2. ಅದ್ಧಾನ ವಗ್ಗೊ
1. ಧಮ್ಮಸಂತತಿ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಯಾರು ಪುನಃ ಹುಟ್ಟುವನೋ (ಪುನರ್ಜನ್ಮಿಸುವನೋ) ಆತನು ಅದೇ ಆಗಿರುತ್ತಾನೆಯೇ
ಅಥವಾ ಬೇರೆಯವನು ಆಗುತ್ತಾನೋ? (17)
ಅವನೇ ಅಲ್ಲ ಅಥವಾ ಹಾಗೆಯೇ ಅನ್ಯನೂ ಅಲ್ಲ.
ಹೇಗೆ ಉಪಮೆಯಿಂದ ಸ್ಪಷ್ಟಪಡಿಸಿ.
ನೀವು ಹೇಗೆ ಯೋಚಿಸುವಿರಿ ಓ ರಾಜ? ನೀವು ಒಮ್ಮೆ ಶಿಶುವಾಗಿದ್ದುಂಟು. ಆಗ ಕೋಮಲವಾಗಿ ಪುಟ್ಟದಾಗಿ
ಬೆನ್ನಮೇಲೆ ಮಲಗಿದ್ದಿರಿ. ಆಗಿನ ಆಕಾರವು ಮತ್ತು ಈಗ ಬೆಳೆದಿರುವ ನೀವು ಒಂದೇಯೇ?
ಇಲ್ಲ, ಆ ಶಿಶುವೇ ಬೇರೆ
ಮತ್ತು ಈಗಿರುವ ನಾನು ಬೇರೆ.
ನೀವು ಆ ಶಿಶು ಅಲ್ಲದಿದ್ದರೆ, ನಿಮಗೆ ತಂದೆ-ತಾಯಿಯರೇ ಇಲ್ಲವೇ? ಅಥವಾ ಯಾವ ಗುರುವು
ಇಲ್ಲವೇ? ನೀವು ವಿದ್ಯೆಯಾಗಲಿ, ಅಥವಾ ಶೀಲವಾಗಲಿ ಅಥವಾ ಪ್ರಜ್ಞಾವಾಗಲಿ ಕಲಿಯಲೇ ಇಲ್ಲವೇ? ಮಹಾರಾಜ, ತಾಯಿಯ
ಗರ್ಭದಲ್ಲಿರುವ ಪ್ರಥಮ ಹಂತದ ಬ್ರೂಣವು, ಎರಡನೆಯ ಅಥವಾ
ಮೂರನೆಯ ಅಥವಾ ನಾಲ್ಕನೆಯ ಹಂತದ ಭ್ರೂಣಕ್ಕೆ ಭಿನ್ನವೇ? ಶಿಶುವಿನ ತಾಯಿಯು
ಬೇರೆ ಮತ್ತು ಬೆಳೆದುನಿಂತ ಯುವಕನ ತಾಯಿಯು ಬೇರೆಯೇ? ಶಾಲೆಗೆ ಹೋಗುವ
ವ್ಯಕ್ತಿ ಬೇರೆ ಮತ್ತು ಶಾಲೆಯ ಶಿಕ್ಷಣ ಪೂರ್ಣಗೊಳಿಸಿದ ವ್ಯಕ್ತಿ ಬೇರೆಯೆ? ಅಪರಾಧ ಮಾಡಿದವನೊಬ್ಬ ಮತ್ತು ಶಿಕ್ಷೆಗೆ ಒಳಗಾಗಿ ಕೈಕಾಲು
ಕತ್ತರಿಸಿಕೊಳ್ಳಲ್ಪಡುವವ ಬೇರೆಯೇ?
ಖಂಡಿತ ಇಲ್ಲ, ಆದರೆ ಭಂತೆ ನೀವು ಹೇಗೆ ಹೇಳುವಿರಿ?
ಥೇರರು ಹೇಳಿದರು ನಾನು ಹೀಗೆ ಹೇಳುವೆ, ಶಿಶುವಾಗಿ ಮಲಗಿದ್ದಂತಹ ನಾನು ಈಗ ಬೆಳೆದು ಹೀಗಿದ್ದೇನೆ, ಇವೆಲ್ಲಾ ಸ್ಥಿತಿಗಳು ಈ ದೇಹದಿಂದ ಆಯಿತು.
ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿ.
ಓ ಮಹಾರಾಜ, ಒಬ್ಬ ವ್ಯಕ್ತಿ ದೀಪವನ್ನು ಹಚ್ಚಿದರೆ, ಅದು ಇಡೀ ರಾತ್ರಿ ಉರಿಯುವುದು ಅಲ್ಲವೇ?
ಹೌದು ಉರಿಯುವುದು.
ಹಾಗಾದರೆ ಅದೇ ಜ್ವಾಲೆ ಪ್ರಥಮ ಯಾಮದಲ್ಲೂ
ಮತ್ತು ದ್ವಿತೀಯ ಯಾಮದಲ್ಲೂ ಉರಿಯುವುದೇ?
ಇಲ್ಲ.
ಅಥವಾ ದ್ವಿತೀಯ ಯಾಮದಲ್ಲೂ ಮತ್ತು ತೃತೀಯ
ಯಾಮದಲ್ಲೂ ಉರಿಯುವಂತಹ ಜ್ವಾಲೆಯು ಅದೇ ಆಗಿದೆಯೇ?
ಇಲ್ಲ.
ಹಾಗಾದರೆ ಪ್ರಥಮ ಯಾಮದ ದೀಪವು ಬೇರೆ, ದ್ವಿತೀಯದ್ದು ಬೇರೆ ಮತ್ತು ತೃತೀಯ ಯಾಮದ ದೀಪವು ಬೇರೆಯೇ?
ಇಲ್ಲ, ಅದೇ ದೀಪದಿಂದ
ಬೆಳಕು ಇಡೀ ರಾತ್ರಿ ವ್ಯಕ್ತವಾಗುತ್ತದೆ.
ಅದೇರೀತಿ ಓ ರಾಜನೆ, ವ್ಯಕ್ತಿಯ ನಿರಂತರತೆ ಆಗುವುದು, ಅಥವಾ ವಸ್ತುವಿನ
ಸ್ಥಿತಿ ನಡೆಸಿಕೊಂಡು ಬರುವುದು ಒಂದು ಜೀವಿಯಾಗಿ ಉಗಮಿಸುತ್ತದೆ, ಇನ್ನೊಂದು ಅಳಿಯುತ್ತದೆ ಮತ್ತು ಪುನರ್ಜನ್ಮವು ಸಹಾ ಹೀಗೆಯೇ
ಆಗುತ್ತದೆ. ಈ ರೀತಿಯಲ್ಲಿ ಅವನು ಪೂರ್ಣವಾಗಿ ಅದೇ ಆಗಿರುವುದಿಲ್ಲ. ಹಾಗೆಯೇ ಪೂರ್ಣವಾಗಿ ಅನ್ಯನೂ
ಆಗುವುದಿಲ್ಲ.
ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿ.
ಮಹಾರಾಜ, ಇದು ಹಾಲಿನಂತೆ.
ಹೇಗೆಂದರೆ ಹಸುವಿನಿಂದ ಹಾಲನ್ನು ತೆಗೆದುಕೊಂಡು ಸ್ವಲ್ಪಕಾಲದಲ್ಲಿ ಅದು ಮೊಸರಾಗುತ್ತದೆ, ನಂತರ ಅದು ಬೆಣ್ಣೆಯಾಗಿ ಪರಿವತರ್ಿತವಾಗುತ್ತದೆ. ನಂತರ ಅದು
ತುಪ್ಪವಾಗುತ್ತದೆ. ಈಗ ಹಾಲು ಮೊಸರು ಒಂದೇ ಎಂದು ಹೇಳಲಾಗುವುದೇ ಹಾಗೆಯೇ ಬೆಣ್ಣೆ ಅಥವಾ ತುಪ್ಪ
ಒಂದೇ ಎಂದು ಹೇಳಲಾಗುವುದೇ?
ಖಂಡಿತ ಇಲ್ಲ. ಆದರೆ ಅವು ಹಾಲಿನಿಂದ ಆದ
ಉತ್ಪನ್ನಗಳಾಗಿವೆ.
