Thursday, 28 January 2016

milindapanhanibbanavaggoನಿಬ್ಬಾಣ ವಗ್ಗೊ

4. ನಿಬ್ಬಾಣ ವಗ್ಗೊ

1. ಫಸ್ಸಾದಿವಿನಿಬ್ಭುಜನ ಪನ್ಹೋ


                ರಾಜರು ಕೇಳಿದರು ಭಂತೆ ನಾಗಸೇನ, ನೀವು ಈಗ ಹೇಳಿದಂತಹ, ಯಾವ ಸ್ಥಿತಿಗಳು ಜೊತೆಯಲ್ಲಿ ಸಿಗುತ್ತವೊ ಅಥವಾ ಅವನ್ನು ಬಿಡಿಬಿಡಿಯಾಗಿ ಬೇರ್ಪಡಿಸಬಹುದೇ? ಅವುಗಳನ್ನು ಸ್ಪಷ್ಟವಾಗಿ ಗೋಚರಿಸುವುದಕ್ಕಾಗಿ ಹೀಗೆ ಮಾಡಬಹುದೇ ಅಂದರೆ ಇದು ಸ್ಪರ್ಶ, ಇದು ವೇದನಾ, ಇದು ಸಞ್ಞಾ, ಇದು ಚೇತನಾ, ಇದು ವಿಞ್ಞಾನ, ಇದು ವಿತಕ್ಕ, ಇದು ವಿಚಾರ ಎಂದು ಶುದ್ಧವಾಗಿ ಬೇರ್ಪಡಿಸಬಹುದೇ?      (43)
                ಇಲ್ಲಾ ಅವನ್ನು ಹಾಗೆ ಮಾಡಲಾಗದು.
                ಅದು ಹೇಗೆ ಉಪಮೆಯಿಂದ ವಿವರಿಸುವಿರಾ?
                ಮಹಾರಾಜರೇ ಊಹಿಸಿ, ಅರಮನೆಯ ಅಡಿಗೆ ಭಟ್ಟನು ಸಾರನ್ನೋ ಅಥವಾ ಪಾನಿಯವನ್ನು ಮಾಡುವುದಕ್ಕಾಗಿ ಮೊಸರನ್ನು, ಉಪ್ಪನ್ನು, ಶುಂಠಿಯನ್ನು, ಜಿರಿಗೆಯನ್ನು, ಮೆಣಸನ್ನು ಮತ್ತು ಇತರ ವ್ಯಂಜನಗಳನ್ನು ಬೆರೆಸುತ್ತಾನೆ. ಆಗ ರಾಜನು ಬಾಣಸಿಗನಿಗೆ ಹೀಗೆ ಆಜ್ಞೆ ಮಾಡುತ್ತಾನೆ ನೀವು ನನಗಾಗಿ ಈ ರೀತಿ ಮಾಡು. ಮೊಸರಿನ ವಾಸನೆ ತೆಗೆ, ಉಪ್ಪಿನ ರುಚಿ ತೆಗೆ, ಶುಂಠಿ-ಜೀರಿಗೆಯ ಸ್ವಾದ ತೆಗೆ, ಮೆಣಸಿನ ಕಾರವನ್ನು ತೆಗೆ. ಈಗ ಇದು ಸಾಧ್ಯವೇ ಮಹಾರಾಜ! ಅಲ್ಲಿ ಜೊತೆಗೆ ಸಾಗುತ್ತಿರುವ ಸುವಾಸನೆಯನ್ನು ತೆಗೆಯಲು ಆಗುವುದೊ? ಇಲ್ಲಿ ಕಹಿಯಿದೆ, ಇಲ್ಲಿ ಉಪ್ಪು, ಇಲ್ಲಿ ತೀಷ್ಣತೆಯಿದೆ, ಇಲ್ಲಿ ಆಮ್ಲತೆಯಿದೆ, ಇಲ್ಲಿ ಸಿಹಿಯಿದೆ ಮತ್ತು ಇಲ್ಲಿ ಸ್ತಂಭಕ ಗುಣವಿದೆ. ಅವನ್ನೆಲ್ಲಾ ತೆಗೆಯಲು ಸಾಧ್ಯವೇ?
                ಇಲ್ಲ, ಅದು ಸಾಧ್ಯವಿಲ್ಲ. ಆದರೆ ಪ್ರತಿ ಸುಗಂಧವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.
                ಅದೇ ರೀತಿಯಲ್ಲಿ ಮಹಾರಾಜ, ಧಮ್ಮದ ಸ್ಥಿತಿಗಳು ಸಹಾ ಜೊತೆಯಲ್ಲಿ ಸಾಗುತ್ತವೆ, ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲ.
                ನೀವು ಉತ್ತರಿಸುವುದರಲ್ಲಿ ಚತುರರು ಭಂತೆ.
