3. ವಿಚಾರ ವಗ್ಗೊ
1. ಅದ್ಧಾನ ಮೂಲ ಪನ್ಹೊ (ಕಾಲದ ಮೂಲ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಭೂತಕಾಲಕ್ಕೆ ಮೂಲ ಯಾವುದು, ವರ್ತಮಾನ ಕಾಲಕ್ಕೆ
ಮೂಲ ಯಾವುದು ಮತ್ತು ಭವಿಷ್ಯ ಕಾಲಕ್ಕೆ ಮೂಲ
ಯಾವುದು? (28)
ಅತೀತ (ಭೂತ) ಕಾಲಕ್ಕೆ ಮೂಲ ಅವಿದ್ಯೆ
(ಅಜ್ಞಾನ)ವಾಗಿದೆ ಮಹಾರಾಜ.
ಅಜ್ಞಾನದಿಂದ ಸಂಖಾರಗಳು ಉದಯಿಸುತ್ತದೆ.
ಸಂಖಾರಗಳಿಂದ ವಿನ್ಯಾನವು ಉದಯಿಸುತ್ತವೆ.
ವಿನ್ಯಾನದಿಂದ ನಾಮರೂಪಗಳು ಉದಯಿಸುತ್ತವೆ,
ನಾಮರೂಪಗಳಿಂದ ಆರು ಇಂದ್ರೀಯಗಳ ಆಧಾರಗಳು
ಉದಯಿಸುತ್ತವೆ.
ಆರೂ ಇಂದ್ರೀಯಗಳಿಂದ ಸ್ಪರ್ಶ ಉದಯಿಸುತ್ತದೆ.
ಸ್ಪರ್ಶದಿಂದ ವೇದನೆಗಳು ಉದಯಿಸುತ್ತವೆ.
ವೇದನೆಗಳಿಂದ ತೀವ್ರ ಬಯಕೆ (ತನ್ಹಾ)
ಉದಯಿಸುತ್ತವೆ.
ತನ್ಹಾದಿಂದ ಉಪಾದಾನ (ಅಂಟುವಿಕೆ)
ಉದಯಿಸುತ್ತವೆ.
ಅಂಟುವಿಕೆಯಿಂದ ಭವವು ಉದಯಿಸುತ್ತದೆ.
ಭವದಿಂದ ಜನ್ಮವು ಉದಯಿಸುತ್ತದೆ.
ಜನ್ಮದಿಂದ ದುಃಖರಾಶಿಯು ಉಂಟಾಗುತ್ತದೆ.
ಹೀಗಾಗಿ ಅತೀತದ ಚರಮ ಅಂಶವು
ಅರಿಯಲಾಗುವುದಿಲ್ಲ.
ಒಳ್ಳೆಯದು ನಾಗಸೇನ.
2. ಪುರಿಮಕೊಟಿ ಪನ್ಹೋ (ಅತೀತದ ಆದಿಯ ಪ್ರಶ್ನೆ)
ರಾಜರು ಕೇಳಿದರು : ನೀವು ಆತೀತದ ಚರಮ ಅಂಶವು
ಅರಿಯಲಾಗುವುದಿಲ್ಲ ಎಂದು ಹೇಳಿದಿರಿ, ಇದನ್ನು ಉಪಮೆಯಿಂದ
ಸ್ಪಷ್ಟಪಡಿಸಿ. (29)
ಓ ರಾಜನೆ, ಹೀಗೆ ಊಹಿಸಿ. ಒಬ್ಬ ಮನುಷ್ಯ ಒಂದು ಪುಟ್ಟ ಬೀಜವನ್ನು ಬಿತ್ತುತ್ತಾನೆ.
ಅದು ಮೊಳಕೆಯೊಡೆದು, ಬೆಳೆದು, ವೃದ್ಧಿಯಾಗಿ ಮರವಾಗಿ ಫಲ ನೀಡುತ್ತದೆ ಮತ್ತು ಆಗ ಆ ಮನುಷ್ಯ ಮತ್ತೆ
ಅದರ ಬೀಜವನ್ನು ಬಿತ್ತುತ್ತಾನೆ. ಹೀಗೆಯೇ ಕ್ರಿಯೆ ನಿರಂತರವಾಗಿ ನಡೆಯುತ್ತದೆ. ಈ ಕ್ರಿಯೆಗಳಿಗೆ
ಅಂತ್ಯವೆಂಬುದು ಇದೆಯೇ?
ಖಂಡಿತ ಇಲ್ಲ ಭಂತೆ.
ಅದೇರೀತಿಯಾಗಿ ಓ ಮಹಾರಾಜ, ಅತೀತದ ಚರಮ ಅಂಶವು ಅರಿಯಲು ಆಗುವುದಿಲ್ಲ.
ಇನ್ನೊಂದು ಉಪಮೆ ನೀಡಬಲ್ಲಿರಾ?
ಒಂದು ಕೋಳಿಯು ಮೊಟ್ಟೆ ಇಡುವುದು, ಮೊಟ್ಟೆಯಿಂದ ಮತ್ತೆ ಕೋಳಿ ಬರುವುದು. ಹಾಗೆಯೇ ಕೋಳಿಯಿಂದ ಮತ್ತೆ
ಮೊಟ್ಟೆ ಬರುವುದು. ಈ ಪ್ರಕ್ರಿಯೆಗೆ ಅಂತ್ಯವಿದೆಯೇ?
ಇಲ್ಲ ಭಂತೆ.
ಹಾಗೆಯೇ ಮಹಾರಾಜ, ಅತೀತದ ಚರಮ ಅಂಶವನ್ನು ಯಾರೂ ಅರಿಯಲು ಸಾಧ್ಯವಾಗುವುದಿಲ್ಲ.
ಇನ್ನೊಂದು ಉಪಮೆ ನೀಡಬಲ್ಲಿರಾ?
ಆಗ ಥೇರರು ಭೂಮಿಯಲ್ಲಿ ಒಂದು ವೃತ್ತವನ್ನು
ಎಳೆದರು ಮತ್ತು ರಾಜನಿಗೆ ಹೀಗೆ ಪ್ರಶ್ನಿಸಿದರು ಈ ವೃತ್ತಕ್ಕೆ ಯಾವುದಾದರೂ ಅಂತ್ಯವಿದೆಯೆ?
ಇಲ್ಲ ಇದಕ್ಕೆ ಅಂತ್ಯವಿಲ್ಲ.
ಒಳ್ಳೆಯದು ಇದು ಇಂತಹ ಚಕ್ರಗಳ ರೀತಿಯಲ್ಲಿ
ಎಂದು ಭಗವಾನರು ಹೇಳಿದ್ದಾರೆ. ಹೇಗೆಂದರೆ ಚಕ್ಷು ಮತ್ತು ರೂಪ (ದೃಶ್ಯ)ದಿಂದ ಚಕ್ಷುವಿಞ್ಞಾನ
ಉಂಟಾಗುತ್ತದೆ. ಈ ಮೂರರ ಸಂಗಮವು ಸ್ಪರ್ಶವೆಂದಾಗುತ್ತದೆ, ಸ್ಪರ್ಶದಿಂದ ವೇದನೆ
ಉಂಟಾಗುತ್ತದೆ. ವೇದನೆಯಿಂದ ತನ್ಹಾವು ಉಂಟಾಗುತ್ತದೆ. ತನ್ಹಾದಿಂದ ಉಪದಾನ (ಅಂಟುವಿಕೆ)
ಉಂಟಾಗುತ್ತದೆ. ಅಂಟುವಿಕೆಯಿಂದ ಕರ್ಮವು ಸಂಭವಿಸುತ್ತದೆ, ಕರ್ಮದಿಂದ ಪುನಃ
ಚಕ್ಷುವು ಉಂಟಾಗುತ್ತದೆ. ಈಗ ಈ ಪ್ರಕ್ರಿಯೆಗೆ ಅಂತ್ಯವಿದೆಯೇ?
ಇಲ್ಲ.
ಇದೇ ರೀತಿಯಾಗಿ ಇತರ ಇಂದ್ರೀಯಗಳಾದ ಕಿವಿ, ಮೂಗು, ನಾಲಿಗೆ, ದೇಹ ಮತ್ತು ಚಿತ್ತದ ಬಗ್ಗೆ ಹೀಗೆ ವಿವರಿಸಿ. ಅದೇ ಪ್ರಶ್ನೆಯನ್ನು
ನಾಗಸೇನರವರು ಕೇಳಿದರು. ಅದಕ್ಕೆಲ್ಲಾ ಅವರು ಇಲ್ಲವೆಂದೇ ಪ್ರತಿಕ್ರಿಯಿಸಿದರು.