ಅದೇರೀತಿಯಲ್ಲಿ ಮಹಾರಾಜ, ವ್ಯಕ್ತಿಯ ಅಥವಾ ವಸ್ತುವಿನ ಧಮ್ಮಸಂತತಿಯಾಗು ವುದು (ನಿರಂತರತೆ
ನಡೆದುಕೊಂಡು ಬರುವುದು). ಒಂದು ಜೀವಿಯಾಗಿ ಉಗಮಿಸುವುದು, ಅನ್ಯವೂ ಅಳಿಯುವುದು
ಮತ್ತು ಪುನರ್ಜನ್ಮವೂ ಸಹ ಹೀಗೆ ಆಗುವುದು. ಹೀಗಾಗಿ ಅವನು ಪೂರ್ಣವಾಗಿ ಅದೇ ಆಗಿರುವುದಿಲ್ಲ, ಹಾಗೆಯೇ ಪೂರ್ಣವಾಗಿ ಅನ್ಯನೂ ಆಗಿರುವುದಿಲ್ಲ.
ಚೆನ್ನಾಗಿ ವಿವರಿಸಿದಿರಿ ನಾಗಸೇನರವರೆ.
2. ಪತಿಸಂದಹನ ಪ್ರಶ್ನೆ (ಪುನರ್ಜನ್ಮ ಇಲ್ಲದಿರುವಿಕೆಯ ಅರಿವಿನ
ಪ್ರಶ್ನೆ)
ರಾಜನು ಕೇಳಿದನು ಭಂತೆ ನಾಗಸೇನ, ಯಾರು ಪುನರ್ಜನ್ಮ ಪಡೆಯುವುದಿಲ್ಲವೋ ಅತನಿಗೆ ಇದರ ಅರಿವು ಇರುತ್ತದೆಯೇ? (18)
ಖಂಡಿತ ಇರುತ್ತದೆ ಮಹಾರಾಜ.
ಹೇಗೆ ಇದರ ಅರಿವು ಆಗುತ್ತದೆ.
ಪುನರ್ಜನ್ಮಕ್ಕೆ ಕಾರಣವಾಗಿರುವಂತಹ ಮತ್ತು
ಸಹಾಯಕವಾಗಿರುವಂತಹ ಎಲ್ಲದರ ನಿರೋಧವಾಗಿರುವುದರಿಂದ ಆತನಿಗೆ ಅದರ ಅರಿವು ಆಗಿರುತ್ತದೆ.
ಉಪಮೆಯಿಂದ ಇದರ ಸ್ಪಷ್ಟೀಕರಣ ಮಾಡಿ.
ಮಹಾರಾಜ, ಕೃಷಿಕನೊಬ್ಬನು
ನೇಗಿಲು ಹೊಡೆದು, ಬಿತ್ತಿ ನಂತರ ಕಣಜ
ತುಂಬುತ್ತಾನೆ ಮತ್ತು ಕಾಲನಂತರ ಆತನು ನೇಗಿಲು ಹೊಡೆಯದೆ, ಬಿತ್ತದೆ, ಉಗ್ರಾಣದಲ್ಲಿ ಉಳಿದಿರುವುದರಲ್ಲಿ ಕಾಲ ಕಳೆಯುತ್ತಾನೆ. ಅದು ಖಾಲಿಯಾದ
ನಂತರ, ಆ ಕೃಷಿಕನಿಗೆ ಉಗ್ರಾಣ ಬರಿದಾಗಿರುವುದು ಅರಿವಿಗೆ
ಬರುವುದಿಲ್ಲವೇ?
ಹೌದು ಖಂಡಿತ ಬರುತ್ತದೆ.
ಆದರೆ ಹೇಗೆ ?
ಹೇಗೆಂದರೆ ಕಣಜ (ಉಗ್ರಾಣ)ವು ತುಂಬುವಂತಹ
ಮೂಲ ಕಾರಣ ಮತ್ತು ಸಹಾಯಕ ಅಂಶಗಳು ನಿಂತಿರುವುದರಿಂದಾಗಿ, ನಿರೋಧಿಸಿದ್ದರಿಂದಾಗಿ
ಆತನಿಗೆ ಇದರ ಅರಿವು ಬರುತ್ತದೆ.
ಮಹಾರಾಜ, ಅದೇರೀತಿಯಲ್ಲಿ
ಪುನರ್ಜನ್ಮಕ್ಕೆ ಕಾರಣವಾಗಿರುವಂತಹ ಹೇತು(ಕಾರಣ) ಪಚ್ಚಯಾ (ಸಹಾಯಕ ಅಂಶಗಳು) ಉಪಶಮನಗೊಂಡಾಗ
(ನಿರೋಧ) ಅತನಿಗೆ ಪುನರ್ಜನ್ಮವಾಗುವುದಿಲ್ಲ ಎಂದು ಗೊತ್ತಿರುತ್ತದೆ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
3. ಜ್ಞಾನ-ಪ್ರಜ್ಞಾ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಜ್ಞಾನ ಉದಯಿಸುವವನಲ್ಲಿ ಪ್ರಜ್ಞಾವೂ ಸಹಾ ಉದಯಿಸುತ್ತಿದೆಯೆ? (19)
ಹೌದು, ಮಹಾರಾಜ ಎಲ್ಲಿ
ಜ್ಞಾನವೂ ಉತ್ಪನ್ನವಾಗುವುದೋ ಅಲ್ಲಿ ಪ್ರಜ್ಞಾವೂ ಸಹ ಉತ್ಪನ್ನವಾಗುವುದು.
ಭಂತೆ ಜ್ಞಾನ ಮತ್ತು ಪ್ರಜ್ಞಾ ಎರಡೂ ಒಂದೆಯೇ? (20)
ಹೌದು.
ಹಾಗಾದರೆ ಆತನು ಜ್ಞಾನ ಅಥವಾ ಪ್ರಜ್ಞಾವನ್ನು
ಹೊಂದಿದ್ದು ಸಹಾ ಅರಿವಿಲ್ಲದೆ ದಿಗ್ಭ್ರಮೆಯಾಗಿರಬಹುದಾ? (21)
ಕೆಲವು ವಿಷಯಗಳಲ್ಲಿ ಹೌದು, ಹಲವಾರು ವಿಷಯಗಳಲ್ಲಿ ಇಲ್ಲ.
ಯಾವ ವಿಷಯಗಳಲ್ಲಿ ಆತನಿಗೆ ತೋಚದೆ ಇರಬಹುದು?
ಯಾವ ವಿಷಯಗಳನ್ನು ಆತನು ಅರಿತಿಲ್ಲವೋ
ಅದರಲ್ಲಿ ಆತನು ಅಜ್ಞಾನಿಯಾಗಿರುತ್ತಾನೆ. ಹೇಗೆಂದರೆ ಯಾವ ದೇಶಗಳನ್ನು ಆತನು ಕಂಡಿಲ್ಲವೋ, ಯಾವ ನಾಮಗಳು ಅಥವಾ ಸಂಜ್ಞೆಗಳು ಆತ ಕೇಳಿಲ್ಲವೋ, ಅರಿತಿಲ್ಲವೋ ಅವುಗಳಲ್ಲಿ ಆತನು ಅಜ್ಞಾನಿಯಾಗಿರುತ್ತಾನೆ.
ಯಾವ ವಿಷಯಗಳಲ್ಲಿ ಆತನು
ದಿಗ್ಭ್ರಮೆಯಾಗಿರುವುದಿಲ್ಲ?
ಮಹಾರಾಜ, ಪ್ರಜ್ಞೆಯ ವಿಷಯ
ಬಂದಾಗ. ಅಂದರೆ ಅನಿತ್ಯ, ದುಃಖ ಮತ್ತು ಅನಾತ್ಮ. ಈ
ವಿಷಯಗಳಲ್ಲಿ ಆತನು ಅಜ್ಞಾನಿಯಲ್ಲ.
ಹಾಗಾದರೆ ಅರಿವಿಲ್ಲದೆ ಇರುವಂತಹ ವಿಷಯಗಳು
ಏನಾಗುತ್ತವೆ.
ಯಾವಾಗ ಜ್ಞಾನವು ಉದಯಿಸುವುದೋ, ಆಗ ಅಜ್ಞಾನವು ಅಳಿಯುತ್ತದೆ.
ಇದನ್ನು ಉಪಮೆಯಿಂದ ಸ್ಪಷ್ಟಪಡಿಸಿ.