                ನಾಗಸೇನರ ಪ್ರಶ್ನೆ : ಥೇರರು ಕೇಳಿದರು ಓ ಮಹಾರಾಜ, ಉಪ್ಪನ್ನು ಕಣ್ಣಿನಿಂದ ಗ್ರಹಿಸಬಹುದೇ?
                ಹೌದು ಭಂತೆ.
                ಆದರೆ ಏನನ್ನು ಹೇಳುತ್ತಿರುವೆಯೋ ಎಚ್ಚರವುಳ್ಳವನಾಗು.
                ಭಂತೆ, ಹಾಗಾದರೆ ಇದು ಜಿಹ್ವಾ (ನಾಲಿಗೆ)ಯಿಂದ ಗ್ರಹಿಸಬಹುದೇ?
                ಹೌದು ಇದು ಸರಿ.
                ಆದರೆ ಭಂತೆ, ನಾಲಿಗೆ ಮಾತ್ರವೇ ಎಲ್ಲಾರೀತಿಯ ಉಪ್ಪುಗಳನ್ನು ವ್ಯತ್ಯಾಸಬದ್ಧವಾಗಿ ಗ್ರಹಿಸುತ್ತದೆಯಲ್ಲವೇ?
                ಹೌದು ಎಲ್ಲಾ ಬಗೆಯನ್ನು.
                ಹಾಗಾದರೆ ಭಂತೆ, ಎತ್ತುಗಳೇಕೆ ಬಂಡಿಗಳ ಸಾಮಗ್ರಿಯನ್ನು ತರುತ್ತವೆ? ಉಪ್ಪಲ್ಲದೇ ಬೇರೆ ಯಾವುದು ಇರದೆ ಏಕೆ ಅದೇ ತರಬಾರದಿತ್ತು?
                ಉಪ್ಪು ತಾನಾಗಿಯೇ ತರಲು ಅಸಾಧ್ಯವಾಗಿದೆ, ಆದರೆ ಈ ಎಲ್ಲಾ ಸ್ಥಿತಿಗಳು ಒಂದಾಗಿಯೇ ಸಾಗುತ್ತವೆ ಮತ್ತು ಉಪ್ಪಿನಂತಹ ವೈಶಿಷ್ಟ್ಯ ವಸ್ತುವನ್ನು ಉತ್ಪಾದಿಸುತ್ತವೆ, ಓ ರಾಜನೇ ಉಪ್ಪನ್ನು ತೂಕ ಹಾಕಲು ಸಾಧ್ಯವೇ?
                ಖಂಡಿತ ಭಂತೆ.
                ಇಲ್ಲ ಮಹಾರಾಜ ನೀನು ತೂಕ ಹಾಕುತ್ತಿರುವುದು ಉಪ್ಪನ್ನಲ್ಲ, ಅದರ ರಾಶಿಯನ್ನು (ತೂಕವನ್ನು).
                ಓ ನೀವು ತಟ್ಟನೆ ಉತ್ತರಿಸುವುದರಲ್ಲಿ ಚತುರರು ಭಂತೆ.
. ವಿಮತಿಚ್ಛೇದನ ಪನ್ಹೋ
(ಬುದ್ಧಿ ಛೇಡಿಸುವಂತಹ ಪ್ರಶ್ನೆಗಳು)
3. ಪಂಚಯಾತನ ಕಮ್ಮನಿ ನಿಬ್ಬತ್ತ ಪನ್ಹೊ (ಐದು ಆಯತನದ ಕರ್ಮ ಪ್ರಶ್ನೆ)
                ರಾಜರು ಕೇಳಿದರು ಭಂತೆ ನಾಗಸೇನ, ಈ ಐದು ಆಯಾತನಗಳು (ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ದೇಹ) ಹಲವಾರು ಕರ್ಮಗಳ ಉತ್ಪನ್ನವೇ ಅಥವಾ ಏಕ ಕರ್ಮದಿಂದಾಗಿರುವುದೇ?      (44)
                ಹಲವಾರು ಕರ್ಮದಿಂದಾಗಿರುವುದು, ಏಕದಿಂದಲ್ಲ.
                ಉಪಮೆಯೊಂದನ್ನು ನೀಡುವಿರಾ?
                ಇದನ್ನು ಹೇಗೆ ಯೋಚಿಸುವಿರಿ ಮಹಾರಾಜ? ಈಗ ನಾನು ಐದು ವಿಧದ ಬೀಜಗಳನ್ನು ಬಿತ್ತುತ್ತೇನೆ. ಅವು ವಿವಿಧ ಬೆಳೆಯನ್ನು ಉತ್ಪಾದಿಸುವವೇ?
                ಖಂಡಿತ.
                ಅದೇ ರೀತಿಯಲ್ಲಿ ಆಯಾತನವೂ ಸಹಾ.
                ಒಳ್ಳೆಯದು ನಾಗಸೇನ.
