Saturday, 25 October 2014

milinda panha/mahavagga/lakkhana panha in kannada

. ಮಿಲಿಂದನ ಪ್ರಶ್ನೆಗಳು
ಲಕ್ಷಣ ಪ್ರಶ್ನೆಗಳು

1. ಮಹಾವರ್ಗ
1. ರಥದ ಉಪಮೆಯಿಂದ ವ್ಯಕ್ತಿಯ ವಿವರಣೆ

                ಮಿಲಿಂದ ಮಹಾರಾಜನು ನಾಗಸೇನರವರಲ್ಲಿ ಹೋಗಿ ಕುಶಲಕ್ಷೇಮ ವಿಚಾರಿಸಿ, ಸೌಜನ್ಯತೆಯಿಂದ ಅಭಿನಂದನೆಗಳನ್ನು ಮಾಡಿ ಗೌರವದಿಂದ ಒಂದೆಡೆ ಕುಳಿತನು ಮತ್ತು ನಾಗಸೇನರವರು ಸಹಾ ಸೌಜನ್ಯದಿಂದ ಪರಸ್ಪರ ಕುಶಲ ಅಭಿನಂದನೆ ಮಾಡಿಕೊಂಡರು. ಹೀಗಾಗಿ ರಾಜನ ಮನಸ್ಸಿಗೂ ಒಪ್ಪಿಗೆಯಾಯಿತು.

                ನಂತರ ಮಿಲಿಂದರು ಪ್ರಶ್ನಿಸುವುದಕ್ಕೆ ಪ್ರಾರಂಭಿಸಿದರು ಪೂಜ್ಯರು ಹೇಗೆ ತಿಳಿಯಲ್ಪಡುತ್ತಾರೆ ಮತ್ತು ಭಂತೆ ತಮ್ಮ ನಾಮಧೇಯವೇನು? (1)
                ನಾಗಸೇನ ಎಂದು ತಿಳಿಯಲ್ಪಡುತ್ತೇನೆ ಓ ರಾಜನೇ, ಮತ್ತು ಸಂಘವು ನಂಬುಗೆಯಿಂದ ಈ ಹೆಸರಿನಿಂದ ಕರೆಯುತ್ತಾರೆ. ಆದರೆ ತಾಯ್ತಂದೆಯರು ನನ್ನನ್ನು ನಾಗಸೇನನಲ್ಲದೆ ಸೂರಸೇನ, ವೀರಸೇನ, ಸಿಂಹಸೇನ ಇತ್ಯಾದಿ ನಾಮದಿಂದ ಕರೆಯುತ್ತಾರೆ. ಆದರೂ ಇವೆಲ್ಲಾ ಸಾಮಾನ್ಯವಾಗಿ ಗುರುತಿಸುವುದಕ್ಕಾಗಿ ಬಳಕೆಯಲ್ಲಿದೆಯೇ ಹೊರತು ಅಂತಹ ಯಾವ ವ್ಯಕ್ತಿಯು (ಆತ್ಮದ) ಉಪಲಬ್ದಿಯಿಲ್ಲ.
                ತಕ್ಷಣ ಅವಕಾಶ ಸಿಕ್ಕಿತೆಂದು ಭಾವಿಸಿದ ಮಿಲಿಂದ ಮಹಾರಾಜ ಎಲ್ಲಾ ಯೋನಕರನ್ನು ಉದ್ದೇಶಿಸಿ ಅವರನ್ನು ಸಾಕ್ಷಿಯಾಗಿರಿಸಿ ಹೀಗೆ ಹೇಳಿದನು ಈ ನಾಗಸೇನರವರು ಹೇಳುವುದು ಏನೆಂದರೆ ಯಾವ ವ್ಯಕ್ತಿಯ (ಆತ್ಮದ) ಉಪಲಬ್ಧಿಯಿಲ್ಲ, ನಾಗಸೇನ ಎಂಬುದು ಕೇವಲ ನಾಮವೆಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಅವರನ್ನು ನಂಬಲು ಸಾಧ್ಯವೇ? ಎಂದು ಹೇಳಿ ಆತನು ನಾಗಸೇನರವರತ್ತ ತಿರುಗಿ ಈ ರೀತಿ ಹೇಳಿದನು ಭಂತೆ ನಾಗಸೇನರವರೇ, ಯಾವುದೇ ರೀತಿ ಆತ್ಮ (ವ್ಯಕ್ತಿ) ಇಲ್ಲದಿದ್ದರೇ ನಿಮಗೆ ಅಥವಾ ಸಂಘಕ್ಕೆ ಚೀವರಗಳನ್ನಾಗಲಿ, ಅಹಾರವನ್ನಾಗಲಿ ಮತ್ತು ವಸತಿ ಇನ್ನಿತರ ಪರಿಕರಗಳನ್ನು ನೀಡುವವರ್ಯಾರು? ಅದನ್ನು ಸ್ವೀಕರಿಸುವಾಗ ಆನಂದಿಸುವವರ್ಯಾರು? ಸಮ್ಮಾ ಜೀವನವನ್ನು ಜೀವಿಸುತ್ತಿರುವವನು ಯಾರು? ಧ್ಯಾನಕ್ಕೆ ಅಪರ್ಿತನಾಗಿರುವವನ್ಯಾರು? ನಿಬ್ಬಾಣ ಅಥವಾ ಅರಹತ್ವವನ್ನು ಪ್ರಾಪ್ತಿಮಾಡುವವನು ಯಾರು? ಜೀವಿಗಳನ್ನು ಹತ್ಯೆ ಮಾಡುವವನು ಯಾರು? ಕಳ್ಳತನ ಮಾಡುವವ ಯಾರು? ಯಾರು ವ್ಯಭಿಚಾರ ಮಾಡುತ್ತಿರುವುದು? ಸುಳ್ಳು ಹೇಳುತ್ತಿರುವುದು ಯಾರು? ಮದ್ಯಪಾನ ಸೇವಿಸುತ್ತಿರುವುದು ಯಾರು? ಈ ಪಂಚಶೀಲ ಭಂಗಿಸಿ ಈ ಜನ್ಮದಲ್ಲೇ ಕರ್ಮವಿಪಾಕ ಅನುಭವಿಸುತ್ತಿರುವವನು ಯಾರು? ನೀವು ಹೇಳುವ ಹಾಗೆ ಇದ್ದಿದ್ದರೆ, ಯಾವ ಕುಶಲವೂ ಇಲ್ಲ ಅಥವಾ ಪಾಪವೂ ಇಲ್ಲ. ಆಗ ಮಾಡುವವನೂ ಇಲ್ಲ ಅಥವಾ ಪಾಪ ಪುಣ್ಯಕ್ಕೆ ಕಾರಣಕರ್ತನೇ ಇಲ್ಲ. ಹಾಗೆಯೇ ಪಾಪ-ಪುಣ್ಯಗಳಿಗೆ ಫಲ ಅಥವಾ ಫಲಿತಾಂಶವೂ ಇಲ್ಲ. ನೀವೇ ಹೇಳುವ ಹಾಗಿದ್ದರೆ ನಾಗಸೇನರೇ ನಿಮ್ಮನ್ನು ಕೊಲ್ಲುವವನು ಕೊಲೆಗಾರನೇ ಅಲ್ಲ, ಹಾಗೆಯೇ ಸಂಘದಲ್ಲಿ ಯಾವ ಗುರುಗಳೂ ಇಲ್ಲ, ಯಾವ ಉಪಾಧ್ಯಾಯರು ಇಲ್ಲ, ಯಾವ ಪಬ್ಬಜ್ಜ ಸಹಾ ಇಲ್ಲ, ತಾವು ನಾಗಸೇನ ಎಂದು ತಿಳಿಯಲ್ಪಡುತ್ತೇನೆ. ಮಹಾರಾಜ, ಸಹಬ್ರಹ್ಮಚಾರಿಗಳು ಸಹ ಹೀಗೆ ಕರೆಯುತ್ತಾರೆ ಎಂದರಲ್ಲವೇ? ಯಾರನ್ನು ನೀವು ಹೇಳಿದ್ದು ನಾಗಸೇನ ಎಂದು, ಅಂದರೆ ಕೇಶವು ನಾಗಸೇನರೇ?
                ಇಲ್ಲ ಮಹಾರಾಜ.
                ಲೋಮ... ಉಗುರು... ದಂತ... ತ್ವಚೆ... ಮಾಂಸ... ನರಗಳು... ಅಸ್ಥಿ (ಮೂಳೆ)... ಅಸ್ಥಿಮಚ್ಚೆ... ಮೂತ್ರಪಿಂಡ... ಹೃದಯ... ಯಕೃತ್... ಕಿಬೊಟ್ಟೆ... ಪ್ಲೀಹ... ಪುಪ್ಪಸ... ದೊಡ್ಡ ಕರುಳು... ಸಣ್ಣ ಕರುಳು... ಉದರ... ಮಲ... ಪಿತ್ತ... ಕಫ... ರಕ್ತ... ಬೆವರು... ಕೊಬ್ಬು... ಆಶ್ರು... ವಸಾ... ಜೊಲ್ಲು... ಶ್ಲೇಷ್ಮ... ಕೀಲೆಣ್ಣೆ... ಮೂತ್ರ... ಮೆದುಳು... ಅಥವಾ ಯಾವುದಾದರೂ ಅಥವಾ ಎಲ್ಲವೂ ನಾಗಸೇನರೇ?
                ಇವೆಲ್ಲಕ್ಕೂ ಇಲ್ಲವೆಂದೇ ನಾಗಸೇನರವರು ಉತ್ತರಿಸಿದರು.
                ಹಾಗಾದರೆ ರೂಪವೂ (ದೇಹ) ನಾಗಸೇನರೇ?
                ಇಲ್ಲ ಮಹಾರಾಜ.
                ಹಾಗಾದರೆ ಸನ್ಯಾ... ಅಥವಾ ವೇದನಾ... ಸಂಖಾರ... ವಿನ್ಯಾಣ... ನಾಗಸೇನರೇ?
                ಇಲ್ಲ ಮಹಾರಾಜ...
                ಹಾಗಾದರೆ ಭಂತೆ ರೂಪ, ವೇದನಾ, ಸನ್ಯಾ, ಸಂಖಾರ, ವಿನ್ಯಾನ ಸೇರಿ ನಾಗಸೇನರೇ?
                ಇಲ್ಲ ಮಹಾರಾಜ.
                ಹಾಗಾದರೆ ಈ ಪಂಚಖಂಧಗಳ ಹೊರತು ಅನ್ಯ ಯಾವುದಾದರೂ ನಾಗಸೇನರೇ?
                ಇಲ್ಲ ಮಹಾರಾಜ.
                ಹಾಗಾದರೆ ನಾನು ಯಾವ ನಾಗಸೇನರನ್ನು ಹುಡುಕಲಾಗಲಿಲ್ಲ. ನಾಗಸೇನ ಎಂಬುದು ಕೇವಲ (ಶೂನ್ಯ) ಶಬ್ದವಷ್ಟೇ. ಹಾಗಿದ್ದಮೇಲೆ ನಾವು ನೋಡುತ್ತಿರುವ, ನಮ್ಮ ಮುಂದಿರುವ ನಾಗಸೇನ ಯಾರು? ಹಾಗಾದರೆ ಭಂತೆಯವರು ಹೇಳಿದ್ದು ಸುಳ್ಳೇ?
