ಜೆಗೀಡಾಗುತ್ತಿತ್ತು, ಆಟವಾಗುತ್ತಿತ್ತು, ತಪ್ಪಾಗಿ ಪ್ರತಿಪಾದಿಸಲ್ಪಡುತ್ತಿತ್ತು. ಅಥವಾ ವಂಚಕರ ಕೈಗೆ ಸಿಲುಕಿ ಎಲ್ಲಾರೀತಿಯಲ್ಲಿಯೂ ಕೆಟ್ಟದಾಗಿ ವ್ಯವಹರಿಸಲ್ಪಡುತ್ತಿತ್ತು. ಆದ್ದರಿಂದ ಓ ಮಹಾರಾಜನೆ, ಪಾತಿಮೋಕ್ಖದ ಪಠಣೆಯು ಭಿಕ್ಖುಗಳಲ್ಲಿ ಮಾತ್ರ ನಡೆಯುತ್ತದೆ. ಏಕೆಂದರೆ ಧಮ್ಮವನ್ನು ಗೌರವಿಸುವುದಕ್ಕಾಗಿ, ಇಲ್ಲದಿದ್ದರೆ ಸಾವಕ ನಗರದಲ್ಲಿ ಕೆಂಪು ಶ್ರೀಗಂಧವು ಶ್ರೇಷ್ಠವಾಗಿದ್ದರೂ, ಮೌಲ್ಯಾಯುತ ವಾಗಿದ್ದರೂ ಕೀಳಾಗಿ, ನಿಂದನಿಯವಾಗಿ, ಲಜ್ಞೆಗೀಡಾಗುವಂತೆ, ಆಟದಂತೆ ವ್ಯವಹರಿಸುವಂತೆ ಆಗಿಹೋಗುತ್ತದೆ.

ಮತ್ತೆ ಹೇಗೆ ಪಾತಿಮೋಕ್ಖವು ಸಂಘದ ಸದಸ್ಯರ ಗೌರವಾರ್ಥಕವಾಗಿ, ರಹಸ್ಯವಾಗಿ, ಪಠಿಸುತ್ತಾರೆ? ಓ ಮಹಾರಾಜ, ಭಿಕ್ಖುವಿನ ಸ್ಥಿತಿಯು, ಭವ್ಯತೆಯು, ಯಾವುದೇ ಲೆಕ್ಕಾಚಾರಕ್ಕೆ ಅತೀತವಾಗಿದೆ. ಯಾವುದೇ ಅಳತೆಗೆ ಅತೀತವಾಗಿದೆ ಅಥವಾ ಯಾವುದೇ ಬೆಲೆಗೆ ಅತೀತವಾಗಿದೆ. ಯಾರು ಅವರನ್ನು ಮೌಲ್ಯ ಮಾಡಲಾರರು, ತೂಗಿಸಲಾರರು, ಅಳೆಯಲಾರರು ಮತ್ತು ಪಾತಿಮೋಕ್ಖವನ್ನು ಭಿಕ್ಖುಗಳ ನಡುವೆಯಲ್ಲಿ ಮಾತ್ರ ಪಠಿಸುವರು. ಇಲ್ಲದೇ ಹೋದರೆ ಸಾಧಾರಣ ವ್ಯಕ್ತಿ ಆ ಸ್ಥಿತಿಗೆ ಹೋದರೆ ಆತನು ಪ್ರಾಪಂಚಿಕರ ಕೆಳಹಂತಕ್ಕೆ ಅದು ತಂದುಬಿಡುತ್ತಾನೆ. ಓ ರಾಜ, ಇದು ಹೇಗೆಂದರೆ ಯಾವುದೇ ಅತ್ಯಮೂಲ್ಯ ವಸ್ತುವಾಗಲಿ, ವಸ್ತ್ರವಾಗಲಿ, ರತ್ನಗಂಬಳಿಯಾಗಲಿ, ಗಜವಾಗಲಿ, ಅಶ್ವವಾಗಲಿ, ಚಿನ್ನವಾಗಲಿ, ಬೆಳ್ಳಿಯಾಗಲಿ ಅಥವಾ ರತ್ನವಾಗಲಿ, ಮುತ್ತಾಗಲಿ, ಸ್ತ್ರೀಯಾಗಲಿ, ಪಾನಿಯವಾಗಲಿ, ಅಂತಹ ವಸ್ತುವಿಶೇಷಗಳೆಲ್ಲಾ ರಾಜನಿಗೆ ಮೀಸಲಾಗಿರುತ್ತದೆ. ಹಾಗೆಯೇ ಯಾವೆಲ್ಲಾ ಅತ್ಯಮೂಲ್ಯ ಶಿಕ್ಷಣವಾಗಲಿ, ಬುದ್ಧ ಸಂಪ್ರದಾಯವಾಗಲಿ, ಕಲಿಕೆಯಾಗಲಿ, ಚಾರಿತ್ರ್ಯವಾಗಲಿ, ಸದ್ಗುಣಗಳಾಗಲಿ, ಸಂಯಮವಾಗಲಿ, ಇವೆಲ್ಲಾ ಸಂಘಕ್ಕೆ ಮೀಸಲಾಗಿದೆ. ಆದ್ದರಿಂದಾಗಿಯೇ ಪಾತಿಮೋಕ್ಖವನ್ನು ರಹಸ್ಯವಾಗಿ ನಡೆಸಲಾಗುತ್ತದೆ.

ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನಾ! ಇದು ಹೀಗಿರುವುದರಿಂದಾಗಿ ನೀವು ಹೇಳಿದ್ದನ್ನು ನಾನು ಒಪ್ಪುವೆ.

3. ಮುಸುವಾದ ಗರೂಲಹುಬಾವ ಪನ್ಹೊ (ಸುಳ್ಳಿನ ಬಗ್ಗೆ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ, ಏನೆಂದರೆ ಇಚ್ಛಾಪೂರ್ವಕ ಸುಳ್ಳು ಪಾಚಿತ್ತಿಯಾ (ದೊಡ್ಡ) ತಪ್ಪಾಗುತ್ತದೆ. ಆದರೆ ಮತ್ತೆ ಅವರು ಹೀಗೂ ಹೇಳಿದ್ದಾರೆ: ಭಿಕ್ಷುವು ಇಚ್ಛಾಪೂರ್ವಕ ಸುಳ್ಳು ಹೇಳಿದರೂ ಆತನು ಸಂಘದ ಭಿಕ್ಷುಗಳೊಂದಿಗೆ ಅದನ್ನೊಪ್ಪಿ ಸಂಯಮ ತಾಳಿದರೆ ಅದು ಚಿಕ್ಕ ತಪ್ಪಾಗುತ್ತದೆ. ಈಗ ಹೇಳಿ ಭಂತೆ ನಾಗಸೇನ, ಇಲ್ಲಿ ಯಾವ ಭಿನ್ನತೆಯಿದೆ, ಯಾವ ಕಾರಣದಿಂದಾಗಿ ಇಲ್ಲಿ ಭಿಕ್ಖು ಸುಳ್ಳು ಹೇಳಿದರೆ ಅವನಿಗೆ ಸಂಘದಿಂದ ಹೊರಹಾಕಲಾಗುತ್ತದೆ. ಆದರೆ ಮತ್ತೊಂದೆಡೆ ಆತನು ಸುಳ್ಳು ಹೇಳಿದರೂ ಪ್ರಾಯಶ್ಚಿತ್ತದ ಪರಿಹಾರವಿದೆ. ಇಲ್ಲಿ ಮೊದಲ ನಿಧರ್ಾರ ಸರಿಯಾಗಿದ್ದರೆ, ಎರಡನೆಯದು ತಪ್ಪಾಗುತ್ತದೆ, ಆದರೆ ಎರಡನೆಯದು ಸರಿಯಾಗಿದ್ದರೆ, ಮೊದಲನೆಯದು ತಪ್ಪಾಗುತ್ತದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ ಮತ್ತು ನೀವೇ ಇದನ್ನು ಪರಿಹರಿಸಬೇಕು. (125)

ಓ ಮಹಾರಾಜ, ನೀವು ಹೇಳಿದಂತಹ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ಸುಳ್ಳು ಎನ್ನುವುದು ಹಗುರವಾದ ಅಥವಾ ಭಾರವಾದ ತಪ್ಪು ಎನ್ನುವುದು ವಸ್ತು ವಿಷಯದ ಮೇಲೆ ಅವಲಂಬಿತವಾಗುತ್ತದೆ. ಇದರ ಬಗ್ಗೆ ನೀವು ಏನು ಯೋಚಿಸುವಿರಿ ಮಹಾರಾಜ? ಒಬ್ಬನು ಮತ್ತೊಬ್ಬನಿಗೆ ಕೆನ್ನೆಗೆ ಹೊಡೆದರೆ ನೀವು ಯಾವ ಶಿಕ್ಷೆಯನ್ನು ಆತನಿಗೆ ನೀಡುವಿರಿ?

ಮತ್ತೊಬ್ಬನು ಉದಾಸೀನ ಮಾಡಿದಿದ್ದಾಗ, ಆತನಿಗೆ ಕ್ಷಮಿಸದೆ ಸ್ವಲ್ಪ ಹಣ ನೀಡುವಂತೆ ದಂಡ ಹಾಕುವೆವು.

ಮಹಾರಾಜ ಊಹಿಸಿ, ಆ ವ್ಯಕ್ತಿಯು ನಿಮಗೆ ಆ ಹೊಡೆತ ನೀಡಿದಾಗ ಆತನಿಗೆ ಯಾವ ಶಿಕ್ಷೆ ವಿಧಿಸುವಿರಿ?

ಆತನ ಕೈಗಳನ್ನು ಕತ್ತರಿಸುವೆವು, ಚರ್ಮ ಸುಲಿಯುವೆವು, ಮನೆಯನ್ನು ಮುಟ್ಟುಗೋಲು ಹಾಕಿ, ಆತನ ಮನೆಯವರ ಏಳು ತಲೆಮಾರಿನತನಕ ಮರಣ ಶಿಕ್ಷೆ ವಿಧಿಸುವೆವು.

ಓ ಮಹಾರಾಜ, ಈ ಭಿನ್ನತೆಯೇಕೆ? ಒಬ್ಬನಿಗೆ ಹೊಡೆದಾಗ ಪುಡಿಗಾಸು ನೀಡುವಂತೆ ಜುಲ್ಮಾನೆ, ನಿಮಗೆ ಹೊಡೆದಾಗ ಈ ಭೀಕರ ಶಿಕ್ಷೆಯೇಕೆ?

ಏಕೆಂದರೆ ಅದು ವ್ಯಕ್ತಿಗಳನ್ನು ಅವಲಂಬಿಸುತ್ತದೆ.

ಇದು ಸಹಾ ಹಾಗೆಯೇ ಮಹಾರಾಜ, ಸುಳ್ಳು ಹೇಳುವುದು ಹಗುರವಾದ ಅಥವಾ ಭಾರವಾದ ಪಾಪ ಎನ್ನುವುದು ವಸ್ತು ವಿಷಯದ ಮೇಲೆ, ಪರಿಸ್ಥಿತಿಯ ಮೇಲೆ ನಿರ್ಧರಿಸುತ್ತದೆ.

ಒಳ್ಳೆಯದು ನಾಗಸೇನ, ಇದು ಹೀಗೆಯೇ ಇದೆ, ನೀವು ಹೇಳಿದ್ದನ್ನು ನಾನು ಒಪ್ಪುವೆ.