ಇದು ಹೇಗೆಂದರೆ ಮನುಷ್ಯನೊಬ್ಬ ಕತ್ತಲೆಯ
ಕೋಣೆಯಲ್ಲಿ ದೀಪವನ್ನು ತಂದಾಗ ಕತ್ತಲೆ ಮರೆಯಾಗುತ್ತದೆ ಮತ್ತು ಬೆಳಕು ತುಂಬುವುದು.
ನಾಗಸೇನ, ಆತನ ಪ್ರಜ್ಞೆಯು
ಏನಾಗುವುದು?
ಯಾವಾಗ ಪ್ರಜ್ಞಾವು ತನ್ನ ಕಾರ್ಯ
ನಿರ್ವಹಿಸಿದ ನಂತರ ಮರೆಯಾಗುವುದು, ಆದರೆ ಅದರಿಂದ
ಉಂಟಾಗುವ ಅನಿತ್ಯದ, ದುಃಖದ ಮತ್ತು ಅನಾತ್ಮದ
ಅರಿವು ಮಾತ್ರ ಮರೆಯಾಗುವುದಿಲ್ಲ.
ಇದನ್ನು ವಿವರವಾಗಿ ಉಪಮೆಯಿಂದ ತಿಳಿಸಿ.
ಇದು ಹೇಗೆಂದರೆ ಒಬ್ಬನು ರಾತ್ರಿಯಲ್ಲಿ
ಪತ್ರವನ್ನು ಬರೆದು ಕಳುಹಿಸಬೇಕಾಗಿರುತ್ತದೆ. ಆತನು ಗುಮಾಸ್ತನನ್ನು ಕರೆದು ದೀಪವನ್ನು ಉರಿಸಿ
ಪತ್ರ ಬರೆಯುತ್ತಾನೆ. ತನ್ನ ಕಾರ್ಯದ ನಂತರ ಆತನು ದೀಪವನ್ನು ಆರಿಸಿಬಿಡುತ್ತಾನೆ. ಆದರೆ ದೀಪವು
ಆರಿಸಲ್ಪಟ್ಟರೂ ಅದರಿಂದ ಉಪಯೋಗವಾದ ಪತ್ರವು ಹಾಗೆ ಉಳಿದಿರುತ್ತದೆ. ಹೀಗೆ ಪ್ರಜ್ಞಾವು ಮರೆಯಾದರೂ
ಅನಿತ್ಯಾ, ದುಃಖ, ಅನಾತ್ಮದ ವಿಲಕ್ಷಣ
ಜ್ಞಾನ ಉಳಿದಿರುತ್ತದೆ.
ಇದನ್ನು ಸ್ಪಷ್ಟವಾದ ಉಪಮೆಯಿಂದ ವಿವರಿಸಿ.
ಪೂರ್ವ ಜನಪದಗಳಲ್ಲಿ ಕೃಷಿಕರು ತಮ್ಮ ಪ್ರತಿ
ಗುಡಿಸಲು ಮನೆಗಳ ಹತ್ತಿರ ಬಿಂದಿಗೆಗಳಷ್ಟು ನೀರನ್ನು ಇಟ್ಟಿರುತ್ತಾರೆ. ಇದಕ್ಕೆ ಕಾರಣವೇನೆಂದರೆ
ಅಕಸ್ಮಾತ್ ಬೆಂಕಿ ಹತ್ತಿಕೊಂಡರೆ ಆರಿಸಲು. ಒಂದುವೇಳೆ ಹಾಗೆ ಬೆಂಕಿ ಹೊತ್ತಿಕೊಂಡರೆ ಈ
ಬಿಂದಿಗೆಗಳಿಂದ ನೀರು ಸುರಿಸಿ ಬೆಂಕಿ ಆರಿಸುತ್ತಾರೆ. ಹೀಗೆ ಆರಿಸಿದ ಮೇಲೆ ಆ ಕೃಷಿಕರು ಪುನಃ ಆ
ಬಿಂದಿಗೆಗಳ ಬಳಕೆಯನ್ನು ಯೋಚಿಸುವರೇ?
ಇಲ್ಲ ಭಂತೆ, ಅದರ ಕಾರ್ಯ ನೆರವೇರಿತು. ಈಗ ಆ ಬಿಂದಿಗೆಗಳ ಉಪಯೋಗವಿಲ್ಲ.
ಅದೇರೀತಿಯಲ್ಲಿ ಇಲ್ಲಿ ಐದು
ಬಿಂದಿಗೆಗಳೆಂದರೆ ಪಂಚೇಂದ್ರಿಯಗಳಾದ ಶ್ರದ್ಧಾ ಇಂದ್ರಿಯ, ವಿರಿಯಾ ಇಂದ್ರಿಯ, ಸ್ಮೃತಿ ಇಂದ್ರಿಯ, ಸಮಾಧಿ ಇಂದ್ರಿಯ, ಪನ್ನೀಂದ್ರಿಯವಾಗಿದೆ. ಇಲ್ಲಿ ಕೃಷಿಕರೆಂದರೆ ಭಿಕ್ಷುಗಳಾಗಿದ್ದಾರೆ, ಅದರ ಪ್ರಯತ್ನಶೀಲತೆಯಲ್ಲಿ ನಿಷ್ಣಾತರಾಗಿರುತ್ತಾರೆ. ಇಲ್ಲಿ
ಬೆಂಕಿಯೆಂದರೆ ಕ್ಲೇಶಗಳಾಗಿವೆ, ಹೇಗೆ ಬೆಂಕಿಯನ್ನು
ಐದು ಬಿಂದಿಗೆ ನೀರಿನಿಂದ ಆರಿಸಲಾಗಿದೆಯೋ, ಅದೇರೀತಿಯಲ್ಲಿ
ಪಂಚೇಂದ್ರಿಯಗಳಿಂದ ಕ್ಲೇಷಾಗ್ನಿಯನ್ನು ಆರಿಸಲಾಗಿದೆ ಮತ್ತು ಇಲ್ಲಿ ಒಮ್ಮೆ ಆರಿಹೋದ ಕ್ಲೇಷಾಗ್ನಿ
ಮತ್ತೊಮ್ಮೆ ಉರಿಯಲಾಗದು.
ದಯವಿಟ್ಟು ಇನ್ನೊಂದು ಉಪಮೆಯಿಂದ
ಸ್ಪಷ್ಟಪಡಿಸಿರಿ.
ಇದು ಹೇಗೆಂದರೆ ವೈದ್ಯನೊಬ್ಬನು ರೋಗಿಯನ್ನು
ಐದು ವಿಧದ ಗಿಡಮೂಲಿಕೆ ಗಳಿಂದ ಕಷಾಯ ತಯಾರಿಸಿ ಆತನಿಗೆ ಕುಡಿಯಲು ನೀಡಿದಾಗ ರೋಗಿಯ ರೋಗವು
ಇನ್ನಿಲ್ಲವಾಗುತ್ತದೆ. ಈಗ ಆ ರೋಗಿಗೆ ಮತ್ತೆ ಔಷಧದ ಅಗತ್ಯವಿದೆಯೇ?
ಖಂಡಿತ ಇಲ್ಲ, ಔಷಧಿಯು ತನ್ನ ಕ್ರಿಯೆ ಮಾಡಿದೆ, ಇನ್ನು ಅದರ ಅಗತ್ಯವಿಲ್ಲ.
ಮಹಾರಾಜ, ಅದೇರೀತಿಯಲ್ಲಿ
ಕ್ಲೇಷಗಳು, ಪಂಚೇಂದ್ರಿಯಗಳಿಂದ ನಾಶವಾಗುತ್ತವೆ. ಆಗ ಅದರಲ್ಲಿ
ಒಂದಾದ ಪನ್ಯಾವೂ (ಪ್ರಜ್ಞಾ) ಸಹಾ ಅಳಿಯುತ್ತದೆ, ಆದರೆ ಜ್ಞಾನವು
ಮಾತ್ರ ಉಳಿದಿರುತ್ತದೆ.
ಇನ್ನೊಂದು ಉಪಮೆಯಿಂದ ಸ್ಪಷ್ಟವಿವರಣೆ
ನೀಡುವಿರಾ?