ಹೀಗೆಯೇ ಓ ಮಹಾರಾಜ, ಅತೀತರು ಪರಮ ಅಂಶವನ್ನು ಅರಿಯಲಾಗುವುದಿಲ್ಲ.
ನೀವು ವಿವರಿಸುವುದರಲ್ಲಿ ಚತುರರು ನಾಗಸೇನ.
3. ಕೋಟಿ ಪಞ್ಞಯನ ಪನ್ಹೋ (ಅತೀತ ಪ್ರಜ್ಞಾ ಪ್ರಶ್ನೆ)
ರಾಜರು ಕೇಳಿದರು - ನೀವು ಚರಮ ಅಂಶವನ್ನು
ಅರಿಯುವುದಿಲ್ಲ ಎಂದು ಹೇಳಿದಿರಿ, ಏನಿದು ಚರಮ
(ಅಂತ್ಯದ) ಅಂಶ? (30)
ಯಾವುದೇ ಅತೀತ (ಭೂತಕಾಲ) ಕಾಲವನ್ನು ನಾನು
ಚರಮ ಅಂಶವೆಂದು ಹೇಳಿದ್ದೇನೆ.
ಆದರೆ ಭಂತೆ, ನೀವು ಅತೀತ ಕಾಲವನ್ನು ಅರಿಯಲಾಗುವುದಿಲ್ಲ ಎಂದಿರಲ್ಲವೆ? ಅತೀತದ ಎಲ್ಲಾವನ್ನು ಅರಿಯಲಾಗುವುದಿಲ್ಲವೆ?
ಸ್ವಲ್ಪ ಅರಿಯಬಹುದು, ಸ್ವಲ್ಪ ಅರಿಯಲಾಗುವುದಿಲ್ಲ.
ಹಾಗಾದರೆ ಯಾವುದನ್ನು ಅರಿಯಬಹುದು ಮತ್ತು
ಯಾವುದನ್ನು ಅರಿಯ ಲಾಗುವುದಿಲ್ಲ.
ಓ ಮಹಾರಾಜ, ಹಿಂದೆ ಪ್ರತಿಯೊಂದರಲ್ಲೂ, ಪ್ರತಿ ಅಂಶದಲ್ಲೂ, ಸರ್ವದರಲ್ಲೂ ಅಜ್ಞಾನವಿತ್ತು. ಇದು ನಮಗೆ ಹೇಗಿತ್ತು ಎಂದರೆ ಇದು
ಇರಲಿಲ್ಲ ಎಂಬಂತೆ ಇತ್ತು. ಈ ರೀತಿಯಾಗಿ ಚರಮ ಅದಿವು ಅಗೋಚರವಾಗಿದೆ. ಆದರೆ ಯಾವುದು
ಅಸ್ತಿತ್ವಕ್ಕೆ ಬಂತೋ ಸಂಭವಿಸಿತೋ, ನಂತರ ಹಾಗೆಯೇ
ವಿಘಟಿತವಾಯಿತು. ಈ ರೀತಿಯಾಗಿ ಚರಮ ಆದಿಯು ಗೋಚರವಾಗಿದೆ, ಅರಿಯಲಾಗಿದೆ.
ಆದರೆ ಭಂತೆ ಯಾವುದು ಇಲ್ಲದಿದ್ದೂ
ಸಂಭವಿಸಿತೋ ಮತ್ತು ಅದು ಪ್ರಾರಂಭಿಸುತ್ತಿದ್ದಂತೆಯೇ ವಿಘಟಿತವಾಯಿತೋ ಆದ್ದರಿಂದ ಅದರ 2 ಅಂಶಗಳು
ಕತ್ತರಿಸಲ್ಪಟ್ಟಿವೆ. ಹೀಗಾಗಿ ಅದು ಪೂರ್ಣವಾಗಿ ನಾಶಗೊಳಿಸಲ್ಪಟ್ಟಿಲ್ಲವೆ?
ಖಂಡಿತವಾಗಿ ಇಲ್ಲ ಮಹಾರಾಜ, ಅದರ ಎರಡು ಹಂತಗಳು ಕತ್ತರಿಸಲ್ಪಟ್ಟಿದ್ದರೆ, ಅವು ಮತ್ತೆ ಬೆಳೆಯುತ್ತಿದ್ದವೆ?
ಇರಬಹುದು, ಆದರೆ ನನ್ನ ಪ್ರಶ್ನೆ ಅದಲ್ಲ. ಅದು ಕತ್ತರಿಸಲ್ಪಟ್ಟ ಅಂಶದಿಂದ ಅದು
ಮತ್ತೆ ಬೆಳೆಯುವುದೇ?
ಖಂಡಿತ.
ಹೇಗೆ ಉಪಮೆಯಿಂದ ತಿಳಿಸಿ.
ಆಗ ಥೇರರು ಮರದ ಮತ್ತು ಬೀಜದ ಉಪಮೆ ತಿಳಿಸಿ
ಖಂಧಗಳನ್ನು,
ದುಃಖವನ್ನು ಬೀಜದ ಉಪಮೆಯಿಂದ
ವಿವರಿಸಿದಾಗ ರಾಜನಿಗೆ ತೃಪ್ತಿಯಾಗಿ
ಚೆನ್ನಾಗಿ ವಿವರಿಸಿದಿರಿ ನಾಗಸೇನ ಎಂದರು.
4. ಸಂಖಾರ ಜಾಯಮಾನ ಪನ್ಹೋ (ಸಂಖಾರಗಳ ಉತ್ಪತ್ತಿ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಯಾವುದಾದರೂ ಸಂಖಾರಗಳನ್ನು ಉತ್ಪಾದಿಸಬಹುದೇ? (31)
ಖಂಡಿತವಾಗಿ.
ಯಾವುವವು?
ಚಕ್ಷುವಿದ್ದಾಗ, ದೃಶ್ಯಗಳು ಇರುತ್ತವೆ. ಆಗ ಚಕ್ಷುವಿನ್ಯಾನ ಉಂಟಾಗುತ್ತವೆ. ಚಕ್ಷು
ವಿನ್ಯಾನವಿದ್ದಾಗ ಸ್ಪರ್ಶವು ಉಂಟಾಗಿರುತ್ತದೆ. ಸ್ಪರ್ಶವಿದ್ದಾಗ ವೇದನೆಗಳು, ವೇದನೆಗಳಿಂದ ತನ್ಹಾವು ಉಂಟಾಗುತ್ತದೆ. ತನ್ಹಾದಿಂದ ಅಂಟುವಿಕೆ
ಉಂಟಾಗುತ್ತದೆ. ಅಂಟುವಿಕೆಯಿಂದ ಭವವು ಉಂಟಾಗುತ್ತದೆ, ಭವದಿಂದ ಜನ್ಮವು
ಉಂಟಾಗುತ್ತದೆ. ಜನ್ಮದಿಂದ ಮುಪ್ಪು, ರೋಗ, ಮರಣ ಮುಂತಾದ ಇಡೀ ದುಃಖರಾಶಿಯು ಉಂಟಾಗುತ್ತದೆ. ಹೀಗೆ ಇಡೀ
ದುಃಖರಾಶಿಯು ಉಂಟಾಗಿದೆ, ಆದ್ದರಿಂದ
ಚಕ್ಷುವಿಲ್ಲದಿದ್ದರೆ, ದೃಶ್ಯವಿರುತ್ತಿರಲಿಲ್ಲ. ಆಗ
ಚಕ್ಷು ವಿನ್ಯಾನವು ಇರುತ್ತಿರಲಿಲ್ಲ, ಆಗ ಸ್ಪರ್ಶವೂ
ಆಗುತ್ತಿರಲಿಲ್ಲ. ಹಾಗಾದಾಗ ವೇದನೆಗಳೂ ಉಂಟಾಗುತ್ತಿರಲಿಲ್ಲ. ವೇದನೆಗಳಿಲ್ಲದೆ ತನ್ಹಾವು ಉಂಟಾಗುತ್ತಿರಲಿಲ್ಲ.