4. ಬೋಧಿಸತ್ತ ಧಮ್ಮತಾ ಪನ್ಹೊ (ಬೋಧಿಸತ್ವರ ಧಮ್ಮದ ಬಗೆಗಿನ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಧಮ್ಮತಾ-ಧಮ್ಮ ಪರಿಯಾಯೆ (ಸಾರವಾದ ಸ್ಥಿತಿಗಳ) ಬಗ್ಗೆ ಹೀಗೆ ಪ್ರವಚನ ನೀಡಿದ್ದರು: ಬಹಳ ಕಾಲದ ಹಿಂದೆಯೇ ಪ್ರತಿ ಬೋಧಿಸತ್ವರ ತಂದೆ-ತಾಯಿಗಳು ನಿಗಧಿತಪಟ್ಟಿರುತ್ತಾರೆ, ಅವರೇ ಹಿಂದೆಯೇ ಯಾವ ಬೋಧಿವೃಕ್ಷ ಬೇಕು ಎಂದು ಆರಿಸಿರುತ್ತಾರೆ. ಹಾಗೆಯೇ ಪ್ರಧಾನ ಭಿಕ್ಖುಗಳು, ಪುತ್ರ, ಸಂಘದ ಸದಸ್ಯರಲ್ಲಿ ವಿಶೇಷ ಪರಿಚಾರಕ ಅನುಪರ, ಇವರೆಲ್ಲರೂ ಹಿಂದೆಯೇ ಖಚಿತಪಟ್ಟಿರುತ್ತಾರೆ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಬೋಧಿಸತ್ವರು ತುಸಿತಾ ದೇವಲೋಕದಲ್ಲಿ ಇದ್ದಾಗ ಎಂಟು ಮಹಾ ಅನ್ವೇಷಣೆಗಳನ್ನು ಕೈಗೊಳ್ಳುತ್ತಾರೆ. ಅದೆಂದರೆ, ಕಾಲದ ಅನ್ವೇಷಣೆ (ಮಾನವನಾಗಿ ಜನಿಸಲು ಯೋಗ್ಯಕಾಲ), ಖಂಡದ (ಸ್ಥಳದ) ಅನ್ವೇಷಣೆ, ವಂಶದ ಅನ್ವೇಷಣೆ, (ಜನ್ಮಿಸಲು ಯೋಗ್ಯ ಕುಲ), ತಾಯಿಯ ಅನ್ವೇಷಣೆ (ಜನ್ಮಿಸಲು ಯೋಗ್ಯ ತಾಯಿ), ಗಭರ್ಾವಸ್ಥೆಯಲ್ಲಿ ಉಳಿಯುವ ಕಾಲದ ನಿಧರ್ಾರ, ಹೊರಬರುವ ಮಾಸದ ನಿಧರ್ಾರ ಮತ್ತು ಮಹಾ ಅಭಿನಿಷ್ಕ್ರಮಣದ ಕಾಲದ ನಿಧರ್ಾರ. ಈಗ ಭಂತೆ ನಾಗಸೇನ, ಜ್ಞಾನವು ಪಕ್ವವಾಗುವ ಮುನ್ನ ಅರಿಯುವಿಕೆಯಿಲ್ಲ, ಆದರೆ ಯಾವಾಗ ಜ್ಞಾನ ಶಿಖರವೇರುವೆವೋ ಆ ವಿಷಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಸರ್ವಜ್ಞತಾ ದೃಷ್ಟಿ ವೈಶಾಲ್ಯತೆಗೆ ಹೊರತಾದುದು ಯಾವುದು ಇಲ್ಲ. ಹಾಗಿರುವಾಗ ಬೋಧಿಸತ್ವರು ಏಕೆ ಹೀಗೆ ಕಾಲದ ನಿರ್ಣಯ ಮಾಡಬೇಕು: ಯಾವಾಗ ಜನ್ಮಿಸಲಿ? ಆದೇರೀತಿಯಲ್ಲಿ ಏಕೆ ಅವರು ಕುಲದ ಬಗ್ಗೆ ಹೀಗೆ ಚಿಂತಿಸಬೇಕು: ಯಾವ ಕುಲದಲ್ಲಿ ನಾನು ಜನ್ಮಿಸಲಿ? ನಾಗಸೇನರವರೇ ಬೋಧಿಸತ್ವರ ತಂದೆ-ತಾಯಿಗಳು ಮೊದಲೇ ನಿಗದಿತಪಟ್ಟಿದ್ದರೆ, ಹೀಗೆ ಅವರು ತಂದೆ-ತಾಯಿಗಳ ಅನ್ವೇಷಣೆ ಮಾಡಬೇಕಿಲ್ಲ. ಹೀಗಾಗಿ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇಲ್ಲವೇ ಎರಡನೆಯ ಹೇಳಿಕೆ ಸತ್ಯವಾಗಿದ್ದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ, ನಿಮಗೆ ಹಾಕುತ್ತಿದ್ದೇನೆ ಬಿಡಿಸಿ. (126)

ಓ ಮಹಾರಾಜ, ಇವೆರಡು ನೆಲೆಗೊಂಡ ವಿಷಯಗಳಾಗಿವೆ? ಯಾರು ಬೋಧಿಸತ್ವರ ತಂದೆ-ತಾಯಿಗಳು, ಯಾವ ಕುಲದಲ್ಲಿ ತಾನು ಹುಟ್ಟಬೇಕು? ಆದರೆ ಇದನ್ನು ಹೇಗೆ ಅವರು ಕಂಡುಹಿಡಿದರು? ಬೋಧಿಸತ್ವರು ಇದರ ಬಗ್ಗೆ ಗಮನಿಸುತ್ತಾರೆ. ತನ್ನ ತಾಯ್ತಂದೆಯರು ಕ್ಷತ್ರಿಯರೆ ಅಥವಾ ಬ್ರಾಹ್ಮಣರೇ? ಎಂಟು ವಿಷಯಗಳಿಗೆ ಅನುಗುಣವಾಗಿ ಈ ಅನ್ವೇಷಣೆ ನಡೆಯುವುದು. ಓ ಮಹಾರಾಜ, ಒಬ್ಬ ವರ್ತಕನು ತಾನು ಕೊಳ್ಳಲಿರುವ ವಸ್ತುಗಳನ್ನು ಪರೀಕ್ಷಿಸುತ್ತಾನೆ. ಅಥವಾ ಒಂದು ಆನೆಯು ತಾನು ಹೋಗಲಿರುವ ದಾರಿಯನ್ನು ಸೊಂಡಿಲಿನಿಂದ ಪರೀಕ್ಷಿಸುತ್ತದೆ ಅಥವಾ ಒಬ್ಬ ಬಂಡಿಗಾರನು ತಾನು ದಾಟುವ ಹೊಳೆಯನ್ನು ಮೊದಲು ಇಳಿದು ಪರೀಕ್ಷಿಸಿ ನಂತರ ಹೋಗುತ್ತಾನೆ. ಹಾಗೆಯೇ ನಾವಿಕನು ದಡವನ್ನು ದೂರದಿಂದಲೇ ಪರೀಕ್ಷಿಸಿ ನಂತರ ಎಲ್ಲರಿಗೂ ಇಳಿಯುವಂತೆ ಸೂಚಿಸಿ ದಡಕ್ಕೆ ಹಡಗನ್ನು ಸಾಗಿಸುತ್ತಾನೆ. ಅಥವಾ ಹಾಗೆಯೇ ವೈದ್ಯನು ರೋಗಿಯನ್ನು ಆರೈಕೆ ಮಾಡುವ ಮುನ್ನ ಆತನು ಎಷ್ಟುಕಾಲ ಜೀವದಿಂದಿರಬಲ್ಲ ಎಂದು ಅಂದಾಜು ಮಾಡುತ್ತಾನೆ ಅಥವಾ ದಾರಿಹೋಕನು ತಾನು ದಾಟುವ ಬಿದಿರಿನ ಶಕ್ತಿಯನ್ನು ಪರೀಕ್ಷಿಸುತ್ತಾನೆ. ಹಾಗೆಯೇ ಭಿಕ್ಷುವು ತನ್ನ ಆಹಾರಕ್ಕಾಗಿ ಎಷ್ಟು ದೂರ ನಡೆಯಬೇಕೆಂದು ಅಂದಾಜು ಮಾಡುತ್ತಾನೆ. ಅದೇರೀತಿಯಲ್ಲಿಯೇ ಬೋಧಿಸತ್ವರು ಸಹಾ ಯಾವಾಗ, ಯಾವ ಕುಲದಲ್ಲಿ ಜನಿಸಬೇಕೆಂದು ಪರೀಕ್ಷಿಸುತ್ತಾರೆ. ಇವೇ ಕಾರ್ಯ ಪೂರ್ವದಲ್ಲಿ ಅನ್ವೇಷಿಸತಕ್ಕ ಎಂಟು ಸಂದರ್ಭಗಳಾಗಿವೆ.
ತುಂಬಾ ಒಳ್ಳೆಯದು ಭಂತೆ ನಾಗಸೇನ, ಅದು ಹೀಗಿರುವುದರಿಂದ ನೀವು ಹೇಳಿದ್ದನ್ನು ನಾನು ಒಪ್ಪುವೆ.

5. ಅತ್ತನಿಪಾತನ ಪನ್ಹೊ (ಸ್ವ-ಹತ್ಯೆಯ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಷುಗಳೇ, ಯಾರು ಸಹಾ ಸ್ವ-ಹತ್ಯೆ ಮಾಡಿಕೊಳ್ಳಬಾರದು. ಯಾರಾದರೂ ಹಾಗೆ ಪ್ರಯತ್ನಿಸಿದರೆ, ಅವರು ನಿಯಮದಂತೆ ವ್ಯವಹರಿಸಬೇಕಾಗುವುದು. ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಭಗವಾನರು ಯಾವುದೆಲ್ಲಾ ವಿಷಯಗಳ ಬಗ್ಗೆ ಹೇಳಲಿ, ಹಲವಾರು ಉಪಮೆಗಳ ಮೂಲಕ ಸದಾ ಜನ್ಮ, ಜರಾ, ಚರೆ, ಮೃತ್ಯಗಳ ನಾಶದ ಬಗ್ಗೆಯೇ ಹೇಳುತ್ತಾರೆ ಮತ್ತು ಯಾರು ಜನ್ಮ, ಜರಾ, ಚರೆ, ಮೃತ್ಯುವನ್ನು ದಾಟಿರುವನೋ ಆತನು ಅತ್ಯಂತ ಶ್ರೇಷ್ಠಿತಮನಾಗಿ ಶ್ಲಾಘಿಸಲ್ಪಡುತ್ತಾನೆ. ಈಗ ಹೇಳಿ ಇಲ್ಲಿ ಭಗವಾನರು ಸ್ವ-ಹತ್ಯೆಯು ತಪ್ಪೆಂದು ಹೇಳಿ ನಿಷಿದ್ಧಗೊಳಿಸಿದ್ದಾರೆ, ಆದರೆ ಹೀಗಿಲ್ಲದಿದ್ದರೆ ಸ್ವ-ಹತ್ಯೆಯ ನಿಷೇಧ ತಪ್ಪಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (127)

ಓ ಮಹಾರಾಜ, ಭಗವಾನರಿಂದ ನಿಯಮಿಸಲ್ಪಟ್ಟ ನಿಯಮ ಸರಿಯಾಗಿಯೇ ಇದೆ. ಹಾಗೆಯೇ ಜನ್ಮ-ಮರಣದಿಂದ ದಾಟಲಿ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಇವೆರಡಕ್ಕೂ ಕಾರಣವಿದೆ.

ಭಂತೆ ನಾಗಸೇನ, ಇದಕ್ಕೆ ಕಾರಣವೇನು?

ಓ ಮಹಾರಾಜ, ಶೀಲವಂತನು, ಶೀಲಸಂಪನ್ನನು ಮಾನವರಿಗೆ ಔಷಧಿಯ ರೀತಿಯಾಗಿದ್ದಾನೆ. ಪಾಪವಿಷಕ್ಕೆ ಪ್ರತ್ಯೌಷಧವಾಗಿದ್ದಾನೆ. ಧೂಳಿನಲ್ಲಿ ಬಿದ್ದವರಿಗೆ ನೀರಿನಂತಿದ್ದಾನೆ, ಪಾಪಶುದ್ಧಕನಾಗಿದ್ದಾನೆ, ಸರ್ವಸಂಪತ್ತು ನೀಡುವ ಮಣಿರತನವಾಗಿದ್ದಾನೆ ಮತ್ತು ಪ್ರವಾಹದಿಂದ ದಾಟಿಸುವ ನಾವಿಕನಾಗಿದ್ದಾನೆ, ಮರುಭೂಮಿಯಿಂದ ಪಾರಾಗಿಸುವ ಮಾರ್ಗದಶರ್ಿಯಾಗಿದ್ದಾನೆ, ಜನರ ಹೃದಯಕ್ಕೆ ತೃಪ್ತಿನೀಡುವ ಮಹಾಮಳೆ ಮೋಡವಾಗಿದ್ದಾನೆ, ಸಕಲ ಒಳಿತು ನೀಡುವ ಗುರುವಾಗಿದ್ದಾನೆ, ಶಾಂತಿಪಥ ತೋರಿಸುವ ಮಾರ್ಗದಶರ್ಿಯಾಗಿದ್ದಾನೆ. ಹೀಗೆ ಸಂಘದಲ್ಲಿ ಬಹುಗುಣಗಳಿಂದ, ಅನೇಕ ಗುಣಗಳಿಂದ ಅಪ್ರಮಾಣ ಗುಣಗಳಿಂದ ಗುಣರಾಶಿ, ಗುಣಪುಂಜ, ಗುಣನಿಧಿಯು ಆಗಿರುವನು. ಹೀಗಾಗಿ ಆತನು ಬಹುಜನರ ಹಿತಸುಖಕ್ಕಾಗಿ ಹಾಗೆ ಮಾಡಿಕೊಳ್ಳಬಾರದು. ಆದ್ದರಿಂದ ಓ ರಾಜ, ಸರ್ವಜನ ಹಿತಕ್ಕಾಗಿಯೇ ಭಗವಾನರು ಹೀಗೆ ಹೇಳಿರುವರು.

ಓ ಭಿಕ್ಷುಗಳೆ, ಸೋದರನು ಸ್ವ-ಹತ್ಯೆ ಮಾಡಿಕೊಳ್ಳಬಾರದು. ಹಾಗೆ ಯಾರಾದರೂ ಮಾಡಿದರೆ, ನಿಯಮದಂತೆ ವ್ಯವಹರಿಸಬೇಕಾಗುವುದು.