                ಆಗ ಭಂತೆ ನಾಗಸೇನರವರು ಮಿಲಿಂದ ಮಹಾರಾಜರಿಗೆ ಹೀಗೆ ಕೇಳಿದರು ಮಹಾರಾಜ, ನೀವು ತುಂಬಾ ಭೋಗದಲ್ಲೇ ಬೆಳೆದಿರುವಿರಿ. ಅದು ರಾಜಯೋಗ್ಯಕ್ಕೆ ತಕ್ಕುದಾಗಿದೆ. ನೀವು ಒಣಹವೆಯಲ್ಲಿ ಬಿಸಿಲಿನ ಮರಳಿನಲ್ಲಿ ನಡೆದರೆ ನಿಮ್ಮ ಪಾದಕ್ಕೆ ಹಾನಿಯಾಗುತ್ತದೆ ಮತ್ತು ನಿಮ್ಮ ಶರೀರಕ್ಕೆ ನೋವಾಗಿ, ಚಿತ್ತಕ್ಕೆ ಕ್ಷೊಭೆ ತರುವುದು. ಆಗ ನೀವು ಶಾರೀರಿಕ ದುಃಖ ಅನುಭವಿಸಬೇಕಾಗುತ್ತಿತ್ತು. ನೀವು ಹೇಗೆ ಇಲ್ಲಿಗೆ ಬಂದಿರಿ? ಕಾಲ್ನಡಿಗೆಯಲ್ಲೊ ಅಥವಾ ರಥದಲ್ಲೋ?
                ನಾನು ಕಾಲ್ನಡಿಗೆಯಲ್ಲಿ ಬಂದಿಲ್ಲ, ರಥದಲ್ಲಿ ಬಂದಿದ್ದೇನೆ.
                ಮಹಾರಾಜ ನೀವು ರಥದಲ್ಲೇ ಬಂದಿರುವುದಾಗಿದ್ದರೆ ನನಗೆ ಇದನ್ನು ವಿವರಿಸಿ, ಧ್ವಜಸ್ತಂಭವು ರಥವೇ?
                ಇಲ್ಲ ಭಂತೆ?
                ಗಾಲಿಯ ಅಚ್ಚು ರಥವೇ?
                ಇಲ್ಲ ಭಂತೆ?
                ಹಾಗಾದರೆ ಚಕ್ರಗಳು ರಥವೇ?
                ಇಲ್ಲ ಭಂತೆ?
                ಹಾಗಾದರೆ ರಥಪಂಜರ ಅಥವಾ ರಥದಂಡ ಯುಗ (ನೊಗ)... ಹಗ್ಗಗಳು... ಚಕ್ರದ ಅರಗಳು... ಮೊನೆಗೋಲು... ರಥವೇ?
                ಇವ್ಯಾವುದೂ ಇಲ್ಲವೆಂದು ಮಿಲಿಂದರು ಉತ್ತರಿಸಿದರು.
                ಹಾಗಾದರೆ ಇವೆಲ್ಲಾ ಭಾಗಗಳು ರಥವೇ?
                ಇಲ್ಲ ಭಂತೆ?
                ಅಥವಾ ಇವು ಬಿಟ್ಟು ಬಾಹ್ಯ ಅನ್ಯ ಯಾವುದಾದರೂ ರಥವೇ?
                ಇಲ್ಲ ಭಂತೆ?
                ಹಾಗಾದರೆ ಈ ರೀತಿಯೆಲ್ಲಾ ಕೇಳಿಯೂ ನಾನು ರಥವನ್ನು ಹುಡುಕಲಾಗಲಿಲ್ಲ. ರಥವೆಂಬುದು ಕೇವಲ ಶಬ್ದ (ಶೂನ್ಯ)ವಷ್ಟೇ. ನೀವು ರಥವೇರಿ ಬಂದೆ ಎಂದು ಹೇಳಿದಿರಿ. ಅದು ಏನು? ಮಹಾರಾಜರು ಏನಾದರೂ ಸುಳ್ಳು ಹೇಳಿದರೆ? ರಥದಂತಹ ವಿಷಯವೇ ಇಲ್ಲ. ಮಹಾರಾಜರಾದ ತಾವು ಜಂಬು ದ್ವೀಪಕ್ಕೆ ಅಗ್ರರಾಜರು. ಹಾಗಿದ್ದರೂ ಯಾರಿಗೆ ಹೆದರಿ ನೀವು ಸುಳ್ಳನ್ನು ಹೇಳಿದ್ದಿರಿ? ಎಂದು ಹೇಳಿ ಅವರು ಯೋನಕರನ್ನು ಮತ್ತು ಸಂಘವನ್ನು ಸಾಕ್ಷಿಯಾಗಿರಿಸಿ ಹೀಗೆ ಹೇಳಿದರು ಈ ಮಿಲಿಂದ ಮಹಾರಾಜರು ರಥದಲ್ಲಿ ಬಂದೆ ಎಂದು ಹೇಳುತ್ತಾರೆ. ಆದರೆ ರಥವೇನು ಎಂದು ಕೇಳಿದರೆ, ಅದನ್ನು ಒತ್ತಿ ಹೇಳಲು ಅಸಮರ್ಥರಾಗಿದ್ದಾರೆ. ಈ ವಿಷಯದಲ್ಲಿ ಅವರಿಗೆ ದಿಟವಾಗಿ ಒಪ್ಪಿಕೊಳ್ಳಲಾಗುವುದೇ? ಇದನ್ನು ಕೇಳಿದ 500 ಯೋನಕರು ಮೆಚ್ಚುಗೆ ವ್ಯಕ್ತಪಡಿಸಿ, ರಾಜನಿಗೆ ಹೀಗೆ ಹೇಳಿದರು ಮಹಾರಾಜನೆ, ಸಾಧ್ಯವಾದಷ್ಟು ಇದರಿಂದ ಹೊರಬನ್ನಿರಿ.
                ಆಗ ಮಿಲಿಂದ ಮಹಾರಾಜರು ನಾಗಸೇನರಿಗೆ ಹೀಗೆ ಹೇಳಿದರು ನಾನು ಸುಳ್ಳು ಹೇಳಿಲ್ಲ ಭಂತೆ, ಧ್ವಜಸ್ತಂಭ, ಅಚ್ಚು, ರಥಪಂಜರ, ರಥದಂಡ, ಯುಗ, ಹಗ್ಗಗಳು, ಅರಗಳು ಮತ್ತು ಮೊನೆಗೋಲು ಇವೆಲ್ಲಾ ಇದ್ದಾಗ ರಥವೆಂದು ಸಾಮಾನ್ಯವಾಗಿ ನಾಮಮಾತ್ರಕ್ಕೆ ವ್ಯವಹರಿಸುತ್ತೇವೆ.
                ಸಾಧು ಮಹಾರಾಜ! ನೀವು ಈಗ ರಥದ ನಿಜ ಅರ್ಥವನ್ನು ಅರಿತಿರುವಿರಿ ಮತ್ತು ಅದೇರೀತಿಯಲ್ಲಿಯೇ ನೀವು ನನಗೆ ಕೇಳಿದ್ದ ಕಾಯದ 32 ಭಾಗಗಳಾಗಲಿ ಅಥವಾ ಪಂಚಖಂದಗಳಾಗಲಿ ನಾಗಸೇನವಲ್ಲ, ವ್ಯವಹಾರೋಚಿತವಾಗಿ ನಾಮಮಾತ್ರಕ್ಕೆ ನಾಗಸೇನ ಎಂದು ಬಳಸುತ್ತಾರೆ. ಆದರೆ ಪರಮಾರ್ಥದಲ್ಲಿ ಯಾವ ವ್ಯಕ್ತಿಯೂ (ಆತ್ಮವೂ) ಲಭಿಸುವುದಿಲ್ಲ. ಮಹಾರಾಜ ಕೇಳು, ಭಗವಾನರ ಸಮ್ಮುಖದಲ್ಲಿ ವಜಿರಾ ಎಂಬ ಭಿಕ್ಖುಣಿಯು ಹೀಗೆ ಹೇಳಿದ್ದಳು.
                ಹೇಗೆ ಅಂಗ ಸಲಕರಣೆಗಳ ವಸ್ತುಗಳನ್ನು ರಥ ಎಂಬ ಶಬ್ದದಿಂದ ಬಳಕೆ ಮಾಡುತ್ತೇವೆಯೋ ಹಾಗೆಯೇ ಖಂಧಗಳನ್ನು ವ್ಯವಹಾರಿಕವಾಗಿ ಜೀವಿ ಎಂದು ಹೇಳುತ್ತೇವೆ.
                ಆಶ್ಚರ್ಯ ಭಂತೆ, ನಾಗಸೇನ ಅದ್ಭುತ ಭಂತೆ, ನಾಗಸೇನ ಅತ್ಯಂತ ಕ್ಲಿಷ್ಟವಾದ ಪ್ರಶ್ನೆಗಳನ್ನು ಹಾಕಿದರೂ ಸಹಾ ಬಗೆಹರಿಸಿದಿರಿ. ಒಂದುವೇಳೆ ಇಲ್ಲಿ ಬುದ್ಧ ಭಗವಾನರು ಇದ್ದಿದ್ದರೆ ನಿಮ್ಮ ಉತ್ತರಕ್ಕೆ ಸಾಧುಕಾರವನ್ನು (ಶ್ಲಾಘಿಸುತ್ತಿದ್ದರು) ಮಾಡುತ್ತಿದ್ದರು. ಸಾಧು ಸಾದು ನಾಗಸೇನರವರೆ, ಕ್ಲಿಷ್ಟವಾದ ಸಮಸ್ಯೆ ಬಿಡಿಸಿದಿರಿ.
2. ವರ್ಷಗಣನೆ ಪ್ರಶ್ನೆ
                ಎಷ್ಟು ವರ್ಷವಾಸಗಳನ್ನು ನೀವು ಕಳೆದಿರುವಿರಿ. ನಾಗಸೇನರವರೇ?       (2)
                ಏಳು ಮಹಾರಾಜ.
                ಆದರೆ ಏಳು ಎಂದು ಹೇಗೆ ಹೇಳುವಿರಿ? ಅದು ನೀವೇ ಏಳೇ(7) ಅಥವಾ ಸಂಖ್ಯೆ 7 (ಏಳೇ)?
                ಅದೇ ಸಮಯದಲ್ಲಿ ರಾಜನ ನೆರಳು ಭೂಮಿಯಲ್ಲಿ ಕಾಣುತ್ತಿತ್ತು ಮತ್ತು ಅವರ ಪ್ರತಿಬಿಂಬವು ಪಾತ್ರೆಯ ನೀರಿನಲ್ಲಿ ಕಾಣುತ್ತಿತ್ತು. ರಾಜನು ಸಹಾ ಸವರ್ಾಭರಣಗಳಿಂದ ಶೋಭಿಸುತ್ತಿದ್ದನು. ಆಗ ನಾಗಸೇರವರು ಮಿಲಿಂದರಿಗೆ ಹೀಗೆ ಕೇಳಿದರು ನಿಮ್ಮ ರೂಪರಚನೆ ಓ ಮಹಾರಾಜ ನೀರಿನಲ್ಲಿ ಪ್ರತಿಬಿಂಬಿಸುತ್ತಿದೆ. ಹಾಗು ಛಾಯೆಯು ನೆಲದಲ್ಲಿ ಕಾಣಿಸುತ್ತಿದೆ. ಹೀಗಿರುವಾಗ ನೀವು ರಾಜರೇ ಅಥವಾ ಪ್ರತಿಬಂಬವು ರಾಜರೇ ತಿಳಿಸಿ?
                ಭಂತೆ ನಾಗಸೇನರೇ, ನಾನು ರಾಜ ಹೊರತು ಛಾಯೆಯಲ್ಲ, ಛಾಯೆಯು ನನ್ನ ಅಸ್ತಿತ್ವ ಅವಲಂಬಿಸಿ ಬಂದಿದೆ.
                ಹಾಗೆಯೇ ಮಹಾರಾಜ, ವರ್ಷಗಳ ಸಂಖ್ಯೆಯು ಏಳು ಹೊರತು ನಾನಲ್ಲ, ಆದರೆ ನನ್ನಿಂದ ಅದು ಬಂದಿದೆ ರಾಜ. ಮತ್ತು ನನ್ನದು ಎಂಬುದು ನಿಮ್ಮ ಛಾಯೆಯ ರೀತಿ ಅರ್ಥ ವ್ಯಕ್ತಪಡಿಸುತ್ತದೆ.