ಯೋಧನೊಬ್ಬನು ಯುದ್ಧದಲ್ಲಿ ತೊಡಗಿರುವಾಗ ಐದು
ಈಟಿಗಳೊಂದಿಗೆ ಹೋಗುತ್ತಾನೆ ಮತ್ತು ಯುದ್ಧದಲ್ಲಿ ಅದೇ ಈಟಿಗಳನ್ನು ಬಳಸಿ ಶತ್ರುವಿನ ದಮನ
ಮಾಡುತ್ತಾನೆ. ಆಗ ಶತ್ರು ಸೋತು ಹೋಗುತ್ತಾನೆ, ಆಗ ಆತನಿಗೆ ಈಟಿಗಳ
ಉಪಯೋಗವಿಲ್ಲದೆ ಹೋಗುತ್ತದೆ. ಇದೇರೀತಿಯಲ್ಲಿ ಪಂಚೇಂದ್ರಿಯಗಳಿಂದ ಕ್ಲೇಷಗಳು ನಾಶವಾಗಿ ಜ್ಞಾನವು
ಮಾತ್ರ ಉಳಿಯುತ್ತದೆ.
ಅರ್ಥವಾಗುವಂತೆ ಚೆನ್ನಾಗಿ ವಿವರಿಸಿದಿರಿ
ನಾಗಸೇನ.
4. ಪಟಿಸಂದಹನ ಪುಗ್ಗಲ ವೇದಿಯನ ಪನ್ಹೊ (ಅರಹಂತರ ವೇದನೆ ಪ್ರಶ್ನೆ)
ರಾಜರು ಕೇಳಿದರು : ಭಂತೆ ನಾಗಸೇನ, ಯಾರು ಮತ್ತೆ ಪುನರ್ಜನ್ಮ ಪಡೆಯುವುದಿಲ್ಲವೊ ಆತನು ಅಪ್ರಿಯವಾದ
ವೇದನೆಗಳನ್ನು ಅನುಭವಿಸುತ್ತಾನೆಯೇ?(22)
ಕೆಲವು ಅನುಭವಿಸುತ್ತಾನೆ ಮತ್ತು ಹಲವು
ಇಲ್ಲ.
ಅವು ಯಾವುವು?
ಓ ಮಹಾರಜ, ಆತನು ಶಾರೀರಿಕ ವೇದನೆಗಳನ್ನು ಅನುಭವಿಸುತ್ತಾನೆ. ಆದರೆ ಮಾನಸಿಕ
ವೇದನೆಗಳನ್ನು ಅನುಭವಿಸಲಾರ.
ಅದು ಹೇಗೆ?
ಏಕೆಂದರೆ ಶಾರೀರಿಕ ವೇದನೆಗಳಿಗೆ ಹೇತು
(ಕಾರಣ) ಮತ್ತು ಪಚ್ಚಯಾ (ಸಹಾಯಕ ಅಂಶಗಳು)ದ ಕಾರಣದಿಂದ ವೇದನೆ ಮುಂದುವರೆಯುತ್ತದೆ, ದೇಹವಿರುವವರೆಗೆ ಅನುಭವಿಸಲೇ ಬೇಕಾಗುತ್ತದೆ. ಆದರೆ ಮಾನಸಿಕ ವೇದನೆಗಳ
ಕಾರಣ ಮತ್ತು ಸಹಾಯಕ ಅಂಶಗಳು ನಿರೋಧಗೊಂಡಿದ್ದರಿಂದ, ಆತನು ಮಾನಸಿಕ
ವೇದನೆಗಳನ್ನು ಅನುಭವಿಸಲಾರ. ಆದ್ದರಿಂದಲೇ ಭಗವಾನರು ಹೀಗೆ ಹೇಳುತ್ತಾರೆ:
ಒಂದೇ ವಿಧದ ವೇದನೆ ಆತ ಅನುಭವಿಸುತ್ತಾನೆ, ಅದೇ ಶಾರೀರಿಕ. ಆದರೆ ಮಾನಸಿಕ ಎಂದಿಗೂ ಇಲ್ಲ.
ಹಾಗಿರುವಾಗ ಆತನು ಪರಿನಿಬ್ಬಾಣವನ್ನು ಏಕೆ
ಪಡೆಯಬಾರದು?
ಓ ಮಹಾರಾಜನೇ, ಅರಹಂತನಲ್ಲಿ ಜೀವನದ/ಮರಣದ ಬಗ್ಗೆ ರಾಗವಾಗಲಿ ಅಥವಾ ದ್ವೇಷವಾಗಲಿ
ಇರುವುದಿಲ್ಲ. ಆತನು ಪಕ್ವವಾಗಿಲ್ಲದ ಫಲಗಳನ್ನು ಅಲ್ಲಾಡಿಸಿ ಬೀಳಿಸಿ ಬಳಸುವುದಿಲ್ಲ. ಆದರೆ ಪ್ರಕೃತಿಗೆ (ಮರಣಕ್ಕೆ)
ಕಾಯುತ್ತಾನೆ. ಆದ್ದರಿಂದಲೇ ಓ ರಾಜ, ಸಾರಿಪುತ್ತರು ಹೀಗೆ
ಹೇಳಿದ್ದಾರೆ:
ಮರಣಕ್ಕಾಗಲಿ, ಜೀವಿತಕ್ಕಾಗಲಿ ನಾನು ಅಭಿನಂದನೆ ಮಾಡುವದಿಲ್ಲ
(ಸ್ವಾಗತಿಸುವುದಿಲ್ಲ/ಅಂಟುವುದಿಲ್ಲ). ಕಾಲಕ್ಕೆ ಎದುರು ನೋಡುತ್ತೇನೆ, ಹೇಗೆ ದಾಸನು ಭತ್ಯೆಗೆ ಕಾಯುವನೋ ಹಾಗೆ ಮರಣಕ್ಕಾಗಲಿ, ಜೀವಿತಕ್ಕಾಗಲಿ ಅಭಿನಂದನೆ ನಾ ಮಾಡುವುದಿಲ್ಲ. ಎಚ್ಚರಿಕೆಯಿಂದ ಮತ್ತು
ಸ್ಪಷ್ಟ ಅರಿವಿನಿಂದ ನನ್ನ ಕಾಲವನ್ನು ಕಳೆಯುತ್ತೇನೆ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
5. ವೇದನೆಯ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಪ್ರಿಯವಾದ ವೇದನೆಯು ಕುಶಲವೇ, ಅಕುಶಲವೇ ಅಥವಾ
ಅಬ್ಬಾಕತಾವೇ (ತಟಸ್ಥವೇ)? (23)
ಇದರಲ್ಲಿ ಯಾವುದಾದರೂ ಅಗಬಹುದು.
ಆದರೆ ಭಂತೆ, ಒಂದುವೇಳೆ ಕುಶಲವು ದುಃಖವಲ್ಲದೆ ಹೋದಾಗ ಮತ್ತು ದುಃಖವು ಕುಶಲವಲ್ಲದೆ
ಹೋದಾಗ ಕುಶಲವು ಅದೇವೇಳೆ ದುಃಖವು ಉದಯಿಸಲಾರದು.
ಮಹಾರಾಜ, ಇದರ ಬಗ್ಗೆ ಏನನ್ನು
ಹೇಳುವಿ, ಒಂದುವೇಳೆ ಒಬ್ಬನು ಏಕಕಾಲದಲ್ಲಿ ಒಂದು ಅಂಗೈಯಲ್ಲಿ
ಕೆಂಪಾಗಿ ಕಾದಿರುವ ಕಬ್ಬಿಣದ ಚೆಂಡು, ಮತ್ತೊಂದು ಕೈಯಲ್ಲಿ
ಮಂಜುಗಡ್ಡೆಯ ಚೆಂಡನ್ನು ಹಿಡಿದಿರುವಾಗ ಆತನ ಕೈಗಳಿಗೆ ಎರಡೂ ಹಾನಿ ಮಾಡುವುದೋ ಇಲ್ಲವೋ?
ಖಂಡಿತ ಎರಡೂ ಹಾನಿ ಮಾಡುವುದು.
ಆದರೆ ಅವು ಎರಡೂ ಬಿಸಿಯಾಗಿದ್ದವೇ?
ಖಂಡಿತ ಇಲ್ಲ.
ಹಾಗಿದ್ದರೆ ಅವು ಎರಡೂ ತಂಪಾಗಿದ್ದವೇ?