4. ಕಮ್ಮ ನಾನಾ ಕಾರಣ ಪನ್ಹೋ (ಕರ್ಮ ಫಲದ ಪ್ರಶ್ನೆ)
                ರಾಜರು ಕೇಳಿದರು ಭಂತೆ ನಾಗಸೇನ, ಯಾವ ಕಾರಣದಿಂದ ಸರ್ವರೂ ಸಮನಾಗಿಲ್ಲ (ವಿಭಿನ್ನರಾಗಿದ್ದಾರೆ). ಕೆಲವರು ಅಲ್ಪಾಯುಗಳಾದರೆ, ಕೆಲವರು ದೀಘರ್ಾಯು ಗಳಾಗಿದ್ದಾರೆ. ಕೆಲವರು ರೋಗಿಗಳಾಗಿದ್ದರೆ, ಕೆಲವರು ಆರೋಗ್ಯವಂತರಾಗಿರುತ್ತಾರೆ, ಕೆಲವರು ಕುರೂಪಿಗಳಾಗಿದ್ದರೆ, ಕೆಲವರು ಸುಂದರರಾಗಿದ್ದಾರೆ, ಕೆಲವರು ಅಲ್ಪಶಕ್ತರಾಗಿದ್ದಾರೆ ಮತ್ತೆ ಕೆಲವರು ಮಹಾಶಕ್ತರಾಗಿದ್ದಾರೆ, ಕೆಲವರು ಬಡವರು ಮತ್ತೆ ಕೆಲವರು ಶ್ರೀಮಂತರಾಗಿದ್ದಾರೆ. ಕೆಲವರು ನೀಚಕುಲದಲ್ಲಿ ಹುಟ್ಟುವರು ಮತ್ತೆ ಕೆಲವರು ಮಹಾ ಕುಲದಲ್ಲಿ ಹುಟ್ಟುವರು, ಕೆಲವರು ದಡ್ಡರಾಗಿ ಹುಟ್ಟುವರು ಮತ್ತೆ ಕೆಲವರು ಪ್ರಜ್ಞಾವಂತರಾಗಿ ಹುಟ್ಟುತ್ತಾರೆ.          (45)
                ಥೇರರು ಕೇಳಿದರು : ಏಕೆ ಎಲ್ಲಾ ವೃಕ್ಷಗಳು (ಸಸ್ಯಗಳು) ಸಮವಾಗಿಲ್ಲ, ವಿಭಿನ್ನವಾಗಿದೆ. ಕೆಲವು ಹುಳಿ, ಕೆಲವು ಉಪ್ಪು ಮತ್ತೆ ಕೆಲವು ತೀಕ್ಷ್ಣ ಮತ್ತು ಕೆಲವು ಆಮ್ಲ, ಕೆಲವು ಖಾರ, ಕೆಲವು ಕಹಿ ಮತ್ತೆ ಕೆಲವು ಮಧುರವಾಗಿರುತ್ತದೆ?
                ಏಕೆಂದರೆ ಅವೆಲ್ಲವೂ ವಿಭಿನ್ನ ಬೀಜಗಳಿಂದಾಗಿವೆ.
                ಹಾಗೆಯೇ ಮಹಾರಾಜ, ಮಾನವರಲ್ಲೂ ಸಹ ಕರ್ಮದಿಂದಾಗಿ ವಿಬಿನ್ನವಾಗಿ ಹುಟ್ಟುತ್ತಾರೆ. ಇದರ ಬಗ್ಗೆ ಭಗವಾನರು ಹೀಗೆ ಹೇಳಿದ್ದಾರೆ. ಓ ಬ್ರಾಹ್ಮಣನೇ, ಪ್ರತಿ ಜೀವಿಗಳು ತಮ್ಮ ಕರ್ಮವನ್ನು ಅವಲಂಬಿಸಿವೆ, ಕರ್ಮವೇ ಅವರ ಆಸ್ತಿಯಾಗಿದೆ. ಕರ್ಮವೇ ಉತ್ತರಾಧಿಕಾರಿಯಾಗಿದೆ, ಕರ್ಮದಿಂದಲೇ ಹುಟ್ಟಿವೆ. ಕರ್ಮದಾಯಾದಿಗಳಾಗಿದೆ, ಕರ್ಮ ಬಂಧುವಾಗಿದೆ, ಕರ್ಮವೇ ಅದರ ಶರಣಾಗಿವೆ. ಅವರ ಕರ್ಮನುಸಾರವಾಗಿಯೇ ಅವರು ಉಚ್ಚ ನೀಚವಾಗಿ ವಿಭಜಿತವಾಗುತ್ತಾರೆ.
                ತುಂಬಾ ಒಳ್ಳೆಯದು ನಾಗಸೇನ.