                ಆಶ್ಚರ್ಯ ಭಂತೆ ನಾಗಸೇನ, ಅದ್ಭುತವು ಭಂತೆ ನಾಗಸೇನ! ನನ್ನಿಂದ ಬಹು ಕಷ್ಟಕರವಾದ ಪ್ರಶ್ನೆ ಹಾಕಲ್ಪಟ್ಟರೂ ನೀವು ಬಗೆಹರಿಸಿದ್ದೀರಿ.
3. ಮಿಮಾಂಸೆಯ ಪ್ರಶ್ನೆ
                ರಾಜ ಕೇಳಿದನು ಭಂತೆ ನಾಗಸೇನ, ನೀವು ನನ್ನೊಂದಿಗೆ ಮತ್ತೆ ಚಚರ್ಿಸುವಿರಾ?(3)
                ಮಹಾರಾಜರು ಪಂಡಿತರ ರೀತಿ ಚಚರ್ಿಸುವುದಾದರೆ ಒಳ್ಳೆಯದು, ಆದರೆ ರಾಜನಂತೆ ಚಚರ್ಿಸುವುದಾದರೆ ಬೇಡ?
                ಹಾಗಾದರೆ ಪಂಡಿತರು ಹೇಗೆ ಚಚರ್ಿಸುವರು?
                ಯಾವಾಗ ಪಂಡಿತರು ಒಂದು ವಿಷಯದಿಂದ ಇನ್ನೊಂದು ವಿಷಯ ಮಾತನಾಡುವಾಗ ಸುತ್ತಿಬಳಸಿ ಮಾತನಾಡುವಾಗ, ಸಾಟಿಯಿಲ್ಲದವರಾಗಿರುತ್ತಾರೆ. ಒಬ್ಬ ಅಥವಾ ಇನ್ನೊಬ್ಬ ತಪ್ಪು ಎಂದು ಸಾಧಿಸಿ ನಿರೂಪಿಸುತ್ತಾರೆ. ಆಗ ಮತ್ತೊಬ್ಬ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಒಬ್ಬರು ಮತ್ತೊಬ್ಬರನ್ನು ನಿಗ್ರಹಿಸುವರು. ತಮ್ಮ ವಾದ ಪರಾಕ್ರಮ ತೋರಿಸುವರು. ವ್ಯತ್ಯಾಸ ತೋರಿಸುವರು ಅಥವಾ ಶ್ರೇಷ್ಠತೆ ತೋರಿಸುವರು ಮತ್ತು ಹಾಗೆಯೇ ನಿರಾಕರಿಸುವರು, ವಿರೋಧಿಸುವರು. ಹಾಗಿದ್ದರೂ ಸಹಾ ಅವರು ಕುಪಿತರಾಗುವುದಿಲ್ಲ. ಈ ರೀತಿಯಲ್ಲಿ ಪಂಡಿತರು ಚಚರ್ಿಸುವರು ಮಹಾರಾಜ.
                ಹಾಗಾದರೆ ರಾಜರು ಹೇಗೆ ಚಚರ್ಿಸುವರು?
                ಮಹಾರಾಜ, ರಾಜ ಚಚರ್ಿಸುವಾಗ ತನ್ನ ವಿಷಯವನ್ನೇ ತೆಗೆದುಕೊಂಡು ಮುನ್ನಡೆಯುತ್ತಾನೆ, ಪರರು ಆ ವಿಷಯದಲ್ಲಿ ವ್ಯತ್ಯಾಸ ತೋರಿಸಿದಲ್ಲಿ (ದೋಷ ತೋರಿಸಿದಲ್ಲಿ) ರಾಜನು ದಂಡಹಾಕಲು ಮುಂದಾಗುತ್ತಾನೆ. ಈ ವ್ಯಕ್ತಿಗೆ ಇಂತಹ ದಂಡನೆ ಅಥವಾ ಶಿಕ್ಷೆ ವಿಧಿಸಿ ಎಂದು ಅಜ್ಞಾಪಿಸುತ್ತಾನೆ. ಹೀಗೆ ರಾಜರು ಚಚರ್ಿಸುವರು ಮಹಾರಾಜ.
                ಭಂತೆ, ಹಾಗಿದ್ದರೆ ನಾನು ಪಂಡಿತನಂತೆ ಚಚರ್ಿಸುವೆ ಹೊರತು ರಾಜನಂತಲ್ಲ. ಪೂಜ್ಯರು ಸ್ವತಂತ್ರವಾಗಿ ಮಾತನಾಡುವಂತಾಗಲಿ, ಹೇಗೆಂದರೆ ಸೋದರನೊಂದಿಗೆ ಅಥವಾ ಶಿಷ್ಯನೊಂದಿಗೆ ಅಥವಾ ಉಪಾಸಕನೊಂದಿಗೆ ಅಥವಾ ಸೇವಕರೊಂದಿಗೆ ಮಾತನಾಡುವಂತೆ ಚಚರ್ಿಸಲಿ, ಯಾವುದೇ ಭಯ ಬೇಡ.
                ತುಂಬಾ ಒಳ್ಳೆಯದು ಮಹಾರಾಜ ಎಂದು ನಾಗಸೇನರವರು ಅಭಿನಂದಿಸಿದರು.
                ಭಂತೆ ನಾಗಸೇನ, ನಾನು ಪ್ರಶ್ನೆ ಒಂದನ್ನು ಕೇಳಲು ಇಚ್ಛಿಸುವೆ?
                ಅಭ್ಯಂತರವೇನಿಲ್ಲ ಕೇಳಿ ಮಹಾರಾಜ.
                ನಾನು ಕೇಳಿದ್ದೇನೆ ಭಂತೆ.
                ಹಾಗಾದರೆ ನಾನೂ ಸಹ ಈಗಾಗಲೇ ಉತ್ತರಿಸಿದ್ದೇನೆ.
                ಏನೆಂದು ಉತ್ತರಿಸಿದ್ದೀರಿ ಭಂತೆ?
                ಮಹಾರಾಜ, ಏನೆಂದು ಪ್ರಶ್ನಿಸಿದ್ದೀರಿ?
4. ಅನಂತಕಾಯರವರ ಪ್ರಶ್ನೆ
                ಆಗ ಮಿಲಿಂದ ರಾಜನು ಈ ರೀತಿ ಯೋಚಿಸುತ್ತಾನೆ ಈ ಭಿಕ್ಖು ಮಹಾ ಪಂಡಿತನಾಗಿದ್ದಾನೆ. ನಿಜಕ್ಕೂ ಈತ ನನ್ನೊಂದಿಗೆ ಚಚರ್ಿಸಲು ಅತ್ಯಂತ ಅರ್ಹನಾಗಿದ್ದಾನೆ ಮತ್ತು ನನ್ನ ಬಳಿ ಕೇಳಬೇಕಾಗಿರುವಂತಹ ಅಂಶಗಳು ಹೇರಳವಾಗಿವೆ, ಪ್ರಶ್ನೆಗಳು ಸಹಾ ಹೆಚ್ಚಿವೆ. ಆದರೆ ಅವುಗಳನ್ನೆಲ್ಲಾ ಕೇಳುವಷ್ಟರಲ್ಲಿ ಸೂರ್ಯಾಸ್ತವಾಗುತ್ತದೆ. ಆದ್ದರಿಂದ ಚಚರ್ೆಯನ್ನು ನಾಳೆಗೆ ಮುಂದೂಡೋಣ. ದೇವಮಂತಿಯರಿಗೆ ಹೀಗೆ ಹೇಳುತ್ತಾನೆ. ದೇವಮಂತಿಯ, ಭಂತೆಯವರಿಗೆ ನಾಳೆ ಅರಮನೆಯಲ್ಲಿ ಪುನಃ ಚಚರ್ಿಸೋಣವೆಂದು ಹೇಳು. ಹೀಗೆ ಹೇಳಿ ಆತ ಕುದುರೆಯನ್ನು ಏರಿ ಹೊರಟನು. ದಾರಿಯಲ್ಲೆಲ್ಲಾ ನಾಗಸೇನ, ನಾಗಸೇನ ಎಂದು ಉಚ್ಚರಿಸುತ್ತಾ ಇದ್ದನು.
                ದೇವಮಂತಿಯ ಈ ಸಂದೇಶವನ್ನು ನಾಗಸೇನರಿಗೆ ತಲುಪಿಸಿದನು. ಪೂಜ್ಯ ನಾಗಸೇನರು ಆನಂದದಿಂದ ಈ ಸಲಹೆಗೆ ಒಪ್ಪಿದರು. ಮಾರನೆಯದಿನದ ಮುಂಜಾನೆ ದೇವಮಂತಿಯ, ಅನಂತಕಾ, ಮಂಕುರ ಮತ್ತು ಸಬ್ಬದಿನ್ನರು ರಾಜನ ಬಳಿಗೆ ಹೋಗಿ ಹೀಗೆ ಹೇಳಿದರು ಭಂತೆ ನಾಗಸೇನರವರು ಇಂದು ಬರುವರೇ ಮಹಾರಾಜ?
                ಹೌದು ಅವರು ಬರುವರು.
                ಎಷ್ಟು ಮಂದಿ ಭಿಕ್ಖು ಸಂಘದೊಂದಿಗೆ ಅವರು ಬರುವರು?
                ಅವರು ಇಷ್ಟಪಟ್ಟಷ್ಟು.
                ಆಗ ಸಬ್ಬದಿನ್ನರು ಹೀಗೆ ಹೇಳಿದರು ಅವರು ಹತ್ತು ಜನರೊಂದಿಗೆ ಬರುವಂತಾಗ ಬಹುದೇ?
                ಆದರೆ ರಾಜನು ಇಷ್ಟಪಟ್ಟಷ್ಟು ಮಂದಿ ಬರಲಿ ಎಂದನು. ಆಗ ಸಬ್ಬದಿನ್ನರು ಮತ್ತೆ ಅದೇ ಸಲಹೆ ನೀಡಿದರು. ಆಗ ರಾಜರು ಎಲ್ಲಾ ಸಿದ್ಧತೆಗಳು ಸಿದ್ಧವಾಗಿವೆ ಮತ್ತು ನಾನು ಹೇಳುತ್ತಿದ್ದೇನೆ, ಅವರು ಇಷ್ಟಪಟ್ಟಷ್ಟು ಭಿಕ್ಖುಗಳನ್ನು ಕರೆತರಬಹುದು ಎಂದರು. ಸಬ್ಬದಿನ್ನರು ಮತ್ತೆ ಹಾಗೆ ಹೇಳಿದಾಗ, ರಾಜನು ಗಂಭೀರವಾಗಿ ಹೇಳಿದನು ಅವರು ಬಹಳಷ್ಟು ಮಂದಿಯೊಂದಿಗೆ ಬಂದರೆ, ನಾವು ಅವರಿಗೆ ಉಣಿಸಲು ಅಗದಷ್ಟು ಅಸಮರ್ಥರೇ? ಆಗ ಸಬ್ಬದಿನ್ನರು ಅವಮಾನಿತರಾಗಿ ಸುಮ್ಮನಾದರು.
                ಆಗ ದೇವಮಂತಿಯ ಅನಂತಕಾಯ ಮತ್ತು ಮಂಕುರರು ನಾಗಸೇನರಲ್ಲಿಗೆ ಹೋಗಿ ರಾಜನ ಸಂದೇಶ ತಿಳಿಸಿದರು ಮತ್ತು ಭಂತೆ ನಾಗಸೇನರವರು ಚೀವರ ಧರಿಸಿ ಪಿಂಡಪಾತ್ರೆಯನ್ನು ತೆಗೆದುಕೊಂಡು ಮಧ್ಯಾಹ್ನಕ್ಕೆ ಮುಂಚೆಯೇ ಇಡೀ ಸಂಘದ ಸಮೇತ ಸಾಗಲಕ್ಕೆ ಹೊರಟರು ಮತ್ತು ಅನಂತಕಾಯರವರು ನಾಗಸೇನರವರ ಪಕ್ಕದಲ್ಲೇ ಇದ್ದು ಜೊತೆಗೆ ನಡೆದರು. ಆಗ ಅವರು ಹೀಗೆ ಕೇಳಿದರು ಪೂಜ್ಯರೇ, ನಿಮಗೆ ನಾಗಸೇನ ಎಂದು ಕರೆಯುತ್ತೇವೆ, ಹಾಗೆಂದರೆ ಏನದು?
