Saturday 7 April 2018

Milinda panha 11.5. ಸಿಂಹ ವಗ್ಗೋ (ಸಿಂಹ ವರ್ಗ)

5. ಸಿಂಹ ವಗ್ಗೋ (ಸಿಂಹ ವರ್ಗ)


1. ಸಿಂಹಂಗ ಪನ್ಹೋ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸಿಂಹದ 7 ಗುಣಗಳು
ಯಾವುವು? (256)
ಓ ಮಹಾರಾಜ, ಹೇಗೆ ಸಿಂಹವು ಸ್ಪಷ್ಟವೋ, ಕಲೆರಹಿತವೋ ಮತ್ತು ಪರಿಶುದ್ಧ ತಿಳಿ ಹಳದಿ ಬಣ್ಣದ್ದೋ, ಹಾಗೆಯೇ ಓ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನೋ, ಪರಿಶ್ರಮವುಳ್ಳವನೋ ಸ್ಪಷ್ಟನು, ಕಲೆರಹಿತನು ಮತ್ತು ಚಿತ್ತದಲ್ಲಿ ಪರಿಶುದ್ಧ ಬೆಳಕಿನವನು, ಕೋಪರಹಿತನು ಮತ್ತು ಚಿಂತಾರಹಿತನಾಗಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಚಲಿಸಲು ನಾಲ್ಕು ಪಂಜಗಳಿಂದ ಕೂಡಿದೆಯೋ, ವೇಗದ ನಡಿಗೆಯಿಂದ ಕೂಡಿದೆಯೋ ಅದೇರೀತಿ ಭಿಕ್ಷುವು ಸಹಾ ಧ್ಯಾನಶೀಲನಾಗಿ, ಪ್ರಯತ್ನಶೀಲನಾಗಿ, ನಾಲ್ಕು ಹಂತಗಳ ಅರಹತ್ವದಲ್ಲಿಯೇ ಚಲಿಸುತ್ತಾನೆ. ಇದೇ ಓ ಮಹಾರಾಜ, ಸಿಂಹವು ಹೊಂದಿರುವ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಸುಂದರವಾದ ಕೂದಲಿನ ಚರ್ಮವನ್ನು ಹೊಂದಿದೆಯೋ, ನೋಡಲು ಆನಂದದಾಯಕವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿ, ಸುಂದರವಾದ ಶೀಲವನ್ನು ಹೊಂದಿರುತ್ತಾನೆ. ನೋಡಲು ಆನಂದದಾಯಕನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಪ್ರಾಣ ಹೋಗುತ್ತಿದ್ದರೂ ಮಾನವನ ಮುಂದೆ ತಲೆಬಾಗಿಸುವುದಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿರುತ್ತಾನೆ. ಆತನಿಗೆ ಯಾವುದೇ ಪರಿಕರಗಳು (ಆಹಾರ, ಚೀವರ, ಔಷಧ, ವಸತಿ) ಸಿಗದಿದ್ದರೂ ಆತನು ಯಾವುದೇ ಮಾನವರ ಮುಂದೆ ತಲೆಬಾಗಿಸುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ನಿತ್ಯವು ಆಹಾರ ಸೇವಿಸುವುದೋ, ಸಿಕ್ಕ ಯಾವುದೇ ಪ್ರಾಣಿಯ ಮಾಂಸವನ್ನು ಭಕ್ಷಿಸುವುದೋ, ಉತ್ತಮ ಮಾಂಸವನ್ನೇ ನಿರೀಕ್ಷಿಸುವುದಿಲ್ಲವೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಉತ್ತಮ ಭೋಜನವನ್ನು ನೀರೀಕ್ಷಿಸದೆ, ಹಾಗೆಯೇ ಯಾವುದೇ ಮನೆಯನ್ನು ಬಿಡದೆ, ಆಹಾರದಲ್ಲಿ ಯಾವುದೇ ಆಯ್ಕೆ ಇರದೆ, ಸಿಕ್ಕಿದಂತ ಯಾವುದೇ ಆಹಾರವನ್ನು ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಐದನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಆಹಾರವನ್ನು