ತನ್ಹಾವಿಲ್ಲದಿದ್ದಾಗ, ಅಂಟುವಿಕೆಯಾಗಲಿ, ಭವವಾಗಲಿ ಇರುವುದಿಲ್ಲ. ಭವವಿಲ್ಲದೆ ಜನ್ಮವಾಗಲಿ, ದುಃಖರಾಶಿಯಾಗಲಿ, ಇರುತ್ತಿರಲಿಲ್ಲ. ಈ
ರೀತಿಯಾಗಿ ದುಃಖರಾಶಿಯು ನಿರೋಧವಾಗುತ್ತದೆ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
5. ಭವಂತಸಂಖಾರ ಜಾಯಮಾನ ಪನ್ಹೋ (ಸಂಖಾರಗಳ ಕ್ರಮವೃದ್ಧಿ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಯಾವುದಾದರು ಸಂಖಾರವು ಕ್ರಮವಾಗಿ ಸಂಭವಿಸದೆ ಉತ್ಪನ್ನವಾಗುವುದೇ? (32)
ಇಲ್ಲ, ಅವೆಲ್ಲವೂ
ಕ್ರಮವಾಗಿ ಸಂಭವಿಸುತ್ತದೆ.
ಉಪಮೆಯಿಂದ ಸ್ಪಷ್ಟಪಡಿಸಿ.
ಈಗ ಇದನ್ನು ನೀವು ಹೇಗೆ ಯೋಚಿಸುವಿರಿ
ಮಹಾರಾಜ? ಈ ಮನೆಯು ತಕ್ಷಣ ಸಿದ್ಧವಾಗಿ ಹೋಯಿತೆ?
ಖಂಡಿತ ಇಲ್ಲ ಭಂತೆ, ಅದು ಆ ರೀತಿಯಲ್ಲಿ ಉತ್ಪನ್ನವಾಗಲಿಲ್ಲ. ಪ್ರತಿ ಭಾಗವು ಸಹಾ ಕ್ರಮವಾಗಿ
ಸಿದ್ಧಗೊಂಡಿತು. ಹೇಳುವುದಾದರೆ ಈ ತೊಲೆಗಳು ಅರಣ್ಯದ ಮರಗಳಿಂದಲೂ, ಈ ಜೇಡಿಮಣ್ಣು ಭೂಮಿಯಿಂದಲು ಮತ್ತು ಸೇವಕರ ಪರಿಶ್ರಮದಿಂದಾಗಿ ಈ ಮನೆಯು
ಸಿದ್ಧವಾಯಿತು.
ಅದೇರೀತಿಯಲ್ಲಿ ಮಹಾರಾಜ, ಯಾವ ಸಂಖಾರವು ಕ್ರಮವಾಗಿಲ್ಲದೆ ಉತ್ಪನ್ನವಾಗಲಾರದು. ಇದೆಲ್ಲವೂ
ಕ್ರಮವಾಗಿ ವಿಕಾಸವಾಗಿ ಸಂಖಾರವಾಗುತ್ತದೆ.
ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸಿ.
ಓ ಮಹಾರಾಜ ಊಹಿಸಿ, ಬೆಂಕಿಯ ಕಡ್ಡಿಯ ಸಾಧನವಿಲ್ಲದೆ, ಅರಣಿ, ಕಟ್ಟಿಗೆಗಳಿಲ್ಲದೆ, ಅಚ್ಚುಗಳಿಲ್ಲದೆ, ಚಿಂದಿಗಳಿಲ್ಲದೆ, ಒಣ ವಸ್ತುಗಳಿಲ್ಲದೆ, ಮಾನವ ಪ್ರಯತ್ನವಿಲ್ಲದೆ, ಘರ್ಷಣೆಯಿಲ್ಲದೆ
ಬೆಂಕಿಯನ್ನು ಹಚ್ಚಬಹುದೇ?
ಖಂಡಿತ ಇಲ್ಲ.
ಇವೆಲ್ಲಾ ಇದ್ದಾಗ ಅಗ್ನಿಯನ್ನು ಉತ್ಪಾದಿಸಬಹುದೇ?
ಖಂಡಿತ
ಹಾಗೆಯೇ ಮಹಾರಾಜ, ಯಾವ ಸಂಖಾರವೂ ಕ್ರಮವಾದ ಸಂಭವಿಸುವಿಕೆ ಇಲ್ಲದೆ ಉತ್ಪಾದಿಸಲಾಗದು, ವಿಕಾಸದಿಂದಲೇ ಸಂಖಾರವು ಉದಯಿಸುತ್ತದೆ.
ಇನೊಂದು ಉಪಮೆ ನೀಡಬಲ್ಲಿರಾ?
ಊಹಿಸಿ ಮಹಾರಾಜ, ಭೂತಕನ್ನಡಿಯಿಲ್ಲದೆ, ಸೂರ್ಯನ
ಕಿರಣವಿಲ್ಲದೆ, ಒಳಬೆರಣಿಯು ಇಲ್ಲದೆ ಅಗ್ನಿಯು
ಉದಯಿಸುವುದೇ?
ಖಂಡಿತ ಇಲ್ಲ.
ಆದರೆ ಯಾವಾಗ ಇವೆಲ್ಲಾ ವಸ್ತುಗಳು ಇದ್ದು ಆಗ
ಅಗ್ನಿಯು ಉತ್ಪಾದಿಸಬಹುದು, ಅಲ್ಲವೇ?
ಹೌದು.
ಹಾಗೆಯೇ ಮಹಾರಾಜ, ಉತ್ಪಾದಿಸಲಾಗದ ಸಂಖಾರಗಳೇ ಇಲ್ಲ. ಇವೆಲ್ಲವೂ ತಕ್ಷಣವಲ್ಲದೆ, ವಿಕಾಸದಿಂದಾಗುವುದು,ಕಾರಣಗಳಿಂದಾಗುವುದು.
ಇನ್ನೊಂದು ಉಪಮೆ ನೀಡಬಲ್ಲಿರಾ?
ಊಹಿಸಿ ಮಹಾರಾಜ, ಕನ್ನಡಿಯಿಲ್ಲದೆ, ಬೆಳಕಿಲ್ಲದೆ, ಮುಂದೆ ಮುಖವಿಲ್ಲದೆ, ಪ್ರತಿಬಿಂಬವು
ಕನ್ನಡಿಯಲ್ಲಿ ಕಾಣುವುದೇ?
ಇಲ್ಲ.
ಆದರೆ ಇವೆಲ್ಲಾ ಇದ್ದಾಗ ಪ್ರತಿಬಿಂಬವು
ಕಾಣಿಸುವುದೇ?
ಹೌದು ಕಾಣಿಸುವುದು.
ಮಹಾರಾಜ, ಹಾಗೆಯೇ
ಅದೇರೀತಿಯಲ್ಲಿ ಯಾವ ಸಂಖಾರವು ಇದ್ದಕ್ಕಿದ್ದಂತೆ ಉದಯಿಸಲಾರದು. ಕ್ರಮೇಣವಾಗಿ ಸಂಖಾರಗಳು
ಉದಯಿಸುವುವು.
ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ.
6. ವೇದಗೂ ಪನ್ಹೋ (ಆತ್ಮದ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಅರಿಯುವವನು (ವೇದಗೂ) (ಆತ್ಮ) ಇದ್ದಾನೆಯೇ? (33)
ಓ ರಾಜನೇ, ಈ ವೇದಗೂ (ಆತ್ಮ) ಎಂದರೇನು?
ಭಂತೆ, ಇದು
ಜೀವತತ್ವವಾಗಿದೆ, ಇದು ಶರೀರದಲ್ಲಿದ್ದು
ಕಣ್ಣಿನಿಂದ ದೃಶ್ಯಗಳನ್ನು ನೋಡುವುದು, ಕಿವಿಯಿಂದ
ಶಬ್ದಗಳನ್ನು ಕೇಳುವುದು, ಮೂಗಿನಿಂದ ವಾಸನೆಗಳನ್ನು
ಅಘ್ರಾಣಿಸುವುದು, ನಾಲಿಗೆಯಿಂದ ರುಚಿಯನ್ನು
ಸವಿಯುವುದು,
ದೇಹದಿಂದ ಸ್ಪರ್ಶಗಳನ್ನು
ಅನುಭವಿಸುವುದು ಮತ್ತು ಮನಸ್ಸಿನಿಂದ ಧಮ್ಮ ವಿಷಯಗಳನ್ನು ಅರಿಯುವುದು. ಹೇಗೆಂದರೆ ನಾವು ಈ
ಅರಮನೆಯಿಂದ ಕಿಟಕಿಗಳ ಮೂಲಕ ಹೊರಗಿನ ದೃಶ್ಯಗಳನ್ನು ಕಾಣುವಂತೆ, ಪೂರ್ವ ಅಥವಾ ಪಶ್ಚಿಮ, ಉತ್ತರ ಅಥವಾ
ದಕ್ಷಿಣ ದಿಕ್ಕುಗಳಲ್ಲಿನ ದೃಶ್ಯಗಳನ್ನು ಕಾಣುವಂತೆ ಕಾಣುವುದು.