ಇಲ್ಲ.
ಹಾಗಾದಾಗ ನೀವು ಹೇಳಿದ್ದು ತಪ್ಪು ಎಂದು
ನೀವೇ ಒಪ್ಪಿಕೊಂಡಂತೆ ಆಯಿತು. ಬಿಸಿಯು ಸುಡುವಂತಿದ್ದರೆ ಎರಡೂ ಬಿಸಿಯಾಗಿಲ್ಲ. ಹೀಗಿರುವಾಗ ನೋವು
ಬಿಸಿಯಿಂದಲೇ ಬರುವುದಿಲ್ಲ. ತಂಪಿನಿಂದಲೇ ಸುಡುವ ಹಾಗಿದ್ದರೆ ಅವೆರಡು ತಂಪಲ್ಲ. ಹೀಗಿರುವಾಗ ನೋವು
ತಂಪಿನಿಂದಲೇ ಬರುವುದಿಲ್ಲ, ಏಕೆಂದರೆ ಅವೆರಡು ಬಿಸಿಯಲ್ಲ, ಹಾಗೆಯೇ ಅವರೆಡು ತಂಪಲ್ಲ. ನೋವು ಬಿಸಿಯಿಂದಲೂ ಬರುತ್ತಿಲ್ಲ ಅಥವಾ
ತಂಪಿನಿಂದಲೂ ಬರುತ್ತಿಲ್ಲ ಎಂದು ಅರ್ಥವೇ?
ಭಂತೆ, ನಾನು
ವಾದವಿವಾದದಲ್ಲಿ ನಿಮ್ಮ ಸಮಾನನಲ್ಲ, ದಯವಿಟ್ಟು ಈ
ಪ್ರಕ್ರಿಯೆ ಹೇಗೆ ಜರುಗುವುದು ವಿವರಿಸಿ.
ಆಗ ಥೇರರು ರಾಜನಿಗೆ ಅಭಿಧಮ್ಮವನ್ನು
ವಿವರಿಸಿದರು:
ಓ ರಾಜನೇ, ಆರು ಸುಖಗಳು ಲೋಕಕ್ಕೆ ಸಂಪರ್ಕ ಹೊಂದಿವೆ ಮತ್ತು ಆರು ತ್ಯಾಗಕ್ಕೆ
ಸಂಪರ್ಕ ಹೊಂದಿವೆ. ಹಾಗೆಯೇ ಆರು ದುಃಖಗಳು ಲೋಕಕ್ಕೆ ಸಂಪರ್ಕ ಹೊಂದಿವೆ ಮತ್ತು ಆರು ತ್ಯಾಗಕ್ಕೆ
ಸಂಪರ್ಕ ಹೊಂದಿವೆ ಮತ್ತು ಆರು ತಟಸ್ಥ ವೇದನೆಗಳು ಲೋಕಕ್ಕೆ ಸಂಪರ್ಕ ಹೊಂದಿವೆ ಮತ್ತು ಆರು
ತ್ಯಾಗಕ್ಕೆ ಸಂಪರ್ಕ ಹೊಂದಿವೆ. ಈ ರೀತಿಯಾಗಿ ಆರರ ಆರು ಶ್ರೇಣಿಗಳಾದವು. ಅಂದರೆ 36
ವೇದನೆಗಳಾದವು. ಈ ಪ್ರತಿ 36 ಭೂತದ, 36 ವರ್ತಮಾನದ
ಮತ್ತು 36 ಭವಿಷ್ಯದ ವೇದನೆಗಳು ಒಟ್ಟಾರೆ 108 ವೇದನೆಗಳಾದವು.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
6. ನಾಮರೂಪದ ಏಕತ್ವ ನಾನತ್ವ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಪುನರ್ಜನ್ಮ ಪಡೆಯುವಂತಹದು ಯಾವುದು? (24)
ಮಹಾರಾಜ, ನಾಮರೂಪವೇ (ಮನಸ್ಸು
ಮತ್ತು ದೇಹ) ಪುನರ್ಜನ್ಮ ಪಡೆಯುವುದು.
ಹಾಗಿದ್ದರೆ ಇದೇ ನಾಮರೂಪವು ಪುನರ್ಜನ್ಮ
ಪಡೆಯುತ್ತದೆಯೇ?
ಇಲ್ಲ, ಈ ನಾಮರೂಪದಿಂದ
ಕೆಲವು ಕರ್ಮಗಳು ಆದವು. ಕುಶಲ ಅಥವಾ ಅಕುಶಲ ಮತ್ತು ಈ ಕರ್ಮದಿಂದಾಗಿ ಮತ್ತೊಂದು ನಾಮರೂಪದ
ಪುನರ್ಜನ್ಮ ಲಭಿಸುವುದು.
ಭಂತೆ ಹೀಗಿರುವಾಗ ಹೊಸ ಜನ್ಮ ತಾಳುವಂತಹದು
ತನ್ನ ಪಾಪಕರ್ಮದಿಂದ ಮುಕ್ತವಾಗುವುದೇ?
ಅದು ಪುನರ್ಜನ್ಮ ಪಡೆಯದೆ ನಿಬ್ಬಾಣ ಪಡೆದರೆ
ಹೌದು, ಆದರೆ ಅದು ಪುನರ್ಜನ್ಮ ಪಡೆಯುವಂತಿದ್ದರೆ ತನ್ನ ಪಾಪ ವಿಪಾಕದಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲ.
ದಯವಿಟ್ಟು ಉಪಮೆಯಿಂದ ಸ್ಪಷ್ಟಪಡಿಸಿ.
ಓ ಮಹಾರಾಜ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮಾವಿನ ಹಣ್ಣನ್ನು ಕದಿಯುವಾಗ
ಆತನು ಹಿಡಿದು ರಾಜನ ಮುಂದೆ ಶಿಕ್ಷಿಸಲು ನಿಲ್ಲಿಸಿದಾಗ ಕಳ್ಳನು ತನ್ನ ಸಮರ್ಥನೆಗಾಗಿ ಈ ರೀತಿ
ಹೇಳುತ್ತಾನೆ ಮಹಾಪ್ರಭು, ನಾನು ಆತನ ಮಾವಿನ
ಹಣ್ಣುಗಳನ್ನು ಕದ್ದಿಲ್ಲ. ಏಕೆಂದರೆ ನಾನು ತೆಗೆದುಕೊಂಡ ಮಾವಿನ ಹಣ್ಣುಗಳು ಆತನ ನೆಲದಲ್ಲಿ
ಬಿತ್ತಿದ್ದಂತೂ ಖಂಡಿತ ಅಲ್ಲ, ಹೀಗಾಗಿ ನಾನು
ಶಿಕ್ಷಾರ್ಹನಲ್ಲ. ಈಗ ಹೇಳಿ ಆತನು ಅಪರಾಧಿಯೇ?
ಖಂಡಿತವಾಗಿ ಆತನು ಶಿಕ್ಷಾರ್ಹ ಅಪರಾಧಿಯೇ?
ಅದು ಹೇಗೆ?
ಏಕೆಂದರೆ ಆತನು ಏನೇ ಸಮರ್ಥನೆ
ಮಾಡಿಕೊಳ್ಳಬಹುದು. ಆದರೆ ಆತನು ತೆಗೆದುಕೊಂಡ ಮಾವುಗಳು ನೆಲದಲ್ಲಿ ಬಿತ್ತಿದ ಮಾವಿನ ಫಲದ
ಫಲಿತಾಂಶದಿಂದಲೇ ಬಂದುದಾಗಿದೆ.
ಅದೇರೀತಿಯಲ್ಲಿ ಮಹಾರಾಜ, ಈ ನಾಮರೂಪದಿಂದ (ಮನಸ್ಸು, ದೇಹ)
ಪಾಪಪುಣ್ಯಗಳನ್ನು ಮಾಡಿ ಮರುಜನ್ಮ ಪಡೆದಾಗ ಆ ಕರ್ಮಫಲದಿಂದ ತಪ್ಪಿಸಿಕೊಳ್ಳಲಾಗದು.
ಇನ್ನೊಂದು ಉಪಮೇಯಿಂದ ಸ್ಪಷ್ಟಪಡಿಸಿ.