ಸಂಗ್ರಹಿಸುವುದಿಲ್ಲವೋ ಮತ್ತೆ ಒಮ್ಮೆ ತಿಂದಂತಹ ಬೇಟೆಯನ್ನು ಮತ್ತೆ ಸೇವಿಸುವುದಿಲ್ಲವೋ, ಅದೇರೀತಿ ಭಿಕ್ಷುವು ಪ್ರಯತ್ನಶೀಲನಾಗಿ, ಎಂದಿಗೂ ಆಹಾರವನ್ನು ಸಂಗ್ರಹಿಸುವುದಿಲ್ಲ. ಇದೇ ಭಿಕ್ಷುವು ಹೊಂದಬೇಕಾದ ಸಿಂಹದ ಆರನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಆಹಾರ ದೊರಕದಿದ್ದರೂ ಚಿಂತಿತವಾಗುವುದಿಲ್ಲವೋ, ಸಿಕ್ಕಿದಾಗ ಅತ್ಯಾಸೆಯಿಲ್ಲದೆ ತಿನ್ನುವುದೋ ಬವಳಿಯಿಲ್ಲದೆ ತಿನ್ನುವುದೋ ಅಸಹ್ಯವಿಲ್ಲದೆ ತಿನ್ನುವುದೋ ಹಾಗೆ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಿಂದ ಕೂಡಿರುತ್ತಾನೆ. ಆತನಿಗೆ ಆಹಾರ ಸಿಗದಿದ್ದರೂ ಸಹಾ ಚಿಂತಿತನಾಗುವುದಿಲ್ಲ. ಗಾಬರಿ ಬೀಳುವುದಿಲ್ಲ. ಆಹಾರ ತಿನ್ನುವಾಗ, ಬಯಕೆಯಿಲ್ಲದೆ ರುಚಿಯ ಲೋಭವಿಲ್ಲದೆ ತಿನ್ನುತ್ತಾನೆ. ಹಾಗೆಯೇ ಅಸಹ್ಯತೆಯಿಲ್ಲದೆ ರುಚಿ ಲೋಭದ ಪರಿಣಾಮ ಅರಿವಿದ್ದು ತಿನ್ನುತ್ತಾನೆ. ರಾಗ-ದ್ವೇಷಗಳಿಲ್ಲದೆ ಆಹಾರ ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ಏಳನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಥೇರ ಮಹಾಕಸ್ಸಪರವರನ್ನು ಪ್ರಶಂಸಿಸುವಾಗ ಹೀಗೆ ನುಡಿದಿದ್ದರು.
ಓ ಭಿಕ್ಷುಗಳೇ, ಈ ಕಸ್ಸಪ ಸಂತುಷ್ಟನಾಗಿರುವವನು, ತನಗೆ ದೊರೆತ ಆಹಾರದಲ್ಲೇ ತೃಪ್ತನಾಗುವಂತಹವನು. ಆತನು ಆಹಾರಕ್ಕಾಗಿ ಯಾವುದೇ ತಪ್ಪನ್ನು/ಅಪರಾಧವನ್ನು ಮಾಡುವುದಿಲ್ಲ. ಆತನಿಗೆ ಆಹಾರ ಸಿಗದಿದ್ದಾಗ ವ್ಯಥಿತನಾಗುವುದಿಲ್ಲ. ಸಿಕ್ಕಾಗ ಬಯಕೆರಹಿತನಾಗಿ ಆಹಾರ ಸೇವಿಸುತ್ತಾನೆ. ಯಾವುದೇ ಬಳಲಿಕೆಯಿಲ್ಲದೆ, ಕುಗ್ಗದೆ, ಅಪಾಯದ ಅರಿವಿದ್ದು, ಅಸಹ್ಯವಿಲ್ಲದೆ, ಆಹಾರದ ಬಗ್ಗೆ ಯೋಗ್ಯ ಗಮನಹರಿಸುವಿಕೆ ಯಿಂದಲೇ ಕೂಡಿರುತ್ತಾನೆ.

2. ಚಕ್ಕವಾಕಂಗ ಪನ್ಹೊ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಕ್ರವಾಕದ ಪಕ್ಷಿಯ 3 ಗುಣಗಳಾವುವು? (257)
ಓ ಮಹಾರಾಜ, ಚಕ್ರವಾಕ ಪಕ್ಷಿಯು ತನ್ನ ಸಂಗಾತಿಯನ್ನು ತನ್ನ ಪ್ರಾಣಹೋಗುವ ಸ್ಥಿತಿಯಲ್ಲಿದ್ದರೂ ತೊರೆಯುವುದಿಲ್ಲ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ ಕೂಡಿದ್ದು, ತನ್ನ ಜೀವನಪರ್ಯಂತ ಯೋಗ್ಯವಾದ, ಜ್ಞಾನೋಚಿತ ಗಮನಹರಿಸುವಿಕೆಯನ್ನು ತೊರೆಯುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಿರುವ ಚಕ್ರವಾಕದ ಪ್ರಥಮ ಅಂಗವಾಗಿದೆ.