ಆಗ ಥೇರರು ಹೀಗೆ ನುಡಿದರು : ಓ ಮಹಾರಾಜ, ನಿನಗೆ 5 ದ್ವಾರಗಳ ಬಗ್ಗೆ ಹೇಳುವೆ ಗಮನವಿಟ್ಟು ಕೇಳು. ಒಂದುವೇಳೆ
ಜೀವತತ್ವವು (ಆತ್ಮ/ವೇದಗೂ) ದೇಹದೊಳಗೆ ಇದ್ದು ಕಣ್ಣಿನಿಂದ ದೃಶ್ಯಗಳನ್ನು ನೋಡುತ್ತಿದ್ದುದೆ ಆದರೆ
ಅದು ತನಗೆ ಇಷ್ಟಬಂದ ಕಿಟಕಿಯನ್ನು ಹರಿಸುತ್ತಿತ್ತು. ಅಂದರೆ ಕಣ್ಣಿನಿಂದ ಮಾತ್ರವಲ್ಲ ಇತರ 5
ಇಂದ್ರೀಯಗಳ ಮೂಲಕ ನೋಡುತ್ತಿತ್ತು. ಅಂದರೆ ಕಿವಿಯಿಂದಲೂ ನೋಡುತ್ತಿತ್ತು. ಹಾಗೆಯೇ ಕಿವಿಯಿಂದ
ಮಾತ್ರವಲ್ಲ,
ಇತರ 5 ಇಂದ್ರೀಯಗಳ ಮೂಲಕವೂ
ಕೇಳುತ್ತಿತ್ತು. ಅಂದರೆ ಕಣ್ಣಿನಿಂದಲೂ ಕಾಣುತ್ತಿತ್ತು. ಅದರಂತೆಯೇ ಆಘ್ರಾಣಿಸುವುದಗಲಿ, ರುಚಿಸುವುದಾಗಲಿ, ಸ್ಪಶರ್ಿಸುವುದಾಗಲಿ, ಅರಿಯುವುದಾಗಲಿ, ಪ್ರತ್ಯೇಕ
ಇಂದ್ರೀಯದ ಮೂಲಕವಲ್ಲ, ಯಾವುದೇ ಇಂದ್ರೀಯವನ್ನೇ ಬಳಸಿ
ಪ್ರತಿ ಇಂದ್ರೀಯಗಳ ಕಾರ್ಯ ಮಾಡುತ್ತಿತ್ತೇ ಹೊರತು ಪ್ರತ್ಯೇಕ ಕಾರ್ಯಕ್ಕೆ ಪ್ರತ್ಯೇಕ
ಇಂದ್ರೀಯವನ್ನು ಬಳಸುತ್ತಿರಲಿಲ್ಲ. ಇಲ್ಲಿ ಹಾಗೇ ನಡೆಯುತ್ತಿದೆಯೇ?
ಇಲ್ಲ ಭಂತೆ.
ಹಾಗಾದರೆ, ಇಲ್ಲಿ ಇಂದ್ರೀಯಗಳು, ಒಂದು
ಇನ್ನೊಂದರಲ್ಲಿ ಐಕ್ಯವಾಗಿಲ್ಲ, ನಿಸ್ಪಕ್ಷಪಾತವಾಗಿಲ್ಲ, ನಾವು ಈ ಅರಮನೆಯಲ್ಲಿ ಕುಳಿತಿದ್ದೇವೆ, ನಾವು ಹೊರಗಿನ ದೃಶ್ಯಗಳನ್ನು ಕಾಣಬೇಕಿದ್ದರೆ, ನಮ್ಮ ತಲೆಯನ್ನು ಹೊರಗೆ ಇಟ್ಟರೆ ಸಾಕು. ಎಲ್ಲಾ ವಿಧದ ಇಂದ್ರೀಯ
ವಸ್ತುಗಳು ಗೋಚರವಾಗುತ್ತದೆ. ಇದೇರೀತಿಯಲ್ಲಿ ಆತ್ಮವು ಪ್ರತಿ ಕಿಟಕಿ ಅಂದರೆ ಪ್ರತಿ ಇಂದ್ರೀಯ
ಬಳಸಿ ಕಾರ್ಯ ಮಾಡುತ್ತದೆಯೇ? ಇದೇರೀತಿಯಲ್ಲಿ
ಕಣ್ಣಿನಿಂದ ಕೇಳುತ್ತದೆಯೆ? ಅಥವಾ ಕಿವಿಯಿಂದ ಶಬ್ದವಲ್ಲದೆ, ದೃಶ್ಯಗಳನ್ನು, ರುಚಿಗಳನ್ನು, ವಾಸನೆಗಳನ್ನು, ಸ್ಪರ್ಶವನ್ನು
ಗ್ರಹಿಸುತ್ತದೆಯೇ? ಮತ್ತು ಹೀಗೆ ಪ್ರತಿ
ಇಂದ್ರೀಯಗಳನ್ನು ಸರ್ವ ಇಂದ್ರೀಯಗಳ ಕಾರ್ಯ ಮಾಡುತ್ತದೆಯೇ?
ಇಲ್ಲ ಭಂತೆ.
ಹಾಗಾದರೆ ಇಲ್ಲಿ ಇಂದ್ರೀಯಗಳು
ನಿಸ್ಪಕ್ಷಪಾತವಾಗಿ ಐಕ್ಯವಾಗಿಲ್ಲ. ಓ ರಾಜನೇ, ದಿನ್ನನೆಂಬ ಭಟನು
ಇಲ್ಲಿಂದ ಹೊರಹೋಗಿ ಬಾಗಿಲಬಳಿ ನಿಲ್ಲಬಲ್ಲ. ಆತ ಹಾಗೇ ನಿಲ್ಲಬಲ್ಲನೇ?
ಖಂಡಿತ ನಿಲ್ಲಬಲ್ಲ ನನಗೆ ಗೊತ್ತಿದೆ.
ಮತ್ತೆ ಅದೇದಿನ ಪುನಃ ಬಂದು ನಿಮ್ಮ ಮುಂದೆ
ನಿಲ್ಲಬಲ್ಲ,
ಆತ ಹಾಗೆ ಮಾಡಬಹುದೇ?
ಹೌದು ಹಾಗೇ ಮಾಡಬಲ್ಲ.
ಹಾಗಾದರೆ ಮಹಾರಾಜ, ಆಂತರ್ಯದಲ್ಲಿರುವ ಆತ್ಮವು ನಾಲಿಗೆಗೆ ಸಂಪರ್ಕವಾದ ಯಾವುದೇ ರುಚಿಯನ್ನು
ಗ್ರಹಿಸಬಲ್ಲದೆ? ಅಂದರೆ ಹುಳಿ, ಉಪ್ಪು, ಕಹಿಸಿಹಿ ಎಲ್ಲವೂ?
ಹೌದು.
ಹಾಗಾದರೆ ಆ ಆಹಾರವು ಹೊಟ್ಟೆಗೆ ಹೋದನಂತರ
ಅಲ್ಲಿಯೂ ರುಚಿ ನೋಡುವುದೇ?
ಖಂಡಿತವಾಗಿ ಇಲ್ಲ.
ಹಾಗಾದರೆ ಇಲ್ಲಿ ಇಂದ್ರೀಯಗಳೂ, ಐಕ್ಯವಾಗಿಲ್ಲ, ನಿಸ್ಪಕ್ಷಪಾತವಾಗಿಲ್ಲ.
ಊಹಿಸು ಮಹಾರಾಜ, ಇಲ್ಲಿ ನೂರು ಪಾತ್ರೆಗಳಿಂದ
ಜೇನುತುಪ್ಪವನ್ನು ತಂದು ತೊಟ್ಟಿಯಲ್ಲಿ ತುಂಬಿಸುವುದು, ನಂತರ ಒಬ್ಬ
ವ್ಯಕ್ತಿಯ ಬಾಯನ್ನು ಭದ್ರವಾಗಿ ಕಟ್ಟಿ, ಆತನನ್ನು
ತೊಟ್ಟಿಯಲ್ಲಿ ಮುಳುಗಿಸಿದರೆ ಆತನಿಗೆ ತಾನು ಮುಳುಗಲ್ಪಟ್ಟಿರುವುದು ಸಿಹಿಯಲ್ಲಿ ಅಥವಾ ಕಹಿಯಲ್ಲಿ
ಎಂದು ತಿಳಿಯುವುದೇ?
