Monday, 20 October 2014

introduction and background story of milinda panha in kannada

           || ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ದಸ್ಸ ||

ಮಿಲಿಂದ ಪನ್ಹಾ
ಗ್ರಂಥ ಕಥಾವಸ್ತು


                ಮಿಲಿಂದ ನಾಮಧೇಯ ರಾಜನನ್ನು ಬಹಳ ಕಾಲದ ಹಿಂದೆ ಸಾಗಲ ಎಂಬ ಪ್ರಸಿದ್ಧ ನಗರದಲ್ಲಿ, ನಾಗಸೇನನೆಂಬ ಅರಹಂತ ಥೇರರು ಸರಿಹಾದಿಗೆ ತಂದಿದ್ದರು. ಹೇಗೆಂದರೆ ಆಳವಾದ ಗಂಗಾನದಿಯು ಬೃಹತ್ ಸಾಗರವನ್ನು ಸೇರುವ ತರದಲ್ಲಿ ಮಣಿಸಿದ್ದರು (1).
                ನಾಗಸೇನರವರು ನಿರರ್ಗಳಯುತರಾಗಿ, ಸತ್ಯದ ಪುಂಜಗಳನ್ನು ಧರಿಸಿದವರಾಗಿ ಮಾನವರ ಮನಸ್ಸಿನ ತಮೋವನ್ನು ದೂರೀಕರಿಸುವಂತಹವರಾಗಿದ್ದರು. ಅವರಿಗೆ ಸೂಕ್ಷ್ಮ ಮತ್ತು ಜಟಿಲ ಪ್ರಶ್ನೆಗಳನ್ನು ಹಲವಾರು ಹಾಕಿದರೂ, ಹಲವು ಅಂಶಗಳ ತಿರುವುಗಳು  ಬಂದರೂ ಸಹ ಪರಿಹಾರ ಉತ್ತರಗಳು ಅವರಿಂದ ದೊರೆತವು (2).
                ಅವು ಆಳವಾದ ಅರ್ಥವುಳ್ಳ, ಹೃದಯಾಂಗಮ, ಕರ್ಣಗಳಿಗೆ ಸುಖಕಾರಿಯಾದ ಮತ್ತು ಅದ್ಭುತ ಹಾಗು ಅಪರಿಮಿತವಾಗಿತ್ತು (3).
                ನಾಗಸೇನರವರ ನುಡಿಗಳು ಅಭಿಧಮ್ಮದ ಮತ್ತು ವಿನಯ ಪಿಟಕಗಳ ಆಳಗಭರ್ಿತದಿಂದ ಕೂಡಿದ್ದವು. ಸುತ್ತಗಳ ಜಾಲಗಳನ್ನು ಬಿಡಿಸಿದಂತಿತ್ತು. ಉಪಮೆಗಳಿಂದ ಮತ್ತು ನ್ಯಾಯತರ್ಕಗಳಿಂದ ಹೊಳಪು ಹೊರಸೂಸುತ್ತಿತ್ತು (4).
                ಆದ್ದರಿಂದ ಬನ್ನಿ, ಮನಸ್ಸನ್ನು ಗಮನೀಕರಿಸಿ, ಹೃದಯಗಳನ್ನು ಪ್ರಫುಲ್ಲಿತಗೊಳಿಸಿ ನಿಪುಣವಾಗಿರುವ ಪ್ರಶ್ನೆಗಳನ್ನು ಆಲಿಸಿ, ಎಲ್ಲಾ ಭಾಗಗಳಲ್ಲಿನ ಸಂಶಯಗಳನ್ನು ಪರಿಹರಿಸಿಕೊಳ್ಳೋಣ (5).
                ಹೀಗೆ ಸಂಪ್ರದಾಯವು ಹರಿದುಬಂದಿತು. ಯೋನಕರ (ಬ್ಯಾಕ್ಟೀರಿಯನ್ ಗ್ರೀಕರ) ರಾಜ್ಯವಿತ್ತು. ಅದು ವ್ಯಾಪಾರಿ ಕೇಂದ್ರವಾಗಿತ್ತು. ಆ ನಗರದ ಹೆಸರೇ ಸಾಗಲ. ಆ ನಗರವು ನೀರಿನಿಂದ, ಬೆಟ್ಟಗಳಿಂದ, ಉದ್ಯಾನವನಗಳಿಂದ, ತೋಪುಗಳಿಂದ, ಸರೋವರಗಳಿಂದ, ಕೆರೆಗಳಿಂದ, ನದಿಗಳಿಂದ, ಕಾಡಿನಿಂದ ಮತ್ತು ಪರ್ವತಗಳಿಂದ ಕೂಡಿ ಆನಂದಭರಿತವಾಗಿತ್ತು. ಜ್ಞಾನಿ ಶಿಲ್ಪಿಗಳಿಂದ ಆ ನಗರವು ನಿಮರ್ಿಸಲ್ಪಟ್ಟಿತ್ತು ಮತ್ತು ಆ ಜನರಿಗೆ ಒರಟುತನವೇ ತಿಳಿದಿಲ್ಲ. ಏಕೆಂದರೆ ಅವರ ಎಲ್ಲಾ ಪ್ರತಿಕೂಲತೆಗಳು ಮತ್ತು ಶತ್ರುಗಳು ದಮನಗೊಳಿಸಲ್ಪಟ್ಟಿತ್ತು. ಅವರ ರಕ್ಷಣೆಯು ಪ್ರಶಂಸನೀಯವಾಗಿತ್ತು. ಹಲವಾರು ಗೋಪುರಗಳಿಂದ, ಕೋಟೆಗಳಿಂದ, ಶ್ರೇಷ್ಠ ಮುಖ್ಯ ಹೆಬ್ಬಾಗಿಲುಗಳಿಂದ ಮತ್ತು ಕಮಾನುಗಳಿಂದ ಕೂಡಿತ್ತು. ಮತ್ತು ರಾಜದುರ್ಗವು ಮಧ್ಯದಲ್ಲಿ ಬಿಳಿಯ ವರ್ಣದಿಂದಿತ್ತು ಮತ್ತು ಆಳವಾದ ಕಂದಕಗಳಿಂದಲೂ ಕೂಡಿತ್ತು. ಆ ನಗರವು ಒಳ್ಳೆಯ ರಸ್ತೆಗಳಿಂದ, ಚೌಕಗಳಿಂದ, ಅಡ್ಡರಸ್ತೆಗಳಿಂದ ಮತ್ತು ಮಾರುಕಟ್ಟೆಗಳಿಂದ ಕೂಡಿತ್ತು. ಅಲ್ಲಿ ಬಹುಮೌಲ್ಯಯುತ ವಸ್ತುಗಳನ್ನು ಪ್ರದರ್ಶನ ಮಾಡುತ್ತಿದ್ದರು ಮತ್ತು ಅಂಗಡಿಗಳು ತುಂಬಿರುತ್ತಿತ್ತು. ಅಲ್ಲಿ ಅನ್ನದಾನಕ್ಕಾಗಿ ನೂರಾರು ಛತ್ರಗಳಿದ್ದವು. ಹಾಗೆ ಅಲ್ಲಿ ಸಾವಿರಾರು ಭವ್ಯವಾದ ಮಹಲುಗಳಿದ್ದವು. ಅವುಗಳನ್ನು ಹಿಮಾಲಯದ ಪರ್ವತಗಳ ರೀತಿ ಎತ್ತರವಾಗಿ ಕಟ್ಟಿದ್ದರು. ಆ ನಗರಗಳ ಬೀದಿಗಳು ಸದಾ ಆನೆಗಳಿಂದ, ಕುದುರೆಗಳಿಂದ ಮತ್ತು ಪಾದಚಾರಿಗಳಿಂದ ಕೂಡಿರುತ್ತಿತ್ತು. ಎಲ್ಲಾ ರೀತಿಯ ಮಾನವರಿಂದ ಮತ್ತು ಸ್ಥಿತಿಗಳಿಂದ ಕೂಡಿರುತ್ತಿದ್ದವು. ಬ್ರಾಹ್ಮಣರಿಂದ, ಶ್ರೇಷ್ಠರಿಂದ, ಶಿಲ್ಪಿಗಳಿಂದ ಮತ್ತು ಸೇವಕರಿಂದ ತುಂಬಿರುತ್ತಿತ್ತು. ಗುರುಗಳಿಗೆ ಸ್ವಾಗತಿಸುವ ಧ್ವನಿಗಳು ಕೇಳಿಬರುತ್ತಿದ್ದವು. ನಗರವು ಎಲ್ಲಾ ರೀತಿಯ ಮತಪಂಥಗಳ ಜನರಿಂದ, ನಾಯಕರಿಂದ ಕೂಡಿರುತ್ತಿತ್ತು. ಅಂಗಡಿಗಳಲ್ಲಿ ಬನಾರಸ್ ಮಸ್ಲಿನ್ ಬಟ್ಟೆಗಳು, ಕೋಟುಂಬರ (ಪೀತಾಂಬರ) ಬಟ್ಟೆಗಳು ಮತ್ತು ಇತರ ವಸ್ತ್ರಗಳು ದೊರೆಯುತ್ತಿದ್ದವು. ಸಂತೆಗಳಿಂದ ಸಿಹಿಯಾದ ಸುವಾಸನೆಗಳು ಹೊರಬರುತ್ತಿತ್ತು. ಅಲ್ಲಿ ಬಗೆಬಗೆಯ ಸುಗಂಧ ದ್ರವ್ಯಗಳು ಮತ್ತು ಹೂಗಳು ಮಾರಾಟವಾಗುತ್ತಿತ್ತು. ಮಾನವರ ಹೃದಯಾಸೆಯಂತೆ ಬಗೆಬಗೆಯ ಆಭರಣಗಳು ದೊರೆಯುತ್ತಿತ್ತು. ವರ್ತಕರು ತಮ್ಮ ಸಾಮಗ್ರಿಗಳ ಪ್ರದರ್ಶನವನ್ನು ಸಂತೆಗಳಲ್ಲಿ ಆಕಾಶದ ನಾಲ್ಕು ದಿಕ್ಕುಗಳಲ್ಲಿ ಮುಖ ಮಾಡಿರುವ ಹಾಗೆ ಇಡುತ್ತಿದ್ದರು. ಆ ನಗರವು ಹಣದಿಂದ, ಚಿನ್ನದ ಮತ್ತು ಬೆಳ್ಳಿಯ ವಸ್ತುಗಳಿಂದ ಹಾಗೆಯೇ ತಾಮ್ರ ಮತ್ತು ಕಲ್ಲಿನ ಸರಕುಗಳಿಂದ ಹೊಳೆಯುತ್ತ ನಿಧಿಗಳಂತೆ ಕಂಗೊಳಿಸುತ್ತಿದ್ದವು. ನಾನಾ ವಿಧವಾದ ವಸ್ತುಗಳಿಂದ, ಆಹಾರ ಪಾನೀಯಗಳಿಂದ, ಸಿಹಿತಿಂಡಿಗಳಿಂದ ನಾನಾ ಪೇಯಗಳಿಂದ ಕೂಡಿತ್ತು. ಐಶ್ವರ್ಯದಲ್ಲಿ ಆ ನಗರವು ಉತ್ತರ-ಕುರುವಿಗೆ ಪ್ರತಿಸ್ಪಧರ್ಿಯಾಗಿದ್ದರೆ, ವೈಭವದಲ್ಲಿ ದೇವತೆಗಳ ನಗರವಾಗಿದ್ದ ಆಲಕಮಂದಾಗೆ ಸರಿಸಮಾನವಾಗಿತ್ತು.
                ಹೀಗೆ ಇಷ್ಟನ್ನು ಹೇಳಿ ಈಗ ನಾವು ಈರ್ವರ ಹಿಂದಿನ ಜನ್ಮ ವೃತ್ತಾಂತವನ್ನು ಮತ್ತು ನಾನಾವಿಧದ ಗೂಢ ಪ್ರಶ್ನೆಗಳನ್ನು ಅರಿಯೋಣ. ಇದನ್ನು ಆರು ವಿಧದಲ್ಲಿ ವಿಭಜಿಸೋಣ.
1.            ಅವರ ಹಿಂದಿನ ಜನ್ಮದ ವೃತ್ತಾಂತ (ಪುಬ್ಬಯೋಗೋ)
2.            ಮಿಲಿಂದ ಪ್ರಶ್ನೆಗಳು (ಮಿಲಿಂದ ಪನ್ಹಾ)
3.            ಲಕ್ಷಣಗಳ ವಿವರಣೆಗಾಗಿ ಪ್ರಶ್ನೆಗಳು (ಲಕ್ಖಣ ಪನ್ಹಾ)
4.            ವಿರೋಧಾತ್ಮಕ ಪ್ರಶ್ನೆಗಳು (ಮೆಂಡಕ ಪನ್ಹಾ)
5.            ಧ್ವಂಧ್ವ ಸಂದೇಹಾಸ್ಪದ (ಅನುಮಾನ ಪನ್ಹಾ) ಪ್ರಶ್ನೆಗಳು
6.            ಉಪಮೆಯಿಂದಾಗಿ ಉದಯಿಸಿದ ಚಚರ್ೆ (ಒಪಮ್ಮಕಥಾ ಪನ್ಹಾ)

                ಈ ಮಿಲಿಂದನ ಪ್ರಶ್ನೆಗಳಲ್ಲಿ ಎರಡು ವಿಭಾಗವಿದೆ. ಅದೆಂದರೆ ವೈಶಿಷ್ಟ್ಯಪೂರ್ಣ ಪ್ರಶ್ನೆಗಳು ಮತ್ತು ಸಂದೇಹ ದೂರೀಕರಣ ಪ್ರಶ್ನೆಗಳು ಮತ್ತು ವಿರೋಧಾತ್ಮಕ ಪ್ರಶ್ನೆಗಳಲ್ಲಿ ಮತ್ತೆ ಎರಡು ವಿಭಾಗಗಳಿವೆ, ಉದ್ದವಾದ ಅಧ್ಯಾಯ ಮತ್ತು ಭಿಕ್ಖು ಜೀವನದ ಪ್ರಶ್ನೆಗಳು.
 . ಬಾಹ್ಯಕಥೆ

1. ಪೂರ್ವ ವೃತ್ತಾಂತ
1. ನಾಗಸೇನ ಮತ್ತು ಮಿಲಿಂದರ ಪೂರ್ವಜನ್ಮ ಕಥೆ

                ಬಹಳ ಕಾಲದ ಹಿಂದೆ ಕಸ್ಸಪ ಬುದ್ಧರು ಗಂಗಾನದಿಯ ಹತ್ತಿರ ಬಹುಸಂಖ್ಯಾತ ಭಿಕ್ಷುಗಳ ಸಂಘದೊಡನೆ ಇದ್ದಾಗ, ಭಿಕ್ಷುಗಳು ಸಹಾ ಧಮ್ಮವಿನಯದೊಂದಿಗೆ ಜೀವಿಸುತ್ತಿದ್ದರು. ಅವರು ಪ್ರಾತಃ ಕಾಲದಲ್ಲೇ ಎದ್ದು ಉದ್ದವಾದ ಪೊರಕೆಗಳಿಂದ ವಿಹಾರವನ್ನು ಶುದ್ಧಿಗೊಳಿಸಿ, ನಂತರ ಬುದ್ಧ ಧ್ಯಾನದಲ್ಲಿ ತೊಡಗುತ್ತಿದ್ದರು.
                ಒಂದುದಿನ ಸೋದರನು ಸಮಣೇರನಿಗೆ ಕಸದ ರಾಶಿಯನ್ನು ತೆಗೆಯಲು ಹೇಳಿದನು. ಆದರೆ ಆತನು ಕೇಳಿಸದಂತೆ ತನ್ನ ಕಾರ್ಯದಲ್ಲಿ ಮಗ್ನನಾದನು. ಆತನಿಗೆ ಎರಡನೆಯಬಾರಿ ಹೇಳಿದಾಗಲು ಕೇಳಿಸದಂತೆಯೆ ಹೊರಟನು. ಆಗ ಸೋದರನಿಗೆ ಕೋಪವುಂಟಾಗಿ ಕಸಬರಿಕೆಯಿಂದ ಸಮಣೇರನಿಗೆ ಹೊಡೆತವನ್ನು ನೀಡಿದನು. ಈ ಬಾರಿ ನಿರಾಕರಿಸಲು ಧೈರ್ಯತಾಳದೆ ಅಳುತ್ತಾ ಕಸವನ್ನು ಹೊರಹಾಕಿ ಶುದ್ಧೀಕರಿಸಿದನು ಹಾಗು ಹಾಗೆ ಮಾಡುವಾಗ ಗೊಣಗುಟ್ಟುತ್ತ ಈ ಮೊದಲ ಸಂಕಲ್ಪವನ್ನು ಮಾಡಿದನು. ನಾನು ಈ ಕಸದ ರಾಶಿಯನ್ನು ಎತ್ತಿ ಎಸೆದ ಪುಣ್ಯದಿಂದ ನಾನು ನಿಬ್ಬಾಣ ಪಡೆವಂತಹ ಜನ್ಮದಲ್ಲಿ ಶಕ್ತಿಶಾಲಿಯು ಹಾಗು ನಡುಹಗಲಿನ ಸೂರ್ಯನಂತೆ ತೇಜಸ್ವಿಯಾಗಲಿ.
                ಆಗ ಆತನು ಕೆಲಸ ಮುಗಿಸಿ ನದಿಯ ಹತ್ತಿರ ಸ್ನಾನ ಮಾಡಲು ಹೊರಟನು. ಹಾಗೆ ಆತನು ಹೊರಡುತ್ತಿರುವಾಗ ಗಂಗಾನದಿಯ ಅಲೆಗಳನ್ನು ವೀಕ್ಷಿಸಿ ಎರಡನೆಯ ಸಂಕಲ್ಪ ಮಾಡಿದನು ನಾನು ನಿಬ್ಬಾಣ ಪಡೆಯುವ ಮುನ್ನ ಜನ್ಮಿಸುವ ಪ್ರತಿ ಜನ್ಮದಲ್ಲೂ ಯೋಗ್ಯ ವಿಷಯವನ್ನು ಹೇಳುವ ಶಕ್ತಿ ಪಡೆಯುವಂತಾಗಲಿ, ಹೇಗೆ ಈ ಬೃಹತ್ ಅಲೆಗಳು ಎಲ್ಲವನ್ನು ತೆಗೆದುಕೊಂಡು ಹೋಗುವವೋ ಹಾಗೇ ಎಂತಹ ಪರಿಸ್ಥಿತಿಗಳೇ ಇರಲಿ ತಟ್ಟನೆ ಹೇಳುವಂತಹವನಾಗಲಿ.
                ಅದೇ ವೇಳೆಯಲ್ಲಿ ಸೋದರರು ಕಸಪೊರಕೆಯನ್ನು ಅದರ ಸ್ಥಾನದಲ್ಲಿಟ್ಟು ನದಿಯ ಬಳಿ ಅಡ್ಡಾಡಲು ಹೊರಟಿರುವಾಗ ಸಾಮಣೇರನ ಸಂಕಲ್ಪಗಳನ್ನು ಕೇಳಿದನು. ಆಗ ಆತನು ಈ ರೀತಿ ಯೋಚಿಸಿದನು ನಾನು ಆಜ್ಞಾಪಿಸಿದ ಕಾರ್ಯದಿಂದ ಈತನಿಗೆ ಅಂತಹ ಪುಣ್ಯವು ಲಭಿಸುವುದಾದರೆ ನಾನು ಎಂಥದ್ದನ್ನು ಪ್ರಾಪ್ತಿಮಾಡಬಹುದು ಎಂದು ಯೋಚಿಸಿ ಆ ಸೋದರ ಈ ರೀತಿ ಸಂಕಲ್ಪ ಮಾಡಿದನು ನಾನು ನಿಬ್ಬಾಣ ಪಡೆಯುವವರೆಗಿನ ಪ್ರತಿ ಜನ್ಮದ ಸನ್ನಿವೇಶದಲ್ಲೂ ನಾನು ಸಹಾ ಯೋಗ್ಯ ವಿಷಯವನ್ನು ತಟ್ಟನೆ ಹೇಳುವಂತಾಗಲಿ ಮತ್ತು ವಿಶೇಷವಾಗಿ ನನಗೆ ಗೋಜು ಕಗ್ಗಂಟನ್ನು ಬಿಡಿಸುವ ಸಾಮಥ್ರ್ಯ ಸಿಗುವಂತಾಗಲಿ. ಈ ಯುವಕನು ನನಗೆ ಹಾಕುವಂತನ ಪ್ರತಿ ಸಮಸ್ಯೆಯನ್ನು ಮತ್ತು ಪ್ರತಿ ನಿಗೂಢ ಪ್ರಶ್ನೆಗಳನ್ನು ಬಿಡಿಸುವವನಾಗಲಿ. ಈ ಯುವಕನು ಬೃಹತ್ ಅಲೆಗಳು ಬೀಳುವ ರೀತಿ ಪ್ರಶ್ನಿಸಿದರೂ ಪರಿಹರಿಸುವವನಾಗಲಿ.