ಇದರಿಂದಾಗಿ ಭಗವಾನರು ಸ್ವಹತ್ಯೆಯನ್ನು ನಿಷೇಧಿಸಿದರು ಮತ್ತು ಓ ಮಹಾರಾಜ, ಥೇರ ಕುಮಾರ ಕಸ್ಸಪರವರು ಪಾಯಾಸಿ ರಾಜನ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ: ಎಲ್ಲಿಯವರೆಗೆ ಸಮಣ ಬ್ರಾಹ್ಮಣರು ಶೀಲವಂತರಾಗಿ, ಕಲ್ಯಾಣಧಮ್ಮವನ್ನು ಚಿರಕಾಲ, ದೀರ್ಘವಾಗಿ ಆಚರಿಸುವರೋ ಅಲ್ಲಿಯವರೆಗೆ ಅವರು ಬಹುಜನಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪಕ್ಕಾಗಿ, ಅರ್ಥಕ್ಕಾಗಿ, ದೇವತೆಗಳ, ಮನುಷ್ಯರ ಸುಖ, ಹಿತಕ್ಕಾಗಿ ಒಳಿತನ್ನೇ ಮಾಡುವರು.

ಮತ್ತೆ ಓ ಮಹಾರಾಜ, ಯಾವ ಕಾರಣಕ್ಕಾಗಿ ಭಗವಾನರು ಜನನ-ಮರಣದ ಅಂತ್ಯಕ್ಕಾಗಿ ಪ್ರೇರಣೆ ನೀಡಿದರು? ಓ ಮಹಾರಾಜ, ಜನ್ಮವು ದುಃಖಕರ, ಹಾಗೆಯೇ ಜರೆ, ಜರಾ, ಮೃತ್ಯುವು ಸಹಾ ನೋವು, ಪ್ರಲಾಪ, ಖಿನ್ನತೆ, ವಿಷಾದ ಇವೆಲ್ಲವೂ ದುಃಖವಾಗಿದೆ. ಹಾಗೆಯೇ ಅಪ್ರಿಯವಾದುದರ ಸಮಾಗಮ, ಪ್ರಿಯವಾದುದರ ವಿಯೋಗವು ಸಹಾ ದುಃಖಕಾರಿಯೇ ಅಗಿದೆ. ತಾಯಿಯ ಮೃತ್ಯು ಅಥವಾ ತಂದೆಯ ಅಥವಾ ಸೋದರನ, ಸೋದರಿಯ, ಪುತ್ರನ ಅಥವಾ ಪುತ್ರಿಯ ಅಥವಾ ಪತ್ನಿಯ ಅಥವಾ ಬಂಧುವಿನ ಮೃತ್ಯುವು ದುಃಖವೇ ಆಗಿದೆ. ತನ್ನ ಕುಟುಂಬದ ಅವನತಿಯು ದುಃಖವೇ, ರೋಗದ ದುಃಖ, ಧನಹಾನಿಯ ದುಃಖ, ಒಳ್ಳೆಯತನ ಕ್ಷೀಣತೆ ದುಃಖ, ಬುದ್ಧಿನಾಶವು ದುಃಖ, ನಿರಂಕುಶ ರಾಜರಿಂದ ಅಥವಾ ಡಕಾಯಿತರಿಂದ ಅಥವಾ ಶತ್ರುಗಳಿಂದ ಅಥವಾ ಬರಗಾಲದಿಂದ ಅಥವಾ ಅಗ್ನಿಯಿಂದ ಅಥವಾ ಪ್ರವಾಹದಿಂದ ಅಥವಾ ಅಲೆಗಳಿಂದ ಅಥವಾ ಭೂಕಂಪದಿಂದ ಅಥವಾ ಮೊಸಳೆಗಳಿಂದ ಅಥವಾ ಮಕರಗಳಿಂದ ಉಂಟಾಗುವ ಭೀತಿಯು ದುಃಖವೇ. ಹಾಗೆಯೇ ನಿಂದಾಭಯ, ಪರನಿಂದಾಭಯ, ಶಿಕ್ಷೆಯ ಭಯ, ದೌಭರ್ಾಗ್ಯದ ಭಯಗಳು ಸಹಾ ದುಃಖವೇ. ಸಭಾಲಜ್ಜಾ ಭಯ, ಜೀವನೋಪಾಯದ ಚಿಂತಾಭಯ, ಮರಣಭಯ, ಅಪರಾಧಿಗಳ ಶಿಕ್ಷೆಯು ಬಾರಿ ದುಃಖವೇ ಆಗಿದೆ. ಅದೆಂದರೆ ಚಾಟಿಯ ಹೊಡೆತ, ದೊಣ್ಣೆಗಳ ಹೊಡೆತ, ಹೊಳು ಸಲಾಕಿಯ ಹೊಡೆತ, ಕೈಗಳನ್ನು ಕತ್ತರಿಸುವಿಕೆ, ಕಾಲುಗಳನ್ನು ಕತ್ತರಿಸುವಿಕೆ, ಕಿವಿಗಳನ್ನು, ಮೂಗನ್ನು ಕತ್ತರಿಸುವಿಕೆ, ಬಿಸಿಯಾದ ಗಂಜಿ ಸುರಿಯುವಿಕೆ, ಚರ್ಮ ಸುಲಿಯುವಿಕೆ, ರಾಹು ಮುಖ (ಬಾಯಲ್ಲಿ ಎಣ್ಣೆ ಸುರಿದು ಉರಿಸುವಿಕೆ), ಬೆಂಕಿಯಹಾರ, ಬೆಂಕಿಯ ಉಡುಪು, ಹಾವಿನ ಚರ್ಮದ ನಕ್ಷೆಯಂತೆ ಚರ್ಮ ಸುಲಿಯುವುದು, ಚರ್ಮ ಸುಲಿದು ತೊಗಟೆ ಮೆತ್ತಿಸುವುದು, ಜಿಂಕೆಯ ಮಚ್ಚೆಯಂತೆ ಚರ್ಮಕ್ಕೆ ಬರೆ ಎಳೆಯುವುದು, ಚರ್ಮಕ್ಕೆ ಉಕ್ಕಿನ ಕೊಂಡಿಗಳನ್ನು ಹಾಕುವುದು, ನಾಣ್ಯದಷ್ಟು ಮಾಂಸ ಕೀಳುವುದು, ಮಾಂಸ ತೆಗೆದು ಕ್ಷಾರ ಸುರಿಯುವುದು, ಕಿವಿಗೆ ಸಲಾಕೆ ಚುಚ್ಚಿ ತಿರುಗಿಸುವುದು, ಮೂಳೆಗಳನ್ನು ಮುರಿದು ಹುಲ್ಲಿನಂತೆ ಮಾಡುವುದು, ಬಿಸಿಯಾದ ಎಣ್ಣೆ ಹಾಕುವುದು, ನಾಯಿಗಳಿಂದ ಕಚ್ಚಿಸುವುದು, ಜೀವಂತವಾಗಿ ಹೂಳುವುದು, ಮರಣದಂಡನೆ, ಈ ರೀತಿಯ ದುಃಖ ನೋವುಗಳನ್ನು ಓ ಮಹಾರಾಜ, ಜನ್ಮದಿಂದ ಜನ್ಮಕ್ಕೆ ತಿರುಗಿ ತಿರುಗಿ ಅನುಭವಿಸಬೇಕಾಗುತ್ತದೆ. ಹೇಗೆಂದರೆ ಓ ಮಹಾರಾಜ, ಮಳೆಯ ನೀರು ಹಿಮಾಲಯದಿಂದ ಹರಿಯುತ್ತ, ಗಂಗೆಗೆ ಸೇರಿ, ಅಲ್ಲಿಂದ ಬಂಡೆಗಳು, ಕಲ್ಲುಗಳು, ಮರಳಿನಿಂದ ತೂರಿ, ಸರಳುಗಳು, ಜಲಾವೃತಗಳಿಂದ ತೀವ್ರವಾಗಿ ಹರಿಯುತ್ತ, ಕಾಂಡ, ಮರಗಳಿಂದ ತಡೆಯುತ್ತ, ಹರಿಯುತ್ತಿರುತ್ತದೆ. ಅದೇರೀತಿ ಜನ್ಮ ಪುನರ್ಜನ್ಮ ತಾಳುತ್ತ ನಾನಾರೀತಿಯ ನೋವು ದುಃಖಗಳನ್ನು ಮಾನವ ಪಡೆಯುತ್ತಿರುತ್ತಾನೆ. ಪೂರ್ಣ ನೋವು, ನಂತರ ನಿರಂತರ ಪುನರ್ಜನ್ಮಗಳು, ಅಲ್ಲಲ್ಲಿ ಸ್ವಲ್ಪ ಸುಖಗಳು, ಹೀಗೆಯೇ ಸಾಗುತ್ತಿರುತ್ತದೆ. ಓ ಮಹಾರಾಜ, ಭಗವಾನರು ಈ ಜನನ ಮರಣದ ವಲಯದಿಂದ ಆಚೆ ಹೋಗುವಂತೆ, ಪಾರಾಗುವಂತೆ ಪ್ರೇರಣೆ ನೀಡುತ್ತಾರೆ. ಹೇಗೆಂದರೆ ಅಂತಿಮ ಸಾಕ್ಷಾತ್ಕಾರ ಪಡೆದು ಜನ್ಮಗಳ ಅಂತ್ಯ ಮಾಡುವುದರಿಂದ, ಈ ರೀತಿಯಾಗಿ ಓ ಮಹಾರಾಜ, ಭಗವಾನರು ನಮಗೆ ಪ್ರೇರಣೆ ನೀಡುತ್ತಾರೆ.

ತುಂಬಾ ಒಳ್ಳೆಯದು ನಾಗಸೇನ, ನೀವು ಈ ಇಕ್ಕಟ್ಟಿನ ಪ್ರಶ್ನೆಯನ್ನು ಸುಲಭವಾಗಿ ನಿವಾರಿಸಿದಿರಿ, ನೀವು ಹೇಳಿದ್ದನ್ನು ನಾನು ಒಪ್ಪುವೆ.



6. ಮೆತ್ತಾಭಾವನ ನಿಸಂಸ ಪನ್ಹೊ (ಮೈತ್ರಿ ಧ್ಯಾನ ಫಲದ ಪ್ರಶ್ನೆ)


ಭಂತೆ ನಾಗಸೇನ, ಹೀಗೆ ಹೇಳಲ್ಪಟ್ಟಿದೆ: ಓ ಭಿಕ್ಷುಗಳೇ ಯಾರು ಮೆತ್ತಾವನ್ನು ಅಭ್ಯಸಿಸುವರೋ, ಅದನ್ನೇ ವ್ಯಕ್ತಿಗತ ಮಾಡಿಕೊಂಡಿರುವರೋ, ವಿಕಾಸಿಸುವರೋ, ವಾಹನದಂತೆ ಮಾಡಿಕೊಂಡಿರುವರೋ, ಉನ್ನತತೆ ಸಾಧಿಸಿರುವರೋ, ಅದನ್ನೇ ಚಾರಿತ್ರ್ಯವನ್ನಾಗಿಸಿರುವರೋ, ಅದರಲ್ಲಿ ತಲ್ಲೀನತೆ ಸಾಧಿಸಿರುವರೋ, ಅದನ್ನೇ ವಧರ್ಿಸುತ್ತಿರುವರೋ, ಅದರಿಂದಾಗಿ ಚಿತ್ತವಿಮುಕ್ತಿ ಸಾಧಿಸಿರುವರೋ ಸರ್ವರಲ್ಲೂ ಮೆತ್ತಾ ಭಾವನೆಯಿಂದಲೇ ಸದಾ ತುಂಬಿರುವರೋ, ಆಗ ಮೆತ್ತಾ ಧ್ಯಾನದಲ್ಲಿ ಹನ್ನೊಂದು ಮಹತ್ತರ ಲಾಭಗಳಿವೆ. ಅದೆಂದರೆ: ಆತನು ಸುಖಕರವಾಗಿ ನಿದ್ರಿಸುತ್ತಾನೆ, ಸುಖಕರವಾಗಿ ಏಳುತ್ತಾನೆ, ಆತನಿಗೆ ಕೆಟ್ಟ ಸ್ವಪ್ನಗಳು ಬೀಳುವುದಿಲ್ಲ, ಆತನು ಜನರಿಗೆ ಪ್ರಿಯನಾಗಿ ಜನಪ್ರಿಯನಾಗುತ್ತಾನೆ, ಅಮನುಷ್ಯರಿಗೂ ಪ್ರಿಯನಾಗುತ್ತಾನೆ, ದೇವತೆಗಳು ರಕ್ಷಿಸುವರು, ಅಗ್ನಿಯಿಂದಾಗಲಿ, ವಿಷದಿಂದಾಗಲಿ, ಶಸ್ತ್ರದಿಂದಾಗಲಿ ಆತನಿಗೆ ಯಾವ ಹಾನಿಯೂ ಆಗದು. ಚಿತ್ತವು ಕ್ಷಿಪ್ರವಾಗಿ ಸಮಾಧಿಯಲ್ಲಿ ತಲ್ಲೀನವಾಗುವುದು. ಮುಖವರ್ಣವು ತೇಜಸ್ಸಿನಿಂದ ಕೂಡಿರುತ್ತದೆ. ಭಯ ಭ್ರಾಂತಿಯಿಲ್ಲದೆ ಸಾವನ್ನಪ್ಪುತ್ತಾನೆ ಮತ್ತು ಆತನು ಅರಹತ್ವವನ್ನು ಪಡೆಯದಿದ್ದರೆ ಬ್ರಹ್ಮಲೋಕದಲ್ಲಿ ಖಂಡಿತವಾಗಿ ಉಗಮಿಸುತ್ತಾನೆ.