5. ವಾಯಾಮಕರಣ ಪನ್ಹೋ (ಪ್ರಯತ್ನದ ಬಗ್ಗೆ ಪ್ರಶ್ನೆ)
                ರಾಜರು ಕೇಳಿದರು ನಾಗಸೇನ ನೀವು ಹೇಳಿದ ಪ್ರಕಾರ ನಿಮ್ಮ ಪಬ್ಬಜ್ಜವು ಈ ದುಃಖವನ್ನು ಅಂತ್ಯಗೊಳಿಸಿ, ಮುಂದೆ ದುಃಖ ಉದಯಿಸದಂತೆ ಮಾಡುವುದಾಗಿದೆ.
                ಹೌದು, ಇದು ಸರಿ.
                ಆದರೆ ಇದು ಸಿದ್ಧಿಸುವುದು ಹಿಂದಿನ ಪ್ರಯತ್ನಗಳಿಂದಲೋ ಅಥವಾ ಈಗಿನಿಂದ ವರ್ತಮಾನದಲ್ಲಿ ಪ್ರಯತ್ನಪಡಬೇಕಾಗಿರುವುದೋ?       (46)
                ಥೇರರು ಉತ್ತರಿಸಿದರು ಹಿಂದಿನ ಪ್ರಯತ್ನದಿಂದ ಮಾಡಬೇಕಾದ್ದು ಮಾಡಿಯಾಗಿದೆ. ಉಳಿದಂತಹ ಕಾರ್ಯಕ್ಕೆ ಈಗ ಪ್ರಯತ್ನಪಡಬೇಕಾಗಿದೆ.
                ಇದನ್ನು ಉಪಮೆಯಿಂದ ವಿವರಿಸುವಿರಾ?
                ಇದನ್ನು ಹೇಗೆ ಯೋಚಿಸುವಿರಿ ಓ ರಾಜ? ನಿಮಗೆ ಬಾಯಾರಿಕೆಯಾದರೆ ಬಾವಿಯನ್ನು ಅಗೆಯಲು ಹೋಗುವಿರಾ ಅಥವಾ ಕೃತಕ ಸರೋವರವನ್ನು ನಿಮರ್ಿಸಲು ಹೋಗುವಿರಾ?
                ಖಂಡಿತ ಇಲ್ಲ.
                ಅದೇರೀತಿಯಲ್ಲಿ ರಾಜ, ಉಳಿದಿರುವಂತಹುದಕ್ಕೆ ಈಗ ಶ್ರಮಿಸಬೇಕಾಗಿದೆ. ಹಿಂದಿನ ಪ್ರಯತ್ನದಿಂದ ಮಾಡಬೇಕಾಗಿರುವುದು ಮಾಡಿಯಾಗಿದೆ.
                ಇನ್ನೊಂದು ಉಪಮೆಯಿಂದ ವಿವರಿಸುವಿರಾ?
                ಇದನ್ನು ಹೇಗೆ ಯೋಚಿಸುವಿರಿ ಮಹಾರಾಜ? ನಿಮಗೆ ಯಾವಾಗ ಹಸಿವು ಆಗುತ್ತದೆಯೋ, ಆಗ ನಾವು ಹೊಲಕ್ಕೆ ಹೋಗಿ ನೇಗಿಲು ಹೊಡೆದು, ಬೀಜಗಳನ್ನು ಬಿತ್ತಿ, ಫಸಲನ್ನು ಕತ್ತರಿಸಿ ನಂತರ ಅದರಿಂದ ಊಟ ಸಿದ್ಧಪಡಿಸಿ ತಿನ್ನುವಿರಾ?
                ಖಂಡಿತ ಇಲ್ಲ ಭಂತೆ.
                ಅದೇ ರೀತಿಯಲ್ಲಿ ಮಹಾರಾಜ, ಉಳಿದಿರುವಂತಹ ಕಾರ್ಯಕ್ಕೆ ಈಗ ಶ್ರಮಿಸಬೇಕಾಗಿದೆ. ಹಿಂದಿನ ಪ್ರಯತ್ನದಿಂದ ಮಾಡಬೇಕಾಗಿರುವುದು ಮಾಡಿಯಾಗಿದೆ.
                ಇನ್ನೊಂದು ಉಪಮೆ ನೀಡಬಲ್ಲಿರಾ?
                ಈಗ ಇದನ್ನು ಹೇಗೆ ಯೋಚಿಸುವಿರಿ ಮಹಾರಾಜ? ಯಾವಾಗ ನಿಮ್ಮ ಮೇಲೆ ಯುದ್ಧ ವ್ಯೂಹ ರಚಿಸಿ, ಯುದ್ಧಕ್ಕೆ ಆಹ್ವಾನಿಸಿದಾಗ ಅಥವಾ ಆಕ್ರಮಣ ಮಾಡುವಾಗ ನೀವು ಕಂದಕ ತೋಡುವುದು, ಗೋಡೆ ಕಟ್ಟುವುದು, ಗೋಚರಸ್ತಂಭ ನಿಮರ್ಿಸುವುದು ಅಥವಾ ಕೋಟೆ ಕಟ್ಟುವುದು ಅಥವಾ ಆಹಾರ ಸಂಗ್ರಹಿಸುವುದು ಇವನ್ನೆಲ್ಲಾ ಮಾಡುವಿರಾ? ಹಾಗೆಯೇ ಚದುರಂಗದ ಸೈನ್ಯಕ್ಕೆ ಯುದ್ಧವು ಹೇಗೆ ಮಾಡಬೇಕೆಂದು ಕಲಿಸುವಿರಾ?