                ಕಸ್ಸಪ ಬುದ್ಧರ ಕಾಲದಿಂದ ಗೋತಮಬುದ್ಧರ ಕಾಲದವರೆಗೆ ಈ ಈರ್ವರು ದೇವತೆಗಳಾಗಿ ಮತ್ತು ಮಾನವರಾಗಿ ಜನ್ಮವೆತ್ತಿದ್ದರು. ನಮ್ಮ ಬುದ್ಧರಾದ ಗೋತಮರು ಸಹಾ ಇವರನ್ನು ಕಂಡಿದ್ದರು. ಇವರನ್ನು ನೋಡಿ ಮೊಗ್ಗಲಿಪುತ್ತ ಮತ್ತು ಸಾರಿಪುತ್ತರಿಗೆ ಈ ರೀತಿ ಅವರ ಬಗ್ಗೆ ಭವಿಷ್ಯ ನುಡಿದರು ನನ್ನ ಪರಿನಿಬ್ಬಾಣದ 500 ವರ್ಷಗಳ ನಂತರ, ಈ ಇಬ್ಬರು ಜನ್ಮವೆತ್ತುವರು ಮತ್ತು ನನ್ನಿಂದ ಉಪದೇಶಿತವಾಗಿರುವ ಸೂಕ್ಷ್ಮವಾದ ಧಮ್ಮವನ್ನು ಮತ್ತು ವಿನಯವನ್ನು ಅವರು ವಿವರಿಸುವರು. ಪ್ರಶ್ನೆಗಳನ್ನು ಹಾಕಿ, ಸಮಸ್ಯೆಗಳನ್ನು ಬಿಡಿಸಿ, ಗೋಜಲನ್ನು ಕಗ್ಗಂಟುಗಳನ್ನು ಬಿಡಿಸಿ ಉಪಮೆಗಳಿಂದ ಉಲ್ಲೇಖಿಸುವರು.
                ಅದು ಹಾಗೆಯೇ ಆಯಿತು. ಆ ಸಮಣೇರನು ತನ್ನ ಅಂತಿಮ ಜನ್ಮದಲ್ಲಿ ಭಾರತದ ಸಾಗಲ ನಗರದ ರಾಜನಾದನು. ಆತನಿಗೆ ಮಿಲಿಂದ ಎಂದು ಕರೆಯುತ್ತಿದ್ದರು. ಆತನು ವಿದ್ವಾನ್, ಜ್ಞಾನಿ, ಸಮರ್ಥ, ವಾಕ್ಚಾತುರ್ಯವುಳ್ಳವನಾಗಿದ್ದನು ಮತ್ತು ಶ್ರದ್ಧಾವಂತನಾಗಿದ್ದನು. ಕಾಲಕಾಲಕ್ಕೆ ಹಲವಾರು ಭಕ್ತಿಯ ಕಾರ್ಯಗಳಲ್ಲಿ ಮತ್ತು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದನು. ಆತನಿಗೆ ಹಲವಾರು ಕಲೆ ಮತ್ತು ಶಾಸ್ತ್ರಗಳು ತಿಳಿದಿದ್ದವು. ಪವಿತ್ರ ಸಂಪ್ರದಾಯಗಳು ಮತ್ತು ಧರ್ಮಗಳು ತಿಳಿದಿದ್ದವು. ಸಾಂಖ್ಯಾ ಯೋಗ, ನ್ಯಾಯ, ವೈಸೆಷಿಕ ತತ್ವಜ್ಞಾನಗಳು ತಿಳಿದಿದ್ದವು. ಗಣಿತ, ಸಂಗೀತ, ವೈದ್ಯಕೀಯ ಮತ್ತು ವೇದಗಳು ಪುರಾಣಗಳು ಮತ್ತು ಇತಿಹಾಸವು ತಿಳಿದಿತ್ತು. ಅಷ್ಟೇ ಅಲ್ಲದೆ ಖಗೋಳಶಾಸ್ತ್ರ, ಇಂದ್ರಜಾಲ, ಹೇತು (ತರ್ಕ) ಮತ್ತು ಮಂತ್ರಗಳು ತಿಳಿದಿದ್ದವು. ಸಮರಕಲೆ, ಕಾವ್ಯ, ಮುದ್ದ (ಮುದ್ರೆ), ಒಟ್ಟಾರೆ 19 ವಿದ್ಯೆಗಳಲ್ಲಿ ಪ್ರವೀಣನಾಗಿದ್ದನು.
                ವಾದವಿವಾದದಲ್ಲಿ ಆತನಿಗೆ ಸಮಾನರ್ಯಾರೂ ಇರಲಿಲ್ಲ. ಆತನನ್ನು ಸೊಲಿಸುವುದೆಂದರೆ ಇನ್ನೂ ಕಷ್ಟಕರ ವಿಷಯವಾಗಿತ್ತು. ಹಲವಾರು ತಾತ್ವಿಕರ ವಿಶ್ವವಿದ್ಯಾಲಯದ ಅಂಗೀಕೃತ ಸ್ಥಾಪಕರು ಸಹ ಆತನನ್ನು ಸೋಲಿಸಲು ಆಗಲಿಲ್ಲ. ಬರೀ ಪ್ರಜ್ಞಾಶೀಲತೆಯಷ್ಟೇ ಅಲ್ಲ, ದೈಹಿಕ ಶಕ್ತಿಯಲ್ಲಾಗಲಿ, ವೇಗದಲ್ಲಿಯಾಗಲಿ ಮತ್ತು ವೀರತನದಲ್ಲಿಯಾಗಲಿ, ಮಿಲಿಂದನ ಸರಿಸಾಟಿ ಇಡೀ ಜಂಬುದ್ವೀಪದಲ್ಲೇ ಯಾರೂ ಇರಲಿಲ್ಲ. ಆತನು ಶ್ರೀಮಂತನು ಸಹಾ ಅಗಿದ್ದ. ಅಪಾರ ಐಶ್ವರ್ಯಶೀಲನಾಗಿ, ಸಂಮೃದ್ಧಿಯಿಂದ ಕೂಡಿ ಹಾಗು ಆತನ ಸೈನ್ಯವು ಅಪಾರವಾಗಿತ್ತು.
                ಒಂದುದಿನ ಮಿಲಿಂದ ರಾಜನು ನಗರದಿಂದ ಹೊರಗೆ ಸೈನ್ಯದೊಂದಿಗೆ ಹೊರಟನು. ತನ್ನ ಚದುರಂಗ ಬಲದ ಸೈನ್ಯ ವೀಕ್ಷಿಸಿದನು. ರಾಜನು ವಾದಾಕಾಂಕ್ಷಿಯಾಗಿದ್ದನು. ಆತನು ವಾಗ್ಮಿಯತೆಯಲ್ಲಿ ಸದಾ ಉತ್ಸುಕನಾಗಿರುತ್ತಿದ್ದನು. ಆತನು ಆಗಾಗ್ಗೆ ಕಾರ್ಯಕಾರ್ಯ ವಿವೇಕಿಗಳೊಡನೆ, ಲೋಕಾಯತರೊಡನೆ, ವಿತಂಡವಾದಿಗಳೊಡನೆ, ಇನ್ನೂ ಮುಂತಾದವರೊಡನೆ ವಾದವಿವಾದಗಳಲ್ಲಿ ತೊಡಗುತ್ತಿದ್ದನು. ಸೂರ್ಯನನ್ನು ನೋಡಿ ಮಂತ್ರಿಗಳೊಡನೆ ಹೀಗೆ ಮಿಲಿಂದನು ಹೇಳಿದನು ಇನ್ನೂ ಹಗಲು ಯೌವ್ವನದಲ್ಲೇ ಇದೆ. ಇಷ್ಟು ಬೇಗ ಹೋಗಿ ಪ್ರಯೋಜನವಿಲ್ಲ. ಇಲ್ಲಿ ಯಾರೂ ವಾಗ್ಮಿಯೇ ಇಲ್ಲವೇ? ಇಲ್ಲಿ ಯಾರಾದರೂ ವಿದ್ವಾಂಸ, ಸಮಣ (ಪ್ರವಜಿಕ), ಬ್ರಾಹ್ಮಣ ಶಾಲಾ ಮುಖ್ಯಸ್ಥ ಅಥವಾ ಗುರು ಇಲ್ಲವೆ? ನಮ್ಮೊಂದಿಗೆ ಮಾತನಾಡಬಲ್ಲ ಸಮರ್ಥನು ಮತ್ತು ಸಂದೇಹ ದೂರ ಮಾಡಬಲ್ಲವನ್ನು ಯಾರೂ ಇಲ್ಲವೇ?
                ಆಗ 500 ಜನ ಯೋನಕರು ಮಿಲಿಂದ ಮಹಾರಾಜನಿಗೆ ಈ ರೀತಿ ಹೇಳಿದರು ಇಲ್ಲಿ ಆರು ಗುರುಗಳು ಇದ್ದಾರೆ, ಓ ಮಹಾರಾಜ, ಅವರುಗಳೆಂದರೆ ಪುರಾಣ ಕಸ್ಸಪನ ಪಂಥಿಯರು, ಮಖ್ಖಲಿ ಗೋಸಾಲನ ಪಂಥಿಯರು, ನಿಗಂಟನಾಥ ಪುತ್ತನ ಪಂಥಿಯರು, ಸಂಜಯ ಬೆಲಟ್ಟ ಪುತ್ರನ ಪಂಥಿಯರು, ಅಜಿತ ಕೇಶಕಂಬಳಿಯ ಪಂಥಿಯರು ಮತ್ತು ಪಕುದ ಕಚ್ಚಾಯನ ಪಂಥಿಯರು, ಇವರೆಲ್ಲರೂ ಪ್ರಖ್ಯಾತಶಾಲೆಯವರು. ಇವರೆಲ್ಲರಿಗೂ ಅಪಾರ ಶಿಷ್ಯಗಣವಿದೆ, ಜನರ ಆದರವಿದೆ. ಆದ್ದರಿಂದ ಓ ರಾಜನೇ ಇವರಲ್ಲಿಗೆ ಹೋಗು. ಇವರಲ್ಲಿ ಪ್ರಶ್ನಿಸಿದರೆ ನಿನ್ನ ಸಂದೇಹಗಳು ದೂರವಾಗುವವು.
2. ಪುರಾಣ ಕಸ್ಸಪನೊಂದಿಗೆ ರಾಜನ ಚಚರ್ೆ
                ಅವರ ಸಲಹೆ ಸ್ವೀಕರಿಸಿದಂತಹ ಮಿಲಿಂದನು 500 ಜನ ಯೋನಕರೊಡನೆ ರಾಜ ರಥದಲ್ಲಿ ಹತ್ತಿ ಪುರಾಣ ಕಸ್ಸಪನ ಪಂಥಿಯ ಗುರುವಿನ ಬಳಿ ಬಂದನು. ಅಲ್ಲಿ ಕುಶಲಪರಿ ವಿಚಾರಿಸಿದ ನಂತರ ಅಸನದಲ್ಲಿ ಅಸೀನನಾದ ಮೇಲೆ ಆತನಿಗೆ ಈ ರೀತಿ ಪ್ರಶ್ನಿಸಿದನು. ಕಸ್ಸಪ ಪೂಜ್ಯರೇ, ಈ ಜಗತ್ತನ್ನು ಆಳುತ್ತಿರುವವರು ಯಾರು?
                ಭೂಮಿ ಓ ಮಹಾರಾಜ, ಅದೇ ಜಗತ್ತನ್ನು ಆಳುತ್ತಿದೆ.
                ಆದರೆ ಪೂಜ್ಯ ಕಸ್ಸಪ, ಪೃಥ್ವಿಯು ಈ ಜಗವನ್ನು ಆಳುತ್ತಿದ್ದರೆ, ಸತ್ತ ಕೆಲವು ಜನರು ಅವೀಚಿ ನರಕಕ್ಕೆ ಹೇಗೆ ಹೋಗುವರು? ಅದಂತು ಭೂಮಿಯ ಕ್ಷೇತ್ರಕ್ಕೆ ಹೊರತಾಗಿದೆಯಲ್ಲವೆ?
                ಅದನ್ನು ಆಲಿಸಿದ ಪುರಾಣ ಕಸ್ಸಪ ಬಿಸಿತುಪ್ಪವನ್ನು ಬಾಯಿಗೆ ಹಾಕಿಕೊಂಡಂತೆ ನಿಸ್ತೇಜನಾದನು, ನಿಶ್ಶಬ್ದನಾದನು, ಮಂಕುಬಡಿದಂತಾದನು.
3. ಮಖ್ಖಲಿ ಗೋಸಾಲನೊಂದಿಗೆ ಮಿಲಿಂದ ಚಚರ್ೆ
                ನಂತರ ಮಿಲಿಂದ ಮಹಾರಾಜನು ಮಖ್ಖಲಿ ಗೋಸಾಲನ ಬಳಿಗೆ ಬಂದಾಗ ಆತನಿಗೆ ಈ ರೀತಿ ಪ್ರಶ್ನಿಸಿದನು ಪೂಜ್ಯ ಗೋಸಾಲಕರೇ, ಪುಣ್ಯ ಮತ್ತು ಪಾಪ ಕೃತ್ಯಗಳೆಂಬುದು ಇವೆಯೆ? ಅವಕ್ಕೆ ಫಲವೆಂಬುದು ಇದೆಯೇ? ಪಾಪ ಪುಣ್ಯಗಳಿಗೆ ಪರಿಣಾಮವಿದೆಯೇ?
                ಓ ರಾಜ, ಅಂತಹ ಕೃತ್ಯಗಳೂ ಇಲ್ಲ ಮತ್ತು ಅಂತಹ ಪರಿಣಾಮಗಳೂ ಇಲ್ಲ, ಅಥವಾ ಅಂತಿಮ ಫಲಿತಾಂಶವೂ ಇಲ್ಲ. ಓ ರಾಜ, ಯಾರು ಇಲ್ಲಿರುವ ಶ್ರೇಷ್ಠರು ಪರಲೋಕಕ್ಕೆ ಹೋದಾಗ ಶ್ರೇಷ್ಠರೇ ಆಗಿರುತ್ತಾರೆ ಮತ್ತು ಯಾರೂ ಇಲ್ಲಿ ಮಧ್ಯಮ ವರ್ಗದವರು ಅಥವಾ ಕೆಳವರ್ಗದವರು ಆಗಿದ್ದಾರೆಯೋ ಅವರೆಲ್ಲರೂ ಮುಂದಿನ ಲೋಕದಲ್ಲಿಯೂ ಹಾಗೇ ಇರುತ್ತಾರೆ. ಆದ್ದರಿಂದ ಪುಣ್ಯ ಅಥವಾ ಪಾಪಕೃತ್ಯಗಳಿಂದ ಯಾವ ಪ್ರಯೋಜನವೂ ಇಲ್ಲ, ಅಲ್ಲವೇ?
                ಓ ಪೂಜ್ಯ ಗೋಸಾಲರೇ, ನೀವು ಹೇಳಿದಂತೆ ಆಗಿದ್ದರೆ, ಇಲ್ಲಿ ಕೈ ಕತ್ತರಿಸಲ್ಪಟ್ಟಿರು ವಂತಹ ವ್ಯಕ್ತಿಗೆ ಪರಲೋಕದಯೂ ಕೈ ಕತ್ತರಿಸಲ್ಪಟ್ಟಿರುತ್ತದೆ. ಇಲ್ಲಿ ಯಾವ ವ್ಯಕ್ತಿಯ ಕಾಲು ಅಥವಾ ಕಿವಿ ಕತ್ತರಿಸಲ್ಪಟ್ಟಿದ್ದರೆ ಅಂತಹ ವ್ಯಕ್ತಿಗೆ ಪರಲೋಕದಲ್ಲೂ ಅದೇ ಅವಸ್ಥೆಯಿರುತ್ತದೆ. ಅದನ್ನು ಆಲಿಸಿದ ಗೋಸಾಲ ನಿಶ್ಶಬ್ದನಾದನು.
                ಆಗ ಮಿಲಿಂದ ರಾಜ ಈ ರೀತಿಯಾಗಿ ತನ್ನಲ್ಲೇ ಹೇಳಿಕೊಂಡನು ಇಡೀ ಜಂಬು ದ್ವೀಪವು ಖಾಲಿಯಾಗಿದೆ, ನಿಜವಾಗಿಯು ನಿಸ್ತೇಜವಾಗಿದೆ. ಇಲ್ಲಿ ಯಾರಾದರೂ ಒಬ್ಬರೂ ಸಹ ಸಮಣರಾಗಲಿ ಅಥವಾ ಬ್ರಾಹ್ಮಣರಾಗಲಿ, ನನ್ನೊಂದಿಗೆ ಚಚರ್ಿಸಲು ಸಾಮಥ್ರ್ಯವುಳ್ಳ ಒಬ್ಬರೂ ಇಲ್ಲವೆ? ಮತ್ತು ನನ್ನ ಸಂದೇಹ ದೂರ ಮಾಡಬಲ್ಲವರು ಒಬ್ಬರೂ ಇಲ್ಲವೆ? ಮತ್ತು ಅವನು ಮಂತ್ರಿಗಳೊಡನೆ ಹೀಗೆ ಹೇಳಿದನು ಸುಂದರವಾಗಿದೆ, ಈ ರಾತ್ರಿ ಸುಖಕರವಾಗಿದೆ. ನಾವು ಯಾವ ಸಮಣನೊಡನೆ ಅಥವಾ ಬ್ರಾಹ್ಮಣನೊಡನೆ ಚಚರ್ಿಸಲು ಹೋಗೋಣ ಹೇಳಿರಿ? ಯಾರು ನಮ್ಮ ಸಂಶಯಗಳನ್ನು ದೂರೀಕರಿಸುವರು? ಆದರೆ ಆತನ ಮಂತ್ರಿಗಳು ನಿಶ್ಶಬ್ದಗೊಂಡರು ಮತ್ತು ರಾಜನ ಮುಖ ನೋಡುತ್ತ ನಿಂತುಬಿಟ್ಟರು.
                ಸಾಗಲದಲ್ಲಿ 12 ವರ್ಷಗಳ ಕಾಲ ವಿದ್ವಾಂಸರಿಂದ, ಬ್ರಾಹ್ಮಣರಿಂದ, ಸಮಣರಿಂದ ಅಥವಾ ಪಂಡಿತ ಗೃಹಸ್ಥರಿಂದ ಬರಿದಾಗಿತ್ತು. ಏಕೆಂದರೆ ಅಂತಹವರು ಕಂಡಾಗ ರಾಜನು ಅವರನ್ನು ಭೇಟಿಯಾಗುತ್ತಿದ್ದನು ಮತ್ತು ಪ್ರಶ್ನಿಸುತ್ತಿದ್ದನು. ಆದರೆ ಎಲ್ಲರಂತೆ ಯಾರೂ ಸಹಾ ರಾಜನನ್ನು ತೃಪ್ತಿಪಡಿಸಲಾಗಲಿಲ್ಲ. ಹೀಗಾಗಿ ಅವರೆಲ್ಲಾ ಆತನ ರಾಜ್ಯ ಬಿಟ್ಟು ಬೇರೆಡೆ ವಾಸಿಸಲಾರಂಭಿಸಿದರು. ಹೀಗಾಗಿ ಎಲ್ಲಾ ಘಟನೆಗಳು ಶಾಂತವಾದವು ಮತ್ತು ಸಂಘವು ಸಹಾ ವಾದವಿವಾದವು ಸಾಧನೆಗೆ ಅಡ್ಡಿ ಎಂದು ಭಾವಿಸಿ ಹಿಮಾಲಯ ಪ್ರಾಂತ್ಯದಲ್ಲಿ ನೆಲೆಸಿತು.
4. ಆಯುಷ್ಮಂತರಾದ ಅಸ್ಸಗುತ್ತರವರು
                ಆಗ ಅವರೆಲ್ಲರೂ ಹಿಮಾಲಯದ ಪರ್ವತ ಶ್ರೇಣಿಯಲ್ಲಿ ರಕ್ಷಿತ ಇಳಿಜಾರಿನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅಸಂಖ್ಯ ಅರಹಂತರಿದ್ದರು ಮತ್ತು ಅಲ್ಲಿದ್ದಂತಹ ಅಸ್ಸಗುತ್ತ ತನ್ನ ದಿವ್ಯವಾದ ಶ್ರೋತದಿಂದ ಮಿಲಿಂದನ ಮಾತುಗಳನ್ನು ಆಲಿಸಿದನು ಮತ್ತು ಆತನು ಅಲ್ಲಿ ಯುಗಂಧರ ಪರ್ವತದಲ್ಲಿ ಸಂಘದ ಸಮಾವೇಶ ಏರ್ಪಡಿಸಿದನು ಮತ್ತು ಸಂಘವನ್ನು ಈ ರೀತಿ ಪ್ರಶ್ನಿಸಿದನು ರಾಜ ಮಿಲಿಂದನೊಂದಿಗೆ ಚಚರ್ಿಸಿ ಆತನ ಸಂಶಯಗಳನ್ನು ನಿವಾರಿಸುವಂತಹ ಯಾರಾದರೂ ಒಬ್ಬರು ಸಂಘದಲ್ಲಿ ಇರುವರೇ?