ಮತ್ತೆ ಓ ಮಹಾರಾಜ, ಚಕ್ರವಾಕವು ಸೇವಲ ಮತ್ತು ಪಣಕ ಎಂಬ ನೀರಿನ ಗಿಡಗಳನ್ನು ತಿಂದು ಜೀವಿಸುತ್ತವೆ. ಅದರಿಂದಲೇ ತೃಪ್ತವಾಗುತ್ತವೆ. ಅವು ಎಷ್ಟೊಂದು ತೃಪ್ತವಾಗುತ್ತವೆ ಎಂದರೆ ಅವುಗಳ ಶಕ್ತಿಯಾಗಲಿ ಅಥವಾ ಸುಂದರತೆಯಾಗಲಿ ಕಡಿಮೆಯೇ ಆಗುವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ ತನಗೆ ದೊರೆತಿದ್ದರಲ್ಲೇ ತೃಪ್ತಿ ತಾಳುತ್ತಾನೆ ಮತ್ತು ಆತನಿಗೆ ಎಷ್ಟೊಂದು ತೃಪ್ತಿಯಾಗುತ್ತದೆ ಎಂದರೆ ಆತನ ಧ್ಯಾನಬಲವಾಗಲಿ ಅಥವಾ ಪ್ರಜ್ಞೆಯಾಗಲಿ ಅಥವಾ ವಿಮುಕ್ತಿಯಾಗಲಿ ಅಥವಾ ವಿಮುಕ್ತಿಯ ಜ್ಞಾನವಾಗಲಿ ಅಥವಾ ಯಾವುದೇ ಶೀಲವಾಗಲಿ ಯಾವುದೇ ಕುಶಲ ಧಮ್ಮವಾಗಲಿ ಕ್ಷೀಣಿಸುವುದಿಲ್ಲ, ಕಡಿಮೆಯಾಗುವುದಿಲ್ಲ, ಇದೇ ಓ ಮಹಾರಾಜ, ಚಕ್ರವಾಕದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಚಕ್ರವಾಕ ಪಕ್ಷಿಯು ಯಾವುದೇ ಜೀವಿಗೂ ಹಾನಿ ಮಾಡುವುದಿಲ್ಲ. ಅದೇರೀತಿ ಧ್ಯಾನಶೀಲ ಭಿಕ್ಷುವು ದಂಡಶಸ್ತ್ರಗಳನ್ನು ತ್ಯಜಿಸಿ, ವಿನೀತನಾಗಿ, ಕರುಣೆಯಿಂದ ಲೋಕಾನುಕಂಪೆಯಿಂದ, ಸರ್ವಜೀವಿಗಳ ಮೇಲೆ ದಯೆವುಳ್ಳವನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಚಕ್ರವಾಕ ಪಕ್ಷಿಯ 3ನೆಯ ಗುಣವಾಗಿದೆ. ಇದರ ಬಗ್ಗೆ ದೇವಾಧಿದೇವ ಭಗವಾನರು ಚಕ್ರವಾಕ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಯಾರು ಕೊಲ್ಲುವುದಿಲ್ಲವೋ ಅಥವಾ ಧ್ವಂಸ ಮಾಡುವುದಿಲ್ಲವೋ ಅಥವಾ ದಬ್ಬಾಳಿಕೆ ಮಾಡುವುದಿಲ್ಲವೋ, ಪರರ ಐಶ್ವರ್ಯವನ್ನು ಕಬಳಿಸಲು ಪ್ರೇರೇಪಿಸುವುದಿಲ್ಲವೋ ಮತ್ತು ಸರ್ವಜೀವಿಗಳ ಬಗ್ಗೆ ದಯೆ, ಮೈತ್ರಿವುಳ್ಳವನೋ ಅಂತಹವನಲ್ಲಿ ಶಾಂತಿಯನ್ನು ಧಕ್ಕೆ ತರುವಂತಹ ಕೋಪವು ಆತನಲ್ಲಿರುವುದಿಲ್ಲ.