                ನಿಮ್ಮ ಪ್ರಕಾರ ನಾಗಸೇನ ಅಂದರೆ ಏನು? ಪ್ರತಿಯಾಗಿ ನಾಗಸೇನರು ಪ್ರಶ್ನಿಸಿದರು.
                ಅಂದರೆ ಆತ್ಮವೇ, ಯಾವುದು ಒಳಉಸಿರು ಹಾಗು ಹೊರ ಉಸಿರೋ ಅದನ್ನೇ ನಾನು ನಾಗಸೇನ ಎಂದು ತಿಳಿದಿರುವೆನು?
                ಆದರೆ ಯಾವಾಗ ಉಸಿರು ಹೊರ ಹೋಗುವುದೋ ಅದು ಹಿಂತಿರುಗುವುದಿಲ್ಲ. ಅಂತಹ ಸಮಯದಲ್ಲಿ ಮಾನವ ಜೀವಂತವಾಗಿರುವನೋ?
                ಖಂಡಿತವಾಗಿ ಇಲ್ಲ.
                ಆದರೆ ಯಾವ ತುತ್ತೂರಿಗಾರರು (ಶಂಖ ಊದುವವರು) ತಮ್ಮ ವಾಯು ವಾದ್ಯ ಊದಿದ ಮೇಲೆ ಅವರಿಂದ ಹೊರಬಂದಂತಹ ವಾಯುವು (ವಾತವು) ಮತ್ತೆ ಅವರಲ್ಲಿಗೆ ಸೇರುತ್ತದೆಯೇ?
                ಇಲ್ಲ ಭಂತೆ, ಹಾಗೆ ಆಗದು.
                ಅಥವಾ ಯಾವ ನಾದಸ್ವರವಾದಕರು ಅಥವಾ ಕೊಂಬುಗಳನ್ನು ಊದುವವರು ಆವಾಗಲಾದರೂ ಅವರ ಉಸಿರು ಮತ್ತೆ ಅವರಲ್ಲಿಗೆ ಬರುತ್ತದೆಯೇ?
                ಇಲ್ಲ ಭಂತೆ.
                ಹಾಗಾದರೆ ಅವರೇಕೆ ಸಾಯಲಿಲ್ಲ?
                ನಾನು ತಮ್ಮಂತಹ ಪ್ರಾಜ್ಞರೊಂದಿಗೆ ವಾದಿಸಲು ಅಸಮರ್ಥನಾಗಿದ್ದೇನೆ ಭಂತೆ, ದಯವಿಟ್ಟು ಅದನ್ನು ಹೇಗೆ ಎಂದು ನೀವೇ ವಿವರಿಸಿ.
                ಅದು ಹೇಗೆಂದರೆ ಉಸಿರಿನಲ್ಲಿ ಆತ್ಮವಿರುವುದಿಲ್ಲ, ಈ ಒಳಉಸಿರು ಮತ್ತು ಹೊರ ಉಸಿರುಗಳು ಕೇವಲ ಕಾಯ ಸಂಖಾರದ ಮೂಲಭೂತ ಬಲಗಳಾಗಿವೆ ಅಷ್ಟೆ ಎಂದು ನುಡಿದು ಅವರಿಗೆ ಅಭಿಧಮ್ಮವನ್ನು ಪರಿಣಾಮಾತ್ಮಕವಾಗಿ ವಿವರಿಸಿದಾಗ ಅನಂತಕಾಯರವರು ತೃಪ್ತರಾಗಿ ತಾವು ಸಹಾ ಉಪಾಸಕರೆಂದು ಘೋಷಿಸಿದರು.
5. ಪಬ್ಬಜ್ಜದ ಪ್ರಶ್ನೆ
                ಪೂಜ್ಯ ನಾಗಸೇನರು ರಾಜನಿದ್ದಲ್ಲಿಗೆ ಹೋಗಿ ಅವರಿಗಾಗಿ ಸಿದ್ಧಪಡಿಸಿದ್ದ ಪೀಠದಲ್ಲಿ ಕುಳಿತರು. ಸ್ವತಃ ರಾಜನೇ ವಿವಿಧರೀತಿ ಭೋಜನವನ್ನು ನಾಗಸೇನರಿಗೆ ಬಡಿಸಿದನು. ಸಂಘದ ಪ್ರತಿ ಭಿಕ್ಖುವಿಗೂ ಚೀವರವನ್ನು ದಾನ ಮಾಡಿದನು. ನಾಗಸೇನರಿಗೆ ಮೂರು ಚೀವರ ದಾನ ಮಾಡಿದನು. ನಂತರ ಮಿಲಿಂದ ರಾಜನು ಈ ರೀತಿ ಹೇಳಿದನು: ಭಂತೆ ನಾಗಸೇನ, ದಯವಿಟ್ಟು ಇಲ್ಲಿ ಕುಳಿತುಕೊಳ್ಳಿ ಮತ್ತು ತಮ್ಮ ಜೊತೆ 10 ಭಿಕ್ಖುಗಳಿರಲಿ, ಉಳಿದವರು ಊಟದ ನಂತರ ಹೋಗುವಂತಾಗಲಿ.
                ನಂತರ ನಾಗಸೇನರವರು ಭೋಜನ ಮುಗಿಸಿದ ನಂತರ ರಾಜ ಅವರ ಹತ್ತಿರದಲ್ಲಿ ಬಂದು ಅವರಿಗಿಂತ ತಗ್ಗಾದ ಪೀಠದಲ್ಲಿ ಕುಳಿತನು. ಹಾಗು ಹೀಗೆ ಹೇಳಿದನು ನಾವು ಚಚರ್ಿಸೋಣವೇ.
                ನಾವು ಧಮ್ಮದ (ಅರ್ಥ/ಸತ್ಯ) ಬಗ್ಗೆ ಕೇಂದ್ರೀಕೃತವಾಗಿ ಚಚರ್ಿಸೋಣ, ಮಹಾರಾಜ ಧಮ್ಮದ ಬಳಿ ಬರೋಣ.
                ಆಗ ರಾಜ ಪ್ರಶ್ನಿಸಿದನು ಭಂತೆ ನಿಮ್ಮ ಪಬ್ಬಜ್ಜ (ಗೃಹಪರಿತ್ಯಾಗ)ದ ಉದ್ದೇಶವೇನು? ಮತ್ತು ನಿಮ್ಮ ಪರಮಾರ್ಥದ ಗುರಿ ಯಾವುದು?       (4)
                ಪಬ್ಬಜ್ಜದ ಉದ್ದೇಶವೇನೆಂದರೆ ದುಃಖವನ್ನು ಅಂತ್ಯಗೊಳಿಸುವುದು ಮತ್ತು ದುಃಖವನ್ನು ಉದಯಗೊಳಿಸದಿರುವುದು. ಇದೇ ಪಬ್ಬಜ್ಜದ ಉದ್ದೇಶವಾಗಿದೆ ಮಹಾರಾಜ. ಮತ್ತು ನಮ್ಮ ಪರಮಾರ್ಥದ ಗುರಿ ಏನೆಂದರೆ ಅನುಪಾದ ಪರಿನಿಬ್ಬಾಣ ಪಡೆಯುವುದೇ ಆಗಿದೆ.
                ಭಂತೆ ನಾಗಸೇನರವರೇ, ಎಲ್ಲರೂ ಇದೇ ಅರ್ಥದಲ್ಲಿ ಪಬ್ಬಜ್ಜ ಸ್ವೀಕರಿಸುವರೇ?
                ಖಂಡಿತ ಇಲ್ಲ. ಹಲವರು ಹಲವಾರು ಕಾರಣಗಳಿಂದ ಸ್ವೀಕರಿಸುವರು. ಉದಾಹರಣೆಗೆ ಕೆಲವರು ರಾಜನ ನಿರಂಕುಶ ಪ್ರಭುತ್ವದ ಕಿರುಕುಳಕ್ಕೆ ಹೆದರಿ ಸ್ವೀಕರಿಸುವರು. ಕೆಲವರು ಚೋರರಿಂದ ಸಂರಕ್ಷಿತವಾಗಿರಲು ಪಬ್ಬಜ್ಜ ಸ್ವೀಕರಿಸುವರು. ಮತ್ತೆ ಕೆಲವರು ಸಾಲಗಾರರಿಂದ ಮುಕ್ತರಾಗಲು ಪಬ್ಬಜ್ಜ ಸ್ವೀಕರಿಸುವರು, ಕೆಲವರು ಜೀವನೋಪಾಯ ನಡೆಸಲು ಪಬ್ಬಜ್ಜ ಸ್ವೀಕರಿಸುವರು.
                ಹಾಗಾದರೆ ನೀವು ಯಾವ ಉದ್ದೇಶದಿಂದ ಸಂಘವನ್ನು ಸೇರಿದಿರಿ?
                ನಾನು ಪಬ್ಬಜ್ಜ ಪಡೆದಾಗ ನಾನಿನ್ನು ಬಾಲಕನಾಗಿದ್ದೆ. ನನಗೆ ಆಗ ಅಂತಿಮ ಗುರಿ ಗೊತ್ತಿರಲಿಲ್ಲ. ಆದರೆ ಈಗ ಹೀಗೆ ಚಿಂತಿಸುವೆನು. ಈ ಬೌದ್ಧ ಭಿಕ್ಖುಗಳು ಅಂತ್ಯಂತ ಪಂಡಿತ ಪ್ರಾಜ್ಞರಾಗಿದ್ದಾರೆ, ನನಗೆ ಕಲಿಸಲು ಸಾಮಥ್ರ್ಯವುಳ್ಳವರಾಗಿದ್ದಾರೆ ಮತ್ತು ಅವರಿಂದಲೇ ನಾನು ಕಲಿಯಲ್ಪಟ್ಟೆನು. ಆದರೆ ಈಗ ನನಗೆ ಪಬ್ಬಜ್ಜದ ಉದ್ದೇಶ ಮತ್ತು ಲಾಭದ ಅರಿವು ನನಗಿದೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನರವರೇ.
6. ಪಟಿಸಂದಿಯ ಪ್ರಶ್ನೆ (ಪುನರ್ಜನ್ಮದ ಪ್ರಶ್ನೆ)
                ರಾಜರು ಪ್ರಶ್ನಿಸಿದರು ನಾಗಸೇನರವರೆ, ಯಾರಾದರೂ ಸತ್ತನಂತರ ಪುನರ್ಜನ್ಮ ಪಡೆದವರು ಇದ್ದಾರೆಯೇ?          (5)
                ಕೆಲವರು ಇದ್ದಾರೆ ಮತ್ತು ಹಲವರು ಇಲ್ಲ.
                ಯಾರವರು?
                ಸಕ್ಲೇಶವುಳ್ಳವರು ಪುನರ್ಜನ್ಮ ಪಡೆಯುವರು, ನಿಃಕ್ಲೇಶ (ಕ್ಲೇಶಗಳು ಇಲ್ಲದವರು)ರು ಜನ್ಮಿಸುವುದಿಲ್ಲ.
                ನೀವು ಪುನಃ ಜನ್ಮಿಸುವಿರಾ?
                ನಾನು ಸಉಪಾದಾನದಿಂದ (ಅಂಟುವಿಕೆಯಿಂದ) ಇದ್ದು ಮರಣಿಸಿದರೆ ಹೌದು, ಆದರೆ ಅನುಪದಾನದಿಂದ (ಅಂಟುವಿಕೆಯಿಲ್ಲದೆ) ಇದ್ದು ಮರಣಿಸಿದರೆ ಇಲ್ಲ.
                ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ.