                ಖಂಡಿತ ಇಲ್ಲ ಭಂತೆ.
                ಅದೇರೀತಿಯಲ್ಲಿ ಮಹಾರಾಜ, ಉಳಿದಿರುವಂತಹ ಕಾರ್ಯಕ್ಕೆ ಈಗ ಶ್ರಮಿಸಬೇಕಾಗಿದೆ. ಹಿಂದಿನ ಪ್ರಯತ್ನದಿಂದ, ಮಾಡಬೇಕಾಗಿರುವುದು ಮಾಡಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಗವಾನರು ಹೀಗೆ ಹೇಳಿದ್ದಾರೆ:
                ಪ್ರಜ್ಞಾವಂತರು ತಮ್ಮ ಕ್ಷೇಮವನ್ನು ಕಂಡು ಸಕಾಲದಲ್ಲಿ ಪರಿಶ್ರಮಪಟ್ಟು ಕಾಲಕ್ಕೆ ಮುಂಚೆಯೇ ಕಾರ್ಯ ಪೂರೈಸುವರು. ಅವರ ಮನೋವೃತ್ತಿಯು ಬಂಡಿಗಾರನಂತಲ್ಲ, ಬದಲಾಗಿ ದೃಢತೆಯಿಂದ, ಸ್ಥಿರವಾಗಿ ಹೆಜ್ಜೆಯನ್ನು ಇಡುವರು. ಒರಟು ಬಂಡಿಗಾರನು ಸಮನಾದ, ನುಣುಪಾದ ಹೆದ್ದಾರಿ ಬಿಟ್ಟು, ಅಡ್ಡದಾರಿಯಲ್ಲಿ ತಿರುಗಿಸಿ ಒದ್ದಾಡುವರು. ಅದರಂತೆಯೇ ಬಲಹೀನ ಮನಸ್ಕನು ತನ್ನ ಹಿತವನ್ನು ನಿರ್ಲಕ್ಷಿಸಿ, ಪಾಪದ ಹಿಂದೆ ಧಾವಿಸಿ ಶೋಕಪೀಡಿತನಾಗುವನು. ಅಗತ್ಯವಿರುವಾಗ ಹಣವನ್ನು ಜೂಜಿನಲ್ಲಿ ಕಳೆದುಕೊಂಡವನಂತೆ ಮೃತ್ಯುವಿನ ವಶವಾಗುತ್ತ ಪ್ರಲಾಪಿಸುವನು.
                ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ.
6. ನೆರಯಿಕಗ್ಗಿ ಉಣ್ಣಭಾವ ಪನ್ಹೊ (ನರಕಾಗ್ನಿಯ ಪ್ರಶ್ನೆ)
                ರಾಜರು ಕೇಳಿದರು ಭಂತೆ ನಾಗಸೇನ, ನೀವು ಹೇಳುವಿರಿ, ನರಕಾಗ್ನಿಯ ಬೆಂಕಿಯು ಸಾಮಾನ್ಯ ಅಗ್ನಿಗಿಂತ ಭೀಕರವಾದುದು, ಸಣ್ಣ ಕಲ್ಲನ್ನು ಸಾಮಾನ್ಯ ಬೆಂಕಿಗೆ ಎಸೆದಾಗ ಒಂದು ದಿನವಾದರೂ ನಾಶವಾಗದೆ ಹೊಗೆ ಬರುವುದು. ಆದರೆ ಮೇಲ್ಭಾಗದ ಕೋಣೆಯಷ್ಟು ದೊಡ್ಡ ಬಂಡೆಯೂ ಸಹಾ ಕ್ಷಣದಲ್ಲಿ ಭಸ್ಮವಾಗುವುದೆಂದು ಹೇಳುವಿರಿ ಇದನ್ನು ನಾನು ನಂಬಲಾರೆ. ಹಾಗೆಯೇ ಮತ್ತೊಂದೆಡೆ ನೀವು ಹೀಗೆ ಹೇಳುವಿರಿ ಯಾವುದೇ ಜೀವಿಗಳಾಗಲಿ, ನರಕದಲ್ಲಿ ಉದಯಿಸಿದಾಗ ಅವು ನೂರು ಅಥವಾ ಸಾವಿರಾರು ವರ್ಷಗಳಾದರೂ ನಾಶವಾಗುವುದಿಲ್ಲ ನಾನು ಇದನ್ನು ಸಹಾ     ನಂಬಲಾರೆ.        (47)
                ಆಗ ಥೇರರು ಕೇಳಿದರು ಇದರ ಕುರಿತು ನೀವು ಹೇಗೆ ಯೋಚಿಸುವಿರಿ ಮಹಾರಾಜ? ಹೆಣ್ಣು ಮಕರಿಣಿ (ಷಾಕರ್್), ಮೊಸಳೆಗಳು, ಆಮೆಗಳು ಹಾಗು ನವಿಲು, ಪಾರಿವಾಳಗಳು ಕಲ್ಲುಗಳನ್ನು ಮತ್ತು ಬಂಡೆಯ ಚೂರುಗಳನ್ನು ನುಂಗುತ್ತವೆಯೇ?