                ಎಲ್ಲರೂ ನಿಶ್ಶಬ್ದವಾಗಿದ್ದರು. ಎರಡನೆಬಾರಿ ಮತ್ತು ಮೂರನೆಯಬಾರಿ ಪ್ರಶ್ನಿಸಿದಾಗಲು ಅವರು ಯಾರೂ ಮಾತಾಡಲಿಲ್ಲ. ಆಗ ಪೂಜ್ಯ ಅಸ್ಸಗುತ್ತರು ಸಂಘದೊಂದಿಗೆ ಈ ರೀತಿ ಹೇಳಿದರು ಒಬ್ಬರಿರುವರು ಪೂಜ್ಯರೆ, ತಾವತಿಂಸ ಸುಗತಿಯಲ್ಲಿ, ವೈಜಯಂತಿ ಅರಮನೆಯ ಪೂರ್ವ ಭಾಗದಲ್ಲಿ ಮಹಾಸೇನ ಎಂಬ ದೇವನಿದ್ದಾನೆ, ಆತನು ಒಬ್ಬನೇ ಮಿಲಿಂದ ಮಹಾರಾಜನಿಗೆ ಚಚರ್ಿಸಲು ಸಮರ್ಥನಾಗಿದ್ದಾನೆ. ಹಾಗು ಆತನ ಸಂಶಯ ದೂರೀಕರಿಸಲು ಸಮರ್ಥನಾಗಿದ್ದಾನೆ. ಆಗ ಬಹು ಸಂಖ್ಯಾತ ಅರಹಂತರು ಅಲ್ಲಿಂದ ಅದೃಷ್ಯರಾಗಿ ತಾವತಿಂಸ ಲೋಕದಲ್ಲಿ ಪ್ರತ್ಯಕ್ಷರಾದರು.
5. ಮಹಾಸೇನಾರವರಲ್ಲಿ ಯಾಚನೆ
                ಸಕ್ಕನು ದೇವತೆಗಳಿಗೆ ಒಡೆಯನಾಗಿದ್ದನು. ಆತನು ದೂರದಿಂದಲೇ ಸಂಘವು ಬರುತ್ತಿರುವುದನ್ನು ಕಂಡನು. ಆತನು ಅಸ್ಸಗುತ್ತ ಮತ್ತು ಅರಹಂತರ ಬಳಿಗೆ ಬಂದು ವಂದಿಸಿ, ಗೌರವದಿಂದ ಒಂದೆಡೆ ನಿಂತನು. ಈ ರೀತಿ ಕೇಳಿದನು ಪೂಜ್ಯರೇ, ಸಂಘದ ಸಮೇತ ಬಂದಿರುವಿರಿ, ನನ್ನಿಂದ ಸಂಘವು ಏನನ್ನು ಬಯಸುತ್ತದೆ? ನಾನು ಸಂಘಕ್ಕೆ ದಾಸನಾಗಿದ್ದೇನೆ, ನಾನು ನಿಮಗೆ ಯಾವರೀತಿ ಸಹಾಯ ಮಾಡಲಿ.
                ಆಗ ಅಸ್ಸಗುತ್ತರವರು ಈ ರೀತಿ ಪ್ರತಿಕ್ರಿಯೆ ನೀಡಿದರು ಮಿಲಿಂದನೆಂಬ ರಾಜನು ಸಾಗಲ ನಗರದಲ್ಲಿದ್ದಾನೆ. ವಿತಂಡವಾದಿಯಾದ ಆತನೊಂದಿಗೆ ಸರಿಸಮಾನವಾಗಿ ವಾದಿಸಲು ಕಷ್ಟಕರವಾಗಿದೆ, ಸೋಲಿಸಲು ಕಡುಕಷ್ಟಕರವಾಗಿದೆ. ಆತನು ಹಲವಾರು ಪಂಥಗಳ ಜ್ಞಾನವನ್ನು ತಿಳಿದುಕೊಂಡಿದಾನೆ. ಎಲ್ಲರನ್ನು ವಾದದಿಂದ ನೋಯಿಸುವ ಆತನು ಸಂಘದ ಸದಸ್ಯರನ್ನು ಸಹಾ ಪ್ರಶ್ನೆಗಳಿಂದ ಬಾಧಿಸುತ್ತಿದ್ದಾನೆ.
                ಅದನ್ನು ಕೇಳಿದ ದೇವೇಂದ್ರನು ಓಹ್ ಆತನೋ, ಹಿಂದೆ ಇಲ್ಲಿಯೇ ದೇವನಾಗಿದ್ದನು, ಈಗ ಮಾನವನಾಗಿ ಜನ್ಮಿಸಿದಾನೆ. ಇಲ್ಲಿ ಮಹಾಸೇನ ಎಂಬ ದೇವನೊಬ್ಬ ಕೇತುಮತಿ ಎಂಬ ಅರಮನೆಯಲ್ಲಿ ವಾಸಿಸುತ್ತಿದ್ದಾನೆ. ಆತನು ಮಾತ್ರ ಮಿಲಿಂದನೊಡನೆ ಚಚರ್ಿಸಿ ಸಂದೇಹ ದೂರ ಮಾಡಬಲ್ಲ ಸಮರ್ಥನಾಗಿದ್ದಾನೆ. ಆತನಿಗೆ ಮಾನವ ಲೋಕದಲ್ಲಿ ಹುಟ್ಟುವಂತೆ ಕೇಳೋಣ ಬನ್ನಿ.
                ಹೀಗಾಗಿ ಸಕ್ಕರವರು ಸಂಘದೊಡನೆ ಜೊತೆಗೂಡಿ ಕೇತುಮತಿಯ ಭವನಕ್ಕೆ ಬಂದರು. ಅಲ್ಲಿ ಬಂದು ಮಹಾಸೇನರನ್ನು ಅಪ್ಪಿಕೊಂಡರು. ನಂತರ ಹೀಗೆ ಹೇಳಿದರು ಸಂಘ ಮತ್ತು ದೇವತೆಗಳ ಒಡೆಯನಾದ ನಾನು ಬೇಡುವುದು ಏನೆಂದರೆ ನೀವು ಮಾನವ ಲೋಕದಲ್ಲಿ ಜನ್ಮಿಸುವುದು.
                ನನಗೆ ಅಂಥಹ ಆಸೆಯೇನು ಇಲ್ಲ. ಏಕೆಂದರೆ ಕರ್ಮಫಲಗಳ ಭಾರ ಮನುಷ್ಯ ಲೋಕದಲ್ಲೇ ಹೆಚ್ಚು. ಮಾನವನ ಜೀವನ ಕಷ್ಟಕರ. ಇಲ್ಲಿಯಾದರೆ ಪ್ರಭುವೇ ಉತ್ತಮೋತ್ತಮ ಲೋಕಗಳಿವೆ. ಇನ್ನು ಉನ್ನತ ಲೋಕಗಳಲ್ಲಿ ಉದಯಿಸುವುದಾದರೆ ನಾನು ಸಿದ್ಧನಾಗಿದ್ದೇನೆ.
                ದೇವೇಂದ್ರನಾದ ಸಕ್ಕರವರು 2ನೇಯ ಬಾರಿ ಮತ್ತು 3ನೇಯ ಬಾರಿ ಸಹಾ ಮೊದಲಿನ ವಿನಂತಿಯನ್ನು ಮಾಡಿಕೊಂಡರು. ಆದರೆ ಉತ್ತರವು ಮಾತ್ರ ಅದೇ ಆಗಿತ್ತು. ಆಗ ಆಸ್ಸಗುತ್ತರವರು ಮಹಾಸೇನ ದೇವನಿಗೆ ಈ ರೀತಿ ಹೇಳಿದರು: ನಾವು ಇಡೀ ಮಾನವ ದೇವಾಧಿ ಗುಣಗಳಲ್ಲಿ ಪುನರ್ ಅವಲೋಕಿಸಿದೆವು. ಮಿಲಿಂದನ ವಿತಂಡವಾದವನ್ನು ಮುರಿಯಲು ಅರ್ಹನಾಗಿ ಕಂಡುಬಂದಿದ್ದು ನೀವು ಒಬ್ಬರೇ, ಇಡೀ ಸಂಘವೇ ನಿಮ್ಮನ್ನು ವಿನಂತಿಸಿಕೊಳ್ಳುತ್ತದೆ.
                ಆಗ ಇಂದ್ರರು ಈ ರೀತಿ ಹೇಳಿದರು ಅನುಗ್ರಹ ತೋರು ಓ ಅರ್ಹನೆ, ಮಾನವರ ಮಧ್ಯೆ ಜನಿಸುವವನಾಗು. ದಶಬಲಧಾರಿಗಳ (ಬುದ್ಧರ) ಶಾಸನಕ್ಕೆ ಸಹಾಯಕನಾಗು.
                ಆಗ ಮಹಾಸೇನ ದೇವ ಆನಂದದಿಂದ ತುಂಬಿದನು. ತಾನು ಮಿಲಿಂದನ ವಿತಂಡವಾದವನ್ನು ಮುರಿದು, ಧಮ್ಮಶ್ರದ್ಧೆವುಂಟು ಮಾಡುತ್ತಿರುವೆ ಎಂದು ಚಿಂತಿಸಿ ಆಹ್ಲಾದತೆ ಪಡೆದನು. ಆಗ ಮಹಾಸೇನರವರು ಈ ರೀತಿ ವಚನ ನೀಡಿದರು.
                ಹಾಗೆಯೇ ಆಗಲಿ ಪೂಜ್ಯರೇ, ನಾನು ಮಾನವರ ಲೋಕದಲ್ಲಿ ಜನ್ಮಿಸಲು ಸಿದ್ಧನಾಗಿದ್ದಾನೆ.
6. ರೋಹಣರವರ ಪ್ರಾಯಶ್ಚಿತ್ತ
                ಈ ರೀತಿಯಾಗಿ ತಮ್ಮ ಕಾರ್ಯದಲ್ಲಿ ಯಶಸ್ಸುಗೊಳಿಸಿದ ಭಿಕ್ಕು ಸಂಘವು ತಾವತಿಂಸಲೋಕದಿಂದ ಅದೃಷ್ಯವಾಗಿ ಹಿಮಾಲಯದ ಪರ್ವತಶ್ರೇಣಿಯ ಇಳಿಜಾರಿನ ವಿಹಾರದಲ್ಲಿ ಪ್ರತ್ಯಕ್ಷರಾದರು ಮತ್ತು ಅಸ್ಸಗುತ್ತರವರು ಸಂಘಕ್ಕೆ ಈ ರೀತಿ ಹೇಳಿದರು ಈ ಭಿಕ್ಖು ಸಂಘದಲ್ಲಿ ಆಗಮಿಸದಿರುವ, ಕಾಣದಿರುವ ಪೂಜ್ಯರು ಯಾರಾದರೂ ಇರುವರೇ?
                ಆಗ ಭಿಕ್ಖು ಒಬ್ಬರು ಈ ರೀತಿ ಹೇಳಿದರು ಹೌದು ರೋಹಣರು ಹಿಂದಿನ ವಾರ ಪರ್ವತಗಳ ಮಧ್ಯೆ ಸಮಾಧಿಯಲ್ಲಿ ತಲ್ಲೀನರಾಗಿದ್ದಾರೆ ಮತ್ತು ಆಗ ಅವರಿಗೆ ಸಂದೇಶವನ್ನು ಕಳುಹಿಸಲಾಯಿತು. ಅದೇಕ್ಷಣದಲ್ಲಿ ರೋಹಣರು ಸಮಾಧಿಯಿಂದ ಎದ್ದರು. ಅವರಿಗೆ ಸಂಘವು ತಮ್ಮನ್ನು ನಿರೀಕ್ಷಿಸುತ್ತಿದೆ ಎಂದು ಅರಿವಾಯಿತು. ಆಗ ಅವರು ಪರ್ವತದ ಮೇಲಿನಿಂದ ಅದೃಷ್ಯವಾಗಿ ಸಂಘದ ಮಧ್ಯೆ ಪ್ರತ್ಯಕ್ಷರಾದರು.
                ಆಗ ಪೂಜ್ಯ ಅಸಗುತ್ತರವರು ಹೀಗೆ ಹೇಳಿದರು: ಈಗ ಹೀಗಾದರೆ ಹೇಗೆ ಪೂಜ್ಯ ರೋಹಣ, ಬುದ್ಧ ಶಾಸನವು ಅಪಾಯದಲ್ಲಿರುವಾಗ ನಿಮಗೆ ಸಂಘಕ್ಕೆ ಸಹಾಯ ಮಾಡಲು ಕಣ್ಣಿಲ್ಲವೆ?
                ಇದು ಅಲಕ್ಷದಿಂದಾಯಿತು ಪೂಜ್ಯರೇ? ಎಂದರು ರೋಹಣರು.
                ಹಾಗಾದರೇ ಪೂಜ್ಯ ರೋಹಣ ಪ್ರಾಯಃಚಿತ್ತ ಮಾಡಿಕೊಳ್ಳಿ.
                ಹಾಗಾದರೆ ನಾನು ಏನು ಮಾಡಲಿ ಭಂತೆ.
                ಹಿಮಾಲಯ ಪ್ರಾಂತ್ಯದಲ್ಲಿ ಪರ್ವತದ ಬುಡದಲ್ಲಿ ಕಜಂಗಲ ಎಂಬ ಬ್ರಾಹ್ಮಣರ ಗ್ರಾಮವಿದೆ ಮತ್ತು ಅಲ್ಲಿ ಸೋಣೋತ್ತರ ಎಂಬ ಬ್ರಾಹ್ಮಣ ವಾಸಿಸುತ್ತಾರೆ, ಆತನಿಗೆ ನಾಗಸೇನ ಎಂಬ ಬಾಲಕ ಜನಿಸುತ್ತಾನೆ. ಆ ಮನೆಗೆ 7 ವರ್ಷ ಮತ್ತು 10 ತಿಂಗಳು ಆಹಾರ ಭಿಕ್ಷೆಗೆ ಹೊರಡಿ. ನಂತರ ಆ ಬಾಲಕನನ್ನು ಪ್ರಾಪಂಚಿಕತೆಯಿಂದ ಬಿಡಿಸಿ ಸಂಘಕ್ಕೆ ಸೇರಿಸಿ, ಪಬಜ್ಜಿತನನ್ನಾಗಿ ಮಾಡಿ. ಯಾವಾಗ ಆತನು ಪ್ರಾಪಂಚಿಕತೆಯನ್ನು ವಜರ್ಿಸುತ್ತಾನೆಯೋ ಆಗಲೇ ನಿಮ್ಮ ತಪ್ಪಿಗೆ ನಿಮಗೆ ಪ್ರಾಯಶ್ಚಿತವಾಗುತ್ತದೆ.
                ನೀವು ಹೇಳಿದಂತೆಯೇ ಆಗಲಿ ಭಂತೆ ಎಂದು ನುಡಿದು ಪೂಜ್ಯ ರೋಹಣರು ಅಲ್ಲಿಂದ ಹೊರಟರು.
7. ಮಹಾಸೇನರವರ ಪ್ರಾದುಬರ್ಾವ
                ಮಹಾಸೇನ ದೇವರವರು ದೇವಲೋಕದಿಂದ ಕಳಚಿ ಮಾನವ ಲೋಕದಲ್ಲಿ ಸೋಣೋತ್ತರ ಬ್ರಾಹ್ಮಣನ ಮಡದಿಯ ಗರ್ಭದಲ್ಲಿ ಪ್ರವೇಶಿಸಿದರು. ಆಗ ಮಹತ್ತರ ಸಮಯದಲ್ಲಿ ಮೂರು ಅದ್ಭುತ ಘಟನೆಗಳು ಸಂಭವಿಸಿತು. ಶಸ್ತ್ರಗಳು ಮತ್ತು ಅಸ್ತ್ರಗಳು ಹೊಳೆಯಲಾರಂಭಿಸಿದವು, ಎಳೆಯ ಧಾನ್ಯಗಳೆಲ್ಲ ಆ ಕ್ಷಣದಲ್ಲೇ ಬಲಿತವು ಮತ್ತು ಪ್ರವಾಹ ಸಮಯದಂತಹ ಭಾರಿ ಮಳೆಯು ಬಿದ್ದಿತು. ಮಹಾಸೇನರವರ ಗರ್ಭ ಪ್ರವೇಶದಿಂದ 7 ವರ್ಷ ಮತ್ತು 10 ತಿಂಗಳು ಪೂಜ್ಯ ರೋಹಣರವರು ಸೋಣೋತ್ತರನ ಮನೆಯಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ ಅವರಿಗೆ ಒಂದುದಿನ ಸಹಾ ಚಮಚದಷ್ಟು ಅನ್ನವಾಗಲಿ ಅಥವಾ ಸೌಟಿನಷ್ಟು ಗಂಜಿಯಾಗಲಿ ಅಥವಾ ಆಹ್ವಾನವಾಗಲಿ ಅಥವಾ ವಂದನೆಯಾಗಲಿ, ಅಥವಾ ನಮಸ್ಕಾರವಾಗಲಿ ದೊರೆಯಲಿಲ್ಲ. ಬದಲಾಗಿ ನಿಂದೆ, ತಿರಸ್ಕಾರಗಳೇ ಲಭಿಸಿದವು. ಆದರೂ ಅವರು ಒಳ್ಳೆಯದಾಗಲಿ ಎಂದು ಹಾರೈಸುತ್ತಾ ಮುಂದಿನ ಮನೆಗೆ ಹೊರಡುತ್ತಿದ್ದರು.
                ಆದರೆ ಈಗ ನಿಗಧಿಯಾಗಿದ್ದ ಕಾಲವು ದಾಟಿತ್ತು. ಒಂದುದಿನ ಬ್ರಾಹ್ಮಣ ಹೊಲದಿಂದ ಮನೆ ಕಡೆಗೆ ಹೊರಡುತ್ತಿದ್ದನು. ದಾರಿಯಲ್ಲಿ ಸ್ಥವಿರರನ್ನು (ರೋಹಣ) ಕಂಡು ಈ ರೀತಿ ಪ್ರಶ್ನಿಸಿದರು.
                ಓ ಪಬ್ಬಜಿತ, ನಮ್ಮ ಮನೆ ಕಡೆಯಿಂದ ಬರುತ್ತಿರುವೆಯಾ.
                ಹೌದು ಬ್ರಾಹ್ಮಣ.
                ಆದರೆ ನೀನು ಅಲ್ಲಿ ಏನಾದರೂ ಪಡೆದೆಯೊ.
                ಹೌದು.
                ಅದು ಆಲಿಸಿ ಬ್ರಾಹ್ಮಣನಿಗೆ ಅಸಂತೋಷವಾಯಿತು. ಮನೆಗೆ ನೇರವಾಗಿ ಹೋಗಿ ಪತ್ನಿಗೆ ಕೇಳಿದನು ನೀನು ಆ ಪಬ್ಬಜಿತನಿಗೆ ಏನಾದರೂ ನೀಡಿದೆಯಾ?
                ನಾವು ಆತನಿಗೆ ಏನನ್ನೂ ನೀಡಿಲ್ಲ ಎಂದರು.
                ನಂತರ ಬ್ರಾಹ್ಮಣನು ಮುಂದಿನದಿನ ಮನೆಯ ಬಾಗಿಲಬಳಿ ಕುಳಿತು ಈ ರೀತಿ ಯೋಚಿಸಿದನು ಆ ಪಬ್ಬಜಿತ ಸುಳ್ಳು ಹೇಳಿದ್ದರಿಂದ ಆತನಿಗೆ ಇಂದು ನಾಚಿಕೆಯುಂಟು ಮಾಡುತ್ತೇನೆ. ಅದೇ ವೇಳೆಯಲ್ಲಿ ರೋಹಣಥೇರರು ಮನೆಯ ಬಳಿ ಬಂದಾಗ ಆ ಬ್ರಾಹ್ಮಣರು ಹೀಗೆ ಹೇಳಿದರು ನೆನ್ನೆ ನೀವು ನನ್ನ ಮನೆಯಲ್ಲಿ ಏನೂ ಪಡೆದೆನೆಂದು ಹೇಳಿ ಏನೂ ಪಡೆದಿಲ್ಲ, ನಿಮ್ಮಂಥವರಿಗೆ ಸುಳ್ಳು ಶೋಭೆ ನೀಡುತ್ತದೆಯೇ?
                ಆಗ ಥೇರರವರು ಹೀಗೆ ಉತ್ತರಿಸಿದರು ಬ್ರಾಹ್ಮಣ 7 ವರ್ಷ 10 ತಿಂಗಳು ನನಗೆ ನಿನ್ನೆಯಷ್ಟು ಸೌಜನ್ಯ ಸಿಕ್ಕಿರಲಿಲ್ಲ. ಆದ್ದರಿಂದ ನೆನ್ನೆ ನನಗೆ ಸೌಜನ್ಯ ಸಿಕ್ಕಿದ್ದರಿಂದ ನಾನು ಹಾಗೆ ಹೇಳಿದೆನು.