ಒಂದುವೇಳೆ ಸಾಲಿ ಅಕ್ಕಿ ಅಥವಾ ಕಬ್ಬು
ಕಳುವಾದಾಗ, ಹಿಂದಿನಂತೆ ಮಾವಿಗೆ ಹೇಳಿದಂತೆಯೇ... ಅಥವಾ ಇದು
ಹೇಗೆಂದರೆ ಒಬ್ಬ ಮನುಷ್ಯ ಚಳಿಗಾಲದಲ್ಲಿ ತನ್ನನ್ನು ಬೆಚ್ಚಗಿರಿಸಲು ಬೆಂಕಿ ಉತ್ಪನ್ನಗೊಳಿಸಿ
ಬೆಚ್ಚಗಾಗಿ ನಂತರ ಆ ಬೆಂಕಿಯನ್ನು ಹಾಗೆಯೇ ಬಿಟ್ಟು ಹೊರಟುಹೋಗುತ್ತಾನೆ. ಆನಂತರ ಆ ಬೆಂಕಿಯು
ಪಕ್ಕದ ಹೊಲಕ್ಕೆ ಹಬ್ಬಿ ಅದು ಸುಟ್ಟಹೋಗುತ್ತದೆ. ಆಗ ಜನರು ಆತನನ್ನು ಹಿಡಿದು ರಾಜನ ಬಳಿಗೆ
ಕರೆತಂದು ಅಪರಾಧಿಯನ್ನಾಗಿ ನಿಲ್ಲಿಸುತ್ತಾರೆ. ಆಗ ಆತನು ರೀತಿ ತನ್ನನ್ನು
ಸಮಥರ್ಿಸಿಕೊಳ್ಳುತ್ತಾನೆ. ಮಹಾಪ್ರಭು ಪಕ್ಕದ ಹೊಕ್ಕೆ ಬೆಂಕಿಯಿಟ್ಟಿದ್ದು ನಾನಲ್ಲ. ನಾನು ಬೇರೆಡೆ
ಬೆಂಕಿಯಿಟ್ಟದ್ದು ನಿಜ. ಆದರೆ ಇದು ಹಬ್ಬಿ ಹಾಗೇ ಹೋಗಿದೆ, ಆದ್ದರಿಂದ ನಾನು
ಅಪರಾಧಿಯಲ್ಲ. ಈಗ ಹೇಳು ಮಹಾರಾಜ, ಆತ ಅಪರಾಧಿಯೇ ಅಥವಾ
ಅಲ್ಲವೇ?
ಖಂಡಿತ ಅಪರಾಧಿಯೆ.
ಹೇಗೆ?
ಆತನು ಹೇಗೆಯೇ ಸಮಥರ್ಿಸಿಕೊಳ್ಳಬಹುದು, ಆತನು ಹಿಂದೆ ಅಲ್ಲಿ ಬೇಜಾವಾಬ್ದಾರಿಯಿಂದ ಬೆಂಕಿ ಬಿಟ್ಟಿದ್ದು, ನಂತರ ಆ ಬೆಂಕಿಯಿಂದಲೇ ಪಕ್ಕದ ಹೊಲವು ಸುಡಲ್ಪಟ್ಟಿದೆ. ಆ ಬೆಂಕಿಯ
ಉತ್ಪನ್ನದ ಪರಿಣಾಮವೇ ಈ ಬೆಂಕಿಯಾಗಿದೆ.
ಅದೇರೀತಿಯಲ್ಲಿ ಮಹಾರಾಜ, ಈ ನಾಮರೂಪದಿಂದ ಅಕುಶಲ, ಕುಶಲ ಕರ್ಮಗಳನ್ನು
ಮಾಡಿ ನಂತರ ಅದರ ಪರಿಣಾಮದಿಂದಲೇ ಪುನರ್ಜನ್ಮವಾಗುವುದು, ಹಾಗಿರುವಾಗ
ಪುನರ್ಜನ್ಮ ತಾಳಿದ ನಾಮರೂಪವು ಹಿಂದಿನ ಕರ್ಮ ವಿಪಾಕದಿಂದ ಬಿಡುಗಡೆ ಹೊಂದಲಾರದು.
ದಯವಿಟ್ಟು ಇನ್ನೊಂದು ಉಪಮೆಯಿಂದ
ಸ್ಪಷ್ಟಪಡಿಸಿ.
ಓ ಮಹಾರಾಜರೇ, ಒಬ್ಬ ಮನುಷ್ಯ ಒಂದು ದೀಪವನ್ನು ತೆಗೆದುಕೊಂಡು ತನ್ನ ಮೇಲಿನ ಅಂತಸ್ತಿನ
ಮಹಡಿಗೆ ತೆಗೆದುಕೊಂಡು ಹೋಗುತ್ತಾನೆ ಮತ್ತು ಅಲ್ಲಿ ಊಟ ಮಾಡುತ್ತಾನೆ. ನಂತರ ಆ ದೀಪವು ಉದ್ದವಾಗಿ
ಉರಿಯುತ್ತಾ ಅದರ ಛಾವಣಿಯು ಸುಟ್ಟು, ನಂತರ ಇಡೀ ಮನೆ
ಸುಡಲ್ಪಟ್ಟು ನಂತರ ಇಡೀ ಹಳ್ಳಿಯೇ ಸುಟ್ಟುಹೋಗುತ್ತದೆ. ನಂತರ ಹಳ್ಳಿಯವರು ಆತನಿಗೆ ಹಿಡಿದು
ಪ್ರಶ್ನಿಸುತ್ತಾರೆ ಏತಕ್ಕಾಗಿ ನೀನು ಹಳ್ಳಿಯನ್ನು ಸುಟ್ಟೆ? ಆಗ ಆತನು ನಾನು
ಹಳ್ಳಿಯನ್ನು ಸುಟ್ಟಿಲ್ಲ, ನಾನು ಊಟ ಮಾಡುತ್ತಿದ್ದಾಗ
ದೀಪದಲ್ಲಿ ಇದ್ದ ಬೆಂಕಿಯೇ ಬೇರೆ, ಇಡೀ ಊರನ್ನು ಹಬ್ಬಿ
ಸುಟ್ಟ ಬೆಂಕಿಯೇ ಬೇರೆ. ಈಗ ಹೇಳು ರಾಜ ನೀನು ಯಾರ ಪರ ನಿರ್ಣಯವನ್ನು ನೀಡುವೆ.
ಹಳ್ಳಿಯವರ ಪರ.
ಆದರೆ ಏಕೆ ?
ಏಕೆಂದರೆ ಆ ಮನುಷ್ಯ ಏನೇ ಹೇಳಲಿ, ಹಳ್ಳಿಯನ್ನು ಸುಟ್ಟ ಬೆಂಕಿಯು ಆತನ ದೀಪದಿಂದಲೇ ಉಂಟಾಗಿದೆ, ಉತ್ಪನ್ನವಾಗಿದೆ.
ಅದೇ ರೀತಿಯಲ್ಲಿ ಮಹಾರಾಜ, ಈಗಿನ ನಾಮರೂಪದಿಂದ ಮರಣದ ವೇಳೆ ಮತ್ತೊಂದು ನಾಮರೂಪವು ಜನಿಸುತ್ತದೆ, ಹೀಗಾಗಿ ಎರಡನೆಯದು ಮೊದಲ ಪರಿಣಾಮವಾಗಿದೆ. ಆದ್ದರಿಂದಾಗಿ ಆತನು ತನ್ನ
ಪಾಪವಿಪಾಕಗಳಿಂದ ಮುಕ್ತನಾಗಲಾರ.
ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿ.
ಮಹಾರಾಜ, ಒಂದುವೇಳೆ ಒಬ್ಬನು
ಬಾಲಕಿಯನ್ನು ವಧುದಕ್ಷಿಣೆ ನೀಡಿ ಮದುವೆಯಾಗುತ್ತಾನೆ ಮತ್ತು ಕಾರ್ಯನಿಮಿತ್ತ ದೂರ ಹೋಗುತ್ತಾನೆ.