ಇಲ್ಲ ಭಂತೆ.
ಆದರೆ ಏಕೆ?
ಏಕೆಂದರೆ ಆತನ ಬಾಯಿಗೆ (ನಾಲಿಗೆಗೆ) ಜೇನು
ತಲುಪಿಲ್ಲ.
ಹಾಗಾದರೆ ಮಹಾರಾಜ, ನಿಸ್ಪಕ್ಷಪಾತವಾಗಿ ಇಂದ್ರೀಯಗಳು ಬೆರೆತಿಲ್ಲ, ಅಂದರೆ ತನಗೆ ಇಷ್ಟಬಂದ ಇಂದ್ರೀಯಗಳ ಮೂಲಕ ಆತ್ಮ ಅರಿಯಲಾರದು.
ಓ ಭಂತೆ, ನಾನು ವಾದದಲ್ಲಿ
ತಮ್ಮ ಸಮಾನನಲ್ಲ. ದಯವಿಟ್ಟು ಭಂತೆ, ಅರ್ಥವನ್ನು
ವಿವರಿಸಿರಿ,
ಸತ್ಯವನ್ನು ಪ್ರಕಟಪಡಿಸಿ.
ಆಗ ಥೇರರು ಮಿಲಿಂದ ಮಹಾರಾಜನಿಗ ಅಭಿಧಮ್ಮದ
ಪ್ರವಚನವನ್ನು ವಿವರಿಸಿದರು. ಓ ರಾಜನೇ ಚಕ್ಷು ಮತ್ತು ದೃಶ್ಯದಿಂದ ಚಕ್ಷುವಿಞ್ಞಾನವು ಉದಯಿಸುತ್ತದೆ
ಮತ್ತು ಇತರ ಸಹಾಯಕ ಅಂಶಗಳೆಂದರೆ ಸ್ಪರ್ಶ, ವೇದನಾ, ಸನ್ಯಾ(ಗ್ರಹಿಕೆ), ಇಚ್ಛೆ(ಚೇತನಾ), ಏಕಾಗ್ರತೆ, ಜೀವಿತಿಂದ್ರೀಯ
ಗಮನ. ಈ ಪ್ರತಿಯೊಂದು ಪ್ರತಿ ಇಂದ್ರಿಯಗಳ ಜೊತೆ ಕಾಣಿಸಿ ಕೊಳ್ಳುತ್ತದೆ. ಕಾರಣಬದ್ಧವಾಗಿ
ಉದಯಿಸುತ್ತದೆ ಹೊರತು ಆತ್ಮವಿಲ್ಲ (ವೇದಗೂ ಇಲ್ಲ.)
7. ಚಕ್ಷುವಿಞ್ಞಾನಾದಿ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಯಾವಾಗ ಚಕ್ಷುವಿಞ್ಞಾನ (ಕಣ್ಣಿನ ಮೂಲಕ ಲಭಿಸುವ ಅರಿವು) ಉದಯಿಸುವುದೋ
ಆಗ ಮನೋವಿಞ್ಞಾನವು (ಮಾನಸ ಅರಿವು) ಉದಯಿಸುತ್ತದೆಯೇ? (34)
ಹೌದು ಮಹಾರಾಜ, ಯಾವಾಗ ಚಕ್ಷು ವಿಞ್ಞಾನವು ಉದಯಿಸುವುದೋ ಅಗ ಮನೋವಿಞ್ಞಾನವು
ಉದಯಿಸುತ್ತದೆ.
ಹಾಗಾದರೆ ಇದರಲ್ಲಿ ಯಾವುದು ಮೊದಲು
ಉದಯಿಸುತ್ತದೆ?
ಮೊದಲು ಚಕ್ಷುವಿಞ್ಞಾನ ನಂತರ ಮನೋವಿಞ್ಞಾನ.
ಹಾಗಾದರೆ ಭಂತೆ ನಾಗಸೇನ, ಚಕ್ಷುವಿಞ್ಞಾನವು ಮನೋವಿಞ್ಞಾನಕ್ಕೆ ಆಜ್ಞೆ ನೀಡುತ್ತದೆಯೇ?
ಎಲ್ಲಿ ನಾನು ಉದಯಿಸುವೆನೋ ಅಲ್ಲಿ ನೀನು
ಉದಯಿಸು ಎಂದು ಅಥವಾ ಮನೋವಿಞ್ಞಾನವು ಚಕ್ಷುವಿಞ್ಞಾನಕ್ಕೆ ಆಜ್ಞಾಪಿಸುತ್ತದೆಯೋ ಎಲ್ಲಿ ನೀನು
ಉದಯಿಸುವೆಯೋ ಅಲ್ಲಿ ನಾನು ಸಹಾ ಉದಯಿಸುವೆ.
ಇಲ್ಲ ಮಹಾರಾಜ, ಆವುಗಳ ಮಧ್ಯೆ ಈ ರೀತಿಯ ಸಂವಹನ ಇರುವುದಿಲ್ಲ.
ಹಾಗಾದರೆ ಹೇಗೆ ಚಕ್ಷುವಿಞ್ಞಾನದ ನಂತರ
ಮನೋವಿಞ್ಞಾನ ಉದಯಿಸುತ್ತದೆ.
ಹೇಗೆಂದರೆ ಇಳಕಲ್ಲಿನಲ್ಲಿ ಜಾರುವಂತೆ, ದ್ವಾರದಲ್ಲಿ ಜೋಡಿಯು ದಾಟುವ ರೀತಿ, ಅಭ್ಯಾಸದ ಹಾಗೆ, ಸಮ್ಮಿಲನದಿಂದಾಗಿ.
ಅದು ಹೇಗೆ ಇಳುಕಲ್ಲನ್ನು ಜಾರುವಂತೆ ಎಂದು
ಉಪಮೆಯ ಸಹಿತ ವಿವರಿಸಿ.
ಓ ಮಹಾರಾಜ, ಇದನ್ನು ಹೇಗೆ ಯೋಚಿಸುವಿರಿ. ಮಳೆಯು ಬಂದಾಗ ಎಲ್ಲಿಗೆ ನೀರು ಹೋಗುವುದು?
ನೆಲಕ್ಕೆ ಬೀಳುವುದು.
ಮತ್ತಷ್ಟು ಮಳೆ ಬಿದ್ದಾಗ ನೀರು ಎಲ್ಲಿಗೆ
ಹೋಗುವುದು.
ಮೊದಲ ನೀರು ಎಲ್ಲಿಗೆ ಹೋಗುವುದೋ, ಅಲ್ಲಿಯೇ ನಂತರದ ನೀರು ಸಹಾ ಹೋಗುತ್ತದೆ.
ಹಾಗಾದರೆ ಈ ಮೊದಲ ನೀರು ನಂತರದ ನೀರಿಗೆ
ನಾನು ಹೋದಲ್ಲಿಗೆ ಬಾ ಎಂದು ಆಜ್ಞೆ ನೀಡಿತ್ತೇ? ಅಥವಾ ನಂತರ ನೀರು
ಮೊದಲಿನದಕ್ಕೆ ನೀ ಹೋದಲ್ಲಿ ನಾ ಬರುವೆ ಎಂದು ಹೇಳಿತ್ತೇ?
ಇಲ್ಲ ಭಂತೆ, ಅವುಗಳ ನಡುವೆ ಈ ರೀತಿಯ ಸಂವಹನ ಇರುವುದಿಲ್ಲ. ಇಳುಕಲ್ಲಿನಂತೆ
(ಜಾರಿಕೆಯಂತೆ) ತಗ್ಗಿನಲ್ಲಿ ಹರಿದುಹೋಗುವುದು ಸಾಮಾನ್ಯವಾಗಿದೆ.
ಅದೇರೀತಿಯಲ್ಲಿ ಮಹಾರಾಜ, ಇಳುಕಲ್ಲಿನಲ್ಲಿ ನೀರು ಜಾರುವ ಸಹಜತೆಯಂತೆಯೇ ಚಕ್ಷುವಿಞ್ಞಾನದ ನಂತರ
ಮನೋವಿಞ್ಞಾನವು ಉದಯಿಸುತ್ತದೆ ಹೊರತು ಅವುಗಳ ನಡುವೆ ಸಂವಹನ ಇರುವುದಿಲ್ಲ.
ಈಗ ನನಗೆ ದ್ವಾರದಲ್ಲಿ ದಾಟುವ ಉಪಮೆ
ವಿವರಿಸಿ.