3. ಪೆಣಾಹಿಕಂಗ ಪನ್ಹೊ (ಪೆಣಾಹಿಕಾ ಪಕ್ಷಿ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಪೆಣಹಿಕಾ ಪಕ್ಷಿಯ 2 ಗುಣಗಳಾವುವು? (258)
ಓ ಮಹಾರಾಜ, ಹೇಗೆ ಪೆಣಾಹಿಕ ಪಕ್ಷಿಯು ತನ್ನ ಸಂಗಾತಿಯ ಮೇಲಿನ ಮತ್ಸರದಿಂದ ತನ್ನ ಮರಿಗಳ ಪೋಷಣೆ ಮಾಡಲು ನಿರಾಕರಿಸುವುದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷು, ಪ್ರಯತ್ನದಿಂದ, ಕೂಡಿ, ತನ್ನಲ್ಲಿ ಯಾವುದೇ ಕ್ಲೇಷಗಳು ಉಂಟಾಗಲಿ, ಆಗ ಆತನು ಸ್ಮೃತಿಪ್ರತಿಷ್ಠಾನದಿಂದ ಸಮ್ಯಕ್ ಸಂಯಮದಿಂದ ಅದನ್ನು ದೂರೀಕರಿಸಿ, ಮನೋದ್ವಾರದಿಂದ ಕಾಯಗತಾನುಸ್ಮೃತಿಯನ್ನು ಅಭ್ಯಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೆಣಾಹಿಕಾ ಪಕ್ಷಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೆಣಾಹಿಕಾ ಪಕ್ಷಿ ಹಗಲಿನಲ್ಲಿ ಆಹಾರಕ್ಕಾಗಿ ಕಾಡಿನಲ್ಲಿ ಹಾರಾಡುತ್ತಿರುತ್ತದೆ. ಆದರೆ ರಾತ್ರಿಯ ವೇಳೆ ತನ್ನ ವಾಸಸ್ಥಳದಲ್ಲಿ ತನ್ನ ಮರಿಗಳನ್ನು ಕಾಪಾಡುತ್ತಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ದಶಬಂಧನಗಳಿಂದ ವಿಮುಕ್ತನಾಗಲು ತನ್ನ ಸಮಯವೆಲ್ಲಾ ಏಕಾಂತ ಸ್ಥಳಗಳಲ್ಲಿ ಧ್ಯಾನಿಸುತ್ತಾ ಕಾಲಕಳೆಯುತ್ತಾನೆ. ಅಷ್ಟಕ್ಕೆ ತೃಪ್ತನಾಗದೆ, ನಿಂದೆಯಿಂದ ಪಾರಾಗಲು ಸಂಘಕ್ಕೆ ಮರಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೆಣಾಹಿಕಾ ಪಕ್ಷಿಯ ದ್ವಿತೀಯ ಗುಣವಾಗಿದೆ ಮತ್ತು ಇದರ ಬಗ್ಗೆ ಬ್ರಹ್ಮ ಸಹಂಪತ್ತಿಯು ಭಗವಾನರ ಸಮ್ಮುಖದಲ್ಲಿ ಹೀಗೆ ಹೇಳಿದ್ದಾರೆ:
ಜನರಿಂದ ದೂರವಾದ ಸ್ಥಳಗಳಲ್ಲಿ ವಾಸಮಾಡಲಿ, ಅಲ್ಲಿದ್ದು ಪಾಪಬಂಧನಗಳಿಂದ ದೂರವಾಗಿ ಸ್ವತಂತ್ರನಾಗಿರಲಿ, ಆದರೆ ಯಾರು ಏಕಾಂತದಲ್ಲೂ ಶಾಂತಿಯನ್ನು ಕಾಣನೋ ಆತನು ಸಂಘದ ಜೊತೆಗೆ ಇದ್ದು, ಚಿತ್ತವನ್ನು ರಕ್ಷಿಸಿ, ಸ್ಮೃತಿಯಿಂದ ಕೂಡಿರಲಿ.

4. ಘರಕಪೋತಕಂಗ ಪನ್ಹೊ (ಮನೆಯ ಪಾರಿವಾಳದ ಬಗ್ಗೆ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮನೆ ಪಾರಿವಾಳದ ಗುಣ ಯಾವುದು? (259)
ಹೇಗೆ ಓ ಮಹಾರಾಜ, ಪಾರಿವಾಳವು ಜನರ ಮನೆಯಲ್ಲಿ ವಾಸಿಸುವಾಗ ಆ ಮನೆಯವರಿಗೆ ಸೇರಿದ ಯಾವುದೇ ವಸ್ತುಗಳಲ್ಲಿ ಆಸಕ್ತವಾಗುವುದಿಲ್ಲ, ತಟಸ್ಥವಾಗಿರುತ್ತದೆ. ಕೇವಲ ಪಕ್ಷಿಗಳಿಗೆ ಸೇರಿದ ವಸ್ತುಗಳನ್ನು ಮಾತ್ರ ಗಮನಿಸುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಪರನಾಗಿ, ಗೃಹಸ್ಥರ ಮನೆಯಲ್ಲಿ ವಾಸಿಸುವಾಗ ಎಂದಿಗೂ ಸಹಾ ಸ್ತ್ರೀಯರಲ್ಲಿ, ಪುರುಷರಲ್ಲಿ, ಹಾಸಿಗೆಯಲ್ಲಿ ಅಥವಾ ಪೀಠೋಪರಣಗಳಲ್ಲಿ, ವಸ್ತ್ರಗಳಲ್ಲಿ, ಆಭರಣಗಳಲ್ಲಿ, ಭೋಗ ವಸ್ತುಗಳಲ್ಲಿ, ಆಹಾರಗಳಲ್ಲಿ, ಇವೆಲ್ಲಾದರಲ್ಲಿ ಆಸಕ್ತಿಯನ್ನು ತಾಳುವುದಿಲ್ಲ. ಆದರೆ ಅವುಗಳೆಲ್ಲದರ ಮೇಲೆ ತಟಸ್ಥವಾಗಿದ್ದು, ಕೇವಲ ಭಿಕ್ಷು ಜೀವನದಲ್ಲಿ ಮಾತ್ರ ಆಸಕ್ತಿ ತೋರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೃಹ ಪಾರಿವಾಳದ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಚುಲ್ಲನಂದ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಗೃಹಸ್ಥರ ಮನೆಗೆ ಆಹಾರ ಪಾನಿಯಗಳಿಗಾಗಿ ಹೋಗಬೇಕಾಗುತ್ತದೆ. ಮಿತವಾಗಿ ತಿನ್ನಿ, ವಿನೀತವಾಗಿ ಸೇವಿಸಿ, ರೂಪಗಳಲ್ಲಿ ಮನವು ಹೋಗದಿರಲಿ.