7. ಯೋನಿಸೋ ಮನಸಿಕಾರದ ಪ್ರಶ್ನೆ
                ರಾಜ ಪ್ರಶ್ನಿಸಿದನು ಯೋಗ್ಯ ಗಮನಹರಿಸುವಿಕೆ (ತರ್ಕ)ಯಿಂದ ಒಬ್ಬನು ಪುನರ್ಜನ್ಮದಿಂದ ಪಾರಾಗಬಹುದೇ?        (6)
                ಮಹಾರಾಜ, ಯೋಗ್ಯ ಗಮನಹರಿಸುವಿಕೆಯ ಜೊತೆಗೆ ಪ್ರಜ್ಞಾ ಮತ್ತು ಇನ್ನಿತರ ಕುಶಲಧಮ್ಮದಿಂದ ಆತನು ಪಾರಾಗುತ್ತಾನೆ.
                ಯೋನಿಸೋ ಮನಸಿಕಾರೋ (ಯೋಗ್ಯ ಗಮನಹರಿಸುವಿಕೆ) ಮತ್ತು ಪನ್ಯಾ (ಪ್ರಜ್ಞಾ) ಇವೆರಡು ಒಂದೆಯೇ?
                ಇಲ್ಲ ಮಹಾರಾಜ, ಯೋಗ್ಯ ಗಮನಹರಿಸುವಿಕೆಯೇ ಬೇರೆ, ಪ್ರಜ್ಞಾವೇ ಬೇರೆ ಆಗಿದೆ. ಉದಾಹರಿಸುವುದಾದರೆ ಕುರಿ ಮತ್ತು ಮೇಕೆಗಳು, ಎತ್ತುಗಳು ಮತ್ತು ಎಮ್ಮೆಗಳು, ಒಂಟೆ ಮತ್ತು ಕತ್ತೆಗಳು ಗಮನಹರಿಸುವಿಕೆಯನ್ನು ಹೊಂದಿವೆ. ಆದರೆ ಅವಕ್ಕೆ ಪನ್ಯಾ (ಪ್ರಜ್ಞಾ) ಇಲ್ಲ.
                ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನರವರೆ.
8. ಮನಸಿಕಾರದ ಲಕ್ಷಣ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನರವರೆ, ತರ್ಕದ (ಮನಸಿಕಾರದ) (ಗಮನಹರಿಸುವಿಕೆಯ) ಲಕ್ಷಣ ಯಾವುದು? ಮತ್ತು ಪನ್ಯಾದ ಲಕ್ಷಣ ಯಾವುದು?(7)
                ಮಹಾರಾಜ, ಅರಿವಿನ ಹಿಡಿತವೇ ತರ್ಕದ (ಮನಸಿಕಾರ/ಗಮನಹರಿಸುವಿಕೆಯ) ಲಕ್ಷಣವಾಗಿದೆ ಮತ್ತು ಕತ್ತರಿಸುವಿಕೆಯು ಪನ್ಯಾದ ಲಕ್ಷಣವಾಗಿದೆ.
                ಇದು ಹೇಗೆಂದು ದೃಷ್ಟಾಂತದಿಂದ ಸ್ಪಷ್ಟಪಡಿಸಿ.
                ನೀವು ಬಾರ್ಲಿ ಕೊಯ್ಯುವವರನ್ನು ನೆನೆಯುವಿರಾ?
                ಖಂಡಿತವಾಗಿ.
                ಅವರು ಹೇಗೆ ಬಾರ್ಲಿಯನ್ನು ಕೊಯ್ಯುವರು?
                ಅವರು ಎಡಗೈಯಿಂದ ಬಾರ್ಲಿಯನ್ನು ಹಿಡಿದು, ಬಲಗೈಯಿಂದ ಕುಡಗೋಲು ತೆಗೆದುಕೊಂಡು ಬಾರ್ಲಿಯನ್ನು ಕತ್ತರಿಸುತ್ತಾರೆ.
                ಅದೇ ರೀತಿಯಲ್ಲಿ ಮಹಾರಾಜ, ಯೋಗವಚರನು (ಭಿಕ್ಖುವು) ಮನಸಿಕಾರದಿಂದ (ತರ್ಕದಿಂದ) ಮನಸ್ಸನ್ನು ಹಿಡಿದು, ಪನ್ಯಾದಿಂದ ಕ್ಲೇಶಗಳನ್ನು ಛೇದಿಸುತ್ತಾನೆ. ಈ ರೀತಿಯಾಗಿ ಮನಸಿಕಾರದ ಲಕ್ಷಣ ಹಿಡಿಯುವಿಕೆಯಾಗಿದೆ ಮತ್ತು ಪನ್ಯಾದ ಲಕ್ಷಣ ಕತ್ತರಿಸುವಿಕೆಯಾಗಿದೆ.
                ಚೆನ್ನಾಗಿ ಉತ್ತರಿಸಿದಿರಿ ನಾಗಸೇನರವರೆ.
9. ಶೀಲ ಲಕ್ಷಣ ಪ್ರಶ್ನೆ
                ಮಹಾರಾಜರು ಕೇಳಿದರು ನೀವು ಆಗಲೇ ಈ ರೀತಿ ಹೇಳಿದಿರಿ ಅನ್ಯ ಕುಶಲ ಧಮ್ಮದಿಂದ ವ್ಯಕ್ತಿ ಪುನರ್ಜನ್ಮದಿಂದ ಪಾರಾಗುತ್ತಾನೆ ಎಂದು. ಯಾವುದದು
ಕುಶಲಧಮ್ಮ?          (8)
                ಶೀಲವು ಮಹಾರಾಜ, ಹಾಗೆಯೇ ಶ್ರದ್ಧಾ, ವೀರ್ಯ, ಸ್ಮೃತಿ ಮತ್ತು ಸಮಾಧಿ ಇವನ್ನು ಕುಶಲಧಮ್ಮ ಎನ್ನುವೆವು.
                ಭಂತೆ ಶೀಲದ ಲಕ್ಷಣ ಯಾವುದು?           (9)
                ಆಧಾರ ಮಹಾರಾಜ, ಶೀಲವೇ ಸಕಲ ಕುಶಲ ಧಮ್ಮಗಳಿಗೆ ತಳಹದಿ (ಆಧಾರ) ಯಾಗಿದೆ. ಪಂಚೇಂದ್ರಿಯಗಳಿಗಾಗಲಿ, ಪಂಚಬಲಗಳಿಗಲಿ, ಬೋಧಿ ಅಂಗಗಳಿಗೆ, ಮಾಗರ್ಾಂಗಗಳಿಗೆ, ಸತಿಪಟ್ಠಾನಕ್ಕೆ, ಸಮ್ಮಪ್ಪದ್ಧಾನಕ್ಕೆ, ಇದ್ದಿಪಾದಕ್ಕೆ, ಜ್ಞಾನಕ್ಕೆ, ವಿಮೋಕ್ಷಕ್ಕೆ, ಸಮಾಧಿಗೆ, ಸಮಾಪತ್ತಿಗೆ ಇವೆಲ್ಲಕ್ಕೂ ಶೀಲವೇ ಆಧಾರವಾಗಿದೆ. ಯಾರು ಶೀಲದ ಆಧಾರದಿಂದ ಇವನ್ನೆಲ್ಲಾ ನಿಮರ್ಿಸುವನೋ ಅವನಲ್ಲಿ ಈ ಎಲ್ಲಾ ಕುಶಲಧಮ್ಮಗಳು ಕ್ಷೀಣಿಸುವುದಿಲ್ಲ.
                ಉಪಮೆಯಿಂದ ಸ್ಪಷ್ಟಪಡಿಸಿ.
                ಮಹಾರಾಜ, ಹೇಗೆ ಎಲ್ಲಾ ಬಗೆಯ ಪ್ರಾಣಿಗಳಾಗಲಿ ಮತ್ತು ಸಸ್ಯಗಳಾಗಲಿ, ಇವೆಲ್ಲವೂ ಬೆಳೆಯುವುದು, ಪಕ್ವವಾಗುವುದು, ವೃದ್ಧಿಯಾಗುವುದು, ಭೂಮಿಯಲ್ಲೇ. ಭೂಮಿಯೇ ಅದಕ್ಕೆ ಆಧಾರ, ಅದೇರೀತಿಯಲ್ಲಿ ಯಾವ ಭಿಕ್ಖುವಿಗೆ ಶೀಲವೇ ಆಧಾರವಾಗಿ, ಅದರ ಆಧಾರದ ಮೇಲೆ ಆತನು ಪಂಚೇಂದ್ರಿಗಳನ್ನು ವೃದ್ಧಿಸುತ್ತಾನೆ ಅಂದರೆ ಶ್ರದ್ಧಾಂದ್ರೀಯ, ವೀರೇಂದ್ರೀಯ, ಸ್ಮೃತೀಂದ್ರಿಯ, ಸಮಾಧಿ ಇಂದ್ರಿಯ ಮತ್ತು ಪನ್ನೀಂದ್ರಿಯಗಳು ಹಾಗೆಯೇ ಸಕಲ ಕುಶಲ ಧಮ್ಮ ವೃದ್ಧಿಸುತ್ತಾನೆ.
                ಇನ್ನಷ್ಟು ಉಪಮೆಯಿಂದ ವಿವರಿಸಿ.
                ಮಹಾರಾಜ, ಯಾವರೀತಿ ಎಲ್ಲಾ ವೃತ್ತಿಗಳಿಗೂ ದೈಹಿಕ ಶ್ರಮವು ಅಗತ್ಯವೋ ಮತ್ತು ಅಂತಿಮ ಅವಲಂಬನೆ ಈ ಭೂಮಿಯೇ ಆಗಿದೆಯೋ ಅದೇರೀತಿ ಭಿಕ್ಖು ಪಂಚೇಂದ್ರಿಯಗಳನ್ನು ಮತ್ತು ಇತರ ಕುಶಲ ಧಮ್ಮಗಳನ್ನು ಶೀಲದ ಆಧಾರದ ಮೇಲೆಯೇ ಸಿದ್ಧಿಸುತ್ತಾನೆ.
                ಇನ್ನಷ್ಟು ಸ್ವಷ್ಪ ಉಪಮೆಯಿಂದ ವಿವರಿಸಿ.
                ಮಹಾರಾಜ, ಯಾವರೀತಿ ನಗರ ನಿಮರ್ಾಣಕಾರನು ನಗರ ನಿಮರ್ಿಸುವಾಗ, ಮೊದಲು ಆತನು ನಗರದ ನಿವೇಶನವನ್ನು, ಖಾಲಿ ಮಾಡಿಕೊಳ್ಳುತ್ತಾನೆ. ನಂತರ ಕಲ್ಲು ಮುಳ್ಳುಗಳನ್ನು ತೆಗೆಸುತ್ತಾನೆ, ನಂತರ ನೆಲ ಸಮತಟ್ಟಾಗಿಸುತ್ತಾನೆ. ಆನಂತರವೇ ಆತನು ಬೀದಿಗಳನ್ನು, ಚೌಕಗಳನ್ನು ಅಡ್ಡದಾರಿಗಳನ್ನು ಮಾರುಕಟ್ಟೆ ಪ್ರದೇಶಗಳನ್ನು ಮತ್ತು ನಗರವನ್ನು ನಿಮರ್ಿಸುವನು. ಅದೇರೀತಿಯಲ್ಲಿ ಭಿಕ್ಖುವು ಪಂಚೇಂದ್ರಿಗಳನ್ನು ಇನ್ನಿತರ ಕುಶಲ ಧಮ್ಮವನ್ನು ಶೀಲದ ಆಧಾರದ ಮೇಲೆ ನಿಮರ್ಾಣ ಮಾಡುವನು.
                ತಾವು ಮತ್ತೊಂದು ಉಪಮೆ ನೀಡಬಲ್ಲಿರಾ.