ಇದನ್ನು ಹೇಗೆ ಯೋಚಿಸುವಿರಿ ಮಹಾರಾಜ? ಒಬ್ಬ ರಾಜನಿಗೆ ಗಡಿಭಾಗದಲ್ಲಿ ನಗರವಿರುತ್ತದೆ, ಅದನ್ನು ಸ್ತಂಭಗಳಿಂದ ಮತ್ತು ಕೋಟೆಗಳಿಂದ ರಕ್ಷಿಸುತ್ತಿರುತ್ತಾರೆ
ಮತ್ತು ಅದಕ್ಕೆ ಒಂದೇ ದ್ವಾರವಿರುತ್ತದೆ. ಈಗ ಒಬ್ಬ ಮಾನವ ನಗರದಿಂದ ಹೊರಹೋಗಬೇಕಾದರೆ ಹೇಗೆ ಆತನು
ನಿರ್ಗಮಿಸಬೇಕು?
ಖಂಡಿತವಾಗಿ ಆ ಒಂದೇ ದ್ವಾರದಿಂದ.
ಈಗ ಇನ್ನೊಬ್ಬನು ಸಹಾ ನಿರ್ಗಮಿಸಬೇಕಾದರೆ ಆತ
ಹೇಗೆ ಹೋಗಬೇಕು?
ಆತನು ಸಹಾ ಮೊದಲಿನವನಂತೆ.
ಹಾಗಾದರೆ ಇಲ್ಲಿ ಮೊದಲನೆಯವನು
ಹಿಂಬದಿಯವನಿಗೆ ನನ್ನನ್ನು ಹಿಂಬಾಲಿಸು ಎಂದು ಆಜ್ಞೆ ನೀಡುತ್ತಾನೆಯೇ? ಅಥವಾ ಮೊದಲನೆಯವನಿಗೆ ಹಿಂಬದಿಯವನು ನೀನೆಲ್ಲಿ ಹೋದರೂ ನಾನು
ಹಿಂಬಾಲಿಸುವೆ ಎಂದು ಹೇಳುತ್ತಾನೆಯೇ?
ಖಂಡಿತವಾಗಿ ಇಲ್ಲ ಭಂತೆ. ಅವರ ಮಧ್ಯೆ
ಈರೀತಿಯ ಸಂವಹನ ಇರುವುದಿಲ್ಲ. ಅವರು ದ್ವಾರವಿರುವುದರಿಂದಾಗಿ ಸಹಜವಾಗಿಯೇ ಹೋಗುತ್ತಾರೆ.
ಅದೇರೀತಿಯಲ್ಲಿ ಮಹಾರಾಜ, ಚಕ್ಷುವಿನ್ಯಾನದ ನಂತರ ಮನೋವಿನ್ಯಾನವು ಉದಯಿಸುತ್ತದೆ ಹೊರತು ಅವುಗಳ
ಮಧ್ಯೆ ಸಂವಹನ ಇರುವುದಿಲ್ಲ.
ಒಳ್ಳೆಯದು ಭಂತೆ, ಆಗಲೇ ಚಟದ ರೀತಿಯಲ್ಲಿ ಎಂದರಲ್ಲವೆ, ಅದನ್ನು ಉಪಮೆಯಿಂದ ವಿವರಿಸಿ.
ಇದನ್ನು ಹೇಗೆ ಯೋಚಿಸುವಿರಿ ಮಹಾರಾಜ? ಒಂದು ಬಂಡಿಯು ಮುಂದೆ ಹೋದರೆ ಅದೇ ಹಾದಿಯಲ್ಲಿರುವ ಎರಡನೆಯ ಬಂಡಿಯು
ಹೇಗೆ ಹೋಗುತ್ತದೆ?
ಅದು ಸಹಾ ಮೊದಲನೆಯದನ್ನು ಹಿಂಬಾಲಿಸುತ್ತದೆ.
ಆಗ ಆ ಬಂಡಿಗಳು ಹಿಂಬಾಲಿಸು ಎಂದಾಗಲಿ, ಹಿಂಬಾಲಿಸುತ್ತೇನೆ ಎಂದಾಗಲಿ ಸಂವಹನ ಕ್ರಿಯೆ ನಡೆಸುತ್ತವೆಯೇ?
ಇಲ್ಲ ಭಂತೆ, ಅವುಗಳ ಮಧ್ಯೆ ಸಂವಹನ ಕ್ರಿಯೆ ಇರುವುದಿಲ್ಲ, ಅಭ್ಯಾಸದಂತೆ (ಚಟದಂತೆ) ಕ್ರಿಯೆ ನಡೆಯುತ್ತದೆ.
ಅದೇರೀತಿಯಲ್ಲಿ ಮಹಾರಾಜ, ಚಕ್ಷುವಿನ್ಯಾನದ ನಂತರ ಮನೋವಿನ್ಯಾನವು ಉದಯಿಸುತ್ತದೆ.
ಒಳ್ಳೆಯದು ಭಂತೆ, ನನಗೆ ಈಗ ಸಮ್ಮಿಲನದ ಉದಾಹರಣೆ ನೀಡಿ ವಿವರಿಸಿ.
ಮಹಾರಾಜ, ಇಲ್ಲಿ
ಗಣಿತಶಾಸ್ತ್ರದಲ್ಲಿ ಮುದ್ರೆಗಳಿಂದ, ಬೆರಳುಗಳ
ಗಂಟುಗಳಿಂದ ಲೆಕ್ಕಾಚಾರ ಹಾಕಿ, ಸಂಖ್ಯಾಗಳ
ಸಂಭವನಿಯತೆ ಎಣಿಸುತ್ತಾರೆ. ಇಲ್ಲಿ ಪ್ರಾರಂಭಿಕಗಾರನು ಅಡ್ಡಾದಿಡ್ಡಿಯಾಗಿ ಲೆಕ್ಕಾಚಾರ
ಹಾಕುತ್ತಾನೆ. ಆದರೆ ಕೆಲಕಾಲದ ಅಭ್ಯಾಸದ ಸಮ್ಮಿಲನದಿಂದ ಕುಶಲಿಯಾಗುತ್ತಾನೆ. ಹೀಗೆಯೇ
ಚಕ್ಷುವಿನ್ಯಾನದ ನಂತರ ಮನೋವಿನ್ಯಾನವು ಉದಯಿಸುತ್ತದೆ.
ಇದೇ ವಿಷಯದ ಪ್ರಶ್ನೆಗಳಿಗೆ ಥೇರರು
ಉತ್ತರಿಸಿ ಚಕ್ಷುವಿನ್ಯಾನದಂತೆಯೆ, ಶ್ರೋತವಿನ್ಯಾನ, ಜಿಹ್ವಾವಿನ್ಯಾನ, ಘ್ರಾಣವಿನ್ಯಾನ, ಕಾಯವಿನ್ಯಾನ, ಇವೆಲ್ಲವೂ ಸಹ
ಮೇಲಿನಂತೆಯೇ ಉದಯಿಸಿ ನಂತರ ಮನೋವಿಞ್ಞಾನವು ಉದಯಿಸುವುದು ಎಂದು ವಿವರಿಸಿದರು.
8. ಸ್ಪರ್ಶ ಲಕ್ಷಣ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಯಾವಾಗ ಮನೋವಿನ್ಯಾನವು ಉದಯಿಸುವುದೊ ಅಗ ಸ್ಪರ್ಶ ಮತ್ತು ವೇದನಾಗಳು
ಸಹಾ ಉದಯಿಸುತ್ತವೆಯೆ?(35)
ಹೌದು ಮಹಾರಾಜ, ಯಾವಾಗ ಮನೋವಿನ್ಯಾನವು ಉದಯಿಸುತ್ತದೆಯೋ ಆಗ ಸ್ಪರ್ಶ ಮತ್ತು ವೇದನಾಗಳು
ಸಹಾ ಉದಯಿಸುತ್ತವೆ. ಅಷ್ಟೇ ಅಲ್ಲ, ಸನ್ಯಾ
(ಗ್ರಹಿಕೆ)ವೂ ಉದಯಿಸುತ್ತದೆ. ಚೇತನಾ(ಇಚ್ಛೆ)ವು ಉದಯಿಸುತ್ತದೆ, ವಿತಕ್ಕವೂ ವಿಚಾರವೂ ಸಹಾ ಉದಯಿಸುತ್ತವೆ. ಇವೆಲ್ಲ ಉದಯಿಸುವುದಕ್ಕೆ
ಸ್ಪರ್ಶವೇ ಪ್ರಮುಖ ಧಮ್ಮವಾಗಿದೆ.