5. ಉಲ್ಲೂಕಂಗ ಪನ್ಹೋ (ಗೂಬೆ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಗೂಬೆಯ ಎರಡು ಗುಣ
ಗಳಾವುವು? (260)
ಓ ಮಹಾರಾಜ, ಹೇಗೆ ಗೂಬೆಯು ತನ್ನ ಶತ್ರುವಾದ ಕಾಗೆಗಳ ಗೂಡಿಗೆ ರಾತ್ರಿ ಹೋಗಿ, ಅಲ್ಲಿ ಅಪಾರ ಕಾಗೆಗಳನ್ನು ಕೊಲ್ಲುತ್ತದೆ. ಅದೇರೀತಿ ಓ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನಾಗಿ, ಅಜ್ಞಾನದೊಂದಿಗೆ ಶತ್ರುತ್ವವಿಟ್ಟು, ರಹಸ್ಯ ಸ್ಥಳದಲ್ಲಿ ಕುಳಿತು, ಆತನು ಅಸ್ತಿತ್ವವನ್ನೇ ಪುಡಿಮಾಡುತ್ತಾನೆ. ಅದರ ಬೇರುಗಳನ್ನೇ ಕತ್ತರಿಸಿಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಬೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೀಗೆ ಗೂಬೆಯು ಏಕಾಂತದಲ್ಲಿ ವಾಸಿಸುವ ಪಕ್ಷಿಯೋ, ಅದೇರೀತಿ ಧ್ಯಾನಶೀಲ ಭಿಕ್ಷುವು ಸಹಾ ಏಕಾಂತದಲ್ಲಿ ವಾಸಿಸಿ, ಪ್ರಯತ್ನಶೀಲನಾಗಿ, ಏಕಾಂತತೆಯಲ್ಲಿ ರಮಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಬೆಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಯಾವ ಭಿಕ್ಷುವು ಏಕಾಂತದಲ್ಲಿ ರಮಿಸಿ, ಸಾಧನೆ ಮಾಡುತ್ತಾನೋ, ಆತನು ಇದೇ ದುಃಖವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖಕ್ಕೆ ಕಾರಣವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖನಿರೋಧವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖ ನಿರೋಧದ ಮಾರ್ಗವೆಂದು ಯಥಾಭೂತವಾಗಿ ಅರಿಯುತ್ತಾನೆ.

6. ಸತಪತ್ತಂಗ ಪನ್ಹೋ (ಭಾರತೀಯ ಕೊಕ್ಕರೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಭಾರತೀಯ ಕೊಕ್ಕರೆಯ ಗುಣ ಯಾವುದು? (261)
ಹೇಗೆ ಓ ಮಹಾರಾಜ, ಭಾರತೀಯ ಕೊಕ್ಕರೆಯು ಮುಂದೆ ಸಂಭವಿಸದಿರುವ ಭಾಗ್ಯವನ್ನು ಅಥವಾ ದೌಭರ್ಾಗ್ಯವನ್ನು ಕೂಗಿ ತನ್ನ ಧ್ವನಿಯಲ್ಲಿ ಹೇಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಪರರಿಗೆ ಯಾವ ಕರ್ಮವು ಭಯಾನಕ, ನರಕಜನಕ ಅಥವಾ ಯಾವ ಕರ್ಮ ಶುಭಕಾರಿ, ಹೇಗೆ ನಿಬ್ಬಾಣ ಪರಮಸುಖ ಕ್ಷೇಮಕಾರಿ ಎಂದೆಲ್ಲಾ ಬೋಧಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೊಕ್ಕರೆಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ಥೇರ ಪಿಂಡೋಲ ಭಾರಧ್ವಜರು ಹೀಗೆ ಹೇಳಿದ್ದಾರೆ:
ನರಕವು ಅತ್ಯಂತ ಭಯಾನಕವಾಗಿದೆ, ಹಾಗೆಯೇ ನಿಬ್ಬಾಣದಲ್ಲಿ ವಿಫುಲವಾದ ಸುಖವಿದೆ. ಹೀಗೆ ಭಿಕ್ಷುವು ಈ ಎರಡನ್ನು ಹೇಳಿ ಪರರಿಗೆ ಸ್ಪಷ್ಟೀಕರಣ ಮಾಡುತ್ತಾನೆ.