ಆದರೆ ಇನ್ನೊಂದೆಡೆ ನೀವು ಹೀಗೆ ಹೇಳಿರುವಿರಿ ಸಾಮ ರಾಜಕುಮಾರನು ಸರ್ವಜೀವಿಗಳಲ್ಲಿ ಮೆತ್ತ ಪ್ರಸರಿಸುತ್ತಿರುವಾಗ ಮತ್ತು ಆತನು ಕಾಡಿನಲ್ಲಿ ಜಿಂಕೆಗಳೊಂದಿಗೆ ಸುತ್ತಾಡುತ್ತಿರುವಾಗ ರಾಜ ಪಿಲಿಯಕ್ಖನಿಂದ ವಿಷಪೂರಿತ ಬಾಣದಿಂದ ಪೆಟ್ಟುತಿಂದು ಮೂಛರ್ಿತನಾಗಿ ಬಿದ್ದನು. ಈಗ ಹೇಳಿ ಭಂತೆ ನಾಗಸೇನರವರೇ, ಭಗವಾನರ ನುಡಿಗಳು ಸತ್ಯವಾಗಿದ್ದರೆ, ಈ ಘಟನೆಯು ಸುಳ್ಳಾಗುತ್ತದೆ, ಈ ಘಟನೆಯು ಸತ್ಯವಾಗಿದ್ದರೆ, ಭಗವಾನರ ನುಡಿಗಳು ಸುಳ್ಳಾಗುತ್ತದೆ. ಏಕೆಂದರೆ ಮೆತ್ತಾಧ್ಯಾನಿಯು ವಿಷದಿಂದಾಗಲೀ, ಅಗ್ನಿಯಿಂದಾಗಲಿ, ಶಸ್ತ್ರದಿಂದಾಗಲಿ, ಅಪಾಯಕ್ಕೆ ಒಳಗಾಗಲಾರ ಎಂದಿದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ, ಅತಿ ಸೂಕ್ಷ್ಮವಾಗಿದೆ, ಅತ್ಯಂತ ಗಹನತೆಯಿಂದಿದೆ, ಅತಿ ನವಿರಾಗಿದೆ, ಅತ್ಯಂತ ಗಂಭೀರವಾಗಿದೆ, ಪರಿಹರಿಸಲು ಸಿದ್ಧರಾದ ಸೂಕ್ಷ್ಮ ಜೀವಿಗಳಿಗೂ ಬೆವರಿಳಿಸುವಂತಿದೆ. ಇದನ್ನು ನಿಮಗೆ ಹಾಕಿದ್ದೇನೆ, ಈ ಕಗ್ಗಂಟನ್ನು ಬಿಡಿಸಿ. ಈ ವಿಷಯದ ಕಡೆ ಬೆಳಕು ತೋರಿ, ಮುಂದೆ ಉಗಮಿಸುವಂತಹ ಜಿನಪುತ್ತರ ಆಸೆಯನ್ನು
ಸಿದ್ಧಿಸಿ. (128)

ಓ ಮಹಾರಾಜರೇ, ನೀವು ಹೇಳಿದಂತೆಯೇ ಭಗವಾನರು ಹೇಳಿದ್ದಾರೆ ಮತ್ತು ಸಾಮ ರಾಜಕುಮಾರನು ಮೆತ್ತಾದಿಂದ ಕೂಡಿ ವಿಹರಿಸುತ್ತಿದ್ದಾಗಲೇ ಜಿಂಕೆಗಳು ಆತನನ್ನು ಹಿಂಬಾಲಿಸತೊಡಗಿದವು ಮತ್ತು ಹೀಗೆಯೇ ಅರಣ್ಯವನ್ನು ಸುತ್ತಾಡುತ್ತಿರುವಾಗ ರಾಜ ಪಿಲಿಯಕ್ಖನ ವಿಷಬಾಣದಿಂದ ಹೊಡೆಯಲ್ಪಟ್ಟನು ಮತ್ತು ಬಿದ್ದು ಮೂಛರ್ಿತನಾದನು. ಆದರೆ ಹಾಗಾಗುವುದಕ್ಕೆ ಕಾರಣವಿದೆ. ಏನದು ಕಾರಣ? ಸರಳವಾಗಿ ಹೇಳುವುದಾದರೆ ಯಾವೆಲ್ಲಾ ಸದ್ಗುಣಗಳು ಇವೆಯೋ ಅವೆಲ್ಲಾ ವ್ಯಕ್ತಿಯಲ್ಲಿ ಪ್ರತಿಕ್ಷಣವೂ ಇರುವುದಿಲ್ಲ. ಅಂದರೆ ಮೆತ್ತಾದ ಲಾಭಗಳು ಮೆತ್ತಧ್ಯಾನದ ಇರುವಿಕೆಯನ್ನು ಅವಲಂಬಿಸಿದೆಯೇ ಹೊರತು ಮೆತ್ತಾಭ್ಯಾಸಿಯನ್ನಲ್ಲ. ಆ ಲಾಭಗಳು ಮೆತ್ತಾದಲ್ಲಿ ಆನಂದಿಸುವ ವ್ಯಕ್ತಿಗೆ ಅಂಟಿರುವುದಿಲ್ಲ. ಬದಲಾಗಿ ಮೆತ್ತಾ ಭಾವನದಲ್ಲಿ ಆ ಕ್ಷಣದಲ್ಲಿ ತಲ್ಲೀನರಾಗಿದ್ದರೆ ಮಾತ್ರ ಕೆಲವು ಲಾಭಗಳು ಫಲಕಾರಿಯಾಗುತ್ತವೆ ಮತ್ತು ಯಾವಾಗ ರಾಜಕುಮಾರ ಸಾಮನು ಬಿಂದಿಗೆಯನ್ನು ಮುಗುಚಿ ಹಾಕಿದ್ದರೂ, ಆಗ ಅವರ ಮನಸ್ಸು ಮೆತ್ತಾದಿಂದ ಇರಲಿಲ್ಲ. ಮೆತ್ತಾದ ಹೊರತಾಗಿತ್ತು. ಅಂತಹ ಸಮಯದಲ್ಲಿ ಓ ಮಹಾರಾಜ, ಮೆತ್ತಾಭ್ಯಾಸಿಯಾಗಿಯೂ ಸಹಾ ಅಗ್ನಿಯಿಂದ, ವಿಷದಿಂದ, ಶಸ್ತ್ರದಿಂದ ಆತನಿಗೆ ಹಾನಿ ಸಾಧ್ಯವಿದೆ. ಹಾಗಿಲ್ಲದೆ ಆತನು ಮೆತ್ತಾಭ್ಯಾಸ ಮಾಡುತ್ತಿರುವಾಗ ಹಿಂಸಿಸಲು ಹೋದರೆ, ಆತನನ್ನು ಅವರು ಕಾಣಲಾರರು ಹಾಗು ಹಿಂಸಿಸುವ ಅವಕಾಶವು ಅವರಿಗೆ ಲಭಿಸದು, ಆದ್ದರಿಂದ ಓ ಮಹಾರಾಜ, ಇವೆಲ್ಲಾ ವ್ಯಕ್ತಿಯಲ್ಲಿ ಅಡಕವಾಗಿಲ್ಲ. ನಿಜವಾದ ಮೈತ್ರಿಯು ಆ ಕ್ಷಣದಲ್ಲಿ ಇದ್ದಾಗ ಮಾತ್ರ ಆತನಿಗೆ ಹಾನಿಯುಂಟು ಮಾಡಲಾರರು.

ಊಹಿಸಿ ಮಹಾರಾಜ, ಒಬ್ಬನಲ್ಲಿ ಮಾಯವಾಗುವ ಮೂಲಿಕೆಯಿದೆ, ಎಲ್ಲಿಯವರೆಗೆ ಅದು ಆತನ ಕೈಯಲ್ಲಿರುವುದೋ, ಯಾರು ಸಹಾ ಆತನಿಗೆ ನೋಡಲಾಗುತ್ತಿರಲಿಲ್ಲ. ಆತನು ಯಾರಿಗೂ ಕಾಣಿಸುತ್ತಿರಲಿಲ್ಲ. ಇದಕ್ಕೆ ಕಾರಣ ಆ ವ್ಯಕ್ತಿಯಲ್ಲ, ಬದಲಾಗಿ ಮಾಯಾ ಮೂಲಿಕೆಯದಾಗಿತ್ತು. ಅದೇರೀತಿ ಮಹಾರಾಜ, ಆ ಕ್ಷಣದಲ್ಲಿ ಮೆತ್ತಾದ ಇರುವಿಕೆಯುಳ್ಳವನಿಗೆ ಯಾರು ಏನು ಮಾಡಲಾರರೇ ಹೊರತು ಆ ವ್ಯಕ್ತಿಗಲ್ಲ.

ಅಥವಾ ಊಹಿಸಿ, ಒಬ್ಬ ವ್ಯಕ್ತಿಯು ಸುನಿಮರ್ಿತ ಬೃಹತ್ ಗುಹೆಯಲ್ಲಿ ಪ್ರವೇಶಿಸುತ್ತಾನೆ. ಆಗ ಯಾವ ಮಳೆಯಾಗಲಿ, ಬಿರುಗಾಳಿಯಾಗಲಿ ಅಲ್ಲಿ ಬೀಳಲಾರದು. ಆತನು ಅಲ್ಲಿರುವವರೆಗೆ ಆತನು ನೆನೆಯುವ ಸಾಧ್ಯತೆಯೇ ಇಲ್ಲ. ಈ ಲಾಭವು ಆ ವ್ಯಕ್ತಿಗಲ್ಲ. ಆತನು ಆಶ್ರಯಿಸಿದ ಗುಹೆಯಿಂದಾಗಿ ಆತನಿಗೆ ಅಲ್ಲಿರುವವರೆಗೆ ಲಭಿಸುತ್ತದೆ. ಅದೇರೀತಿಯಲ್ಲಿ ಇಲ್ಲಿ ಲಾಭವು ರಾಜಕುಮಾರ ಸಾಮನಿಗಲ್ಲ, ಆತನು ಆಶ್ರಯಿಸಿದ ಮೆತ್ತಾ ಭಾವನೆಯಿಂದಾಗಿ ಆತನು ಅದನ್ನು ಧ್ಯಾನಿಸುವವರೆಗೆ ಲಭಿಸುತ್ತದೆ.

ಅದ್ಭುತ ಭಂತೆ ನಾಗಸೇನ, ನಿಜಕ್ಕೂ ಮೆತ್ತವು ಎಲ್ಲಾ ಚಿತ್ತಕ್ಲೇಷಗಳನ್ನು ದೂರೀಕರಿಸುವ ಬಲಗಳನ್ನು ಹೊಂದಿದೆ. ನಿಜಕ್ಕೂ ಇದು ಅಪಾರ ಅಪರಿಚಿತವಾಗಿದೆ.


ಹೌದು ಮಹಾರಾಜ, ಮೆತ್ತಾ ಧ್ಯಾನದ ಅಭ್ಯಸಿಸುವಿಕೆಯು ಎಲ್ಲಾ ಜೀವಿಗಳ ಚಿತ್ತದಲ್ಲಿ ಕುಶಲಸ್ಥಿತಿಗಳನ್ನು ಉದಯಿಸುವಂತೆ, ಬೆಳೆಯುವಂತೆ ಮಾಡುತ್ತದೆ. ಯಾವೆಲ್ಲಾ ಜೀವಿಗಳು ಭವದ ಬಂಧನಗಳಿಂದ ಕೂಡಿರುವರೋ ಅವರಿಗೆಲ್ಲಾ ಮೆತ್ತಾ ಭಾವನವು ಮಹಾ ಲಾಭಕಾರಿಯಾಗಿದೆ. ಆದ್ದರಿಂದಾಗಿ ಇದನ್ನು ಪರಿಶ್ರಮಯುತವಾಗಿ ಬೆಳೆಸತಕ್ಕದ್ದು.


7. ಕುಶಲಾಕುಶಲ ಸಮ ವಿಷಮ ಪ್ರಶ್ನೆ


ಭಂತೆ ನಾಗಸೇನ, ಕುಶಲ ಮಾಡುವವನಿಗೆ ಮತ್ತು ಅಕುಶಲ ಮಾಡುವವನಿಗೆ ಅದರ ಪರಿಣಾಮ ಸಮವಾಗಿಯೇ ಇರುವುದೇ ಅಥವಾ ಇವೆರಡರಲ್ಲಿ ಭಿನ್ನತೆ (ವಿಷಮ) ಆಗುವುದೇ? (129)

ಓ ಮಹಾರಾಜ, ಅವುಗಳಲ್ಲಿ ವ್ಯತ್ಯಾಸವಿರುವುದು, ಕುಶಲಕ್ಕೂ ಮತ್ತು ಅಕುಶಲಕ್ಕೂ ಭಿನ್ನತೆಯಿದೆ. ಕುಶಲ ಕಾರ್ಯ ಮಾಡುವವನು ಸುಖವಾದ ಫಲ ಪಡೆಯುತ್ತಾನೆ ಮತ್ತು ಸುಗತಿ ಪಡೆಯುತ್ತಾನೆ. ಪಾಪಕಾರ್ಯ ಮಾಡಿದವನು ದುಃಖಯುಕ್ತ ಫಲ ಪಡೆದು ನಿರಯಕ್ಕೆ ಹೋಗುತ್ತಾನೆ.