ಆಗ ಆ ಬಾಲಕಿಯು ಪ್ರೌಢಳಾಗಿ ಯುವತಿಯಾಗಿರುತ್ತಾಳೆ. ಆಗ ಇನ್ನೊಬ್ಬ ಆಕೆಯ ತಂದೆ-ತಾಯಿಗಳಿಗೆ
ವಧುದಕ್ಷಿಣೆ ನೀಡಿ ಮದುವೆಯಾಗುತ್ತಾನೆ. ಅದೇವೇಳೆಗೆ ಮೊದಲನೆಯವ ಹಿಂತಿರುಗುತ್ತಾನೆ ಮತ್ತು ಹೀಗೆ
ಹೇಳುತ್ತಾನೆ ಏಕೆ, ನನ್ನ ಹೆಂಡತಿಯನ್ನು
ಕರೆದೊಯ್ಯುತ್ತಿರುವೆ ಮತ್ತು ಆಗ ಇನ್ನೊಬ್ಬ ಹೀಗೆ ಹೇಳುತ್ತಾನೆ ಇವಳು ನಿನ್ನ ಹೆಂಡತಿಯಲ್ಲ, ನೀನು ಮದುವೆಯಾದದ್ದು ಬಾಲಕಿಯನ್ನು, ನಾನು ವಿವಾಹವಾಗಿದ್ದು ಪ್ರೌಢಳನ್ನು. ಇವಳು ಪ್ರೌಢಳೇ ಆಗಿದ್ದರಿಂದ
ಈಕೆ ನನ್ನ ಪತ್ನಿಯೇ ಹೌದು. ಈ ವಿವಾದ ರಾಜನ ಬಳಿಗೆ ಬರುತ್ತದೆ. ಈಗ ಹೇಳು ರಾಜ, ನೀನು ಯಾರ ಪರ ತೀಪರ್ು ನೀಡುವೆ?
ಮೊದಲನೆಯವನಿಗೆ ಪತ್ನಿ ಸೇರಬೇಕೆಂದು ತೀಪರ್ು
ನೀಡುವೆ.
ಆದರೆ ಏಕೆ?
ಏಕೆಂದರೆ ಎರಡನೆಯವ ಏನೇ ಹೇಳಲಿ, ಪ್ರೌಢ ಯುವತಿಯು ಬಾಲಕಿಯ ಬೆಳವಣಿಗೆಯೇ ಆಗಿದ್ದಾಳೆ, ಫಲಿತಾಂಶವೇ ಆಗಿದ್ದಾಳೆ.
ಅದೇ ರೀತಿಯಲ್ಲಿ ಮಹಾರಾಜ, ಈಗಿನ ನಾಮರೂಪವು ಮರಣದಲ್ಲಿ ಇನ್ನೊಂದು ನಾಮರೂಪವಾಗಿ ಮಾರ್ಪಟ್ಟು
ಪುನರ್ಜನ್ಮ ತಾಳುತ್ತದೆ. ಆದರೆ ಎರಡನೆಯದು ಮೊದಲಿನ ಫಲಿತಾಂಶವಾಗಿದೆ. ಹೀಗಾಗಿ ಈ ಪಾಪ
ವಿಚಾರಗಳಿಂದ ಪಾರಾಗಲು ಸಾಧ್ಯವಿಲ್ಲ.
ದಯವಿಟ್ಟು ಇನ್ನೊಂದು ಉಪಮೆಯನ್ನು ನೀಡುವಿರಾ?
ಓ ಮಹಾರಾಜ, ವ್ಯಕ್ತಿಯೊಬ್ಬನು ಗೋಪಾಲಕನ ಹತ್ತಿರ ಹಾಲು ಕೊಳ್ಳಲು ಹೋಗುತ್ತಾನೆ.
ಆತನು ಕೊಂಡು ಕಾರ್ಯವಶಾತ್ ಎಲ್ಲಿಗೋ ಹೋಗಬೇಕಾಗಿರುವದರಿಂದಾಗಿ ಆತನ ಬಳಿಯಲ್ಲಿಯೇ ಹಾಲನ್ನು ಇಟ್ಟು
ನಾಳೆ ಬಂದು ಸ್ವೀಕರಿಸುತ್ತೇನೆ ಎಂದು ಹೇಳಿ, ನಾಳೆ ಬಂದಾಗ, ಆ ಹಾಲು ಮೊಸರಾಗಿರುತ್ತದೆ. ಹಾಲಿನವನು ಆ ಮೊಸರನ್ನು ನೀಡಲು ಹೋದಾಗ
ವ್ಯಕ್ತಿಯು ನಾನು ಕೊಂಡದ್ದು ಹಾಲೇ ಹೊರತು ಮೊಸರಲ್ಲ, ಆದ್ದರಿಂದ ನನ್ನ
ಹಾಲನ್ನು ನೀಡು. ಆಗ ಗೋಪಾಲಕನು ನನ್ನ ತಪ್ಪಿಲ್ಲದೇ ಹಾಲು ಮೊಸರಾಗಿರಬಹುದು ಈ ವಿಷಯವು
ನ್ಯಾಯಕ್ಕಾಗಿ ನಿನ್ನ ಬಳಿಗೆ ಬಂದಾಗ ಯಾರ ಕಡೆಗೆ ತೀರ್ಪನ್ನು ನೀಡುವೆ ಮಹಾರಾಜ?
ಗೋಪಾಲಕನ ಕಡೆ ಪರ ವಹಿಸುವೆ.
ಆದರೆ ಏಕೆ ?
ಏಕೆಂದರೆ ಮೊಸರು ಉಂಟಾಗಿರುವುದು ಆ
ಹಾಲಿನಿಂದಲೇ.
ಅದೇರೀತಿಯಲ್ಲಿ ಮಹಾರಾಜ, ನಾಮರೂಪವು ಮರಣದ ವೇಳೆ ಮತ್ತೊಂದು ನಾಮರೂಪವಾಗಿ ಪುನರ್ಜನ್ಮ
ತಾಳುತ್ತದೆ. ಆದರೂ ಎರಡನೆಯದು ಮೊದಲನೆಯದರ ಫಲಿತಾಂಶವಾಗಿದೆ. ಹೀಗಾಗಿ ಅದು ತನ್ನ ಪಾಪ
ವಿಪಾಕಗಳಿಂದ ಪಾರಾಗಲಾರದು.
ತುಂಬಾ ಒಳ್ಳೆಯದು ನಾಗಸೇನ.
7. ಥೇರರ ಪುನರ್ಜನ್ಮದ ಬಗ್ಗೆ ಪ್ರಶ್ನೆ
ರಾಜರು ಕೇಳಿದರು : ಭಂತೆ ನಾಗಸೇನ, ತಾವು ಪುನರ್ಜನ್ಮ ತಾಳುವಿರಾ?(25)
ಮಹಾರಾಜ, ಇದೇ ಪ್ರಶ್ನೆಯನ್ನು
ಮರಳಿ ಕೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ನಾನಂತು ಆಗಲೇ ಹೇಳಿದ್ದೇನೆ, ಕ್ಲೇಷದಿಂದ ನಾನು ಮರಣಿಸಿದರೆ ನನಗೆ ಜನ್ಮವಿದೆ, ಇಲ್ಲದಿದ್ದರೆ ಇಲ್ಲ.
ಇದನ್ನು ಉಪಮೆಯೊಂದಿಗೆ ಹೇಳುವಿರಾ?
ಮಹಾರಾಜ ಒಬ್ಬ ವ್ಯಕ್ತಿಯು ರಾಜನಿಗೆ
ಸಮಪರ್ಿತ ಸೇವೆ ಸಲ್ಲಿಸುತ್ತಾನೆ. ಆಗ ರಾಜನೂ ಸಹ ಆತನ ಮೇಲೆ ಕೃಪೆತೋರಿ ಉದ್ಯೋಗ ನೀಡುತ್ತಾನೆ.
ಆತನು ಉದ್ಯೋಗ ದೊರೆತ ಮೇಲೆ ಎಲ್ಲಾ ರೀತಿಯ ಇಂದ್ರೀಯ ಭೋಗದಲ್ಲಿ ತಲ್ಲೀನನಾಗುತ್ತಾನೆ. ಆದರೆ ಜನರ
ಹತ್ತಿರ ರಾಜನು ತನಗೆ ನಿರ್ಲಕ್ಷಿಸಿರುವನು ಎಂದು ಘೋಷಿಸುತ್ತಾನೆ. ಈಗ ಹೇಳು ರಾಜ, ಆತನು ಸರಿಯಾಗಿ ವತರ್ಿಸುತ್ತಿರುವವನೇ.
ಖಂಡಿತವಾಗಿ ಸರಿಯಾಗಿ ವತರ್ಿಸುತ್ತಿಲ್ಲ.