ಭಂತೆ ನಾಗಸೇನ, ಸ್ಪರ್ಶದ (ಸಂಪರ್ಕದ) ಲಕ್ಷಣವೇನು? (36)
ಸಂಪರ್ಕಕ್ಕೆ ಸ್ಪರ್ಶವೇ ಲಕ್ಷಣವಾಗಿದೆ
ಮಹಾರಾಜ.
ಉಪಮೆಯಿಂದ ದೃಢೀಕರಿಸುವಿರಾ?
ಎರಡು ಟಗರುಗಳ ಡಿಕ್ಕಿ ಹೊಡೆಯುವಿಕೆ
ಕಲ್ಪಿಸು ಮಹಾರಾಜ, ಅದರಲ್ಲಿ ಒಂದನ್ನು ಚಕ್ಷು
ಎಂದು ಭಾವಿಸಿಕೊ, ಮತ್ತೊಂದನ್ನು ದೃಶ್ಯವೆಂದು
ಭಾವಿಸಕೊ, ಇವುಗಳ ನಡುವಿನ ಘರ್ಷಣೆಯೇ ಸಂಪರ್ಕವಾಗಿದೆ.
ಇನ್ನೊಂದು ಉಪಮೆಯಿಂದ ವಿವರಿಸಿ.
ಯಾವಾಗ ಎರಡು ಝಲ್ಲರಿಯನ್ನು (ಚಕ್ರತಾಳ)
ಎಂದು ಕೈಯಿಂದ ಚಪ್ಪಾಳೆಯಂತೆ ಬಾರಿಸುವರೋ, ಅದರಲ್ಲಿ ಒಂದನ್ನು
ಚಕ್ಷು ಎಂದು ಭಾವಿಸಿಕೋ ಮತ್ತು ಮತ್ತೊಂದನ್ನು ದೃಶ್ಯವೆಂದುಕೋ ಮತ್ತು ಇವೆರಡರ ಸೇರಿಕೆಯೇ ಸಂಪರ್ಕ
(ಸ್ಪರ್ಶ)ವಾಗಿದೆ.
ತುಂಬಾ ಒಳ್ಳೆಯದು ನಾಗಸೇನಾ.
9. ವೇದನಾ ಲಕ್ಷಣ ಪ್ರಶ್ನೆ
ಭಂತೆ ನಾಗಸೇನಾ ವೇದನಾದ ಲಕ್ಷಣವೇನು? (37)
ಮಹಾರಾಜ, ಅನುಭವಿಸಲ್ಪಡುವುದೇ
ವೇದನಾದ ಲಕ್ಷಣವಾಗಿದೆ.
ಉಪಮೆಯಿಂದ ವಿವರಿಸುವಿರಾ?
ಒಬ್ಬನ ಸೇವೆಯಿಂದ ರಾಜನು ಸಂತೃಪ್ತನಾಗಿ, ಆತನಿಗೆ ಕಾರ್ಯಾಲಯ ನೀಡುತ್ತಾನೆ. ಉತ್ತಮ ವೃತ್ತಿಯು ನೀಡುತ್ತಾನೆ. ಆಗ
ಆತನು ಅದರಿಂದಾಗಿ ಸುಖ-ಆನಂದ ಅನುಭವಿಸುತ್ತಿರುತ್ತಾನೆ. ಆಗ ಅತನು ಹೀಗೆ ಯೋಚಿಸುವನು ಹಿಂದೆ ನಾನು
ರಾಜನಿಗೆ ಸೇವೆ ಸಲ್ಲಿಸಿದ್ದೆ, ಅದರಿಂದಾಗಿ ರಾಜನು
ಸಂತೃಪ್ತನಾಗಿ ನಮಗೆ ಈ ವೃತ್ತಿ ಕಾರ್ಯಾಲಯ ನೀಡಿರುವನು. ಅದರಿಂದಾಗಿ ನಾನು ಈ ಸುಖಭೋಗಗಳನ್ನೆಲ್ಲಾ
ಅನುಭವಿಸುತ್ತಿರುವೆ? ಎಂದು ಹೀಗೆ ಓ ಮಹಾರಾಜ, ಅಥವಾ ಇನ್ನೊಂದು ಉಪಮೆ ನೀಡುವೆ.
ಒಬ್ಬ ಹಿಂದಿನ ಜನ್ಮದಲ್ಲಿ ನಾನಾವಿಧವಾದ
ಪುಣ್ಯಕಾರ್ಯ ಮಾಡಿ, ದೇವಲೋಕದಲ್ಲಿ ಪುನರ್ಜನ್ಮ
ತಾಳುತ್ತಾನೆ, ಆಗ ಆತನು ಇಂದ್ರೀಯಾಗಳ
ಸುಖಗಳಲ್ಲಿ ಮತ್ತನಾಗುವಷ್ಟು ಸುಖದಲ್ಲಿರುತ್ತಾನೆ. ಆಗ ಆತನು ಈ ರೀತಿ ಚಿಂತಿಸುತ್ತಾನೆ ಹಿಂದೆ
ನಾನು ಅನೇಕ ಕುಶಲಗಳನ್ನು ಅನುಭಸಿಸುತ್ತಿದ್ದೆನು ಆದ್ದರಿಂದಾಗಿ ಓ ಮಹಾರಾಜ, ಅನುಭವಿಸಲ್ಪಡುವುದು ಮತ್ತು ಆನಂದಿಸುವುದೇ ವೇದನಾದ ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನ.
10. ಸಞ್ಞಾ ಲಕ್ಷಣ ಪ್ರಶ್ನೆ
ಭಂತೆ ನಾಗಸೇನ, ಸಞ್ಞಾದ ಲಕ್ಷಣವೇನು? (38)
ಗುರುತಿಸುವಿಕೆ (ಗ್ರಹಿಸುವಿಕೆ) ಓ ಮಹಾರಾಜ, ಅಂದರೆ ಉದಾಹರಣೆಗೆ : ನೀಲಿಯನ್ನು ಅಥವಾ ಹಳದಿಯನ್ನು ಅಥವಾ ಕೆಂಪನ್ನು
ಅಥವಾ ಬಿಳಿ ಅಥವಾ ಕಂದನ್ನು ಉಪಮೆಯೊಂದಿಗೆ ವಿವರಿಸುವಿರಾ?
ಇದು ಹೇಗೆಂದರೆ ಮಹಾರಾಜ, ರಾಜನ ಕೋಶಾಧ್ಯಕ್ಷನಂತೆ. ಆತನ ಖಜಾನೆಯನ್ನು ಪ್ರವೇಶಿಸಿದೊಡನೆ ರಾಜನ
ಆಸ್ತಿಯನ್ನು ಆ ಎಲ್ಲಾ ಬಣ್ಣಗಳಿಂದ (ಆಕಾರಗಳಿಂದ, ಅಂತರಗಳಿಂದ, ದೂರಗಳಿಂದ) ಹೀಗೆ, ಹೀಗಿದೆ ಎಂದು
ಗುತರ್ಿಸುತ್ತಾನೆ. ಆದ್ದರಿಂದ ಗುರುತಿಸುವಿಕೆ (ಗ್ರಹಿಸುವಿಕೆ)ಯೇ ಸನ್ಯಾದ ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನ.
11. ಚೇತನಾ (ಇಚ್ಛೆ)ದ ಲಕ್ಷಣ ಪ್ರಶ್ನೆ
ಭಂತೆ ನಾಗಸೇನಾ, ಚೇತನಾದ ಲಕ್ಷಣವೇನು? (39)
ಮಹಾರಾಜ, ಮನಸ್ಸಿನಲ್ಲಿ
ರೂಪಗೊಳ್ಳುವಿಕೆ (ರಚಿತವಾಗುವಿಕೆ, ಇಚ್ಛಿಸುವಿಕೆ)
ಮತ್ತು ಸಿದ್ಧನಾಗುವಿಕೆ.
ಭಂತೆ, ಉಪಮೆಯಿಂದ
ವಿವರಿಸುವಿರಾ?