                ಮಹಾರಾಜನೇ ಹೇಗೆ ದೊಂಬರಾಟದವನು, ತನ್ನ ಕೌಶಲ್ಯವನ್ನು ಪ್ರದಶರ್ಿಸುವ ಮುನ್ನ ಮೊದಲು ಭೂಮಿಯನ್ನು ಅಗೆಯುತ್ತಾನೆ ಮತ್ತು ಅಲ್ಲಿರುವಂತಹ ಎಲ್ಲಾ ಕಲ್ಲುಗಳನ್ನು, ಮುರಿದ ಮಡಿಕೆ ಚೂರುಗಳನ್ನು ಎಸೆದು ಮಣ್ಣನ್ನು ಮೃದುಮಾಡಿ, ನಂತರವೇ ಆತನು ತನ್ನ ಕೌಶಲ್ಯಗಳನ್ನು ಪ್ರದಶರ್ಿಸುತ್ತಾನೆ. ಅದೇರೀತಿ ಭಿಕ್ಖುವು ಶೀಲದ ಆಧಾರದ ಮೇಲೆಯೇ ಪಂಚೇಂದ್ರಿಯ ಮತ್ತು ಇತರ ಕುಶಲಧಮ್ಮಗಳನ್ನು ಸ್ಥಾಪಿಸುತ್ತಾನೆ, ವೃದ್ಧಿಸುತ್ತಾನೆ. ಆದ್ದರಿಂದಲೇ ಭಗವಾನರು ಹೀಗೆ ಒಂದೆಡೆ ಹೇಳಿರುವರು.
                ಯಾವಾಗ ಜ್ಞಾನಿಯು ಶೀಲದಲ್ಲಿ ಸುಪ್ರತಿಷ್ಠಾಪಿಸಲ್ಪಟ್ಟು, ಸಮಾಧಿ ಮತ್ತು ಪ್ರಜ್ಞಾವನ್ನು ವೃದ್ಧಿಸುತ್ತಾನೆಯೋ ಆಗ ಅಂತಹ ಉತ್ಸಾಹಿ ಮತ್ತು ಮೇಧಾವಿ ಭಿಕ್ಖುವು ಬಲೆಯ ಬಂಧನಗಳ ಬಿಡುಗಡೆಯಲ್ಲಿ ಯಶಸ್ವಿಯಾಗುತ್ತಾನೆ.
                ಹೇಗೆ ಮಾನವರಿಗೆ, ಪ್ರಾಣಿಗಳಿಗೆ ಧರಣಿಯು ಆಧಾರವಾಗಿದೆಯೋ ಅದೇರೀತಿಯಲ್ಲಿ ಶೀಲವೇ ಕುಶಲ ಧಮ್ಮಗಳಿಗೆಲ್ಲಾ ಮೂಲಾಧಾರವಾಗಿದೆ. ಇದೇ ಬುದ್ಧರ ಶಾಸನಕ್ಕೆ ಪ್ರಾರಂಭದ ಅಂಶವಾಗಿದೆ. ಪ್ರಾಜ್ಞರಿಗೆ ಶೀಲದಿಂದಲೇ ನಿಜ ಸುಖ ಅವಲಂಬಿತವಾಗಿದೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನರವರೆ.
10. ಸ್ಪಷ್ಟವಾಗುವಿಕೆಯ (ಸಂಪಸಾದನ) ಲಕ್ಖಣ ಸದ್ಧಾ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ, ಸದ್ದಾ (ಶ್ರದ್ಧಾ)ದ ಲಕ್ಷಣವೇನು?  (10)
                ಓ ಮಹಾರಾಜ, ಸ್ಪಷ್ಟವಾಗುವಿಕೆ ಮತ್ತು ಪ್ರೇರಣೆ ಹೊಂದಿರುವಿಕೆ.
                ಹೇಗೆ ಸ್ಪಷ್ಟವಾಗುವಿಕೆ ಶ್ರದ್ಧಾದ ಲಕ್ಷಣವಾಗುತ್ತದೆ?
                ಓ ರಾಜನೆ, ಶ್ರದ್ಧೆಯು ಮನಸ್ಸಿನಲ್ಲಿ ಯಾವಾಗ ಉಕ್ಕುವುದೋ ಆಗ ಪಂಚ ನಿವರಣಗಳಿಂದ ಕಾಮ, ಕ್ರೋಧ, ಜಡತೆ, ಚಿಂತೆ ಮತ್ತು ಸಂದೇಹಗಳಿಂದ ಮನಸ್ಸು ಮುಕ್ತವಾಗಿ ಸ್ಪಷ್ಟವಾಗುತ್ತದೆ, ಪ್ರಶಾಂತವಾಗುತ್ತದೆ ಮತ್ತು ಅಭಾಧಿತವಾಗುತ್ತದೆ.
                ಉಪಮೆಯಿಂದ ಸ್ಪಷ್ಟಪಡಿಸಿ.
                ಓ ರಾಜ, ಹೇಗೆ ಚಕ್ರವತರ್ಿಯೊಬ್ಬ ಚತುರಂಗ ಬಲ ಸೈನ್ಯದಿಂದ ಚಿಕ್ಕ ಹೊಳೆಯನ್ನು ದಾಟುವಾಗ ಆತನ ಸೈನ್ಯದಿಂದಾಗಿ ಆ ಹೊಳೆಯು ಕೊಳಕಾಗುತ್ತದೆ, ಕೆಂಪಾಗುತ್ತದೆ, ಕೆಸರಾಗುತ್ತದೆ. ಅವರೆಲ್ಲ ದಾಟಿದ ಮೇಲೆ ಚಕ್ರವತರ್ಿಯು ತನ್ನ ಸೇವಕರಿಗೆ ಈ ರೀತಿ ಆಜ್ಞೆ ನೀಡುತ್ತಾನೆ ನನ್ನ ಭಟರೇ, ಸ್ವಲ್ಪ ನೀರು ತನ್ನಿ, ನನಗೆ ಬಾಯಾರಿಕೆಯಾಗಿದೆ. ಆಗ ಆತನಲ್ಲಿ ನೀರು ಶುದ್ಧೀಕರಿಸುವ ಉದಕಪ್ಪಸಾದಕೊ ಮಣಿ ಇದ್ದಾಗ ಅವರು ಆ ಮಣಿಯನ್ನು ನೀರಿನಲ್ಲಿ ಹಾಕುವರು. ಆ ಕ್ಷಣದಲ್ಲೇ ಇಡೀ ಕೆಸರು ಕಶ್ಮಲವೆಲ್ಲಾ ಹೆಪ್ಪುಗಟ್ಟಿ, ಪರಿಶುದ್ಧ ನೀರು ಸಂಗ್ರಹವಾಗಿ, ನೀರು ಸ್ಪಷ್ಟವಾಗಿ, ಪಾರದಶರ್ಿಕ ಮತ್ತು ಪ್ರಶಾಂತವಾಗುತ್ತದೆ. ಆಗ ಆ ನೀರನ್ನು ರಾಜನಿಗೆ ಕುಡಿಯಲು ನೀಡುವರು. ಇಲ್ಲಿ ನೀರೆಂದರೆ ಮನಸ್ಸು, ಭಟರೇ ಭಿಕ್ಖುತ್ವ, ಕೆಸರು, ಮರಳು, ನೀರಿನ ಗಿಡಗಳೆಲ್ಲ ಕ್ಲೇಷಗಳು ಮತ್ತು ಉದಕಪ್ಪಸಾದಕೋ ಮಣಿಯೇ ಶ್ರದ್ಧೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನಾರವರೆ.
11. ಪ್ರೇರಣೆ (ಸಂಪಕ್ಖಂದನ) ಲಕ್ಖಣ ಸದ್ದಾ ಪ್ರಶ್ನೆ
                ಭಂತೆ, ಪ್ರೇರಣೆಯು ಹೇಗೆ ಸದ್ಧಾ (ಶ್ರದ್ಧೆ) ಲಕ್ಷಣವಾಗುತ್ತದೆ?    (11)
                ಮಹಾರಾಜ, ಭಿಕ್ಷುವು ಪರರ ಚಿತ್ತಗಳನ್ನು ಗಮನಿಸಿದಾಗ, ಅವರು ಮುಕ್ತರಾಗಿರುವು ದನ್ನು ಕಂಡು ತಾನು ಸಹಾ ಅವರಂತೆಯೇ ಸೋತಾಪತ್ತಿ ಫಲ ಅಥವಾ ಸಕದಾಗಾಮಿ ಫಲ ಅಥವಾ ಅನಾಗಾಮಿ ಫಲ ಅಥವಾ ಅರಹಂತತ್ವ ಫಲ ಪಡೆಯಬೇಕೆಂಬ, ತಾನು ಹೊಂದಿಲ್ಲದ, ತಾನು ಅನುಭವಿಸಿಲ್ಲದ, ತಾನು ಸಾಕ್ಷಾತ್ಕರಿಸಿಲ್ಲದನ್ನು ಹೊಂದಲು, ಅನುಭವಿಸಲು, ಸಾಕ್ಷಾತ್ಕರಿಸಲು ಹಾತೊರೆಯುತ್ತಾನೆ. ಆದ್ದರಿಂದಲೇ ಪ್ರೇರಣೆಯು ಶ್ರದ್ಧೆಯ ಲಕ್ಷಣವಾಗಿದೆ.
                ದಯವಿಟ್ಟು ಉಪಮೆಯಿಂದ ಸ್ಪಷ್ಟಪಡಿಸಿ.
                ಓ ರಾಜನೆ, ಒಂದುವೇಳೆ ಬೃಹತ್ ಬಿರುಗಾಳಿಯು ಪರ್ವತದ ತುದಿಗೆ ಅಪ್ಪಳಿಸಿದರೆ ಅಪಾರ ಮಳೆಯಾಗುತ್ತದೆ. ಆಗ ನೀರು ಹರಿಯುತ್ತ ಕೆಳಗೆ ಧಾವಿಸುತ್ತದೆ ಮತ್ತು ಹಂತಹಂತವಾಗಿ ಅದು ಪರ್ವತದ ಬಿರುಕುಗಳನ್ನು, ಸೀಳುಗಳನ್ನು ಮತ್ತು ಕಂದಕಗಳನ್ನು ತುಂಬಿಸುತ್ತ ಝರಿಯಾಗಿ ಹರಿಯುತ್ತ ವೇಗವಾಗಿ ಉದ್ದಕ್ಕೂ ಹರಿಯುತ್ತ, ಎರಡುಬದಿಯ ದಡಗಳಲ್ಲೂ ಹರಿಯುತ್ತದೆ. ಆಗ ಜನರ ಗುಂಪು ಒಂದೊಂದಾಗಿ ಸೇರಿ, ಆ ನೀರಿನ ಅಗಲ ಉದ್ದ ತಿಳಿಯದೆ ಅದನ್ನು ದಾಟಲು ಭೀತಿಪಡುವರು. ಆದರೆ ಧೈರ್ಯಶಾಲಿಯೊಬ್ಬ ತನ್ನ ಸಾಮಥ್ರ್ಯ ಮತ್ತು ಬಲಗಳನ್ನು ನಿಖರವಾಗಿ ತಿಳಿದಿರುವವನು ಸೊಂಟಕಟ್ಟಿ ಈ ದಡದಿಂದ ಆ ದಡಕ್ಕೆ ಜಿಗಿಯುವನು. ಆಗ ಉಳಿದ ಜನರಿಗೂ ಆತನು ಆ ದಡದಲ್ಲಿ ಕ್ಷೇಮವಾಗಿ ಉಳಿದಿರುವುದನ್ನು ಕಂಡು ಅವರು ಹಾಗೆಯೇ ದಾಟುವರು. ಇದೇರೀತಿಯಲ್ಲಿ ಭಿಕ್ಷುಗಳು ಶ್ರದ್ಧೆಯಿಂದ ಶ್ರೇಷ್ಠ ವಿಷಯಗಳಿಗೆ ಧುಮುಕಲು ಹಾರುವರು. ಓ ರಾಜನೇ, ಸಂಯುಕ್ತ ನಿಕಾಯದಲ್ಲಿ ಒಂದೆಡೆ ಭಗವಾನರು ಹೀಗೆ ಹೇಳಿರುವರು.