7. ಬಾವಲಿ (ವಾಗ್ಗುಲಿಂಗ ಪನ್ಹೊ) ಪ್ರಶ್ನೆ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಾವಲಿಯು 2
ಗುಣಗಳಾವುವು? (262)
ಓ ಮಹಾರಾಜ, ಹೇಗೆ ಬಾವಲಿಯು ಯಾವಾಗಲಾದರೂ ಬಾವಲಿಯು ಆಕಸ್ಮಿಕವಾಗಿ ಜನರ ವಾಸಸ್ಥಳಕ್ಕೆ ಹೊಕ್ಕರೆ, ತಡಮಾಡದೆ, ಅಲ್ಲಿಂದ ಹಾರಿ ಹೊರ ಹೋಗಿಬಿಡುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಆಹಾರಕ್ಕಾಗಿ ನಗರ ಅಥವಾ ಹಳ್ಳಿಗೆ ಬಂದಾಗ ಆಹಾರ ಸಿಕ್ಕಿದ ನಂತರ ತಡಮಾಡದೆ ತಕ್ಷಣ ಗೃಹಸ್ಥರಿಂದ ದೂರಹೋಗಿ ಏಕಾಂತದಲ್ಲಿ ಸಾಧನೆ ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಾವಲಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಬಾವಲಿಯು ಜನರ ಮನೆಗಳಿಗೆ ಆಗಾಗ್ಗೆ ಹೋದಾಗ ಅವರಿಗೆ ಹಾನಿ ಉಂಟುಮಾಡುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿರುತ್ತಾನೆ. ಆತನು ಆಗಾಗ್ಗೆ ಗೃಹಸ್ಥರ ಮನೆಗೆ ಹೋಗುತ್ತಿರುವಾಗ, ಅವರನ್ನು ಪರಿಕರಗಳಿಗಾಗಿ ಅಥವಾ ಅವಶ್ಯಕತೆಗಳಾಗಲಿ, ಪೀಡಿಸುವುದಿಲ್ಲ, ಮಿಥ್ಯಾಜೀವನ ಮಾಡುವುದಿಲ್ಲ, ಅತಿಮಾತು ಆಡುವುದಿಲ್ಲ. ಆತನು ಅವರ ಉನ್ನತಿ ಅಥವಾ ಕಷ್ಟಗಳ ಬಗ್ಗೆ ತಟಸ್ಥನಾಗಿರುತ್ತಾನೆ. ಅವರ ವ್ಯವಹಾರಗಳನ್ನು ಅವರಿಂದ ದೂರಮಾಡುವುದಿಲ್ಲ. ಅವರ ಉನ್ನತಿ ಬಯಸುತ್ತಾನೆ, ಸರ್ವಜೀವಿಗಳ ಸುಖ, ಉನ್ನತಿ ಬಯಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ, ಬಾವಲಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಲಕ್ಖಣ ಸುತ್ತಂತದಲ್ಲಿ ಹೀಗೆ ಹೇಳಿದ್ದಾರೆ:
ಓಹ್, ಎಷ್ಟು ಜನರು ನಷ್ಟಕ್ಕೆ ದುಃಖಿಸಲಾರರು ಅಥವಾ ಕೊರತೆಗೆ ನರಳಲಾರರು. ಅವರು ಶ್ರದ್ಧೆಯಿಂದ ಅಥವಾ ಶೀಲದಿಂದ, ಶ್ರುತಿಯಿಂದ, ಬುದ್ಧಿಯಿಂದ, ತ್ಯಾಗದಿಂದ, ಧಮ್ಮದಿಂದ, ಬಹು ಒಳ್ಳೇತನದಿಂದ, ಧನದಿಂದ, ಧ್ಯಾನದಿಂದ, ಹೊಲಗಳಿಂದ, ಪುತ್ರರಿಂದ ಞ್ಞಾತಿಗಳಿಂದ, ಮಿತ್ರರಿಂದ, ಬಾಂಧವರಿಂದ, ಬಲದಿಂದ, ವರ್ಣದಿಂದ, ಸುಖದಿಂದ ಕೂಡಿರಲಿ, ಪರರಿಗೆ ಯಾವುದೇ ಹಾನಿಯಾಗದಿರಲಿ ಎಂದು ಅವರು ಯೋಚಿಸುವರು.