ಅದೇರೀತಿಯಾಗಿ ಮಹಾರಾಜ ಮತ್ತೆ ಅದೇ ಪ್ರಶ್ನೆ
ಕೇಳುವುದರಲ್ಲಿ ಪ್ರಯೋಜನವಿಲ್ಲ. ನಾನಂತು ಉತ್ತರಿಸಿರುವೆನು, ನಾನು
ಕ್ಲೇಶಯುತವಾಗಿ ಮರಣಿಸಿದರೆ ಜನ್ಮವುಂಟು, ಕ್ಲೇಶರಹಿತನಾದರೆ
ಇಲ್ಲ.
ನೀವು ಉತ್ತರಿಸುವುದರಲ್ಲಿ ಚತುರರು ನಾಗಸೇನ.
8. ನಾಮರೂಪ-ಪುನರ್ಜನ್ಮದ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ನೀವು ಈಗತಾನೇ ನಾಮರೂಪದ ಬಗ್ಗೆ ಮಾತನಾಡಿದಿರಿ ನಾಮ ಇದರ ಅರ್ಥವೇನು? ಮತ್ತು ರೂಪ ಇದರ
ಅರ್ಥವೇನು? (26)
ಅಸ್ತಿತ್ವದಲ್ಲಿ ಯಾವುದೆಲ್ಲವೂ
ಸ್ಥೂಲವಾಗಿದೆಯೋ ಅದೇ ರೂಪ (ದೇಹ) ಮತ್ತು ಯಾವುದೆಲ್ಲವೂ ಸೂಕ್ಷ್ಮವಾಗಿದೆಯೋ ಅದು ನಾಮ (ಮನಸ್ಸು)
ವಾಗಿದೆ.
ನಾಗಸೇನರವರೆ, ನಾಮವಾಗಲಿ ಅಥವಾ ರೂಪವಾಗಲಿ ಪ್ರತ್ಯೇಕವಾಗಿಯೇ ಏಕೆ
ಪುನರ್ಜನಿಸುವುದಿಲ್ಲ.
ಓ ಮಹಾರಾಜ, ಈ ಎಲ್ಲ ಸ್ಥಿತಿಗಳು ಒಂದರಲ್ಲಿ ಮತ್ತೊಂದು ಜೊತೆಗೂಡಿದೆ (ಸಂಪರ್ಕ
ಹೊಂದಿದೆ) ಮತ್ತು ಜೊತೆಯಾಗಿಯೇ ಉತ್ಪನ್ನವಾಗುತ್ತದೆ.
ಉಪಮೆಯಿಂದ ಸ್ಪಷ್ಟೀಕರಿಸುವಿರಾ.
ಹೇಗೆಂದರೆ ಮಹಾರಾಜ, ಕೋಳಿಯು ತನ್ನ ಲೊಳೆರಸ ಅಥವಾ ಮೊಟ್ಟೆಯ ಚಿಪ್ಪನ್ನು ಪ್ರತ್ಯೇಕವಾಗಿಯೇ
ಹಾಕುವುದಿಲ್ಲ. ಆದರೆ ಎರಡು ಜೊತೆಗೂಡಿಯೇ ಉದಯಿಸುತ್ತದೆ. ಇವೆರಡು ಒಂದಕ್ಕೊಂದು
ಪರಸ್ಪರಾವಲಂಬನೆಯಿಂದ ಕೂಡಿರುತ್ತವೆ. ಹಾಗೆಯೇ ನಾಮವಿಲ್ಲದಿದ್ದರೆ, ರೂಪವೂ ಇಲ್ಲ. ಅಂದರೆ ದೇಹ, ಮನಸ್ಸು (ರೂಪನಾಮ)
ಗಳೆರಡು ಪರಸ್ಪರಾವಲಂಬನೆಯಿಂದಿರುತ್ತವೆ. ಇವು ಜೊತೆಯಲ್ಲಿಯೇ ಉತ್ಪನ್ನವಾಗುತ್ತವೆ ಮತ್ತು ಅವು
ಜ್ಞಾಪಿಸಲಾಗದ ಕಾಲದಿಂದಲೂ ಇದೇ ಸ್ವಭಾವದಿಂದ (ಸಂಬಂಧಿತ ವಾಗಿಯೇ) ಇವೆ.
ನೀವು ಉತ್ತರಿಸುವುದರಲ್ಲಿ ಚತುರರು ನಾಗಸೇನ.
9. ಅದ್ಧಾನ ಪನ್ಹೊ (ಕಾಲ ವಿಷಯದ ಪ್ರಶ್ನೆ)
ರಾಜರು ಕೇಳಿದರು : ಭಂತೆ ನಾಗಸೇನ, ನೀವು ಈಗ ತಾನೆ ಜ್ಞಾಪಿಸಲಾಗದ (ಅನಂತ) ಕಾಲದಿಂದ ಎಂದು ನುಡಿದಿರಿ, ಕಾಲದ ಅರ್ಥವೇನು? ಅಂತಹ ವಸ್ತು/ವಿಷಯ
ಇದೆಯೇ? (27)
ಓ ಮಹಾರಾಜ, ಭೂತಕಾಲ, ವರ್ತಮಾನ ಮತ್ತು
ಭವಿಷ್ಯ ಕಾಲ, ಇದನ್ನೇ ಕಾಲ ಎನ್ನುವರು.
ಆದರೆ ಏನು? ಕಾಲ ಎಂಬಂತಹ ವಿಷಯ ಇದೆಯೆ.
ಕೆಲವರಿಗೆ ಕಾಲ ಎಂಬುದು ಇದೆ, ಮತ್ತೆ ಕೆಲವರಿಗೆ ಕಾಲ ಎಂಬುದಿಲ್ಲ.
ಯಾರಿಗೆ ಕಾಲವಿದೆ ಮತ್ತು ಯಾರಿಗಿಲ್ಲ?
ಮಹಾರಾಜ, ಯಾರಲ್ಲಿ ಭೂತಕಾಲದ
ಸಂಖಾರ ಇಲ್ಲವಾಗಿದೆಯೋ, ನಿರೋಧವಾಗಿದೆಯೋ, ಸಂಖಾರವೇ ಉದಯಿಸುವದಿಲ್ಲವೋ ಅಂತಹವರಿಗೆ ಕಾಲವೇ ಇಲ್ಲ. ಆದರೆ ಯಾರಲ್ಲಿ
ಧಮ್ಮ (ಚಿತ್ತವೃತ್ತಿ ವಿಷಯಗಳು) ವಿಪಾಕ (ಫಲ) ನೀಡುತ್ತದೆಯೊ, ವಿಪಾಕ
ಧಮ್ಮವಾಗಿದೆಯೋ, ಪರಿಣಾಮ ನೀಡುವ ಮನಸ್ಥಿತಿಯೋ, ಪುನರ್ಜನ್ಮ ತಾಳುವವರೋ ಅಂತಹವರಿಗೆ ಕಾಲವಿದೆ. ಮರುಹುಟ್ಟಿನವರಿಗೆ
ಕಾಲವಿದೆ, ಆದರೆ ಯಾವ ಜೀವಿಗಳೂ ಪುನರ್ಜನ್ಮ ತಾಳುವುದಿಲ್ಲವೋ
ಅಂತವರಿಗೆ ಕಾಲವಿಲ್ಲ. ಯಾವ ಜೀವಿಗಳು ಪರಿನಿಬ್ಬಾಣವನ್ನು ಪಡೆದಿವೆಯೋ ಅಂತಹವರಿಗೆ ಕಾಲವಿಲ್ಲ, ಏಕೆಂದರೆ ಅವರೆಲ್ಲಾ ಸ್ವತಂತ್ರವಾಗಿ ಪರಿನಿಬ್ಬುತರಾಗಿದ್ದಾರೆ.
ಭಂತೆ ನಾಗಸೇನ, ನೀವು ಉತ್ತರಿಸುವುದರಲ್ಲಿ ಚತುರರು.
ಇಲ್ಲಿಗೆ ದ್ವಿತೀಯ
ಅದ್ಧಾನವರ್ಗ ಮುಗಿಯಿತು.
(ಇದರಲ್ಲಿ 9
ಪ್ರಶ್ನೆಗಳಿವೆ)
No comments:
Post a Comment