                ಶ್ರದ್ಧೆಯಿಂದ ಆತನು ಪ್ರವಾಹವನ್ನು ದಾಟುವನು, ಜಾಗರೂಕತೆಯಿಂದ ಆತನು ಜೀವನ ಸಮುದ್ರವನ್ನು ಸಹಾ ದಾಟುವನು. ವೀರ್ಯ (ಪ್ರಯತ್ನಶೀಲತೆಯಿಂದ)ದಿಂದ ದುಃಖವನ್ನೆಲ್ಲಾ ಸ್ತಬ್ದಗೊಳಿಸುವನು ಮತ್ತು ಪನ್ಯಾದಿಂದ (ಪ್ರಜ್ಞಾದಿಂದ) ಪರಿಶುದ್ಧತೆಯನ್ನು ಪಡೆಯುವನು.
                ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನರವರೆ.
12. ವಿರಿಯ ಲಕ್ಖಣ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ, ವಿರಿಯಾದ (ಪ್ರಯತ್ನಶೀಲತೆಯ) ಲಕ್ಷಣವೇನು?         (12)
                ಓ ರಾಜನೆ, ಬಲಪಡಿಸುವಿಕೆಯು ವಿರಿಯಾದ ಲಕ್ಷಣವಾಗಿದೆ. ಎಲ್ಲಾ ಕುಶಲ ಧಮ್ಮಗಳು ಇದರಿಂದಾಗಿಯೇ ಬೆಂಬಲಿತವಾಗಿ ಕಳಚಿ ಬೀಳುವುದಿಲ್ಲ.
                ಉಪಮೆಯಿಂದ ಸ್ಪಷ್ಟಪಡಿಸಿ.
                ಒಂದು ಮನೆಯು ಬೀಳುವಂತಿರುವಾಗ ಒಬ್ಬ ಮನುಷ್ಯ ಅದಕ್ಕೆ ಕಂಬವೊಂದನ್ನು ಆಸರೆಯಾಗಿ ನೀಡಿ ಅದನ್ನು ಬೀಳದಂತೆ ನೋಡಿಕೊಳ್ಳುತ್ತಾನೆ. ಅದೇರೀತಿಯಾಗಿ ಮಹಾರಾಜ ವಿರಿಯಾವು ಬಲಪಡಿಸುವಿಕೆಯ ಲಕ್ಷಣ ಹೊಂದಿದ್ದು, ಅದರಿಂದಾಗಿ ಎಲ್ಲ ಕುಶಲಧಮ್ಮಗಳು ಅದಕ್ಕೆ ಆಸರೆ ಹೊಂದಿ ಬೀಳುವುದಿಲ್ಲ.
                ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿರಿ.
                ಯಾವಾಗ ದೊಡ್ಡ ಸೈನ್ಯವೊಂದು ಚಿಕ್ಕಸೈನ್ಯದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸುವುದೋ, ಆಗ ಚಿಕ್ಕ ಸೈನ್ಯದ ರಾಜನು ಮನಃಪೂರ್ವಕವಾಗಿ ತನ್ನ ಚಿಕ್ಕ ಸೈನ್ಯವನ್ನು ಜೊತೆಗೂಡಿ ಬಲಪಡಿಸಿ ಅದನ್ನು ದೊಡ್ಡ ಸೈನ್ಯದ ಮೇಲೆ ನುಗ್ಗಿಸಿ ಛಿದ್ರವಾಗುವಂತೆ ಮಾಡುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜನೇ, ಬಲಪಡಿಸುವಿಕೆಯು ವಿರಿಯಾದ ಲಕ್ಷಣವಾಗಿದೆ ಮತ್ತು ಅದರಿಂದಾಗಿ ಎಲ್ಲಾ ಕುಶಲಧಮ್ಮಗಳಿಗೆ ಬೆಂಬಲ ಸಿಕ್ಕಿ ಅವು ಬೀಳದೆ ಹೋಗುತ್ತವೆ. ಇದರ ಬಗ್ಗೆ ಭಗವಾನರು ಇಂತೆಂದಿರುವರು:
                ಓ ಭಿಕ್ಷುಗಳೇ, ವೀರಿಯವಂತನಾದ ಆರ್ಯಶ್ರಾವಕನು ಅಕುಶಲವನ್ನು ದೂರೀಕರಿಸಿ, ಕುಶಲವನ್ನು ವೃದ್ಧಿಸುತ್ತಾನೆ. ಆತನು ದೋಷಪೂರಿತವಾದುದನ್ನು ವಜರ್ಿಸಿ, ದೋಷರಹಿತತೆಯಿಂದ ಅಭಿವೃದ್ಧಿಗೊಳಿಸುತ್ತಾನೆ ಮತ್ತು ಹಾಗೆಯೇ ಆತನು ಚಿತ್ತವನ್ನು ಪರಿಶುದ್ಧಿಗೊಳಿಸುತ್ತಾನೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನ.
13. ಸ್ಮೃತಿ ಲಕ್ಷಣ ಪ್ರಶ್ನೆ
                ರಾಜ ಕೇಳಿದನು - ಭಂತೆ ನಾಗಸೇನ ಸ್ಮೃತಿಯ ಲಕ್ಷಣವೇನು?               (13)
                ಓ ಮಹಾರಾಜ ಪುನಾರಾವೃತ್ತಿ ಮತ್ತು ರಕ್ಷಿಸುವಿಕೆಯೇ ಸ್ಮೃತಿಗೆ ಲಕ್ಷಣಗಳಾಗಿವೆ.
                ಪುನರಾವೃತ್ತಿಯು ಹೇಗೆ ಸ್ಮೃತಿ ಲಕ್ಷಣವಾಗುತ್ತದೆ?
                ಓ ಮಹಾರಾಜ, ಯಾವಾಗ ಒಬ್ಬನು ಸ್ಮೃತಿಯಲ್ಲಿರುವನೋ ಆಗ ಆತನ ಮನಸ್ಸಿನಲ್ಲಿ ಒಳ್ಳೆಯ ಅಥವಾ ಕೆಟ್ಟ ಯೋಚನೆಗಳು ಪುನಃ ಪುನಃ ಪುನರಾವೃತ್ತಿ ಆಗುತ್ತಲೇ ಇರುತ್ತದೆ. ಹಾಗೆಯೇ ಕುಶಲ ಮತ್ತು ಅಕುಶಲ. ಹೀನವಾದ ಅಥವಾ ಪ್ರಧಾನವಾದ ತಮೋವಿನ ಅಥವಾ ಬೆಳಕಿನ ಗುಣಗಳು ಮನಸ್ಸಿನಲ್ಲಿ ಪುನಃ ಪುನಃ ಹುಟ್ಟುತ್ತಲೇ ಇರುತ್ತದೆ. ಕುಶಲವಾಗಿದ್ದರೆ ಮತ್ತು ಸಾಮ್ಯತೆಯಿರುವಂತಹದ್ದಾಗಿದ್ದರೆ ಆತನು ತನ್ನಲ್ಲೇ ಹೀಗೆ ಹೇಳಿಕೊಳ್ಳುತ್ತಾನೆ ಇವೇ ನಾಲ್ಕು ಸಮ್ಮಾ ಸ್ಮೃತಿಪ್ರತಿಷ್ಠಾನಗಳು, ನಾಲ್ಕು ಸಮ್ಮಾ ಪ್ರಯತ್ನಗಳು, ಇವೇ ನಾಲ್ಕು ಇದ್ದಿಯ ಆಧಾರಗಳು, ಇವೇ ಪಂಚೇಂದ್ರಿಗಳು, ಇವೇ ಪಂಚಬಲಗಳು, ಇವೇ ಬೋಧಿಯ ಏಳು ಅಂಗಗಳು, ಇದೇ ಮಧ್ಯಮಮಾರ್ಗ. ಇದೇ ಸಮಥ ಮತ್ತು ವಿಪಸ್ಸನ, ಇದೇ ಪ್ರಜ್ಞಾ, ಬೋಧಿ ಮತ್ತು ವಿಮೋಕ್ಷ ಎಂದು ಭಿಕ್ಖುವು ಈ ರೀತಿಯ ಕುಶಲವಾದ, ಅಪೇಕ್ಷಣೀಯವಾದ ಮತ್ತು ಅಪೇಕ್ಷಿಣೀಯವಲ್ಲದ್ದು ಎಂದು ಅರಿವು ಪಡೆದು ಪಾಲಿಸಬೇಕಾಗಿರುವುದು, ಪಾಲಿಸಿ ಪಾಲಿಸಬೇಕಿಲ್ಲದ್ದನ್ನು ತ್ಯಜಿಸುತ್ತಾನೆ. ಹೀಗೆ ಪುನರಾವೃತ್ತಿಯು ಸ್ಮೃತಿಯ ಲಕ್ಷಣವಾಗಿದೆ.
                ಇನ್ನೊಂದು ಉಪಮೆ ನೀಡಿರಿ.
                ಇದು ಹೇಗೆಂದರೆ ಚಕ್ರವತರ್ಿಯ ಬಳಿಯಲ್ಲಿರುವ ಕೋಶಾಧ್ಯಕ್ಷನಂತೆ, ಕೋಶಾಧ್ಯಕ್ಷನು ರಾಜನಿಗೆ ಆಗಾಗ್ಗೆ ಪುನರಾವೃತ್ತಿಸುತ್ತಿರುತ್ತಾನೆ. ಓ ಮಹಾರಾಜನೆ, ಇಷ್ಟು ನಿಮ್ಮ ರಣ ಆನೆಗಳು, ಇಷ್ಟು ನಿಮ್ಮ ಅಶ್ವಸೈನ್ಯ, ಇಂತಿಷ್ಟು ನಿಮ್ಮ ಮಹಾರಥಿಗಳು ಮತ್ತು ಇಷ್ಟು ನಿಮ್ಮ ಬಿಲ್ಗಾರರು, ಇಷ್ಟು ಹಣ ನಿಮ್ಮ ಕೋಶಾಗಾರದಲ್ಲಿದೆ, ಇಷ್ಟು ಚಿನ್ನ, ಐಶ್ವರ್ಯ ನಿಮ್ಮಲ್ಲಿದೆ, ಇದನ್ನು ನೆನಪಿಡಿ ಮಹಾರಾಜರೇ.
                ಸರಿ ಹಾಗಾದರೆ ಭಂತೆ ರಕ್ಷಿಸಿಕೊಂಡು ಹೋಗುವಿಕೆಯು ಹೇಗೆ ಸ್ಮೃತಿಯ ಲಕ್ಷಣವಾಗುತ್ತದೆ?
                ಓ ಮಹಾರಾಜ, ಯಾವಾಗ ಸ್ಮೃತಿಯು ಮನದಲ್ಲಿ ಚಿಮ್ಮುವುದೋ ಆಗ ಆತನು ತನ್ನಲ್ಲಿರುವ ಗುಣಗಳ ವಗರ್ಿಕರಣವನ್ನು ಹೀಗೆ ಹುಡುಕುತ್ತಾನೆ. ಇದು ಧಮ್ಮ, ಹಿತವಾದುದು, ಇದು ಅಧಮ್ಮ, ಅಹಿತವಾದುದು, ಈ ಧಮ್ಮ, ತನಗೆ ಪರರಿಗೂ ಉಪಕಾರಿಯಾಗಿರುವಂತಹದು, ಈ ಅಧಮ್ಮ ಅಪಕಾರಿಯಾದುದ್ದು ಹೀಗೆ ಆತನು ತನ್ನಲ್ಲೇ ಜಾಗರೂಕನಾದಾಗ ಆತನಲ್ಲಿರುವ ಅಹಿತಕರ ಧಮ್ಮ (ಯೋಚನೆ) ಮತ್ತು ಅಪಕಾರಿ ಧಮ್ಮವು ಮಾಯವಾಗುತ್ತದೆ. ಮತ್ತು ಉಪಕಾರಿ, ಹಿತಕಾರಿ ಧಮ್ಮವು ರಕ್ಷಿಸಲ್ಪಡುತ್ತದೆ. ಈ ರೀತಿಯಾಗಿ ರಕ್ಷಿಸಲ್ಪಡುವುದೇ ಸ್ಮೃತಿಯ ಲಕ್ಷಣವಾಗಿದೆ.