8. ಜಲೂಕ ಪನ್ಹೋ (ಜಿಗಣೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜಿಗಣೆಯ ಗುಣವ್ಯಾವುದು?(263)
ಓ ಮಹಾರಾಜ, ಹೇಗೆ ಜಿಗಣೆಯನ್ನು ಎಲ್ಲೇ ಇರಲಿ, ಅದು ಅಲ್ಲಿ ದೃಢವಾಗಿ ಅಂಟಿಕೊಂಡು ರಕ್ತವನ್ನು ಕುಡಿಯುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಯಾವುದೇ ಧ್ಯಾನದ ವಿಷಯವಿರಲಿ ಆತನ ಮನಸ್ಸು ಅದಕ್ಕೆ ಕೇಂದ್ರೀಕೃತವಾಗಿ ಅಂಟಿಕೊಳ್ಳುತ್ತದೆ. ಅದರ ಬಣ್ಣ, ಆಕಾರ, ಸ್ಥಿತಿ, ವಿಸ್ತಾರ, ಮಿತಿ ಸ್ವಭಾವ ಮತ್ತು ಲಕ್ಷಣಗಳೆಲ್ಲಾ ಸ್ಥಿರವಾಗಿ ಕೇಂದ್ರೀಕೃತವಾಗಿ ವಿಮುಕ್ತಿಯ ಅಮೃತ ರಸವನ್ನು ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಿಗಣೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಅನುರುದ್ಧ ಥೇರರು ಹೀಗೆ ಹೇಳಿದ್ದಾರೆ:
ಪರಿಶುದ್ಧ ಚಿತ್ತದಿಂದ ಧ್ಯಾನವು ಸ್ಥಿರವಾಗಿ ನೆಲೆಯೂರುತ್ತದೆ. ಅಂತಹ ಚಿತ್ತವು ವಿಮುಕ್ತಿ ರಸವನ್ನು ತಡೆಯಿಲ್ಲದೆ ಸೇವಿಸುತ್ತದೆ.

9. ಸಪ್ಪಂಗ ಪನ್ಹೋ (ಸರ್ಪದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸರ್ಪದ 3 ಗುಣಗಳಾವುವು?(264)
ಓ ಮಹಾರಾಜ, ಹೇಗೆ ಸರ್ಪ ತನ್ನ ಉದರದಿಂದಲೇ ಚಲಿಸುವುದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪಞ್ಞದಿಂದ ಚಲಿಸುತ್ತಾನೆ. ಓ ರಾಜ, ಭಿಕ್ಷುವು ಪಞ್ಞದಿಂದಲೇ ಉನ್ನತಿ ಹೊಂದುತ್ತಾನೆ. ಧ್ಯಾನಶೀಲ ಭಿಕ್ಷುವಿನ ಚಿತ್ತವು ಜ್ಞಾನದ ಸ್ವಭಾವದ್ದಾಗಿರುತ್ತದೆ. ಆತನು ಅವಲಕ್ಷಣವನ್ನು ವಜರ್ಿಸಿ, ಸಲಕ್ಷಣವನ್ನು ವೃದ್ಧಿಸುತ್ತಾನೆ. ಇದೇ ಮಹಾರಾಜ, ಸರ್ಪವು ಹೊಂದಿರುವ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸರ್ಪವು ಔಷಧಿಯುತ ಗಿಡಗಳನ್ನು, ಅಂತಹವುಗಳನ್ನು ತೊರೆದು ಬೇರೆಡೆಯಿಂದ ಚಲಿಸುವುದೋ, ಅದೇರೀತಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ ದುಶ್ಚರಿತವನ್ನು ಪರಿತ್ಯಜಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸರ್ಪದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಯಾವಾಗ ಸರ್ಪವು ಮನುಷ್ಯರನ್ನು ಕಂಡರೆ ತಕ್ಷಣ ತಪಿಸುವುದು, ಚಿಂತೆಗೀಡಾಗುವುದು, ಭೀತವಾಗುವುದು. ಪಾರಾಗಲು ಹಾದಿ ಹುಡುಕುವುದು. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿರುತ್ತಾನೆ. ಆತನಲ್ಲಿ ಕುವಿತರ್ಕಗಳು (ಕೆಟ್ಟ ಯೋಚನೆಗಳು), ಅತೃಪ್ತಿಯು ಉದಯಿಸಿದಾಗ ಆತನು ತಪಿಸುತ್ತಾನೆ, ಭೀತನಾಗುತ್ತಾನೆ, ಚಿಂತೆಯು ಆವರಿಸುತ್ತದೆ. ಆತನು ಆ ದುಃಸ್ಥಿತಿಗಳಿಂದ ಪಾರಾಗಲು ಹಾದಿ ಹುಡುಕುತ್ತಾನೆ. ಆಗ ಹೀಗೆ ಹೇಳಿಕೊಳ್ಳುತ್ತಾನೆ ಇಂದು ನಾನು ಏನಾದರೂ ಎಚ್ಚರ ತಪ್ಪಿದರೆ, ಎಂದಿಗೂ ನಾನು ಸರಿಹೊಂದಿಸಿಕೊಳ್ಳಲಾರೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸರ್ಪದ ತೃತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಭಲ್ಲಾಟಿಯ ಜಾತಕದಲ್ಲಿ ಇಬ್ಬರು ಕಿನ್ನರರು ಹೀಗೆ ಹೇಳುತ್ತಾರೆ:
ಓ ಬೇಟೆಗಾರನೆ, ಇದೊಂದು ರಾತ್ರಿ ನಾವು ಮನೆಯಿಂದ ದೂರ ಕಳೆದಿದ್ದೇವೆ. ಹಾಗು ನಮ್ಮ ಇಚ್ಛೆಯ ವಿರುದ್ಧವಾಗಿ ಸಿಲುಕಿದ್ದೇವೆ ಮತ್ತು ಇಡೀ ರಾತ್ರಿಯು ಪರಸ್ಪರರ ಬಗ್ಗೆ ಯೋಚಿಸುತ್ತ ಕಾಲ ಕಳೆದಿದ್ದೇವೆ. ಆದರೂ ಇದೊಂದೇ ರಾತ್ರಿ ನಾವು ಶೋಕಿಸುವುದು ಮತ್ತು ದುಃಖಿಸುವುದು, ಮತ್ತೆಂದೂ ಇದು ಹಿಂತಿರುಗಲಾರದು.