                ಹೌದು ಭಂತೆ, ಅವು ತಿನ್ನುವುವು.
                ಹಾಗಾದರೆ ಈ ಕಠಿಣ ವಸ್ತುಗಳು ಅವುಗಳ ಹೊಟ್ಟೆ ಸೇರಿ ಆಂತರ್ಯದ ಕಿಬ್ಬೊಟ್ಟೆಗೆ ಹಾನಿ ಮಾಡುವುದಿಲ್ಲವೇ?
                ಹೌದು ಮಾಡಬಲ್ಲವು.
                ಹಾಗಾದರೆ ಅದೇ ಪ್ರಾಣಿಯ ಬ್ರೂಣವು ಹಾನಿಗೆ ಒಳಗಾಗುವುದೇ?
                ಇಲ್ಲ.
                ಆದರೆ ಏಕಿಲ್ಲ.
                ಭಂತೆ ಬಹುಶಃ ಕರ್ಮದ ಪ್ರಭಾವದಿಂದಾಗಿ ಅವು ಪಾರಾಗಿರಬಹುದು.
                ಅದೇರೀತಿಯಲ್ಲಿ ಮಹಾರಾಜ, ಜೀವಿಗಳ ಕರ್ಮದ ಪ್ರಭಾವದಿಂದಾಗಿ ಅವು ಸಾವಿರ ವರ್ಷಗಳಷ್ಟು ಕಾಲ ನರಕದಲ್ಲಿದ್ದರೂ ಸಹಾ ಅವು ನಾಶವಾಗಲಾರದು. ಒಂದುವೇಳೆ ಅವು ಅಲ್ಲಿ ಪುನರ್ಜನ್ಮ ತಾಳಿದರೆ, ಅಲ್ಲೆ ಬೆಳೆದು ಅಲ್ಲೇ ಸಾಯುತ್ತದೆ. ಇದರ ಬಗ್ಗೆ ಓ ರಾಜ, ಭಗವಾನರು ಹೀಗೆ ಹೇಳಿದ್ದಾರೆ: ಆತನ ಪಾಪಕರ್ಮವು ಬರಿದಾಗುವವರೆಗೂ ಆತನು ಸಾಯಲಾರ.
                ಇನ್ನೊಂದು ಉಪಮೆ ನೀಡುವಿರಾ?
                ಇದನ್ನು ಹೇಗೆ ಯೋಚಿಸುವಿರಿ ಓ ರಾಜ? ಸಿಂಹಿಣಿಯು, ಹೆಣ್ಣು ಹುಲಿಯು, ಹೆಣ್ಣು ಚಿರತೆಯು ಮತ್ತು ಹೆಣ್ಣು ನಾಯಿಯು ಮೂಳೆಗಳನ್ನು ತಿನ್ನುತ್ತವೆಯೇ?
                ಹೌದು ಭಂತೆ, ಅವು ತಿನ್ನುವವು.
                ಹಾಗೆ ಅದು ತಿಂದಾಗ ಅವುಗಳ ಕಿಬ್ಬೊಟ್ಟೆಯ ಆಂತರ್ಯದ ಭಾಗವು ಹಾನಿ ಆಗುವುದಿಲ್ಲವೇ?
                ಹೌದು.
                ಆದರೆ ಆ ಸ್ತ್ರೀಯ ಗರ್ಭದಲ್ಲಿರುವ ಮಗುವಿಗೆ ಅದರಿಂದ ಹಾನಿಯಾಗುವುದೇ?
                ಇಲ್ಲ.
                ಏಕಿಲ್ಲ.
                ಭಂತೆ, ಬಹುಶಃ ಕರ್ಮದ ಪ್ರಭಾವದಿಂದಾಗಿ ಅವು ಹಾನಿಯಿಂದ ಪಾರಾಗಿವೆ.