ಆದರೆ ಭಂತೆ ನಾಗಸೇನ, ನೀವು ಹೇಳುವಿರಿ, ದೇವದತ್ತನು ವಿಕೃತನಾಗಿದ್ದನು, ಪಾಪಿಯಾಗಿದ್ದನು ಮತ್ತು ಬೋಧಿಸತ್ತರು ಪರಿಶುದ್ಧರಾಗಿದ್ದರು, ಪೂರ್ಣವಾಗಿ ಪರಿಶುದ್ಧ ಮನೋಧಮರ್ಿಯಾಗಿದ್ದರು. ಆದರೂ ಸಹಾ ದೇವದತ್ತನು ಅನುಪೂರ್ವ ಜನ್ಮಗಳಿಂದ ಬೋಧಿಸತ್ತರಿಗೆ ಸಮನಾಗಿರಲಿಲ್ಲವೇ? ಅಷ್ಟೇ ಏಕೆ, ಕೆಲ ಜನ್ಮಗಳಲ್ಲಿ ಅವರಿಗಿಂತ ಶ್ರೇಷ್ಠ ಸ್ಥಾನಗಳಲ್ಲೇ ಇದ್ದನು. ಅವರಿಗಿಂತ ಹೆಚ್ಚು ಖ್ಯಾತಿ ಮತ್ತು ಅನುಯಾಯಿಗಳನ್ನು ಪಡೆದಿದ್ದನು.

ಹೀಗೆ ನಾಗಸೇನರವರೆ, ಒಮ್ಮೆ ದೇವದತ್ತನು ಬ್ರಹ್ಮದತ್ತನ ರಾಜ ಪುರೋಹಿತ ನಾಗಿದ್ದಾಗ, ಬೋಧಿಸತ್ತರು ಚಾಂಡಾಲರಾಗಿದ್ದರು. ಆಗ ಅವರು ಮಂತ್ರಶಕ್ತಿಯಿಂದ ಆ ಕಾಲದಲ್ಲಿಯೂ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತಿದ್ದರು. ಇಲ್ಲಿ ಬೋಧಿಸತ್ತರು ದೇವದತ್ತನಿಗಿಂತ ಸ್ಥಿತಿ ಮತ್ತು ಖ್ಯಾತಿಯಲ್ಲಿ ಕೆಳಮಟ್ಟದಲ್ಲಿದ್ದರು.

ಮತ್ತೆ ಇನ್ನೊಮ್ಮೆ ದೇವದತ್ತನು ಚಕ್ರವತರ್ಿಯಾಗಿದ್ದಾಗ, ಎಲ್ಲಾರೀತಿಯ ಸುಖಭೋಗಗಳನ್ನು ಅನುಭವಿಸುತ್ತಿದ್ದಾಗ ಬೋಧಿಸತ್ತರು ಆನೆಯಾಗಿರುತ್ತಾರೆ ಹಾಗು ರಾಜನು ಬಳಸಿ ಬಿಟ್ಟ ಆಭರಣಗಳನ್ನು ಧರಿಸಿದವರಾಗಿರುತ್ತಾರೆ ಮತ್ತು ಆನೆಯನ್ನು ಕಂಡ ರಾಜನು ಕ್ರುದ್ಧನಾಗಿ ಮಾವುತನಿಗೆ ಹೀಗೆ ಹೇಳುತ್ತಾನೆ: ಮಾವುತನೆ, ಈ ಆನೆಯು ಸರಿಯಾಗಿ ಶಿಕ್ಷಣ ಪಡೆದಿಲ್ಲ, ಇದಕ್ಕೆ ಆಕಾಶದ ನಡಿಗೆ ಕಲಿಸು ಇಲ್ಲಿ ಸಹಾ ಬೋಧಿಸತ್ತರು ದೇವದತ್ತನಿಗಿಂತ ಕೆಳಮಟ್ಟದವರಾಗಿ ಪ್ರಾಣಿಯಾಗಿ ಹುಟ್ಟಿದವರಾಗಿರುತ್ತಾರೆ.

ಮತ್ತೆ ದೇವದತ್ತನು ಇನ್ನೊಂದು ಜನ್ಮದಲ್ಲಿ ಧಾನ್ಯ ಪರೀಕ್ಷಕನಾಗಿರುವಾಗ ಬೋಧಿಸತ್ವರು ಮಹಾಪೃಥ್ವಿ ಎಂಬ ಕೋತಿಯಾಗಿರುತ್ತಾರೆ. ಇಲ್ಲೂ ಸಹಾ ದೇವದತ್ತ ಮಾನವನಾಗಿರುವಾಗ, ಬೋಧಿಸತ್ತರು ಅದಕ್ಕಿಂತ ಕೆಳಮಟ್ಟದ ಪ್ರಾಣಿಯಾಗಿರುತ್ತಾರೆ.

ಇನ್ನೊಮ್ಮೆ ದೇವದತ್ತ ಸೋಣುತ್ತರ ಎಂಬ ಮಾನವನಾಗಿ ಬೇಟೆಗಾರ ವೃತ್ತಿಯಲ್ಲಿರುತ್ತಾನೆ. ಆಗ ಛದ್ಧಂತ ಎಂಬ ಆನೆಗಳ ರಾಜನಾಗಿ ಬೋಧಿಸತ್ವರು ಇದ್ದಾಗ, ಬಲಶಾಲಿಯಾದ ಆ ಬೇಟೆಗಾರನು ಆನೆಯಾಗಿರುವ ಬೋಧಿಸತ್ವರನ್ನು ಸಾಯಿಸುತ್ತಾನೆ. ಇಲ್ಲಿ ಸಹಾ ದೇವದತ್ತನು ಉತ್ತಮ ಸ್ಥಾನದಲ್ಲೇ ಇದ್ದಾನೆ.

ಮತ್ತೊಮ್ಮೆ ದೇವದತ್ತನು ಮಾನವನಾಗಿರುವಾಗ, ಕಾಡಿನಲ್ಲಿ ಅಲೆಮಾರಿಯಾಗಿ ಅಲೆದಾಡುತ್ತ ಇದ್ದಾಗ, ಬೋಧಿಸತ್ತರು ಸಕುಣ ಎಂಬ ಪಕ್ಷಿಯಾಗಿರುತ್ತಾರೆ, ಆಗ ಅದಕ್ಕೆ ವೇದಮಂತ್ರಗಳು ಗೊತ್ತಿರುತ್ತದೆ. ಆಗ ದೇವದತ್ತನು ಆ ಜನ್ಮದಲ್ಲೂ ಪಕ್ಷಿಯನ್ನು ಕೊಲ್ಲುತ್ತಾನೆ, ಇಲ್ಲಿಯು ಸಹಾ ದೇವದತ್ತನು ಜನ್ಮದಲ್ಲಿ ಉತ್ತಮ ಸ್ಥಾನ ಹೊಂದಿದ್ದಾನೆ.

ಮತ್ತೊಮ್ಮೆ ದೇವದತ್ತನು ಕಾಶಿಯ ರಾಜನಾಗಿದ್ದಾಗ ಕಲಾಬು ಎಂಬ ಹೆಸರನ್ನು ಹೊಂದಿರುತ್ತಾನೆ. ಆಗ ಬೋಧಿಸತ್ವರು ಖಾಂತಿವಾದಿಯಾಗಿ ಕರುಣೆ, ಕ್ಷಮೆ ಬೋಧಿಸುವವರಾಗಿರುತ್ತಾರೆ. ಆಗ ರಾಜನು ಕ್ರುದ್ಧನಾಗಿ ಖಾಂತಿವಾದಿ ಋಷಿಯ ಕೈಕಾಲು ಕತ್ತರಿಸಿ ಹಾಕುತ್ತಾನೆ. ಈ ಜನ್ಮದಲ್ಲಿಯೂ ಸಹಾ ದೇವದತ್ತ ಉತ್ತಮ ಸ್ಥಾನವನ್ನು ಹೊಂದಿದ್ದಾನೆ.

ಪುನಃ ದೇವದತ್ತನು ಬೇಟೆಗಾರನಾಗಿದ್ದಾಗ ಬೋಧಿಸತ್ವರು ಮಂಗರಾಜ ನಂದಿಯರಾಗಿದ್ದರು. ಹಾಗು ಈ ಜನ್ಮದಲ್ಲಿಯು ಆ ಮನುಷ್ಯ ಬೋಧಿಸತ್ವರನ್ನು ಕೊಂದನು. ಅಷ್ಟೇ ಅಲ್ಲದೆ ಆ ಮಂಗದ ತಮ್ಮ ಹಾಗು ಅದರ ತಾಯಿಯನ್ನು ಕೊಂದನು. ಹೀಗಾಗಿ ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಕಾರಂಭಿಯನೆಂಬ ನಗ್ನ ಸನ್ಯಾಸಿಯಾಗಿದ್ದನು. ಆಗ ಬೋಧಿಸತ್ತರು ನಾಗರಾಜ ಪಂಡರಕರಾಗಿದ್ದರು. ಹಾಗು ಇಲ್ಲಿಯೂ ಸಹಾ ದೇವದತ್ತನು ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಮಾನವನಿಗೆ ಕಪಟ ಸನ್ಯಾಸಿಯಾಗಿದ್ದಾಗ, ಬೋಧಿಸತ್ವರು ತಚ್ಚಕ ಎಂಬ ಹಂದಿಯಾಗಿ ಹುಟ್ಟಿದ್ದರು. ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತನು ಮಾನವನಾಗಿ ಚೇತರ ರಾಜನಾಗಿದ್ದನು. ಆಗ ಆತನ ಹೆಸರು ಸುರಪಂಚರ ಎಂದಾಗಿತ್ತು. ಆಗ ಆತನಿಗೆ ಗಾಳಿಯಲ್ಲಿ ಮಾನವರ ತಲೆಗಳಿಗಿಂತ ಮೇಲಕ್ಕೆ ಹಾರುವ ಸಾಮಥ್ಯವಿತ್ತು. ಬೋಧಿಸತ್ತರು ಕಪಿಲ ಬ್ರಾಹ್ಮಣರಾಗಿದ್ದರು, ಇಲ್ಲಿಯೂ ಸಹಾ ದೇವದತ್ತನು ಕುಲದಲ್ಲಿ ಉತ್ತಮನಾಗಿದ್ದನು.

ಪುನಃ ದೇವದತ್ತನು ಮಾನವನಾಗಿ ಹುಟ್ಟಿ ನಾಮ ಎಂಬ ಹೆಸರು ಪಡೆದಿದ್ದನು, ಆಗ ಬೋಧಿಸತ್ತರು ರುರು ಎಂಬ ಜಿಂಕೆಗಳ ರಾಜನಾಗಿದ್ದನು. ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಮಾನವನಾಗಿ ಹುಟ್ಟಿ, ಕಾಡಿನ ಬೇಟೆಗಾರನಾಗಿದ್ದಾಗ, ಬೋಧಿಸತ್ತರು ಆನೆಯಾಗಿದ್ದರು. ಆಗ ಬೇಟೆಗಾರನು ಏಳುಬಾರಿ ಬೋಧಿಸತ್ವರ ದಂತವನ್ನು ಕತ್ತರಿಸಿದ್ದನು. ಇಲ್ಲಿಯೂ ಸಹಾ ದೇವದತ್ತನು ಜನ್ಮದಿಂದ ಮೇಲುಗೈ ಸಾಧಿಸಿದ್ದನು.

ಪುನಃ ದೇವದತ್ತನು ಸಿಂಗಾಲನೆಂಬ ರಾಜನಾಗಿ ಗೆಲುವಿನ ಮಹತ್ವಾಕಾಂಕ್ಷಿಯಾಗಿ ಜಂಬುದ್ವೀಪದ ಎಲ್ಲಾ ರಾಜರನ್ನು ತನ್ನ ವಶದಲ್ಲಿ ತೆಗೆದುಕೊಂಡಿದ್ದಾಗ, ಬೋಧಿಸತ್ವರು ವಿಧುರ ಪಂಡಿತರಾಗಿದ್ದರು. ಇಲ್ಲಿಯೂ ಸಹಾ ದೇವದತ್ತ ಭವ್ಯವಾದ ಖ್ಯಾತಿ ಪಡೆದಿದ್ದನು.

ಪುನಃ ದೇವದತ್ತನು ಆನೆಯಾಗಿ, ಚಿನಾದ ತಿತ್ತರ ಪಕ್ಷಿಯ ಮರಿಗಳನ್ನು ನಾಶಪಡಿಸಿದ್ದನು. ಆಗ ಬೋಧಿಸತ್ವರು ಸಹಾ ಆನೆಯಾಗಿದ್ದರು, ತಮ್ಮ ಸಮೂಹಕ್ಕೆ ನಾಯಕರಾಗಿದ್ದರು, ಇಲ್ಲಿ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಅಧಮ್ಮ ಎಂಬ ಯಕ್ಷನಾಗಿದ್ದಾಗ, ಬೋಧಿಸತ್ವರು ಧಮ್ಮ ಎಂಬ ಯಕ್ಷರಾಗಿದ್ದರು, ಇಲ್ಲಿ ಈರ್ವರೂ ಸಮನಾಗಿದ್ದರು.