ಒಬ್ಬ ವ್ಯಕ್ತಿಯು ಮಹಾರಾಜ, ಆತನು ವಿಷವನ್ನು ಸಿದ್ಧಪಡಿಸುತ್ತಾನೆ, ಅದನ್ನು ತಾನು ಕುಡಿದು ಮತ್ತು ಪರರಿಗೂ ಅದನ್ನು ಸೇವಿಸಲು
ನೀಡುತ್ತಾನೆ. ಆತನು ತಾನೊಬ್ಬನಲ್ಲದೆ ಪರರಿಗೂ ದುಃಖ ಉಂಟುಮಾಡಿಸುತ್ತಾನೆ. ಅದೇರೀತಿಯಾಗಿ ಯಾವುದೇ
ವ್ಯಕ್ತಿಯು ಇಚ್ಛೆ (ಚೇತನಾ)ಯಿಂದ ಪಾಪಕರ್ಮಗಳನ್ನು ಮಾಡುತ್ತಾನೆ, ಅದರ ಫಲವಾಗಿ ಸಾವಿನ ನಂತರ ದುರ್ಗತಿಯಲ್ಲಿ ಬೀಳುತ್ತಾನೆ, ಹಾಗೆಯೇ ಆತನನ್ನು ಅನುಸರಿಸಿದ ಇಡೀ ವ್ಯಕ್ತಿತ್ವ ಮತ್ತು ಇತರರೂ ಸಹಾ
ದುಗ್ಗತಿ ಪಡೆವರು.
ಅದೇರೀತಿ ವ್ಯಕ್ತಿಯೊಬ್ಬನು ತುಪ್ಪ, ಬೆಣ್ಣೆ, ಎಣ್ಣೆ, ಜೇನುತುಪ್ಪ ಮತ್ತು ಕಾಕಂಬಿಯನ್ನು ಮಿಶ್ರಮಾಡಿ ಪಾನಿಯವನ್ನು
ಸಿದ್ಧಪಡಿಸುತ್ತಾನೆ, ಅದನ್ನು ತಾನು ಸೇವಿಸಿ, ಪರರಿಗೂ ಸೇವಿಸುವಂತೆ ಮಾಡುತ್ತಾನೆ. ಅದೇರೀತಿಯಲ್ಲಿ ವ್ಯಕ್ತಿಯೊಬ್ಬನು
ಇಚ್ಛೆಯಿಂದ ಕುಶಲ ಕರ್ಮಗಳನ್ನು ಮಾಡಿ, ಸಾವಿನ ನಂತರ
ಸುಗತಿಯಲ್ಲಿ ಉದಯಿಸುತ್ತಾನೆ, ಹೀಗೆ ಇಚ್ಛೆಯನ್ನು
(ಚೇತನಾ) ಅನುಸರಿಸಿದ ಆತನ ವ್ಯಕ್ತಿತ್ವ ಮತ್ತು ಇತರರೂ ಸಹಾ ಸುಗತಿ ಪಡೆಯುವರು. ಹೀಗಾಗಿ ಮಹಾರಾಜ, ಮನಸ್ಸಿನಲ್ಲಿ ರಚಿತಗೊಳ್ಳುವುದೇ ಮತ್ತು ಸಿದ್ಧವಾಗುವುದೇ ಚೇತನಾದ
ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನಾ.
12. ವಿಞ್ಞಾಣ ಲಕ್ಷಣ ಪ್ರಶ್ನೆ
ಭಂತೆ ನಾಗಸೇನ, ವಿಞ್ಞಾಣದ ಲಕ್ಷಣವೇನು? (40)
ವಿಞ್ಞಾಣ ಲಕ್ಷಣ ಅರಿಯುವಿಕೆ (ವಿಜಾನನ)
ಮಹಾರಾಜ.
ಉಪಮೆಯೊಂದಿಗೆ ವಿವರಿಸುವಿರಾ?
ಇದು ನಗರ ರಕ್ಷಕನಂತೆ ಮಹಾರಾಜ, ಹೇಗೆಂದರೆ ನಗರರಕ್ಷಕನು ನಗರದ ಮಧ್ಯದಲ್ಲಿ, ಎಲ್ಲಾ ಹಿರಿಯ ಮಾರ್ಗಗಳು ಸೇರುವ ಕಡೆ ಎತ್ತರದಲ್ಲಿ ಕುಳಿತು, ಪೂರ್ವದಿಂದ ಅಥವಾ ಪಶ್ಚಿಮದಿಂದ ಅಥವಾ ಉತ್ತರದಿಂದ ಅಥವಾ ದಕ್ಷಿಣದಿಂದ
ಬರುವ ಎಲ್ಲರನ್ನು ವೀಕ್ಷಿಸುತ್ತಿರುತ್ತಾನೆ. ಅದರಂತೆಯೇ ಓ ಮಹಾರಾಜ, ಕಣ್ಣಿನಿಂದ ದೃಶ್ಯ, ಕಿವಿಯಿಂದ ಶಬ್ದ, ಮೂಗಿನಿಂದ ವಾಸನೆ, ನಾಲಿಗೆಯಿಂದ ರುಚಿ, ದೇಹದಿಂದ ಸ್ಪರ್ಶ ಮತ್ತು ಮನಸ್ಸಿನಿಂದ ಧಮ್ಮ (ಮನೋ ವಿಷಯಗಳನ್ನ)ವನ್ನು
ಅರಿಯುತ್ತಿರುತ್ತಾನೆ. ಆದ್ದರಿಂದ ಮಹಾರಾಜ ಅರಿಯುವಿಕೆಯೇ ವಿನ್ಯಾನದ ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನ.
13. ವಿತರ್ಕ (ವಿತಕ್ಕ) ಲಕ್ಷಣ ಪ್ರಶ್ನೆ
ಭಂತೆ ನಾಗಸೇನ, ವಿತಕ್ಕದ ಲಕ್ಷಣವೇನು? (41)
ಕೇಂದ್ರೀಕರಿಸುವಿಕೆ ಓ ಮಹಾರಾಜ.
ಉಪಮೆಯೊಂದಿಗೆ ವಿವರಿಸುವಿರಾ?
ಇದು ಬಡಗಿಯವನಂತೆ ಮಹಾರಾಜ, ಹೇಗೆಂದರೆ ಆತನು ರಂಧ್ರಿಸಬೇಕಾದ ಒಳ್ಳೆಯ ಮರದ ತುಂಡಿಗೆ ಗುರುತು ಹಾಕಿ
ಅಲ್ಲೇ ಕೇಂದ್ರೀಕರಿಸಿ ಸಂದು ಮಾಡುವಿಕೆಯಲ್ಲಿ ಯಶಸ್ವಿಯಾಗುತ್ತಾನೆ. ಹೀಗಾಗಿ
ಕೇಂದ್ರೀಕರಿಸುವಿಕೆಯೇ ವಿತಕ್ಕದ ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನ.
14. ವಿಚಾರ ಲಕ್ಷಣ ಪ್ರಶ್ನೆ
ಭಂತೆ ನಾಗಸೇನ, ವಿಚಾರದ ಲಕ್ಷಣವೇನು? (42)
ಪದೇ ಪದೇ ಪರೀಕ್ಷಿಸುವಿಕೆ (ಹುಟ್ಟುವಿಕೆ)ಯೇ
ವಿಚಾರದ ಲಕ್ಷಣವಾಗಿದೆ ಮಹಾರಾಜ.
ಉಪಮೆಯೊಂದಿಗೆ ವಿವರಿಸುವಿರಾ?
ಇದು ಹೇಗೆಂದರೆ ತಾಮ್ರದ ಪಾತ್ರೆಗೆ ಆಕಾರ
ನೀಡಲು ಪದೇ ಪದೇ ಕುಟ್ಟುತ್ತಿರುತ್ತಾರೆ. ನಂತರ ನಿಧಾನವಾಗಿ ಅದು ಆಕಾರ ಪಡೆಯುತ್ತದೆ. ಆಕಾರ
ಪಡೆಯಲು ಕುಟ್ಟುವುದು ವಿತಕ್ಕದಂತೆ ಮತ್ತು ಮತ್ತೆ ಮತ್ತೆ ಕುಟ್ಟುವುದು ವಿಚಾರದಂತೆ ಆಗಿದೆ. ಹೀಗೆ
ಮಹಾರಾಜ, ಪುನಃ ಪುನಃ ಕುಟ್ಟುವುದು ಅಥವಾ ಪರೀಕ್ಷಿಸುವುದು
ವಿಚಾರದ ಲಕ್ಷಣವಾಗಿದೆ.
ತುಂಬಾ ಒಳ್ಳೆಯದು ನಾಗಸೇನ.
ಇಲ್ಲಿಗೆ ಮೂರನೆಯ
ವಿಚಾರವಗ್ಗ ಮುಗಿಯಿತು
(ಇದರಲ್ಲಿ 14
ಪ್ರಶ್ನೆಗಳಿವೆ)