                ಅದೇರೀತಿಯಲ್ಲಿ ಓ ಮಹಾರಾಜ, ಕರ್ಮದ ಪ್ರಭಾವದಿಂದಾಗಿ ನರಕದ ಜೀವಿಗಳು ಸಾವಿರಾರು ವರ್ಷಗಳ ಕಾಲ ನರಕದಲ್ಲಿದ್ದರೂ ಸಹಾ ಅವು ಸಾಯಲಾರವು. ಪುನರ್ಜನ್ಮ ಪಡೆದರೇ ಅಲ್ಲೇ ಬೆಳೆದು ಅಲ್ಲೇ ಸಾಯುತ್ತವೆ. ಇದರ ಬಗ್ಗೆ ಭಗವಾನರು ಹೀಗೆ ನುಡಿದಿದ್ದಾರೆ: ಆತನ ಪಾಪಕಮ್ಮವು ಬರಿದಾಗುವವರೆಗೂ ಆತನು ಸಾಯಲಾರ.
                ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ.
7. ಪಥವಿಸಂಧಾರಣ ಕಥಾ (ಪೃಥ್ವಿಯ ಆಧಾರದ ಪ್ರಶ್ನೆ)
                ರಾಜರು ಕೇಳಿದರು ಭಂತೆ ನಾಗಸೇನ, ನೀವು ಹೇಳುವಿರಿ ಈ ಪೃಥ್ವಿಯು ನೀರಿನ ಮೇಲೆ ಇದೆ ಹಾಗು ನೀರು ವಾಯುವಿನ (ವಾತಾವರಣದ) ಅಧಾರದ ಮೇಲೆ ಇದೆ. ಹಾಗು ವಾಯುವು ಆಕಾಶದಲ್ಲಿದೆ ಎಂದು. ಇದನ್ನು ಸಹಾ ನಾನು ನಂಬಲಾರೆ.           (48)
                ಆಗ ಥೇರರು ಧಮ್ಮಕರಕೆನ ಎಂಬ ವಿಶಿಷ್ಟ ನಿಯಂತ್ರಿತ ಶುದ್ಧೀಕರಣ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡರು ಮತ್ತು ಮಿಲಿಂದರಿಗೆ ಅದನ್ನು ತೋರಿಸಿದಾಗ, ಸಾಕ್ಷಿ ಸಮೇತ ಅದನ್ನು ಕಂಡ ಮಿಲಿಂದನಿಗೆ ಹೀಗೆ ಹೇಳಿದರು. ಈ ನೀರು ವಾಯುವಿನಿಂದ ಆಧಾರವಾಗಿದೆ ಮತ್ತು ಹಾಗೆಯೇ ಗಾಳಿಯಿಂದ ನೀರು ಸಲಹಲ್ಪಡುವುದು.
                ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ.
8. ನಿರೋಧ-ನಿಬ್ಬಾಣ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ, ನಿರೋಧವೇ ನಿಬ್ಬಾಣ ಇದು
ಸರಿಯೇ?  (49)
                ಹೌದು ಮಹಾರಾಜ ನಿರೋಧವೇ ನಿಬ್ಬಾಣವಾಗಿದೆ.
                ಭಂತೆ, ನಿರೋಧವು ನಿಬ್ಬಾಣ ಹೇಗಾಗುತ್ತದೆ?
                ಓ ಮಹಾರಾಜ, ಎಲ್ಲಾ ಮೂಢ ಪ್ರಾಪಂಚಿಕರು ಇಂದ್ರೀಯಗಳಲ್ಲಿ ಮತ್ತು ಇಂದ್ರೀಯ ವಿಷಯಗಳಲ್ಲಿ ಆನಂದಿಸುವರು ಮತ್ತು ಅದನ್ನು ಅಂಟುವರು. ಹೀಗಾಗಿ ಅವು ಭವ ಪ್ರವಾಹಕ್ಕೆ ಸಿಲುಕುವವು. ನಂತರ ಅವು ಜನ್ಮದಿಂದ ಜರಾ, ಜರೆ, ಮೃತ್ಯುವಿನಿಂದ, ದುಃಖರಾಶಿಯಿಂದ ಪಾರಾಗಲಾರವು. ಆದರೆ ಓ ರಾಜನೇ, ಪ್ರಾಜ್ಞರು, ಆರ್ಯ ಶ್ರಾವಕರು, ಅವುಗಳಲ್ಲಿ ಆನಂದಿಸಲಾರರು, ಹಾಗೆಯೇ ಅಂಟಲಾರರು. ಹೀಗಾಗಿ ಅವರುಗಳ ತನ್ಹಾವು ನಿರೋಧವಾಗುವುದು. ತನ್ಹಾದ ನಿರೋಧದಿಂದ, ಉಪದಾನ (ಅಂಟುವಿಕೆ) ನಿರೋಧ ಆಗುವುದು. ಉಪದಾನದ ನಿರೋಧದಿಂದ ಭವದ ನಿರೋಧವಾಗುವುದು, ಭವದ ನಿರೋಧದಿಂದ ಜನ್ಮ ನಿರೋಧವು, ಜನ್ಮ ನಿರೋಧದಿಂದ ಸರ್ವ ದುಃಖರಾಶಿಯ ನಿರೋಧವಾಗುವುದು. ಹೀಗಾಗಿ ನಿರೋಧದಿಂದ ದುಃಖರಾಶಿಯ ಅಂತ್ಯವಾಗುತ್ತದೆ. ಆದ್ದರಿಂದ ನಿರೋಧವೇ ನಿಬ್ಬಾಣವಾಗಿದೆ.