                ಆಗ ಬ್ರಾಹ್ಮಣ ಹೀಗೆ ಚಿಂತಿಸಿದನು ಓಹ್, ಈ ಮನುಷ್ಯ ಕೇವಲ ಸ್ವಲ್ಪ ಸೌಜನ್ಯಕ್ಕೆ ದಾನದಂತೆ ಸಂಭ್ರಮಿಸಿ ಕೃತಜ್ಞತೆ ಸಲ್ಲಿಸುತ್ತಿದ್ದಾನೆ. ಈತನಿಗೆ ನಿಜಕ್ಕೂ ದಾನ, ಆತಿಥ್ಯ ಸಿಕ್ಕರೆ ಹೇಗೆ? ಎಂದು ಚಿಂತಿಸಿದನು. ನಂತರ ಅವರಿಗೆ ಪ್ರತಿದಿನ ದಾನ ಮಾಡುವದೆಂದು ನಿರ್ಧರಿಸಿದರು. ರೋಹಣರವರಿಗಾಗಿ ಅನ್ನ-ಸಾರು ಇತ್ಯಾದಿಗಳಿಂದ ದಾನ ನೀಡಿ ಈ ರೀತಿ ಹೇಳಿದರು ಪ್ರತಿನಿತ್ಯವೂ ಇಂದಿನಿಂದ ನೀವು ಇದೇರೀತಿ ಅತಿಥ್ಯ ಪಡೆಯುವಿರಿ. ಹಾಗೆಯೇ ಅವರಿಗಾಗಿ ಪ್ರತಿನಿತ್ಯ ಪ್ರತೀಕ್ಷೆ ಮಾಡಿ ಗಮನಿಸತೊಡಗಿದರು. ಅವರ ಇಂದ್ರೀಯಗಳು ಹೇಗೆ ಶಾಂತಗೊಂಡಿವೆ ಎಂದು ಅರಿತು ಅವರಲ್ಲಿ ಮತ್ತಷ್ಟು ಪ್ರಸನ್ನರಾದರು. ಪ್ರತಿನಿತ್ಯವೂ ಬರಲು ಆಹ್ವಾನಿಸಿದರು. ರೋಹಣ ಥೇರರು ಮೌನದಿಂದ ಒಪ್ಪಿಗೆ ಸೂಚಿಸಿದರು. ಪ್ರತಿನಿತ್ಯ ಆಹಾರ ಸೇವನೆಯ ನಂತರ ಅವರು ಹೊರಡುವ ಮುನ್ನ ಬುದ್ಧರ ಕೆಲವು ಗಾಥೆಗಳನ್ನು ಅಥವಾ ಸಣ್ಣ ಸುತ್ತಗಳನ್ನು ತಿಳಿಸಿ ಹೋಗುತ್ತಿದ್ದರು. ಈ ರೀತಿಯಲ್ಲಿ ದಾನದ ಅನುಮೋದನೆ ಮಾಡುತ್ತಿದ್ದರು.
                ಈಗ ಬ್ರಾಹ್ಮಣ ಪತ್ನಿಗೆ 10 ತಿಂಗಳು ತುಂಬಿ ಪುತ್ರರತ್ನನಿಗೆ ಜನ್ಮ ನೀಡಿದಳು. ಈ ಪುತ್ರರತ್ನನಿಗೆ ನಾಗಸೇನ ಎಂದು ಹೆಸರಿಟ್ಟರು.
8. ನಾಗಸೇನಾರವರ ಶಿಕ್ಷಣ
                ಆ ಬಾಲಕನು ದಿನಕಳೆದಂತೆ ಬೆಳೆಯುತ್ತ ಹೋದನು. ಆತನಿಗೆ 7 ವರ್ಷ ವಯಸ್ಸಾಯಿತು. ಆಗ ತಂದೆಯು ಮಗುವಿಗೆ ಮಗು ನಾಗಸೇನ ನೀನು ನಮ್ಮ ಪೂವರ್ಿಕರಾದ ಬ್ರಾಹ್ಮಣರ ಶಿಕ್ಷಣವನ್ನು ಪಡೆಯುವೆಯಾ?
                ಹಾಗೆಂದರೇನು ತಂದೆಯೇ?
                ಅದೇ ಮೂರು ವೇದಗಳು, ಅವನ್ನೇ ಶಿಕ್ಷಣ ಎನ್ನುವೆವು. ಬೇರೆ ಜ್ಞಾನಗಳು ಕೇವಲ ಕಲೆಗಳಾಗಿವೆ ಮಗು.
                ಹಾಗಾದರೆ ನಾನು ಅವನ್ನು ಕಲಿಯಲು ಇಚ್ಛಿಸುತ್ತೇನೆ ತಂದೆಯೆ ಎಂದನು. ನಂತರ ಸೋಣೋತ್ತರ ಬ್ರಾಹ್ಮಣನು ಬ್ರಾಹ್ಮಣ ಗುರುವನ್ನು ಹುಡುಕಿ ಆತನನ್ನು ಮನೆಗೆ ಕರೆತಂದು ಮೆತ್ತನೆಯ ಪೀಠವನ್ನು ಹಾಕಿ ಕುಳ್ಳಿರಿಸಿ ಸಾವಿರ ವರಹಗಳನ್ನು ನೀಡಿ ಓ ಬ್ರಾಹ್ಮಣ, ನನ್ನ ಮಗನಿಗೆ ಪವಿತ್ರವಾದ ಮಂತ್ರಗಳನ್ನು ಕಂಠಸ್ಥಗೊಳಿಸು.
                ನಂತರ ಗುರುವು ಆ ಬಾಲಕನಿಗೆ ಮಂತ್ರಗಳನ್ನು ತಿಳಿಸಿಕೊಟ್ಟನು. ಆತನಿಗೆ ಕಂಠಸ್ಥ ಮಾಡಲು ತಿಳಿಸಿದನು. ನಂತರ ಬಾಲಕ ನಾಗಸೇನ ಒಂದರ ನಂತರ ಇನ್ನೊಂದರಂತೆ ಇಡೀ ತ್ರಿವೇದಗಳನ್ನೇ ಅಕ್ಷರ ಮತ್ತು ಅರ್ಥಸಹಿತ ಕಂಠಸ್ಥ ಮಾಡಿಕೊಂಡನು. ಆತನು ಅವುಗಳನ್ನು ವಗರ್ಿಕರಿಸಿ, ಅವುಗಳ ಸಾರವನ್ನೆಲ್ಲಾ ಅರ್ಥವನ್ನೆಲ್ಲಾ ತಿಳಿದನು. ಆತನಿಗೆ ಏಕಕಾಲದಲ್ಲಿ ವೇದಗಳ ಸಾರಯುತ ಜ್ಞಾನವಷ್ಟೇ ಅಲ್ಲ, ನಿಘಂಟು ಜ್ಞಾನ, ಛಂದಃಶಾಸ್ತ್ರ, ವ್ಯಾಕರಣ, ಪುರಾಣ, ಭಾಷಾಶಾಸ್ತ್ರಜ್ಞತೆ, ಧಮ್ಮಸೂಕ್ಷ್ಮ, ವಿಮರ್ಶತೆ, ಲೋಕಾಯುತ ಜ್ಞಾನ ಮತ್ತು ಮಹಾಪುರುಷ ಲಕ್ಷಣ ಜ್ಞಾನವನ್ನೆಲ್ಲಾ ಕಲಿಸಿದನು.
                ನಂತರ ನಾಗಾಸೇನ ತಂದೆಯೊಡನೆ ಹೀಗೆಂದನು ತಂದೆಯೇ ನಾನು ಬ್ರಾಹ್ಮಣರ ವಂಶದಲ್ಲಿ ಕಲಿಯಬೇಕಾಗಿರುವುದು ಇಷ್ಟೆಯೇ ಅಥವಾ ಇನ್ನೂ ಏನಾದರೂ ಇದೆಯೆ?
                ಇನ್ನು ಏನೂ ಇಲ್ಲ ಪ್ರಿಯ ನಾಗಸೇನ, ಅಷ್ಟೆ ಎಂದರು. ನಂತರ ನಾಗಾಸೇನ ತನ್ನ ಗುರುವಿನ ಬಳಿ ಕೊನೆಯದಾಗಿ ಎಲ್ಲಾ ಶಿಕ್ಷಣವನ್ನು ತಿಳಿಸಿ ಗೌರವ ಸೂಚಿಸಿ, ಮನೆಯ ಹೊರಗೆ ನಡೆದನು. ನಂತರ ತನ್ನ ಪೂರ್ವಜನ್ಮ ಅಭ್ಯಾಸದಿಂದಾಗಿ ಶ್ರದ್ಧೆಯುಕ್ಕಿ ಏಕಾಂತಸ್ಥಳ ಆಯ್ಕೆ ಮಾಡಿಕೊಂಡು ಆತನು ಧ್ಯಾನಿಸಲಾರಂಭಿಸಿದನು. ನಂತರ ಆತನು ತನ್ನ ಶಿಕ್ಷಣವನ್ನು ಪುನರ್ ಅವಲೋಕಿಸಿದನು. ಆತನ ವಿಮಶರ್ಾ ಜ್ಞಾನದಿಂದಾಗಿ ಆತನಿಗೆ ತನ್ನ ಇಡೀ ಶಿಕ್ಷಣ ಆದಿಯಿಂದ ಅಂತ್ಯದವರೆಗೆ ಯಾವುದೇ ರೀತಿಯಲ್ಲಿ ಮೌಲ್ಯಯುತವಾಗಿ ಕಾಣಲಿಲ್ಲ. ಆತ ವಿಷಾದದಿಂದ ಹೀಗೆ ತನ್ನಲ್ಲಿ ತಾನೇ ಹೇಳಿಕೊಂಡನು. ಈ ವೇದಗಳು ಹಾಸ್ಯಮಯವಾಗಿ, ಶೂನ್ಯವಾಗಿವೆ. ಸಿಪ್ಪೆಯಂತೆ, ನಿಸ್ಸಾರ ಇವುಗಳಲ್ಲಿ ಯಾವುದು ಸತ್ಯವಾಗಿಲ್ಲ, ಮೌಲ್ಯವಾಗಿಲ್ಲ ಅಥವಾ ಪರಮಾರ್ಥ ಸತ್ಯವು ಕಾಣುತ್ತಿಲ್ಲ.
9. ಆಯುಷ್ಮಂತ ರೋಹಣ ಮತ್ತು ನಾಗಸೇನರವರ ಸಮಾಗಮ
                ಅದೇ ವೇಳೆಯಲ್ಲಿ ಪೂಜ್ಯ ರೋಹಣರವರು ವತ್ತನಿಯ ವಿಹಾರದಲ್ಲಿ ಧ್ಯಾನದಲ್ಲಿ ಕುಳಿತಿದ್ದರು. ತಕ್ಷಣ ಅವರಿಗೆ ನಾಗಸೇನರವರ ಮನೋ ಯೋಚನೆಗಳು ಅರಿವಿಗೆ ಬಂದಿತು. ತಕ್ಷಣ ಅವರು ಚೀವರ ಹಾಕಿಕೊಂಡು ಪಿಂಡಪಾತ್ರೆ ಹಿಡಿದುಕೊಂಡು ಅಲ್ಲಿಂದ ಅದೃಷ್ಯರಾಗಿ ಕಜಂಗಲ ಬ್ರಾಹ್ಮಣ ಗ್ರಾಮದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ ಬಾಲಕ ನಾಗಸೇನರವರು ಬಾಗಿಲ ಬಳಿಯಲ್ಲಿ ನಿಂತಿದ್ದರು. ರೋಹಣರವರನ್ನು ಕಂಡು ಅತನಲ್ಲಿ ಆನಂದ ಉಲ್ಲಾಸ ಉಕ್ಕಿತು. ಹೃದಯದಲ್ಲಿ ಭರವಸೆ ಮೂಡಿ, ಈತನಲ್ಲಿ ಏನಾದರೂ ಪರಮಾರ್ಥ ಜ್ಞಾನ ಸಿಗಬಲ್ಲದೆ ಎಂದು ಅನಿಸಿತು. ಆಗ ಅವರು ಥೇರರವರಿಗೆ ಹೀಗೆ ಪ್ರಶ್ನಿಸಿದರು ಯಾರು ನೀವು? ನೀವೇಕೆ ತಲೆ ಬೋಳಿಸಿರುವಿರಿ? ಮತ್ತು ಕಾಷಾಯ ವಸ್ತ್ರಗಳನ್ನು ಏಕೆ ತೊಟ್ಟಿರುವಿರಿ?
                ನನಗೆ ಪಬ್ಬಜಿತನೆಂದು ಕರೆಯುವರು ಮಗು.
                ನಿಮಗೆ ಏಕೆ ಪಬ್ಬಜಿತನೆಂದು ಕರೆಯುವರು?
                ಏಕೆಂದರೆ ಯಾರು ಲೋಕದಿಂದ ವಿಮುಖರೋ, ಪಾಪದಿಂದ ವಿಮುಕ್ತರೋ, ಅಂತಹವರಾದ ನಮಗೆ ಪಬಜ್ಜಿತ ಎನ್ನುವರು.
                ಪೂಜ್ಯರೆ, ಪರರಂತೆ ನಿಮಗೇಕೆ ಕೇಶವಿಲ್ಲ?
                ಪಬ್ಬಜ್ಜಿತರು ತಮ್ಮ ಕೇಶವನ್ನು ಮತ್ತು ಗಡ್ಡವನ್ನು ಏತಕ್ಕೆ ಬೋಳಿಸುತ್ತಾರೆಂದರೆ 16 ಬಗೆಯ ದೋಷಯುಕ್ತ ತಡೆಗಳನ್ನು ನಿವಾರಿಸುವುದಕ್ಕಾಗಿ. ಅವು ನಿವಾರಣೆಯಾದಾಗಲೇ ಶ್ರೇಷ್ಠ ಜೀವನ ಸುಖವಾಗಿರುತ್ತದೆ. ಯಾವುವು ಹದಿನಾರು ತಡೆಗಳು; ಅವೆಂದರೆ: ಶೃಂಗಾರಿಸುವ ತಡೆ, ಆಭರಣೀಕರಿಸುವ ತಡೆ, ಹಾಗೆಯೇ ಕೂದಲಿಗೆ ಎಣ್ಣೆಯನ್ನು ಹಾಕುವಿಕೆ, ಉಜ್ಜಿ ತೊಳೆಯುವಿಕೆ, ಹಾರವನ್ನು ಅಥವಾ ಹೂಗಳನ್ನು ಹಾಕಿಕೊಳ್ಳುವಿಕೆ, ಸುಂಗಂಧ ಧ್ರವ್ಯಗಳನ್ನು ಹಾಗು ತೈಲವನ್ನು ಲೇಪಿಸುವಿಕೆ, ಅಳಲೆಕಾಯಿಯ ಬೀಜಗಳ ರಸ ಲೇಪಿಸುವಿಕೆ, ಬಣ್ಣಗಳನ್ನು ಲೇಪಿಸುವಿಕೆ, ಪಟ್ಟಿ ಕಟ್ಟುವಿಕೆ, ಬಾಚುವಿಕೆ, ಕ್ಷೌರಿಕನನ್ನು ಕರೆಸುವಿಕೆ, ಗುಂಗುರು ಕೂದಲಿನ ಗೋಜಲು ಬಿಡಿಸುವಿಕೆ, ಕ್ರಿಮಿಗಳನ್ನು (ಹೇನು) ತೆಗೆಯುವಿಕೆ, ಕೂದಲು ಉದುರಿದಾಗ ಚಿಂತಾಕ್ರಾಂತವಾಗುವಿಕೆ, ಬಳಲುವಿಕೆ, ಪ್ರಲಾಪಿಸುವಿಕೆ, ಮೂಛರ್ೆಗೊಂಡು ಬೀಳುವಿಕೆ, ಬೆಳ್ಳಗಾದರೆ ದುಃಖಿಸುವಿಕೆ. ಈ ರೀತಿಯ ತಡೆಗಳೆಲ್ಲಾ ಕೇಶವಿಲ್ಲದೆ ಹೋದಾಗ ನಿವಾರಣೆಯಾಗುತ್ತದೆ. ಈ ತಡೆಗಳು ಇದಾಗ ಪ್ರಜ್ಞಾವು ಇರುವುದಿಲ್ಲ. ಅವರು ಶ್ರೇಷ್ಠಜ್ಞಾನ ಮತ್ತು ಶ್ರೇಷ್ಠ ಶಿಕ್ಷಣ ಮರೆಯುವ ಸಾಧ್ಯತೆ ಇರುತ್ತದೆ.
                ಪೂಜ್ಯರೆ, ನಿಮ್ಮ ವಸ್ತ್ರಗಳು ಸಹಾ ಇತರರಂತೆ ಏಕಿಲ್ಲ?
                ನನ್ನ ಮಗು ಸುಂದರವಾದ ವಸ್ತ್ರಗಳು ಪ್ರಾಪಂಚಿಕರು ಬಳಸುತ್ತಾರೆ. ಅವರು ಐದು ಬಗೆಯ ತೀವ್ರ ಬಯಕೆಗಳನ್ನು ಬಿಡದೆ ಅಂಟಿರುತ್ತಾರೆ (ಪಂಚೇಂದ್ರಿಯ ಬಯಕೆ) ಆದರೆ. ಕಾಷಾಯ ವಸ್ತ್ರಧಾರಿಗೆ ಅಂತಹದೇನು ಕಾಡುವದಿಲ್ಲ. ಆದ್ದರಿಂದಲೇ ನನ್ನ ವಸ್ತ್ರಗಳು ಅನ್ಯರಂತೆ ಇಲ್ಲ.
                ಪೂಜ್ಯರೆ, ನಿಮ್ಮಲ್ಲಿ ನಿಜವಾದ ಜ್ಞಾನವಿದೆಯೆ?
                ಖಂಡಿತವಾಗಿ ನಾನು ಜ್ಞಾನವನ್ನು ಬಲ್ಲೆನು ಮತ್ತು ಲೋಕದಲ್ಲಿ ಶ್ರೇಷ್ಠ ಮಂತ್ರ ಯಾವುದಿದೆಯೋ ಅದನ್ನು ಬಲ್ಲೆನು.
                ಪೂಜ್ಯರೆ, ನನಗೆ ಅದನ್ನು ಕಲಿಸುವಿರಾ?
                ಖಂಡಿತವಾಗಿ.
                ಹಾಗಾದರೆ ಬೋಧಿಸಿ.
                ಈಗ ಸಕಾಲವಲ್ಲ, ನಾವು ಆಹಾರಕ್ಕಾಗಿ ಗ್ರಾಮಕ್ಕೆ ಬಂದಿರುವೆವು.
                ಆಗ ಬಾಲಕ ನಾಗಸೇನ ಅವರ ಪಿಂಡಪಾತ್ರೆ ತೆಗೆದುಕೊಂಡು ಮನೆಯೊಳಗೆ ಹೋಗಿ ತನ್ನ ಕೈಗಳಿಂದಲೇ ಎಲ್ಲಾ ಬಗೆಯ ಆಹಾರವನ್ನು ಹಾಕಿ ಅವರಿಗೆ ಔತಣವಿಟ್ಟನು. ಅವರು ಆಹಾರವನ್ನು ಮುಗಿಸಿದ ನಂತರ ಮತ್ತೆ ಕೇಳಿದನು.
                ಪೂಜ್ಯರೇ, ಈಗ ನನಗೆ ಮಂತ್ರವನ್ನು ಕಲಿಸುವಿರಾ?
                ಯಾವಾಗ ನೀನು ತಡೆಗಳಿಂದ ಮುಕ್ತನಾಗಿ ತಂದೆ-ತಾಯಿಗಳ ಒಪ್ಪಿಗೆ ಪಡೆದು ನನ್ನಂತೆ ಪಬ್ಬಜಿತನ ವೇಷವನ್ನು ತೊಟ್ಟು ಬರುವೆಯೊ ಆಗ ನಿನಗೆ ನಾನು ಕಲಿಸುವೆ.
                ಹೀಗಾಗಿ ನಾಗಸೇನರು ತಮ್ಮ ತಂದೆ ತಾಯಿಗಳ ಬಳಿ ಹೊರಟು ಹೀಗೆ ಹೇಳಿದರು ಪಬ್ಬಜಿತನು ತಾನು ಲೋಕದಲ್ಲೇ ಶ್ರೇಷ್ಠವಾದ ಮಂತ್ರವನ್ನು ಬಲ್ಲೆ ಎಂದು ಹೇಳುತ್ತಾನೆ. ಆದರೆ ಪಬ್ಬಜಿತರಾಗಿಲ್ಲದ ಸಂಘವನ್ನು ಸೇರದ ಯಾರಿಗೂ ತನ್ನ ಶಿಷ್ಯನನ್ನಾಗಿ ಮಾಡಿಕೊಳ್ಳುವದಿಲ್ಲ ಹಾಗು ಕಲಿಸುವುದಿಲ್ಲ ಎನ್ನುತ್ತಿದ್ದಾರೆ.
                ಆಗ ತಂದೆ-ತಾಯಿಗಳು ಸಹ ಒಪ್ಪಿಗೆ ಸೂಚಿಸುತ್ತಾರೆ. ಅವರು ಈ ರೀತಿ ಯೋಚಿಸುತ್ತಾರೆ ಗೃಹತ್ಯಾಗ ಮಾಡಿಯಾದರೂ ಆ ಮಂತ್ರವನ್ನು ಕಲಿಯಲಿ ಮತ್ತು ಕಲಿತ ನಂತರ ಮತ್ತೆ ಗೃಹಸ್ಥನಾಗುತ್ತಾನೆ.
10. ನಾಗಸೇನರವರ ಪಬ್ಬಜ್ಜಾ
                ಆಗ ರೋಹಣರವರು ನಾಗಸೇನರವರನ್ನು ವತ್ತನಿಯ ವಿಹಾರಕ್ಕೆ, ವಿಜಂಬವತ್ತುನಲ್ಲಿಗೆ ಕರೆದೊಯ್ದರು ಮತ್ತು ಅಲ್ಲಿ ರಾತ್ರಿ ಕಳೆದು, ಪರ್ವತದ ಇಳಿಜಾರಿಗೆ ಕರೆದೊಯ್ದರು. ಅಲ್ಲಿ ಅಸಂಖ್ಯ ಅರಹಂತರಿದ್ದರು. ಅಲ್ಲಿ ನಾಗಸೇನರಿಗೆ ಪಬ್ಬಜ್ಜಾ ನೀಡಿದರು. ನಂತರ ಅವರು ಸಂಘಕ್ಕೆ ಸೇರಿದರು. ಆಗ ನಾಗಸೇನರವರು ಪೂಜ್ಯ ರೋಹಣರಿಗೆ ಹೀಗೆ ಹೇಳಿದರು ನಾನು ನಿಮ್ಮಂತೆ ವಸ್ತ್ರಗಳನ್ನು ತೊಟ್ಟಿದ್ದೇನೆ, ಈಗ ನನಗೆ ಮಂತ್ರ ಕಲಿಸಿ.