                ಇದನ್ನು ಉಪಮೆಯಿಂದ ಸ್ಪಷ್ಟಪಡಿಸಿರಿ.
                ಇದು ಹೇಗೆಂದರೆ ಚಕ್ರವತರ್ಿಯ ಬಳಿಯಲ್ಲಿರುವ ವಿಶ್ವಾಸಾರ್ಹ ಸಲಹಾಗಾರನಂತೆ, ಆತನು ಒಳಿತು ಕೆಡುಕನ್ನು ಈ ರೀತಿ ಬೋಧಿಸುತ್ತಾನೆ. ಇವು ರಾಜನಿಗೆ ಕೆಟ್ಟದ್ದಾಗಿದೆ ಮತ್ತು ಇವು ಒಳಿತು ಮತ್ತು ಸಹಾಯಕಾರಿಯಾಗಿವೆ. ಇವು ಅಪಕಾರಿ ಮತ್ತು ಅಪಾಯಕಾರಿಯಾಗಿದೆ. ಆಗ ರಾಜನು ಪಾಪವನ್ನು, ಕೆಡುಕುಗಳನ್ನು ನಾಶವಾಗುವಂತೆ ನೋಡಿಕೊಳ್ಳುತ್ತಾನೆ ಮತ್ತು ಒಳಿತನ್ನು ರಕ್ಷಿಸಿಕೊಳ್ಳುತ್ತಾನೆ. ಆದ್ದರಿಂದಲೇ ಭಗವಾನರು ಹೀಗೆ ಘೋಷಿಸಿದ್ದಾರೆ ಸ್ಮೃತಿ (ಜಾಗರೂಕತೆ)ಯನ್ನು ಓ ಭಿಕ್ಷುಗಳೆ, ನಾನು ಸರ್ವತ್ರ ಅರ್ಥಕಾರಿ (ಲಾಭಕಾರಿ) ಎಂದು ಘೋಷಿಸುತ್ತೇನೆ.
14. ಸಮಾಧಿ ಲಕ್ಷಣ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ ಸಮಾಧಿಯ ಲಕ್ಷಣವೇನು?          (14)
                ನಾಯಕತ್ವದ (ಪ್ರಮುಖ) ಲಕ್ಷಣವಾಗಿದೆ ಮಹಾರಾಜ, ಎಲ್ಲಾ ಕುಶಲಧಮ್ಮಕ್ಕೆ ಸಮಾಧಿಯೇ ನಾಯಕವಾಗಿದೆ. ಅವೆಲ್ಲವೂ ಸಮಾಧಿಯ ಕಡೆಯೇ ಬಾಗಿರುತ್ತವೆ. ಸಮಾಧಿಯು ಮುಂದಾಳತ್ವವನ್ನೇ ಹೊಂದಿರುತ್ತದೆ. ಸಮಾಧಿಯ ಪರ್ವತಕ್ಕೆ ಹಲವಾರು ಇಳಿಕಲ್ಲುಗಳು ಸೇರಿವೆ.
                ಉಪಮೆಯಿಂದ ಸ್ಪಷ್ಟಪಡಿಸಿ.
                ಒಂದು ಮನೆಯ ಛಾವಣಿಗೆ ಎಲ್ಲಾ ತೊಲೆಗಳು, ಛಾವಣಿಯು ಕೂಡುವ ಕಂಬಕ್ಕೆ ಬಾಗಿರುತ್ತವೆ, ಅದನ್ನೇ ಅವಲಂಬಿಸಿರುತ್ತವೆ, ಆ ಕೂಡು ಕಂಬವೇ ಅದರ ಮುಂದಾಳುವಿನಂತೆ ಇರುತ್ತದೆ, ಪ್ರಧಾನವಾಗಿರುತ್ತದೆ. ಅದೇರೀತಿಯಲ್ಲಿ ಎಲ್ಲಾ ಕುಶಲಧಮ್ಮಗಳು ಸಮಾಧಿಯೆಡೆ ಬಾಗಿರುತ್ತವೆ, ಸಮಾಧಿಯು ನಾಯಕತ್ವ ಹೊಂದಿರುತ್ತದೆ.
                ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿ.
                ಇದು ಹೇಗೆಂದರೆ ಮಹಾರಾಜ, ಒಬ್ಬ ರಾಜನು ಯುದ್ಧಕ್ಕೆ ಹೋಗುವಾಗ ತನ್ನ ಜೊತೆಗೆ ಚತುರಂಗ ಬಲಸೈನ್ಯದೊಂದಿಗೆ ಹೋಗುತ್ತಾನೆ. ಅದೆಂದರೆ ಗಜಾಯೋಧರು, ಅಶ್ವಯೋಧರು, ಮಹಾಕಲಿಗಳು ಮತ್ತು ಬಿಲ್ಗಾರರು, ಈಟಿಗಾರರು. ಆಗ ಆ ಎಲ್ಲಾ ಸೈನ್ಯಕ್ಕೆ ರಾಜನೇ ನಾಯಕನಾಗಿರುತ್ತಾನೆ. ಇಡೀ ಸೈನ್ಯವು ಆತನ ಆದೇಶಕ್ಕೆ ಬಾಗಿರುತ್ತದೆ. ಅವನನ್ನು ಹಿಂಬಾಲಿಸುತ್ತದೆ, ಪರ್ವತದಲ್ಲಿ ಹಲವಾರು ಇಳುಕಲ್ಲುಗಳಿರುತ್ತವೆ, ಅವೆಲ್ಲವೂ ಒಂದರ ಮೇಲೆ ಇನ್ನೊಂದು ಹರಡಿ ಶಿಖರವಾಗಿರುತ್ತದೆ. ಅದೇರೀತಿ ಎಲ್ಲಾ ಕುಶಲಧಮ್ಮಗಳಿಗೆ ಸಮಾಧಿಯೇ ನಾಯಕ, ಅವೆಲ್ಲವೂ ಸಮಾಧಿಯೆಡೆ ಬಾಗಿರುತ್ತವೆ, ಸಮಾಧಿಯು ಮುಂದಾಳತ್ವವನ್ನು ಹೊಂದಿವೆ. ಆದ್ದರಿಂದಲೇ ಭಗವಾನರು ಒಂದೆಡೆ ಹೀಗೆ ಹೇಳಿರುವರು:
                ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಸಮಾಹಿತಗೊಳ್ಳಿರಿ, ಯಾರು ಸಮಾಧಿಯನ್ನು ಸಿದ್ಧಿಸಿರುವನೋ ಅಂತಹ ಭಿಕ್ಷುವು ಸತ್ಯಗಳನ್ನು ಯಥಾಭೂತವಾಗಿ ಅರಿಯುತ್ತಾನೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನರವರೇ.
15. ಪ್ರಜ್ಞಾ ಲಕ್ಷಣ ಪ್ರಶ್ನೆ
                ರಾಜರು ಕೇಳಿದರು - ಭಂತೆ ನಾಗಸೇನ, ಪನ್ಯಾದ ಲಕ್ಷಣವೇನು?           (15)
                ನಾನು ಆಗಲೇ ಹೇಳಿದ್ದೇನೆ, ಓ ಮಹಾರಾಜ, ಕತ್ತರಿಸುವಿಕೆ (ಬೇರ್ಪಡಿಸುವಿಕೆ) ಎಂದು. ಜೊತೆಗೆ ಪ್ರಕಾಶಗೊಳ್ಳುವಿಕೆ ಸಹಾ ಇದರ ಲಕ್ಷಣವಾಗಿದೆ.
                ಭಂತೆ ಪ್ರಕಾಶಗೊಳ್ಳುವಿಕೆಯು ಹೇಗೆ ಅದರ ಲಕ್ಷಣವಾಗಿದೆ?
                ಓ ರಾಜನೇ, ಯಾವಾಗ ಪ್ರಜ್ಞಾವು ಮನಸ್ಸಿನಲ್ಲಿ ಉದಯಿಸುತ್ತದೆಯೋ ಆಗ   ಅದು ಅವಿದ್ಯೆಯ ಅಂಧಕಾರವನ್ನು ದೂರೀಕರಿಸುತ್ತದೆ. ಇದೇ ಜ್ಞಾನದ ಪ್ರಕಾಶಕ್ಕೆ ಕಾರಣವಾಗಿದೆ. ಈ ಪ್ರಜ್ಞಾ ಪ್ರಕಾಶದಿಂದ ಆರ್ಯಸತ್ಯಗಳ ದರ್ಶನವಾಗುತ್ತದೆ, ಆಗ ಪ್ರಯತ್ನಶಾಲಿಯಾದ ಭಿಕ್ಷುವಿಗೆ ಖಂಧಗಳಲ್ಲಿ ಅನಿತ್ಯ, ದುಃಖ ಮತ್ತು ಅನಾತ್ಮದ ಸಾಕ್ಷಾತ್ಕಾರವಾಗುತ್ತದೆ.
                ಉಪಮೆಯಿಂದ ಸ್ಪಷ್ಟಪಡಿಸಿ.
                ಓ ಮಹಾರಾಜ, ಇದು ಪ್ರದೀಪದಂತೆ. ಅಂಧಕಾರದ ಗೃಹದಲ್ಲಿ ಮಾನವನು ದೀಪವನ್ನು ಹಚ್ಚಿದಾಗ ಸುತ್ತಲಿನ ಕತ್ತಲೆಲ್ಲಾ ದೂರವಾಗುತ್ತದೆ. ಕಾರಣವೇನೆಂದರೆ ಪ್ರಕಾಶ ಉಂಟಾಗಿರುವುದು. ಹೇಗೆ ದೀಪದಿಂದ ವಸ್ತುಗಳು ಗೋಚರವಾಗುವವೋ ಹಾಗೆಯೇ ಪ್ರಜ್ಞೆಯಿಂದ ತ್ರಿಲಕ್ಷಣ ಸಾಕ್ಷಾತ್ಕಾರವಾಗುತ್ತದೆ.
                ಚೆನ್ನಾಗಿ ವಿವರಿಸಿದಿರಿ ನಾಗಸೇನರವರೇ.
16. ನಾನಾ ಧಮ್ಮಗಳ ಏಕ ಫಲಿತಾಂಶದ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ, ಇವೆಲ್ಲಾ ನಾನಾ ಧಮ್ಮಗಳು ಆಗಿದ್ದರೂ ವಿವಿಧರೀತಿಯ ಲಕ್ಷಣಗಳನ್ನು ಹೊಂದಿದ್ದರೂ, ಅವು ಒಂದೇ ಫಲಿತಾಂಶವನ್ನು ಸಮ ಫಲಿತಾಂಶವನ್ನು ನೀಡುತ್ತವೆಯೇ?     (16)
                ಹೌದು, ಅದೆಂದರೆ ಕ್ಲೇಶಗಳನ್ನು ಅಂತ್ಯಗೊಳಿಸುವುದು.
                ಅದು ಹೇಗೆ ಉಪಮೆಯಿಂದ ಸ್ಪಷ್ಪಪಡಿಸಿ.
                ಇವೆಲ್ಲಾ ಸೇನೆಯಲ್ಲಿರುವ ಚತುರಂಗ ಬಲದಂತೆ, ಆನೆಗಳ ಸೇನೆ, ಅಶ್ವರೂಢರು, ರಥಿಗಳು, ಬಿಲ್ಗಾರರು ಇದ್ದರೂ ಅವರ ಉದ್ದೇಶ ಒಂದೇ ಆಗಿರುತ್ತದೆ, ಅದೆಂದರೆ ಶತ್ರು ಸೈನ್ಯವನ್ನು ಸೋಲಿಸಿ ವಿಜಯಿಗಳಾಗುವುದು.
                ಚೆನ್ನಾಗಿ ವಿವರಿಸಿದಿರಿ ನಾಗಸೇನರವರೆ.

ಇಲ್ಲಿಗೆ ಪ್ರಥಮ ಅಧ್ಯಾಯ ಮುಗಿಯಿತು.

(ಈ ವರ್ಗದಲ್ಲಿ 16 ಪ್ರಶ್ನೆಗಳಿವೆ.

No comments:

Post a Comment