                ನೀವು ಉತ್ತರಿಸುವುದರಲ್ಲಿ ಚತುರರು ನಾಗಸೇನ.
9. ನಿಬ್ಬಾಣ ಲಭ್ಯತೆಯ ಪ್ರಶ್ನೆ
                ರಾಜರು ಕೇಳಿದರು ಭಂತೆ ನಾಗಸೇನ, ಸರ್ವರಿಗೂ ನಿಬ್ಬಾಣವು ಲಭ್ಯವೇ?(50)
                ಇಲ್ಲ ಮಹಾರಾಜ, ಆದರೆ ಯಾರು ಸಮ್ಮಾ ಹಾದಿಯಲ್ಲಿ ನಡೆದಿರುವರೋ, ಅರಿಯಬೇಕಾದ್ದನ್ನು ಅರಿತಿರುವರೋ, ಗ್ರಹಿಸಬೇಕಾಗಿರುವುದನ್ನು ಗ್ರಹಿಸಿರುವರೋ, ತ್ಯಜಿಸಬೇಕಾದುದನ್ನು ತ್ಯಜಿಸಿರುವರೋ, ವೃದ್ಧಿಸಬೇಕಾಗಿರುವುದನ್ನು ಅಭಿವೃದ್ಧಿಗೊಳಿಸಿ ರುವರೋ, ಸಾಕ್ಷಾತ್ಕರಿಸಬೇಕಾದುದನ್ನು ಸಾಕ್ಷಾತ್ಕರಿಸಿರುವರೋ ಅವರು ಮಾತ್ರ ನಿಬ್ಬಾಣವನ್ನು ಪ್ರಾಪ್ತಿ ಮಾಡುವರು.
                ಬಹು ಚೆನ್ನ ನಾಗಸೇನ.
10. ನಿಬ್ಬಾಣ ಸುಖಜಾನನ ಪನ್ಹೊ (ನಿಬ್ಬಾಣ ಸುಖದ ಪ್ರಶ್ನೆ)
                ರಾಜರು ಕೇಳಿದರು ಭಂತೆ ನಾಗಸೇನ, ನಿಬ್ಬಾಣ ಪ್ರಾಪ್ತಿ ಮಾಡದವನು ಅದು ಪರಮಸುಖಕರ ಎಂದು ಅರಿಯಲು ಸಾಧ್ಯವೇ?               (51)
                ಹೌದು ಅರಿಯಲು ಸಾಧ್ಯ.
                ನಿಬ್ಬಾಣ ಪ್ರಾಪ್ತಿಯಾಗದೆ ಅದು ಹೇಗೆ ಗೊತ್ತಾಗುತ್ತದೆ?
                ಇದರ ಕುರಿತು ಹೇಗೆ ಹೇಳುವೆ ರಾಜ, ಯಾರಿಗೆ ಕೈಕಾಲುಗಳು ಕತ್ತರಿಸದೆ ಇದ್ದರೂ ಸಹಾ ಕೈಕಾಲು ಕತ್ತರಿಸಲ್ಟಟ್ಟಿರುವವರ ದುಃಖವನ್ನು ಅರಿಯಲು ಸಾಧ್ಯವೇ?
                ಹೌದು ಅರಿಯಲು ಸಾಧ್ಯ.
                ಆದರೆ ಅವರಿಗೆ ಹೇಗೆ ಗೊತ್ತಾಗುತ್ತದೆ?
                ಕತ್ತರಿಸಲ್ಪಟ್ಟವರ ಗೋಳು, ಪ್ರಲಾಪಗಳನ್ನು ನೋಡಿ, ಕೇಳಿ ಗೊತ್ತಾಗುತ್ತದೆ.
                ಅದೇರೀತಿಯಲ್ಲಿ ಮಹಾರಾಜ, ನಿಬ್ಬಾಣ ಹೊಂದಿದವರನ್ನು ನೋಡಿ, ಅವರ ಸುಖ ಉದ್ಗಾರ ನುಡಿಗಳನ್ನು ಕೇಳಿ, ನಿಬ್ಬಾಣವು ಪರಮಸುಖ ಎಂದು ಅರಿಯಬಹುದು.
                ತುಂಬಾ ಒಳ್ಳೆಯದು ನಾಗಸೇನ.


ನಾಲ್ಕನೆಯ ನಿಬ್ಬಾಣ ವಗ್ಗ ಮುಗಿಯಿತು (ಇದರಲ್ಲಿ 10 ಪ್ರಶ್ನೆಗಳಿವೆ)

No comments:

Post a Comment