                ಆಗ ಪೂಜ್ಯ ರೋಹಣರವರು ತಮ್ಮಲ್ಲೇ ಈ ರೀತಿ ಚಿಂತಿಸಿದರು ನಾನು ಈತನಿಗೆ ಮೊದಲು ಯಾವುದನ್ನು ಬೋಧಿಸಲಿ, ಸುತ್ತಗಳನ್ನೋ ಅಥವಾ ಅಭಿಧಮ್ಮವನ್ನೋ? ಆಗ ಅವರಿಗೆ ನಾಗಸೇನ ಅತ್ಯಂತ ಪ್ರಜ್ಞಾಶಾಲಿ, ಆತನು ಅಭಿಧಮ್ಮವನ್ನು ಸುಲಭವಾಗಿ ಅರಿಯಬಲ್ಲ ಎಂದು ಅರಿತು ಆತನಿಗೆ ಅಭಿಧಮ್ಮದ ಮೊದಲ ಪಾಠ ತಿಳಿಸಿದರು.
                ಪೂಜ್ಯ ನಾಗಸೇನರವರು ಅದನ್ನು ಆಲಿಸಿ ಒಮ್ಮೆ ನೆನಪಿಸಿಕೊಂಡು ಇಡೀ ಅಭಿಧಮ್ಮವನ್ನು ಹೃದಯಾಂಗಮವಾಗಿ ಅಥರ್ೈಸಿ ನೆನಪಿನಲ್ಲಿಟ್ಟುಕೊಂಡರು. ಅಂದರೆ ಧಮ್ಮಾಸಂಗನಿ, ಜೊತೆಗೆ ಅದರ ಮೂಲ ವಗರ್ಿಕರಣಗಳಾದ ಕುಶಲ, ಅಕುಶಲ ಮತ್ತು ಅಬ್ಬಾಕತಾ ಧಮ್ಮವನ್ನು, ನಂತರದ ಉಪವಗರ್ಿಕರಣದಲ್ಲಿ ಜೋಡಿ ಮತ್ತು ತ್ರಿವಳಿಗಳಾಗಿ ವಿಭಂಗ ಮತ್ತು ಅವರ ಹದಿನೆಂಟು ಅಧ್ಯಾಯಗಳು ಪ್ರಾರಂಭದಲ್ಲಿ ದಾತುಕಥಾ ಅಂದರೆ ಧಾತುಗಳ ಬಗ್ಗೆ ಚಚರ್ೆ ಅಂದರೆ ಜೀವಿಗಳಲ್ಲಿರುವ ಖಂಧ, ಆಯಾತನ, ಧಾತುಗಳ ವಿವರಣೆ ಮತ್ತು ಅದರ ಹದಿನಾಲ್ಕು ಅಧ್ಯಾಯಗಳು ಅದರಲ್ಲಿ ಪ್ರಾರಂಭವಾಗುವ ಪುಗ್ಗಲಪನ್ಯತ್ತಿ ಅದರಲ್ಲಿ ವ್ಯಕ್ತಿಗಳ ವಿಶ್ಲೇಷಣೆಗಳನ್ನು ಅದರಲ್ಲಿ ಆರು ವಿಭಾಗಗಳಾಗಿ ಧಾತುಗಳ ವಿಮೋಚನೆಗಳನ್ನು, ಇಂದ್ರೀಯಗಳ ವಿಮೋಚನೆಯನ್ನು ಮತ್ತು ಅವರ ಗುಣಲಕ್ಷಣಗಳು ಇತ್ಯಾದಿ ನಂತರ ಬರುವಂತಹ ಕಥಾವಸ್ತು ಮತ್ತು ಅದರ ಸಾವಿರ ಭಾಗಗಳು, ಐದುನೂರು ಸಾಂಪ್ರದಾಯಿಕ ಸುತ್ತಗಳು ಮತ್ತು ಐದುನೂರು ವಿರೋಧಾತ್ಮಕ ಸುತ್ತಗಳು, ನಂತರ ಯಮಕದಲ್ಲಿ ಹತ್ತು ವಿಭಾಗಗಳಾಗಿ ಪೂರಕ ಪ್ರಮೇಯಗಳ ಆದಿಯಾಗಿ, ಧಾತುಗಳಾಗಿ ಮತ್ತು ಪಟ್ಠಾನವು ಅದರ 24 ಅಧ್ಯಾಯಗಳು, ಅದರಲ್ಲಿ ಬರುವಂತಹ ಕಾರಣಗಳು, ಭಾವನೆಗಳ ಕಾರಣಗಳು ಮತ್ತು ಇತ್ಯಾದಿಗಳನ್ನೆಲ್ಲವನ್ನು ತಿಳಿಸಿದರು.
                ನಂತರ ನಾಗಸೇನರು ಅಸಂಖ್ಯಾ ಅರಹಂತರ ಸಮೂಹಕ್ಕೆ ತೆರಳಿ ಹೀಗೆ ಹೇಳಿದರು ನಾನು ಸಮಗ್ರ ಅಭಿಧಮ್ಮ ಪಿಟಕವನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಅದು ಸಂಕ್ಷಿಪ್ತವಲ್ಲದೆ ಮೂರು ವಿಭಾಗವಾಗಿ ಕುಶಲ, ಅಕುಶಲ ಮತ್ತು ಅಭ್ಯಾಕತಾವಾಗಿ ವಗರ್ಿಕರಿಸಿ ಹೇಳುತ್ತೇನೆ. ನಂತರ ಅವರು ಆತನಿಗೆ ಅನುಮತಿ ನೀಡಿದರು. ಕೇವಲ ಏಳು ತಿಂಗಳಲ್ಲಿ ಪೂಜ್ಯ ನಾಗಸೇನರವರು ಅಭಿಧಮ್ಮದ ಏಳು ಕೃತಿಗಳನ್ನು ಅಭ್ಯಸಿಸಿದರು ಮತ್ತು ಜೀಣರ್ಿಸಿಕೊಂಡರು. ಆಗ ಅವರು ಆ ಮಹಾನ್ ಕಾರ್ಯಕ್ಕೆ ಸಾಕ್ಷಿಯಾಗಿ ಪೃಥ್ವಿಯು ಕಂಪಿಸಿತು. ದೇವತೆಗಳೆಲ್ಲಾ ಅಭಿನಂದನೆ ಮಾಡಿದರು. ಬ್ರಹ್ಮರುಗಳೆಲ್ಲಾ ಕೈಜೋಡಿಸಿದರು. ಶ್ರೀಗಂಧದ ಹಾಗು ಮಂದಾರದ ಪುಷ್ಪಗಳ ಹೊಳೆಯು ಮೇಲಿನಿಂದ ಸುರಿಯಿತು. ಅಸಂಖ್ಯಾತ ಅರಹಂತರು ಆ ಪರ್ವತದ ಇಳಿಜಾರಿನಲ್ಲಿ ನಾಗಸೇನರವರ ಸಾಮಥ್ರ್ಯ ಒಪ್ಪಿಕೊಂಡರು. ನಂತರ ಇಪ್ಪತ್ತನೆಯ ವಯಸ್ಸಿನಲ್ಲಿ ಅವರು ಸಂಘದ ಹಿರಿಯತನ ಪಡೆದರು.
11. ನಾಗಾಸೇನರವರ ಪ್ರಾಯಶ್ಚಿತ್ತ
                ಅವರು ಉಪಸಂಪದ ಪಡೆದ ಮಾರನೆಯ ದಿನದಂದು ನಾಗಸೇನರವರು ಚೀವರವನ್ನು ಧರಿಸಿ, ಪಿಂಡಪಾತ್ರೆಯನ್ನು ಹಿಡಿದುಕೊಂಡು ತಮ್ಮ ಗುರುಗಳೊಂದಿಗೆ ಹಳ್ಳಿಗೆ ಆಹಾರಕ್ಕಾಗಿ ಹೊರಟರು. ಆಗ ಅವರು ಈ ರೀತಿ ಯೋಚಿಸಲಾರಂಭಿಸಿದರು ನನ್ನ ಉಪಾಧ್ಯಾಯರುಗಳು ನಿಜಕ್ಕೂ ದಡ್ಡರಾಗಿದ್ದಾರೆ. ಬುದ್ಧಿ ಬರಿದಾಗಿರುವವರು ಅಗಿದ್ದಾರೆ. ಉಳಿದ ಬುದ್ಧವಚನವನ್ನು ಪಕ್ಕಕ್ಕೆ ಇಟ್ಟು ನನಗೆ ಕೇವಲ ಅಭಿಧಮ್ಮವನ್ನು ಪ್ರಥಮವಾಗಿ ತಿಳಿಸಿದ್ದಾರೆ.
                ಆದರೆ ಪೂಜ್ಯ ರೋಹಣರವರು ನಾಗಸೇನರವರ ಮನಸ್ಸಿನಲ್ಲಿ ಉಂಟಾದ ಯೋಚನೆ ಓದಿದರು. ನಂತರ ಹೀಗೆ ಹೇಳಿದರು ಅನುಚಿತವಾದ ಯೋಚನೆಯನ್ನು ನೀನು ಮಾಡುತ್ತಿದ್ದೆಯೆ ನಾಗಸೇನ, ಅದನ್ನು ಯೋಚಿಸಲು ನಿನಗೆ ಅರ್ಹತೆಯಿಲ್ಲ ಎಂದರು.
                ಎಷ್ಟು ಅದ್ಭುತ ಮತ್ತು ಆಶ್ಚರ್ಯ! ಎಂದು ನಾಗಸೇನರವರು ಯೋಚಿಸಲಾ ರಂಭಿಸಿದರು. ನನ್ನ ಗುರುಗಳು ನಾನು ಯೋಚಿಸುತ್ತಿರುವುದು ಹಾಗೇ ಅರಿಯುತ್ತಾರೆ. ನಾನು ಖಂಡಿತವಾಗಿ ಕ್ಷಮೆ ಯಾಚಿಸಬೇಕು ಎಂದುಕೊಂಡು ಕ್ಷಮಿಸಿ ಗುರುವರ್ಯರೇಭಂತೆ ಕ್ಷಮಿಸಿ, ನಾನು ಇನ್ನೆಂದಿಗೂ ಇಂತಹ ಯೋಚನೆ ಮಾಡಲಾರೆ.
                ನಾನು ಕೇವಲ ಈ ಸಂಕಲ್ಪ ಭಾಷೆ ಕೇಳಿಯೇ ಕ್ಷಮಿಸುವುದಿಲ್ಲ ನಾಗಸೇನ, ನಾನು ಕ್ಷಮಿಸಲೇ ಬೇಕೆಂದರೆ ಕೇಳು ಸಾಗಲ ನಗರದಲ್ಲಿ ಮಿಲಿಂದನೆಂಬ ರಾಜನಿದ್ದಾನೆ. ಆತನು ತನ್ನ ವಿತಂಡವಾದದಿಂದ ಸಂಘಕ್ಕೆ ಕ್ಲಿಷ್ಟವಾದ ಒಗಟು ಪ್ರಶ್ನೆಗಳನ್ನು ಹಾಕಿ ತೊಂದರೆ ನೀಡುತ್ತಿದ್ದಾನೆ. ನಿನಗೆ ಕ್ಷಮೆ ಸಿಗಬೇಕು ಎಂದಿದ್ದರೆ ನಾಗಸೇನ ನೀನು ಅಲ್ಲಿಗೆ ಹೋಗಿ ಆ ರಾಜನನ್ನು ವಾದವಿವಾದದಲ್ಲಿ ಜಯಿಸಬೇಕು, ಅಷ್ಟೇ ಅಲ್ಲ, ಆತನಿಗೆ ಸತ್ಯದ ಪ್ರಕಾಶವುಂಟು ಮಾಡಿ ಸತ್ಯಕ್ಕೆ ಶರಣು ಹೋಗುವಂತೆ ಮಾಡಬೇಕು.
                ಕೇವಲ ಮಿಲಿಂದ ರಾಜನಷ್ಟೇ ಅಲ್ಲ, ಓ ಅರಹಂತರೇ, ಜಂಬುದ್ವೀಪದ ಎಲ್ಲಾ ರಾಜರು ನನ್ನನ್ನು ಪ್ರಶ್ನಿಸಲಿ ನಾನು ಅವರ ಎಲ್ಲಾ ಕ್ಲಿಷ್ಟಪ್ರಶ್ನೆಗಳನ್ನು ಮುರಿದು ಪರಿಹಾರ ಮಾಡುವೆ. ಆದರೆ ನೀವು ನನಗೆ ಕ್ಷಮಿಸಬೇಕಷ್ಟೆ ಎಂದು ನಾಗಸೇನರು ಹೇಳಿದರು. ಆದರೆ ಆತನಿಗೆ ಇದರಿಂದ ಲಾಭವಿಲ್ಲ ಎಂದು ಗೊತ್ತಾಗಿ ಈ ರೀತಿ ಕೇಳಿದನು ಪೂಜ್ಯರೆ, ಇಂದಿನಿಂದ ಮೂರು ತಿಂಗಳವರೆಗಿನ ವಷರ್ಾವಾಸವನ್ನು ನಾನು ಎಲ್ಲಿ ಕಳೆಯಲಿ?
                ವತ್ತನಿಯಾ ವಿಹಾರದಲ್ಲಿ ಅಸ್ಸಗುತ್ತ ಎಂಬ ಸೋದರನಿದ್ದಾನೆ, ಆತನಲ್ಲಿಗೆ ನೀ ಹೋಗು ನಾಗಸೇನ ಮತ್ತು ನನ್ನ ಹೆಸರು ಹೇಳಿ ಆತನ ಪಾದಕ್ಕೆ ನಮಸ್ಕರಿಸು. ಮತ್ತು ಹೀಗೆ ಹೇಳು ನನ್ನ ಉಪಾಧ್ಯಾಯರು ಪರಿಶುದ್ಧರು ನಿಮಗೆ ಗೌರವದಿಂದ ವಂದಿಸಿರುವರು. ಮತ್ತು ನಿಮ್ಮ ಆರೋಗ್ಯ ಕುಶಲದ ಬಗ್ಗೆ ವಿಚಾರಿಸಿರುವರು. ತಾವು ಆರೋಗ್ಯವಾಗಿ ಮತ್ತು ಹಿತವಾಗಿ ಇರುವಿರಾ? ಪೂರ್ಣ ಶಕ್ತಿಯಿಂದ ಮತ್ತು ಸುಖವಾಗಿ ಇದ್ದೀರಿಯಷ್ಟೇ? ಅವರು ನನಗೆ ನಿಮ್ಮಲ್ಲಿ ವಷರ್ಾವಾಸದ ಮೂರು ತಿಂಗಳು ಕಳೆಯಲು ಆಜ್ಞೆ ನೀಡಿದ್ದಾರೆ ಎಂದು ನುಡಿ. ಮತ್ತು ಯಾವಾಗ ಅವರು ನಿನ್ನ ಗುರುಗಳ ಹೆಸರನ್ನು ವಿಚಾರಿಸುವರೋ ಆಗ ಅದನ್ನು ನುಡಿ, ಆದರೆ ಆತ ತನ್ನದೇ ಹೆಸರನ್ನು ಕೇಳಿದಾಗ ಹೀಗೆ ನುಡಿ ನನ್ನ ಗುರುಗಳಿಗೆ ತಮ್ಮ ಹೆಸರು ತಿಳಿದಿದೆ ಪೂಜ್ಯನೀಯರೆ ಎಂದು ಹೇಳಬೇಕು ಎಂದು ಉಪದೇಶಿಸಿದರು.
                ನಾಗಸೇನರವರು ಪೂಜ್ಯ ರೋಹಣರಿಗೆ ಸಾಷ್ಟಾಂಗ ವಂದಿಸಿದರು. ನಂತರ ಅವರನ್ನು ಪ್ರದಶರ್ಿಸಿ, ಪಿಂಡಪಾತ್ರೆ ಮತ್ತು ಚೀವರ ತೆಗೆದುಕೊಂಡು ಸ್ಥಳದಿಂದ ಸ್ಥಳಕ್ಕೆ ನಡೆಯುತ್ತಲೇ ವತ್ತನಿಯಾ ವಿಹಾರಕ್ಕೆ ಬಂದರು. ದಾರಿಯಲ್ಲಿ ಭಿಕ್ಷಾಟನೆಯು ಮಾಡಿದರು. ನಂತರ ಅಸ್ಸಗುತ್ತರವರಿಗೆ ವಂದಿಸಿದರು ಮತ್ತು ಗುರುವಂದನೆಯಂತೆಯೇ ನುಡಿದರು. ಅದಕ್ಕೆ ಪ್ರತಿಯಾಗ ಅಸ್ಸಗುತ್ತರವರು ಹೀಗೆ ಹೇಳಿದರು ತುಂಬ ಒಳ್ಳೆಯದು ನಾಗಸೇನ, ನಿನ್ನ ಚೀವರ ಮತ್ತು ಪಿಂಡಪಾತ್ರೆ ಎತ್ತಿಡು ಎಂದರು. ಮುಂದಿನದಿನ ನಾಗಸೇನರವರು ಗುರುಗಳ ವಾಸಸ್ಥಳವನ್ನು ಗುಡಿಸಿ ಸ್ವಚ್ಛಗೊಳಿಸಿದರು, ನೀರನ್ನು ಸಂಗ್ರಹಿಸಿದರು ಹಾಗು ಹಲ್ಲುಕಡ್ಡಿಗಳನ್ನು ಸಿದ್ಧಪಡಿಸಿದರು. ನಂತರ ಗುರುಗಳು ಸಹಾ ವಾಸಸ್ಥಳವನ್ನು ಸ್ವಚ್ಛಗೊಳಿಸಿ, ನೀರನ್ನು ಚೆಲ್ಲಿ, ಹಲ್ಲು ಕಡ್ಡಿಗಳನ್ನು ಬಿಸಾಡಿದರು ಮತ್ತು ಪರರದ್ದನ್ನು ಎತ್ತಿಕೊಂಡರು. ಯಾವುದೇ ಮಾತನ್ನು ಆಡಲಿಲ್ಲ. ಹೀಗೆಯೇ ಏಳು ದಿನಗಳು ಕಳೆದವು. ಏಳನೇದಿನ ಹಿರಿಯ ಥೇರರು ಅದೇ ಪ್ರಶ್ನೆಗಳನ್ನು ಕೇಳಿದರು. ನಾಗಸೇನರವರು ಸಹಾ ಅದೇ ಉತ್ತರಗಳನ್ನು ನೀಡಿದರು. ಆಗ ಅವರು ವಷರ್ಾವಾಸ ಕಳೆಯಲು ಅನುಮತಿ ನೀಡಿದರು.
12. ನಾಗಸೇನರವರ ಧಮ್ಮದೇಸನ
                ಒಬ್ಬ ಮಹಾ ಉಪಾಸಿಕೆಯು ಅಸ್ಸಗುತ್ತರವರನ್ನು ನಿಷ್ಠೆಯಿಂದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತ ಇದ್ದಳು. ಆಗ ವಷರ್ಾವಾಸದ ಅಂತ್ಯದ ದಿನದಂದು ಆಕೆಯು ಅಸ್ಸಗುತ್ತರಲ್ಲಿಗೆ ಬಂದು ಅವರೊಂದಿಗೆ ಬೇರೆ ಭಿಕ್ಖುವು ವಾಸಿಸುವರೇ ಎಂದು ಕೇಳಿದಳು. ಆಗ ನಾಗಸೇನರು ವಾಸಿಸುವರು ಎಂದು ತಿಳಿದಾಗ ಆಗ ಆಕೆಯು ಇಬ್ಬರಿಗೂ ಮನೆಗೆ ಆಹಾರಕ್ಕೆ ಆಹ್ವಾನಿಸಿದಳು. ಆಗ ಥೇರರು ಮೌನದಿಂದ ಒಪ್ಪಿಗೆ ಸೂಚಿಸಿದರು. ನಂತರ ಮುಂದಿನ ದಿನದಂದು ಥೇರರು ಚೀವರ ಧರಿಸಿ, ಪಿಂಡಪಾತ್ರೆ ಹಿಡಿದು ನಾಗಸೇನರೊಡನೆ ಅಕೆಯ ಮನೆಗೆ ಹೋದರು. ಅಲ್ಲಿ ಅವರಿಗಾಗಿ ಸಿದ್ಧಪಡಿಸಿದ್ದ ಆಸನಗಳಲ್ಲಿ ಕುಳಿತರು. ಆಕೆ ಅವರಿಗಾಗಿ ರುಚಿಕರವಾದ ಮೃದು ಮತ್ತು ಗಟ್ಟಿ ಮುಂತಾದ ವಿಧದ ಆಹಾರ ಭಕ್ಷಗಳನ್ನು ಬಡಿಸಿದಳು. ನಂತರ ಅಸ್ಸಗುತ್ತರವರು ಆಹಾರ ಸೇವಿಸಿ, ಪಿಂಡಪಾತ್ರೆಯಿಂದ ಕೈ ತೆಗೆದುಕೊಂಡು ನಾಗಸೇನರವರಿಗೆ ಹೀಗೆ ಹೇಳಿದರು ನಾಗಸೇನ, ಈ ಉಪಾಸಿಕೆಗೆ ನೀನು ಅನುಮೋದನೆ ಮಾಡಿ ಬಾ (ಧಮ್ಮಾದೇಸನ ನೀಡು) ಎಂದು ನುಡಿದು ಅವರು ಆಸನದಿಂದ ಎದ್ದುಹೊರಟರು.