ಪುನಃ ದೇವದತ್ತನು ನಾವಿಕನಾಗಿ 500 ಕುಟುಂಬಗಳಿಗೆ ನಾಯಕರಾಗಿದ್ದನು. ಆಗ ಬೋಧಿಸತ್ವರು ಸಹಾ ನಾವಿಕನಾಗಿ 500 ಕುಟುಂಬಗಳಿಗೆ ನಾಯಕರಾಗಿದ್ದರು, ಇಲ್ಲಿ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ವರ್ತಕನಾಗಿ 500 ಬಂಡಿಗಳನ್ನು ಹೊಂದಿದ್ದನು. ಆಗ ಬೋಧಿಸತ್ವರು ಸಹಾ ವರ್ತಕನಾಗಿ 500 ಬಂಡಿಗಳನ್ನು ಹೊಂದಿದ್ದರು. ಇಲ್ಲಿ ಸಹಾ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಸಾಖ ಎಂಬ ಜಿಂಕೆಯಾಗಿದ್ದಾಗ, ಬೋಧಿಸತ್ವರು ಸಹಾ ನಿಗ್ರೋಧ ಎಂಬ ಜಿಂಕೆಯಾಗಿದ್ದರು. ಇಲ್ಲೂ ಸಹಾ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಖಂಡಹಾಲನೆಂಬ ಬ್ರಾಹ್ಮಣನಾಗಿದ್ದಾಗ, ಬೋಧಿಸತ್ವರು ಚಂದನೆಂಬ ರಾಜಕುಮಾರರಾಗಿದ್ದರು, ಇಲ್ಲಿ ಖಂಡಹಾಲನೇ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತನು ಬ್ರಹ್ಮದತ್ತ ಎಂಬ ರಾಜನಾಗಿದ್ದಾಗ, ಬೋಧಿಸತ್ವರು ಮಹಾಪದುಮ ಎಂಬ ಹೆಸರಿನಲ್ಲಿ ಆತನಿಗೆ ಪುತ್ರನಾಗಿದ್ದರು. ಆಗ ರಾಜನು ಬೋಧಿಸತ್ವರಿಗೆ ಏಳುಬಾರಿ ಪ್ರಪಾತದಲ್ಲಿ ತಳ್ಳಿಸಿದ್ದನು. ಇಲ್ಲಿಯೂ ಸಹಾ ದೇವದತ್ತನೇ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತ ಮಹಾಪ್ರತಾಪನೆಂಬ ಹೆಸರಿನ ರಾಜನಾಗಿದ್ದಾಗ ಬೋಧಿಸತ್ವರು ಅವರ ಮಗ ಧಮ್ಮಪಾಲನಾಗಿ ಜನಿಸಿದ್ದರು. ಆದರೆ ಕ್ರೂರಿ ರಾಜ ಬೋಧಿಸತ್ವರ (ಆ ಮಗುವಿನ) ತಲೆ, ಕೈಕಾಲು ಕಡಿಸಿದ್ದನು. ಹೀಗಾಗಿ ಇಲ್ಲಿಯೂ ಸಹಾ ದೇವದತ್ತ ಉತ್ತಮ ಅಧಿಕಾರ ಹೊಂದಿದ್ದನು.

ಪುನಃ ಬೋಧಿಸತ್ವರು ಅಂತಿಮ ಜನ್ಮದಲ್ಲಿ ಬುದ್ಧರಾದಾಗ, ಲೋಕಕ್ಕೆ ನಾಯಕರಾಗಿದ್ದಾಗ ದೇವದತ್ತನು ಸಂಘ ಪ್ರವೇಶ ಮಾಡಿದನು. ಇದ್ದಿಬಲಗಳನ್ನು ಪ್ರಾಪ್ತಿಮಾಡಿದ್ದನು, ಬುದ್ಧರಾಗಲು ಇಚ್ಛಿಸಿದನು. ಈಗ ಹೇಳಿ ಭಂತೆ ನಾಗಸೇನ, ನಾನು ಈವರೆಗೆ ಹೇಳಿದ್ದು ಸತ್ಯವಲ್ಲವೇ?
ಓ ಮಹಾರಾಜ, ನೀವು ಇಷ್ಟು ಮಾಹಿತಿ ಹೇಳಿದ್ದು ಸರಿಯಾಗಿಯೇ ಇದೆ, ಬೇರೆ ಅಲ್ಲ.

ಹಾಗಾದರೆ ಭಂತೆ ನಾಗಸೇನ, ಕಪ್ಪು-ಬಿಳುಪು ಸಮವಾಗಿದೆ ಎನ್ನುವುದಾದರೆ ಕುಶಲ ಮತ್ತು ಅಕುಶಲಗಳು ಸಮವಾಗಿ ಫಲ ನೀಡುತ್ತವೆ ಎಂದಾಯಿತು.

ಹಾಗಲ್ಲ ಮಹಾರಾಜ, ಕುಶಲ ಮತ್ತು ಅಕುಶಲಗಳು ಸಮ ಫಲಿತಾಂಶ ನೀಡಲಾರವು. ದೇವದತ್ತನು ಪ್ರತಿಯೊಬ್ಬರಿಂದ ವಿರೋಧಿಸಲ್ಪಟ್ಟಿದ್ದಾನೆ. ಯಾರೂ ಬೋಧಿಸತ್ವರಿಗೆ ದ್ವೇಷಿಸಿಲ್ಲ. ದೇವದತ್ತನು ಬೋಧಿಸತ್ವರ ಮೇಲೆ ದ್ವೇಷಿಸಿ ಮುಂದಿನ ಜನ್ಮಗಳಲ್ಲಿ ಅದರ ಫಲಗಳನ್ನು ಪಡೆದನು. ಅಷ್ಟೇ ಅಲ್ಲ, ದೇವದತ್ತನು ಯಾವಾಗ ಲೋಕಗಳ ಮೇಲೆ ಅಧಿಪತ್ಯ ಪಡೆದನೋ ಆಗ ಆತನು ಬಡವರಿಗೆ ರಕ್ಷಣೆ ನೀಡಿದನು, ಸೇತುವೆಗಳನ್ನು ನಿಮರ್ಿಸಿದನು, ನ್ಯಾಯಾಲಯಗಳನ್ನು ಸ್ಥಾಪಿಸಿದನು, ಜನರಿಗಾಗಿ ವಸತಿ ಗೃಹಗಳನ್ನು ಕಟ್ಟಿಸಿದನು, ಸಮಣ ಬ್ರಾಹ್ಮಣರಿಗೆ ದಾನ ಮಾಡಿದನು. ಬಡ ಹಾಗೂ ಅಗತ್ಯವುಳ್ಳವರಿಗೆ ಸಹಾಯ ಮಾಡಿದನು. ಈ ಎಲ್ಲಾ ಕರ್ಮಗಳಿಂದಾಗಿ ಆತನು ಜನ್ಮದಿಂದ ಜನ್ಮಕ್ಕೆ ಸುಖ ಹಾಗು ಉನ್ನತಿ ಹೊಂದಿದನು. ಓ ಮಹಾರಾಜ, ದಾನವಿಲ್ಲದೆ, ಸಂಯಮವಿಲ್ಲದೆ, ಸ್ವನಿಯಂತ್ರಣವಿಲ್ಲದೆ, ಉಪೋಸಥವಿಲ್ಲದೆ ಯಾರಾದರೂ ಉನ್ನತಿಗೇರುವರೇ?

ಮತ್ತೆ ಓ ಮಹಾರಾಜ, ನೀವು ಹೇಳಿದಿರಿ ಬೋಧಿಸತ್ತರು ಹಾಗು ದೇವದತ್ತ ಜನ್ಮದಿಂದ ಜನ್ಮಕ್ಕೆ ಜೊತೆಯಾಗಿದ್ದರೆಂದು. ಆದರೆ ಅದು ಹಾಗಿರಲಿಲ್ಲ. ಅವರು ಪರಸ್ಪರ ಸಂಧಿಸುತ್ತಿದ್ದುದು ನೂರು ಜನ್ಮಗಳ ಕೊನೆಯಲ್ಲಿ ಅಥವಾ ಸಾವಿರ ಅಥವಾ ಲಕ್ಷ ಹೀಗೆ ಅಸಂಖ್ಯಾತ ಕಾಲದಲ್ಲಿಯಾದರೂ ಅವರು ಆಗಾಗ್ಗೆ ಭೇಟಿಯಾಗುತ್ತಿದ್ದಂತು ನಿಜ. ಆದರೆ ದೇವದತ್ತ ಮಾತ್ರವಲ್ಲ, ಓ ಮಹಾರಾಜ, ಸಾರಿಪುತ್ತ ಸಹಾ ಸಾವಿರಾರು ಜನ್ಮಗಳಲ್ಲಿ ತಂದೆಯಾಗಿ, ತಾತನಾಗಿ, ಚಿಕ್ಕಪ್ಪನಾಗಿ, ಸೋದರನಾಗಿ, ಮಗನಾಗಿ, ಮಿತ್ರನಾಗಿ, ಸೋದರಳಿಯನಾಗಿದ್ದರು ಮತ್ತು ಬೋಧಿಸತ್ವರು ಸಹಾ ತಂದೆಯಾಗಿ, ತಾತನಾಗಿ, ಚಿಕ್ಕಪ್ಪನಾಗಿ, ಸೋದರನಾಗಿ, ಮಗನಾಗಿ, ಸೋದರಳಿಯನಾಗಿ, ಮಿತ್ರರಾಗಿದ್ದರು.

ಓ ಮಹಾರಾಜ, ವಾಸ್ತವವಾಗಿ ಎಲ್ಲಾ ಜೀವಿಗಳು, ಯಾವುದೆ ರೂಪದ ಜೀವಿಗಳಾಗಿರಲಿ, ಸಂಸಾರದಲ್ಲಿ ಪುನರ್ಜನ್ಮ ಪಡೆಯುತ್ತಲಿರುತ್ತವೆ, ಸಮಾಗಮ ಹೊಂದುತ್ತವೆ, ವಿಯೋಗ ಹೊಂದುತ್ತಿರುತ್ತವೆ. ನಿರಂತರ ಸುತ್ತಾಡುವಿಕೆಯಿರುತ್ತದೆ. ಪ್ರಿಯರ ಹಾಗು ಅಪ್ರಿಯರ ಸಮಾಗಮ ಹೊಂದುತ್ತೇವೆ. ಹಾಗೆಯೇ ವಿಯೋಗವನ್ನು ಹೊಂದುತ್ತೇವೆ. ಹೇಗೆಂದರೆ ಹೊಳೆಯ ಸುಳಿಯಲ್ಲಿ ಶುದ್ಧ-ಅಶುದ್ಧ ವಸ್ತುಗಳು, ಸುಂದರ-ಕುರೂಪ ವಸ್ತುಗಳು ಸುತ್ತಾಡುವಂತೆ ಚಲಿಸುತ್ತೇವೆ.

ಮತ್ತೆ ಓ ಮಹಾರಾಜ, ದೇವದತ್ತನು ದೇವತೆಯಾಗಿಯು, ಅಧಮರ್ಿಯಾದಾಗ, ಪರರನ್ನೂ ಅಧಮರ್ಿಯರನ್ನಾಗಿ ಮಾಡಿದಾಗ, ಅದರ ಫಲಿತಾಂಶವಾಗಿ ಆತನು ಲೆಕ್ಕಸಿಗದ ಕಾಲದಷ್ಟು ಸಮಯ ನರಕದಲ್ಲಿದ್ದನು. ಆದರೆ ಬೋಧಿಸತ್ವರು ದೇವತೆಯಾಗಿದ್ದಾಗ, ಧಮರ್ಿಷ್ಠರಾಗಿ ಪರರಿಗೂ ಧಮರ್ಿಷ್ಠರನ್ನಾಗಿಸಿದಾಗ ಸುಗತಿಯಲ್ಲಿ ಅಸಂಖ್ಯಾತ ಕಾಲದಷ್ಟು ನೆಲೆಸಿದ್ದರು. ಹಾಗು ಈ ಜನ್ಮದಲ್ಲಿ ದೇವದತ್ತನು ಬುದ್ಧರಿಗೆ ಗಾಯವುಂಟು ಮಾಡಿ, ಸಂಘಬೇಧ ಮಾಡಿದ್ದರಿಂದಾಗಿ, ಭೂಮಿಯಿಂದ ನುಂಗಲ್ಪಟ್ಟನು. ತಥಾಗತರು ಅರಿಯ ಬೇಕಾಗಿರುವುದನ್ನೆಲ್ಲಾ ಅರಿತಿರುವರು, ಬುದ್ಧತ್ವ ಪ್ರಾಪ್ತಿಯಾದಾಗಲೇ ಅವರು ಜನ್ಮಕ್ಕೆ ಕಾರಣವಾಗಿರುವುದೆಲ್ಲವನ್ನು ನಾಶಗೊಳಿಸಿ, ಮುಕ್ತರಾದರು.

ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆ.


8. ಅಮರದೇವಿಯ ಬಗ್ಗೆ ಪ್ರಶ್ನೆ


11. ಭಂತೆ ನಾಗಸೇನ, ಭಗವಾನರು ಬೋಧಿಸತ್ವರಾಗಿದ್ದಾಗ ಹೀಗೆ ಹೇಳಿರುವರು: ಎಲ್ಲಾ ಸ್ತ್ರೀಯರು, ಅವಕಾಶ ಸಿಕ್ಕರೆ, ರಹಸ್ಯತಾಣ ಸಿಕ್ಕರೆ ಮತ್ತು ಪ್ರೇಮಾಯಾಚಿಸುವವನು ಸಿಕ್ಕಾಗ, ಅವರು ಹೆಳವನಲ್ಲೂ ಸಹಾ ಪಾಪ ಮಾಡುತ್ತಾರೆ.

ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಮಹೋಸಧನ ಪತ್ನಿ ಅಮರಳು ಹಳ್ಳಿಯಿಂದ ಹೊರಟಾಗ, ತನ್ನ ಪತಿ ಇಲ್ಲದಿದ್ದಾಗ, ಏಕಾಂಗಿಯಾಗಿದ್ದಾಗ, ಆಕೆ ಪತಿವ್ರತೆಯಾಗಿಯೇ ಇದ್ದು, ಸಾವಿರ ವರಹಗಳಿಗೂ ಲೋಭತಾಳಕ್ಕೆ, ಪಾಪ ಮಾಡಲು ನಿರಾಕರಿಸುತ್ತಾಳೆ.

ಈಗ ಇಲ್ಲಿ ಮೊದಲ ಗಾಥೆ ಸತ್ಯವಾಗಿದ್ದರೆ, ಎರಡನೆಯ ಘಟನೆ ಸುಳ್ಳಾಗುತ್ತದೆ, ಆ ಘಟನೆಯೇ ಸತ್ಯವಾಗಿದ್ದಾಗ, ಬೋಧಿಸತ್ವರ ಗಾಥೆಯು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ ಮತ್ತು ನೀವೇ ಇದನ್ನು ಬಿಡಿಸಬೇಕು. (130)

ಓ ಮಹಾರಾಜ, ನೀವು ಹೇಳಿದಂತೆಯೇ ಆ ಘಟನೆ ಗಾಥೆಯಿದೆ. ಇನ್ನು ಅಮರಾದೇವಿಯ ಬಗ್ಗೆ ಹೇಳುವುದಾದರೆ, ಆಕೆ ಪಾಪ ಮಾಡುತ್ತಿದ್ದಳೆ? ಸಾವಿರ ವರಹ ಸಿಕ್ಕರೂ ಆಕೆ ಏಕೆ ನಿರಾಕರಿಸಿದಳು? ಆಕೆಗೆ ಅವಕಾಶ ಸಿಕ್ಕಿರಲಿಲ್ಲ. ರಹಸ್ಯತೆಯ ಬಗ್ಗೆ ಖಚಿತತೆ ಇರಲಿಲ್ಲ. ಯಾಚಿಸುವವನು ಯೋಗ್ಯನೂ ಆಗಿರಲಿಲ್ಲ. ಜಗತ್ತಿನಲ್ಲಿ ನಿಂದಾಭಯದಿಂದಾಗಿ ಆಕೆಗೆ ಅವಕಾಶ ಹೊಂದಿರಲಿಲ್ಲ. ನರಕದ ಭಯವೂ ಆಕೆಗಿತ್ತು. ಆಕೆಗೆ ಪಾಪದ ಪರಿಣಾಮದ ಕಹಿಫಲ ತಿಳಿದಿತ್ತು. ಮೇಲಾಗಿ ಆಕೆ ತನ್ನ ಪತಿಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಆಕೆ ಆತನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆಕೆಯು ಧರ್ಮವನ್ನು ಗೌರವಿಸುತ್ತಿದ್ದಳು, ಅಧರ್ಮವನ್ನು ದ್ವೇಷಿಸುತ್ತಿದ್ದಳು ಮತ್ತು ಆಕೆ ಸಂಪ್ರದಾಯದ ಜೀವನ ಮುರಿಯಲು ಇಚ್ಛಿಸಲಿಲ್ಲ. ಇವೆಲ್ಲಾ ಕಾರಣಗಳಿಂದ ಆಕೆಗೆ ಅವಕಾಶ ಹೊಂದಿಕೆಯಾಗಿರಲಿಲ್ಲ.

ಮತ್ತೆ ಆಕೆಯು ಪಾಪ ನಿರಾಕರಿಸಲು ಕಾರಣವೇನೆಂದರೆ ಆಕೆಗೆ ಜಗತ್ತಿನಿಂದ ರಹಸ್ಯವನ್ನು ಕಾಪಾಡುವುದರ ಬಗೆಗೆ ಖಚಿತತೆಯಿರಲಿಲ್ಲ. ಆಕೆ ಮಾನವ ರಹಸ್ಯ ಕಾಪಾಡಿದರೂ, ಅಮನುಷ್ಯರುಗಳಿಂದ ಮುಚ್ಚಿಡಲು ಆಗುತ್ತಿರಲಿಲ್ಲ. ಆಕೆಯು ಅಮನುಷ್ಯರುಗಳಿಂದಲೂ ರಹಸ್ಯ ಕಾಪಾಡಿದರೂ ಸಹಾ, ಪರರ ಚಿತ್ತವನ್ನು ಅರಿಯುವ ಪಬ್ಬಜಿತರಿಂದ ರಹಸ್ಯ ಕಾಪಾಡಲು ಸಾಧ್ಯವಿರಲಿಲ್ಲ. ಅವರಿಂದ ಕಾಪಾಡಿದರೂ ದೇವತೆಗಳಿಂದ ರಹಸ್ಯ ಕಾಪಾಡಲು ಸಾಧ್ಯವಿಲ್ಲ ಹಾಗು ಅವರಿಂದಲೂ ರಹಸ್ಯ ಕಾಪಾಡಿದರೂ, ಆಕೆ ತನ್ನಿಂದಲೇ ಪಾಪಲಜ್ಜೆ ಘಾತಿಸುತ್ತದೆ. ಆಕೆ ತನ್ನ ಬಗ್ಗೆಯು ಅಜ್ಞಾನಿಯಾಗಿದ್ದರೂ, ಅಧರ್ಮದ ಪರಿಣಾಮದಿಂದ ಪಾರಾಗುವಂತಿರಲಿಲ್ಲ. ಈ ರೀತಿಯಾಗಿ ಹಲವಾರು ಕಾರಣಗಳಿಂದ, ಆಕೆಗೆ ರಹಸ್ಯ ಕಾಣದೆ, ಆಕೆ ಪಾಪವೆಸಗಲಿಲ್ಲ.

ಮತ್ತೆ ಆಕೆಯು ಪಾಪವಿಮುಖಳಾಗಲು ಇನ್ನೊಂದು ಕಾರಣವಿದೆ. ಅದೆಂದರೆ ಯಾಚಿಸುವವನು ಯೋಗ್ಯ ಪ್ರೇಮಿಯಾಗಿರಲಿಲ್ಲ. ಮಹೂಸತನು ಮೇಧಾವಿಯಾಗಿದ್ದನು. ಆತನು ಒಳ್ಳೆ ಗುಣಲಕ್ಷಣಗಳಿಂದ ಕೂಡಿದ್ದನು. ಅವು ಯಾವುವೆಂದರೆ ಆತನು ಧೈರ್ಯಶಾಲಿಯಾಗಿದ್ದನು, ಶೂರನಾಗಿದ್ದನು, ಪಾಪಲಜ್ಜೆಯಿಂದ ಕೂಡಿದ್ದನು. ಹಲವಾರು ಅನುಯಾಯಿಗಳನ್ನು ಹೊಂದಿದ್ದನು. ಹಲವರು ಮಿತ್ರರನ್ನು ಹೊಂದಿದ್ದನು. ಕ್ಷಮಾಶೀಲನಾಗಿದ್ದನು, ಶೀಲವಂತನಾಗಿದ್ದನು, ಸತ್ಯವಾದಿಯಾಗಿದ್ದನು, ಶುಚಿಸಂಪನ್ನನಾಗಿದ್ದನು, ಅಕ್ರೋಧದಿಂದಿದ್ದನು, ಉಬ್ಬಿಹೋಗುತ್ತಿರಲಿಲ್ಲ, ನಿರಹಂಕಾರಿ ಯಾಗಿದ್ದನು, ಅಸೂಯಾರಹಿತನಾಗಿದ್ದನು, ಪ್ರಯತ್ನಶಾಲಿಯಾಗಿದ್ದನು, ಕುಶಲದ ಸಂಗ್ರಾಹಕನಾಗಿದ್ದನು, ಜನಪ್ರಿಯನಾಗಿದ್ದನು, ದಾನಿಯಾಗಿದ್ದನು, ಮೈತ್ರಿಯಿಂದ ಕೂಡಿದ್ದನು, ವಿಧೇಯತೆಯಿಂದ ಕೂಡಿದ್ದನು, ಠಕ್ಕತನವಿರಲಿಲ್ಲ, ಮಾಯಾವಿತನವಿರಲಿಲ್ಲ, ಬುಧ್ಧಿಸಂಪನ್ನನಾಗಿದ್ದನು, ಕೀತರ್ಿವಂತನಾಗಿದ್ದನು, ವಿದ್ಯಾಸಂಪನ್ನನಾಗಿದ್ದನು, ಅವಲಂಬಿತರಿಗೆ ಹಿತೈಷಿಯಾಗಿದ್ದನು, ಸರ್ವರಿಂದಲೂ ಶ್ಲಾಘ್ಯಗೊಳ್ಳಲ್ಪಟ್ಟವನು, ಧನವಂತನು ಮತ್ತು ಯಶಸ್ವಿಯಾಗಿದ್ದನು. ಈ ರೀತಿಯ 28 ಗುಣಗಳಿಂದ ಕೂಡಿದ ಮಹೊಸಧನನ್ನು ಅಮರಾದೇವಿ ಹೊಂದಿದ್ದರಿಂದ ಆತನಿಗೆ ಸರಿಸಮಾನರಿಲ್ಲದ ಬೇರೆ ಯಾರನ್ನು ಆಕೆ ಪ್ರೇಮಿಯೆಂದು ಒಪ್ಪಲಿಲ್ಲ, ಆದ್ದರಿಂದಾಗಿ ಆಕೆ ಪಾಪವನ್ನು ಮಾಡಲಿಲ್ಲ.

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದುದರಲ್ಲಿ ನನ್ನ ಒಪ್ಪಿಗೆಯಿದೆ.


9. ಅರಹಂತ ಅಭಯಾನ ಪನ್ಹೊ (ಅರಹಂತರ ನಿಭರ್ಿತಿ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಅರಹಂತರು ಎಲ್ಲಾ ಭಯಗಳಿಂದ ಮತ್ತು ಕಂಪನಗಳಿಂದ ಮುಕ್ತರು. ಆದರೆ ಇನ್ನೊಂದೆಡೆ ಹೇಳುವುದಾದರೆ ರಾಜಗೃಹ ನಗರದಲ್ಲಿ ಧನಪಾಲಕ ಆನೆಗೆ (ನಾಲಾಗಿರಿ) ಮದೋನ್ಮತ್ತನನ್ನಾಗಿಸಿ ಬುದ್ಧರನ್ನು ಕೊಲ್ಲಿಸಲು ಕಳುಹಿಸಿದಾಗ ಆ ರಭಸ ಕಂಡು 500 ಅರಹಂತರು ಪರಾರಿಯಾದರು, ಕೇವಲ ಆನಂದ ಒಬ್ಬರೇ ಅಲ್ಲಿದ್ದರು. ಇದು ಹೇಗೆ ನಾಗಸೇನ? ಆ ಅರಹಂತರು ಭೀತಿಯಿಂದ ಓಡಿಹೋದರೆ? ಅಥವಾ ತಥಾಗತರು ಅಳಿದುಹೋಗಲೆಂದು ಹಾಗೇ ಮಾಡಿದರೆ? ನಮ್ಮ ದಾರಿ ನಮಗೆ, ಅವರೇ ಏನಾದರೂ ಮಾಡಲಿ ಎಂದು ಯೋಚಿಸಿ ತೊರೆದರೆ, ಅಥವಾ ತಥಾಗತರ ಬೃಹತ್ಶಕ್ತಿ ಗಮನಿಸಲು ದಾರಿಬಿಟ್ಟರೇ? ಹೇಳಿ ಭಂತೆ ನಾಗಸೇನ, ಅರಹಂತರಲ್ಲಿ ಭಯವಿಲ್ಲದಿದ್ದರೆ, ಈ ಘಟನೆಯು ಸುಳ್ಳಾಗುತ್ತದೆ. ಈ ಘಟನೆ ಸತ್ಯವಾಗಿದ್ದಲ್ಲಿ ಆ ಗಾಥೆಯು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಕೋನ ಇಕ್ಕಟ್ಟಿನ ಪ್ರಶ್ನೆಯಾಗಿದೆ ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವೇ ಬಿಡಿಸಬೇಕು.(131)

ಓ ಮಹಾರಾಜ, ಭಗವಾನರು ಅರಹಂತರಲ್ಲಿ ಭಯವಿರುವುದಿಲ್ಲ ಎಂದು ಹೇಳಿರುವುದು ಸತ್ಯವೇ ಆಗಿದೆ. ಆದರೆ ಆ ಘಟನೆಯು ನೀವು ಹೇಳಿದ ಹಾಗಿಲ್ಲ. ಆಗ ಅರಹಂತರು ದಾರಿಬಿಟ್ಟರು, ಪರಾರಿಯಾಗಲಿಲ್ಲ. ಆನಂದರವರು ತಥಾಗತರ ರಕ್ಷಣೆಗೆಂದು ಆನೆಯ ಮುಂದೆ ಹೋದರು. ಆದರೆ ತಥಾಗತರ ಮೈತ್ರಿಬಲದಿಂದಾಗಿ ಆನೆಯು ಮಂಡಿಯೂರಿ ಶರಣಾಯಿತು. ಆದರೆ ಆ ಭಿಕ್ಷುಗಳು ಹಾಗೆ ಮಾಡಿದ್ದು ಭಯದಿಂದಲೂ ಅಲ್ಲ, ಹಾಗೆಯೇ ತಥಾಗತರಿಗೆ ಹಾನಿಯಾಗಲಿ ಎಂದೂ ಸಹ ಅಲ್ಲ. ಅರಹಂತರಲ್ಲಿ ಭಯಕ್ಕೆ ಕಾರಣವಾಗಿರುವುದೆಲ್ಲಾ ನಾಶವಾಗಿದೆ. ಅದರಿಂದಾಗಿ ಅವರು ಸಹಾ ಭಯಮುಕ್ತರಾಗಿದ್ದಾರೆ. ಓ ಮಹಾರಾಜ, ಈ ವಿಶಾಲಧರೆಯು ಜನರು ಭೂಮಿ ಅಗೆದರೆ ಭಯಪಡುವುದೇ? ಅಥವಾ ಇಬ್ಭಾಗವಾದೀತೆಂದು ಅಥವಾ ಸಮುದ್ರದ ಭಾರವೆಂದು ಅಥವಾ ಪರ್ವತಗಳ ಭಾರ ಎಂದು ಭಯಪಡುವುದೇ?