10. ಅಜಗರ ಪನ್ಹೊ (ಹೆಬ್ಬಾವಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಹೆಬ್ಬಾವಿನ ಗುಣ ಯಾವುದು?(265)
ಓ ಮಹಾರಾಜ, ಹೇಗೆ ಹೆಬ್ಬಾವು ತನ್ನ ದೇಹದ ಉದ್ದದಂತೆ ಮಹತ್ತರವೋ, ಖಾಲಿ ಹೊಟ್ಟೆಯಲ್ಲೇ ಹಲವಾರು ದಿನಗಳು ಕಳೆಯುವುದೋ ಮತ್ತು ಅದಕ್ಕೆ ತನ್ನ ಹೊಟ್ಟೆ ತುಂಬಲು ಆಹಾರ ಇಲ್ಲದಿದ್ದರೂ ಸಹಾ ಅದು ಜೀವಂತವಾಗಿರುವಂತೆ ನಿರ್ವಹಿಸಿಕೊಳ್ಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿದವನಾಗಿ, ಆತನು ಆಹಾರಕ್ಕೆ, ದಾನಕ್ಕೆ ಅವಲಂಬಿತನಾಗಿರಬಹುದು. ಆದರೂ ಕೂಡದಿದ್ದುದನ್ನು ಆತನು ತೆಗೆದುಕೊಳ್ಳಲಾರ. ಆತನಿಗೆ ಹೊಟ್ಟೆ ತುಂಬಿಸಲು ಕಷ್ಟವಾಗಿರಬಹುದು, ಆದರೂ ಸಹಾ ಆತನು ಅರ್ಥ (ನಿಬ್ಬಾಣ) ವಶೀಕರಣ ಮಾಡಲು ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಆತನಿಗೆ ತಿನ್ನಲು ನಾಲ್ಕು ತುತ್ತು ಅಥವಾ ಮತ್ತೆ ಸಿಗಬಹುದು, ಮಿಕ್ಕ ಹೊಟ್ಟೆಯನ್ನು ಆತನು ನೀರಿನಿಂದಲೇ ತುಂಬಿಸಿಕೊಳ್ಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಹೆಬ್ಬಾವಿನ ಗುಣವಾಗಿದೆ ಮತ್ತು ಓ ರಾಜ, ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ತಿನ್ನುವುದು ಒಣ ಆಹಾರವೋ ಅಥವಾ ಹಸಿ ಆಹಾರವೋ ಅದನ್ನೇ ಇಲ್ಲವೆನ್ನುವುದರ ಬದಲು ಸೇವಿಸಲಿ. ಉತ್ತಮ ಭಿಕ್ಷುವು ಶೂನ್ಯದಲ್ಲೇ ಹೋಗುವನು ಮತ್ತು ಮಿತಾಹಾರಿ ಆಗಿಯೇ ಇರುವನು. ಆತನು ನಾಲ್ಕು ಅಥವಾ ಐದು ತುತ್ತು ಸೇವಿಸಿದ ನಂತರ ಹಾಗೆಯೇ ನೀರು ಕುಡಿಯಲಿ, ಯಾರ ಚಿತ್ತವು ಅರಹಂತತ್ವದ ಕಡೆಗೆ ಸುಲಭವಾಗಿ ನಾಟುವುದೋ ಆತನು ಇದನ್ನೆಲ್ಲಾ ಲೆಕ್ಕಿಸುವುದಿಲ್ಲ.
ಐದನೆಯ ಸಿಂಹವರ್ಗವು ಮುಗಿಯಿತು 

No comments:

Post a Comment