                ಆಗ ಆ ಉಪಾಸಿಕೆಯು ಹೀಗೆ ಹೇಳಿದಳು ಮಿತ್ರ ನಾಗಸೇನ, ನಾನು ಹಿರಿಯಳು, ಆದ್ದರಿಂದ ನನಗೆ ಗಂಭೀರವಾದ ಧಮ್ಮ ವಿಷಯಗಳನ್ನು ತಿಳಿಸು.
                ನಾಗಸೇನರವರು ಅದರಂತೆಯೇ ಗಂಭೀರವಾದ ಅಭಿಧಮ್ಮವನ್ನು ಲೋಕೋತ್ತರ ಶೂನ್ಯತಾ ಪಟಿಸಂಯುಕ್ತ ಧಮ್ಮವನ್ನು ಬೋಧಿಸಿದರು. ಅವರು ಕೇವಲ ಶೀಲಗಳನ್ನೇ ತಿಳಿಸಲಿಲ್ಲ. ಅರಹತ್ವಕ್ಕೆ ಸಂಬಂಧಿಸುವುದನ್ನು ಮಾತ್ರ ಹೇಳಿದರು.
                ಆಗ ಅದನ್ನು ಆಲಿಸುತ್ತ ಕುಳಿತಿದ್ದಂತಹ ಆ ಸ್ತ್ರೀಯಲ್ಲಿ ವಿರಜವಾದ, ನಿರ್ಮಲವಾದ ಧಮ್ಮಚಕ್ಷುವು ಉದಯಿಸಿತು. ಆಗ ಆಕೆಯಲ್ಲಿ ಈ ಜ್ಞಾನವು ಮೂಡಿತು. ಯಾವುದೆಲ್ಲವೂ ಸಮುದಾಯ (ಉದಯಿಸುತ್ತದೆಯೋ) ಧಮ್ಮವೋ ಅವೆಲ್ಲವೂ (ಸರ್ವವೂ) ನಿರೋಧ ಧಮ್ಮವುಳ್ಳದ್ದಾಗಿದೆ (ನಿಲ್ಲಿಸಬಹುದಾಗಿದೆ/ತಡೆಯಬಹುದಾಗಿದೆ). ಆಗ ಇನ್ನೊಂದು ಚಮತ್ಕಾರ ನಡೆಯಿತು. ಆಕೆಗೆ ಬೋಧಿಸುತ್ತಿದ್ದಂತೆಯೇ ನಾಗಸೇನರವರಲ್ಲು ಧಮ್ಮಚಕ್ಷು ಮೂಡಿ ವಿಪಸ್ಸನವು ಜಾಗೃತವಾಗಿ ನಾಗಸೇನರವರು ಸಹಾ ಸೋತಾಪತ್ತಿ ಫಲವನ್ನು ಪ್ರಾಪ್ತಿಮಾಡಿದರು.
                ಆ ಸಮಯದಲ್ಲಿ ಪೂಜ್ಯ ಅಸ್ಸಗುತ್ತರವರು ತಮ್ಮ ವಿಹಾರದ ಮರದ ಕೆಳಗೆ ಧ್ಯಾನಿಸುತ್ತಿದ್ದರು. ಆಗ ಅವರ ದಿವ್ಯಚಕ್ಷುವಿಗೆ ಇವರಿಬ್ಬರು ಸೋತಪನ್ನರಾಗಿರುವುದು ತಿಳಿದು ಅವರು ಈ ರೀತಿ ಆನಂದೋದ್ಗಾರ ಮಾಡಿದರು ಸಾಧು, ಸಾಧು ನಾಗಸೇನ, ಒಂದೇ ಬಾಣದಿಂದ ಎರಡು ಮಹಾಕಾಯಗಳ ಬೇಟೆ ಮಾಡಿದ್ದೀಯೆ. ಅದೇ ವೇಳೆಯಲ್ಲಿ ಸಹಸ್ರಾರು ದೇವತೆಗಳು ಸಹಾ ಸಾಧುಕಾರವನ್ನು ಮಾಡಿ ಅಭಿನಂದಿಸಿದರು.
13. ನಾಗಾಸೇನರವರು ಪಾಟಲಿಪುತ್ರಕ್ಕೆ ಆಗಮನ
                ಈಗ ನಾಗಸೇನರವರು ಎದ್ದು ಅಸ್ಸಗುತ್ತರವರಲ್ಲಿಗೆ ಹೋಗಿ ಅವರಿಗೆ ವಂದಿಸಿದರು ಮತ್ತು ಗೌರವದಿಂದ ಒಂದೆಡೆ ಕುಳಿತರು. ಆಗ ಅಸ್ಸಗುತ್ತರವರು ಹೀಗೆ ಹೇಳಿದರು ನಾಗಸೇನ, ಈಗ ನೀನು ಪಾಟಲಿಪುತ್ರಕ್ಕೆ ಹೊರಡು, ಅಲ್ಲಿ ಅಶೋಕ ಉದ್ಯಾನವನದಲ್ಲಿ ಪೂಜ್ಯರಾದ ಧಮ್ಮರಕ್ಖತರವರು ವಾಸಿಸುತ್ತಿರುವರು. ಅವರ ಹತ್ತಿರ ಬುದ್ಧವಚನವನ್ನು ಕಲಿ.
                ಭಂತೆ, ಇಲ್ಲಿಂದ ಪಾಟಲಿಪುತ್ರವು ಎಷ್ಟು ದೂರವಿದೆ?
                ನೂರು ಯೋಜನೆ ನಾಗಸೇನ.
                ಭಂತೆ, ಇದು ಸಾಕಷ್ಟು ದೂರವಿದೆ. ದಾರಿಯಲ್ಲಿ ಆಹಾರಕ್ಕೂ ತೊಂದರೆ ಆಗಬಹುದು. ನಾನು ಅಲ್ಲಿಗೆ ಯಾವರೀತಿ ಹೋಗಲಿ?
                ನಾಗಸೇನ, ನೇರವಾಗಿ ನಡೆಯುತ್ತ ಹೊರಡು. ನಿನಗೆ ದಾರಿಯಲ್ಲಿ ಆಹಾರ ಸಿಗುತ್ತಿರುತ್ತದೆ. ಶಾಲಿಯ ಅಕ್ಕಿಯ ಅನ್ನ, ಜೊತೆಗೆ ಸಾರು, ಪಲ್ಯ, ವ್ಯಂಜನಗಳೆಲ್ಲಾ ಸಿಗುವುದು.
                ಹಾಗೇ ಆಗಲಿ ಭಂತೆ ಎಂದು ಗುರುವಿನ ಮುಂದೆ ವಂದಿಸಿ ಅವರಿಗೆ ಪ್ರದಕ್ಷಿಣೆ ಹಾಕಿ ನಂತರ ಪಿಂಡಪಾತ್ರೆ ಮತ್ತು ಚೀವರ ಧರಿಸಿ ಪಾಟಲಿಪತ್ರದ ಕಡೆಗೆ ಹೊರಟರು.
14. ಶ್ರೇಷ್ಠಿಗೆ ಅಭಿಧಮ್ಮ ದೇಸನ
                ಅದೇ ಸಮಯದಲ್ಲಿ ಪಾಟಲಿಪುತ್ರದ ವರ್ತಕರು ತಮ್ಮ ನಗರಕ್ಕೆ 500 ಬಂಡಿಗಳ ಸಮೇತ ಹಿಂತಿರುಗುತ್ತಿದ್ದರು.
                ವರ್ತಕನೊಬ್ಬ ಹತ್ತಿರದಲ್ಲಿ ನಾಗಸೇನರವರು ಬರುತ್ತಿರುವುದನ್ನು ಕಂಡನು. ಆತನು ಬಂಡಿಗಳನ್ನು ನಿಲ್ಲಿಸಿ ನಾಗಸೇನರವರಿಗೆ ವಂದಿಸಿ ಹೀಗೆ ಕೇಳಿದನು.
                ಎಲ್ಲಿಗೆ ಹೋಗುತ್ತಿರುವಿರಿ ತಂದೆಯೇ?
                ಗೃಹಸ್ಥನೇ ಪಾಟಲಿಪುತ್ರಕ್ಕೆ.
                ಒಳ್ಳೆಯದು ತಂದೆಯೆ, ನಾವು ಅಲ್ಲಿಗೇ ಹೋಗುತ್ತಿರುವೆವು. ನೀವು ನಮ್ಮೊಂದಿಗೆ ಸೇರಿ ಹೊರಟರೆ ಬಹಳ ಒಳ್ಳೆಯದು.
                ಆ ವರ್ತಕನಿಗೆ ನಾಗಸೇನರವರ ವರ್ತನೆಗಳು ಇಷ್ಟವಾಗಿದ್ದವು. ಆತ ಪೂಜ್ಯ ನಾಗಸೇನರವರಿಗೆ ಎಲ್ಲಾಬಗೆಯ ಆಹಾರಗಳೆಲ್ಲಾ ನೀಡಿದನು. ತನ್ನ ಕೈಗಳಿಂದಲೇ ಬಡಿಸಿದನು. ಅವರು ಆಹಾರ ಸೇವಿಸಿದ ಬಳಿಕ ಅವರಿಗೆ ಉಚ್ಚ ಪೀಠದಲ್ಲಿ ಕುಳ್ಳಿರಿಸಿ ತಾನು ಚಿಕ್ಕ ಪೀಠದಲ್ಲಿ ಆಸೀನನಾಗಿ ಕುಳಿತನು. ನಾಗಸೇನರಲ್ಲಿ ಹೀಗೆ ಕೇಳಿದನು, ತಂದೆಯೇ ತಮ್ಮ ನಾಮವೇನು? ಎಂದು ಪ್ರಶ್ನಿಸಿದನು.
                ಓ ಗೃಹಪತಿಯೇ, ನಾಗಸೇನ ಎಂದು ಕರೆಯುವರು.
                ಓ ತಂದೆಯೇ, ತಮಗೆ ಬುದ್ಧ ವಚನವು ತಿಳಿದಿದೆಯೇ?
                ನನಗೆ ಬುದ್ಧವಚನದಲ್ಲಿ ಒಂದಾದ ಅಭಿಧಮ್ಮವು ಮಾತ್ರ ತಿಳಿದಿದೆ.
                ತಂದೆಯೆ, ನಾವು ನಿಜಕ್ಕೂ ಭಾಗ್ಯವಂತರು. ಇದು ನಿಜಕ್ಕೂ ಮಹತ್ ಅವಕಾಶ. ನಾನು ಸಹಾ ತಮ್ಮಂತೆ ಅಭಿಧಮ್ಮದ ವಿದ್ಯಾಥರ್ಿಯೇ, ದಯವಿಟ್ಟು ಕೆಲವು ವಾಕ್ಯವೃಂದಗಳನ್ನು ನುಡಿಯಿರಿ.
                ಆಗ ನಾಗಸೇನರವರು ಆತನಿಗೆ ಅಭಿಧಮ್ಮ ಉಪದೇಶಿಸಿದರು. ಆತನಿಗೆ ಉಪದೇಶಿಸುತ್ತಿದ್ದಂತೆಯೆ ಪಾಟಲಿಪುತ್ರದ ಶ್ರೇಷ್ಠಿಗೆ ವಿರಜವಾದ, ನಿರ್ಮಲವಾದ ಧಮ್ಮಚಕ್ಷುವು ಉದಯಿಸಿತು. ಯಾವುದೆಲ್ಲವೂ ಸಮುದಾಯ (ಉದಯಿಸುವ) ಧಮ್ಮವೋ ಅವೆಲ್ಲವೂ ನಿರೋಧ (ನಿಲ್ಲುವ) ಧಮ್ಮವುಳ್ಳದ್ದಾಗಿದೆ.
                ಈಗ ಪಾಟಲಿಪುತ್ರದ ವರ್ತಕನು ತನ್ನ ಬಂಡಿಗಳನ್ನು ಮುಂದಾಗಿ ಕಳುಹಿಸಿಕೊಟ್ಟು ಅದನ್ನು ಹಿಂಬಾಲಿಸಿದನು. ದಾರಿಯು ಪಾಟಲಿಪುತ್ರದ ಮುಂದೆ ಎರಡು ವಿಭಾಗವಾಗುವ ಕಡೆ ನಿಂತು ನಾಗಸೇನರಿಗೆ ಹೀಗೆ ಹೇಳಿದನು ಈ ತಿರುವಿನಲ್ಲಿ ಅಶೋಕ ಉದ್ಯಾನವನವು ಸಿಗುವುದು, ಈಗ ನನ್ನ ಬಳಿ ಅನುರೂಪವಾದ ಉಣ್ಣೆಯ ಬಟ್ಟೆಯಿದೆ (ರತ್ನಗಂಬಳಿ) ಹದಿನಾರು ಮೊಳ, ಎಂಟು ಮೊಳದ ಉದ್ದಗಲವಿದೆ. ಇದನ್ನು ಪಡೆದು ನನಗೆ ಕೃತಾರ್ಥನನ್ನಾಗಿಸುವಿರಾ? ನಾಗಸೇನರು ಒಪ್ಪಿದರು.
                ಆಗ ಶ್ರೇಷ್ಠಿಗೆ ಅತ್ಯಾನಂದವಾಯಿತು. ಪೂರ್ಣ ತೃಪ್ತಿಯಾಗಿ, ಉದ್ವೇಗಿತನಾಗಿ, ಪ್ರಮೋದಿತನಾಗಿ, ಆನಂದಭರಿತನಾಗಿ, ನಾಗಸೇನರವರಿಗೆ ವಂದಿಸಿ, ಅವರಿಗೆ ಪ್ರದಕ್ಷಿಣೆ ಮಾಡಿ ಅಲ್ಲಿಂದ ನಡೆದನು.
15. ನಾಗಾಸೇನರವರ ಅರಹಂತ ಪ್ರಾಪ್ತಿ
                ನಂತರ ಆಯುಷ್ಮಂತ ನಾಗಸೇನರವರು ಅಶೋಕವನಕ್ಕೆ ಧಮ್ಮರಕ್ಖಿತರ ಬಳಿ ಹೋದರು. ಅವರಿಗೆ ವಂದಿಸಿ ತಾವು ಬಂದ ವಿಷಯವನ್ನು ತಿಳಿಸಿದರು. ಅವರು ಧಮ್ಮರಕ್ಖಿತರ ಬಳಿ 3 ತಿಂಗಳಲ್ಲೇ 3 ತಿಪಿಟಕವನ್ನು (ಬುದ್ಧವಚನ) ಅರ್ಥಮಾಡಿಕೊಂಡು ಅಕ್ಷರಸಹಿತ ನೆನಪಿನಲ್ಲಿಟ್ಟುಕೊಂಡರು. ಅವರಿಗೆ ಈಗ ಇಡೀ ತಿಪಿಟಕದ ಮೇಲೆ ಪ್ರಭುತ್ವವಿತ್ತು. ಪ್ರತಿಯೊಂದು ಅರ್ಥವಾಗಿತ್ತು, ಪ್ರತಿಯೊಂದು ನೆನಪಿತ್ತು, ಪೂರ್ಣ ಪ್ರಭುತ್ವವಿತ್ತು.
                ಆ ತಿಂಗಳ ಕೊನೆಯಲ್ಲಿ ಪೂಜ್ಯ ಧಮ್ಮರಕ್ಖತರವರು ನಾಗಸೇನರವರಿಗೆ ಕರೆಸಿ ಹೀಗೆ ಹೇಳಿದರು ನಾಗಸೇನ, ಗೋಪಾಲನು ಗೋವುಗಳನ್ನು ರಕ್ಷಿಸುತ್ತಾನೆ ಅಷ್ಟೆ, ಆದರೆ ಅದರ ಫಲವನ್ನು ಅನ್ಯರು ಪಡೆಯುವರು, ನೀನು ಸಹ ಹಾಗೆಯೇ ನಾಗಸೇನ. ಬುದ್ಧವಚನವಾದ ತಿಪಿಟಕವನ್ನು ಅರಿತು ಜೀಣರ್ಿಸಿರಬಹುದು. ಆದರೆ ಸಮಣತ್ವದ (ಅರಹತ್ವದ) ಫಲದಲ್ಲಿ ಇನ್ನೂ ನೀ ಭಾಗಿಯಾಗಿಲ್ಲ. ಇನ್ನೂ ನೀ ಸಾಮಾನ್ಯನಾಗಿಯೇ ಇದ್ದೀಯೆ ಎಂದಾಗ ನಾಗಸೇನರವರು ಹೀಗೆ ಪ್ರತಿಕ್ರಿಯೆ ನೀಡಿದರು ಹಾಗೇನು! ಭಂತೆ, ಇನ್ನೇನೂ ಹೇಳದಿರಿ ಎಂದು ಅದೇ ರಾತ್ರಿ ತಮ್ಮ ಪ್ರಜ್ಞಾ ಮತ್ತು ಪರಾಕ್ರಮದಿಂದ ಅರಹತ್ವತ್ವ ಪ್ರಾಪ್ತಿ ಮಾಡಿದರು. ಜೊತೆಗೆ ನಾಲ್ಕು ಪಟಿಸಂಭಿದ ಜ್ಞಾನವನ್ನು ಸಹಾ ಪಡೆದರು. ಅವರು ಹೀಗೆ ಉನ್ನತವಾದ ಜ್ಞಾನವನ್ನು ಪಡೆದರು. ಆಗ ದೇವತೆಗಳು ಸಾಧುಕಾರದ ಅಭಿವಂದನೆ ಮಾಡಿದರು. ಆಗ ಪೃಥ್ವಿಯು ಕಂಪಿಸಿತು. ಬ್ರಹ್ಮದೇವತೆಗಳು ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲ, ದೇವಲೋಕಗಳಿಂದ ಚಂದನದ ವಷರ್ಾವಾಯಿತು. ಜೊತೆಗೆ ಮಂದಾರದ ಪುಷ್ಪಗಳು ವೃಷ್ಟಿಯಾಯಿತು.
16. ನಾಗಾಸೇನರವರ ಪ್ರತಿಜ್ಞೆ
                ಹಿಮಾಲಯದ ಇಳಿಜಾರಿನಲ್ಲಿ ವಾಸವಾಗಿದ್ದ ಅಸಂಖ್ಯಾತ ಅರಹಂತರು ನಾಗಸೇನರವರನ್ನು ಕಾಣುವಂತೆ ಸಂದೇಶವನ್ನು ಕಳುಹಿಸಿದರು. ಅವರೆಲ್ಲರೂ ಆತನನ್ನು ಕಾಣಲು ಉತ್ಸುಕರಾಗಿದ್ದರು. ಯಾವಾಗ ಈ ಸಂದೇಶ ನಾಗಸೇನರವರಿಗೆ ದೂತನಿಂದ ಸಿಕ್ಕಿತೋ ಆಗ ಅವರು ಅಶೋಕವನದಿಂದ ಮಾಯವಾಗಿ ಅವರ ಮುಂದೆ ಪ್ರತ್ಯಕ್ಷರಾದರು. ಆಗ ಅರಹಂತರುಗಳು ಈ ರೀತಿ ಹೇಳಿದರು ನಾಗಸೇನ, ರಾಜ ಮಿಲಿಂದನು ಕ್ಲಿಷ್ಟವಾದ ಮತ್ತು ವಿತಂಡವಾದದಿಂದ ಈ ರೀತಿ, ಆ ರೀತಿಯಾಗಿ ತೊಂದರೆ ನೀಡುತ್ತಿದ್ದಾನೆ. ಆದ್ದರಿಂದ ನಾಗಸೇನ ಆತನಲ್ಲಿಗೆ ಹೋಗಿ ಆತನನ್ನು ಧಮಿಸು.
                ಮಿಲಿಂದ ರಾಜನೊಬ್ಬನೇ ಅಲ್ಲ, ಓ ಅರಹಂತರೇ, ಜಂಬುದ್ವೀಪದ ಸರ್ವ ರಾಜರುಗಳೆಲ್ಲಾ ಬಂದು ಗಂಭೀರವಾದ, ಕ್ಲಿಷ್ಟವಾದ, ತೊಡಕಾಗಿರುವಂತಹ ವಿತಂಡವಾದವನ್ನು ಮಾಡಿದರೂ ಸಹಾ ನಾನು ಅವರೆಲ್ಲರ ಪ್ರಶ್ನೆಗಳನ್ನು ಕತ್ತರಿಸಿ ಪರಿಹರಿಸುವೆ. ನೀವು ಸಾಗಲಕ್ಕೆ ನಿಶ್ಚಿಂತೆಯಿಂದ ಹೋಗಬಹುದು ಭಂತೆ.
                ಆಗ ಎಲ್ಲಾ ಹಿರಿಯರು ಸಾಗಲ ನಗರಕ್ಕೆ ಹೊರಟರು. ದೀಪಗಳಂತೆ ಪ್ರಜ್ವಲಿಸುವ ತಮ್ಮ ಚೀವರಗಳನ್ನು ಧರಿಸಿ, ತಮ್ಮ ಪವಿತ್ರ ಪರಿಮಳವನ್ನು, ತಂಗಾಳಿಯನ್ನು ಹರಡುತ್ತಾ ಚಲಿಸಿದರು.