ಖಂಡಿತ ಇಲ್ಲ ಭಂತೆ.

ಏಕೆ?

ಏಕೆಂದರೆ ವಿಶಾಲಧರೆಗೆ ಭಯಪಡುವಂತಹ ಕಾರಣವೇ ಇಲ್ಲ.

ಅದೇರೀತಿಯಲ್ಲಿ ಓ ರಾಜ, ಅರಹಂತರಲ್ಲೂ ಭಯಕ್ಕೆ ಯಾವ ಕಾರಣಗಳಿರುವುದಿಲ್ಲ. ಪರ್ವತವು ಇಬ್ಭಾಗವಾದಿತೆಂದು ಭಯಪಡುವುದೇ? ಅಥವಾ ಬೀಳುವುದೆಂದು ಅಥವಾ ಸುಟ್ಟುಹೋಗುವದೆಂದು ಭಯಪಟ್ಟೇತೆ?

ಖಂಡಿತ ಇಲ್ಲ ಭಂತೆ.

ಏಕಿಲ್ಲ.

ಏಕೆಂದರೆ ಭಯಕ್ಕೆ ಕಾರಣವಾದುದು ಯಾವುದು ಇಲ್ಲದಿರುವುದರಿಂದಾಗಿ.


ಅದೇರೀತಿಯಲ್ಲಿ ಓ ಮಹಾರಾಜ, ಅರಹಂತರು ಸಹಾ ಒಂದುವೇಳೆ ಜಗತ್ತಿನ ಎಲ್ಲಾ ಜೀವಿಗಳು ಭಯಾನಕವಾಗಿ ಒಮ್ಮೆಗೆ ಆಕ್ರಮಣ ಮಾಡಿದರೂ ಸಹಾ ಅರಹಂತರಲ್ಲಿ ಲವಲೇಶವು ಕಂಪನವಾಗುವುದಿಲ್ಲ, ಭೀತಿಪಡುವುದಿಲ್ಲ. ಏಕೆಂದರೆ ಅವರಲ್ಲಿ ಭಯವು ಉದಯಿಸಲು ಕಾರಣವಾಗಲಿ ಸ್ಥಿತಿಯಾಗಲಿ ಇಲ್ಲ. ಓ ಮಹಾರಾಜ, ಅಂದು ಅರಹಂತರಲ್ಲಿ ಈ ಬಗೆಯ ಚಿಂತನೆ ಮೂಡಿತು. ಇಂದು ಅತ್ಯುತ್ತಮರಾದವರಲ್ಲಿ ಅತ್ಯುತ್ತಮರಾದ ಬುದ್ಧರು, ಜಿನವಾಸಭರು, ಖ್ಯಾತ ನಗರವಾದ ರಾಜಗೃಹಕ್ಕೆ ಪ್ರವೇಶಿಸುತ್ತಿರುವರು, ಇಲ್ಲಿ ಧನಪಲ (ನಾಲಾಗಿರಿ) ಆನೆಯು ಸಹಾ ಬೀದಿಗಳಿಂದ ನುಗ್ಗಿ ಈ ಕಡೆಯೇ ಬರುತ್ತಿದೆ. ಪೂಜ್ಯ ಆನಂದರವರು ಭಗವಾನರಲ್ಲಿ ಇಟ್ಟಂತಹ ಭಕ್ತಿ ಇಂದು ಪ್ರಕಟಪಡಿಸಬೇಕು. ನಾವು ಈಗ ದಾರಿಬಿಡದೆ ಹೋದರೆ ಆನಂದರವರ ಭಕ್ತಿಯಾಗಲಿ, ಆನೆಯ ಆಗಮನವು ಆಗುವುದಿಲ್ಲ, ಆದ್ದರಿಂದಾಗಿ ನಾವು ದಾರಿಬಿಡೋಣ. ಇಂದು ಆನಂದರವರ ಭಕ್ತಿ ಹಾಗು ಭಗವಾನರ ಮೈತ್ರಿಯ ಶಕ್ತಿ ಜನರು ಕಂಡು ಶ್ರದ್ಧಾವಂತರಾಗಿ, ಕ್ಲೇಷ ಬಂಧನಗಳಿಂದ ಮುಕ್ತರಾಗುವರು ಮತ್ತು ಆನಂದರವರ ಗುಣವು ಪ್ರಕಟಿತವಾಗುವುದು ಹೀಗಾಗಿ ಅರಹಂತರು ಆನೆ ಬರುವಂತೆಯೇ ದಾರಿ ಬಿಟ್ಟರು.

ಭಂತೆ ನಾಗಸೇನ, ಬಹುಚೆನ್ನಾಗಿ ಈ ಸಮಸ್ಯೆ ಪರಿಹರಿಸಿದಿರಿ, ಖಂಡಿತವಾಗಿಯೂ ಅರಹಂತರು ಭೀತರಾಗುವುದಿಲ್ಲ, ಹಾಗೆಯೇ ಕಂಪನಮಯರಾಗುವುದಿಲ್ಲ. ಈ ರೀತಿ ಯೋಚಿಸಿಯೇ ದಾರಿ ಬಿಟ್ಟರೆಂದು ನಾನು ಒಪ್ಪುತ್ತೇನೆ.


10. ಬುದ್ಧಸಬ್ಬಞ್ಞಬಾವ ಪನ್ಹೊ (ಬುದ್ಧರ ಸರ್ವಜ್ಞತೆಯ ಬಗ್ಗೆ ಪ್ರಶ್ನೆ)


19. ಭಂತೆ ನಾಗಸೇನ, ನೀವು ಹೇಳಿದಿರಿ, ತಥಾಗತರು ಸರ್ವಜ್ಞರೆಂದು, ಆದರೆ ಮತ್ತೊಂದೆಡೆ ನೀವು ಹೀಗೂ ಹೇಳಿದಿರಿ. ಸಾರಿಪುತ್ತ ಹಾಗು ಮೊಗ್ಗಲಾನರಂತಹ ನಾಯಕರನ್ನು ಒಳಗೊಂಡ ಭಿಕ್ಖುಗಣಗಳನ್ನು ಭಗವಾನರು ಹೊರ ಕಳುಹಿಸಿದ್ದರು. ಆಗ ಶಾಕ್ಯರಾದ ಚಾತುಮ ಮತ್ತು ಬ್ರಹ್ಮಾ ಸಬನಿಪತಿಯವರು ಬೀಜ ಮತ್ತು ಕರುವಿನ ಉಪಮೆ ನೀಡಿ ಭಗವಾನರಿಂದ ಕ್ಷಮೆ ಸಿಗುವಂತೆ ಮಾಡಿದರು. ಸತ್ಯಾಸತ್ಯತೆಗಳನ್ನು ಬೆಳಕಿನಲ್ಲಿ ಕಾಣುವಂತೆ ಮಾಡಿದರು. ಇದು ಹೇಗೆ ಸಾಧ್ಯ ನಾಗಸೇನ? ಭಗವಾನರಿಗೆ ಆ ಎರಡು ಉಪಮೆಗಳು ಅಗೋಚರವಾಗಿತ್ತೇ? ಅದನ್ನು ಅವರಿಂದಲೇ ಕಾಣುವಂತಾಯಿತೆ? ಆದರೆ ಅವರಿಗೆ ಮೊದಲೇ ಗೊತ್ತಿಲ್ಲದಿದ್ದರೆ ಅವರು ಸರ್ವಜ್ಞರಲ್ಲ. ಅವರಿಗೆ ಮೊದಲೇ ಗೊತ್ತಿದ್ದರೆ, ಅವರು ತಪ್ಪಿತಸ್ಥರಾದ ಭಿಕ್ಷುಗಳನ್ನು ಬಲವಂತವಾಗಿ ಹೊರದಬ್ಬಬಹುದಿತ್ತು. ಹಾಗೇ ಮಾಡಿದಾಗಲು ಅವರಲ್ಲಿ ದಯೆರಹಿತತೆಯು ವ್ಯಕ್ತವಾಗುತ್ತಿತ್ತು. ಇದು ಸಹಾ ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ. ನಿಮಗೆ ಹಾಕುತ್ತಿದ್ದೇನೆ ಮತ್ತು ಇದನ್ನು ನೀವೇ ಬಿಡಿಸಬೇಕು. (132)

ಓ ಮಹಾರಾಜ, ಖಂಡಿತವಾಗಿ ತಥಾಗತರು ಸರ್ವಜ್ಞ ಸಂಪನ್ನರು ಆಗಿದ್ದರು. ಭಗವಾನರು ಭಿಕ್ಷುಗಳನ್ನು ಸರಿದಾರಿಗೆ ತರಲು ಕೆಲವು ನಿರ್ವಹಣ ತಂತ್ರಗಳನ್ನು ಮಾಡುತ್ತಿದ್ದರು. ಭಗವಾನರು ಸರ್ವಜ್ಞಾ ಸಂಪನ್ನರಾಗಿದ್ದರೂ ಸಹಾ ಆ ಉಪಮೆಗಳನ್ನು ಆಲಿಸಿ, ಭಿಕ್ಷುಗಳನ್ನು ಕ್ಷಮಿಸಿ ಕಳುಹಿಸಿದರು. ಓ ರಾಜ, ಭಗವಾನರು ಧಮ್ಮ ಸ್ವಾಮಿಗಳಾಗಿದ್ದಾರೆ, ಆ ಉಪಮೆಗಳು ಭಗವಾನರಿಂದಲೇ ಬೋಧಿಸಲ್ಪಟ್ಟಿತ್ತು. ಆದರೆ ಇಲ್ಲಿ ಭಗವಾನರ ಮನವೊಲಿಸಿ ಕ್ಷಮಿಸುವಂತೆ ಮಾಡಲು ಅವರು ಹಾಗೆ ಮಾಡಿದರು. ಓ ಮಹಾರಾಜ, ಇದು ಹೇಗೆಂದರೆ ಪತ್ನಿಯು ತನ್ನ ಪತಿಯನ್ನು ಒಲಿಸಿಕೊಳ್ಳಲು ಪತಿಯ ವಸ್ತುಗಳಿಂದಲೇ ಮನವೊಲಿಸುವಳು. ಆಗ ಪತಿಯು ಒಪ್ಪುವನು. ಅಥವಾ ರಾಜಕ್ಷೌರಿಕನು ರಾಜನಿಗೆ ಒಲಿಸಿ ಚಿನ್ನದ ಬಾಚಣಿಕೆಯಿಂದ ಬಾಚುತ್ತ ಆ ವಸ್ತುಗಳೆಲ್ಲವೂ ರಾಜನದ್ದೇ ಆಗಿದ್ದರೂ ಮನವೊಲಿಸುತ್ತ ಅವರಿಂದ ಒಪ್ಪಿಗೆ ಪಡೆಯುತ್ತಾನೆ.

ಅಥವಾ ವಿದ್ಯಾಥರ್ಿಯು ಗುರುವಿನ ಸೇವೆ ಮಾಡುತ್ತ, ಗುರುವು ಮನೆಗೆ ತಂದಂತಹ ಆಹಾರದಿಂದಲೇ, ಅದನ್ನು ಬಡಿಸಿ ಸಂತೋಷಪಡಿಸಿ, ಒಲಿಸಿ ಅವರ ಒಪ್ಪಿಗೆ ಪಡೆಯುತ್ತಾನೆ.

ಬಹು ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ಉತ್ತರಕ್ಕೆ ನನ್ನ ಒಪ್ಪಿಗೆಯಿದೆ.


ನಾಲ್ಕನೆಯ ಸಬ್ಬನ್ಯುತಜ್ಞಾನ ವರ್ಗ ಮುಗಿಯಿತು (ಇದರಲ್ಲಿ 10 ಪ್ರಶ್ನೆಗಳಿವೆ 

No comments:

Post a Comment