17. ಆಯುಪಾಲ ಮತ್ತು ಮಿಲಿಂದರ ಚಚರ್ೆ
                ಆ ಸಮಯದಲ್ಲಿ ಪೂಜ್ಯ ಆಯುಪಾಲರವರು ಸಂಖೆಯ್ಯ ವಿಹಾರದಲ್ಲಿ ಇದ್ದರು ಮತ್ತು ರಾಜ ಮಿಲಿಂದನು ತನ್ನ ಅಮಾತ್ಯರೊಡನೆ ಹೀಗೆ ಹೇಳಿದನು ರಮಣೀಯವಾಗಿದೆ ರಾತ್ರಿ ಮತ್ತು ಹಿತಕರವಾಗಿದೆ. ಯಾವ ಸಮಣ ಅಥವಾ ಬ್ರಾಹ್ಮಣನಲ್ಲಿಗೆ ಚಚರ್ಿಸಿದರೆ ನನ್ನ ಸಂದೇಹಗಳು ಪರಿಹಾರವಾಗುತ್ತದೆ.
                ಆಗ 500 ಜನ ಯೋನಕರು ಈ ರೀತಿ ಪ್ರತಿಕ್ರಿಯೆ ನೀಡಿದರು ರಾಜ, ಇಲ್ಲೊಬ್ಬ ಥೇರರು ಇದ್ದಾರೆ. ಆತನೇ ಪೂಜ್ಯ ಆಯುಪಾಲ. ಆತನು ತಿಪಿಟಕಗಳಲ್ಲಿ ಪ್ರವೀಣ. ಬಹುಶ್ರುತನು ಸಹಾ. ಆತನೀಗ ಸಂಖೆಯ್ಯ ವಿಹಾರದಲ್ಲಿ ವಾಸಿಸುತ್ತಿರುವನು. ಮಹಾರಾಜರೇ, ನೀವು ಆತನಲ್ಲಿಗೆ ಬೇಕಾದರೆ ಹೋಗಿ ಪ್ರಶ್ನಿಸಬಹುದು.
                ಸರಿ ಹಾಗಾದರೆ ಭಂತೆಯವರಿಗೆ ನಾವು ಬರುವ ವಿಷಯ ತಿಳಿಸಿ.
                ಆಗ ರಾಜ ಜ್ಯೋತಿಷಿಯು ಆಯುಪಾಲರಿಗೆ ರಾಜ ಬರುವಂತಹ ಸಂದೇಶವನ್ನು ತಿಳಿಸಿದನು. ಅದಕ್ಕೆ ಪೂಜ್ಯರು ಅವರು ಬರಲಿ ಎಂದು ಪ್ರತ್ಯುತ್ತರ ನೀಡಿದರು.
                ಆಗ ಮಿಲಿಂದ ಮಹಾರಾಜರು 500 ಯೋನಕರೊಂದಿಗೆ ರಾಜ ರಥವನ್ನೇರಿ ಸಂಖೆಯ್ಯ ವಿಹಾರಕ್ಕೆ ಬಂದನು. ಅಲ್ಲಿ ಆಯುಪಾಲರು ಇರುವೆಡೆಯಲ್ಲಿ ಬಂದನು. ಈರ್ವರೂ ಪರಸ್ಪರ ಕುಶಲತೆ ಕ್ಷೇಮಗಳನ್ನು ಹಂಚಿಕೊಂಡರು ಮತ್ತು ಗೌರವದಿಂದ ಒಂದೆಡೆ ಕುಳಿತರು. ಆಗ ಮಿಲಿಂದನು ಈ ರೀತಿ ಪ್ರಶ್ನಿಸಿದನು:
                ಏತಕ್ಕಾಗಿ ಪೂಜ್ಯ ಆಯುಪಾಲರೇ ಪಬ್ಬಜ್ಜಾ? ನಿಮ್ಮ ಸಂಘದ ಸದಸ್ಯರೆಲ್ಲರೂ ಯಾವ ಪರಮಾರ್ಥಕ್ಕೆ ಈ ರೀತಿ ಗೃಹತ್ಯಾಗ ಮಾಡಿ ಪಬ್ಬಜ್ಞಾ ಸ್ವೀಕರಿಸುವರು?
                ನಮ್ಮ ಪಬ್ಬಜ್ಜಾ ಏತಕ್ಕೆಂದರೆ ಓ ರಾಜ, ಧಮರ್ಾಚಾರಿಯಾಗಿ ಬಾಳಲು ಮತ್ತು ಸಮಶಾಂತಿಯನ್ನು ಪಡೆಯಲು ಹೀಗೆ ಪಬ್ಬಜ್ಜಾ ಪಡೆಯುವರು.
                ಭಂತೆ, ಇಲ್ಲಿ ಯಾರಾದರೂ ಗೃಹಸ್ಥರೂ ಸಹಾ ಈ ರೀತಿಯಾಗಿ ಗೃಹಸ್ಥರಾಗಿಯೇ ಇದ್ದೂ ಜೀವಿಸುತ್ತಿರುವರೆ?
                ಹೌದು ಮಹಾರಾಜ, ಅಂತಹ ಹಲವಾರು ಗೃಹಸ್ಥರಿದ್ದಾರೆ. ಅವರೆಲ್ಲರೂ ಧಮ್ಮಾಚಾರಿಗಳು, ಪ್ರಶಾಂತತೆವುಳ್ಳವರು ಆಗಿದ್ದಾರೆ. ಉದಾಹರಿಸುವುದಾದರೆ ವಾರಣಾಸಿಯ ಖುಷಿಪಟ್ಟಣದ ಮೃಗದಾಯದಲ್ಲಿ ಧಮ್ಮಚಕ್ರ ಪ್ರವತ್ತಿಸುವಾಗ 18 ಕೋಟಿ ಬ್ರಹ್ಮರು ಮತ್ತು ಅಸಂಖ್ಯಾತ ದೇವತೆಗಳು ಸಹಾ ಧಮ್ಮವನ್ನು ಅರಿತವರಾಗಿದ್ದಾರೆ. ಅವರೆಲ್ಲರೂ ಸಹಾ ಗೃಹಪತಿಗಳಾಗಿದ್ದರೆ ಹೊರತು ಪಬ್ಬಜ್ಜ ಹೊಂದಿರಲಿಲ್ಲ.
                ಮತ್ತೆ ಭಗವಾನರು ಮಹಾಸಮಯಸುತ್ತ ಉದೇಶಿಸುವಾಗ ಅಥವಾ ಮಹಾಮಂಗಳಸುತ್ತ ಉಪದೇಶಿಸುವಾಗ, ಸಮಚಿತ್ತ ಪರಿಯಾಯ ಸುತ್ತ ಉಪದೇಶಿಸಿದಾಗ, ರಾಹುಲೋವಾದ ಸುತ್ತ ಹೇಳುವಾಗ, ಪರಾಭವಸುತ್ತ ಉಪದೇಶಿಸುವಾಗ, ಅಸಂಖ್ಯಾತ ದೇವತೆಗಳು ಧಮ್ಮವನ್ನು ಅರಿತಿದ್ದರು. ಅವರೆಲ್ಲರೂ ಗೃಹಪತಿಗಳೇ (ಸಂಸಾರಿಗಳೇ) ಹೊರತು ಪಬ್ಬಜ್ಜಾ ಹೊಂದಿರಲಿಲ್ಲ.
                ಮಿಲಿಂದ: ಹಾಗಾದರೆ ಭಂತೆ ಆಯುಪಾಲ, ನಿಮ್ಮ ಪಬ್ಬಜ್ಜಾ ವ್ಯರ್ಥ. ಬಹುಶಃ ಅದು ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಕ್ಕೆ ಈಗ ಸಿಗುತ್ತಿರುವ ಪರಿಣಾಮವಿರಬಹುದೇ? ಆದ್ದರಿಂದಲೇ ಶಾಕ್ಯ ಸಮಣರಾದ ನೀವುಗಳೆಲ್ಲಾ ಸಂಸಾರ ತ್ಯಜಿಸಿ ಒಂದಲ್ಲ ಇನ್ನೊಂದು ರೀತಿಯ 13 ಧುತಂಗಗಳನ್ನು ಪಾಲಿಸುತ್ತಿರುವಿರಿ. ಭಂತೆ ಆಯುಪಾಲರೆ, ಭಿಕ್ಖುಗಳು ಒಂದೇ ಆಸನದಲ್ಲಿ ತಲ್ಲೀನರಾಗಿರುವವರು ಮತ್ತು ವೇಳೆ ಮಾತ್ರ ಆಹಾರ ಸೇವಿಸುವವರು ಇವರೆಲ್ಲರೂ ಬಹುಶಃ ಹಿಂದಿನ ಜನ್ಮದಲ್ಲಿ ಪರರ ಆಹಾರವನ್ನು ಕದ್ದ ಕಳ್ಳರಾಗಿರಬಹುದು. ನಿಸ್ಸಂದೇಹವಾಗಿ ಇದು ಅವರ ಕರ್ಮದ ಪರಿಣಾಮವಾಗಿದೆ. ಆದ್ದರಿಂದಲೇ ಅವರು ಪರರಂತೆ ಮಿಕ್ಕ ವೇಳೆಯಲ್ಲಿ ತಿನ್ನಲಾಗುತ್ತಿಲ್ಲ. ಇದು ಶೀಲವೇ ಅಲ್ಲ, ಇದು ತಪವೇ ಅಲ್ಲ, ಇದು ಬ್ರಹ್ಮಚರ್ಯೆಯೇ ಅಲ್ಲ. ಯಾರು ತೆರದ ಗಾಳಿಯಲ್ಲಿ ಮರದ ಬುಡದಲ್ಲಿ ಜೀವಿಸುತ್ತಿರುವವರೊ, ಅವರೆಲ್ಲರೂ ನಿಜವಾಗಿಯೂ ಹಿಂದಿನ ಜನ್ಮದಲ್ಲಿ ಇಡೀ ಗ್ರಾಮಗಳಲ್ಲೇ ಲೂಟಿ ಮಾಡಿರಬಹುದು. ಪರರ ಗೃಹಗಳನ್ನು ನಾಶ ಮಾಡಿರಬಹುದು. ಆದ್ದರಿಂದಲೇ ಕರ್ಮಫಲಕ್ಕೆ ಅನುಸಾರವಾಗಿ ಈಗ ಮನೆಯಿಲ್ಲದೆ ತೆರೆದ ಗಾಳಿಯಲ್ಲಿ ವಾಸಿಸುತ್ತಿರುವವರು. ಆದ್ದರಿಂದ ಇದು ಶೀಲವೇ ಅಲ್ಲ, ಇದು ತಪವೇ ಅಲ್ಲ. ಇದು ಬ್ರಹ್ಮಚಾರ್ಯಯುತ ಜೀವನವೇ ಅಲ್ಲ ಮತ್ತು ಯಾರು ಎಂದಿಗೂ ಮಲಗಲಾರರೋ ಅವರು ಖಂಡಿತವಾಗಿಯು ಹಿಂದಿನ ಜನ್ಮದಲ್ಲಿ ಡಕಾಯಿತರಾಗಿದ್ದಿರಬಹುದು. ಅವರು ಪ್ರಯಾಣಿಕರನ್ನು ಬಲವಂತವಾಗಿ ಕುಳ್ಳಿಸಿರಬಹುದು. ಅದರ ಫಲಿತಾಂಶವೇ ನೈಸಗರ್ಿಕ ಕುಳಿತೇ ನಿದ್ರಿಸುತ್ತಾರೆ ಮತ್ತು ಧ್ಯಾನಿಸುತ್ತಾರೆ. ಅವರಿಗೆ ಯಾವ ಹಾಸಿಗೆಯೂ ಇಲ್ಲವಾಗಿದೆ. ಆದ್ದರಿಂದಲೇ ಇದು ಶೀಲವೇ ಅಲ್ಲ. ಇದು ತಪವೇ ಅಲ್ಲ. ಇದು ಬ್ರಹ್ಮಚಾರ್ಯ ಜೀವನವೇ ಅಲ್ಲ ಎಂದು ಹೇಳಿದರು.
                ಯಾವಾಗ ಈ ರೀತಿ ಮಾತುಗಳನ್ನು ಕೇಳಬೇಕಾಗಿ ಬಂದಿತೋ ಆಗ ಭಂತೆ ಆಯಪಾಲರು ನಿಶ್ಶಬ್ಧರಾದರು ಮತ್ತು ಒಂದು ಪದವನ್ನು ಪ್ರತಿಯಾಗಿ ಹೇಳಲಿಲ್ಲ. ಆಗ 500 ಯೋನಕರು ರಾಜನಿಗೆ ಈ ರೀತಿ ಹೇಳಿದರು ಓ ರಾಜನೆ, ಈ ಥೇರರು ಬಹುಶ್ರುತರಿದ್ದಿರಬಹುದು, ಆದರೆ ಸಂಕೋಚದವರಾಗಿದ್ದಾರೆ, ಆದ್ದರಿಂದಲೇ ಅವರು ಪ್ರತ್ಯುತ್ತರ ನೀಡುತ್ತಿಲ್ಲ.
                ಆದರೆ ರಾಜನು ಭಂತೆ ಆಯುಪಾಲರು ನಿಶ್ಶಬ್ದ ಹೊಂದಿರುವುದನ್ನು ಕಂಡು ಚಪ್ಪಾಳೆತಟ್ಟಿ ಈ ರೀತಿ ಘೋಷಿಸಿದನು ಈ ಜಂಬುದ್ವೀಪವು ಶೂನ್ಯತಮವಾಗಿದೆ, ನಿಸ್ಸಾರವಾಗಿದೆ ಈ ಜಂಬುದ್ವೀಪ. ಇಲ್ಲಿ ಯಾರೊಬ್ಬರಾದರೂ ಸಮಣನಾಗಲಿ ಅಥವಾ ಬ್ರಾಹ್ಮಣನಾಗಲಿ ನನ್ನೊಂದಿಗೆ ಸ್ಪಧರ್ಿಸುವಂತಹ ಸಮರ್ಥರ್ಯಾರು ಇಲ್ಲವೇ? ನನ್ನ ಸಂಶಯಗಳನ್ನು ಪರಿಹರಿಸುವಂತಹವನು ಒಬ್ಬನೂ ಇಲ್ಲಿ ಇಲ್ಲವೇ?
                ಹೀಗೆ ಹೇಳಿದ ಮಿಲಿಂದನು ಸುತ್ತಲಿನ ಸಭೆಯನ್ನು ವೀಕ್ಷಿಸಿದನು. ಎಲ್ಲಾ ಭಿಕ್ಷುಗಳು ಶಾಂತರಾಗಿಯೇ ಇದ್ದರು, ಭಯರಹಿತರಾಗಿಯೇ ಇದ್ದರು ಮತ್ತು ಯೋನಕರು ಸಹಾ ಶ್ರದ್ಧೆಯಿಂದ ಕೂತಿದ್ದರು. ಆಗ ಮಿಲಿಂದನು ಈ ರೀತಿ ಯೋಚಿಸಿದನು ಖಂಡಿತವಾಗಿಯೂ ಇಲ್ಲಿ ನನ್ನೊಂದಿಗೆ ಸ್ಪಧರ್ಿಸಲು ಸಾಮಥ್ರ್ಯವುಳ್ಳವ ಇದ್ದಿರಲೇ ಬೇಕೆ ಎಂದೇಕೆ ಅನಿಸುತ್ತಿದೆ, ಇಲ್ಲದಿದ್ದರೆ ಈ ಯೋನಕರು ಇಷ್ಟು ಶ್ರದ್ಧಾವಂತ ರಾಗಿರುತ್ತಿರಲಿಲ್ಲ.
                ಆಗ ಆತನು ಅವರೊಂದಿಗೆ ಈ ರೀತಿ ಹೇಳಿದನು ಇಲ್ಲಿ ಬೇರೆ ಯಾರಾದರೂ ಪಂಡಿತರು, ನನ್ನೊಂದಿಗೆ ಚಚರ್ಿಸಿ ಸಂದೇಹ ದೂರ ಮಾಡಬಲ್ಲವರು ಇರುವರೇ ನನ್ನ ಸುಜನರೇ?
18. ನಾಗಾಸೇನರ ಸಾಗಲ ನಗರಕ್ಕೆ ಆಗಮನ
                ಅದೇ ವೇಳೆಯಲ್ಲಿ ಪೂಜ್ಯ ನಾಗಸೇನರವರು ಊಟವನ್ನು ಮುಗಿಸಿ ಹಳ್ಳಿಗಳಿಂದ, ಪಟ್ಟಣಕ್ಕೆ ಮತ್ತು ಪಟ್ಟಣಗಳಿಂದ ನಗರಕ್ಕೆ ಹಾಗೆಯೇ ಸಾಗಲ ನಗರಕ್ಕೆ ಬಂದರು. ಈ ಮಧ್ಯೆ ಸಮಣರ ಗುಂಪಿನಿಂದ ಸೇವಿಸಲ್ಪಟ್ಟರು. ಅವರು ಸಂಘಕ್ಕೆ ಗಣಾಚಾರ್ಯರಾದರು, ಯಶಸ್ವಿಗಳಾದರು, ಬಹುಜನರಿಗೆ ಪಂಡಿತರಾದರು, ಮೇಧಾವಿಗಳು, ನಿಪುಣರು, ವಿಜ್ಞರಿಗೆ ವಿಭಾವಿಗಳಾದರು, ವಿನಿತರು, ವಿಶಾರದರು, ಬಹುಶ್ರುತರು, ತಿಪಿಟಕ ಪ್ರಾವಿಣ್ಯರು, ವೇದಜ್ಞರು, ಉನ್ನತಪ್ರಾಜ್ಞರು, ಸಾಮಥ್ರ್ಯರು, ಪೂರ್ಣ ಧೈರ್ಯವಂತರು ನವಾಂಗ ಧಮ್ಮಶಾಸನಾಧರರು, ಭಾಷೆಯಲ್ಲಿ ಕೌಶಲ್ಯವುಳ್ಳವರು, ತಕ್ಷಣ ಯೋಗ್ಯ ಉತ್ತರ ನೀಡಬಲ್ಲವರು, ಅರ್ಥ ಮತ್ತು ಅಕ್ಷರಗಳಿಂದ ಧಮ್ಮವನ್ನು ಬಲ್ಲವರು, ಕ್ಲಿಷ್ಟವಾಗಿರುವದನ್ನು ಬಿಡಿಸಬಲ್ಲವರು, ಖಂಡಿಸಿ ಶುದ್ಧೀಕರಿಸುವವರು, ಚಾಣಾಕ್ಷತನದ ಪ್ರಶ್ನೋತ್ತರ ನೀಡುವುದರಲ್ಲಿ ಕುಶಲರು, ಭಾಷಾ ಐಶ್ವರ್ಯ ಹೊಂದಿರುವವರು, ವಾಗ್ಝರಿಯ ಸೌಂದರ್ಯವುಳ್ಳವರು, ಅವರ ಸಮಾನ ತಲುಪುವುದೇ ಕಷ್ಟ. ಅವರನ್ನು ಮೀರಿಸುವುದು ಕಡುಕಷ್ಟಕರ. ಅವರಿಗೆ ಉತ್ತರಿಸುವುದೇ ಕ್ಲಿಷ್ಟಕರ. ಅವರನ್ನು ಖಂಡಿಸುವುದೇ ಅಸಾಧ್ಯ. ಅವರು ಸಾಗರದಂತೆ ಪ್ರಶಾಂತರು, ಪರ್ವತದಂತೆ ಅಚಲರು, ಮಾರ ಹೋರಾಟದಲ್ಲಿ ವಿಜಯಿಯು, ತಮೋ ದೂರಿಕರಿಸುವವರು, ಪ್ರಚಂಡ ಪ್ರಕಾಶ ನೀಡಬಲ್ಲವರು, ವಾಗ್ವೈಖರಿಯಲ್ಲಿ ಬೃಹತ್ ಶಕ್ತಿ, ಪರಪಂಗಡಗಳ ಗುರುಗಳಿಗೆ ದಿಗ್ಭ್ರಮೆಗೊಳಿಸುವವರು, ಮೂಢ ಮಿಥ್ಯಾ ಸಿದ್ಧಾಂತಗಳನ್ನು ಧ್ವಂಸ ಮಾಡುವವರು, ಭಿಕ್ಖು ಭಿಕ್ಖುಣಿಯರಿಂದ ಉಪಾಸಕಾ, ಉಪಾಸಿಕೆಯರಿಂದ ರಾಜರಿಂದ ಮತ್ತು ರಾಜ ಮಹಾಮಾತ್ಯರಿಂದ ಸತ್ಕರಿಸಲ್ಪಡುವವರು, ಮಾನ್ಯತೆ ಪಡೆದವರು ಪೂಜಿತರಾಗಿರುವವರಾಗಿದ್ದಾರೆ. ಸಂಘಕ್ಕೆ ಅತ್ಯಂತ ಸತ್ಕಾರ, ದಾನಗಳು, ಚೀವರಗಳು, ಪಿಂಡಪಾತ್ರೆಗಳು, ಶಯನಾಸನಗಳು, ವಸತಿಗಳು ಭಿಕ್ಕು ಜೀವನಕ್ಕೆ ಅಗತ್ಯವಾದ ವಸ್ತುಗಳೆಲ್ಲಾ ಇಗ ಹಿಂದಿಗಿಂತಲೂ ಹೆಚ್ಚಾಗಿ ಲಭಿಸತೊಡಗಿದವು. ವಿದ್ವಾಂಸರು ಮತ್ತು ಪ್ರಾಜ್ಞರು ಅವರಲ್ಲಿಗೆ ಬಂದು ಜಿನಶಾಸನ ರತ್ನದ ನವಾಂಗ ಧಮ್ಮವನ್ನು ಆಲಿಸತೊಡಗಿದರು. ಅವರು ಧಮ್ಮಾಮಾರ್ಗವನ್ನು ಮಾರ್ಗದಶರ್ಿಸಿದರು. ಧಮ್ಮ ಪ್ರಜ್ಯೋತಿಯನ್ನು ಬೆಳಗಿಸಿದರು, ಕೇಳುಗರಲ್ಲಿ ಧಮ್ಮ ಸ್ತಂಭವನ್ನು ಪ್ರತಿಷ್ಟಾಪಿಸಿದರು, ಧಮ್ಮಾ ಯಾಗದಿಂದ ಹಿತವನ್ನುಂಟು ಮಾಡಿದರು, ಧಮ್ಮಧ್ವಜವನ್ನು ಹಾರಿಸಿದರು, ಧಮ್ಮ ಶಂಖವನ್ನು ಊದಿದರು. ಧಮ್ಮಾನಗಾರಿಯನ್ನು ಬಾರಿಸಿದರು. ಅವರದ್ದು ಸಿಂಹನಾದ. ಹೇಗೆಂದರೆ ಇಂದ್ರನ ಘರ್ಜನೆ (ಗುಡುಗು)ಯಂತೆ. ಆದರೆ ಹಾಗೆಯೇ ಮಧುರ ಧ್ವನಿಯೂ ಸಹಾ. ಹೇರಳವಾದ ತುಂತುರು ಮಳೆಯಂತೆ ಅವರು ಧಮ್ಮ ಉಪದೇಶವನ್ನು ಸುರಿದರು. ಕರುಣೆಯ ಹನಿಗಳಂತೆ ಭಾರವಾಗಿ, ತಮ್ಮ ಮಿಂಚಿನಂತಹ ಜ್ಞಾನದ ಪ್ರಕಾಶತೆಯಿಂದ ಬೆಳಗಿದರು. ಬಾಯಾರಿದ ಈ ಜಗಕೆ ನಿಬ್ಬಾಣದ ಅಮರತ್ವದ ಮೇಘ ನೀರಿನಿಂದ ತೃಪ್ತಿಯುಂಟು ಮಾಡಿದರು. ಈ ರೀತಿಯಾಗಿ ಅವರು ಗ್ರಾಮ, ನಿಗಮ ರಾಜಧಾನಿಯಲ್ಲಿ ಚಲಿಸುತ್ತ ಸಾಗಲ ನಗರಕ್ಕೆ ಬಂದರು. ಅಲ್ಲಿ ಅವರು ಸಂಖೆಯ್ಯ ವಿಹಾರದಲ್ಲಿ ತಂಗಿದರು. ಅವರ ಜೊತೆ ಅಸಂಖ್ಯಾತ ಭಿಕ್ಖು ಸಮೂಹವು ಇತ್ತು. ಅವರಿಂದ ಹೀಗೆ ಹೇಳಲಾಗಿದೆ.
                ಬಹುಶ್ರುತರು ವಾಕ್ಚತುರತೆಯುಳ್ಳವರು, ನಿಪುಣರು ಮತ್ತು ವಿಶಾರದರೂ, ಶಾಂತರೂ, ಕುಶಲರೂ, ಸತ್ಯದರ್ಶನದಲ್ಲಿ ಕೋವಿದರೂ ಆದಂತಹ ತಿಪಿಟಕ ಜೀಣರ್ಿಸಿರುವ ಭಿಕ್ಖು, ಪವಿತ್ರ ಪದಗಳನ್ನು ಪಂಚಪಟ್ಟು ಪಠಿಸುವ, ಅಂತಹವರಲ್ಲಿ ನಾಗಾಸೇನರವರೇ ನಾಯಕ ಮತ್ತು ಪ್ರಧಾನ. ಗಂಭೀರ ಪ್ರಜ್ಞೆಯಲ್ಲಿ ಮೇಧಾವಿಯು, ಮಾರ್ಗಮಗ್ಗದಲ್ಲಿ ಕೋವಿದರು, ಉತ್ತಮ ಅರ್ಥವಾದ, ಅನುಪಮವಾದುದರಲ್ಲಿ (ನಿಬ್ಬಾಣದಲ್ಲಿ) ನಾಗಸೇನರು ವಿಶಾರದರು. ಭಿಕ್ಕುಗಳಿಂದ ಪರಿವೃತ್ತವಾಗಿ, ಸತ್ಯವಾದಗಳಲ್ಲಿ ನಿಪುಣರಾಗಿ, ಸತ್ಯವನ್ನೇ ಹಿಡಿದು ಗ್ರಾಮ ನಿಗಮಗಳಲ್ಲಿ ಚಲಿಸುತ್ತಾ ಸಾಗಲಕ್ಕೆ ಬಂದಿಹರು. ಸಂಖೆಯ್ಯ ವಿಹಾರದಲ್ಲಿ ನಾಗಸೇನರವರು ವಾಸಿಯಾಗಿ ಮನುಷ್ಯರಲ್ಲಿ ಪರ್ವತದ ಕೇಸರಿಯಂತೆ ಶೋಭಿಸುತ್ತಿದ್ದರು.
19. ನಾಗಾಸೇನ ಮತ್ತು ಮಿಲಿಂದರ ಪ್ರಥಮ ಸಮಾಗಮ
                ದೇವಮಂತಿಯನು ರಾಜ ಮಿಲಿಂದನಿಗೆ ಹೀಗೆ ಹೇಳಿದನು: ಸ್ವಲ್ಪತಾಳು, ಮಹಾರಾಜ, ಸ್ವಲ್ಪತಾಳು! ಒಬ್ಬ ಹಿರಿಯ ಥೇರರಿದ್ದಾರೆ, ಅವರೇ ನಾಗಸೇನರವರು. ಬಹುಶ್ರುತರು, ಸಮರ್ಥರು, ಪಂಡಿತರು, ಮೇಧಾವಿಯೂ ಹಾಗೆಯೇ ವಿನೀತರು, ವಿಶಾರದರು, ಧೈರ್ಯಶಾಲಿಯು, ಶಾಸ್ತ್ರಕೋವಿದರು, ಭಾಷಾ ನಿಪುಣರು ಮತ್ತು ತಕ್ಷಣ ಯೋಗ್ಯ ಉತ್ತರ ನೀಡಬಲ್ಲವರು. ಧಮ್ಮದ ಅಕ್ಷರ ಮತ್ತು ಅರ್ಥಗಳೆರಡನ್ನು ಅರಿಯುವಂತಹವರು, ಕ್ಲಿಷ್ಟವಾಗಿರುವುದನ್ನು ಸರಳವಾಗಿ ವಿವರಿಸುವವರು, ಪೂರ್ಣತೆಗಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ಖಂಡಿಸುವವರು ಆಗಿದ್ದಾರೆ. ಅಂತಹ ಮಹಾನುಭಾವರು ಸಂಖೆಯ್ಯ ವಿಹಾರದಲ್ಲಿ ತಂಗಿರುವರು. ಓ ರಾಜನೇ, ನೀವು ಅಲ್ಲಿಗೆ ಹೋಗಿ ಪ್ರಶ್ನೆಗಳನ್ನು ಹಾಕಿ, ಅವರೊಬ್ಬರೇ ನೀವು ಚಚರ್ಿಸಲು ಯೋಗ್ಯರಾಗಿರುವಂತಹವರು ಮತ್ತು ನಿಮ್ಮ ಸಂಶಯಗಳನ್ನು ನಿವಾರಿಸುವವರು ಆಗಿದ್ದಾರೆ.
                ಯಾವಾಗ ಮಿಲಿಂದ ಮಹಾರಾಜ ನಾಗಸೇನರ ಹೆಸರನ್ನು ಕೇಳಿದರೋ ತಕ್ಷಣ ಭಯವು ಆತನಲ್ಲಿ ಆಕ್ರಮಿಸಿತು. ಅಗೋಚರ ಚಿಂತೆಯು ಪ್ರವೇಶಿಸಿತು. ಮಿಲಿಂದ ಮಹಾರಾಜನ ಇಡೀ ಶರೀರದ ಕೂದಲುಗಳೆಲ್ಲಾ ಎದ್ದುನಿಂತಿತು. ಆದರೂ ದೇವಮಂತಿಯರವರಲ್ಲಿ ಈ ರೀತಿ ಕೇಳಿದರು.
                ನಿಜವಾಗಿಯು ಅವರು ಹಾಗಿರುವರೇ?
                ದೇವಮಂತಿಯರು ಈ ರೀತಿ ಪ್ರತಿಕ್ರಿಯೆ ನೀಡಿದರು ಖಂಡಿತವಾಗಿ ಅವರು ಅರ್ಹರು ಮಹಾರಾಜ, ಅವರಲ್ಲಿಗೆ ಚಚರ್ಿಸಲು ಜಗತ್ತಿನ ರಕ್ಷಣಾ ದೇವತೆಗಳಾದ ಇಂದ್ರ, ಯಮ, ವರುಣ, ಕುಬೇರ, ಪ್ರಜಾಪತಿ, ಸುಯಾಮ, ಸಂತುಶಿತ ಮತ್ತು ಮಹಾ ಬ್ರಹ್ಮರೇ ಬರುವಾಗ ಕೇವಲ ಮಾನವ ಮಾತ್ರರು ಅವರಿಗೆ ಲೆಕ್ಕವೇ!
                ಹಾಗಾದರೆ ದೇವಮಂತಿಯ, ನಾನು ಬರುವೆ ಎಂದು ದೂತನನ್ನು ಕಳುಹಿಸು.
                ದೇವಮಂತಿಯರು ಹಾಗೇ ಮಾಡಿದರು. ನಾಗಸೇನರವರು ಸಹಾ ತಾವು ಸಿದ್ಧರೆಂದು ಪ್ರತಿ ಸಂದೇಶ ಕಳುಹಿಸಿದರು. ರಾಜನು ತನ್ನ 500 ಯೋನಕರೊಂದಿಗೆ ರಾಜ ರಥವೇರಿ ಮಹಾ ಸಮೂಹದೊಡನೆ ಸಂಖೇಯ್ಯ ವಿಹಾರಕ್ಕೆ ನಾಗಸೇನ ಇರುವಲ್ಲಿಗೆ ಹೊರಟನು.

                ಆ ಸಮಯದಲ್ಲಿ ಪೂಜ್ಯ ನಾಗಸೇನರವರು ಅಸಂಖ್ಯಾತ ಭಿಕ್ಖುಗಣ ಸಂಘದ ಸಮೂಹದೊಡನೆ ಕುಳಿತಿದ್ದರು. ಆ ಸಭಾಂಗಣಕ್ಕೆ ಮಂಡಲಮಾಲ ಎಂದು ಹೆಸರು. ಅದು ಛಾವಣಿ ಮತ್ತು ಸ್ತಂಭಗಳಿಂದ ನಿಮರ್ಿತವಾಗಿತ್ತು. ದೂರದಿಂದಲೇ ಭಿಕ್ಷು ಸಮೂಹವನ್ನು ವೀಕ್ಷಿಸಿದ ಮಿಲಿಂದ ದೇವಮಂತಿಯರಲ್ಲಿ ಹೀಗೆ ಕೇಳಿದರು ದೇವಮಂತಿಯ ಈ ಬೃಹತ್ ಭಿಕ್ಷು ಸಮೂಹ ಯಾರದು?
                ಮಹಾರಾಜ ಆಯುಷ್ಮಂತ ನಾಗಸೇನರವರದ್ದೇ ಈ ಸಮೂಹವಾಗಿದೆ. ಆ ಬೃಹತ್ ದೃಶ್ಯ ಹಾಗು ಇದನ್ನು ಕೇಳಿ ಪ್ರತಾಪಿಯಾಗಿದ್ದ ರಾಜ ಮಿಲಿಂದನಲ್ಲೂ ಸಹ ಭಯ ಮತ್ತು ಚಿಂತೆಯ ಸಂವೇದನೆಗಳು ಉದಯಿಸಿ ಆತನ ಶರೀರದ ಕೂದಲುಗಳೆಲ್ಲಾ ಎದ್ದುನಿಂತಿತು. ಆಗ ಆತನ ಸ್ಥಿತಿಯು ಖಡ್ಗಮೃಗಗಳಿಂದ ಸುತ್ತುವರಿಯಲ್ಪಟ್ಟ ಆನೆಯಂತೆ, ಗರುಡಗಳಿಂದ ಆಕ್ರಮಣಕ್ಕೆ ಒಳಪಟ್ಟ ನಾಗನಂತೆ, ಹೆಬ್ಬಾವಿನಿಂದ ಸುತ್ತುವರೆಯಲ್ಪಟ್ಟ ನರಿಯಂತೆ, ಕಾಡೆಮ್ಮೆಗಳ ದಾಳಿಗೆ ಸಿಲುಕಿದ ಕರಡಿಯಂತೆ, ಹಾವಿನಿಂದ ಒತ್ತಡಕ್ಕೆ ಸಿಲುಕಿದ ಕಪ್ಪೆಯಂತೆ, ಚಿರತೆಯ ದಾಳಿಗೆ ಒಳಗಾದ ಜಿಂಕೆಯಂತೆ, ಹಾವಾಡಿಗನಿಗೆ ವಶವಾದ ಸರ್ಪದಂತೆ ಅಥವಾ ಮಾಂತ್ರಿಕನ ಮೋಡಿಗೆ ವಶವಾದ ದೆವ್ವದಂತೆ, ಗ್ರಹಣಗ್ರಸ್ತ ಚಂದಿರನಂತೆ ಅಥವಾ ಬುಟ್ಟಿಯಲ್ಲಿ ವಶವಾದ ಸರ್ಪದಂತೆ ಅಥವಾ ಪಂಜರದಲ್ಲಿ ಬಿದ್ದ ಹಕ್ಕಿಯಂತೆ, ಬಲೆಯಲ್ಲಿ ಬಿದ್ದ ಮೀನಿನಂತೆ, ಕಾಡಲ್ಲಿ ದಾರಿತಪ್ಪಿದ ಪಯಣಿಗನು ಕ್ರೂರ ಮೃಗಗಳ ದಾಳಿಗೆ ಸಿಲುಕಿದವನಂತೆ, ವೆಸ್ಸವಣ ಯಕ್ಷರಾಜನ ಬಳಿ ಪಾಪಿಯಕ್ಖ ಸಿಕ್ಕಿಕೊಂಡಂತೆ ಅಥವಾ ಆಯು ಮುಗಿದ ದೇವತೆಯು ಭಯಪಡುವಂತೆ, ಮಿಲಿಂದ ಮಹಾರಾಜನು ಭೀತನಾದನು ಮತ್ತು ಗೊಂದಲದಲ್ಲಿ ಸಿಲುಕಿದನು. ಆದರೂ ಆತನು ಜನರಿಂದ ಅಪಹಾಸ್ಯಕ್ಕೆ ಈಡಾಗಬಾರದೆಂದು ಧೈರ್ಯ ತಂದುಕೊಂಡನು ಹಾಗು ದೇವಮಂತಿಯರಿಗೆ ಹೀಗೆ ಹೇಳಿದನು ನೀವು ನನಗೆ ನಾಗಸೇನರು ಯಾರು ಎಂದು ತಿಳಿಸುವುದು ಬೇಡ, ನಾನೇ ಅವರನ್ನು ಪತ್ತೆಹಚ್ಚುವೆ.
                ಖಂಡಿತ ಮಹಾರಾಜ, ನೀವೇ ಅವರನ್ನು ಪತ್ತೆಹಚ್ಚಬಲ್ಲಿರಿ.
                ನಾಗಸೇನರವರು ವಯಸ್ಸಿನಲ್ಲಿ ಹಾಗು ಸಂಘಕ್ಕೆ ಪಬ್ಬಜ್ಜ ಸ್ವೀಕರಿಸುವುದರಲ್ಲಿಯೂ ಕಿರಿಯರಾದರೂ ಪ್ರಜ್ಞಾತೀಷ್ಣತೆಯಲ್ಲಿ ಹಿರಿಯರೇ ಆಗಿದ್ದರು. ಅವರ ಮುಂದೆ ಅರ್ಧದಷ್ಟು ಸಮೂಹ ಕುಳಿತಿತ್ತು. ಅವರ ಹಿಂದೆಯೂ ಅರ್ಧದಷ್ಟು ಹಿರಿಯ ಸಮೂಹ ಕುಳಿತಿತ್ತು ಮತ್ತು ಅವರು ಇಡೀ ಸಮೂಹ ವೀಕ್ಷಿಸಿದರು. ಮುಂದೆ ಕೆಳಭಾಗದಲ್ಲಿ, ಮಧ್ಯದಲ್ಲಿ ಮತ್ತು ಹಿಂದೆ ಹೀಗೆ ಸಮೂಹ ವೀಕ್ಷಿಸಿ ನಾಗಸೇನರವನ್ನು ಗುರುತು ಹಿಡಿದರು.
                ನಾಗಸೇನರವರು ಮಧ್ಯಭಾಗದಲ್ಲಿ ಕುಳಿತಿದ್ದರು. ಅವರು ಯಾವುದೇರೀತಿಯ ಕಳವಳ, ನಾಚಿಕೆಯಿಲ್ಲದೆ, ಚಿಂತೆಯಿಲ್ಲದೆ, ಭಯವೂ ಇಲ್ಲದೆ ವಿಕಾರವೂ ಇಲ್ಲದೆ ಸಿಂಹದಂತೆ ಕುಳಿತಿದ್ದರು. ಯಾವಾಗ ಮಿಲಿಂದರು ನಾಗಸೇನರನ್ನು ಕಂಡರೋ ತಕ್ಷಣ ಆ ಮುಖಲಕ್ಷಣದಿಂದ ಮತ್ತು ದಿವ್ಯಭಾವದಿಂದಿದ್ದ ಅವರನ್ನು ಕಂಡು ಇವರೇ ನಾಗಸೇನ ಎಂದು ಮಿಲಿಂದರಿಗೆ ಖಚಿತವಾಯಿತು ಮತ್ತು ದೇವಮಂತಿಯರಿಗೆ ತೋರಿಸಿದರು.
                ಆಗ ದೇವಮಂತಿಯರು ಹೀಗೆ ಹೇಳಿದರು ಸಾಧು! ಮಹಾರಾಜ ನೀವು ಪತ್ತೆಹಚ್ಚಿರುವಿರಿ, ಅವರೇ ನಾಗಸೇನರವರು. ಆಗ ರಾಜರಿಗೂ ಸಹಾ ಪರರ ಸಹಾಯವಿಲ್ಲದೆ ಅವರನ್ನು ಪತ್ತೆಹಚ್ಚಿರುವೆನೆಂದು ಆನಂದವಾಯಿತು. ಆದರೂ ನಾಗಸೇನರವರನ್ನು ನೋಡುತ್ತಿದ್ದಂತೆ ಅವರಲ್ಲಿ ಕಳವಳ, ಚಿಂತೆ ಹಾಗು ಭಯ ಮೂಡುತ್ತಿತ್ತು. ಆದ್ದರಿಂದಲೇ ಹೀಗೆ ಹೇಳಲಾಗಿದೆ.
                ಆಚರಣ ಸಂಪನ್ನರು, ಧಮಿಸಲ್ಪಟ್ಟವರು ಹಾಗು ಅಂತಹವರಲ್ಲಿ ಉತ್ತಮರು. ಅಂತಹವರಾದ ನಾಗಸೇನರವರನ್ನು ರಾಜರು ಕಂಡೊಡನೆಯೇ ಹೀಗೆ ತಮ್ಮಲ್ಲೇ ಹೇಳಿಕೊಂಡರು.
                ಬಹಳಷ್ಟು ವಾಗ್ಮಿಗಳನ್ನು ನಾನು ದಿಟ್ಟಿಸಿರುವೆನು, ಹೇರಳ ಮಂದಿಯನ್ನು ಸಂದಶರ್ಿಸಿರುವೆನು. ಆದರೆ ಇಲ್ಲಿಯವರೆಗೆ ಎಂದಿಗೂ ಭಯ ಕಾಡಿರಲಿಲ್ಲ. ಇಂದೇಕೆ ಭಯ ಬಂದಿಹುದು. ಬಹು ಅಪರಿಚಿತ, ಬಹು ಭಯಾನಕತೆಯು ತನ್ನ ಹೃದಯದಲ್ಲಿ ಆವರಿಸಿರಬಹುದು, ನಿಸ್ಸಂದೇಹವಾಗಿ ಪರಾಜಯವು ನನಗೆ ಹಾಗು ಜಯವು ನಾಗಸೇನರಿಗೆ ಸಿಗುವುದೆಂದು ನನ್ನ ಚಿತ್ತಕ್ಕೆ ಸ್ಪಷ್ಟವಾಗಿ ಬಾಧಿಸುತ್ತಿದೆ.

ಇಲ್ಲಿಗೆ ಬಾಹ್ಯಕಥೆಯು ಸಮಾಪ್ತಿಯಾಯಿತು

No comments:

Post a Comment